ಕಲಾಪ ತಿಂದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ವಿಚಾರ: ನಾಳೆಗೆ ಸದನ ಮೂಂದೂಡಿಕೆ

ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ರನ್ನು ಬಿಜೆಪಿ ಕಿಡ್ನಾಪ್ ಮಾಡಿದೆ ಎಂದು ಆರೋಪಿಸಿದ್ದ ಸಚಿವ ಡಿ.ಕೆ ಶಿವಕುಮಾರ್ ಸದನದಲ್ಲಿಂದು ಅದಕ್ಕೆ ಸಾಕ್ಷಿ ತೋರಿಸಿದ್ದಾರೆ. ಅದು ನಿನ್ನೆ ರಾತ್ರಿ ಶ್ರೀಮಂತ ಪಾಟೀಲರು ಆರಾಮಾಗಿ ಒಡಾಡುತ್ತಾ, ಬಿಜೆಪಿಯ ಲಕ್ಷ್ಮಣ್ ಸವಧಿಯ ಜೊತೆ ಮುಂಬೈಗೆ ವಿಮಾನ ಹತ್ತಿರುವ ಫೋಟೊಗಳನ್ನು ಬಿಡುಗಡೆ ಮಾಡಿದ ಕಾಂಗ್ರೆಸ್ ಅವನ್ನಿಟ್ಟುಕೊಂಡು ಸದನದಲ್ಲಿ ಭಾರೀ ಗದ್ದಲ ಮತ್ತು ಪ್ರತಿಭಟನೆ ನಡೆಸಿದರು. ಇದರಿಂದ ಕಲಾಪವನ್ನು ಉಪಸಭಾಧ್ಯಕ್ಷ ಜೆ.ಕೆ ಕೃಷ್ಣರೆಡ್ಡಿಯವರು ನಾಳೆಗೆ ಮುಂದೂಡಿದರು.

ಇದಕ್ಕೂ ಮೊದಲು ಶ್ರೀಮಂತ ಪಾಟೀಲರಿಗೆ ಹೃದಯಘಾತವಾಗಿ ಮುಂಬೈ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೆಲವರು ವಾಟ್ಸಾಪ್ ನಲ್ಲಿ ಅವರು ಆಸ್ಪತ್ರೆಯಲ್ಲಿ ದಾಖಲಾಗಿರುವ ಪೋಟೊಗಳನ್ನು ವಾಟ್ಸಾಪ್ ನಲ್ಲಿ ಹರಿಯಬಿಟ್ಟಿದ್ದರು. ಆದರೆ ಅವರು ನಿನ್ನೆ ತಾನೇ ನಮ್ಮ ಜೊತೆಯಲ್ಲಿಯೇ ಇದ್ದರು, ಚೆನ್ನಾಗಿಯೇ ಮಾತನಾಡಿದರು ಆದರೆ ರಾತ್ರಿಯೇ ಕಣ್ಮರೆಯಾಗಿದ್ದು ಬಿಜೆಪಿಯವರು ಅಪಹರಿಸಿದ್ದು ಇದರ ತನಿಖೆ ನಡೆಸಬೇಕು ಎಂದು ಡಿ.ಕೆ ಶಿವಕುಮಾರ್ ಪಟ್ಟು ಹಿಡಿದರು.

ಅವರು ಬೆಂಗಳೂರಿನ ರೆಸಾರ್ಟ್ ನಿಂದ ಚನ್ನೈಗೆ ಹೋಗಿ ಅಲ್ಲಿಂದ ಮುಂಬೈಗೆ ಹೋಗಿರುವ ಕುರಿತು ವಿಮಾನ ಟಿಕೆಟ್ ಗಳನ್ನು ಪ್ರದರ್ಶಿಸಿದ ಡಿ.ಕೆ ಶಿವಕುಮಾರ್ ಇದೆಲ್ಲದರ ಹಿಂದೆ ಬಿಜೆಪಿಯಿದೆ ಎಂದು ಆರೋಪಿಸಿದರು. ಇದರ ಜೊತೆಗೆ ಅವರು ವಿಮಾನದಲ್ಲಿ ಹೋಗಿರುವ ಟಕೇಟ್ ಕಾಪಿಗಳನ್ನು ಪ್ರದರ್ಶನ ಮಾಡಿ ಇದೆಲ್ಲದರ ಹಿಂದೆ ಬಿಜೆಪಿ ಇದೆ ಎಂದು ಆರೋಪಿಸಿದ್ದರು. ದಿನೇಶ್ ಗುಂಡೂರಾವ್ ಕೂಡ ಇದಕ್ಕೆ ದನಿಗೂಡಿಸಿದರು.

ಮಾಜಿ ಸಿಎಂ ಸಿದ್ದರಾಮಯ್ಯನವರು ಶಾಸಕಾಂಗದ ಪಕ್ಷದ ನಾಯಕನಾಗಿ ನಮ್ಮ ಸದಸ್ಯರಿಗೆ ವಿಪ್ ನೀಡುವ ನನ್ನ ಅಧಿಕಾರದ ಬಗ್ಗೆ ಸುಪ್ರೀಂಕೋರ್ಟ್ ಮಧ್ಯಂತರ ಆದೇಶದಲ್ಲಿ‌ ಗೊಂದಲ ಇದೆ. ಇದು ಸ್ಪಷ್ಟವಾಗುವ ವರೆಗೆ ಮುಖ್ಯಮಂತ್ರಿಗಳು ವಿಶ್ವಾಸಮತ ಮಂಡನೆಯನ್ನು ಮುಂದೂಡಬೇಕು ಎಂದು ವಾದ ಮಂಡಿಸಿದ್ದರು.

ಇದೆಲ್ಲದರ ಕುರಿತು ಅಡ್ವೋಕೇಟ್ ಜನರಲ್ ಬಳಿ ಚರ್ಚಿಸಲು ಸಂಜೆ 4 ಗಂಟೆಗೆ ಸ್ಪೀಕರ್ ರಮೇಶ್ ಕುಮಾರ್ ರವರು ತೆರಳಿದ್ದರು. ಹಾಗಾಗಿ ಅವರ ಅನುಪಸ್ಥಿತಿಯಲ್ಲಿ ಉಪಸಭಾಧ್ಯಕ್ಷ ಜೆ.ಕೆ ಕೃಷ್ಣರೆಡ್ಡಿಯವರು ಕಲಾಪವನ್ನು ನಡೆಸುವ ಜವಾಬ್ದಾರಿ ವಹಿಸಿಕೊಂಡರು. ಆದರೆ ಆಡಳಿತ ಪಕ್ಷದ ಸದಸ್ಯರು ಶ್ರೀಮಂತ ಪಾಟೀಲರ ವಿಷಯವಿಟ್ಟುಕೊಂಡು ಪದೇ ಪದೇ ಪ್ರತಿಭಟಿಸಿ, ಬಿಜೆಪಿಯ ಆಪರೇಷನ್ ಕಮಲದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಕಲಾಪಕ್ಕೆ ಅಡ್ಡಿಯುಂಟುಮಾಡಿದರು.

ಇದರಿಂದ ಉಪಸಭಾಧ್ಯಕ್ಷ ಜೆ.ಕೆ ಕೃಷ್ಣರೆಡ್ಡಿಯವರು ಸಂಜೆ 6.20ರ ಸಮಯಕ್ಕೆ ಕಲಾಪವನ್ನು ಶುಕ್ರವಾರ 11 ಗಂಟೆಗೆ ಮುಂದೂಡುವ ನಿರ್ಧಾರ ಕೈಗೊಂಡರು.

ರಾತ್ರಿಯೆಲ್ಲಾ ಸದನದಲ್ಲಿಯೇ ಉಳಿಯುತ್ತೇವೆ : ಯಡಿಯೂರಪ್ಪ

ವಿಶ್ವಾಸಮತ ನಡೆಯುತ್ತದೆ ಮತ್ತು ಆಡಳಿತ ಪಕ್ಷಕ್ಕೆ ಸೋಲಾಗುತ್ತದೆ, 107ರಷ್ಟು ಸಂಖ್ಯಾಬಲವಿರುವ ಬಿಜೆಪಿ ಸರ್ಕಾರ ರಚಿಸಬಹುದು ಎಂಬ ಆಸೆಯಲ್ಲಿದ್ದ ಯಡಿಯೂರಪ್ಪಗೆ ಇಂದಿನ ಕಲಾಪದಿಂದ ತೀವ್ರ ನಿರಾಶೆಯಾಗಿದೆ. ಬೆಳಿಗ್ಗೆಯಿಂದಲೂ ಅವರು ಬಹಳ ತಾಳ್ಮೆಯಿಂದ ಕಾದಿದ್ದರು. ಒಮ್ಮೆ ಮಾತ್ರ “ಸುಪ್ರೀಂ ಕೋರ್ಟ್ ಹೇಳಿ ಅತೃಪ್ತ ಶಾಸಕರಿಗೆ ವಿಪ್ ನೀಡಬೇಕಿಲ್ಲ ಎಂದು” ಯಡಿಯೂರಪ್ಪ ಹೇಳಿದಾಗ ಸದನದಲ್ಲಿ ದೊಡ್ಡ ಗದ್ದಲ ಉಂಟಾಯಿತು. ಡಿ.ಕೆ ಶಿವಕುಮಾರ್ ಸದನದಲ್ಲಿ ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿದ್ದೀರಿ ಎಂದು ಕೂಗಾಡಿದರು. ಆಗ ಯಡಿಯೂರಪ್ಪನವರು ಇಲ್ಲ ಬೇಕಾದರೆ ಆ ಪದಗಳನ್ನು ನಾನು ವಾಪಸ್ ಪಡೆಯುತ್ತೇನೆ ಎನ್ನುವಷ್ಟರ ಮಟ್ಟಕ್ಕೆ ತಲುಪಿದ್ದರು.

ಆದರೆ ಯಾವಾಗ ಸದನ ನಾಳೆಗೆ ಹೋಯಿತೋ? ಆಗ ಯಡಿಯೂರಪ್ಪನವರು ಪ್ರತಿಭಟನೆಯ ಕಾರಣಕ್ಕಾಗಿ ರಾತ್ರಿಯೆಲ್ಲಾ ಇಲ್ಲೇ ತಂಗುತ್ತೇವೆ, ಇದೇನು ನಮಗೆ ಹೊಸದಲ್ಲ ಎಂದು ಹೇಳಿದ್ದಾರೆ. ಇನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ರೆಸಾರ್ಟ್ ನತ್ತ ಹೆಜ್ಜೆ ಹಾಕಿದರು.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here