Homeನ್ಯಾಯ ಪಥನಿಮ್ಮ ಮಿತಿಗಳನ್ನು ಮೀರಿ, ಆಕಾಶದೆತ್ತರಕ್ಕೆ ನೀವೂ ಹಾರಬಹುದು.. ಎಂದು ತೋರಿಸಿಕೊಟ್ಟ ಪುಸ್ತಕ..

ನಿಮ್ಮ ಮಿತಿಗಳನ್ನು ಮೀರಿ, ಆಕಾಶದೆತ್ತರಕ್ಕೆ ನೀವೂ ಹಾರಬಹುದು.. ಎಂದು ತೋರಿಸಿಕೊಟ್ಟ ಪುಸ್ತಕ..

ಇವುಗಳಲ್ಲಿ ಸೂತ್ರಗಳೂ ಇವೆ. ಪ್ರೇಮದಿಂದಲೇ ದುಡಿಯುತ್ತಿರಬೇಕು. ನನ್ನ ದಾರಿಗಡ್ಡ ಬಂದವರನ್ನು ಕ್ಷಮಿಸಬೇಕು. ಕ್ಷಮಿಸುವ ಸಾಮರ್ಥ್ಯವಿಲ್ಲದವನ ಚೈತನ್ಯ ಉನ್ನತಿಗೇರದು

- Advertisement -
- Advertisement -

ಪುಟಕ್ಕಿಟ್ಟ ಪುಟಗಳು – ಜೊನಾತನ್ ಲಿವಿಂಗ್‍ಸ್ಟನ್ ಸೀಗಲ್ ರಿಚರ್ಡ್ ಬ್ಯಾಕ್

  • ಯೋಗೇಶ್ ಮಾಸ್ಟರ್

ಸಮುದ್ರದ ಬೆಳ್ಳಕ್ಕಿಯೊಂದರ ದೃಷ್ಟಾಂತವೇ ಜೊನಾತನ್ ಲಿವಿಂಗ್‍ಸ್ಟನ್ ಸೀಗಲ್. 1972ರಲ್ಲಿ ಪ್ರಕಟವಾದ ರಿಚರ್ಡ್‍ರವರ ಈ ಕತೆ ಮಿಲಿಯನುಗಟ್ಟಲೆ ಪ್ರತಿಗಳು ಮುದ್ರಿತವಾದವು.

ಎಳೆಯ ವಯಸ್ಸಿನ ಜೊನಾತನ್ ಎಂಬ ಸೀಗಲ್ ಮೊದಮೊದಲು ತಾನೂ ಇತರ ಸಮುದ್ರದ ಬೆಳ್ಳಕ್ಕಿಗಳಂತೆ ಅವುಗಳೊಡನೆ ಇದ್ದವನೇ. ಆದರೆ ಆ ಹಕ್ಕಿಗಳು ಬದುಕಿದ್ದದ್ದೇ ಬರೀ ತಿನ್ನುವುದಕ್ಕೆ. ತಿನ್ನುವುದು ಮತ್ತು ತಿಂದು ಬದುಕಿರುವುದು ಅವುಗಳ ಬದುಕು. ಅದೇ ಅವುಗಳ ರೂಢಿ. ಹಾಗಿರುವುದೇ ತಮ್ಮ ಹಣೆಬರಹ ಎಂಬುದು ಆ ಹಕ್ಕಿಗಳ ಸಮಾಜದ ನಂಬಿಕೆ. ಆದರೆ ಜೊನಾತನಿಗೆ ಅದು ಬಹಳ ಬೇಸರ. ಹೊಸತನ್ನು ಮಾಡುವ ತುಡಿತ. ತಿನ್ನುವುದಕ್ಕಷ್ಟೇ ಹಾರುವುದರ ಹೊರತಾಗಿ ದೂರಕ್ಕೆ, ಎತ್ತರಕ್ಕೆ, ಹೊಸತಿಗೆ ವೇಗದಲ್ಲಿ ಸಾಗುವ ಅದಮ್ಯ ಬಯಕೆ. ಅವನ ಹಾರುವ ಕನಸಿನ ಶಕ್ತಿಯನ್ನು ಸೀಮಿತಗೊಳಿಸುವ ಅವನ ಪರಿವಾರದೊಂದಿಗೆ ಅವನ ಸಂಘರ್ಷ. ಅವನದು ಉದ್ಧಟತನವೆಂದು ಸೀಗಲ್ ಹಕ್ಕಿಗಳ ಪರಿವಾರ ಅವನನ್ನು ಬಹಿಷ್ಕರಿಸಿದಾಗ ಅವನು ಒಂಟಿ.

ಒಂಟಿಯಾಗಿ ಸಾಗಿದಾಗಲೇ ಹೊಸ ಶಕ್ತಿಗಳ ಪರಿಚಯ. ಅದರಂತೆ ಅವನಿಗೆ ಉನ್ನತಕ್ಕೆ ಹಾರಲು ಉತ್ತೇಜಿಸುವ ಪಕ್ಷಿಗಳ ಸಹವಾಸವಾಗಿ ಅವನು ತರಾವರಿಯಾಗಿ ಬಾನಂಗಳದಲ್ಲಿ ಹಾರಲು ಕಲಿಯುವನು. ವಿವಿಧ ಒಳನೋಟ ಮತ್ತು ಹಾರುವ ಪಾಠಗಳೊಂದಿಗೆ ತನ್ನ ಪರಿವಾರಕ್ಕೆ ಮರಳುವನು.

ಈಗ ಜೊನಾತನನೇ ಗುರು. ಇತರ ಸೀಗಲ್ಲುಗಳು ಅವನಿಂದ ಹಾರಲು ಕಲಿಯುವವು. ತಮ್ಮಲ್ಲಿಯೂ ಅಮಿತವಾದ ಶಕ್ತಿ ಇದೆ ಎಂದು ಅರಿಯುವವು. ಒಟ್ಟಾರೆ ಪರಿವಾರವು ನನ್ನ ಬಗ್ಗೆ ಏನೇ ಹೇಳಿದರೂ, ನಾನು ನಾನಾಗಿ ಇರಲು ಸಂಪೂರ್ಣ ಸ್ವಾತಂತ್ರ್ಯವನ್ನು ನಾನೇ ಪಡೆದುಕೊಳ್ಳಬೇಕು ಎಂದು ಅರ್ಥಮಾಡಿಕೊಳ್ಳುವವು. ಮಿತಿಗಳನ್ನು ಮೀರುವ ನನ್ನ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಇಲ್ಲೇ ಈಗಲೇ ನಾನೇ ಪಡೆದುಕೊಳ್ಳಬೇಕು. ನನ್ನತನದ ದಾರಿಯಲ್ಲಿ ಯಾವುದೂ ನನ್ನ ತಡೆಯಲಾಗದು, ನಾನು ಏನಾಗಬೇಕೆಂದು ಬಯಸುತ್ತೇನೆಯೋ ಅದು ಈಗಾಗಲೇ ಆಗಿರುವಂತೆ ಭಾವಿಸಿ, ಆ ಭಾವಶಕ್ತಿಯಿಂದಲೇ ಸಾಧಿಸುವುದು; ಇವೇ ಆ ಪ್ರೇರಣೆಗಳು.

ಇವುಗಳಲ್ಲಿ ಸೂತ್ರಗಳೂ ಇವೆ. ಪ್ರೇಮದಿಂದಲೇ ದುಡಿಯುತ್ತಿರಬೇಕು. ನನ್ನ ದಾರಿಗಡ್ಡ ಬಂದವರನ್ನು ಕ್ಷಮಿಸಬೇಕು. ಕ್ಷಮಿಸುವ ಸಾಮರ್ಥ್ಯವಿಲ್ಲದವನ ಚೈತನ್ಯ ಉನ್ನತಿಗೇರದು.

ಪುಟಪುಟಗಳಲ್ಲಿಯೂ ತಾತ್ವಿಕತೆಯ ಒಳನೋಟಗಳನ್ನು ಹಂಚಿಕೊಳ್ಳುವ ಜೊನಾತನ್ ಅಷ್ಟೊಂದು ಜನಪ್ರಿಯವಾಗಿದ್ದು ನಾನಾ ಕಾರಣಗಳಿಂದ.

ಸ್ವತಃ ಪೈಲೆಟ್ ಆಗಿದ್ದ ರಿಚರ್ಡ್ ಬ್ಯಾಕ್ ತಮ್ಮ ಹಾರುವಿಕೆಯಲ್ಲಿ ಕಂಡುಕೊಂಡಿದ್ದ ಸತ್ಯ, ಸೌಂದರ್ಯ ಮತ್ತು ಅನುಭವಗಳನ್ನೆಲ್ಲಾ ಜೊನಾತನ್ ಸೀಗಲ್ಲಿನಲ್ಲಿ ಪ್ರತಿಫಲಿಸಿದ್ದರು. ಅವರ ಅನುಭವಗಳ ಗಾಢತೆ ಅನುಭೂತಿಯಾಗಿ ಆಧ್ಯಾತ್ಮಿಕತೆಯ ಒಳನೋಟಗಳನ್ನೂ ಈ ಪುಸ್ತಕ ಫಲಿಸಿತ್ತು. ವ್ಯಕ್ತಿಗತವಾಗಿ ಯಾರೊಬ್ಬರೂ ತಮ್ಮ ಮಿತಿಗಳನ್ನು ಮೀರಲು ಇರುವ ಸಾಧ್ಯತೆಗಳ ಕಂಡುಕೊಳ್ಳಲು ಪ್ರೇರಣೆಯಾಗಿತ್ತು. ಸಾಂಪ್ರದಾಯಿಕವಾದ ಸಮಾಜದ ಚೌಕಟ್ಟುಗಳ ಮಿತಿಗಳನ್ನು ಮೀರಲು ಉತ್ತೇಜಿಸಿತ್ತು. ಮಿಗಿಲಾಗಿ ಪುಸ್ತಕ ಓದುತ್ತಿದ್ದರೆ ಜೊನಾತನ್ ಬದುಕನ್ನು ದೃಶ್ಯದಲ್ಲಿಯೇ ಕಟ್ಟಿಕೊಡುವಂತಹ ಶೈಲಿ ಬರವಣಿಗೆಯದಾಗಿತ್ತು.

ಈಗಲೂ ಜೊನಾತನ್ ಬಲ್ಲವರಿಗೆ ಅದೊಂದು ಪ್ರೇರಣೆಯ ರೂಪಕ ಶಕ್ತಿಯೇ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...