Homeಆರೋಗ್ಯಉರಿವ ಮನೆಯಲ್ಲಿ ಗಳ ಹಿರಿಯುವವರು, ಸಾವಿನ ಮನೆಯಲ್ಲಿ ಟಿಆರ್‍ಪಿ ವರದಿಗಾರರು

ಉರಿವ ಮನೆಯಲ್ಲಿ ಗಳ ಹಿರಿಯುವವರು, ಸಾವಿನ ಮನೆಯಲ್ಲಿ ಟಿಆರ್‍ಪಿ ವರದಿಗಾರರು

- Advertisement -
- Advertisement -

| ಮಲ್ಲನಗೌಡರ್ |

ಬಿಹಾರದಲ್ಲಿ ಸರ್ಕಾರದ ನಿರ್ಲಕ್ಷ್ಯತನದಿಂದ, ಬೇಜವಾಬ್ದಾರಿಯಿಂದ ಸುಮಾರು ನೂರಕ್ಕೂ ಹೆಚ್ಚು ಮಕ್ಕಳು ಸಾವಿಗೀಡಾಗಿ, ಸಾವಿರಕ್ಕೂ ಹೆಚ್ಚು ಮಕ್ಕಳು ಜೀವನ್ಮರಣದ ನಡುವೆ ಹೋರಾಡುತ್ತಿವೆ. ಈ ಸಮಯದಲ್ಲಿ ಪ್ರಭುತ್ವವನ್ನು ಗುರಿಯಾಗಿಸಿ ವರದಿಗಾರಿಕೆ ಮಾಡಬೇಕಿದ್ದ ಬಹುಪಾಲು ಮಾಧ್ಯಮಗಳ ವರದಿಗಾರರು, ಆಸ್ಪತ್ರೆಗಳ ಐಸಿಯುಗಳಿಗೆ ಅನಾಗರಿಕರಂತೆ ನುಗ್ಗಿ ವೈದ್ಯರು ಮತ್ತು ದಾದಿಯರ ಮೇಲೆ ಮುಗಿಬಿದ್ದು ಕರ್ತವ್ಯಕ್ಕೆ ಅಡ್ಡಿ ಮಾಡಿರುವ ವಿದ್ಯಮಾನಗಳು ಜರುಗಿವೆ. ಟಿಆರ್‍ಪಿಗಾಗಿ ಸಾವಿನ ಮನೆಯಲ್ಲೂ ಸಂತೆ ಮಾಡುತ್ತಿರುವ ಚಾನೆಲ್‍ಗಳು ‘ಜರ್ನಲಿಸಂ ಇನ್ ಐಸಿಯು’ ಎಂಬ ಟೀಕೆಗೆ ಗುರಿಯಾಗಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಟಿವಿ ವರದಿಗಾರರು, ಆ್ಯಂಕರ್‍ಗಳು ಮತ್ತು ಕ್ಯಾಮೆರಾಮನ್‍ಗಳ ಈ ಹುಚ್ಚಾಟದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಕೇಂದ್ರ ಆರೋಗ್ಯ ಮಂತ್ರಿ, ಬಿಹಾರದ ಆರೋಗ್ಯ ಸಚಿವ ಮತ್ತು ಅಲ್ಲಿನ ಮುಖ್ಯಮಂತ್ರಿಗಳನ್ನ ತರಾಟೆಗೆ ತೆಗೆದುಕೊಳ್ಳುವುದುನ್ನು ಬಿಟ್ಟ ಹಲವು ಟಿವಿ ವರದಿಗಾರರು, ಅಸ್ವಸ್ಥ ಮಕ್ಕಳಿರುವ ವಾರ್ಡುಗಳಿಗೆ ನುಗ್ಗಿ ಸೇವೆಯಲ್ಲಿ ನಿರತರಾಗಿದ್ದ ವೈದ್ಯರು, ಅಟೆಂಡರುಗಳು ಮತ್ತು ನರ್ಸ್‍ಗಳ ಮೇಲೆ ಮುಗಿಬಿದ್ದು ಜಬರದಸ್ತಿನಲ್ಲಿ ಬೈದು ವರದಿ ಮಾಡಿದ್ದಾರೆ. ಇದರಿಂದ ಮಕ್ಕಳ ಔಷೋಧಪಚಾರಕ್ಕೆ ಅಡ್ಡಿಯುಂಟಾಗಿದೆ. ಅದರ ವಿಡಿಯೋ ನೋಡಿ

ಚಾನೆಲ್‍ಗಳು ಹೀಗೆ ಮಾಡಿದ್ದು ಮಕ್ಕಳ ಬಗ್ಗೆ ಕಾಳಜಿಯಿಂದಲ್ಲ, ಬದಲು ಇಂತಹ ಸಾಹಸಗಳಿಂದ ತಮ್ಮ ಟಿಆರ್‍ಪಿ ಏರಿಸಿಕೊಳ್ಳುವ ಹುನ್ನಾರ ಸ್ಪಷ್ಟವಾಗಿ ಕಂಡುಬರುತ್ತಿತ್ತು. ಆಜ್‍ತಕ್ (ಅಲ್ಲಿ ಬಿಹಾರ್ ತಕ್)ನ ನಿರೂಪಕಿ/ ವರದಿಗಾರ್ತಿ ಅಂಜನಾ ಓಂ ಕಶ್ಯಪ್ ಮೊದಲು 3ನೇ ವಾರ್ಡಿಗೆ ನುಗ್ಗಿ ಮಕ್ಕಳ ಪೋಷಕರನ್ನು ಮಾತಾಡಿಸಿದ್ದಾರೆ. ಈ ಎಲ್ಲದರ ಕುರಿತು ತಮಗೆ ಹೇಗೆ ಅನಿಸುತ್ತಿದೆ ಎಂಬ ಮೂರ್ಖ, ಅಸಂಬದ್ಧ ಪ್ರಶ್ನೆಯನ್ನು ಎತ್ತಿದ್ದಾರೆ.

ಟ್ರೀಟ್‍ಮೆಂಟ್‍ ಮಾಡುತ್ತಿದ್ದ ವೈದ್ಯರೊಬ್ಬರ ಮೇಲೆ ನೇರ ಆಕ್ರಮಣ ಮಾಡಿ, ಎಲ್ಲಿದ್ದೀರಾ ನೀವೆಲ್ಲ? ವಾರ್ಡಿನಲ್ಲಿ ತಾಸಿನಿಂದ ನೋಡ್ತಾನೇ ಇದ್ದೇನೆ. ನಿಮಗೆ ಮಕ್ಕಳ ಮೇಲೆ ಕಾಳಜಿನೇ ಇಲ್ಲ’ ಎಂದು ಅರಚಾಡಿದ್ದಾರೆ. ಮೂಲಭೂತ ಸೌಕರ್ಯ ಕಡಿಮೆಯಿದೆ, ಸ್ಟಾಫ್ ಕೊರತೆಯಿದೆ, ನಾವೀಗ ಮಕ್ಕಳ ಟ್ರೀಟ್‍ಮೆಂಟಿನಲ್ಲೇ ತೊಡಗಿದ್ದೇವಲ್ಲ’ ಎಂದು ಹೇಳುವ ವೈದ್ಯರ ಮಾತನ್ನು ಪರಿಗಣಿಸದೇ ಅರ್ಭಟಿಸಿದ್ದಾರೆ. ಈ ಸಾಹಸಿ ಜರ್ನಲಿಸ್ಟ್ ನಂತರ ಶೂ ಹಾಕಿಕೊಂಡು, ಕ್ಯಾಮೆರಾಮನ್ ಕರೆದುಕೊಂಡು ಐಸಿಯುಗೇ ನುಗ್ಗಿ ರಾದ್ದಾಂತ ಮಾಡಿದ್ದಾರೆ. ಆ ಮೂಲಕ ನಿಯಮ ಉಲ್ಲಂಘನೆ ಮಾಡಿ, ಐಸಿಯುನ ವಾತಾವರಣವನ್ನೂ ಹಾಳು ಮಾಡಿದ್ದಾರೆ. ಒಂದಿಷ್ಟು ಸೂಕ್ಷ್ಮತೆಯಿಲ್ಲದ ಅಂಜನಾರ ಈ ಹುಚ್ಚಾಟವನ್ನು ಇತರ ಸ್ಥಳೀಯ ವರದಿಗಾರರೂ ಅನುಕರಿಸಿದ್ದಾರೆ.

ನಿಜಕ್ಕೂ ದುರಂತದ ಬಗ್ಗೆ, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿಯಿದ್ದರೆ ಸರ್ಕಾರದ ವಿರುದ್ಧ ಧ್ವನಿ ಎತ್ತಿ ವರದಿಗಾರಿಕೆ ಮಾಡಬೇಕಿತ್ತು. ದೆಹಲಿಯ ಆಸ್ಪತ್ರೆಗಳಲ್ಲಿ ಸಮಸ್ಯೆಯಾದಾಗ ಅಲ್ಲಿನ ಮುಖ್ಯಮಂತ್ರಿಗಳನ್ನು ಚಾನೆಲ್‍ಗಳನ್ನು ತರಾಟೆಗೆ ತೆಗೆದುಕೊಂಡಿದ್ದವು. ಇದು ಸರಿ, ಆದರೆ ಬಿಹಾರದಲ್ಲಿ, ಉತ್ತರಪ್ರದೇಶದಂತಹ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಇಂತಹ ದುರಂತ ಸಂಭವಿಸಿದಾಗ ಈ ಚಾನೆಲ್ ಗಳು ಸರ್ಕಾರದ ವಿರುದ್ಧ ಧ್ವನಿ ಎತ್ತದೇ ಅಲ್ಲಿನ ಅಸಹಾಯಕ ಡಾಕ್ಟರು, ನರ್ಸ್‍ಗಳ ಮೇಲಷ್ಟೇ ಎಗರಾಡುವುದನ್ನೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಖಂಡಿಸಲಾಗಿದೆ.

ಆಸ್ಪತ್ರೆಯ ಹೊರಗೆ ಮಕ್ಕಳ ಸಂಬಂಧಿಕರು ಮತ್ತು ಪೋಷಕರು ಮುಖ್ಯಮಂತ್ರಿ ನಿತೀಶ್ ಮತ್ತು ಕೇಂದ್ರರ ಆರೋಗ್ಯ ಸಚಿವ ಹರ್ಷವರ್ಧನ್ ರವರ ವಿರುದ್ದ ಪ್ರತಿಭಟನೆ ನಡೆಸಿದ ಮೇಲಾದರೂ ಮಾಧ್ಯಮಗಳಿಗೆ ಅರಿವಾಗಿ ಸರ್ಕಾರಗಳನ್ನು ಪ್ರಶ್ನಿಸಬೇಕಿತ್ತಲ್ಲವೇ? ಊಹು ಆಗಲೇ ಇಲ್ಲ.

ಈ ಕುರಿತು ಟ್ವೀಟ್ ಮಾಡಿರುವ ಅಲ್ಟ್ ನ್ಯೂಸ್‍ನ ಸಂಸ್ಥಾಪಕ ಪ್ರತೀಕ್ ಸಿನ್ಹಾ, ‘ಇದು ಆಜ್‍ತಕ್‍ನ ಸಾಹಸಿ ಪತ್ರಿಕೋದ್ಯಮ! ಅಸ್ವಸ್ಥ ಮಕ್ಕಳನ್ನು ಉಪಚರಿಸುತ್ತಿದ್ದ ವೈದ್ಯರು ಮತ್ತು ಸಿಬ್ಬಂದಿಗೆ ಕಿರುಕುಳ ನೀಡುವುದು! ಈ ಆಕ್ರೋಶದ ಶೇ.10ರಷ್ಟನ್ನಾದರೂ ರಾಜಕಾರಣಿಗಳ ಮೇಲೆ ತೋರಿಸಿದ್ದರೆ ಒಂದಿಷ್ಟಾದರೂ ಪ್ರಯೋಜನವಾಗುತ್ತಿತ್ತು’ ಎಂದಿದ್ದಾರೆ.

“ಕೊನೆಗೂ ಭಾರತದ ಆರೋಗ್ಯ ಸಂಕಷ್ಟದ ಬಗ್ಗೆ ಟ್ವೀಟ್ ಮಾಡಲು ನರೇಂದ್ರ ಮೋದಿಯವರಿಗೆ ಸಮಯ ಸಿಕ್ಕಿದೆ. ಅವರು ಶಿಖರ್ ಧವನ್ ಬೇಗ ಗುಣಮುಖವಾಗಲೆಂದು ಹಾರೈಸಿದ್ದಾರೆ” ಎಂದು ಖ್ಯಾತ ಯುವ ಚಿಂತಕ ಧೃವ್ ರಾಠೀ ವ್ಯಂಗ್ಯದ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

ಗಾಯದ ಕಾರಣದಿಂದಾಗಿ ವಿಶ್ವಕಪ್ ಕ್ರಿಕೆಟ್‍ನಿಂದ ಹೊರಗುಳಿದ ಶಿಖರ್ ಧವನ್‍ರ ಬಗ್ಗೆ ಕಾಳಜಿ ವಹಿಸುವ ಪ್ರಧಾನಿಗೆ, ಈ ಮಕ್ಕಳ ನೆನಪೂ ಕಾಡಲಿಲ್ಲವೇ ಎಂಬಂತಹ ಪ್ರಶ್ನೆಗಳನ್ನಿಟ್ಟು ಚರ್ಚೆ ಮಾಡದೇ ಪಲಾಯನ ಮಾಡುತ್ತಿರುವ ಮಾಧ್ಯಮಗಳಿಗೆ, ಕಳೆದ ಚುನಾವಣೆಗೆ ಮೊದಲು ಬಜೆಟ್‍ನಲ್ಲಿ ಪ್ರಸ್ತಾಪಿಸಿದ ಆಯುಷ್ಮಾನ್ ಯೋಜನೆ ಸಾಧಿಸಿದ್ದೇನು? ಎಂಬ ಪ್ರಶ್ನೆಯೂ ಕಾಡುತ್ತಿಲ್ಲ.

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಜುಜುಬಿ ಅನುದಾನ ನೀಡುತ್ತಿರುವ ಸರ್ಕಾರಗಳ ನೀತಿಗಳು, ಈ ಎರಡೂ ಕ್ಷೇತ್ರಗಳನ್ನೂ ಹಂತಹಂತವಾಗಿ ಖಾಸಗೀಕರಣ ಮಾಡುತ್ತ ಬಂದಿರುವುದೇ ಇಂತಹ ದುರಂತಗಳ ಮೂಲ ಅಲ್ಲವೇ? ವಿಪರೀತ ನಿಯಮಗಳ ಆಯುಷ್ಮಾನ್ ಯೋಜನೆಯ ಅಂತಿಮ ಫಲಾನುಭವಿಗಳು ಖಾಸಗಿ ಆಸ್ಪತ್ರೆಗಳು ಮತ್ತು ಆರೋಗ್ಯ ವಿಮಾ ಕಂಪನಿಗಳಷ್ಟೇ…ಈ ಕುರಿತಾಗಿ ಚರ್ಚೆ ಹುಟ್ಟು ಹಾಕಬೇಕಿದ್ದ ಮಾಧ್ಯಮಗಳು ಟಿ.ಆರ್.ಪಿ ಯ ಸುತ್ತ ಗಿರಕಿ ಹೊಡೆಯುತ್ತ ಬಿದ್ದಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...