13 ಯೋಧರ ದುರ್ಮರಣ, 5 ಯೋಧರ ಹತ್ಯೆ…. ಸರ್ಕಾರ, ಮೀಡಿಯಾ, ನಕಲಿ ದೇಶಭಕ್ತರ ನಿರ್ಲಜ್ಜ ಕಥನ

ಚುನಾವಣೆ ಲಾಭಕ್ಕಾಗಿ ಸೈನಿಕರ ಸಾವನ್ನೂ ಬಳಸಿಕೊಂಡ ಈ ದುಷ್ಟಕೂಟ ಈಗ ಕುಸಿದ ಅರ್ಥ ವ್ಯವಸ್ಥೆಯ ಕುರಿತಾಗಲಿ, ದೌರ್ಜನ್ಯಗಳ ಬಗ್ಗೆಯಾಗಲೀ ಸುದ್ದಿಯೇ ಆಗದಂತೆ ನೋಡಿಕೊಳ್ಳುತ್ತಿದೆ. ಇದಕ್ಕೆ ಗೋಣು ಆಡಿಸುವ ಭಕ್ತರೂ ಇನ್ನೂ ಮೋದಿಯ ‘ದೇಶಭಕ್ತಿಯ’ ಭಾಷಣಗಳ ಹ್ಯಾಂಗ್ ಓವರ್‍ನಲ್ಲೇ ಇದ್ದಾರೆ!

| ಪಿ.ಕೆ ಮಲ್ಲನಗೌಡರ್ |

ಜೂನ್ 3ರಂದು ಕಾಣೆಯಾಗಿದ್ದ ಭಾರತೀಯ ಸೇನೆಯ ವಿಮಾನದ ಅವಶೇಷ ಎಂಟು ದಿನಗಳ ನಂತರ ಸಿಕ್ಕಿತು. ಇದೀಗ ಗುರುವಾರ ಮಧ್ಯಾಹ್ನ ಹೊತ್ತಿಗೆ ಅರದಲ್ಲಿದ್ದ 13 ಯೋಧರು ಉಳಿದಿಲ್ಲ ಎಂದು ವಾಯುಸೇನೆ ತಿಳಿಸಿದೆ. ಸಂಜೆ ವೇಳಗೆ ಅವರ ಶವಗಳು ಮತ್ತು ಬ್ಲ್ಯಾಕ್‍ಬಾಕ್ಸ್ ದೊರೆತಿದೆ. ಇವತ್ತು ಶುಕ್ರವಾರ 13 ಹುತಾತ್ಮರಿಗೆ ಸರ್ಕಾರ ಮತ್ತು ಮುಖ್ಯವಾಹಿನಿ ಮಾಧ್ಯಮಗಳು ಶ್ರದ್ದಾಂಜಲಿ ಸಲ್ಲಿಸಬಹುದೇನೋ?

ಜೂನ್ 3ರಂದು ಏರ್‍ಕ್ರಾಫ್ಟ್ ಕಾಣೆ ಆದಾಗಿನಿಂದ   ಕೇಂದ್ರ ಸರ್ಕಾರ ಮತ್ತು ‘ಬಿಗ್’ ಮಾಧ್ಯಮ ಸಂಸ್ಥೆಗಳಿಗೆ ಇದು ಸೈನಿಕರ ವಿಷಯ ಎಂಬುದು ನೆನಪಾಗಲಿಲ್ಲವೋ ಅಥವಾ ‘ದೇಶ ಸುರಕ್ಷಿತ ಕೈಗಳಲ್ಲಿ’ ಎಂಬುದನ್ನು ಕಾಪಾಡಿಕೊಳ್ಳಲು ಜನರ ಗಮನಕ್ಕೆ ಈ ವಿಷಯ ಬರದಂತೆ ಯೋಜಿತ ಹುನ್ನಾರ ನಡೆಸಲಾಯಿತೋ? ಇನ್ನು  ಸ್ವಘೋಷಿತ ದೇಶಭಕ್ತರದ್ದು ಜಾಣಮೌನ. ಇದು ಕೇವಲ ಜಾಣಮೌನವಷ್ಟೇ ಅಲ್ಲ ಸೈನ್ಯವನ್ನು ಸ್ವಹಿತಾಸಕ್ತಿಗೆ ಬಳಸಿಕೊಳ್ಳುತ್ತಿರುವ ನಕಲಿ ದೇಶಭಕ್ತರ ಸ್ವಾರ್ಥ ಕಥನ.

ಮೊದಲಿಗೆ, ಸೇನೆಯ ಕಾರ್ಯಾಚರಣೆಗಳಲ್ಲಿ ಇಂಥದ್ದೆಲ್ಲ ಆಗಾಗ ಸಂಭವಿಸುತ್ತವೆ, ಸದಾ ಸರ್ಕಾರವೇ ಅವೆಲ್ಲವನ್ನು ನಿಭಾಯಿಸಿಬೇಕೆ? ಅದಕ್ಕೆ ಸಂಬಂಧಿಸಿದ ಕೆಲಸವನ್ನು ಸೇನೆಯೇ ಮಾಡುತ್ತದೆ ಎನ್ನುವ ಒಂದು ತರ್ಕವನ್ನು ಇಟ್ಟುಕೊಂಡರೆ, ಇದೆಲ್ಲವನ್ನೂ ವಿಮರ್ಶಿಸಬೇಕಾದ ಅಗತ್ಯವಿರಲಿಲ್ಲ. ಆದರೆ ಕಳೆದ ಚುನಾವಣಾ ಪ್ರಚಾರದಲ್ಲಿ ಈ ದೇಶದ ಬಡವರ ಸಂಕಷ್ಟಗಳ ಕುರಿತು, ತಾನು ಐದು ವರ್ಷ ಮಾಡಿದ ‘ಸಾಧನೆ’ ಕುರಿತು ಚರ್ಚೆ ಮಾಡಲಾಗದೇ, ಸೇನೆ ಮತ್ತು ದೇಶಭಕ್ತಿಯನ್ನೇ ಚುನಾವಣಾ ಇಶ್ಯೂ ಮಾಡಿದ್ದ ಕಾರಣಕ್ಕೇ ಈಗ ಈ ಪ್ರಶ್ನೆಗಳನ್ನು ಕೇಳಬೇಕಿದೆ. ಇದರಲ್ಲಿ ಮೋದಿಯಿಂದ ಹಿಡಿದು ಮಾಧ್ಯಮಗಳು ಮತ್ತು ಹಿಂದೂತ್ವವಾದವೇ ರಾಷ್ಟ್ರೀಯತೆ ಎಂಬ ವಾತಾವರಣ ಸೃಷ್ಟಿಸಿದ ಭಕ್ತರೆಂಬ ಸುಶಿಕ್ಷಿತ ಏಜೆಂಟರೂ ಸೇರಿದ್ದಾರೆ.

ಪುಲ್ವಾಮಾದಲ್ಲಿ ಹತರಾದವರಷ್ಟೇ ಹುತಾತ್ಮರೇ?
    ಇಲ್ಲಿ ಸೇನೆಯ ಎಲ್ಲ ಸದಸ್ಯರೂ ಒಂದೇ. ಆದರೆ, ಚುನಾವಣೆಯ ಲಾಭಕ್ಕಾಗಿ ಪುಲ್ವಾಮಾದಲ್ಲಿ ಹತರಾದ ಸೈನಿಕರ ಹೆಸರಿನಲ್ಲಿ ಮತ ಪಡೆದು, ಬಾಲಾಕೋಟ್‍ನಲ್ಲಿ ಪಟಾಕಿ ಎಸೆದು (ಏಕೆಂದರೆ ಆ ಕಾರ್ಯಾಚರಣೆಯ ಬಗ್ಗೆ ಇನ್ನೂ ಸ್ಪಷ್ಟ ಮಾಹಿಇಯೇ ಇಲ್ಲವಲ್ಲ!) ದಿಗ್ವಿಜಯ ಸಾಧಿಸಿದ್ದೇವೆ ಎಂಬ ಭ್ರಾಮಕ ಸಂಗತಿಯನ್ನೇ ಸತ್ಯ ಎಂದು ನಂಬಿಸಿದ ಇವರೆಲ್ಲರಿಗೆ ಈಗ ಜೂನ್ 3ರಂದು ಒಂದು ಏರ್‍ಕ್ರಾಫ್ಟ್ ಕಾಣೆಯಾಗಿದ್ದು ದುಗುಡದ ಸಂಗತಿಯಾಗಲಿಲ್ಲ ಏಕೆ? ಒಂದು ಕಡೆ ಡಿಸೆಂಬರ್‍ನಲ್ಲಿ ಸೋರಿಕೆಯಾದ ನಿರುದ್ಯೋಗ ಕುರಿತ ಅಂಕಿಸಂಖ್ಯೆಗಳನ್ನು ತಿರಸ್ಕರಿಸಿದ್ದ  ಈ ಗುಂಪು, ಈಗ ಅದೇ ಅಂಕಿಅಂಶ ಅಧಿಕೃತವಾಗಿ ಬಿಡುಗಡೆ ಆದ ಮೇಲಾದರೂ ವಾಸ್ತವವನ್ನು ಒಪ್ಪುತ್ತಿಲ್ಲ, ಬದಲಿಗೆ ಮತ್ತೆ ಮತ್ತೆ ಹೊಸ ಹೊಸ ಇಶ್ಯೂಗಳ ಕಡೆ ಜನರನ್ನು ಸೆಳೆಯುವ ಕೆಲಸ ಶುರು ಮಾಡಿದೆ. ಮೂರು ದಿನಗಳ ಹಿಂದಷ್ಟೇ ಭಯೋತ್ಪಾದನಾ ದಾಳಿಗೆ ಬಲಿಯಾದ ಐವರು ಸೈನಿಕರ ಬಗ್ಗೆ ಈ ಸರ್ಕಾರ ಮತ್ತು ಮೀಡಿಯಾಗಳಿಂದ ಒಂದು ಸಂತಾಪವೂ ಇಲ್ಲ!
ಮೋದಿ-2: ಮಾಧ್ಯಮ ಮಾಡುತ್ತಿರುವುದೇನು?
    ಮೇ 23ರಂದು ಫಲಿತಾಂಶ ಬಂದ ನಂತರ ಬಹುಪಾಲು ಮುಖ್ಯವಾಹಿನಿ ಮಾಧ್ಯಮಗಳೆಲ್ಲ ಮೋದಿ ಮತ್ತು ಶಾರನ್ನು ವೈಭವೀಕರಿಸುವ ಕೆಲಸದಲ್ಲಿ ತೊಡಗಿವೆ. ಈ ಹಿಂದಿನ ಐದು ವರ್ಷಗಳಲ್ಲಿ ಅವರ ಸಾಧನೆ ಎಂದು ಜನರ ಮುಂದೆ ಇಡಲು ಅವುಗಳ ಬಳಿ ಕಂಟೆಂಟ್ ಇಲ್ಲ. ಆ ಕಾರಣಕ್ಕಾಗಿ ಅವು ಬಿಜೆಪಿಯ ಒಂದು ಶಾಖೆಯಾಗಿ, ಪ್ರತಿದಿನ ಮೋದಿ-2 ಸರ್ಕಾರದ ಗುಣಗಾನದ ವಿಶೇಷ ಕಾರ್ಯಕ್ರಮಗಳನ್ನು ನೀಡುತ್ತ ಬಂದವು. ಉತ್ತರ ಪ್ರದೇಶದಲ್ಲಿ ಹೆಚ್ಚಿರುವ ದಲಿತರ ಮೇಲಿನ ದೌರ್ಜನ್ಯಗಳು, ಪತ್ರಕರ್ತರ ಮೇಲಿನ ಹಲ್ಲೆಗಳು ಅವಕ್ಕೆ ಮುಖ್ಯ ಅನಿಸಲೇ ಇಲ್ಲ.
    ಮತ್ತೆ ಅವು ಅದೇ ಹುಸಿ ರಾಷ್ಟ್ರೀಯತೆಯ ಹಿಂದೆ ಬಿದ್ದು, ಪದೇ ಪದೇ ಪಾಕಿಸ್ತಾನ, ಭಯೋತ್ಪಾದನೆ ಮತ್ತು ಕಾಶ್ಮೀರ ವಿಷಯಗಳನ್ನೇ ಕೇಂದ್ರಿಕರಿಸಿ, ಬರಲಿರುವ ದಿನಗಳಲ್ಲಿ ಈ ಎಲ್ಲದಕ್ಕೂ ಮೋದಿ ಸರ್ಕಾರ ಭರ್ಜರಿ ಉತ್ತರ ನೀಡಲಿದೆ ಎಂಬ ಊಹಾತ್ಮಕ ಕತೆಗಳನ್ನು ಹೆಣೆದು, ಜನರನ್ನು ದಾರಿ ತಪ್ಪಿಸುತ್ತಿವೆ.
ಜೂನ್ ಮೊದಲ ವಾರದಿಂದ ಕನ್ನಡದ ಬಹುಪಾಲು ಪೇಯ್ಡ್ ದೃಶ್ಯ ಮಾಧ್ಯಮಗಳಂತೂ ‘ಋಣ ಸಂದಾಯ’ದ ರೀತಿಯಲ್ಲಿ ವಿಶೇಷ ಕಾರ್ಯಕ್ರಮ ಪ್ರಸಾರ ಮಾಡುತ್ತಿವೆ. ಮೋದಿಯ ಜಪ, ಸಾರಂಗಿ ಎನ್ನುವಾತನ ‘ಬಡತನ’ ಮತ್ತು ಗೃಹ ಸಚಿವರಾಗಿ ಶಾ ತೋರಿಸಲಿರುವ ‘ಸಾಧನೆ’ಗಳೇ ಕಂಟೆಂಟುಗಳು!
ಮೋದಿ ದೇವರು, ಶಾ ಸೂಪರ್‍ಮ್ಯಾನ್!
ಈ ಹತ್ತು ಹನ್ನೆರಡು ದಿನಗಳಲ್ಲಿ ಯಾವ ಸತ್ವವೂ ಇಲ್ಲದೇ, ಅದಕ್ಕೆ ಬೇಕಾದ ಕಂಟೆಂಟೂ ಇಲ್ಲದೇ ಸಾಲುಸಾಲಾಗಿ ಮೋದಿ ಮತ್ತು ಟೀಂನ ಭಜನೆ ಮಾಡುವ ವಿಶೇಷ ಕಾರ್ಯಕ್ರಮಗಳನ್ನು ಇವು ಪ್ರಸಾರ ಮಾಡುತ್ತಲೇ ಇವೆ. ಜೂನ್ ಒಂದರ ರಾತ್ರಿಯ ಪ್ರೈಮ್ ಟೈಮಿನಲ್ಲಿ ಸುವರ್ಣ ನ್ಯೂಸ್ ‘ಸಿಂಗಂ ಶಾ’ ಎನ್ನುವ ತಳಬುಡವಿಲ್ಲದ ಕಂಟೆಂಟ್ ಇಟ್ಟುಕೊಂಡು ಒಂದು ವಿಶೇಷ ಕಾರ್ಯಕ್ರಮ ಮಾಡಿತು. ಶಾ ಗೃಹ ಸಚಿವರಾಗಿದ್ದೇ ದೇಶವನ್ನು ಶಾಂತಿಯ ತಾಣ ಮಾಡಲಂತೆ! ‘ಟೆರರಿಸ್ಟ್‍ಗಳಿಗೆ ಟೆನ್ಸನ್, ನಕ್ಸಲರಿಗೆ ನಡುಕ, ದೇಶದ್ರೋಹಿಗಳಿಗೆ ಪುಕಪುಕ’ ಇದು ‘ಸವರ್ಣ’ ಚಾನೆಲ್ಲಿನ ಸ್ಕ್ರಾಲಿಂಗ್ ಟೈಟಲ್! ಟೆರರಿಸ್ಟ್‍ಗಳು ನಕ್ಸಲರು ದೇಶದ್ರೋಹಿಗಳಾಯ್ತು, ಈ ಮೂರನೇ ಸಾಲಿನ ‘ದೇಶದ್ರೋಹಿಗಳಿಗೆ ಪುಕಪುಕ’ ಯಾರನ್ನು ಉದ್ದೇಶಿಸಿ ಹೇಳುತ್ತಿದೆ? ಪ್ರಭುತ್ವವನ್ನು ಪ್ರಶ್ನಿಸುವ ಪ್ರಗತಿಪರ ಮನಸ್ಸುಗಳನ್ನೋ, ಪಕ್ಷಪಾತಿಯಲ್ಲದ ಪತ್ರಕರ್ತರನ್ನೋ ಅಥವಾ ಮಾನವ ಹಕ್ಕುಗಳ ಕಾರ್ಯಕರ್ತರನ್ನೋ?
    ಶಾ ಬಗ್ಗೆ 20ರಿಂದ 30 ನಿಮಿಷಗಳ ಕಾರ್ಯಕ್ರಮ ನೀಡುವಾಗ ಆ ವ್ಯಕ್ತಿಯ ಹಿನ್ನೆಲೆಗೆ ಸಂಬಂಧಿಸಿದ ವಿಷಯಗಳನ್ನು ಜನರ ಮುಂದೆ ಇಡಬೇಕಿತ್ತಲ್ಲವೇ? ‘ಸಿಂಗಂ’ ತರಹ ಎಂದು ತೋರಿಸಲು ಆತ ಮಾಡಿದ ಸಾಹಸಗಳ ಉಲ್ಲೇಖ ಮಾಡಬೇಕಿತ್ತಲ್ಲವೇ? ಅದು ಯಾವುದೂ ಇಲ್ಲವೇ ಇಲ್ಲ. ಅದರ ಬದಲಾಗಿ ಶಾ ಹಿಂದೆ ಎದುರಿಸಿದ ಕೇಸುಗಳ ಬಗ್ಗೆ ಒಂದೂ ಪ್ರಸ್ತಾಪವಿಲ್ಲ. ವೀಕ್ಷಕರನ್ನು ಮೋಸ ಮಾಡುವುದಲ್ಲದೇ, ಕಳಂಕಿತ ವ್ಯಕ್ತಿಯನ್ನು ‘ಸಿಂಗಂ’ ಎಂದು ಪ್ರಾಜೆಕ್ಟ್ ಮಾಡುವ ಈ ಹುನ್ನಾರದ ಹಿಂದೆ ಒಂದು ಪೇಯ್ಡ್ ವ್ಯವಹಾರ ಇರದೇ ಇನ್ನೇನು ಇರಲು ಸಾಧ್ಯವಿಲ್ಲ ಅಲ್ಲವೇ?
    ಕಾಶ್ಮೀರದಲ್ಲಿ ಕಲ್ಲು ತೂರುವ ಯುವಕರ ಚೆಡ್ಡಿ ಒದ್ದೆಯಾಗಲಿದೆ ಎಂಬುದನ್ನು ಮತ್ತೆ ಮತ್ತೆ ತೋರಿಸಿದ ಈ ಕಾರ್ಯಕ್ರಮ ಅಲ್ಲಿನ ಯುವಕರೆಲ್ಲ ಪುಂಡರು ಎಂಬ ವ್ಯಾಖ್ಯಾನವನ್ನೂ ಮಾಡುವ ಭರದಲ್ಲಿತ್ತು. ಸಾಹಸಿ ಮ್ಯೂಸಿಕ್‍ನ ಹಿನ್ನೆಲೆ, ನಿರೂಪಕರ ಯುದ್ದೋನ್ಮಾದದ ನಾಟಕೀಯತೆ ಮತ್ತು ದಿಗ್ವಿಜಯ ಸಾಧಿಸಿದ ಧ್ವನಿಗಳ ಅಬ್ಬರದಲ್ಲಿ ವೀಕ್ಷಕರು ನಂಬುವಂತೆ ಮಾಡುವ ಯತ್ನಗಳನ್ನು ಮಾಡಿತು. ಮರುದಿನ ರವಿವಾರ ಮುಂಜಾನೆ ಅದೇ ಕಾರ್ಯಕ್ರಮ ರಿಪೀಟ್! ಮನೆಯಲ್ಲಿ ಆರಾಮಾಗಿ ‘ಪಕೋಡ’ ತಿನ್ನುತ್ತ ಕುಳಿತ ಭಕ್ತರಿಗಂತೂ ಸೋಮವಾರ ಆಫೀಸಲ್ಲಿ ಮಾತಾಡಲು ಇದೇ ಕಂಟೆಂಟು ಆಗಿರಬೇಕು.
    ಅದರ ಮರುದಿನವೇ ಏರ್‍ಕ್ರಾಫ್ಟ್ ನಾಪತ್ತೆ. ಆ ವಿಷಯ ಸುವರ್ಣ ಸೇರಿದಂತೆ ಯಾವ ಚಾನೆಲ್ಲಿಗೂ ಗಂಭಿರ ವಿಷಯವೇ ಅಲ್ಲ! ಭಕ್ತರ ಮಾನಸಿಕ ಪ್ರತಿನಿಧಿಯಂತಿರುವ ಸಂಸದ ತೇಜಸ್ವಿ ಸೂರ್ಯನನ್ನು ಕೂಡಿಸಿಕೊಂಡು ಅಜಿತ್ ಹನುಮಕ್ಕನವರ್‍ಎಂಬ ಅನಧಿಕೃತ ಆರೆಸ್ಸೆಸ್ ನಿರೂಪಕ ಮಾಡಿದ ಚರ್ಚೆಯಂತೂ ಭಯಂಕರವಾಗಿತ್ತು. ಕಾಶ್ಮೀರದ ಸಮಸ್ಯೆಗೆ ಅಮಿತ್ ಶಾ ಸದ್ಯದಲ್ಲೇ ಪರಿಹಾರ ಒದಗಿಸಲಿದ್ದಾರಂತೆ! ‘ಅಮಿತ್ ಶಾ ಮಾಡಿದ ಮೊದಲ ಪ್ರಮಾಣವೇನು?’ ಎಂದು ಬಿಲ್ಡಪ್ ಕೊಟ್ಟ ಈ ಚರ್ಚೆಯಲ್ಲಿ ಕಾಶ್ಮೀರದಲ್ಲಿನ ಆಂತರಿಕ ಭಯೋತ್ಪಾದನೆಯನ್ನು ನಿರ್ಮೂಲನ ಮಾಡಲು ಶಾ ಆಗಲೇ ಪ್ಲಾನು ಮಾಡಿದ್ದಾರೆ ಎಂಬ ‘ರಹಸ್ಯ’ವನ್ನು ಈ ಎಳಸುಗಳು ವೀಕ್ಷಕರ ಮುಂದೆ ಇಟ್ಟು ಯಾಮಾರಿಸಿದವು.
ಒಮ್ಮೆಯೂ ಕೇಂದ್ರ ಸಚಿವರಾಗಿ ಕಾರ್ಯಕ್ಷಮತೆ ತೋರಿಸದ ಶಾರನ್ನು ಸಿಂಗಂ ಎನ್ನಲು ಕಾರಣ ಕೊಡಬೇಕಿತ್ತಲ್ಲವೇ? ಅದಕ್ಕಾಗಿ ಸುವರ್ಣ ಗುಜರಾತಿನಲ್ಲಿ ಶಾ ಗೃಹ ಸಚಿವರಾಗಿದ್ದಾಗ ಭಯೋತ್ಪಾದಕರನ್ನು ಮಟ್ಟ ಹಾಕಿದ್ದರು ಎಂದು ರೀಲು ಬಿಟ್ಟಿತು. ಎನ್‍ಕೌಂಟರ್ ಪ್ರಕರಣಗಳಲ್ಲಿ ಶಾ ಪಾತ್ರ, ಅದಕ್ಕಾಗಿ ಆತ ಜೈಲುವಾಸ ಅನುಭವಿಸಿದ್ದು, ಗುಜರಾತಿನಿಂದ ಬಹಿಷ್ಕೃತವಾಗಿದ್ದು- ಇದೆಲ್ಲವನ್ನೂ ಬೇಕೆಂದೇ ಮುಚ್ಚಿಡಲಾಗಿತ್ತು. ಇದೆಲ್ಲವನ್ನೂ ಹೇಳಿ ಶಾ ನ್ಯಾಯಾಲಯದಿಂದ ಕ್ಲೀನ್‍ಚಿಟ್ ಪಡೆದಿದ್ದಾರೆ ಎನ್ನಲೂ ಬಹುದಿತ್ತು. ಆದರೆ ಎಲ್ಲೂ ಎನ್‍ಕೌಂಟರ್ ಶಬ್ದವೇ ಇಲ್ಲ!
    ಈ ಕಾರ್ಯಕ್ರಮಗಳಿಗೆ ಸಮಾಂತರವಾಗಿ ನ್ಯೂಸ್ 18 ‘ನಮೋ ಭಾರತ’ ಎಂಬ ವಿಶೇಷ ಕಾರ್ಯಕ್ರಮವನ್ನು ಎರಡು ದಿನ ಪ್ರದರ್ಶಿಸಿತು. ಮೋದಿಯೊಬ್ಬ ದಕ್ಷ ಆಡಳಿತಗಾರ ಎಂದೆಲ್ಲ ಹೊಗಳಲಾಗಿತು. ಅದಕ್ಕೆ ಕೊಟ್ಟ ಕಾರಣ: ಪಾಕ್‍ನ ಸೊಲ್ಲಡಗಿಸಿದ ಗಂಡೆದೆಯ ಗಂಡು ಎಂಬ ಅತಾರ್ಕಿಕ ವಿವರಣೆಯಷ್ಟೇ. ಈ ಐದು ವರ್ಷಗಳಲ್ಲಿ ಮೋದಿ ಮಾಡಿದ್ದೇನು ಎಂಬುದರ ಪ್ರಸ್ತಾಪವೇ ಇಲ್ಲ!
    ಪಬ್ಲಿಕ್‍ನವರಂತೂ ಮೋದಿಗೆ ರಾಜಯೋಗ ಲಭಿಸಿದೆ ಎಂದೆಲ್ಲ ಅರೆಬರೆ ಆಧ್ಯಾತ್ಮದ, ಒಂದಿಷ್ಟು ಪುರಾಣದ ಕಾರ್ಯಕ್ರಮ ಮಾಡಿದರು. ದೇವರೇ ಮೋದಿಯನ್ನು ಈ ಹುದ್ದೆಗೆ ತಂದಿದ್ದಾನೆ ಎಂದು ನಂಬಿಸುವ ಹುಚ್ಚಾಟಕ್ಕೆ ಪಬ್ಲಿಕ್ ಇಳಿದಿತ್ತು. ದೇಶ ಕಟ್ಟಲೆಂದೇ ಮೋದಿ ಮನೆ ಬಿಟ್ಟರು, ಸಾಧುವೊಬ್ಬ ಮೋದಿಗೆ ಭವಿಷ್ಯವನ್ನು ತೋರಿಸಿದ ಎಂತೆಲ್ಲ ಪುಟ್ಟಾಪೂರಾ ಸುಳ್ಳುಗಳನ್ನು ಯಾವ ನಾಚಿಕೆ ಇಲ್ಲದೆ ತೇಲಿ ಬಿಡಲಾಯಿತು.
ಬಿಟಿವಿಯ ರಾಧಕ್ಕನಂತೂ ಮೋದಿಯ ಮೂರು-ನೂರು’ ಯೋಜನೆಯನ್ನು ವೀಕ್ಷಕರ ಮುಖಕ್ಕೆ ರಾಚುವಂತೆ ಒಗೆದರು. ನೂರು ಅಧಿಕಾರಿಗಳ ನೆರವಿನಿಂದ ಮೂರು ತಿಂಗಳಲ್ಲಿ ದೇಶದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ಸೂತ್ರದ ಬಗ್ಗೆ ಈ ತಾಯಿ ಕತೆ ಕಟ್ಟುತ್ತಿದ್ದಳು. ದಿಗ್ವಿಜಯದ ಕತೆ ಹೇಳುವುದೇ ವೇಸ್ಟು. ಅದು ಸದಾ ನಮೋ ಕನ್ನಡ ಟಿವಿಯೇ ಅಲ್ಲವೇ? ಬಿಟಿವಿ, ಕನ್ನಡ 5 ಇಂತಹ ಗುಣಗಾನ ಮಾಡುತ್ತ ಹೋದವು. ಈ ಸಂತೆಯಲ್ಲಿ ಟಿವಿ9 ಸುಮ್ಮನಿರಲಾದೀತೆ? ಇಂದಿರಾಗಾಂಧಿ ಮೇಲಾ, ಮೋದಿ ಮೇಲಾ ಎಂಬ ಕಾರ್ಯಕ್ರಮವನ್ನು ಅದು ಅಪ್ಪಳಿಸಿತು.
    13 ಸೈನಿಕರ ದುರ್ಮರಣ, ದೇಶಾದ್ಯಂತ ಅದರಲ್ಲೂ ಉತ್ತರಪ್ರದೇಶದಲ್ಲಿ ದಲಿತರು, ಮುಸ್ಲಿಮರು ಮತ್ತು ಪತ್ರಕರ್ತರ ಮೇಲೆ ನಡೆಯುತ್ತಿರುವ ವ್ಯವಸ್ಥಿತ ದೌರ್ಜನ್ಯಗಳ ಬಗ್ಗೆ ಒಂದೂ ಚರ್ಚೆಯೂ ಇಲ್ಲ, ಆ ಸುದ್ದಿಗಳೂ ಇಲ್ಲ! ಐಎಂಎ ಎಂಬ ಚೋರ್ ಕಂಪನಿಯ ಹಗರಣಕ್ಕೆ ‘ಸಾಬರ ಗದ್ದಲ’ ಎಂಬ ಟೈಟಲ್ಲನ್ನೂ ನೀಡುವ ನೀಚ ಹಂತಕ್ಕೂ ಈ ಚಾನೆಲ್‍ಗಳು ಇಳಿದಿವೆ. ದಲಿತ ಯುವನ ಮೇಲೆ ನಡೆದ ಹಲ್ಲೆಗೆ ಮಾನಸಿಕ ಅಸ್ತವ್ಯಸ್ತನ ಮೇಲೆ ಹಲ್ಲೆ’ ಎಂದು ರಿಪೋರ್ಟು ಮಾಡುವ ಮೂಲಕ ವಿಜಯವಾಣಿ ತನ್ನ ನೀಚ ಮನಸ್ಥಿತಿಯನ್ನು ಎತ್ತಿ ತೋರಿಸಿಕೊಂಡಿದೆ.
    ಚುನಾವಣೆ ಲಾಭಕ್ಕಾಗಿ ಸೈನಿಕರ ಸಾವನ್ನೂ ಬಳಸಿಕೊಂಡ ಈ ದುಷ್ಟಕೂಟ ಈಗ ಕುಸಿದ ಅರ್ಥ ವ್ಯವಸ್ಥೆಯ ಕುರಿತಾಗಲಿ, ದೌರ್ಜನ್ಯಗಳ ಬಗ್ಗೆಯಾಗಲೀ ಸುದ್ದಿಯೇ ಆಗದಂತೆ ನೋಡಿಕೊಳ್ಳುತ್ತಿದೆ. ಇದಕ್ಕೆ ಗೋಣು ಆಡಿಸುವ ಭಕ್ತರೂ ಇನ್ನೂ ಮೋದಿಯ ‘ದೇಶಭಕ್ತಿಯ’ ಭಾಷಣಗಳ ಹ್ಯಾಂಗ್ ಓವರ್‍ನಲ್ಲೇ ಇದ್ದಾರೆ!
(ಮೇಲಿನ ಬರಹದಲ್ಲಿನ ಅಭಿಪ್ರಾಯಗಳು ಲೇಖಕರದ್ದಾಗಿರುತ್ತವೆ. ಅತಿಥಿ ಲೇಖಕರ ಅನಿಸಿಕೆಗಳು ನಾನುಗೌರಿ.ಕಾಂ ವೆಬ್‌ಪತ್ರಿಕೆಯ ಸಂಪಾದಕೀಯ ತಂಡದ ಅಭಿಪ್ರಾಯಗಳೇ ಆಗಿರಬೇಕೆಂದೇನಿಲ್ಲ.)

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

1 COMMENT

  1. Alwas congress done this calculation But now miltry had got indipendance after congress rule Now every thing always right things on going on but Some one have not come out by cogress slavery

LEAVE A REPLY

Please enter your comment!
Please enter your name here