ಕಾಶ್ಮೀರದ ಕುರಿತು ಬೇರೆ ಬೇರೆ ದೇಶಗಳು ಯಾವ ಅಭಿಪ್ರಾಯವನ್ನು ಹೊಂದಿವೆ ಗೊತ್ತೆ?

ಅನುವಾದ: ನಿಖಿಲ್ ಕೋಲ್ಪೆ

ಭಾರತವು ಸ್ವತಂತ್ರ ದೇಶವಾಗಿ ಅಸ್ತಿತ್ವಕ್ಕೆ ಬಂದ ಕಾಲದಿಂದಲೂ ಕಾಶ್ಮೀರಕ್ಕೆ ಸ್ವಲ್ಪಮಟ್ಟಿನ ಸ್ವಾಯತ್ತತೆ ನೀಡಿದ್ದ ಸಂವಿಧಾನದ ವಿಧಿ 370 ಮತ್ತು 34ಎ ರದ್ದುಗೊಳಿಸುವ ಸರಕಾರದ ನಿರ್ಧಾರವನ್ನು ಆಗಸ್ಟ್ 5, 2019ರಂದು ಗೃಹಸಚಿವ ಅಮಿತ್ ಶಾ ಭಾರತೀಯ ಸಂಸತ್ತಿಗೆ ತಿಳಿಸಿದರು. ಅಂದಿನಿಂದ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್ ಎಂಬ ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿ, ಉಪ ರಾಜ್ಯಪಾಲರುಗಳ ಮೂಲಕ ದಿಲ್ಲಿಯಿಂದ ಆಡಳಿತ ನಡೆಸಲಾಗುತ್ತಿದೆ.

ಇದಕ್ಕಿಂತ ಮೊದಲು ಭಾರತದ ಆಡಳಿತವಿದ್ದ ಕಾಶ್ಮೀರ ಪ್ರದೇಶದಿಂದ ಎಲ್ಲಾ ಪ್ರವಾಸಿಗರು ಹೊರತೆರಳುವಂತೆ ಸೂಚಿಸಲಾಗಿತ್ತು. ಹೆಚ್ಚುವರಿ ಅರೆಸೈನಿಕ ಪಡೆಗಳನ್ನು ಕರೆಸಿ ಭಾರತೀಯ ನಿಷ್ಟಾವಂತರು, ರಾಷ್ಟ್ರೀಯವಾದಿಗಳು, ಪ್ರತ್ಯೇಕತಾವಾದಿಗಳು, ಸ್ವತಂತ್ರರು, ಪತ್ರಕರ್ತರು, ಜನಸಾಮಾನ್ಯರು ಎನ್ನದೇ ಚುನಾಯಿತ ಜನಪ್ರತಿನಿಧಿಗಳೂ ಸೇರಿದಂತೆ ಅಗಣಿತ ಸಂಖ್ಯೆಯ ನಾಯಕರನ್ನು ಬಂಧಿಸಲಾಯಿತು. ಕಾಶ್ಮೀರದ 90 ಲಕ್ಷ ಜನಸಂಖ್ಯೆಯಿಂದ ಎಲ್ಲಾ ರೀತಿಯ ಸಂಪರ್ಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕಡಿತಗೊಳಿಸಲಾಯಿತು.

80ರ ದಶಕದ ಕೊನೆಯ ಭಾಗದಿಂದ ಆರಂಭವಾದ ದಶಕಗಳ ಹಿಂಸಾಚಾರದಿಂದ ನಲುಗಿರುವ ಕಾಶ್ಮೀರದಲ್ಲಿ ಭಾರತವು ಪ್ರಸ್ತುತ ಏಳು ಲಕ್ಷ ಸೈನಿಕರನ್ನು ನಿಯೋಜಿಸಿದೆ. ಭಾರತದ ಆಡಳಿತ ಪಕ್ಷಗಳು ನಿರಂತರವಾಗಿ ಕಾಶ್ಮೀರವನ್ನು ಭಾರತದ ಆಂತರಿಕ ವಿಷಯ ಎಂದು ಹೇಳುತ್ತಾ ಬಂದಿದ್ದು, ಈಗಿನ ವಿದ್ಯಮಾನದ ಕುರಿತೂ ಹಾಗೆಯೇ ಹೇಳಲಾಗಿದೆ. ಒಟ್ಟಾಗಿ ಸುಮಾರು 200ರಿಂದ 240ರಷ್ಟು ಪರಮಾಣು ಸಿಡಿತಲೆಗಳನ್ನು ಹೊಂದಿರುವ ಎರಡು ಪರಮಾಣುಶಕ್ತ ನೆರೆಹೊರೆಯ ರಾಷ್ಟ್ರಗಳ ವಿದ್ಯಮಾನಗಳ ಮೇಲೆ ಅಂತರರಾಷ್ಟ್ರೀಯ ಸಮುದಾಯವು ನಿಕಟ ನಿಗಾ ಇಡಲಿದೆ. ಆದರೂ, ಏನಾದರೂ ದುರಂತ ಸಂಭವಿಸಿದಲ್ಲಿ ದುಷ್ಪರಿಣಾಮಕ್ಕೆ ಒಳಗಾಗಲಿರುವ ಮಾನವ ಕುಲದ ಆರನೇ ಒಂದರಷ್ಟು ಮಂದಿ ಭಾರತ ಅಥವಾ ಪಾಕಿಸ್ತಾನದವರು ಮಾತ್ರ ಆಗಿರದೆ, ಬೇರೆ ದೇಶಗಳವರೂ ಆಗಲಿರುವುದರಿಂದ ಅದು ಖಂಡಿತವಾಗಿಯೂ ಅಂತರರಾಷ್ಟ್ರೀಯ ಸಮುದಾಯಕ್ಕೆ ಸೇರಿದ ವಿಷಯವೇ ಹೊರತು ಭಾರತ ಮತ್ತು ಪಾಕಿಸ್ತಾನದ ಆಂತರಿಕ ವಿಷಯವಾಗಿ ಉಳಿದಿಲ್ಲ.

ವಿಷಯವನ್ನು ಇನ್ನಷ್ಟು ಜಟಿಲಗೊಳಿಸುವ ರೀತಿಯಲ್ಲಿ ಪರಮಾಣು ಅಸ್ತ್ರದ ಮೊದಲ ಬಳಕೆಯಿಲ್ಲ ಎಂಬ ಭಾರತದ ಇದುವರೆಗಿನ ನೀತಿಯು ಪರಿಸ್ಥಿತಿಗೆ ಅನುಗುಣವಾಗಿ ಬದಲಾಗಲಿದೆ ಎಂದು ಭಾರತದ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಹೇಳಿದ್ದಾರೆ.

ಪಾಕಿಸ್ತಾನದ ಪ್ರತಿಕ್ರಿಯೆಯು ನಿರೀಕ್ಷಿತ ಧಾಟಿಯಲ್ಲಿಯೇ ಇದೆ. ಅಜಾದ್ ಕಾಶ್ಮೀರ ಎಂದು ಕರೆಯಲಾಗುವ ಪಾಕಿಸ್ತಾನದ ವಶದಲ್ಲಿರುವ ಕಾಶ್ಮೀರದ ಭಾಗದಲ್ಲಿರುವ ಮುಜಾಫರಾಬಾದ್‍ನಿಂದ ಸ್ವಾತಂತ್ರ್ಯ ದಿನದಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡುವ ಮೂಲಕ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಈ ಅವಕಾಶವನ್ನು ‘ಇತಿಹಾಸ ಸೃಷ್ಟಿಸಲು’ ಬಳಸಿಕೊಂಡಿದ್ದಾರೆ. ಭಾರತವು ಕಾಶ್ಮೀರದ ಜನತೆಗೆ ವಿಶ್ವಾಸದ್ರೋಹ ಮಾಡಿದೆ ಮತ್ತು ನೆಹರೂ ಅವರು ನೀಡಿದ ಭರವಸೆಯಿಂದ ಹಿಂದೆ ಸರಿದಿದೆ ಎಂದು ಅವರು ಆರೋಪಿಸಿದ್ದಾರೆ. ಭಾರತದಲ್ಲಿ ಮುಸ್ಲಿಮರ ಮೇಲೆ ಇರುವ ದ್ವೇಷದ ಭಾವನೆಯನ್ನು ಮನಗಂಡೇ ಜಿನ್ನಾ ಅವರು ವಿಭಜನೆಯ ಬೇಡಿಕೆ ಇಟ್ಟಿದ್ದರೆಂದು ಮಾತನಾಡಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಮಾತೃಸಂಸ್ಥೆಯಾಗಿರುವ ಆರೆಸ್ಸೆಸ್‍ನ ತಾತ್ವಿಕತೆಯು ನಾಜಿಗಳಿಂದ ಪ್ರೇರಿತವಾಗಿದೆ ಎಂಬ ಹೋಲಿಕೆ ಮಾಡಿರುವ ಅವರು, ಭಾರತದಲ್ಲಿ ಮುಸ್ಲಿಮರು ಮತ್ತು ಅಲ್ಪಸಂಖ್ಯಾತರ ಪರಿಸ್ಥಿತಿಯ ಕುರಿತು ಗಂಭೀರ ಆತಂಕ ವ್ಯಕ್ತಪಡಿಸಿದ್ದಾರೆ.

ಗಾಂಧೀಜಿಯವರ ಹತ್ಯೆ, ಬಾಬ್ರಿ ಮಸೀದಿ ಧ್ವಂಸ, ಗುಜರಾತ್ ಹತ್ಯಾಕಾಂಡ, ವಿಧಿ 370ರ ಕುರಿತ ತನ್ನದೇ ಸುಪ್ರೀಂಕೋರ್ಟಿನ ತೀರ್ಪಿನ ವಿರುದ್ಧ ಹೋಗಿರುವುದು ಇತ್ಯಾದಿ ಉದಾಹರಣೆಗಳನ್ನು ನೀಡಿರುವ ಅವರು, ಆರೆಸ್ಸೆಸ್‍ನ ತೀವ್ರಗಾಮಿ ತಾತ್ವಿಕತೆಯಿಂದಾಗಿ ಭಾರತವು ದುರಂತದತ್ತ ಸಾಗುತ್ತಿದೆ ಎಂದು ಹೇಳಿದ್ದಾರೆ. ಕಾಶ್ಮೀರದಲ್ಲಿ ಜನಾಂಗೀಯ ನಿರ್ಮೂಲನೆ ನಡೆಯುವ ಬಗ್ಗೆ, ಮತ್ತು ಅಲ್ಲಿನ ಜನಸಂಖ್ಯಾ ವಿನ್ಯಾಸವನ್ನು ಬದಲಿಸುವ ಭಾರತದ ಯತ್ನದ ಕುರಿತು ಗಂಭೀರ ಆತಂಕ ವ್ಯಕ್ತಪಡಿಸಿರುವ ಇಮ್ರಾನ್ ಖಾನ್, ಕಾಶ್ಮೀರಿಗಳ ಸ್ವಯಂ ನಿರ್ಧಾರದ ಹಕ್ಕನ್ನು ಎತ್ತಿಹಿಡಿಯಲು ಪಾಕಿಸ್ತಾನವು ಸಾಧ್ಯವಿರುವ ಎಲ್ಲವನ್ನೂ ಮಾಡಲಿದೆ ಎಂದಿದ್ದಾರೆ. ಸ್ವಾತಂತ್ರ್ಯದ ಕಡೆಗೆ ಕಾಶ್ಮೀರದ ಅಂತಿಮ ಪಯಣ ಆರಂಭವಾಗಿದೆ ಎಂದೂ ಅವರು ಹೇಳಿದ್ದಾರೆ.

ಕಾಶ್ಮೀರದ ಕುರಿತು ರಷ್ಯಾ ಮತ್ತು ಚೀನಾದ ನಿಲುವುಗಳು ತದ್ವಿರುದ್ಧವಾಗಿವೆ. ರಷ್ಯಾವು ಯಾವತ್ತೂ ಭಾರತದ ನಿಲುವನ್ನು ಪ್ರತಿಧ್ವನಿಸುತ್ತಾ ಬಂದಿದ್ದರೆ, ಚೀನಾವು ಯಾವತ್ತೂ ಪಾಕಿಸ್ತಾನದ ಪಕ್ಷವನ್ನು ವಹಿಸುತ್ತಾ ಬಂದಿದ್ದು, ಕಾಶ್ಮೀರವು ಒಂದು ಬಹುಪಕ್ಷೀಯ ಸಮಸ್ಯೆಯಾಗಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮಧ್ಯಪ್ರವೇಶದ ಅಗತ್ಯವಿದೆ ಎಂದು ಚೀನಾ ಹೇಳುತ್ತಿದೆ. ಚೀನವು ಈ ವಿಷಯದಲ್ಲಿ ಭದ್ರತಾ ಮಂಡಳಿಯ ರಹಸ್ಯ (ನಾಲ್ಕು ಗೋಡೆಗಳೊಳಗಿನ) ಸಭೆಗೆ ಕರೆನೀಡಿದ್ದು, ಸಂಸತ್ತಿನಲ್ಲಿ ಅಮಿತ್ ಶಾ ಹೇಳಿರುವಂತೆ ಚೀನಾದ ಪ್ರದೇಶವನ್ನು ಭಾರತದ ಪ್ರದೇಶದಲ್ಲಿ ಸೇರಿಸಿರುವುದಕ್ಕೆ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನ್ಯಿಂಗ್ ವಿರೋಧ ವ್ಯಕ್ತಪಡಿಸಿದ್ದಾರೆ. ಭಾರತದ ಆಂತರಿಕ ಕಾನೂನನ್ನು ಬದಲಿಸುವ ಮೂಲಕ ಏಕಪಕ್ಷೀಯವಾಗಿ ಅದನ್ನು ಬದಲಿಸಲಾಗದು ಎಂದವರು ಹೇಳಿದ್ದಾರೆ.

ಇದೇ ವೇಳೆಗೆ, ತಮ್ಮೊಳಗಿನ ಉದ್ವಿಗ್ನತೆಯನ್ನು ಕಡಿಮೆಮಾಡಿ ಎಲ್ಲಾ ಸಮಸ್ಯೆಗಳನ್ನು ದ್ವಿಪಕ್ಷೀಯ ಮಾತುಕತೆಯ ಮೂಲಕವೇ ಪರಿಹರಿಸಬೇಕು ಎಂದು ರಷ್ಯಾದ ವಿದೇಶ ಸಚಿವ ಸರ್ಗೇಯಿ ಲಾರ್ವೋವ್ ಎರಡೂ ದೇಶಗಳನ್ನು ಒತ್ತಾಯಿಸಿದ್ದಾರೆ. ವಿಶ್ವ ಸಂಸ್ಥೆಯಲ್ಲಿ ರಷ್ಯಾದ ಉಪ ಸಂಸದೀಯ ಪ್ರತಿನಿಧಿಯಾಗಿರುವ ಡಿಮಿತ್ರಿ ಪೋಲ್ಯನ್‍ಸ್ಕಿ ಅವರು ಆಗಸ್ಟ್ 16ರಂದು ಟ್ವೀಟ್ ಮಾಡಿ, “ರಷ್ಯಾವು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧವನ್ನು ಸಾಮಾನ್ಯ ಸ್ಥಿತಿಗೆ ತರುವ ಪ್ರಯತ್ನವನ್ನು ಮುಂದುವರಿಸುತ್ತದೆ. ಕಾಶ್ಮೀರ ಕುರಿತ ಭಿನ್ನಾಭಿಪ್ರಾಯಗಳನ್ನು 1972ರ ಶಿಮ್ಲಾ ಒಪ್ಪಂದ ಮತ್ತು 1999ರ ಲಾಹೋರ್ ಒಪ್ಪಂದಗಳು, ವಿಶ್ವಸಂಸ್ಥೆಯ ನಿಯಮಾವಳಿಗಳು, ಗೊತ್ತುವಳಿಗಳು ಮತ್ತು ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಒಪ್ಪಂದಗಳ ಆಧಾರದಲ್ಲಿ ಕೇವಲ ದ್ವಿಪಕ್ಷೀಯ ಮಾತುಕತೆಯ ಮೂಲಕ ಮಾತ್ರ ಪರಿಹರಿಸಿಕೊಳ್ಳುತ್ತವೆಂದು ಆಶಿಸುತ್ತೇವೆ. ವಿಶ್ವಸಂಸ್ಥೆಯ ನಿಯಮಗಳು ಮತ್ತು ಗೊತ್ತುವಳಿಗಳನ್ನು ದಪ್ಪ ಅಕ್ಷರಗಳಲ್ಲಿ ಎತ್ತಿಕಾಣಿಸಿರುವುದು ಭಾರತ-ರಷ್ಯಾ ನಡುವೆ ಸಂಬಂಧದ ಕುರಿತು ಜಗತ್ತಿನಾದ್ಯಂತ ಹುಬ್ಬುಗಳು ಮೇಲೇರುವಂತೆ ಮಾಡಿದೆ.

ಪಶ್ಚಿಮ ಏಷ್ಯಾದಲ್ಲಿ ಅನಾಹುತ ಉಂಟುಮಾಡುವ ಯುಎಸ್‍ಎಯ ಪ್ರಯತ್ನಗಳಿಗೆ ಯಶಸ್ವಿಯಾಗಿ ಪ್ರತಿರೋಧ ಒಡ್ಡುತ್ತಿರುವ ಮತ್ತು ಬೆಳೆಯುತ್ತಿರುವ ಶಕ್ತಿಯಾದ ಇರಾನ್, ಕಾಶ್ಮೀರದ ಮುಸ್ಲಿಮರನ್ನು ಕಟುವಾಗಿ ನಡೆಸಿಕೊಳ್ಳುವುದು ಭಾರತದ ಹಿತಾಸಕ್ತಿಗೆ ಅಥವಾ ಈ ಇಡೀ ಪ್ರದೇಶದ ಹಿತಾಸಕ್ತಿಗೆ ಒಳಿತು ಮಾಡುವುದಿಲ್ಲ ಎಂದು ಹೇಳಿದೆ.

ಬ್ರಿಟಿಷ್ ಲೇಬರ್ ಪಕ್ಷದ ನಾಯಕ ಜೆರೆಮಿ ಕೋರ್ಬಿನ್ ಅವರು ಹೇಳಿಕೆಯೊಂದನ್ನು ನೀಡಿ, ಕಾಶ್ಮೀರದ ಪರಿಸ್ಥಿತಿಯು ತೀರಾ ಕಳವಳಕಾರಿಯಾಗಿದ್ದು, ಕಾಶ್ಮೀರಿ ಜನರ ಹಕ್ಕುಗಳನ್ನು ಗೌರವಿಸಬೇಕು ಮತ್ತು ವಿಶ್ವಸಂಸ್ಥೆಯ ಗೊತ್ತುವಳಿಗಳನ್ನು ಅನುಷ್ಠಾನಗೊಳಿಸಬೇಕು ಎಂದು ಹೇಳಿದ್ದಾರೆ.

ಹೆಚ್ಚುಹೆಚ್ಚಾಗಿ ಅಂತರರಾಷ್ಟ್ರೀಯ ಸಮುದಾಯವು ಭಾರತದ ವಾದಕ್ಕೆ ವ್ಯತಿರಿಕ್ತವಾಗಿ ಕಾಶ್ಮೀರಿಗಳ ಸಂಘರ್ಷಕ್ಕೆ ಮಾನ್ಯತೆ ನೀಡಲು ಆರಂಭಿಸಿವೆ. ಲಂಡನ್, ನ್ಯೂಯಾರ್ಕ್, ಹಾರ್ವರ್ಡ್, ಕ್ಯಾಂಬ್ರಿಜ್, ವಿಶ್ವಸಂಸ್ಥೆ, ಯುರೋಪ್ ಮತ್ತು ಅಮೆರಿಕದ ದೇಶಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಆದರೆ, ಭಾರತೀಯ ಮಾಧ್ಯಮ ಸರಕಾರ ಏನು ಹೇಳುತ್ತದೋ ಅದನ್ನು ಬರೆಯುವುದು ಮಾತ್ರ ತನ್ನ ಕೆಲಸ ಎಂಬಂತೆ ವರ್ತಿಸುತ್ತಿದೆ. ಭಾರತದ ಹೊರಗಿನಿಂದ ಈ ವಿಷಯವನ್ನು ಹೇಗೆ ನೋಡಲಾಗುತ್ತಿದೆ ಎಂಬುದರ ಕುರಿತು ಬರೆಯುತ್ತಿರುವವರನ್ನು ಬೆದರಿಸಲಾಗುತ್ತಿದೆ ಇಲ್ಲವೇ ಅಧಿಕಾರ ಬಳಸಿ ಬಾಯಿ ಮುಚ್ಚಿಸಲಾಗುತ್ತಿದೆ ಎಂಬ ಅನುಮಾನ ಬರುವಂತೆ ಆಗಿದೆ.

ಈ ವಿಚಾರದಲ್ಲಿ ಭಾರತವು ತನ್ನ ಹೊಸ ಮಿತ್ರ ಇಸ್ರೇಲನ್ನು ಅನುಸರಿಸಲು ಯತ್ನಿಸುತ್ತಿದೆ. ಅದು ಈಗಿರುವ ದೇಶೀಯ ಮತ್ತು ಅಂತರರಾಷ್ಟ್ರೀಯ ಕಾನೂನುಗಳಿಗೆ ಯಾವುದೇ ಗೌರವ ಕೊಡದೇ ಏಕಾಏಕಿಯಾಗಿ ಏಕಪಕ್ಷೀಯ ಕ್ರಮಗಳನ್ನು ಕೈಗೊಳ್ಳಲಾರಂಭಿಸಿದೆ. ಅಫಘಾನಿಸ್ತಾನದಲ್ಲಿ 2001ರಿಂದಲೂ ಸೇನೆಯನ್ನು ನಿಯೋಜಿಸಿರುವ ಯುಎಸ್‍ಎಯನ್ನು ಒಳಗೊಂಡ ಅಂತರರಾಷ್ಟ್ರೀಯ ಮಾತುಕತೆಗಳ ಮೂಲಕ ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆ ಮತ್ತು ಭಾರತದ ಪರವಾಗಿ ಕಾಶ್ಮೀರದ ವಿಷಯದಲ್ಲಿ ಡೊನಾಲ್ಡ್ ಟ್ರಂಪ್ ಸಂಧಾನ ನಡೆಸಬೇಕೆಂದು ಮೋದಿ ಕೇಳಿದ್ದಾರೆಂಬ ಹೇಳಿಕೆಯ ಬಳಿಕ ಇಮ್ರಾನ್ ಖಾನ್ ಟ್ರಂಪ್ ಭೇಟಿ ಮಾಡಿದುದು ಇದಕ್ಕೆ ಕಾರಣ.

ಮೊದಲು ಅಭಿವೃದ್ಧಿಯ ಹೆಸರಿನಲ್ಲಿ, ನಂತರ ಸಂಪೂರ್ಣವಾಗಿ ಹಿಂದೂತ್ವದ ಹೆಸರಿನಲ್ಲಿ ಮೋದಿ ಅಧಿಕಾರಕ್ಕೆ ಬಂದಿರುವುದು ಇಂತಹಾ ಕ್ರಮಗಳನ್ನು ಕೈಗೊಳ್ಳಲು ಆಳುವ ಪಕ್ಷದ ಧೈರ್ಯವನ್ನು ಹೆಚ್ಚಿಸಿದೆ. ರಾಷ್ಟ್ರಪತಿ ಆದೇಶದ ಮೂಲಕ ಇಂತಹಾ ಅಪ್ರಜಾಸತ್ತಾತ್ಮಕ, ಅಪಾಯಕಾರಿ ಮತ್ತು ಮುಚ್ಚುಮರೆಯ ಕ್ರಮವನ್ನು ಕೈಗೊಂಡ ರೀತಿಯೇ ಭಾರತದಲ್ಲಿ ತಕ್ಷಣದ ಭವಿಷ್ಯದಲ್ಲಿ ನಡೆಯಬಹುದಾದ ವಿಷಯಗಳ ಸೂಚನೆಯನ್ನು ನೀಡುತ್ತದೆ. ಭಾರತವು ಹೆಚ್ಚುಹೆಚ್ಚಾಗಿ ಅಮೆರಿಕಕ್ಕೆ ಹತ್ತಿರವಾಗುತ್ತಿದ್ದು, ಅಲ್ಲಿನ ಸೇನೆಯ ಜೊತೆ ನಂಟು ಬೆಳೆಸಿರುವುದು ರಷ್ಯಾ ಮತ್ತು ಚೀನಾದ ತಳಮಳಕ್ಕೆ ಕಾರಣವಾಗಿದೆ. ಅಲ್ಲದೇ, ಅಮೆರಿಕದ ಒತ್ತಡಕ್ಕೆ ಮಣಿದು ಭಾರತವು ಮಾರ್ಚ್ ತಿಂಗಳಿನಿಂದ ಇರಾನಿನ ತೈಲ ಕೊಳ್ಳುವುದನ್ನು ನಿಲ್ಲಿಸಿದೆ. ಪರ್ಶಿಯನ್ ಕೊಲ್ಲಿಗೆ ಯುದ್ಧ ನೌಕೆಗಳನ್ನು ಕಳಿಸಿದೆ ಮತ್ತು ಇರಾನ್ ಜೊತೆ ಇದ್ದ ವಿಶೇಷ ಮಿತ್ರತ್ವಕ್ಕೆ ದ್ರೋಹ ಬಗೆದಿದೆ. ಆದು ಕಳೆದ ಹತ್ತು ವರ್ಷಗಳಿಂದ ರಷ್ಯಾದ ರಕ್ಷಣಾ ಆಮದನ್ನು ಕಡಿತಗೊಳಿಸಿದೆ. ಇದೇ ಹೊತ್ತಿಗೆ ರಷ್ಯಾವು ಪಾಕಿಸ್ತಾನದ ಜೊತೆ ಎರಡು ಜಂಟೀ ಸೇನಾ ಅಭ್ಯಾಸವನ್ನು ನಡೆಸಿರುವುದು ಆತಂಕಕ್ಕೆ ಕಾರಣವಾಗಬೇಕಿತ್ತು. ಆದರೆ, ಭಾರತವು ಇಂತದ್ದೇನೂ ನಡೆದೇ ಇಲ್ಲವೆಂದು ಜನರಿಂದ ವಾಸ್ತವವನ್ನು ಮರೆಮಾಚಲು ಯತ್ನಿಸಿದೆ.

ಸೆಪ್ಟೆಂಬರ್ 11, 2001ರ ಬಳಿಕ ವಿಶ್ವದಾದ್ಯಂತ ಲಕ್ಷ ಲಕ್ಷ ಮುಸ್ಲಿಮರನ್ನು ಕೊಲ್ಲಲಾಗಿರುವ ಹೊತ್ತಿನಲ್ಲಿ ಸರಕಾರವು ಬಹಿರಂಗವಾಗಿಯೇ ಇಸ್ಲಾಮೋಫೋಬಿಯಾವನ್ನು ಬೆಳೆಸುತ್ತಿದೆ. ಭಾರತವನ್ನು ದೀರ್ಘಕಾಲ ಆಳಿದ ಕಾಂಗ್ರೆಸ್, ಒಡೆದು ಹೋಗಿರುವ ಕಮ್ಯುನಿಸ್ಟ್ ಪಕ್ಷಗಳು ಅಥವಾ ಉಳಿದ ಪ್ರತಿಪಕ್ಷಗಳು ಈ ವಿಷಯವನ್ನು ಪರಿಣಾಮಕಾರಿಯಾಗಿ ಎತ್ತಲು ಸಂಪೂರ್ಣವಾಗಿ ವಿಫಲವಾಗಿವೆ. ಆಳುವ ಪಕ್ಷದ ಹಿಂದೂತ್ವ ಕಾರ್ಯಕ್ರಮವನ್ನು ಎದುರಿಸಲು ಬೇಕಾದ ಸಂಖ್ಯಾಬಲ ಇಲ್ಲದ ನಾಗರಿಕ ಸಮಾಜದಲ್ಲಿ ಪ್ರತಿರೋಧದ ವಿಚಾರ ಅಥವಾ ವಿಧಾನದ ಕುರಿತು ಒಗ್ಗಟ್ಟಾಗಲೀ, ಸ್ಪಷ್ಟತೆಯಾಗಲೀ ಇಲ್ಲ.

ಭಾರತವು ರಷ್ಯಾ ಮತ್ತು ಚೀನಾವು ಪ್ರಯತ್ನಿಸುತ್ತಿರುವ ಯುರೇಶಿಯನ್ ಸಹಕಾರದಲ್ಲಿ ಒಡಕಿನ ಬೀಜಗಳನ್ನು ಬಿತ್ತುವ ಮೂಲಕ ಭಾರತವು ಪಾಶ್ಚಾತ್ಯ ಶಕ್ತಿಗಳ ಕೈಗೊಂಬೆಯಾಗುತ್ತಿದೆ ಎಂಬ ಅಭಿಪ್ರಾಯಗಳನ್ನು ಕೆಲವು ರಾಜಕೀಯ ತಜ್ಞರು ಮುಂದಿಟ್ಟಿದ್ದಾರೆ. ಮಲಕ್ಕಾ ಜಲಸಂಧಿಗೆ ಬದಲಾಗಿ ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇರುವ ಪಾಕಿಸ್ತಾನದ ಜೊತೆ ಚೀನಾದ ಮಹತ್ವಾಕಾಂಕ್ಷಿ ಸಿಪೆಕ್ ಯೋಜನೆ ಕೂಡಾ ಈಗ ಪರೀಕ್ಷೆಗೆ ಒಳಪಡಲಿದೆ. ಬ್ರಿಕ್ಸ್ ಮತ್ತು ಎಸ್‍ಸಿಒ ಸದಸ್ಯ ರಾಷ್ಟ್ರವಾಗಿರುವ ಭಾರತವು ಪಾಶ್ಚಾತ್ಯ ರಾಷ್ಟ್ರಗಳ ಒತ್ತಡಕ್ಕೆ ಮಣಿಯುವ ಮೂಲಕ ತನ್ನ ಹಿತಾಸಕ್ತಿಗಳನ್ನು ಕಡೆಗಣಿಸುತ್ತಿದ್ದು, ಅದಕ್ಕೆ ಭವಿಷ್ಯದಲ್ಲಿ ಭಾರೀ ಆರ್ಥಿಕ ನಷ್ಟವಾಗುವ ಸಾಧ್ಯತೆಯಿದೆ.

ಆರ್ಥಿಕತೆಯು ತೀರಾ ನಿಧಾನಗೊಳ್ಳುತ್ತಿದ್ದು, ಬಡತನ, ನಿರುದ್ಯೋಗ, ಹಿಂದುತ್ವದಿಂದ ಉನ್ಮತ್ತರಾದ ಜನತೆ, ಶತ್ರುಗಳಾಗುತ್ತಿರುವ ನೆರೆಹೊರೆಯ ದೇಶಗಳು- ಇವನ್ನಷ್ಟೇ ಭಾರತವೀಗ ಎದುರು ನೋಡುತ್ತಿದೆ. ಇಂತಹಾ ಜಟಿಲ ಸಮಸ್ಯೆಗಳ ಸೌಹಾರ್ದಯುತ ಪರಿಹಾರಕ್ಕೆ ಯತ್ನಿಸುವ ಬದಲು ಭಾರತವು ಕ್ರಿಪ್ಟೋ ಫ್ಯಾಸಿಸಂ ಅನ್ನು ಹೋಲುವ ಮುಸ್ಲಿಮ್ ವಿರೋಧಿ ಹಿಂದೂತ್ವದ ಪಡೆಗಳನ್ನು ಸೃಷ್ಟಿಸುತ್ತಿದೆ. ವಾಜಪೇಯಿ ಅವರ ಕಾಲದಲ್ಲಿ ‘ರಾ’ (RAW) ಮುಖ್ಯಸ್ಥರಾಗಿದ್ದ ಎ.ಎಸ್. ದೌಲತ್ ಅವರು ಹೇಳುವಂತೆ “ಈಗ ಕಾಶ್ಮೀರಿಗಳಿಗೆ ಕಳೆದುಕೊಳ್ಳಲು ಏನೂ ಉಳಿದಿಲ್ಲ. ಅದುವೇ ಭಯಹುಟ್ಟಿಸುವಂತದ್ದು, ಮುಂದೆ ಬರಲಿರುವುದನ್ನು ಎದುರಿಸಲು ಅಮಿತ್ ಶಾಗೆ ಸಾಕಷ್ಟು ಅದೃಷ್ಟ ಬೇಕಾದೀತು.”

ಕಾಶ್ಮೀರವನ್ನು ಹಿಡಿದಿಟ್ಟುಕೊಳ್ಳಲು ಭಾರತ ಭಾರೀ ಬೆಲೆ ತೆರಬೇಕಾಗಬಹುದು. ಅದು ಇಸ್ರೇಲ್‍ನಂತೆ ಸುಲಭವಾಗಿರಲಾರದು. ಕಾಶ್ಮೀರಿಗಳು ಇನ್ನೆಂದೂ ಭಾರತವನ್ನು ನಂಬಲಾರರು. “ಕಾಶ್ಮೀರವು ಅತ್ಯಂತ ದೊಡ್ಡ ಬಯಲು ಸೆರೆಮನೆ” ಎಂದು ನೋಮ್ ಚೋಮ್ಸ್ಕಿ ಹೇಳಿದ್ದರು. ವಿಧಿ 370ರ ರದ್ದತಿಯ ಮೂಲಕ ಭಾರತವು ಅದನ್ನು ಜಗತ್ತಿಗೆ ಅಧಿಕೃತಗೊಳಿಸಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಜನತೆಯನ್ನು ಬಲಪ್ರಯೋಗದಿಂದ ಬದಲಿಸಲು ಸಾಧ್ಯವಿಲ್ಲ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವೆಂದು ಹೇಳುವ ಭಾರತದ ಮುಖ್ಯವಾಹಿನಿ ಪಕ್ಷಗಳು, ತಮ್ಮ ಹೃದಯದಲ್ಲಿ ಅದಕ್ಕೆಷ್ಟು ಸ್ಥಾನ ಕೊಟ್ಟರು ಎಂಬುದನ್ನು ನೋಡಿಕೊಳ್ಳಬೇಕು. ಇಲ್ಲದಿದ್ದರೆ ಕಾಶ್ಮೀರದಲ್ಲಿ ಹೊತ್ತಬಹುದಾದ ಕಿಡಿಯ ಅದರ ಪರಿಣಾಮವು ಜಾಗತಿಕವಾಗಿರುವುದು.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here