ತ್ರಿಭಾಷಾ ಶಿರೋಭಾರ ಇನ್ನೆಷ್ಟು ದಿನ? – ಕಾಂಚ ಐಲಯ್ಯ

ಅನುವಾದ: | ಅನಿಲ್ ಕುಮಾರ್ ಚಿಕ್ಕದಾಳವಟ್ಟ |

ಕೇಂದ್ರದ ಬಿಜೆಪಿ ಸರ್ಕಾರ ಪ್ರತಿಪಾದಿಸಿದ ಹೊಸ ಶಿಕ್ಷಣ ನೀತಿ ಭಾರತ ದೇಶದ ಭಾಷಾ ವಿಧಾನದ ಬಗ್ಗೆ ಪ್ರಕಟಿಸಿದೆ. ಮೊಟ್ಟ ಮೊದಲನೆಯದಾಗಿ ಈ ನೀತಿ ದೇಶವೆಲ್ಲವನ್ನು ಹಿಂದಿ ಮಾತನಾಡುವ ದೇಶವಾಗಿ ಬದಲಾಯಿಸಬೇಕೆಂದು ಆಶಿಸಿದೆ. ಆದರೆ ದಕ್ಷಿಣ ಭಾರತದಲ್ಲಿ ತೀವ್ರವಾದ ಪ್ರತಿಭಟನೆಗಳ ನಂತರ ತಮಗೆ ಹಿಂದಿ ಬೇಡ ಎನ್ನುವ ರಾಜ್ಯಗಳ ಮೇಲೆ ಹಿಂದಿಯನ್ನು ಹೇರದ ಹಾಗೆ ಭಾಷಾ ನೀತಿ ತಿದ್ದಲ್ಪಟ್ಟಿತು. ಏನಾದರೂ ದೇಶದಲ್ಲಿರುವ ಮಕ್ಕಳೆಲ್ಲರೂ ಮೂರು ಭಾಷೆಗಳನ್ನು ಕಲಿಯಬೇಕಾಗುತ್ತದೆ. ಇಂಗ್ಲಿಷ್, ತಾವು ಹುಟ್ಟಿದ ರಾಜ್ಯದ ಭಾಷೆ, ಇತರೆ ರಾಜ್ಯಗಳಿಗೆ ಸೇರಿದ ಮತ್ತೊಂದು ಭಾಷೆ.

ಹಿಂದಿ ಮಾತನಾಡುವ ರಾಜ್ಯಗಳಿಗಿಂತ ಹೆಚ್ಚಾಗಿ ಹಿಂದಿ ಮಾತನಾಡದ ರಾಜ್ಯಗಳೇ ಹೆಚ್ಚಾಗಿರುವುದರಿಂದ ಮೊಟ್ಟಮೊದಲನೆಯ ಬಾರಿಗೆ ಹಿಂದಿಯ ಜೊತೆಗೆ, ಹಿಂದಿಯೇತರ ಭಾಷೆಯನ್ನು ಕೂಡ ಮಕ್ಕಳು ಕಲಿಯಬೇಕಾಗುತ್ತದೆ ಎಂದು ಈ ನೀತಿ ಸ್ಪಷ್ಟಪಡಿಸುತ್ತದೆ. ಈ ನೀತಿಯ ಭಾಗವಾಗಿ ದಕ್ಷಿಣ ಭಾರತ ರಾಜ್ಯವಾದ ತಮಿಳುನಾಡು ಕೂಡ ಇಂಗ್ಲೀಷ್, ತಮಿಳಿನ ಜೊತೆಗೆ ಮತ್ತೊಂದು ರಾಜ್ಯಕ್ಕೆ ಸೇರಿದ ಭಾಷೆಯನ್ನು (ದಕ್ಷಿಣ ಭಾರತಕ್ಕೆ ಸೇರಿದ ಮಲಯಾಳಂ, ಕನ್ನಡ ಇಲ್ಲ ತೆಲುಗು ಅಥವಾ ಹಿಂದಿಯನ್ನೂ ಕೂಡ) ಕಲಿಯಬೇಕಾಗುತ್ತದೆ.

ದಕ್ಷಿಣ ಭಾರತದಿಂದ ತಮ್ಮ ಸರ್ಕಾರಕ್ಕೆ ತೆಗೆದುಕೊಂಡ ಸ್ವಂತ ಪಕ್ಷದ ಮಂತ್ರಿಗಳು ಕೂಡ ಹಿಂದಿ ಅಷ್ಟೇನು ಮಾತನಾಡದ ಕಾರಣ ಬಿಜೆಪಿ, ಆರ್.ಎಸ್.ಎಸ್ ನಾಯಕರು ಗೊಂದಲಕ್ಕೆ ಒಳಗಾಗಿದ್ದಾರೆ. 2019ರ ಸಾರ್ವತ್ರಿಕ ಚುನಾವಣೆಯ ನಂತರ ಆಯ್ಕೆ ಆದ ಮಂತ್ರಿಗಳು ಪ್ರಮಾಣವಚನ ಸ್ವೀಕಾರ ಮಾಡಿದ ಸಂದರ್ಭವನ್ನು ಒಮ್ಮೆ ಪರಿಶೀಲಿಸಿ. ದಕ್ಷಿಣಕ್ಕೆ ಸೇರಿದ ನಿರ್ಮಲ ಸೀತಾರಾಮನ್, ಸದಾನಂದ ಗೌಡ ಇಂಗ್ಲಿಷ್‍ನಲ್ಲಿ ಪ್ರಮಾಣ ಸ್ವೀಕರಿಸಿದರು. ಅದಕ್ಕಾಗಿಯೇ ದೇಶದ ಎಲ್ಲಾ ರಾಜ್ಯಗಳ ಮೇಲೆ ಹಿಂದಿ ಹೇರಲು ಯೋಜನೆ ರೂಪಿಸಿದರು. ಆದರೆ ಸ್ವಲ್ಪಕಾಲದವರೆಗೂ ಈ ವಿಧಾನಕ್ಕೆ ಕೆಲವು ಅಡ್ಡಿ, ಆತಂಕಗಳು ತಪ್ಪುವ ಹಾಗಿಲ್ಲ. ಇವರು ಹಿಂದಿಯನ್ನು ಬಲವಂತವಾಗಿ ಹೇರುವ ಕಾರ್ಯಕ್ರಮದಿಂದ ಹಿಂದಕ್ಕೆ ಹೋಗಿದ್ದಾರೆ. ಆದರೂ ಭಾಷ ನೀತಿ ಮಾತ್ರ ತ್ರಿಭಾಷಾ ಸೂತ್ರದಂತೆಯೇ ಮುಂದುವರೆಯುತ್ತದೆ.

ಬಿಜೆಪಿ ಶಿಕ್ಷಣ ನೀತಿ ಮೊಟ್ಟಮೊದಲನೆಯ ಬಾರಿಗೆ ಇಂಗ್ಲೀಷನ್ನು ದೇಶದಲ್ಲಿರುವ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಬೋಧಿಸುವ ಬಗ್ಗೆ ಅಂಗೀಕರಿಸಿದೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಒಂದು ವಿಷಯವಾಗಿ ಮಾತ್ರವೇ ಇರುತ್ತದೆ. ಬೋಧನಾ ಮಾಧ್ಯಮವಾಗಿ ಆ ರಾಜ್ಯಕ್ಕೆ ಸಂಬಂಧಿಸಿದ ಭಾಷೆಯೇ ಮುಂದುವರೆಯಲಿದೆ. ಖಾಸಗಿ ಶಾಲೆಗಳಲ್ಲಿ ಬೋಧನಾ ಭಾಷೆಯಾಗಿ ಇಂಗ್ಲೀಷ್ ಭಾಷೆಯೆ ಇರಲಿದೆ. ಅದೇ ಸಮಯದಲ್ಲಿ ಎರಡು ಭಾರತೀಯ ಭಾಷೆಗಳನ್ನು ಬೋಧಿಸುವ ವಿಧಾನ ಜಾರಿಗೆ ಬರುತ್ತದೆ. ಅಂದರೆ ಪ್ರೈವೆಟ್ ಕಂಪನಿಗಳಿಗೆ ಸೇರಿದ ‘ಖಾನ್ ಮಾರ್ಕೆಟ್ ಗ್ಯಾಂಗ್ಸ್’ ನಿರ್ವಹಿಸುವ ಶಾಲೆಗಳು ಹಿಂದೆ ಇಂಗ್ಲೀಷ್ ಜೊತೆ ಫ್ರೆಂಚ್, ಜರ್ಮನ್, ಇಟಾಲಿಯನ್ ಮೊದಲಾದ ವಿದೇಶಿ ಭಾಷೆಗಳನ್ನು ಒಂದು ವಿಷಯವಾಗಿ ಬೋಧಿಸುವ ಬದಲಿಗೆ ಇನ್ನು ಮುಂದೆ ಎರಡು ಇತರ ಬಾಷೆಗಳನ್ನು ಬೋಧಿಸಬೇಕಾಗಿರುತ್ತದೆ.

ಕಾಂಗ್ರೆಸ್ ಸರ್ಕಾರದ ಕಾಲದ ಶಿಕ್ಷಣ ನೀತಿ ವಿದೇಶಿ ಭಾಷೆಗಳನ್ನು ಕಲಿಯುವ ಅವಕಾಶವನ್ನು ಖಾನ್ ಮಾರ್ಕೆಟ್ ಗ್ಯಾಂಗ್ಸ್ (ಶ್ರೀಮಂತರ ಮಕ್ಕಳು ಓದುವ) ಶಾಲೆಗಳಲ್ಲಿ ಮಾತ್ರವೇ ಕಲ್ಪಿಸಿದೆ. ಆದರೆ ಮಂಡಿ ಬಜಾರ್ (ಮಾಸ್) ಸರ್ಕಾರಿ ಶಾಲೆಗಳಲ್ಲಿ ಹಿಂದಿ ಅಥವಾ ಮತ್ತೊಂದು ಪ್ರಾಂತೀಯ ಭಾಷಾ ಮಾಧ್ಯಮದಲ್ಲಿಯೇ ಬೋಧಿಸಬೇಕಾಗಿರುತ್ತಿತ್ತು. ಸಾರಾಂಶದಲ್ಲಿ ಕೇಂದ್ರ ಸರ್ಕಾರ ಈಗ ಇಂಗ್ಲೀಷನ್ನು ಬೋಧಿಸಲೇಬೇಕಾದ ಅಗತ್ಯವಿರುವ ಪ್ರಧಾನ ಭಾಷೆಯಾಗಿ ಗುರ್ತಿಸಿದೆ. ಆದರೆ ಇಂಗ್ಲೀಷನ್ನು ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಒಳ್ಳೆಯ ಗುಣಮಟ್ಟದಲ್ಲಿ ಸಂಪೂರ್ಣವಾಗಿ ಬೋಧಿಸಲಿದ್ದಾರೆ. ಅದೇ ಖಾಸಗಿ ಶಾಲೆಗಳಲ್ಲಿ ಇಂಗ್ಲೀಷನ್ನು ಭಾಷಾ ವಿಷಯಗಳಲ್ಲಿ ಒಂದು ಭಾಷೆಯಾಗಿ ಬೋಧಿಸಲಿದ್ದಾರೆ. ಆದರೆ ನಿಸ್ಸಂದೇಹವಾಗಿ ಬಿಜೆಪಿ ಒಂದು ಪ್ರಗತಿಶೀಲವಾದ ಕೆಲಸವನ್ನು ಮಾಡಲು ಹೊರಟಿದೆ. ಅದೇನೆಂದರೆ ಭಾರತೀಯ ಶಾಲೆಗಳಲ್ಲಿ ಇಂಗ್ಲೀಷ್ ಬೋಧಿಸುವುದನ್ನು ಅನುಮತಿಸಿರುವುದು. ಶಿಕ್ಷಣವನ್ನು ಹಿಂದಿ ಅಥವಾ ಭಾರತೀಯ ಭಾಷೆಗಳಲ್ಲೇ ಬೋಧಿಸಬೇಕೆಂದು ಹೇಳುತ್ತಿರುವ ಲೋಹಿಯಾ ಸಂವಹನಾತ್ಮಕ ಸೋಷಲಿಸ್ಟ್ ಶಿಕ್ಷಣ ನೀತಿಯ ಜೊತೆ ಹೋಲಿಸಿದರೆ ಬಿಜೆಪಿ ಹೊಸ ಶಿಕ್ಷಣ ನೀತಿ ಸುಧಾರಿತವಾದದ್ದು. ಲೋಹಿಯಾ ಸೋಷಿಯಲಿಸಂ ಪ್ರಕಾರ ಬಡವರ ಮಕ್ಕಳು ಸ್ಥಳೀಯ ಭಾಷಾ ಮಾಧ್ಯಮಕ್ಕೆ ಸೀಮಿತವಾಗಬೇಕು. ಶ್ರೀಮಂತರ ಮಕ್ಕಳಿಗೆ ಕೇಳಿದಷ್ಟು ಹಣ ಇರುತ್ತದೆ. ಹಾಗಾಗಿ ಅವರು ಒಳ್ಳೆಯ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಓದಿಕೊಳ್ಳಬಹುದು.

ಭಾರತೀಯ ಕಮ್ಯೂನಿಸ್ಟರು ತಾವು ಆಡಳಿತ ನಡೆಸಿದ ರಾಜ್ಯಗಳೆಲ್ಲದರಲ್ಲೂ ಉಪ ರಾಷ್ಟ್ರದ ಸೆಂಟಿಮೆಂಟನ್ನು ಮಿಳಿತಗೊಳಿಸಿ ಈ ರೀತಿಯ ಭಾಷಾ ನೀತಿಯನ್ನು ಇನ್ನಷ್ಟು ಜಾರಿಮಾಡುತ್ತಾ ಬಂದರು. ಇದಕ್ಕೆ ಒಳ್ಳೆಯ ಉದಾಹರಣೆ 40 ಲಕ್ಷ ಜನಸಂಖ್ಯೆ ಇರುವ ತ್ರಿಪುರ ರಾಜ್ಯ. ಧಾರಾಳವಾಗಿ ಇಂಗ್ಲೀಷ್ ಮಾತನಾಡುವ ಕಾಮ್ರೇಡ್ ಮಾಣಿಕ್ ಸರ್ಕಾರ್ ಭಾರತ ದೇಶದಲ್ಲೇ ಅಲ್ಲದೇ, ಪ್ರಪಂಚದಾದ್ಯಂತ ಉದ್ಯೋಗಗಳನ್ನು ಕೈವಶ ಮಾಡಿಕೊಳ್ಳಲಾಗುವಂತಹ ಶ್ರೀಮಂತರಿಗೆ ಖಾಸಗಿ ಆಂಗ್ಲಮಾಧ್ಯಮ ಶಾಲೆಗಳಲ್ಲಿ ಓದುವ ಅವಕಾಶವನ್ನು ಕಲ್ಪಿಸಿದರು. ಅದೇ ಸಮಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ತ್ರಿಪುರಿ ಮಾಧ್ಯಮದಲ್ಲಿ ಬೋಧನೆ ನಡೆಯುವ ರೀತಿ ನೋಡಿಕೊಂಡರು. 30 ವರ್ಷಗಳ ಆಡಳಿತದ ಉದ್ದಕ್ಕೂ ಇದೇ ರೀತಿ ನಡೆಯುತ್ತಾ ಬಂದಿದೆ.

ಈ ರೀತಿಯ ನೀತಿಯಿಂದ ತ್ರಿಪುರದಲ್ಲಿ ಗಿರಿಜನರು ಯಾರೂ ಒಳ್ಳೆಯ ಇಂಗ್ಲೀಷನ್ನು ಮಾತನಾಡದೇ ಮಾಕ್ರ್ಸ್, ಲೆನಿನ್ ಬಗ್ಗೆ ಮಾತನಾಡದೆ ಹೋದರು. ಇದರಿಂದಲೇ 34%ರಷ್ಟು ಗಿರಿಜನ ಜನಸಂಖ್ಯೆ ಇರುವ ತ್ರಿಪುರದಲ್ಲಿ ಒಬ್ಬ ಗಿರಿಜನ ಕೂಡ ಸಿ.ಪಿ.ಎಂ ಪಾಲಿಟ್ ಬ್ಯೂರೋ ಮುಖ್ಯಸ್ಥರಾಗದೇ ಹೋದರು. ಹಾಗೆಯೇ ಪಶ್ಚಿಮ ಬಂಗಾಳದಲ್ಲಿ ಕೂಡ ಶ್ರಮಿಕ ವರ್ಗದ ಜನರನ್ನು 34 ವರ್ಷಗಳವರೆಗೂ ಇಂಗ್ಲೀಷ್ ಶಿಕ್ಷಣದಿಂದ ದೂರವಿರಿಸುವ ರೀತಿಯ ಶಿಕ್ಷಣ ನೀತಿಯನ್ನು ಮುಂದುವರೆಸಲಾಗಿದೆ. ಈಗ ಬಿಜೆಪಿಗೆ ವಿರುದ್ಧವಾಗಿ ಮಾತನಾಡಲು ಇವರಿಗೆ ಏನು ಉಳಿದಿದೆಯೋ ಮತ್ತೆ? ಮತ್ತೊಂದು ಕಡೆ ಶ್ರೀಮಂತರಾದ ಭದ್ರಲೋಕದ ಕಾಮ್ರೇಡ್‍ಗಳು ಖಾಸಗಿ ಇಂಗ್ಲೀಷ್ ಮಾಧ್ಯಮದ ಶಾಲೆಗಳಲ್ಲಿ ಓದಿಕೊಂಡರು. ಇವರ ಹತ್ತಿರ ಖಾಸಗಿ ಶಾಲೆಯ ಶಿಕ್ಷಣಕ್ಕೆ ಕೊಡುವಷ್ಟು ದುಡ್ಡಿದೆ ಮತ್ತೆ.

ಅದೇ ಸಮಯದಲ್ಲಿ ಬೆಂಗಾಲಿ ಮಾಧ್ಯಮದ ಜೊತೆ ಒಂದು ಇಂಗ್ಲಿಷ್ ವಿಷಯವನ್ನು ಕೂಡಿದ ಭಾಷಾ ನೀತಿಯನ್ನು ಹೇರಿದ್ದರಿಂದ ಪಶ್ಚಿಮ ಬಂಗಾಳದ ಗ್ರಾಮೀಣ ಭಾಗವೆಲ್ಲವನ್ನೂ ಹಿಂದುಳಿದಿರುವಿಕೆಯಲ್ಲಿ ಮುಳುಗೇಳಿಸಿದರು. ಈ ರಾಜ್ಯದ ಜನಸಂಖ್ಯೆಯಲ್ಲಿಯೂ 65%ರಷ್ಟು ಜನ ಎಸ್ಸಿ, ಎಸ್ಟಿ, ಓ.ಬಿ.ಸಿಗೆ ಸೇರಿದವರೇ ಇದ್ದಾರೆ. ಇವರಲ್ಲಿ ಯಾರಿಗೂ ಇಂಗ್ಲೀಷಲ್ಲಿ ಮಾತನಾಡುವ ಪ್ರತಿಭೆ ಇಲ್ಲವಾದ್ದರಿಂದ ಇವರಿಂದ ಒಬ್ಬ ಕಮ್ಯೂನಿಸ್ಟ್ ನಾಯಕ ಕೂಡ ಸಿ.ಪಿ.ಎಂ ಪಾಲಿಟ್‍ಬ್ಯೂರೋದೊಳಗೆ ಪ್ರವೇಶಿಸದೆ ಹೋದರು. ಸೈಂಟ್ ಸ್ಟೀಫನ್ ಕಾಲೇಜಿನಲ್ಲಿ ಓದಿಕೊಂಡು, ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾದ ರಾಹುಲ್ ಕೂಡ ಖಾಸಗಿ ಶಾಲೆಗಳಲ್ಲಿ ಏಕೀಕೃತ ಬೋಧನೆಯ ಭಾಷೆಯನ್ನು ಪರಿಚಯಿಸುತ್ತೇವೆಂದು ಆಶ್ವಾಸನೆ ನೀಡದೆ ಹೋದ. ಖಾಸಗಿ ವಲಯದಲ್ಲಿ ಆಂಗ್ಲ ಮಾಧ್ಯಮ ಮಾದರಿಯನ್ನು, ಸರ್ಕಾರಿ ರಂಗದಲ್ಲಿ ಪ್ರಾದೇಶಿಕ ಭಾಷಾ ಮಾಧ್ಯಮವನ್ನು ಪ್ರವೇಶಿಸುವುದು ನೆಹರು ಆಡಳಿತ ನೀತಿಯ ಭಾಗವೇ ಅಲ್ಲವೇ.

ನಮ್ಮ ದೇಶದಲ್ಲಿ ಘನತೆವೆತ್ತ ಜಾತ್ಯತೀತ, ಉದಾರವಾದಿ ಕಮ್ಯೂನಿಸ್ಟ್ ಮೇಧಾವಿಗಳು ಸಂಪೂರ್ಣವಾಗಿ ಈ ದ್ವಿಭಾಷಾ ನೀತಿಯನ್ನು ಅನುಮೋದಿಸಿದ್ದಾರೆಂಬುದನ್ನು ನಾವು ಮರೆಯಕೂಡದು. ನರೇಂದ್ರ ಮೋದಿ ಅಭಿಪ್ರಾಯದಲ್ಲಿ ಖಾನ್ ಮಾರ್ಕೆಟ್, ಮಂಡಿ ಬಜಾರ್ ಶಿಕ್ಷಣ ನೀತಿಗಳು ಎರಡೂ ಪ್ರತ್ಯೇಕವಾದವುಗಳು. ಬಡಾ ಬ್ಯೂಸಿನೆಸ್ ಸ್ಕೂಲ್‍ನಿಂದ ಇಟಲಿ, ಪ್ರೆಂಚ್ ಭಾಷೆಗಳನ್ನು ತೊಲಗಿಸಿ ಮತ್ತೊಂದು ಪ್ರಾದೇಶಿಕ ಬಾಷೆಯಲ್ಲಿ ಬೋಧಿಸಬೇಕೆಂದು ಹೇಳುವ ಮೂಲಕ ಈಗ ಬಿಜೆಪಿಯೂ ಸಹ ಅದೇ ನೀತಿಯನ್ನ ಸ್ವಲ್ಪ ಹೆಚ್ಚಾಗಿಯೋ ಅಥವಾ ಸ್ವಲ್ಪ ಕಮ್ಮಿಯಾಗಿಯೋ ಸ್ವೀಕರಿಸಿಬಿಟ್ಟಿದೆ. ಇದಕ್ಕೆ ಮುಂಚೆ ನೆಹ್ರುವಿಯನ್ ಶಿಕ್ಷಣ ನೀತಿಯನ್ನು ನಾವು ನೋಡಿದ್ದೇವೆ. ಈ ನೀತಿಯ ಪ್ರಕಾರ ಖಾನ್ ಮಾರ್ಕೆಟ್ ಶ್ರೀಮಂತರು ಆಂಗ್ಲ ಮಾಧ್ಯಮದಲ್ಲಿ, ಮಂಡಿ ಬಜಾರ್ ಸಾಧಾರಣ ಪ್ರಜೆಗಳು ಹಿಂದಿ ಮಾಧ್ಯಮದಲ್ಲಿ ಓದಿಕೊಳ್ಳುತ್ತಿದ್ದರು. ಈಗ ನಮಗೆ ಸ್ಮೃತಿ ಇರಾನಿ ಶಿಕ್ಷಣ ನೀತಿ ಇದೆ. ಇದರ ಪ್ರಕಾರವು ಸಹ ಸ್ಮೃತಿ ಮಕ್ಕಳು ಆಕೆಯ ಪ್ರತಿಸ್ಪರ್ಧಿ ಪ್ರಿಯಾಂಕ ಗಾಂಧಿ ಮಕ್ಕಳು ‘ಖಾನ್ ಮಾರ್ಕೆಟ್’ ಕಾಲೇಜ್ ಆದ ಸೈಂಟ್ ಸ್ಟಿಫನ್ಸ್‍ನಲ್ಲಿ ಓದಿಕೊಳ್ಳುತ್ತಾರೆ. ಇನ್ನು ನೋಡಿದರೆ ಮಂಡಿ ಬಜಾರ್ ಮಾಸ್ ಮಕ್ಕಳು ಸರ್ಕಾರಿ ಹಿಂದಿ ಮಾಧ್ಯಮದ ಕಾಲೇಜುಗಳಲ್ಲಿ ಓದಿಕೊಂಡು ಚೌಕಿದಾರ್, ಚಾಯ್‍ವಾಲ್‍ಗಳಾಗಿ ಆವತರಿಸುತ್ತಿದ್ದಾರೆ.

ಈಗ ನಮಗೆ ಎದುರಾಗುತ್ತಿರುವ ಪ್ರಾಥಮಿಕ ಪ್ರಶ್ನೆ ಏನೆಂದರೆ, ಇಂಗ್ಲೀಷ್ ಭಾರತ ದೇಶದೆಲ್ಲೆಡೆ ಜಾರಿ ಇರುವಂತಹ ಭಾಷೆಯಾಗಿರುವಾಗ ಅದನ್ನು ಭಾರತ ರಾಷ್ಟ್ರೀಯ ಭಾಷೆಯಾಗಿ ಗುರ್ತಿಸಿ ಸರ್ಕಾರಿ ಶಾಲೆಗಳಲ್ಲಿ ಮತ್ತಷ್ಟು ವಿಷಯಗಳಲ್ಲಿ ಇಂಗ್ಲಿಷ್ ಬೋಧನೆಯನ್ನು ಏಕೆ ವಿಸ್ತರಿಸಬಾರದು ಎಂಬುವುದಾಗಿದೆ. ಇಂಗ್ಲಿಷ್ ಜೊತೆ ಹೋಲಿಸಿದರೆ ನಮ್ಮ ಪ್ರಾದೇಶಿಕ ಭಾಷೆಗಳು ಹೊಲದಲ್ಲಿ ಕೆಲಸ ಮಾಡುವ ಕೂಲಿಗಳ ಮಾತೃಭಾಷೆಯಾಗಿ ಮಾತ್ರ ಇರುತ್ತಿವೆ. ಈಗ ಸಂಘಪರಿವಾರಕ್ಕೆ ಸೇರಿದವರು ಅತ್ಯಧಿಕ ಸಂಖ್ಯೆಯಲ್ಲಿ ವಿಮಾನ ಪ್ರಯಾಣಿಕರಾಗಿ ಇರುತ್ತಿದ್ದಾರೆ. ಇವರ ಮಕ್ಕಳೆಲ್ಲ ಆಂಗ್ಲಮಾಧ್ಯಮದ ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದಾರೆ. ತಳಮಟ್ಟದಲ್ಲಿ ಇಂತಹ ಪರಿಸ್ಥಿತಿ ಇರುತ್ತಿರುವಾಗ. ನಾವು ಧ್ವಿಭಾಷಾ ನೀತಿಯನ್ನು (ಇಂಗ್ಲೀಷ್ ಒಂದು ಪ್ರಾದೇಶಿಕ ಭಾಷೆ) ಏಕೆ ಮಾಡಕೂಡದು?. ಇಂಗ್ಲೀಷನ್ನು ಗಿರಿಜನ ಪ್ರದೇಶಗಳಲ್ಲಿನ ಮಕ್ಕಳಿಗೂ ಕೂಡ ವಿಸ್ತೃತವಾದ ಹಂತಗಳಲ್ಲಿ ಯಾಕೆ ಬೋಧಿಸಬಾರದು?.

ಇದು ಸಾಕಾರವಾದಾಗ ಭಾರತ ದೇಶವ್ಯಾಪಿಯಾಗಿ ನಮ್ಮ ಪ್ರಜೆಗಳು ಭವಿಷ್ಯತ್ತಿನಲ್ಲಿ ಪರಸ್ಪರವಾಗಿ ಇಂಗ್ಲಿಷಿನಲ್ಲಿ ಮಾತಾಡಿಕೊಳ್ಳಬಲ್ಲರು. ತಮ್ಮ ರಾಜ್ಯ ಪರಿಧಿಯಲ್ಲಿ ಇವರು ಅತ್ತ ಇಂಗ್ಲಿಷಿನಲ್ಲಿ, ಇತ್ತ ಪ್ರಾದೇಶಿಕ ಭಾಷೆಯಲ್ಲಿ ಮಾತನಾಡಿಕೊಳ್ಳಬಹುದು. ತಮಿಳುನಾಡು ಮಾಡುತ್ತಿರುವುದು ಕೂಡ ಇದನ್ನೇ. ಆಂಧ್ರಪ್ರದೇಶ್ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಈಗಾಗಲೇ ಗ್ರಾಮೀಣ ಜನರಿಗೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳನ್ನು ಆಂಗ್ಲಮಾಧ್ಯಮಕ್ಕೆ ಬದಲಾಯಿಸುತ್ತೇನೆಂದು ವಾಗ್ದಾನ ಮಾಡಿದ್ದಾರೆ. ಒಂದು ವಿಷಯವನ್ನು ತಪ್ಪದೇ ತೆಲುಗಿನಲ್ಲಿ ಬೋಧಿಸುವ ಹಾಗೆ ಮಾಡುತ್ತೇನೆಂದು ಅವರು ಒತ್ತಿ ಹೇಳಿದ್ದಾರೆ. ಈ ಆಶ್ವಾಸನೆ ನೆರವೇರಿದ ದಿನ ಆಂಧ್ರಪ್ರದೇಶ ದೇಶಕ್ಕೆ ಮಾದರಿ ರಾಜ್ಯವಾಗಿ ಬದಲಾಗುತ್ತದೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here