Homeಚಳವಳಿಏನಿದೆ ಬಂಡವಾಳದಲ್ಲಿ?? ಕಾರ್ಲ್ ಮಾರ್ಕ್ಸ್ ರ ‘ಕ್ಯಾಪಿಟಲ್’ ಅನುವಾದಕ್ಕೆ ಒಂದು ಪ್ರವೇಶಿಕೆ

ಏನಿದೆ ಬಂಡವಾಳದಲ್ಲಿ?? ಕಾರ್ಲ್ ಮಾರ್ಕ್ಸ್ ರ ‘ಕ್ಯಾಪಿಟಲ್’ ಅನುವಾದಕ್ಕೆ ಒಂದು ಪ್ರವೇಶಿಕೆ

- Advertisement -
- Advertisement -

ಜಗತ್ತಿನ ಮಹತ್ವದ ಕೃತಿಗಳಲ್ಲೊಂದಾದ ಕಾರ್ಲ್ ಮಾಕ್ರ್ಸ್ ರ ‘ಕ್ಯಾಪಿಟಲ್’, ಮಾನವ ಸಮಾಜ ಹಾಗೂ ಆರ್ಥಿಕ ವಿದ್ಯಮಾನಗಳನ್ನು ಅರ್ಥ ಮಾಡಿಕೊಳ್ಳುವ ಬಗೆಯನ್ನೇ ಬದಲಾಯಿಸಿತು. ಅದರ ಕನ್ನಡ ಅನುವಾದವನ್ನು ಕ್ರಿಯಾ ಪ್ರಕಾಶನ ಪ್ರಕಟಿಸಿದ್ದು, ಇದೇ ಆಗಸ್ಟ್ 2ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಅದಕ್ಕೊಂದು ಪ್ರವೇಶಿಕೆಯನ್ನು ಎನ್.ಕೆ. ವಸಂತ್‍ರಾಜ್ ಅವರು ಬರೆದಿದ್ದು, ಅದರ ಆಯ್ದ ಭಾಗಗಳು ಇಲ್ಲಿವೆ.

ಎನ್.ಕೆ. ವಸಂತ್‍ರಾಜ್

ಬಂಡವಾಳ ಸಂಪುಟ-1ರ ಒಟ್ಟು ಕಥನ ಸಂಕೀರ್ಣವಾದದ್ದು. ಆದರೆ ಅದನ್ನು ಪರಸ್ಪರ ಹೆಣೆದುಕೊಂಡ ಆದರೆ ವಿಭಿನ್ನವಾದ ಸರಳವಾದ ಆಸಕ್ತಿಕಾರಕವಾದ ಪ್ರಮುಖ ಮೂರು ಕಥನಗಳ ಸಂಗಮವಾಗಿ ನೋಡಬಹುದು. ಆ ಮೂರು ಕಥನಗಳೆಂದರೆ
ಅ. ಕಾರ್ಮಿಕರ ವರ್ಗಶೋಷಣೆ ಮತ್ತು ವರ್ಗಹೋರಾಟದ ಕಥನ
ಆ. ಬಂಡವಾಳಶಾಹಿ ವ್ಯವಸ್ಥೆಯ ಉಗಮ, ವಿಕಾಸಗಳ ಚರಿತ್ರೆ
ಇ. ಬಂಡವಾಳಶಾಹಿ ಉತ್ಪಾದನಾ ಪ್ರಕ್ರಿಯೆಯ ಚಲನೆಯ ನಿಯಮಗಳ ಅನ್ವೇಷಣೆ
ಕಾರ್ಮಿಕರ ವರ್ಗಶೋಷಣೆ ಮತ್ತು ವರ್ಗಹೋರಾಟದ ಕಥನ

ಒಂದು ಕಡೆ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಕಾರ್ಮಿಕರ ವರ್ಗ ಶೋಷಣೆಯ ನಿರ್ದಿಷ್ಟತೆಯ ತಾತ್ವಿಕ ಅನಾವರಣ ‘ಬಂಡವಾಳ’ದಲ್ಲಿ ನಡೆಯುತ್ತಿರುತ್ತದೆ. ಇದು ಬಂಡವಾಳಶಾಹಿ ಉತ್ಪಾದನಾ ಪ್ರಕ್ರಿಯೆಯ ಚಲನೆಯ ನಿಯಮಗಳ ಅನ್ವೇಷಣೆ (ಮೂರನೇ ಕಥನದ ಭಾಗವಾಗಿ ಬರುತ್ತದೆ). ಅದಕ್ಕಾಗಿ – ಸರಕಿನ ಪರಿಕಲ್ಪನೆ; ಸರಕಿನ ಇಬ್ಬಗೆಯ ಮೌಲ್ಯಗಳು – ಉಪಯೋಗ-ಮೌಲ್ಯ ಮತ್ತು ವಿನಿಮಯ-ಮೌಲ್ಯ; ಹಣದ ಪರಿಕಲ್ಪನೆ; ಹಣದ ಕೆಲಸಗಳು – ಮೌಲ್ಯದ ಅಳೆಯುವ, ಚಲಾವಣೆಯ ಮತ್ತು ಪಾವತಿಯ ಸಾಧನವಾಗಿ; ಶ್ರಮ ಒಂದು ಸರಕಾಗಿ ಮತ್ತು ಮಿಗುತಾಯ ಮೌಲ್ಯದ ಸೃಷ್ಟಿಯ ಶಕ್ತಿಯಾಗಿ; ಸರಕಿನ ರೂಪಾಂತರ; ಸರಕು ಮತ್ತು ಹಣದ ಪರಿಚಲನೆ; ಹಣ ಬಂಡವಾಳವಾಗುವ ಬಗೆ; ಮಿಗುತಾಯ ಶ್ರಮ ಮತ್ತು ಮಿಗುತಾಯ ಮೌಲ್ಯ ಕಾರ್ಮಿಕರ ಶೋಷಣೆಯ ಮೂಲ – ಈ ರೀತಿ ಶೋಷಣೆಯ ಮೂಲದ ಅನ್ವೇಷಣೆ ನಡೆಯುತ್ತಿರುತ್ತದೆ. ಆ ಪ್ರಧಾನ ಕಥನದ ಭಾಗವಾಗಿಯೇ ಮತ್ತು ಜತೆಜತೆಯಾಗಿಯೇ ಇಂಗ್ಲೆಂಡಿನ ಕಾರ್ಮಿಕರ ವರ್ಗಶೋಷಣೆಯ ಮತ್ತು ಅವರ ವರ್ಗ ಹೋರಾಟದ ಕಥನವೂ ಬರುತ್ತದೆ.

ವರ್ಗ ಶೋಷಣೆಯ ತಾತ್ವಿಕ ಅನ್ವೇಷಣೆಯಲ್ಲಿ ಹಲವು ಪರಿಕಲ್ಪನೆಗಳನ್ನು ವಿವರಿಸುವಾಗ ಕಾರ್ಮಿಕರ ದಿನದ ಕೆಲಸದ ಅವಧಿಯನ್ನು 12 ಗಂಟೆ ಎಂದು ಹೆಚ್ಚಾಗಿ ತೆಗೆದುಕೊಳ್ಳುವುದೇ ಈಗಿನ ಓದುಗನಿಗೆ ಮೊದಲ ಶಾಕ್ ಕೊಡುತ್ತದೆ. 8 ಗಂಟೆಯ ಗರಿಷ್ಟ ದುಡಿಮೆಯ ದಿನಕ್ಕಾಗಿ ಜಗತ್ತಿನಾದ್ಯಂತ ಅನುದಿನವೂ ಹೋರಾಡುತ್ತಿರುವ ಕಮ್ಯುನಿಸ್ಟ್ ಚಳುವಳಿಯ ಆದಿ ಪುರುಷ ಯಾಕೆ 12 ಗಂಟೆ ಉದಾಹರಣೆ ತೆಗೆದುಕೊಳ್ಳುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗುತ್ತದೆ. ಓದುತ್ತಾ ಹೋದಂತೆ ಮಾಕ್ರ್ಸ್ ಕಾಲದ ಇಂಗ್ಲೆಂಡಿನಲ್ಲಿ 12ರಿಂದ 18 ಗಂಟೆಗಳ ಕೆಲಸದ ದಿನದ ಅವಧಿ ಅತಿ ಸಾಮಾನ್ಯವಾಗಿತ್ತು ಎಂದು ತಿಳಿಯುತ್ತದೆ. ಸಂಪುಟದ ಉದ್ದಕ್ಕೂ ಬರುವ ಇಂಗ್ಲೆಂಡಿನ ವಿವಿಧ ಕಾರ್ಮಿಕ ವರ್ಗಗಳ ದೈನಂದಿನ ಕೆಲಸದ ಮತ್ತು ಜೀವನ ಪರಿಸ್ಥಿತಿಗಳ ವಿವರಣೆ ಎತ್ತಿ ತೋರಿಸುವ ಶೋಷಣೆಯ ಕರಾಳ ಮುಖಗಳು ದಂಗು ಬಡಿಸುವಂತದು.

ಇಂದು ಭಾರತ ಅಥವಾ ಇತರ ಯಾವುದೇ ಮೂರನೇ ಜಗತ್ತಿನಲ್ಲಿನ ಕಾರ್ಮಿಕರ ಪರಿಸ್ಥಿತಿಯಂತೆಯೇ ಕಾಣುತ್ತದೆ. ಅದರಲ್ಲೂ ಆಗ ಇಂಗ್ಲೆಂಡಿನ ಮಹಿಳಾ ಮತ್ತು ಬಾಲ ಕಾರ್ಮಿಕರ ಕೆಲಸದ ಪರಿಸ್ಥಿತಿಯ ವಿವರಗಳು ಹೃದಯ ಹಿಂಡುವಂತಹದ್ದು. ಈ ವಿವರಗಳನ್ನು ಓದುವಾಗ ಇವು ಈಗ 150 ವರ್ಷಗಳ ನಂತರ ಆದ ಬಂಡವಾಳಶಾಹಿಯ ಬೆಳವಣಿಗೆಯಿಂದಾಗಿ ಅಥವಾ ‘ಪ್ರಗತಿ’ಯಿಂದಾಗಿ ಇದು ‘ಅಪ್ರಸ್ತುತ’ ಎಂದೋ ‘ಹಳೆಯ ಕತೆ’ಯೆಂದೋ ಅನಿಸುವುದೇ ಇಲ್ಲ. ಇಂತಹ ಪರಿಸ್ಥಿತಿಯಿರುವ ದೇಶ-ಸ್ಥಳ ಬದಲಾಗಿದೆ ಎಂದು ಬಿಟ್ಟರೆ ಇಂದಿಗೂ ಕಾರ್ಮಿಕರ ಜೀವನದ ವಾಸ್ತವಕ್ಕೆ ಹಿಡಿದ ಕನ್ನಡಿಯಂತಿದೆ. ಈಗ ಯುರೋಪು, ಇಂಗ್ಲೆಂಡುಗಳಲ್ಲಿ ಸವಾರಿ ಮಾಡುತ್ತಿರುವ ಆಳುವ ಬಂಡವಳಿಗ ವರ್ಗದ ‘ಮಿತವ್ಯಯ’ದ ನೀತಿಗಳು ಪೂರ್ಣವಾಗಿ ಜಾರಿಗೆ ಬಂದರೆ ಅಲ್ಲೂ ಇಂತಹುದೇ ಪರಿಸ್ಥಿತಿ ಕಾಣುವ ಕಾಲವೂ ಸದ್ಯದಲ್ಲೇ ಬರಬಹುದು.

ಕಾರ್ಮಿಕರ ಅಮಾನವೀಯ ಕೆಲಸದ ಪರಿಸ್ಥಿತಿ, ಶೋಷಣೆಯ ವಿವರಗಳು ಹಾಗೂ ಅವುಗಳ ವಿರುದ್ಧ ಆಕ್ರೋಶವನ್ನು ಪುಸ್ತಕದ ಉದ್ದಕ್ಕೂ ಪ್ರಸ್ತುತವಾದಾಗಲೆಲ್ಲ ಅವಕಾಶವಿದ್ದಾಗಲೆಲ್ಲ ಮಾಕ್ರ್ಸ್ ವ್ಯಕ್ತಪಡಿಸುತ್ತಾರೆ. ಅದೇ ರೀತಿ ಈ ವರ್ಗ ಶೋಷಣೆಯ ವಿರುದ್ಧ ಕಾರ್ಮಿಕರ ಹೋರಾಟದ ಬಗೆಗೂ ಪ್ರಸ್ತಾಪಗಳು ಬರುತ್ತವೆ. ಆದರೆ ‘ಕಾರ್ಮಿಕರ ಕೆಲಸದ ದಿನ’ (ಅಧ್ಯಾಯ 10) ಮತ್ತು ‘ಯಂತ್ರಗಳು ಮತ್ತು ಆಧುನಿಕ ಕೈಗಾರಿಕೆ’ (ಅಧ್ಯಾಯ 15) ಅಧ್ಯಾಯಗಳಲ್ಲಿ ಕಾರ್ಮಿಕರ ವರ್ಗಶೋಷಣೆಯ ಮತ್ತು ವರ್ಗಹೋರಾಟದ ನಿರೂಪಣೆಯೇ ಪ್ರಧಾನವಾಗಿವೆ. ಅದೇ ರೀತಿ ಇಂಗ್ಲೆಂಡಿನ ಕಾರ್ಮಿಕರ ಜೀವನ ಪರಿಸ್ಥಿತಿಯ ಮೇಲೆ ಬಂಡವಾಳದ ಶೇಖರಣೆಯ ಪ್ರಭಾವದ ಮನಮುಟ್ಟುವ ವಿವರಣೆ ಅಧ್ಯಾಯ 25 – ವಿಭಾಗ 5ರಲ್ಲಿ ಬರುತ್ತದೆ

‘ಕಾರ್ಮಿಕರ ಕೆಲಸದ ದಿನ’
ಕಾರ್ಮಿಕನಿಂದ ಅವನ ಜೀವನಾಶ್ಯಕ ಸಾಧನಗಳಿಗೆ ಬೇಕಾದ ಶ್ರಮಕಾಲಕ್ಕಿಂತ ಹೆಚ್ಚಾಗಿ ಹಿಂಡಿ ತೆಗೆಯಲಾದ ಮಿಗುತಾಯ ಶ್ರಮದಿಂದ ಮಿಗುತಾಯ ಮೌಲ್ಯ ಹುಟ್ಟುತ್ತದೆ. ಅದೇ ಬಂಡವಾಳಶಾಹಿಯ ಲಾಭದ ಮೂಲ. ಕಾರ್ಮಿಕನಿಂದ ಹೆಚ್ಚೆಚ್ಚು ಮಿಗುತಾಯ ಮೌಲ್ಯ ಕಿತ್ತುಕೊಳ್ಳುವುದು ಬಂಡವಾಳಶಾಹಿಯ ಪ್ರಧಾನ ಗುಣಲಕ್ಷಣ, ಪ್ರವೃತ್ತಿಯಾಗಿರುತ್ತದೆ, ಎಂಬ ಸಿದ್ಧಾಂತವನ್ನು ವೈಜ್ಞಾನಿಕವಾಗಿ ಪ್ರತಿಪಾದಿಸಿದ ಮೇಲೆ ‘ಕಾರ್ಮಿಕರ ಕೆಲಸದ ದಿನ’ (ಅಧ್ಯಾಯ 10) ಬರುತ್ತದೆ. ಕಾರ್ಮಿಕರ ಕೆಲಸದ ದಿನವನ್ನು ಸಾಧ್ಯವಾದಷ್ಟು ಹೆಚ್ಚು ಮಾಡುವುದೂ ಬಂಡವಾಳಶಾಹಿಯ ಪ್ರಧಾನ ಗುಣಲಕ್ಷಣ, ಪ್ರವೃತ್ತಿಯಾಗಿರುತ್ತದೆ. ಈ ಪ್ರಯತ್ನದ ಹಲವು ಮಗ್ಗುಲುಗಳ, ಕಾರ್ಮಿಕರ ಮೇಲೆ ಅದರ ದುಷ್ಪರಿಣಾಮಗಳ ಮತ್ತು ಅದರ ವಿರುದ್ಧ ಕಾರ್ಮಿಕರ ಮೊದಲ ಸುತ್ತಿನ ಪ್ರತಿರೋಧದ ನಿರೂಪಣೆ ‘ಕಾರ್ಮಿಕರ ಕೆಲಸದ ದಿನ’ (ಅಧ್ಯಾಯ 10)ದ ಮುಖ್ಯ ವಸ್ತು. “ಬಂಡವಾಳವೆಂದರೆ ಸತ್ತ ದುಡಿಮೆಯ ಕಳೇಬರವೇ ಸರಿ. ಬಂಡವಾಳ ರಕ್ತ-ಪಿಶಾಚಿಯಂತೆ ಜೀವಂತ ದುಡಿಮೆಯ ರಕ್ತವನ್ನು ಹೀರಿ ಬೆಳೆಯುತ್ತದೆ. ದುಡಿಮೆಯನ್ನು ಜಾಸ್ತಿ ಹೀರಿದಷ್ಟು, ಜಾಸ್ತಿ ಕಾಲ ಬಂಡವಾಳ ಜೀವಂತವಾಗಿರುತ್ತದೆ.” (ಅಧ್ಯಾಯ 10 – ವಿಭಾಗ-1) ಎನ್ನುವ ಮೂಲಕ ಮಾಕ್ರ್ಸ್, ಕಾರ್ಮಿಕನ ಕೆಲಸದ ದಿನವನ್ನು ಗರಿಷ್ಟಗೊಳಿಸುವ ಬಂಡವಳಿಗನ ಧಾವಂತ ಹೇಗೆ ವ್ಯವಸ್ಥೆಯ ಭಾಗ ಎಂದು ತೋರಿಸಿಕೊಡುತ್ತಾರೆ.

ಮಿಗುತಾಯ ಶ್ರಮ ಕಿತ್ತುಕೊಳ್ಳುವುದರಲ್ಲಿ ಹಿಂದಿನ ಉತ್ಪಾದನಾ ವ್ಯವಸ್ಥೆಗಳ (ಗುಲಾಮಿ, ಪಾಳೆಯಗಾರಿ ಇತ್ಯಾದಿ) ಮಾಲಕರನ್ನು ಯಾವುದೇ ಮಿತಿಯಿಲ್ಲದ ಕ್ರೌರ್ಯದಲ್ಲಿ ಮೀರಿಸುವ ಬಂಡವಾಳಿಗರ ಪರಿಯನ್ನು ಅವರು ವಿವರಿಸುತ್ತಾರೆ. ‘ರೊಮೇನಿಯಾದ ಡೆನ್ಯೂಬಿಯನ್ ರಾಜಸತ್ತೆಗಳಲ್ಲಿ ಪ್ರಚಲಿತವಿರುವ ಮಿಗುತಾಯ ದುಡಿಮೆಯ ಕಾರ್ವಿ ಪದ್ಧತಿ’ಯು, ‘ಇಂಗ್ಲೆಂಡ್‍ನ ಫ್ಯಾಕ್ಟರಿಗಳ ದುಡಿಮೆ’ಗಿಂತ ‘ಹೆಚ್ಚು ಸ್ವತಂತ್ರವೂ ಬದಲಾವಣೆಗಳಿಗೆ ತೆರೆದುಕೊಂಡಿರುವಂತಹದ್ದೂ ಆಗಿದೆ.’, ಎಂಬ ಚರಿತ್ರೆಯಲ್ಲಿನ ಬಂಡವಾಳಶಾಹಿ-ಪೂರ್ವ ಮತ್ತು ಬಂಡವಾಳಶಾಹಿ ವ್ಯವಸ್ಥೆಯ ಶೋಷಣೆಗಳನ್ನು ಪುರಾವೆ ಸಹಿತ ವಸ್ತುಸ್ಥಿತಿಗಳೊಂದಿಗೆ ಹೋಲಿಸಿ ವಿವರಿಸುತ್ತಾರೆ. ‘ದುಡಿಮೆಯ ಪ್ರಧಾನ ಉದ್ದೇಶ ದುಡಿಮೆಗಾರನಿಂದ ಉಪಯುಕ್ತ ವಸ್ತುಗಳನ್ನು’ ಉತ್ಪಾದಿಸುವ ಬದಲು, ‘ಮಿಗುತಾಯ ದುಡಿಮೆಯೇ ದುಡಿಮೆಯ ಉದ್ದೇಶ’ವಾಗಿರುವುದೇ ಇದಕ್ಕೆ ಕಾರಣವೆಂದೂ ವಾದಿಸುತ್ತಾರೆ. ‘ಇಂಗ್ಲೆಂಡ್‍ನ ಫ್ಯಾಕ್ಟರಿಗಳ ದುಡಿಮೆ’ಯ ಪರಿಸ್ಥಿತಿಯನ್ನು ನಿರೂಪಿಸಲು ಅವರು ಫ್ಯಾಕ್ಟರಿ ಇನ್ಸಪೆಕ್ಟರುಗಳ ತಳಮಟ್ಟದ ಸಂದರ್ಶನ ಸಮೀಕ್ಷೆ ಆಧಾರಿತ ಅರ್ಧವಾರ್ಷಿಕ ಮತ್ತು ಪತ್ರಿಕಾ ವರದಿಗಳನ್ನು ಬಳಸುತ್ತಾರೆ. ಅಧ್ಯಾಯ 10ರ ಉದ್ದಕ್ಕೂ ವಿವಿಧ ಉದ್ಯಮಗಳಲ್ಲಿ ಕಾರ್ಮಿಕರ ದಾರುಣ ವಸ್ತುಸ್ಥಿತಿಯನ್ನು ನಿರೂಪಿಸಲು ಫ್ಯಾಕ್ಟರಿ ಇನ್ಸಪೆಕ್ಟರುಗಳ ಮತ್ತು ಆರೋಗ್ಯ ಕಮಿಶನುಗಳ ವರದಿಗಳೇ ಅವರಿಗೆ ಆಧಾರವಾಗುತ್ತದೆ.

ಕಾರ್ಮಿಕರ ದಾರುಣ ಪರಿಸ್ಥಿತಿಯ ವರದಿಗಳು, ಅದರ ವಿರುದ್ಧ ಕಾರ್ಮಿಕರ ಪ್ರತಿರೋಧ ಇವೆಲ್ಲವನ್ನು ಗಮನಿಸಿ ಇಂಗ್ಲೆಂಡಿನ ಸರಕಾರ ತಂದ 1850ರ ಫ್ಯಾಕ್ಟರಿ ಕಾಯ್ದೆ ಸರಾಸರಿ ದಿನಕ್ಕೆ 10 ಗಂಟೆಗಳ ಮಿತಿ ಹೇರುತ್ತದೆ. ಆ ಕಾನೂನಿನ ಜಾರಿಯ ಮಿತಿಗಳನ್ನೂ, ಈ ಕಾನೂನಿನಿಂದ ರಿಯಾಯಿತಿ ಪಡೆದಿದ್ದ ಹಲವು ಉದ್ಯಮಗಳಲ್ಲಿ ಕಾರ್ಮಿಕರ ಪರಿಸ್ಥಿತಿಯನ್ನು ನಿರೂಪಿಸುವ ಮೂಲಕ ಮಾಕ್ರ್ಸ್ ಬಯಲಿಗೆಳೆಯುತ್ತಾರೆ. ಈ ಉದ್ಯಮಗಳಲ್ಲಿ ಶೋಷಣೆ ಕೆಲಸದ ದೀರ್ಘ ದಿನ, ಅಮಾನವೀಯ ಕೆಲಸದ ಸ್ಥಳ, ಪರಿಸ್ಥಿತಿಗಳ ವಿವರಣೆ ದಂಗು ಬಡಿಸುವಂತಹುದು ಮತ್ತು ಅದರಷ್ಟಕ್ಕೆ ಒಂದು ಅತ್ಯುತ್ತಮ ತನಿಖಾ ವರದಿಯಂತಿದೆ.

1850ರ ಫ್ಯಾಕ್ಟರಿ ಕಾಯ್ದೆಯಿಂದ ವಿನಾಯಿತಿ ಪಡೆದಿದ್ದ ಲೇಸ್, ಮಡಿಕೆ, ಬೆಂಕಿಪೊಟ್ಟಣ ತಯಾರಿಕೆಯಲ್ಲಿ ಬಾಲಕಾರ್ಮಿಕರ ಶೋಷಣೆಯ ಚಿತ್ರಣವನ್ನು ಓದಿ ಕಣ್ಣು ಒದ್ದೆಯಾಗದವರು ಮನುಷ್ಯರೇ ಅಲ್ಲ. ‘9-10 ವರ್ಷ ಪ್ರಾಯದ ಎಳೆಯ ಮಕ್ಕಳನ್ನು, ಬೆಳಗಿನ ಜಾವ 2, 3 ಅಥವಾ 4 ಗಂಟೆಗೆ ಅವರ ಚಿಂದಿ ಬಿದ್ದ ಕೊಳಕು ಹಾಸಿಗೆಗಳಿಂದ ಬಲವಂತವಾಗಿ ಎಬ್ಬಿಸಿ, ರಾತ್ರಿ 10, 11 ಅಥವಾ 12 ಗಂಟೆಯವರೆಗೆ ದುಡಿಯುವಂತೆ ಒತ್ತಾಯ ಹೇರಲಾಗುತ್ತದೆ. ಅವರ ಮುಖಗಳು ಬಿಳಿಚಿಕೊಂಡಿರುತ್ತವೆ; ಅವರ ಒಟ್ಟು ವ್ಯಕ್ತಿತ್ವವೇ ಕಲ್ಲಿನಂತೆ ಜಡ್ಡಾಗುತ್ತದೆ. ಇಂಗ್ಲೆಂಡ್‍ನ ಲೇಸ್ ಉದ್ಯಮ, ಬಿಡುಗಡೆಯೇ ಇಲ್ಲದ ಗುಲಾಮಗಿರಿ…… ಕಾರ್ಮಿಕರ ಒಂದು ದಿನದ ದುಡಿಮೆಯನ್ನು 18 ಗಂಟೆಗಳ ಕಾಲ ಮಿತಿಗೆ ಒಳಪಡಿಸುವ ಕಾನೂನು ಜಾರಿಯಾಗಲಿ ಎಂಬ ಬೇಡಿಕೆಯ ಕುರಿತು ಚರ್ಚೆ ಮಾಡಲು ಒಂದು ಸಾರ್ವಜನಿಕ ಸಭೆ ನಡೆಯುವ ನಗರದ ಬಗ್ಗೆ ನಾವು ಏನು ಹೇಳಲು ಸಾಧ್ಯ!” ಎಂದು ನಾಟಿಂಗ್‍ಹ್ಯಾಮ್‍ನಲ್ಲಿ ನಡೆದ ಇಂತಹ ಸಭೆಯಲ್ಲಿ, ನ್ಯಾಯಾಧೀಶರೊಬ್ಬರ ವಿಷಾದಭರಿತ ಉದ್ಗಾರವನ್ನು ಮಾಕ್ರ್ಸ್ ಉಲ್ಲೇಖಿಸುತ್ತಾರೆ. ‘ಬೆಂಕಿಕಡ್ಡಿಗಳ ಉದ್ಯಮ ಬೆಂಕಿಕಡ್ಡಿಗೆ ಫಾಸ್ಫರಸ್ ಎಂಬ ರಾಸಾಯನಿಕವನ್ನು ನೇರವಾಗಿ ಹಚ್ಚುವ ವಿಧಾನದ ಆವಿಷ್ಕಾರದೊಂದಿಗೆ 1833ರಲ್ಲಿ ಪ್ರಾರಂಭವಾದ.. ..ಲೂಸಿಫರ್ ಬೆಂಕಿಪೆಟ್ಟಿಗೆಗಳ ತಯಾರಿಕೆಯ ಜೊತೆಗೇ ಬರುವ ದವಡೆ ಅಲ್ಲಾಡಿಸಲು ಆಗದ ಟಿಟೇನಸ್ ಖಾಯಿಲೆ’ ಹರಡಿದೆ. ಈ ಉದ್ಯಮದಲ್ಲಿ ದುಡಿಯುವ ಕಾರ್ಮಿಕರಲ್ಲಿ ‘ಅರ್ಧಕ್ಕಿಂತ ಹೆಚ್ಚಿನವರು 13 ವರ್ಷಕ್ಕಿಂತ ಕೆಳಗಿನ ಬಾಲಕರು ಮತ್ತು 18 ವರ್ಷಕ್ಕಿಂತ ಕಡಿಮೆ ಪ್ರಾಯದ ತರುಣರು. .. 12 ರಿಂದ 15 ಗಂಟೆಗಳು ಅವರ ದಿನನಿತ್ಯದ ದುಡಿಮೆಯ ಕಾಲಾವಧಿಯಾಗಿತ್ತು. ರಾತ್ರಿಪಾಳಿಯ ದುಡಿಮೆಯೂ ಇತ್ತು; ಹೆಚ್ಚಿನ ಸಂದರ್ಭಗಳಲ್ಲಿ ಕಾರ್ಮಿಕರು, ಫಾಸ್ಫರಸ್ ಮುಂತಾದ ರಾಸಾಯನಿಕಗಳ ದುರ್ವಾಸನೆ ಹಬ್ಬಿದ, ತಮ್ಮ ದುಡಿಮೆಯ ಜಾಗದಲ್ಲೇ ಉಣ್ಣ ಬೇಕಾಗಿತ್ತು. ..ಡಾಂಟೆ ತನ್ನ ಕಾವ್ಯದಲ್ಲಿ ವರ್ಣಿಸುವ ನರಕಕ್ಕಿಂತಲೂ ಈ ಕಾರ್ಖಾನೆಗಳು ಹೆಚ್ಚು ಭೀಕರವಾಗಿದ್ದವು!’ ಎಂದು ಮಾಕ್ರ್ಸ್ ಆಕ್ರೋಶದಿಂದ ಬರೆಯುತ್ತಾರೆ.

1850ರ ಫ್ಯಾಕ್ಟರಿ ಕಾಯ್ದೆಯಿಂದ ವಿನಾಯಿತಿ ಪಡೆದಿದ್ದ ಪೇಪರ್ ಹ್ಯಾಂಗಿಂಗ್ (ಹಸ್ತ ಮುದ್ರಣ), ಡ್ರೆಸ್ ತಯಾರಿಕೆ ಮತ್ತಿತರ ಉದ್ಯಮಗಳಲ್ಲಿ ಮಹಿಳಾ ಕಾರ್ಮಿಕರ ಶೋಷಣೆಯ ಹಿಂದಿನ ಕ್ರೌರ್ಯ ಬಗ್ಗೆ ಮಾಕ್ರ್ಸ್ ನೀಡುವ ಚಿತ್ರಣ ನಡುಕ ತರುವಂತಹದು. ಮಹಿಳೆಯರ ಹ್ಯಾಟ್ ತಯಾರಕಿ ಆಗಿ ದುಡಿಯುತ್ತಿದ್ದ ಮೇರಿ ಆ್ಯನ್ ವಾಕ್ಲಿ ಎಂಬ 20 ವರ್ಷ ಪ್ರಾಯದ ತರುಣಿಯ ಅಕಾಲಮರಣದ ಕುರಿತ ವರದಿ ಉಲ್ಲೇಖಿಸುತ್ತಾ ಅವಳ ಉದಾಹರಣೆಯ ಮೂಲಕ, ಆ ಉದ್ಯಮದಲ್ಲಿ ಮಹಿಳಾ ಕಾರ್ಮಿಕರ ಪರಿಸ್ಥಿತಿ ಬಗ್ಗೆ ಅವರು ತಿಳಿಸುತ್ತಾರೆ. ಮೇರಿ ಆ್ಯನ್ ವಾಕ್ಲಿ ದಿನಕ್ಕೆ ಸರಾಸರಿ 161/2 ಗಂಟೆಗಳಷ್ಟು ಕಾಲ ಕೆಲಸ ಮಾಡಬೇಕಾಗುತ್ತಿತ್ತು. ಸೀಸನ್‍ನಲ್ಲಿ ಒಮ್ಮೊಮ್ಮೆ ಅವಳು ಎಡೆಬಿಡದೆ 30 ಗಂಟೆ ದುಡಿದದ್ದೂ ಉಂಟು. ಅರಮನೆಗೆ ಬರಲಿದ್ದ ಹೊಸ ಯುವರಾಣಿಯ ಗೌರವಾರ್ಥ ಏರ್ಪಡಿಸಲಾಗಿದ್ದ ಸಂಭ್ರಮ ಕೂಟದಲ್ಲಿ ಪಾಲುಗೊಳ್ಳುವ ಕುಲೀನ ಮಹಿಳೆಯರಿಗೆ ಹೊಸ ಪೋಷಾಕುಗಳು ಸಿದ್ಧವಾಗಬೇಕಿದ್ದ ಸೀಸನ್ ನಲ್ಲಿ ‘ಕಂಪನಿಯ ಒಂದು ಇಕ್ಕಟ್ಟಾದ ಕೋಣೆಯಲ್ಲಿ ಮೇರಿ ಆ್ಯನ್ ವಾಕ್ಲಿ, ಇತರ 60 ತರುಣಿಯರ ಜೊತೆ ಸತತವಾಗಿ 261/2 ಗಂಟೆಗಳ ಕಾಲ ಕೆಲಸ ಮಾಡಿದ್ದಳು. ರಾತ್ರಿ; ಅವರು ಒತ್ತೊತ್ತಾಗಿ, ಗಾಳಿಗೂ ಸುಳಿದಾಡಲು ಜಾಗವಿಲ್ಲದಷ್ಟು ಕಿರಿಯ ಗೂಡುಗಳಲ್ಲಿ ನಿದ್ರಿಸಬೇಕಾಗಿತ್ತು.’ ಇದನ್ನು ಅವಳ ಕೃಶ ಶರೀರ ತಡೆದುಕೊಳ್ಳದೆ ಕುಸಿದಿತ್ತು. ಈ ಉದ್ಯಮದಲ್ಲಿ ಹೆಚ್ಚಿನ ಮಹಿಳೆಯರು ಜೀವಂತ ಶವಗಳಂತೆ ಇದ್ದರು, ಎಂಬುದು ಮಾಕ್ರ್ಸ್ ಕೊಡುವ ಚಿತ್ರಣ.

1850ರ ಫ್ಯಾಕ್ಟರಿ ಕಾಯ್ದೆಯಿಂದ ವಿನಾಯಿತಿ ಪಡೆದಿದ್ದ ಮತ್ತು ವಯಸ್ಕ ಪುರುಷ ಕಾರ್ಮಿಕರು ಪ್ರಧಾನವಾಗಿ ದುಡಿಯುತ್ತಿದ್ದ ಬ್ರೆಡ್ ತಯಾರಿಕೆ, ಕಮ್ಮಾರಿಕೆ, ರೈಲ್ವೇಯಲ್ಲಿ ಕಾರ್ಮಿಕರ ಪರಿಸ್ಥಿತಿಯ ಕುರಿತು ಮಾಕ್ರ್ಸ್ ನಮ್ಮ ಗಮನ ಸೆಳೆಯುತ್ತಾರೆ. ‘ಮಾರ್ಲಿಬೋನ್‍ನಲ್ಲಿ ಕಮ್ಮಾರ ವೃತ್ತಿಯವರ ಸಾವಿನ ಪ್ರಮಾಣ ಒಂದು ವರ್ಷದಲ್ಲಿ ಪ್ರತಿ ಒಂದು ಸಾವಿರ ಸಾವುಗಳ ಪೈಕಿ 31 ಸಾವು! ಇದು ಇಡೀ ದೇಶದಲ್ಲಿ ಒಂದು ವರ್ಷದ ಅವಧಿಯಲ್ಲಿ ಸಂಭವಿಸುವ ಒಟ್ಟು ಸಾವುಗಳಿಗಿಂತ ಹನ್ನೊಂದರಷ್ಟು ಜಾಸ್ತಿ… ..ಕಮ್ಮಾರನೊಬ್ಬ ದಿನಕ್ಕೆ ಕಾದ ಕಬ್ಬಿಣಕ್ಕೆ ಹೊಡೆಯುವ ಪೆಟ್ಟುಗಳಿಗೆ ಒಂದು ಮಿತಿ ಇದೆ. ಅವನು ಹಾಕುವ ಹೆಜ್ಜೆಗಳಿಗೆ, ಅವನ ಉಸಿರಾಟಕ್ಕೆ, ಅವನು ಮಾಡುವ ಕೆಲಸಕ್ಕೆ – ಎಲ್ಲದಕ್ಕೂ ಮಿತಿ ಇದೆ. ಆ ಮಿತಿಯೊಳಗೆ ಅವನು ದುಡಿದು 50 ವರ್ಷ ಬದುಕಬಹುದು ಎಂದು ಭಾವಿಸಿದರೆ, ಆ ದುಡಿಮೆಯ ಫಲವನ್ನು ಅಂದರೆ ಉತ್ಪಾದನೆಯನ್ನು 50 ವರ್ಷದ ಅವಧಿಗಿಂತ ಬಹಳ ಮೊದಲೇ ಅವನಿಂದ, ಅವನ ದೇಹದಿಂದ, ದೋಚಲಾಗುತ್ತದೆ.. ..50 ವರ್ಷ ಬಾಳಿ ಬದುಕಬೇಕಾದವನು 37ರ ಹರೆಯದಲ್ಲೇ ತೀರಿಕೊಳ್ಳುತ್ತಾನೆ.’ ಎಂದು ಕಮ್ಮಾರಿಕೆಯಲ್ಲಿ ಕಾರ್ಮಿಕರ ಪರಿಸ್ಥಿತಿಯ ಬಗ್ಗೆ ಅವರು ಹೇಳುತ್ತಾರೆ.
ಲೋಹ ತಯಾರಿಕೆಯಲ್ಲಿ (ಬ್ಲಾಸ್ಟ್ ಫರ್ನೇಸ್, ರೋಲಿಂಗ ಮಿಲ್, ಫೋರ್ಜ್ ಇತ್ಯಾದಿ) ಮತ್ತಿತರ ಉದ್ಯಮಗಳಲ್ಲಿ ಯಂತ್ರ ಬಳಕೆ ಅಥವಾ ಉತ್ಪಾದನಾ ಪ್ರಕ್ರಿಯೆ ಸತತವಿದ್ದಾಗ, ‘24 ಗಂಟೆ ಸತತ ದುಡಿಮೆಯನ್ನು ಕಾರ್ಮಿಕರಿಂದ ಹಿಂಡಿ ತೆಗೆಯುವ ಬಂಡವಾಳಶಾಹಿ ಉತ್ಪಾದನಾ ವ್ಯವಸ್ಥೆಯ ಪೈಶಾಚಿಕ ರಕ್ತದಾಹದ ಸಹಜ ಪ್ರವೃತ್ತಿಯೇ ರಾತ್ರಿ ಪಾಳಿ ಅಥವಾ ಸರದಿ ವ್ಯವಸ್ಥೆಗೆ ಎಡೆಮಾಡಿಕೊಟ್ಟಿದೆ. ಈಗಾಗಲೇ ದಾರುಣ ಪರಿಸ್ಥಿತಿಯಲ್ಲಿದ್ದ ಬಾಲ, ಮಹಿಳಾ ಮತ್ತು ವಯಸ್ಕ ಪುರುಷ ಕಾರ್ಮಿಕರ ಮೇಲೆ ಅದು ಬೀರಿದ ದುಷ್ಪರಿಣಾಮವನ್ನೂ ಮಾಕ್ರ್ಸ್ ದಾಖಲಿಸುತ್ತಾರೆ.

‘ರಾತ್ರಿ ಪಾಳಿಯ ದುಡಿಮೆಯಿಂದ ಕಾರ್ಮಿಕರ ಆರೋಗ್ಯದ ಮೇಲೆ ಮಾತ್ರವಲ್ಲ ದುಷ್ಪರಿಣಾಮಗಳು’ ಆಗಿದ್ದು. ‘ದುಡಿಮೆ ದಿನದ 12 ಗಂಟೆಗಳ ಕಾಲಮಿತಿಯನ್ನು ಮೀರಿ ದುಡಿಯುವಂತೆ ಕಾರ್ಮಿಕರನ್ನು ಒತ್ತಾಯಿಸಲು ಮಾಲಕನಿಗೆ ಅವಕಾಶ ಕಲ್ಪಿಸುತ್ತದೆ.’ ಎಂದು ಅವರು ವಾದಿಸುತ್ತಾರೆ. ‘ಬಾಲ ಕಾರ್ಮಿಕರ ರಾತ್ರಿ ಪಾಳಿಯ ದುಡಿಮೆಯನ್ನು ಕಾನೂನು ರೀತ್ಯ ನಿಷೇಧಿಸಿದರೆ’ ತಮ್ಮ ಕಂಪನಿ ಬಾಗಿಲು ಮುಚ್ಚಬೇಕಾದ ಪರಿಸ್ಥಿತಿ ಬರಬಹುದು ಎಂದು ಮಾಲಕನೊಬ್ಬ ಫ್ಯಾಕ್ಟರಿ ಇನಸ್ಪೆಕ್ಟರ್‍ನನ್ನು ಎಚ್ಚರಿಸಿದ್ದನ್ನು ಅವರು ಉಲ್ಲೇಖಿಸುತ್ತಾ, ರಾತ್ರಿ ಪಾಳಿಯ ದುಷ್ಪರಿಣಾಮದ ಗಂಭೀರತೆಯನ್ನು ಮನದಟ್ಟು ಮಾಡುತ್ತಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...