Homeಅಂಕಣಗಳುಪತ್ರಕರ್ತರು ಯಾಕೆ ಹೀಗಾಗುತ್ತಿದ್ದಾರೆ?

ಪತ್ರಕರ್ತರು ಯಾಕೆ ಹೀಗಾಗುತ್ತಿದ್ದಾರೆ?

- Advertisement -
- Advertisement -

ಮೈಸೂರು ಸಂಸ್ಥಾನದ ಪತ್ರಕರ್ತರ ಸಂಘ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವಾಗಿ ಮಾರ್ಪಟ್ಟಾಗ ನಾನು ಪತ್ರಕರ್ತರ ಸಂಘಕ್ಕೆ ಅಧ್ಯಕ್ಷನಾಗಿದ್ದೆ. 1932ರಲ್ಲಿ ಡಿ.ವಿ.ಗುಂಡಪ್ಪನವರ ಅಧ್ಯಕ್ಷತೆಯಲ್ಲಿ ಮೈಸೂರು ಸಂಸ್ಥಾನದ ಪತ್ರಕರ್ತರ ಸಂಘ ಆರಂಭವಾಯಿತು. ವಿಶ್ವ ಕರ್ನಾಟಕ ಪತ್ರಿಕೆಯ ಸಂಪಾದಕರಾದ ತಿರುಮಲೆ ತಾತಾಚಾರ್ಯ ಶರ್ಮರು ಆ ಸಂಸ್ಥೆಯ ಪ್ರಥಮ ಕಾರ್ಯದರ್ಶಿ. ಈ ಸಂಘಕ್ಕೆ ಘಟಾನುಘಟಿಗಳು ಅಧ್ಯಕ್ಷರಾಗಿದ್ದರು. ಈ ಸಂಘ ಕರ್ನಾಟಕ ಕಾರ್ಯನಿರತ ಪರ್ತಕರ್ತರ ಸಂಘವಾಗಿ ಮಾರ್ಪಟ್ಟ ಮೇಲೂ ಪೋತನ್ ಜೋಸೆಫ್, ಸೀತಾರಾಮ ಶಾಸ್ತ್ರಿ, ಜಯಶೀಲರಾವ್, ಗಂಗಾಧರ ಮೊದಲಿಯಾರ್, ಕೆ.ಎಂ.ನಾಗರಾಜ್ ಮುಂತಾದ ಖ್ಯಾತ ಪತ್ರಿಕೋದ್ಯಮಿಗಳು ಸಂಘದ ಅಧ್ಯಕ್ಷರಾಗಿದ್ದು ಸಂಘವನ್ನು ಉಜ್ಛ್ರಾಯ ಸ್ಥಿತಿಗೆ ತಂದರು. ಆದರೆ ಕಳೆದ 4-6 ವರ್ಷಗಳಿಂದ ಅಧ್ಯಕ್ಷ ಸ್ಥಾನವನ್ನು ತನ್ನ ಕೈವಶದಲ್ಲಿ ಇಟ್ಟುಕೊಂಡು ಕಾನೂನು ಕಟ್ಟಲೆಗಳನ್ನೆಲ್ಲವನ್ನೂ ಗಾಳಿಗೆ ತೂರಿ ಲಕ್ಷಾಂತರ ರೂಪಾಯಿಗಳನ್ನು ಗುಳುಂ ಮಾಡಿದ ರಾಜು ಎಂಬಾತ ಘನತೆವೆತ್ತ ಪತ್ರಕರ್ತರ ಸಂಘವನ್ನು ಅಧೋಗತಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಮಧ್ಯೆ ಹಲಸೂರು ಪೋಲೀಸ್ ಠಾಣೆಗೆ 25-09-2018ರಲ್ಲಿ ಬಂಗಲೆ ಮಲ್ಲಿಕಾರ್ಜುನ ಎಂಬ ಹೆಸರಿನ ಸಂಘದ ಸದಸ್ಯರು `ಅಧ್ಯಕ್ಷರಾಗಿರುವ ರಾಜು ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ 2013ರಿಂದ 17ರವರೆಗೆ ಮತ್ತು 2018 ರಿಂದ 2021ರವರೆಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಸಂಘದ ನಿಶ್ಚಿತ ಠೇವಣಿ ಹಣ ಮತ್ತು ಇತರೆ ಬಾಬ್ತು ಹಣದ ದುರುಪಯೋಗ ಪಡಿಸಿಕೊಂಡಿದ್ದಾರೆ’ ಎಂದು ಆರೋಪ ಮಾಡಿ ದೂರು ಸಲ್ಲಿಸಿದರು. ಈ ಆರೋಪದ ಹಿನ್ನೆಲೆಯಲ್ಲಿ ಪೋಲೀಸರು ಕೇಸ್ ನಂ.0226/2018ನ್ನು ದಾಖಲೆ ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.
ರಾಜುರವರ ಮೇಲೆ 12/05/2004 ಚಿಕ್ಕಮಗಳೂರಿನ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಸಿಸಿ ಸಂಖ್ಯೆ 406/2008ರ ಅನ್ವಯ ಕ್ರಿಮಿನಲ್ ಪ್ರಕರಣ ಒಂದರಲ್ಲಿ 3 ತಿಂಗಳ ಶಿಕ್ಷೆ ಆಗಿರುವುದಾಗಿ ತಿಳಿದು ಬಂದಿದೆ. ಈ ಕಾರಣಕ್ಕಾಗಿ ರಾಜುರವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯ ಕಾರ್ಯಕಾರಣಿ ಸಮಿತಿ 5.10.2018ರಂದು ಸಭೆ ಸೇರಿ ರಾಜುರವರ ರಾಜೀನಾಮೆಯನ್ನು ಅಂಗೀಕರಿಸಿ ಶಿವಾನಂದ ತಗಡೂರ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿತು. ಅಲ್ಲದೇ ರಾಜುರವರ ಅಧ್ಯಕ್ಷತೆಯ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಣಕಾಸಿನ ದುರ್ಬಳಕೆಯ ಬಗೆಗೆ ಲೆಕ್ಕ ಸಂಶೋಧನೆ ಮಾಡುವಂತೆ ಗುಡಿಹಳ್ಳಿ ನಾಗರಾಜ್ ಅಧ್ಯಕ್ಷತೆಯಲ್ಲಿ ಸಿ.ಕೆ.ಮಹೇಂದ್ರ, ರವಿಕುಮಾರ್, ರಮೇಶ್ ಕುಟ್ಟಪ್ಪ, ಗಣಪತಿ ಗಂಗೊಳ್ಳಿ ಮೊದಲಾದವರ ಸಮಿತಿ ರಚಿಸಿದ್ದಾರೆ. ಈ ಸಮಿತಿ ಕೂಲಂಕುಶವಾಗಿ ಲೆಕ್ಕ ಸಂಶೋಧನೆ ಮಾಡಿ ವರದಿ ಸಲ್ಲಿಸಿದೆ.
ಈ ವರದಿಯ ಸಾರಾಂಶ ಹೀಗಿದೆ. ರಾಜುರವರ ಅಧ್ಯಕ್ಷತೆಯ ಅವಧಿಯಲ್ಲಿ ಹಣಕಾಸು ಅವ್ಯವಹಾರಗಳು ನಡೆಸಿರುವುದು ಮೇಲ್ನೋಟಕ್ಕೆ ಕಂಡು¨ರುತ್ತದೆ. ಇದರಲ್ಲಿ ರಾಜುರವರ ಪಾತ್ರವು ನೇರವಾಗಿ ಕಂಡುಬರುತ್ತದೆ. ಜೊತೆಗೆ ಈ ಅವ್ಯವಹಾರಗಳಿಗೆ ಸಂಘದ ಪ್ರಧಾನ(ಧನ) ಕಾರ್ಯದರ್ಶಿ ಕೆ.ಜೆ.ಭೀಮನಗೌಡ ಹಾಗೂ ಖಜಾಂಚಿ ಕೂಡ ಜವಾಬ್ಧಾರರು ಎಂದು ಈ ವಿಚಾರಣಾ ಸಮಿತಿ ಅಭಿಪ್ರಾಯಪಟ್ಟಿದೆ. 2014-15ನೇ ಸಾಲಿನಲ್ಲಿ ಅಧ್ಯಕ್ಷ ರಾಜುರವರು ಪ್ರಯಾಣ ಭತ್ಯೆಯಾಗಿ 2,66,200 ರೂಗಳನ್ನು 2017-18ನೇ ಸಾಲಿನ ಲೆಕ್ಕಪತ್ರದಲ್ಲಿ 8,61,777 ರೂಗಳನ್ನೂ ಬಳಕೆ ಮಾಡಿಕೊಂಡಿದ್ದಾರೆ. ಈ ಮೂರು ಅವಧಿಯಲ್ಲಿ ರಾಜು ಭಾರೀ ಮೊತ್ತದ ಸಂಚಾರ ವೆಚ್ಚ ಮಾಡಿರುವುದು ಸೂಕ್ತವಲ್ಲ ಎಂದು ಸಮಿತಿ ಅಭಿಪ್ರಾಯ ಪಟ್ಟಿದೆ.
ರಾಜು ನಿವೇಶನಕ್ಕಾಗಿ ಎಂದು ಹೇಳಿ ಬ್ಯಾಂಕುಗಳಿಂದ 26 ಲಕ್ಷ ರೂಗಳನ್ನು ತೆಗೆದಿದ್ದಾರೆ. ಸಂಘಕ್ಕೆ ನಿವೇಶನ ನೀಡಲು ಸರ್ಕಾರಕ್ಕೆ ಅರ್ಜಿ ಸಲ್ಲಿಸಲಾಗಿ ಸರ್ಕಾರ 20 ಗುಂಟೆ ಜಮೀನನ್ನು ನೀಡಲೂ ನಿರ್ಧರಿಸಿದೆ. ಆದರೆ ಈವರೆಗೆ ಸರ್ಕಾರದಿಂದ ಮಂಜೂರಾತಿ ಪತ್ರ ಸಂಘಕ್ಕೆ ಬಂದಿಲ್ಲ. ಕ್ರಯಪತ್ರ ರಿಜಿಸ್ಟಾರ್ ಆಗಿಲ್ಲ. ಸರ್ಕಾರ ಪುಕ್ಕಟ್ಟೆ ನಿವೇಶನ ಕೊಟ್ಟಿದ್ದರು ರಾಜುರವರು 26 ಲಕ್ಷ ರೂಗಳನ್ನು ನಿವೇಶನಕ್ಕಾಗಿ ಪಡೆದಿದ್ದಾರೆ. ನಿವೇಶನವನ್ನು ರಾಜು ಕೊಂಡುಕೊಂಡರೇ? ಹೇಗೆ?
ಹಾಸನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಸಮ್ಮೇಳನ ನಡೆಯಿತು. ಈ ಸಮ್ಮೇಳನಕ್ಕೆ ಸರ್ಕಾರ 10 ಲಕ್ಷ ರೂಪಾಯಿ ನೀಡಿತ್ತು. ಸಮ್ಮೇಳನದ ಖರ್ಚಿಗೆಂದು ಶ್ರವಣಬೆಳಗೊಳದ ಜೈನಮಠ ಹಣ ನೀಡಿದೆ. ಹೀಗಿದ್ದರೂ ರಾಜುರವರು 11,39,949 ರೂಗಳನ್ನು ಸಂಘ ಅಧಿವೇಶನಕ್ಕೆ ಖರ್ಚು ಮಾಡಿರುವುದಾಗಿ ಲೆಕ್ಕ ಬರೆದಿದ್ದಾರೆ. ಸಂಘ ಅಧಿವೇಶನಕ್ಕಾಗಿ ಖರ್ಚು ಮಾಡಿದ ಬಗೆಗೆ ಒಂದು ವೋಚರೂ ಇಲ್ಲ ಎಂದು ತನಿಖಾ ತಂಡ ವರದಿ ಮಾಡಿದೆ. ಮೇಲ್ನೋಟಕ್ಕೆ ಹಣ ದುರುಪಯೋಗವಾದಂತೆ ಕಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಫಿಕ್ಸೆಡ್ ಡೆಪಾಸಿಟ್ ಹಣವನ್ನು ಅವಧಿ ಮುಗಿಯುವವರೆಗೂ ಬ್ಯಾಂಕಿನಿಂದ ತೆಗೆಯುವಂತಿಲ್ಲ ಆದರೆ ರಾಜುರವರು ಅನೇಕ ಠೇವಣಿ ಹಣವನ್ನು ಹಿಂತೆಗೆಯುವ ಚಾಳಿ ಬೆಳೆಸಿಕೊಂಡಿದ್ದರು.
ಹೀಗೆ ಕಾನೂನಿನ ಭಯವೂ ಇಲ್ಲದೆ ಸೆರೆಮನೆಗೆ ಹೋಗಬೇಕಾದ ಪ್ರಮೇಯ ಬರಬಹುದು ಎಂಬ ಪ್ರಜ್ಞೆಯೂ ಇಲ್ಲದೆ ಹುಂಬರಂತೆ ಸಂಘದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಶಾಸಕರಿಂದ ಶಾಸಕರ ನಿಧಿಯಲ್ಲಿ 2017-18 ಸಾಲಿನಲ್ಲಿ ಕೆ.ಜೆ.ಜಾರ್ಜ್‍ರವರು 5 ಲಕ್ಷ, ಕೆ.ಎಸ್.ಈಶ್ವರಪ್ಪನವರು 3 ಲಕ್ಷ, ವಿನಯ್ ಕುಲಕರ್ಣಿ ಒಂದು ಲಕ್ಷ, ಸಿ.ಪಿ.ಯೋಗೀಶ್ವರ್ 2.5 ಲಕ್ಷ ದೇಣಿಗೆ ನೀಡಿದ್ದಾರೆ.
ಹಲಸೂರು ಠಾಣೆಯ ಪೊಲೀಸ್ ಅಧಿಕಾರಿಗಳು ರಾಜುರವರನ್ನು ಬಂಧಿಸಿದ್ದರು. ಈಗ ರಾಜು ಹೈಕೋರ್ಟ್‍ನ ಮೊರೆ ಹೋಗಿದ್ದಾರೆ. ಸಂಘದ ಹಣ ನುಂಗಿರುವ ರಾಜುರವರಿಗೆ ಹೈಕೋರ್ಟ್‍ನಲ್ಲಿ ರಕ್ಷಣೆ ಸಿಗಬಾರದು. ಪತ್ರಕರ್ತರ ಸಂಘದಂತಹ ಘನತೆವೆತ್ತ ಸಂಸ್ಥೆಯಲ್ಲಿ ಈ ಹಗಲು ದರೋಡೆ ನಡೆದಿರುವುದು ಲಜ್ಬಾಸ್ಪದ ವಿಚಾರವಾಗಿದೆ. ಪೊಲೀಸರು ನಿಷ್ಠೆಯಿಂದ ನಡೆದುಕೊಂಡು ರಾಜುನಂತಹ ಹಗಲು ದರೋಡೆಕೋರರಿಗೆ ಪಾಠ ಕಲಿಸಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read