Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆಕಾಲು ದಾರಿಯ ಚಿತ್ರಗಳು: ರಹಮತ್‍ರವರ ಹಾಸುಹೊಕ್ಕು ಅಂಕಣದಲ್ಲಿ

ಕಾಲು ದಾರಿಯ ಚಿತ್ರಗಳು: ರಹಮತ್‍ರವರ ಹಾಸುಹೊಕ್ಕು ಅಂಕಣದಲ್ಲಿ

ಈ ಕೃತಿಯಲ್ಲಿರುವ ಬಹುತೇಕ ಘಟನೆಗಳು ನಡೆಯುವುದು ರಾತ್ರಿಯ ಹೊತ್ತಲ್ಲಿ. ಈ ಕಾರಣಕ್ಕೆ ಇದು ರಾತ್ರಿ ಕರ್ನಾಟಕದ ಚಿತ್ರಗಳನ್ನು ಒಳಗೊಂಡಿದೆ. ಇಲ್ಲಿ ತೆಲುಗು ಕನ್ನಡ ಸಂಸ್ಕೃತ ಇಂಗ್ಲೀಶ್ ಭಾಷೆಗಳಿವೆ.

- Advertisement -
- Advertisement -

| ರಹಮತ್ ತರೀಕೆರೆ |

ಕೃಷ್ಣಮೂರ್ತಿ ಹನೂರರು ಈಚೆಗೆ ತಮ್ಮ ಆತ್ಮಕಥೆಯನ್ನು ಪ್ರಕಟಿಸಿದರು. ಅದರ ಹೆಸರು ಕಾಲುದಾರಿಯ ಕಥನ. ಆತ್ಮಕಥೆಗಳು ಸಹಜವಾಗಿಯೇ ವ್ಯಕ್ತಿ, ಕುಟುಂಬ ಅಥವಾ ಮನೆತನ ಕೇಂದ್ರಿತವಾಗಿರುತ್ತವೆ. ಆದರೆ ಕೆಲವರ ಆತ್ಮಕಥೆಗಳು ಈ ಸೀಮಿತ ಪರಿಧಿಯನ್ನು ದಾಟಿಕೊಂಡು ನಾಡಿನ ಇಲ್ಲವೇ ಸಮುದಾಯದ ಕಥನವೂ ಆಗುತ್ತವೆ. ಇದನ್ನು ಸಾಮಾನ್ಯವಾಗಿ ಜನರೊಟ್ಟಿಗೆ ಗಾಢ ಸಂಬಂಧವಿಟ್ಟುಕೊಂಡು ಚಳುವಳಿಗಾರರ ರಾಜಕಾರಣಿಗಳ ಹಾಗೂ ವಿದ್ವಾಂಸರ ಆತ್ಮಕಥೆಗಳಲ್ಲಿ ನೋಡಬಹುದು. ಹನೂರರದು ಇಂಥ ಕಥನ. ಇದರಲ್ಲಿ ಎ. ಕೆ. ರಾಮಾನುಜನ್ ಅವರಂತಹ ಶಿಕಾಗೊ ವಿಶ್ವವಿದ್ಯಾಲಯದ ಪ್ರೊಫೆಸರಿಂದ ಹಿಡಿದು, ಚಳ್ಳಕೆರೆ ಸೀಮೆಯ ಸಿರಿಯಜ್ಜಿ, ಬುಡನ್‍ಸಾಬ್, ಬೆಳಗೆರೆ ಕೃಷ್ಣಶಾಸ್ತ್ರೀ ದಾನಮ್ಮ, ಹನುಮಜ್ಜಿ, ನರಸಪ್ಪ, ಬಿಸನೀರ ಬಸಣ್ಣ, ಕ್ಯಾತನಹಳ್ಳಿ ಗಿರಿಯಪ್ಪ, ಚಂದ್ರಶೇಖರ ಶಾಸ್ತ್ರಿ-ಹೀಗೆ ಹಲವು ವ್ಯಕ್ತಿಗಳ ಕಥೆಗಳಿವೆ. ಹೀಗಾಗಿ ಈ ಕೃತಿ ಒಂದು ಚಿತ್ರಸಂಪುಟದಂತೆ ಮಾನವೀಯ ಸಮಾಜಶಾಸ್ತ್ರದ ಕೃತಿಯಂತೆ ತೋರುವುದು.

ಇಲ್ಲಿರುವ ಕೆಲವು ಜನರ ವಿಶೇಷವೆಂದರೆ, ತಮ್ಮ ಜಾತಿ ಧರ್ಮಗಳ ಕಟ್ಟುಗಳನ್ನು ಮೀರಿ ಬದುಕುವುದು. ಇಲ್ಲಿರುವ ಕೆಲವು ಬ್ರಾಹ್ಮಣರು ಯಾರದ್ದೋ ಶವವನ್ನು ಎತ್ತುವುದು, ನಾಯಿ ಸಾಕುವುದು, ಶೃಂಗೇರಿ ಮಠಕ್ಕೆಂದು ಹೋಗಿ ಸಾಬರ ಮನೆಯಲ್ಲಿ ಉಳಿಯುವುದು ಮಾಡುತ್ತಾರೆ. ಇಲ್ಲಿನ ಮುಸ್ಲಿಮರು ತತ್ವಪದ ಹಾಡುತ್ತಾರೆ. ಮಹಾಭಾರತ ಓದುತ್ತಾರೆ. ಈ `ಕುಲಗೆಟ್ಟ’ ಜನರು ಭಾರತೀಯ ಸಮಾಜದಲ್ಲಿ ಇರುವ ಸಹಜವಾದ ಜಾತ್ಯತೀತ ಮೌಲ್ಯಗಳ ಸಾಕಾರರೂಪಿಗಳು. ಆಯಾ ಧರ್ಮ ಮತ್ತು ಜಾತಿಯ ಸಂಪ್ರದಾಯ ಬಯಸುವ ರೀತಿಯಲ್ಲಿ ಇವರು ಬದುಕುವುದಿಲ್ಲ. ಇದು ಇನ್ನೂ ಮಲಿನಗೊಳ್ಳದೆ ಉಳಿದಿರುವ ಭಾರತದ ಜನಬದುಕಿನ ಭಾಗಗಳನ್ನು ಕಾಣಿಸುತ್ತದೆ. ಇದನ್ನು ಜನಪದ ಸೆಕ್ಯುಲರಿಸಂ ಎಂದು ಕರೆಯಬಹುದು. ಇಲ್ಲಿ ಜನಪದ ಫೆಮಿನಿಸಂ ಜನಪದ ಕಾವ್ಯಮೀಮಾಂಸೆ ಜನಪದ ಜೀವನ ದರ್ಶನಗಳೂ ಕೂಡ ಇವೆ.

ಇಡೀ ಕೃತಿಯಲ್ಲಿ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಹೋರಾಟ ಮಾಡುವ ವ್ಯಕ್ತಿಗಳ ಕಥನವಾಗಿದೆ. ಅದರಲ್ಲೂ ಇಲ್ಲಿ ಬರುವ ಮಹಿಳೆಯರು ಕೇವಲ ಕಲಾವಿದರು ಮಾತ್ರವಲ್ಲ ಧೀಮಂತರು. ಹನುಮಜ್ಜಿ ಸಿರಿಯಜ್ಜಿ ಮುಂತಾದ ಕಲಾವಿದರು ತಮ್ಮ ಗಂಡಂದಿರ ಜತೆ ಮಾಡುವ ಬಾಳುವೆ ಹೋರಾಟವು ಈ ಕೃತಿಯನ್ನು ಸ್ತ್ರೀಚೈತನ್ಯದ ಶೋಧವಾಗಿಸಿದೆ. ಒಬ್ಬ ವಿಧವೆಗೆ ಯಾರ ಜತೆಗೊ ದೈಹಿಕ ಸಂಬಂಧವಿದೆಯೆಂದು ಬರುವ ದೂರಿನ ಪ್ರಕರಣ ಗಮನಿಸಬೇಕು. ಬುಡಕಟ್ಟು ನ್ಯಾಯದ ಕಟ್ಟೆಮನೆಯವರು ವಿಚಾರಣೆಗೆ ಮುಂದಾಗುತ್ತಾರೆ. ಆಕೆ ತನ್ನ ಮೇಲಿನ ಆರೋಪವನ್ನು ಸಾಬೀತು ಪಡಿಸುವಂತೆ ಸವಾಲು ಹಾಕುವಳು. ಆರೋಪ ಮಾಡಿದವನಿಗೆ ಇದು ಸಾಧ್ಯವಾಗುವುದಿಲ್ಲ. ಆತ ದಂಡ ತೆರುತ್ತಾನೆ. ಅದನ್ನು ಪರಿಹಾರವಾಗಿ ಆ ಮಹಿಳೆಗೆ ನೀಡಲಾಗುವುದು. ಇದೇ ತರಹ ರಾಜನಿಗೆ ಬುದ್ಧಿ ಹೇಳಿದ ಪತಿವ್ರತೆಯ ಕಥೆಯಿದೆ. ಇಲ್ಲಿ ಮಹಿಳೆಯರ ಜತೆ ಲೇಖಕರು ಮಾಡಿರುವ ಮಾತುಕತೆಗಳಲ್ಲಿ ಅವರ ಚೈತನ್ಯಶೀಲತೆಯಿದೆ:

ಲಗ್ನವಾಗಿ ಎಷ್ಟು ದಿನವಾಯ್ತು ದಾನಮ್ಮ?
ಹನ್ನೆರಡು ವರ್ಷಕ್ಕೆ ಲಗ್ನ ಆಯ್ತು. ಆಗಿನ್ನೂ ಮೈನೆರ್ತಿರಲಿಲ್ಲ. ಅದರ ಮುಂದಿನ ವರ್ಷ ನೆರ್ತು ಹಾಸಿಗೆ ಕೊಟ್ರು. ಅದಾದ ಮೇಲೆ ಒಂದು ಸೂತಕ ಆದೆ, ಅಷ್ಟೆ. ಆಮೇಲೊಂದು ಕೂಸು. ಒಂದಾದ ಮೇಲೊಂದು ಎಂಟಾದವು. ಎರಡು ವರ್ಷಕ್ಕೆ ಒಂದೊಂದು ತೊಟ್ಲು ತೂಗಿದೆ. ಕೂಸು ತೊಡೆ ಬಿಟ್ಟು ಆಡಂಗಾದ್ರೆ ವಟ್ಯಾಗೆ ಇನ್ನೊಂದು ಬೀಳ್ತಿತ್ತು. ಎರಡು ಮಕ್ಕಳೂ ದಡಾರ ಆಗಿ ತೀರಕೊಂಡೊ.

ಹಂಗಾಗಬಾರದಿತ್ತು ದಾನಮ್ಮ
ಊ ಸ್ವಾಮಿ. ಹೆತ್ತವುರ ಕಣ್ಣಮುಂದೆ ಮಕ್ಳು ತೀರ್ಕಂಬಾರ್ದು. ಗುಬ್ಬಚ್ಚಿ ಸೈತ ಮಕ್ಕಳು ಸಾಯದು ಕಂಡು ಬಾಯಿಬಾಯಿ ಬಡ್ಕಂತದೆ.
ಯಜಮಾನದ್ರು ದುಡುದು ತಂದಾಕ್ತಿದ್ರ?
ಅಯ್ಯೋ ಅದನ್ಯಾಕೆ ಕೇಳ್ತೀಯಾ ಸ್ವಾಮಿ. ಹೇಳಕಂಡು ಹೋದರೆ ಎಂಟು ರಾತ್ರಿ ಕತೆ. ದೇವರ ಮನಾವರ ಕತೆ ಕೇಳಕೆ ಬಂದೀರ ನಿಮ್ಮುಂದೆ ನರ ಮಾನವರ ಕತೆ ಯಾಕೆ? ಎಲ್ಲ ನೆನಸಿಕಂಡ್ರೆ ಹೊಟ್ಟೆಗೂ ಮಂಡೆಗೂ ಕೆಂಡ ಬಿದ್ದಂಗಾಯ್ತದೆ.

ನಿನ ಗಂಡ ಯಾಕೆ ತೀರ್ಕಂಡ?
ಮಕ್ಕಳಾಗದಂತೆ ಆಪ್ರೇಸನ್ ಮಾಡಸ್ಕಾ ಬಾ ಅಂತ ಏಳಿದ್ರಂತೆ. ಎಳಕೊಂಡೋಗಿ ಮಾಡಿಸೇ ಬಿಟ್ಟರಂತೆ. ಆಗ ಅಟ್ಟಿಗೆ ಬಂದು ಬಿದ್ದವುನು ತಿರುಗಿ ಕೆಲಸ ಬವಸ ಅಂತ ವರಾಗಡೆ ಹೋಗಲಿಲ್ಲ. ಆಯ್ಕೊಂಡು ತಿನ್ನ ಹುಂಜದ ಬೀಜ ಬಡದಾಕದರೂ ಸ್ವಾಮಿ. ಬಿದ್ದವನನ್ನು ನೋಡಿಕೊಳ್ಳದರಲ್ಲಿ ನನ್ನ ಕಾಯಖಂಡದ ಮಾಂಸವೆಲ್ಲ ಸವೆದು ಹೋಯಿತು.
ನೀನೀ ಪದ ಹೇಳಿದಂಗೆಲ್ಲ ಕೆರೆ ಕಟ್ಟೆ ಕೇಳ್ತವೆ ಅಂತ ಹೆಣ್ಮಕ್ಕಳನ್ನ ಬಲಿಕೊಡಬೇಕಾ?
ಗಂಡುಸರು ಹೆಣ್ಮಕ್ಕಳನ ಕಟ್ಕಂಡು ದಿನಾ ಬಲಿ ಹಾಕ್ತರಲ್ಲ. ಕೆರೆಕಟ್ಟೆ ಅಂತಿ ಬಲಿಯಾದ್ರೆ ದನಕರ ಪಕ್ಷಿ ಪ್ರಾಣಿ ನೀರು ಕುಡಿತಾವಲ್ಲ ಸ್ವಾಮಿ.

ನೀನು ಸಿನಿಮಾ ನಾಟಕ ನೋಡಿದ್ದೀಯಾ?
ನಮ್ಮ ಗುಡ್ಲಾಗೆ ಎಲ್ಲಾ ಥರದ ಸಿನಿಮಾ ನಾಟಕ ಬಯಲಾಟ ನಡೀವಾಗ ಇನ್ನು ಅವುನ್ನೆಲ್ಲ ಎಲ್ಲಿ ನೋಡಾನ ಸ್ವಾಮಿ? ಒಂಟಿಬಾಳಿನ ಕುಂಟು ಮುಟ್ಟಿಸಾಟ. ಕಾಲು ಒದ್ದೆಯಾಗದೇ ಸಮುದ್ರ ದಾಟಬಹುದು. ಕಣ್ಣು ಒದ್ದೆಯಾಗದೆ ಸಂಸಾರ ದಾಟುವುದುಂಟೆ?
ಇಲ್ಲಿ ಜನರ ಭಾಷೆಯಲ್ಲಿಯೇ ರೂಪಕಾತ್ಮಕವಾದ ಕಾವ್ಯದ ಗುಣವಿದೆ. ಜೀವನ ದರ್ಶನವಿದೆ. ಕನ್ನಡದ ಬನಿಯಿದೆ.

ಈ ಕೃತಿಯು ಕೇವಲ ಮನುಷ್ಯರ ಕಥನವಾಗಿಲ್ಲ. ಸರ್ವಜೀವಿಗಳ ಕಥನವೂ ಆಗಿದೆ. ಇಲ್ಲಿ ನವಿಲು ಚೇಳು ನಾಯಿ ಕುರು ಕೋಳಿ ಕತ್ತೆಗಳು ಪಾತ್ರಗಳಾಗಿ ಬರುತ್ತವೆ. ದನ ಮತ್ತು ಹುಲಿಯ ಮುಖಾಮುಖಿ ಇರುವ ಗಾದ್ರಿಪಾಲನಾಯಕನ ಕಥೆ ಬರುತ್ತದೆ;, ಗುಬ್ಬಚ್ಚಿ ದಂಪತಿಗಳ ಮಾತುಕತೆಯಿದೆ. ಈ ಪಶುಪಕ್ಷಿಗಳ ಕಥೆಯು ಮನುಷ್ಯರ ಕಥೆಯಷ್ಟೇ ಸ್ವಾರಸ್ಯಕರವಾಗಿವೆ. ಹೀಗಾಗಿ ಕಥನವು ಮನುಷ್ಯ ಪ್ರಾಣಿಪಕ್ಷಿ ಭೇದವೆಣಿಸದೆ, ಅವರನ್ನೂ ಮನುಷ್ಯರಂತೆ ಕಾಣುವ ಜಾನಪದ ಜೀವಪ್ರಜ್ಞೆಯ ಕಥನವಾಗಿದೆ.

ಈ ಕೃತಿಯಲ್ಲಿ ಹೊಸತೇ ಆದ ಸಾಹಿತ್ಯ ಮೀಮಾಂಸೆ, ಸೌಂದರ್ಯ ಮೀಮಾಂಸೆಗಳಿವೆ. ಹೊಸ ಸಾಹಿತ್ಯ ಚರಿತ್ರೆಯಿದೆ. ಆರ್. ನರಸಿಂಹಾಚಾರ್ಯರ `ಕರ್ಣಾಟಕ ಕವಿಚರಿತೆ’ ಹಾಗೂ ಮುಗುಳಿಯವರ `ಸಾಹಿತ್ಯ ಚರಿತ್ರೆ’ ಗಳು ಅಕ್ಷರಲೋಕದ ಒಂದು ಸಾಹಿತ್ಯ ಪರಂಪರೆಯನ್ನು ಕಟ್ಟಿಕೊಟ್ಟಿವೆಯಷ್ಟೆ. ಇದಾದ ಬಳಿಕ ಸಾಹಿತ್ಯ ಚರಿತ್ರೆಯ ಬೇರೆಬೇರೆಯ ಆಯಾಮಗಳು ಅನಾವರಣ ಗೊಂಡವು. ಎಸ್. ಶೆಟ್ಟರ್, ಶಾಸನ ಹಾಕಿಸಿದ ರಾಜರ ಚರಿತ್ರೆಗೆ ಬದಲಾಗಿ ಶಾಸನ ಕೆತ್ತಿದ ಶಿಲ್ಪಿಗಳ ಚರಿತ್ರೆಯನ್ನು ಕಟ್ಟಿಕೊಟ್ಟರು; ಎಂ.ಎಸ್. ಲಟ್ಠೆಯವರು ಜನಪದ ಕವಿಚರಿತೆಯನ್ನು ರಚಿಸಿದರು. ಈ ಹಿನ್ನೆಲೆಯಲ್ಲಿ ಹನೂರರ ಕೃತಿಯು ಜನಪದ ಕಲಾವಿದರ ಚರಿತ್ರೆಯನ್ನು ಕಟ್ಟಿಕೊಡುತ್ತದೆ. ಇಲ್ಲಿನ ಸಿರಿಯಜ್ಜಿ ಹನುಮಜ್ಜಿ ದಾನಮ್ಮ ಚೆನ್ನಿ ನರಸಣ್ಣ ಕೃಷ್ಣಶಾಸ್ತ್ರೀ ಬುಡನಸಾಬ್ ಗಿರಿಯಪ್ಪ, ಜನಪದದೊಳಗೆ ಬೇರುಬಿಟ್ಟವರು. ಇವರ ಸಾಹಿತ್ಯದಲ್ಲಿ ಕಥನವಿದೆ, ಸಂಗೀತವಿದೆ, ಜೀವನ ದರ್ಶನವಿದೆ. ಸಮಾಜವಿದೆ. ಸಂಸಾರದ ಬಿಕ್ಕಟ್ಟು ಬಂದಾಗ, ತತ್ವಪದ ಹಾಡುವುದಕ್ಕೆ ಶುರುಮಾಡುವ ಒಬ್ಬ ದೊರೆಯಿದ್ದಾನೆ; ಪ್ರಿಯಕರನ ಕೊಲೆಯ ದುಃಖವನ್ನು ಹೊರಹಾಕಲು ಹಾಡುವ ಗಾಯಕಿಯಿದ್ದಾಳೆ; ಬಾಳಿನ ಕಷ್ಟವನ್ನು ಮರೆಯಲು ತನ್ನಂತೇ ಕಷ್ಟ ಅನುಭವಿಸುವ ಗುಣಸಾಗರಿಯ ಕತೆಯನ್ನು ಹೇಳುವ ಕಲಾವಿದೆಯಿದ್ದಾಳೆ. ಒಬ್ಬ ಗಣೆಯ ಗಾಯಕ ವಿಶ್ವವಿದ್ಯಾಲಯದ ವಿದ್ವಾಂಸರು ಬಂದು ವಿನಂತಿಸಿದರೂ, ಕುಲದೈವವು ಅಪ್ಪಣೆ ಕೊಡುತ್ತಿಲ್ಲವೆಂದು ಹಾಡಲು ನಿರಾಕರಿಸುವನು. ಈ ಕತೆ ಮತ್ತು ಸನ್ನಿವೇಶಗಳು, ಜನಪದ ಲೋಕದಲ್ಲಿ ಕಲೆಯು ಜೀವಂತ ಬದುಕಿನ ಜತೆ, ಆಚರಣೆಗಳ ಜತೆ ಇಟ್ಟುಕೊಂಡಿರುವ ಸಕೀಲ ಸಂಬಂಧವನ್ನು ಸೂಚಿಸುತ್ತವೆ. ಕಲೆಯು ಸಮಯ ಮತ್ತು ಕಾಲದ ಜತೆ ಇರಿಸಿಕೊಂಡಿರುವ ಸಂಬಂಧವನ್ನು ಹೇಳುತ್ತದೆ. ಆದ್ದರಿಂದಲೇ ಇಲ್ಲಿರುವ ಕಲಾಮೀಮಾಂಸೆಯು ಸಾಂಪ್ರದಾಯಿಕ ಕಾವ್ಯ ಮೀಮಾಂಸೆಗಿಂತ ವಿಭಿನ್ನವಾಗಿದೆ.

ಈ ಕೃತಿಯಲ್ಲಿರುವ ಬಹುತೇಕ ಘಟನೆಗಳು ನಡೆಯುವುದು ರಾತ್ರಿಯ ಹೊತ್ತಲ್ಲಿ. ಈ ಕಾರಣಕ್ಕೆ ಇದು ರಾತ್ರಿ ಕರ್ನಾಟಕದ ಚಿತ್ರಗಳನ್ನು ಒಳಗೊಂಡಿದೆ. ಇಲ್ಲಿ ತೆಲುಗು ಕನ್ನಡ ಸಂಸ್ಕೃತ ಇಂಗ್ಲೀಶ್ ಭಾಷೆಗಳಿವೆ. ಸ್ಥಳೀಯವಾದುದು ಭಾರತಕ್ಕೂ ಅಂತಾರಾಷ್ಟ್ರೀಯತೆಗೂ ವಿಸ್ತರಣೆ ಪಡೆಯುತ್ತದೆ. ಇಲ್ಲಿರುವ ಬಹುರೂಪಿ ಕರ್ನಾಟಕವು ಅನಾವರಣಗೊಂಡಿರುವುದು ಲೇಖಕರ ಹೊಸ ಅಧ್ಯಯನ ವಿಧಾನದಿಂದ. ಇಲ್ಲಿ ಒಂದು ಸೃಜನಶೀಲವಾದ ಕಥನಕ್ರಮವಿದೆ. ಇದು ಪದ್ಯ ಗದ್ಯ ನಾಟಕೀಯ ಮಾತುಕತೆಗಳಿಂದ ಕೂಡಿದೆ. ಸಂಶೋಧನೆ ಮತ್ತು ವಿಮರ್ಶೆಗಳು ಇದರೊಳಗೆ ಹದವಾಗಿ ಬೆರೆತುಕೊಂಡಿವೆ. ಕಥನವು ಹನೂರರ ನುಡಿಗಟ್ಟು. ಜನಪದರದ್ದು ಕೂಡ. ಜನ ಯಾವುದಾದರೂ ವಿಚಾರವನ್ನೊ ಅಭಿಪ್ರಾಯವನ್ನೊ ಹೇಳಿಕೆ ರೂಫದಲ್ಲಿ ಮಾಡುವುದಿಲ್ಲ. ಒಂದು ಕಥೆಯ ಮೂಲಕ ಹೇಳುವರು. ಎಂತಲೇ ಕ್ಷೇತ್ರಕಾರ್ಯದ ಅನುಭವ ನಿರೂಪಣೆ ಎಂದು ಮೇಲುನೋಟಕ್ಕೆ ತೋರುವ ಈ ಕೃತಿ, ಕಾದಂಬರಿ ಸಣ್ಣಕತೆ ಆತ್ಮಕಥೆ ಸಂಸ್ಕೃತಿ ಕಥನ ಎಲ್ಲವೂ ಆಗಿದೆ. ಇಲ್ಲಿ ಜೀವಂತವಾದ ಜನರಿದ್ದಾರೆ. ಅವರ ಜೀವಂತವಾದ ಮಾತುಕತೆ, ಹಾಸ್ಯಪ್ರಜ್ಞೆ, ಮಾತುಗಾರಿಕೆಗಳಿವೆ. ಸಾಮಾನ್ಯ ಜನರ ಜತೆ ವಿದ್ವಾಂಸನೊಬ್ಬ ಹೇಗೆ ಸಂವಾದಿಸಬೇಕು ಎಂಬ ಕಯನ್ನು ಹೊಸ ತಲೆಮಾರಿನ ಸಂಶೋಧಕರು ಇಲ್ಲಿಂದ ಕಲಿಯಬೇಕಿದೆ. ಹೊಸ ಸಾಂಸ್ಕೃತಿಕ ವಿದ್ವತ್ತಿನ ಮಾದರಿಯನ್ನು ಹನೂರು ಅವರು ಹುಟ್ಟುಹಾಕಿದ್ದಾರೆ. ತಿರುಗಾಡುವ ಜನರನ್ನು ಮಾತಾಡಿಸುವ ಅವರ ಜೀವಂತ ಭಾಷೆಯನ್ನು ದಾಖಲಿಸುವ, ಅವರ ಅನುಭವ ಲೋಕದೃಷ್ಟಿಯನ್ನು ಅಮೂಲ್ಯವೆಂದು ತಿಳಿದಿರುವ ಮಾದರಿಯಿದು. ಇಲ್ಲಿ ವಿದ್ವತ್ತು ಲೋಕಪ್ರೀತಿಯ ವಿಸ್ತರಣೆಯಾಗಿದೆ. ಇಲ್ಲಿ ಭಾವುಕತೆಯಿಲ್ಲ. ವೈಚಾರಿಕ ಎಚ್ಚರವಿದೆ. ಆವೇಶಗೊಳ್ಳದೆ ತಣ್ಣಗೆ ಅನುಭವ ಹಂಚಿಕೊಳ್ಳುವ ವಿಧಾನವಿದೆ. ಇದನ್ನು ಸಕೀಲ ಸಂಬಂಧವುಳ್ಳ ವಿದ್ವತ್ತೆಂದು ಕರೆಯಬಹುದು.

ಬಹುಮುಖ ಪ್ರತಿಭೆ ಎಂಬ ನುಡಿಗಟ್ಟು ಕ್ಲೀಷೆಯಾಗಿದೆ. ಆದರೆ ಹನೂರರ ವಿಷಯದಲ್ಲಿ ಇದು ಅನ್ವರ್ಥಕವಾಗಿದೆ. ಶಾಸನ ಭಾಷೆ ಸಾಹಿತ್ಯ ಜಾನಪದ ತತ್ವಪದ ಆಧುನಿಕ ಪ್ರಾಚೀನ ಜಾನಪದ ಸಾಹಿತ್ಯಗಳು-ಹೀಗೆ ಹಲವು ವಿಷಯಗಳಿಗೆ ಸಂಬಂಧಿಸಿ ಅಧಿಕಾರದಿಂದ ಮಾತಾಡಬಲ್ಲ ಬರೆಯಬಲ್ಲ ಕನ್ನಡದ ಕೆಲವೇ ವಿದ್ವಾಂಸರಲ್ಲಿ ಅವರೊಬ್ಬರು. ಈ ಕೃತಿಯನ್ನು ನೋಡುವಾಗ ಆಧುನಿಕ ಕನ್ನಡದ ಮಹತ್ವದ ಕವಿಗಳು ವಿದ್ವಾಂಸರು ಕಾಲುದಾರಿಯ ಸಂಪರ್ಕವಿಲ್ಲದೆ ತಮ್ಮ ಬರೆಹಕ್ಕೆ ತಂದುಕೊಂಡಿರುವ ಕೊರತೆ ಕಾಣುತ್ತದೆ. ನಮ್ಮ ಶಾಸ್ತ್ರಗಳು ಸೀಮೋಲ್ಲಂಘನೆ ಇಲ್ಲದೆ ಪೂರ್ಣಗೊಳ್ಳುವುದಿಲ್ಲ. ಕರ್ನಾಟಕ ಸಂಸ್ಕøತಿ ಏಕರೂಪಿಯಲ್ಲ. ಇದನ್ನು ಅರಿಯಬೇಕಾದರೆ ನಾಡನ್ನು ತಿರುಗಬೇಕು. ಹನೂರರ ಆತ್ಮಕಥೆಯು ಇಂಥ ತಿರುಗಾಟದ ಕಥನ. ಮೈಸೂರು ಸೀಮೆಯ ಹನೂರು ಚಿತ್ರದುರ್ಗ ಸೀಮೆಗೆ ಬಂದಿದ್ದು ಆಕಸ್ಮಿಕ. ಇದರಿಂದ ಇಲ್ಲಿನ ಜನಪದ ಪ್ರತಿಭೆಗಳನ್ನು ಲೋಕಕ್ಕೆ ತೋರಿಸುವ ಕಾರ್ಯವಾಯಿತು. ಇದೊಂದು ಬಗೆಯ ಸೀಮೋಲ್ಲಂಘನೆಯೇ. ಕಾಲುದಾರಿಯ ಕಥನವು ಕಥನವು ಸೀಮೋಲ್ಲಂಘನೆಯ ಅಪೂರ್ವ ಫಲಿತಗಳನ್ನು ಒಳಗೊಂಡಿರುವ ಕೃತಿಯಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...