ಕಂಡದ್ದು ಹೇಳಿದ ಕಾರ್ನಾಡರು!

| ಬಿ. ಚಂದ್ರೇಗೌಡ |

ಗಿರೀಶ್ ಕಾರ್ನಾಡರು ತೀರಿಕೊಂಡ ಸುದ್ದಿಕೇಳಿ ಮನಸ್ಸು ಶಾಕ್ ಅನುಭವಿಸುತ್ತಲೇ ಪಟಾಕಿ ಸದ್ದೇನಾದರೂ ಬರಬಹುದೆ ಎಂದು ಆಲಿಸತೊಡಗಿದೆ. ಹಾಗೇನೂ ಆಗಲಿಲ್ಲ, ಯಾಕೆಂದರೆ ಕಾರ್ನಾಡ್ ಅನಂತಮೂರ್ತಿಯವರಷ್ಟು ಪುರೋಹಿತಶಾಹಿಗಳ ಮನಸ್ಸನ್ನ ಕೆರಳಿಸಿರಲಿಲ್ಲ. ಇಂದು ಬಿಜೆಪಿಯ ಅಜೆಂಡಾದೊಳಗೆ ಸೇರಿಹೋಗಿರುವ ಗೋರಕ್ಷಣೆಗೆ ಪ್ರೇರಣೆ ನೀಡುವಂತಹ ತಬ್ಬಲಿ ನೀನಾದೆ ಮಗನೆ ಚಿತ್ರ ತೆಗೆದಿದ್ದರು. ಅಲ್ಲದೆ ವಂಶವೃಕ್ಷ ಚಿತ್ರ ತೆಗೆದಿದ್ದರು. ಇವೆರಡೂ ಆರೆಸೆಸ್ ಕಾರ್ಯಕರ್ತರಾದ ಎಸ್ಸೆಲ್ ಭೈರಪ್ಪನವರ ಕೃತಿಗಳು. ಈ ಕೃತಿಗಳು ರಚನೆಗೊಂಡ ಕಾಲದಲ್ಲಿ ತುಂಬ ಖ್ಯಾತಿಗಳಿಸಿದ್ದವು. ಅವು ಹಾಗೇ ಇದ್ದು ಓದಿಸಿಕೊಳ್ಳುವ ಕಾದಂಬರಿಗಳಾಗಿದ್ದರೂ, ಸುಮ್ಮನೆ ತಮ್ಮ ದೈತ್ಯ ಶ್ರಮವನ್ನು ಬಳಸಿ ಕಾರ್ನಾಡ್, ಕಾರಂತ ಸಿನಿಮಾ ಮಾಡಿದ್ದರು. ಈ ವ್ಯರ್ಥ ಪ್ರಯತ್ನಕ್ಕಿಂತ ಬೇರೇನನ್ನಾದರೂ ಮಾಡಬಹುದಿತ್ತೆಂದು ಪ್ರಜ್ಞಾವಂತ ಕನ್ನಡದ ಮನಸ್ಸುಗಳಿಗೆ ಅನ್ನಿಸಿದ ನಂತರ ಈ ಚಿತ್ರ ತೆಗೆದವರಿಗೂ ಅನ್ನಿಸಿದ್ದೊಂದು ವಿಶೇಷ. ಕಾರ್ನಾಡ್ ಶಿವಮೊಗ್ಗದ ಅಶೋಕ್ ಪೈಯವರ ಆತ್ಮೀಯರಾಗಿದ್ದರು. ಆ ಕಾರಣಕ್ಕೆ ಅವರ ಒಂದೆರಡು ಸಿನಿಮಾಗಳಲ್ಲಿ ಮನೋವೈದ್ಯರಾಗಿ ಅಭಿನಯಿಸಿದ್ದರು. ಜೊತೆಗೆ ತಮ್ಮ ಸಹಜಾಭಿನಯದಿಂದ ಮನೋವೈದ್ಯ ಹೇಗಿರುತ್ತಾನೆಂದು ತೋರಿದ್ದರು. ಮನೋವೈದ್ಯರಾದ ಅಶೋಕ ಪೈ ಕೂಡ ಕಾರ್ನಾಡರ ಅಭಿನಯ ಮೆಚ್ಚಿಕೊಂಡಿದ್ದರೂ ಅವರಂತಾಗಲು ಸಾಧ್ಯವಾಗಲಿಲ್ಲ. ಪೈಯವರು ತಮ್ಮ ಆಸ್ಪತ್ರೆಗೆ ಬಂದ ರೋಗಿಗಳನ್ನು ನೋಡಿ ಕತೆ ಕಾದಂಬರಿ ಬರೆಯಲು ಕನ್ನಡ ನಾಡಿನ ಖ್ಯಾತ ಕತೆಗಾರರನ್ನು ಕರೆಸಿ ತೋರಿಸಿ ಕತೆ ಬರೆಸಿದರು.

ಇದನ್ನು ವೈದ್ಯನೊಬ್ಬನ ಅಮಾನುಷ ನಡವಳಿಕೆ ಎಂದು ಲಂಕೇಶ್ ಪತ್ರಿಕೆ ಬರೆಯಿತು. ವ್ಯಗ್ರಗೊಂಡ ಅಶೋಕ ಪೈ ಪತ್ರಿಕೆಯ ಮೇಲೆ ಕೇಸು ಮಾಡಲು ಹೊರಟರು. ಆಗ ಗಿರೀಶ್ ಕಾರ್ನಾಡರು ಲಂಕೇಶ್ ಮೇಲೆ ಕೇಸಾಕುವುದು ಬೇಡವೆಂದು ತಡೆದಿದ್ದರು. ಬಹುಶಃ ಕಾರ್ನಾಡರಿಗೆ ಪೈ ಕೆಲಸ ಇಷ್ಟವಾಗದೆ ಇದ್ದಿರಬಹುದು. ಆದರೆ ಲಂಕೇಶ್ ಮತ್ತು ಕಾರ್ನಾಡರ ನಡುವೆ ಸ್ಪರ್ಧೆ ಇದ್ದದ್ದು, ಅವ್ಯಕ್ತ ಹೊಟ್ಟೆಕಿಚ್ಚುಗಳು ತಾಂಡವವಾಡಿದ್ದು ಎಪ್ಪತ್ತರ ದಶಕದ ದಾಖಲೆಗಳಾಗಿವೆ. ಲಂಕೇಶ್‍ರ ಸಂಕ್ರಾಂತಿ, ಕಾರ್ನಾಡರ ತಲೆದಂಡ. ಹಾಗೆಯೇ ತುಘಲಕ್ ಮತ್ತು ಗುಣಮುಖ ಕನ್ನಡದ ದೈತ್ಯ ಪ್ರತಿಭೆಗಳ ಸ್ಪರ್ಧೆಯಂತೆ ಕಾಣುತ್ತವೆ.

ಗಿರೀಶ್ ಕಾರ್ನಾಡ್ ಕನ್ನಡವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಅಪರೂಪದ ಪ್ರತಿಭೆ. ಅವರೇ ಹೇಳುವಂತೆ ನಾಟಕ ರಚನೆಗೆ ಕುಳಿತು ಮೊದಲು ಬರೆದದ್ದೇ ಕನ್ನಡದಲ್ಲಿ. ಪುರಾಣ, ಜಾನಪದ ಮತ್ತು ಇತಿಹಾಸದಲ್ಲೆಲ್ಲಾ ಅವರು ಹುಡುಕಿ ಕೊಟ್ಟಿದ್ದು ವರ್ತಮಾನ ಮತ್ತು ಭವಿಷ್ಯಕ್ಕೂ ಸಲ್ಲುವ ತಲ್ಲಣಗಳನ್ನು. ನಟ, ನಿರ್ದೇಶಕ ಮತ್ತು ನಾಟಕ ರಚನಕಾರರಾದ ಕಾರ್ನಾಡ್ ಸಾಹಿತಿಯಾದವನು ಹೇಗಿರಬೇಕೆಂಬುದನ್ನು ತೋರಿ ಹೋಗಿದ್ದಾರೆ. ಅವರು ಶಿವಮೊಗ್ಗ ಜಿಲ್ಲೆಯಲ್ಲಿ ಕುವೆಂಪುರವರ ಕಾನೂನು ಹೆಗ್ಗಡತಿ ಚಿತ್ರವನ್ನು ಚಿತ್ರೀಕರಿಸುತ್ತಿದ್ದಾಗಲೇ ಜ್ಞಾನಪೀಠ ಪ್ರಶಸ್ತಿ ಪ್ರಕಟವಾಯ್ತು. ಆ ಸಂಗತಿಯನ್ನ ಅವರು ಅತ್ಯಂತ ಸಹಜವಾಗಿ ತೆಗೆದುಕೊಂಡರು. ಈ ಹಿಂದೆ ಪಡೆದವರು ನಾಡಿನ ಮೂಲೆಮೂಲೆಗೆ ಹೋಗಿ ಸನ್ಮಾನ ಪಡೆದಿದ್ದರು. ಅವರೆಲ್ಲರಿಗೆ ಹೋಲಿಸಿದಾಗ ಕಾರ್ನಾಡ್ ವಿಭಿನ್ನವಾಗಿ ವರ್ತಿಸಿ ಎಲ್ಲು ಸಮಾರಂಭಗಳಿಗೆ ಹೋಗಿ ಸನ್ಮಾನ ಮಾಡಿಸಿಕೊಳ್ಳಲಿಲ್ಲ, ಅವರು ಸನ್ಮಾನಗಳ ಮೂಲಕ ಖ್ಯಾತಿಗಳಿಸುವವರಾಗಿರಲಿಲ್ಲ.
ಇನ್ನು ತರುಣರಾಗಿದ್ದ ಅವಧಿಯಲ್ಲೇ ಸಂಸ್ಕಾರದ ಪ್ರಾಣೇಶಾಚಾರಿಯ ಪಾತ್ರ ಮಾಡಿದ ಕಾರಣಕ್ಕೆ ಅವರಿಗೆ ಅಂತವೇ ಪಾತ್ರಗಳು ದೊರಕುತ್ತವೆ. ಸಹಜಾಭಿನಯದ ನಟರಾಗಿದ್ದ ಕಾರ್ನಾಡರು ಕಳಪೆಯಾಗಿ ಅಭಿನಯಿಸಿದ್ದೇ ಇಲ್ಲ. ಕನ್ನಡದ ಮಟ್ಟಿಗೆ ಅವರು ವಂಶವೃಕ್ಷ, ಮೈಸೂರು ಮಲ್ಲಿಗೆ, ಸಂತ ಶಿಶುನಾಳ ಶರೀಫ ಮತ್ತು ಆನಂದ ಭೈರವಿಯಲ್ಲಿ ಮನೋಜ್ಞ ಅಭಿನಯ ನೀಡಿದ್ದಾರೆ.

ದೇಶದಲ್ಲಿ ಮತೀಯವಾದದ ಆತಂಕ ಶುರುವಾಗಿ ಅಭಿವ್ಯಕ್ತಿ ಮನಸ್ಸುಗಳು ಆತಂಕಗೊಂಡಾಗ ಸಹಜವಾಗಿ ಸಾಹಿತಿಯಾದವನ ಕರ್ತವ್ಯ ಏನು ಎಂಬುದನ್ನು ಕಾರ್ನಾಡರು ತೋರಿಸಿಕೊಟ್ಟರು. ಚಿಕ್ಕಮಗಳೂರು ಬಾಬಾ ಬುಡನ್‍ಗಿರಿ ವಿಷಯದಲ್ಲಿ ಅಲ್ಲಿಗೋಗಿ ಪ್ರತಿಭಟಸಿ ಅರೆಸ್ಟಾಗಿ ಜೈಲು ಸೇರುವ ತೀರ್ಮಾನದಿಂದ ಗೌರಿ ಲಂಕೇಶ್ ಜೊತೆ ಹೊರಟ ಕಾರ್ನಾಡರು ಚಿಕ್ಕಮಗಳೂರು ತಲುಪಲಾಗಲಿಲ್ಲ. ಅವರನ್ನ ಮಾರ್ಗ ಮಧ್ಯದಲ್ಲೇ ತಡೆದು ವಶಕ್ಕೆ ಪಡೆದ ಹಾಸನದ ಎಸ್ಪಿ ರಾಣೆಯವರು “ನಿಮ್ಮ ಮೇಲೆ ಚಿಕ್ಕಮಗಳೂರಲ್ಲಿ ದಾಳಿ ಮಾಡುವ ಸಂಚು ರೂಪಿತಗೊಂಡಿದೆ. ಇದರಿಂದ ದೇಶವ್ಯಾಪಿ ಸುದ್ದಿ ಮಾಡುವ, ಆ ಮುಖಾಂತರ ರಾಷ್ಟ್ರವ್ಯಾಪಿ ಬಾಬಾ ಬುಡನ್‍ಗಿರಿ ವಿಷಯವನ್ನ ಹರಡುವ ಹುನ್ನಾರವಿರುವುದರಿಂದ ತಾವು ದಯಮಾಡಿ ನಮ್ಮ ಮಾತು ಕೇಳಿ ವಾಪಸ್ಸು ಹೋಗಬೇಕೆಂದು” ವಿನಂತಿಸಿಕೊಂಡರು. ಕಾರ್ನಾಡರು ಅನಿವಾರ್ಯವಾಗಿ ಅದಕ್ಕೊಪ್ಪಿ ವಾಪಸು ಹೋದರು. ಆದರೆ ಕೆಲವರಿಗೆ ಇದು ಪಲಾಯನವಾದದಂತೆ ಕಂಡಿತು. ಕಾರ್ನಾಡ್ ಕೂಡ ವಿವರಿಸಲು ಹೋಗಲಿಲ್ಲ.

ಅವರೊಬ್ಬ ಈ ನಾಡಿನ ನೆಮ್ಮದಿಗಾಗಿ ತನ್ನ ಖ್ಯಾತಿಯನ್ನ ಪಣಕ್ಕೊಡ್ಡಿ ಹೋರಾಡುವ ಧೀಮಂತ ನಾಯಕರಾಗಿದ್ದರು. ಆದ್ದರಿಂದಲೇ ತಮ್ಮ ಮತ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡುತ್ತ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ನಾವು ಯಾರಿಗೆ ಓಟು ಮಾಡಬೇಕೆಂಬ ಬಗ್ಗೆ ಪ್ರಚಾರಮಾಡಿದ್ದರು. ಅಂತಾರಾಷ್ಟ್ರೀಯ ಮಟ್ಟದ ನಾಟಕಕಾರ, ಸಿನಿಮಾ ನಟ ಮತ್ತು ನಿರ್ದೇಶಕ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಇಂತಹ ಯಾವುದೇ ಸ್ಥಾನಮಾನದ ಹಂಗಿಲ್ಲದೆ ಭಾರತದ ಸಾಮಾನ್ಯ ಪ್ರಜೆಯಂತೆ ನಡೆದುಕೊಂಡ ಕಾರ್ನಾಡ್, ಸಾವಿನಲ್ಲೂ ತಮ್ಮ ವಿಶೇಷತೆ ಮೆರೆದು ಹೋಗಿದ್ದಾರೆ. ದಿನವಿಡೀ ಕಾರ್ನಾಡರ ಸಂಸ್ಕಾರ ತೋರಿಸಲು ರೆಡಿಯಾಗಿದ್ದ ಟಿವಿಗಳಿಗೆ ನಿರಾಶೆಯಾಗಿದೆ. ಆದರೂ ಕೆಲವು ಕಿಡಿಗೇಡಿ ಮೂರ್ಖರು, ಕಾರ್ನಾಡರ ನ್ಯಾಯೋಚಿತವಾದ ಹೇಳಿಕೆಗಳನ್ನೇ ತಿರುಚಿ ಕಿರುಚಿದವು. ಈ ಪೈಕಿ ಭಾರದ್ವಾಜ್ ಎಂಬ ಶ್ಯಾನುಭೋಗರ ಹುಡುಗ, ತನ್ನ ಪರೋಹಿತ ಭಾಷೆಯಲ್ಲೇ ಕಾರ್ನಾಡರನ್ನು ಹೀಗಳೆಯಲು ಯತ್ನಿಸಿದ.

ಕಾರ್ನಾಡರು ನೇರ ನಡೆನುಡಿಯ ವ್ಯಕ್ತಿ. ತಮ್ಮ ಅಧ್ಯಯನ ಮತ್ತು ಆಲೋಚನೆಯಿಂದ ಕಂಡಿದ್ದನ್ನು ಕಂಡಂತೆ ಹೇಳುತ್ತಿದ್ದರು. ಇದನ್ನು ಅರಗಿಸಿಕೊಳ್ಳಲಾರದ ಮಂದ ಮತಿಗಳು ಸರಿಯುತ್ತರ ಕೊಡುವುದು ಬಿಟ್ಟು ತೇಜೋವಧೆ ಮಾಡುತ್ತಿದ್ದವು. ಇದರಿಂದ ಕಾರ್ನಾಡರಿಗೆ ನೋವಾಗುತ್ತದೆಂದು ಅವು ಭಾವಿಸಿದ್ದವು. ಮೊನ್ನೆ ಅವರ ಸಾವಿನ ಸಂದರ್ಭದಲ್ಲೂ ಕೂಡ ಅವರ ಸಾಧನೆಯ ಶಿಖರ ಹತ್ತಿ ನೋಡಲಾಗದವರು ಅವರು ಬದುಕಿದ್ದಾಗ ನಿರ್ಭೀತಿಯಿಂದ ಹೇಳುವ ಹೇಳಿಕೆಗಳನ್ನ ಹೆಕ್ಕಿ ಗುಂಜಾಡಿದವು. ಕಾವೇರಿ ವಿಷಯದಲ್ಲೂ ಕೂಡ ಕೋರ್ಟ್ ತೀರ್ಪನ್ನು ಒಪ್ಪಿಕೊಳ್ಳಬೇಕಾಗುತ್ತದೆಂಬ ಮಾತಿಗೆ ಕೆರಳಿದ ಹಲವರು ಕಾರ್ನಾಡರನ್ನು ಹೀಯಾಳಿಸಿದರು. ಈ ರೀತಿ ಹೇಳಲು ನೀವ್ಯಾರು ಎಂದು ಕೇಳಿದರು. ನಮಗೆ ಬೇಕಾದ ತೀರ್ಪು ಕೊಡುವುದು ಕೋರ್ಟಿನ ಕೆಲಸ ಎಂಬ ಮನೋಭಾವ ಫ್ಯಾಸಿಸ್ಟರದು.

ಕಲೆ, ಸಾಹಿತ್ಯ, ಸಂಗೀತ ತಲೆಯೊಳಗಿಂದ ಖಾಲಿಯಾಗುತ್ತಿದ್ದಂತೆ, ಆ ಜಾಗವನ್ನು ಮೌಢ್ಯತೆ ಆವರಿಸುತ್ತಾ ಹೋಗುತ್ತದೆ. ಅಂತಹ ಮೆದುಳಿಗೆ ಕಾರ್ನಾಡರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಮೆರೆಸಿದ್ದು, ಅವರ ರಂಗ ಕೃತಿಗಳು, ನಟನೆ ಮತ್ತು ನಿರ್ದೇಶನ, ಜ್ಞಾನಪೀಠ, ಪದ್ಮವಿಭೂಷಣ ಇದ್ಯಾವುದೂ ಕಾಣುವುದಿಲ್ಲ. ಟಿಪ್ಪೂವನ್ನು ಮೆಚ್ಚಿದ್ದು, ಬಾಬಾಬುಡನ್‍ಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದೇ ಅಪರಾಧವಾಗಿ ಕಾಣುತ್ತದೆ. ಇದು ಮಂದಮತಿಗಳ ಭಾಗಕ್ಕೆ ಸರಿ. ಆದರೆ ದೃಶ್ಯ ಮಾಧ್ಯಮವೂ ಕೂಡ ಯಕ್ಕುಟ್ಟಿ ಹೋಗಿರುವುದೊಂದು ದುರಂತ!

ಕಾರ್ನಾಡರು ಗೌರಿಯ ನೆನಪಿನ ಸಭೆಗೆ ಬಂದಿದ್ದರು. ಆದೂ ಆಮ್ಲಜನಕ ಪೂರೈಸುವ ಯಂತ್ರವನ್ನು ಕೊರಳಿಗೆ ಹಾಕಿಕೊಂಡಿದ್ದಲ್ಲದೆ, “ನಾನು ಅರ್ಬನ್ ನಕ್ಸಲ್” ಎಂಬ ಬೋರ್ಡನ್ನು ಹಾಕಿಕೊಂಡು ಬಂದಿದ್ದರು. ಎಂದಿನಂತೆ ಮಾಧ್ಯಮದ ಕೆಲ ಕಿಡಿಗೇಡಿಗಳು, ಗೌರಿ ಸಭೆ, ಕನ್ಹಯ್ಯ, ಜಿಗ್ನೇಶ್ ಏನು ಹೇಳಿದರೆಂಬುದನ್ನು ಬಿಟ್ಟು ಕಾರ್ನಾಡರ ಕಡೆ ತಮ್ಮ ಗಮನ ಹರಿಸಿ, ಇಡೀ ಸಭೆಯ ದಿಕ್ಕು ತಪ್ಪಿಸಲು ಯತ್ನಿಸಿದವು. ಕಾರ್ನಾಡರು ಸರಿಯುತ್ತರ ಕೊಟ್ಟರು. ಇದೆಲ್ಲಕ್ಕಿಂತ ಮುಖ್ಯವಾಗಿ ಅಂತಹ ಸ್ಥಿತಿಯಲ್ಲು ಕಾರ್ನಾಡರು ಬಂದುದಲ್ಲದೆ, ತಮ್ಮ ಅನಾರೋಗ್ಯದ ಸಲಕರಣೆಗಳನ್ನ ತೂಗು ಹಾಕಿಕೊಂಡೇ ಹಾಜರಾಗಿದ್ದು ಅವರ ಬದ್ಧತೆಯನ್ನು ತೋರುತ್ತಿತ್ತು. ಕಾರ್ನಾಡರು ಮುಂಬೈನಲ್ಲಿ ನೆಲೆಸಬಹುದಿತ್ತು. ಧಾರವಾಡದಲ್ಲಿ ನೆಲೆಸಬಹುದಿತ್ತು. ಆದರೆ ಬೆಂಗಳೂರಿಗೆ ಬಂದು ನೆಲೆಸಿದರು. ಇದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಅದಾಗತಾನೆ “ಆಡಾಡತ ಆಯುಷ್ಯ” ಓದಿದ್ದ ನಾನು, ಹತ್ತಿರ ಹೋಗಿ ಅದರ ಮುಂದಿನ ಭಾಗ ಬರುತ್ತ ಸಾರ್ ಎಂದೆ. ಇಲ್ಲ ಎಂದರು, ಪ್ರಶ್ನೆ ಕೇಳಿದವನ ಕಡೆ ತಿರುಗಿಯೂ ನೋಡದೆ, ಅದೇ ಕಾರ್ನಾಡರು!

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

1 COMMENT

  1. ಧನ್ಯವಾದಗಳು ಸಾರ್.
    ಕಾರ್ನಾಡರ ಬಗ್ಗೆ ಒಂದೊಳ್ಳೆ ಮಾಹಿತಿಯನ್ನು ಕೊಟ್ಟಿದ್ದೀರಿ.

LEAVE A REPLY

Please enter your comment!
Please enter your name here