Homeಅಂಕಣಗಳುಜೆಎನ್‍ಯು ಘಟನೆ: ಸಂಪೂರ್ಣ ಹಿನ್ನೆಲೆ ಮತ್ತು ಉತ್ತರವಿಲ್ಲದ ಪ್ರಶ್ನೆಗಳು - ಪ್ರೊ. ಪುರುಷೋತ್ತಮ ಬಿಳಿಮಲೆ

ಜೆಎನ್‍ಯು ಘಟನೆ: ಸಂಪೂರ್ಣ ಹಿನ್ನೆಲೆ ಮತ್ತು ಉತ್ತರವಿಲ್ಲದ ಪ್ರಶ್ನೆಗಳು – ಪ್ರೊ. ಪುರುಷೋತ್ತಮ ಬಿಳಿಮಲೆ

- Advertisement -
- Advertisement -

ದೇಶದ ಹೆಮ್ಮೆಯ, ಪ್ರತಿಷ್ಠಿತ ಜೆಎನ್‍ಯೂ ಈಗ ಕಾದ ಕುಲುಮೆಯಂತಾಗಿದೆ. ಕೆಲ ಮುಸುಕುಧಾರಿಗಳು ಜನವರಿ 5ರ ರಾತ್ರಿ ಕ್ಯಾಂಪಸ್‍ಗೆ ನುಗ್ಗಿ ಮಾರಕಾಸ್ತ್ರಗಳಿಂದ ವಿದ್ಯಾರ್ಥಿಗಳನ್ನು ಥಳಿಸಿದ ಘಟನೆ ಇಡಿ ದೇಶವೇ ಬೆಚ್ಚಿಬೀಳುವಂತೆ ಮಾಡಿದೆ. ಇದು ದೇಶದ ಆತ್ಮದ ಮೇಲಾದ ಪ್ರಹಾರ. ಹಲ್ಲೆ ಮಾಡಿದವರು ಬಿಜೆಪಿ ಬೆಂಬಲಿತ ಎಬಿವಿಪಿ ಸಂಘಟನೆಯವರು ಎಂಬ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಜೆಎನ್‍ಯೂವಿನ ಕನ್ನಡ ಭಾಷಾ ವಿಭಾಗದ ಮುಖ್ಯಸ್ಥರಾದ ಪ್ರೊ. ಪುರುಷೋತ್ತಮ ಬಿಳಿಮಲೆಯವರು ಇಡೀ ಘಟನೆಯ ಚಿತ್ರಣ ಮತ್ತು ಅದರ ಹಿಂದಿರುವ ಹುನ್ನಾರವನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.

ಜೆಎನ್‍ಯುನಲ್ಲಿ ಕಳೆದೆರಡು ತಿಂಗಳುಗಳಿಂದ ಹಾಸ್ಟೆಲ್ ಶುಲ್ಕ ಹೆಚ್ಚಳದ ವಿರುದ್ಧ ವಿದ್ಯಾರ್ಥಿಗಳು ಹೋರಾಟ ಮಾಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಸರಕಾರವೇ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಶುಲ್ಕ ಹೆಚ್ಚು ಮಾಡಿದರೆ ಅದರಿಂದ ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂಬುದು ವಿದ್ಯಾರ್ಥಿಗಳ ವಾದ. ವಿಶ್ವವಿದ್ಯಾಲಯದ ಅಧಿಕೃತ ಮಾಹಿತಿಯಂತೆ 2019-20ರ ಅವಧಿಯಲ್ಲಿ ಶೇ.40ಕ್ಕೂ ಹೆಚ್ಚು ಮಕ್ಕಳ ತಂದೆ ತಾಯಿಗಳು ಬಡತನದ ರೇಖೆಯಿಂದ ಕೆಳಗೆ ಇರುವವರು. ಹಾಗೆ ನೋಡಿದರೆ, ಜೆಎನ್‍ಯು ವನ್ನು ಬಡ ವಿದ್ಯಾರ್ಥಿಗಳು ದೆಹಲಿಗೆ ಬಂದು ಓದಲೆಂದೇ 1968ರಲ್ಲಿ ವಿಶೇಷ ಕಾಯ್ದೆ ತಂದು ಹುಟ್ಟು ಹಾಕಲಾಯಿತು. ಇದರ ಜೊತೆಗೆ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಶುಲ್ಕವನ್ನು 2019ರ ಅಕ್ಟೋಬರ್ ತಿಂಗಳಲ್ಲಿ ಏಕಪಕ್ಷೀಯವಾಗಿ ಹೆಚ್ಚು ಮಾಡಲಾಯಿತು. ಇದು ವರ್ಷದ ನಡುವೆ ಆದ್ದರಿಂದ ಅನೇಕ ಸಮಸ್ಯೆಗಳನ್ನು ಹುಟ್ಟು ಹಾಕಿತು. ವಿದ್ಯಾರ್ಥಿಗಳು ಒಂದೋ ಹೆಚ್ಚುವರಿ ಶುಲ್ಕ ಕಟ್ಟಬೇಕು, ಇಲ್ಲವೇ ಸೆಮಿಸ್ಟರ್ ತ್ಯಜಿಸಿ ಮನೆಗೆ ಹಿಂದಿರಬೇಕು. ಬಹುತೇಕ ವಿದ್ಯಾರ್ಥಿಗಳು ಹೇಳಿದಂತೆ, ಈ ಬಗೆಯ ಶುಲ್ಕ ಹೆಚ್ಚಳವನ್ನು ವರ್ಷದ ಮಧ್ಯದಲ್ಲಿ ಮಾಡಬಾರದು. ವರ್ಷದಾರಂಭದಲ್ಲಿ ಮಾಡಿದರೆ, ಶುಲ್ಕ ಕಟ್ಟಲು ಸಾಧ್ಯ ಇರುವವರು ಮಾತ್ರ ಪ್ರವೇಶ ಪಡೆಯುತ್ತಾರೆ.

ಆದರೆ ದುರದೃಷ್ಟವಶಾತ್ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಜಗದೀಶ್ ಕುಮಾರ್ ಮತ್ತು ಕುಲಸಚಿವರಾದ ಶ್ರೀ ಪ್ರಮೋದ್ ಕುಮಾರ್ ಅವರು ವಿದ್ಯಾರ್ಥಿಗಳ ಬೇಡಿಕೆಗೆ ಸೊಪ್ಪು ಹಾಕಲೇ ಇಲ್ಲ. ಇದು ವಿದ್ಯಾರ್ಥಿಗಳನ್ನು ರೊಚ್ಚಿಗೆಬ್ಬಿಸಿತು. ನವಂಬರ ತಿಂಗಳಿಂದ ಅವರು ತರಗತಿಗಳನ್ನು ಬಹಿಷ್ಕರಿಸಿದರು. ಹಾಸ್ಟೆಲ್ ಶುಲ್ಕ ಇಳಿಸುವವರೆಗೆ ತರಗತಿಗಳಿಗೆ ಹಾಜರಾಗುವುದಿಲ್ಲ ಎಂದು ಅವರು ಹೇಳಿದರು. ಚುನಾವಣೆಯ ಮೂಲಕ ಆಯ್ಕೆಯಾದ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನೂ ಅಧ್ಯಾಪಕರ ಸಂಘದ ಪದಾಧಿಕಾರಿಗಳನ್ನೂ ಭೇಟಿ ಮಾಡಿ ವಿಷಯವನ್ನು ಚರ್ಚಿಸಲು ಅವರಿಬ್ಬರೂ ನಿರಾಕರಿಸಿದರು. ಪರಿಣಾಮವಾಗಿ ವಿದ್ಯಾರ್ಥಿಗಳು ಇನ್ನಷ್ಟು ಕೆರಳಿದರು. ಪರಿಣಾಮವಾಗಿ ನವಂಬರ ತಿಂಗಳ ಮೂರನೆಯ ವಾರದಲ್ಲಿ ಎಲ್ಲ ವಿದ್ಯಾರ್ಥಿಗಳೂ ಎಡ-ಬಲ ವ್ಯತ್ಯಾಸವಿಲ್ಲದೆ, ಒಂದಾಗಿ ವಿವಿಧ ರೀತಿಯ ಪ್ರತಿಭಟನೆಗಳಿಗೆ ಇಳಿದರು.  ದಶಂಬರ ತಿಂಗಳ ಕೊನೆಯ ವಾರದಲ್ಲಿ ನಡೆಯುವ ಮೊದಲನೇ ಸೆಮಿಸ್ಟರ್ ಪರೀಕ್ಷೆಗಳನ್ನೂ ಬಹಿಷ್ಕರಿಸಲು ಅವರು ನಿರ್ಧರಿಸಿದರು. ಆದರೂ ವಿವಿಯ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ.

ಈ ನಡುವೆ ಜೆಎನ್ಯುವಿನ ಒಟ್ಟಾರೆ ಪರಿಸ್ಥಿತಿಯನ್ನು ನವಂಬರ್ ಕೊನೆಯ ವಾರದಲ್ಲಿ ಉನ್ನತ ಶಿಕ್ಷಣ ಇಲಾಖೆಗೆ ವಿವರಿಸಲಾಯಿತು. ವಿದ್ಯಾರ್ಥಿಗಳ ಮತ್ತು ಅಧ್ಯಾಪಕರ ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಶೀಲಿಸಿದ ಇಲಾಖೆಯು ವಿಷಯವನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಿತು. ಸಮಿತಿಯು ಸಂಬಂಧಿಸಿದ ಎಲ್ಲರನ್ನೂ ಪ್ರತ್ಯೇಕವಾಗಿ ಭೇಟಿ ಮಾಡಿ, ವರದಿಯೊಂದನ್ನು ಸಿದ್ಧ ಪಡಿಸಿತು. ಅದನ್ನು ಕುಲಪತಿಗಳಿಗೆ ಕಳಿಸಿಕೊಡಲಾಯಿತು. ಆ ವರದಿಯ ಪ್ರಕಾರ, ವಿಶ್ವವಿದ್ಯಾಲಯವು ವರ್ಷದ ಮಧ್ಯೆ ಶುಲ್ಕವನ್ನು ಹೆಚ್ಚು ಮಾಡಿದ್ದು ಅಷ್ಟು ಸರಿಯಾದ ಕ್ರಮವಲ್ಲ, ಹಾಗೂ ಕೂಡಲೇ ಸಂಬಂಧಪಟ್ಟ ಎಲ್ಲರೊಡನೆಯೂ ಚರ್ಚಿಸಿ ಸೂಕ್ತವಾದ ತೀರ್ಮಾನವನ್ನು ತೆಗೆದುಕೊಂಡು ಇಲಾಖೆಗೆ ತಿಳಿಸಬೇಕು. ಇದರಿಂದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಸಮಾಧಾನ ಪಟ್ಟುಕೊಂಡರು. ಕುಲಪತಿಗಳಿಗೂ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಒಂದು ಅವಕಾಶ ಒದಗಿ ಬಂದಿತ್ತು. ಆದರೆ ದುರದೃಷ್ಟವೋ ಎಂಬಂತೆ ಕುಲಪತಿಗಳು ಸಂಬಂಧಪಟ್ಟವರೊಡನೆ ಚರ್ಚಿಸಲು ಮುಂದಾಗಲೇ ಇಲ್ಲ. ಮತ್ತೆ ಏಕಪಕ್ಷೀಯವಾಗಿ ಒಂದಷ್ಟು ಶುಲ್ಕವನ್ನು ಸಾಂಕೇತಿಕವಾಗಿ ಕಡಿಮೆ ಮಾಡಿ ಆದೇಶ ಹೊರಡಿಸಿದರು. ಇದರಿಂದ ವಿದ್ಯಾರ್ಥಿಗಳನ್ನು ಮತ್ತು ಅಧ್ಯಾಪಕರನ್ನು ಕುಲಪತಿಗಳು ಭೇಟಿ ಮಾಡುವ ಸಾಧ್ಯತೆಯೇ ಇಲ್ಲವೆಂಬುದು ನಮ್ಮಂಥವರಿಗೂ ತಿಳಿಯಿತು.

ಈ ನಡುವೆ ವಿದ್ಯಾರ್ಥಿಗಳು ಸೆಮಿಸ್ಟರ್ ಪರೀಕ್ಷೆಗಳನ್ನು ಬಹಿಷ್ಕರಿಸಿದ್ದರಿಂದ ಸಮಸ್ಯೆ ಇನ್ನಷ್ಟು ಬಿಗಡಾಯಿಸಿತು. ಮುಷ್ಕರದ ಸಂದರ್ಭದಲ್ಲಿ ಪರೀಕ್ಷೆ ನಡೆಸಲು ಅನುಕೂಲಕರವಾದ ವಾತಾವರಣ ಇಲ್ಲದಿರುವುದನ್ನು ಅಧ್ಯಾಪಕರೂ ಕುಲಪತಿಗಳ ಗಮನಕ್ಕೆ ತಂದರು. ಜೊತೆಗೆ ನವಂಬರ ಮತ್ತು ದಶಂಬರ ತಿಂಗಳುಗಳಲ್ಲಿ ಪಾಠಗಳೇ ನಡೆಯದ್ದರಿಂದ ಪರೀಕ್ಷೆ ನಡೆಸುವುದು ಸರಿಯಲ್ಲ ಎಂದು ವಿಶ್ವವಿದ್ಯಾಲಯಕ್ಕೆ ವಿವರ ನೀಡಲಾಯಿತು. ವಿದ್ಯಾರ್ಥಿಗಳೂ ಸೆಂಟರ್‍ಗಳಿಗೆ ಬೀಗ ಹಾಕಿ ಯಾರೂ ಒಳಹೋಗದಂತೆ ಮಾಡಿದರು. ಇದನ್ನು ಕೂಡಾ ಗಂಭೀರವಾಗಿ ತೆಗೆದುಕೊಳ್ಳದ ಅಧಿಕಾರಿಗಳು ಇಮೇಲ್ ಮತ್ತು ವಾಟ್ಸಾಪ್ ಮೂಲಕ ಪರೀಕ್ಷೆ ನಡೆಸಿ ಎಂದು ಅಧ್ಯಾಪಕರಿಗೆ ಸೂಚಿಸಿ, ದೇಶದಾದ್ಯಂತ ನಗೆಪಾಟಲಿಗೆ ಈಡಾಯಿತು. ಆದರೂ ಕೆಲವರು ಈ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸಿದ್ದಾರಂತೆ. ಇಂಥ ಪರೀಕ್ಷೆಗಳಿಗೆ ಯಾವ ಮನ್ನಣೆಯಿದೆಯೋ ಕಾಲವೇ ಹೇಳಬೇಕು.

ಅಧ್ಯಾಪಕರ ಸಂಘವು, ಉನ್ನತ ಶಿಕ್ಷಣ ಇಲಾಖೆಯ ಸೂಚನೆ ಪ್ರಕಾರ ವರ್ಷದ ನಡುವೆ ಶುಲ್ಕ ಹೆಚ್ಚು ಮಾಡುವುದು ಬೇಡವೆಂದೂ, ಮೊದಲ ಸೆಮಿಸ್ಟರ್‍ನ ಅವಧಿಯನ್ನು ಜನವರಿ ಕೊನೆವರೆಗೆ ವಿಸ್ತರಿಸಿ, ಪರೀಕ್ಷೆಗಳನ್ನು ನಡೆಸಬಹುದೆಂದೂ, ಎರಡನೆಯ ಸೆಮಿಸ್ಟರ್‍ನ್ನು ಮೇ ಕೊನೆವರೆಗೆ ಮುಂದೂಡಿದರೆ, ಬೇಸಗೆ ರಜೆಯನ್ನು ಮರೆತು, ನಾವೆಲ್ಲ ಕೆಲಸ ಮಾಡಲು ಸಿದ್ಧವೆಂದೂ ವಿವಿಗೆ ಪತ್ರ ಬರೆಯಿತು. ಆದರೆ ಕುಲಪತಿಗಳು ಅದಕ್ಕೆ ಯಾವುದೇ ಮಹತ್ವ ಕೊಡಲಿಲ್ಲ. ಪರಿಸ್ಥಿತಿ ಬಿಗಡಾಯಿಸುವುದನ್ನು ಕಂಡು ವಿಶ್ವವಿದ್ಯಾಲಯದ ಸರ್ವೋನ್ನತ ಅಧಿಕಾರಿಗಳಿಗಾದ ಸನ್ಮಾನ್ಯ ರಾಷ್ಟ್ರಪತಿಗಳಿಗೂ ಅಧ್ಯಾಪಕರ ಸಂಘವು ಪತ್ರ ಬರೆದು ವಿಷಯದ ಗಂಭೀರತೆಯ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಟ್ಟಿತು. ಅಲ್ಲಿಂದ ಯಾವುದೇ ಪತ್ರ ಬರಲಿಲ್ಲ.

ಈ ನಡುವೆ ಜನವರಿ 3ರಂದು ಕುಲಸಚಿವರು ‘ಎರಡನೆಯ ಸೆಮಿಸ್ಟರ್‍ಗೆ ನೋಂದಣಿ ಅರಂಭವಾಗಿದೆಯೆಂದೂ, ಅದಕ್ಕಾಗಿ ಜನವರಿ 4 ಮತ್ತು 5 ರಜಾ ದಿನಗಳಾದರೂ ವಿವಿ ಕೆಲಸ ಮಾಡುತ್ತದೆಂದೂ ಆದೇಶ ಹೊರಡಿಸಿತು. ಮುಷ್ಕರ ನಿರತ ವಿದ್ಯಾರ್ಥಿಗಳು ನೋಂದಣಿಯನ್ನು ತಡೆಯಲು ಸಿದ್ಧರಾದರು. ಈ ಆದೇಶದ ಪ್ರಕಾರ ಜನವರಿ 4ರಂದು ಕೆಲವು ವಿದ್ಯಾರ್ಥಿಗಳು ಎರಡನೇ ಸೆಮಿಸ್ಟರ್‍ಗೆ ಹೆಸರನ್ನು ನೋಂದಣಿ ಮಾಡಲು ಕೇಂದ್ರಗಳಿಗೆ ಹೋಗಿದ್ದಾರೆ. ಅವರನ್ನು ಮುಷ್ಕರ ನಿರತ ವಿದ್ಯಾರ್ಥಿಗಳು ತಡೆದಿದ್ದಾರೆ. ಆಗ ಸಣ್ಣಪುಟ್ಟ ಹೊಡೆದಾಟವೂ ನಡೆದಿದೆ. ಅದರ ವಿಡಿಯೋಗಳು ಎಲ್ಲ ಕಡೆಯೂ ಹರಿದಾಡಿತು. ಆಗಲಾದರೂ ವಿಶ್ವವಿದ್ಯಾಲಯದ ಅಧಿಕಾರಿಗಳು ಎಚ್ಚೆತ್ತು ಸೂಕ್ತ ಕ್ರಮ ಕೈಗೊಂಡಿದ್ದರೆ ಜನವರಿ 5ರ ಘಟನೆಗಳೇ ನಡೆಯುತ್ತಿರಲಿಲ್ಲ.

ಜನವರಿ ನಾಲ್ಕರಂದು ನಡೆದ ವಿದ್ಯಾರ್ಥಿಗಳ ನಡುವಣ ಸಂಘರ್ಷವನ್ನು ಗಂಭೀರವಾಗಿ ಪರಿಗಣಿಸಿದ ಅಧ್ಯಾಪಕರು ಜನವರಿ 5ರಂದು ಸಾಯಂಕಾಲ 4 ಗಂಟೆಗೆ ಸಭೆ ನಡೆಸಿ, ಶಾಂತಿ ಕಾಪಾಡಿಕೊಳ್ಳಬೇಕಾದ್ದು ತುರ್ತು ಅಗತ್ಯ ಎಂಬ ನಿರ್ಣಯ ಕೈಗೊಂಡು ಎಲ್ಲರಿಗೂ ಆ ಸಂದೇಶವನ್ನು ತಲುಪಿಸಿತು ಮತ್ತು ಸಾಯಂಕಾಲ 6 ಗಂಟೆಗೆ ‘ಶಾಂತಿಗಾಗಿ ನಡೆ’ ಎಂಬ ಕಾರ್ಯಕ್ರಮವನ್ನು ಕ್ಯಾಂಪಸ್ಸಿನೊಳಗೆ ಹಮ್ಮಿಕೊಂಡಿತು. ಆ ಪ್ರಕಾರ ಜನವರಿ 5ರಂದು ಶಾಂತಿ ನಡೆಗೆ ಅಧ್ಯಾಪಕರು ದೊಡ್ಡ ಸಂಖ್ಯೆಯಲ್ಲಿ ವಿಶ್ವವಿದ್ಯಾಲಯದ ಮುಖ್ಯ ಗೇಟಿನ ಬಳಿ ಸಭೆ ಸೇರುತ್ತಿದ್ದಂತೆಯೇ ಇದ್ದಕ್ಕಿದ್ದಂತೆ ಸುಮಾರು 40-50 ಮುಸುಕುಧಾರಿಗಳು ಅಧ್ಯಾಪಕರತ್ತ ನುಗ್ಗಿದರು. ಅವರ ಎಲ್ಲರ ಕೈಯಲ್ಲಿ ದೊಣ್ಣೆಗಳಿದ್ದುವು. ದೊಡ್ಡ ದೊಡ್ಡ ಕಲ್ಲುಗಳಿದ್ದುವು. ಅವರು ಆಕ್ರಮಣಕಾರಿಗಳಾಗಿದ್ದರು. ಈ ಆಕ್ರಮಣಕ್ಕೆ ತಯಾರಾಗಿರದ ಅಧ್ಯಾಪಕರು ಕೂಡಲೇ ಅಲ್ಲಿಂದ ಚದುರಬೇಕಾಯಿತು. ಅಷ್ಟೇನೂ ಆರೋಗ್ಯವಿಲ್ಲದ ನಾನು ಕೂಡಾ ಗೇಟಿಂದ ಹೊರಬಂದೆ. ಆ ಹೊತ್ತಿಗೆ ಆಕ್ರಮಣಕಾರರನ್ನು ತಡೆದ ಕೆಲವು ಅಧ್ಯಾಪಕರ ಮೇಲೆ ಮತ್ತು ವಿದ್ಯಾರ್ಥಿಗಳ ಹಲ್ಲೆ ನಡೆಸಲಾಯಿತು.

ಮುಂದಿನ ಮೂರು ಗಂಟೆಯಲ್ಲಿ ಏನು ನಡೆಯಿತು ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಮುಸುಕುಧಾರಿಗಳು ವಿದ್ಯಾರ್ಥಿಗಳಲ್ಲ ಎಂಬುದು ನನ್ನ ಖಚಿತ ತಿಳಿವಳಿಕೆ. ವಿದ್ಯಾರ್ಥಿಗಳು ಎಡವೇ ಇರಲಿ, ಬಲವೇ ಇರಲಿ, ಅವರು ತಮ್ಮ ಅಧ್ಯಾಪಕರ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಲಾರರು. ಅದು ಯಾವಾಗಲೂ ಬಾಡಿಗೆಯ ಗೂಂಡಾಗಳಿಂದಲೇ ನಡೆಯುತ್ತದೆ. ಆದರೆ, ಈ ಆಕ್ರಮಣಕಾರರಿಗೆ ಯಾರು ಎಲ್ಲಿ ಇದ್ದಾರೆ ಎಂಬ ಸೂಕ್ಷ್ಮ ತಿಳಿವಳಿಕೆಯಿತ್ತು. ಹಾಸ್ಟೆಲ್‍ಗಳಲ್ಲಿ ಇದ್ದ ಕಾಶ್ಮೀರಿ ಮತ್ತು ಮುಸ್ಲಿಂ ವಿದ್ಯಾರ್ಥಿಗಳನ್ನು ಹುಡುಕಿ ಥಳಿಸಲಾಗಿದೆ. ವಿಶ್ವವಿದ್ಯಾಲಯದ ಸಾಮಗ್ರಿಗಳನ್ನು ನಾಶ ಮಾಡಲಾಗಿದೆ. ಭಯದ ವಾತಾವರಣವನ್ನು ಹುಟ್ಟು ಹಾಕಲಾಗಿದೆ. ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯಿಷಿ ಘೋಷ್ ಅವರ ಮೇಲೆ ತಲೆಗೆ ಕಬ್ಬಿಣದ ಸರಳಿನಿಂದ ಹೊಡೆಯಲಾಗಿದೆ. ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಸಿಗದಾಯಿತು. ಈ ಕುರಿತು ನಿಮಗೆಲ್ಲ ತಿಳಿದಿದೆ.

ಒಂಬತ್ತು ಗಂಟೆಗೆ ಐದು ನಿಮಿಷ ಇರುವಾಗ ಕುಲಸಚಿವರ ಸಂದೇಶ ನಮಗೆಲ್ಲರಿಗೂ ತಲುಪಿತು ‘ವಿಶ್ವವಿದ್ಯಾಲಯದಲ್ಲಿ ಗಲಭೆಗಳು ನಡೆಯುತ್ತಿರುವುದರಿಂದ ಪೊಲೀಸರನ್ನು ಕರೆಸಲಾಗುವುದು’ ಎಂದು ಅದರಲ್ಲಿ ತಿಳಿಸಲಾಗಿತ್ತು. ವಿವಿಯ ಎಲ್ಲಾ ಗೇಟುಗಳನ್ನು ಮುಚ್ಚಲಾಯಿತು. ರಾತ್ರಿ ಒಂಬತ್ತು ಗಂಟೆ ಐದು ನಿಮಿಷಕ್ಕೆ ಪೊಲೀಸರು ಕ್ಯಾಂಪಸ್‍ನ ಒಳಗೆ ಬಂದು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಆದರೆ ಅಷ್ಟರಲ್ಲಿ ಎಲ್ಲಾ ಮುಸುಕುಧಾರಿಗಳೂ ಪರಾರಿಯಾಗಿದ್ದರು. ಮುಚ್ಚಿದ ಗೇಟುಗಳು ಅವರಿಗಾಗಿ ತೆರೆದಿತ್ತು.

ಜೆಎನ್‍ಯುವಿಗೆ ತನ್ನದೇ ಆದ ಭದ್ರತಾ ವ್ಯವಸ್ಥೆ ಇದೆ. ಸುಮಾರು 50 ಜನ ಮುಸುಕುಧಾರಿಗಳು ವಿವಿ ಆವರಣಕ್ಕೆ ನುಗ್ಗಿ ಹಲ್ಲೆ ಮಾಡುವಾಗ ಅವರೇನು ಮಾಡುತ್ತಿದ್ದರು ಎಂದು ನಮಗ್ಯಾರಿಗೂ ತಿಳಿದಿಲ್ಲ. ಆರು ಗಂಟೆಗೆ ಆರಂಭವಾದ ಆಕ್ರಮಣವು 9 ಗಂಟೆವರೆಗೆ ಮುಂದುವರಿಯುವವರೆಗೂ ವಿಶ್ವವಿದ್ಯಾಲಯದ ಆಡಳಿತ ಏನು ಮಾಡುತ್ತಿತ್ತೆಂದೂ ತಿಳಿಯದು. ಪೊಲೀಸರು ಒಳಗೆ ಬರುವ ಹೊತ್ತಿಗೆ ವಿವಿಯ ಎಲ್ಲಾ ಗೇಟುಗಳನ್ನೂ ಮುಚ್ಚಲಾಗಿತ್ತು. ಆದರೂ ಮುಸುಕುಧಾರೀ ಗಲಭೆಕೋರರು ಹೊರಗೆ ಹೋಗಲು ಅವಕಾಶ ಹೇಗೆ ಯಾರು ಮಾಡಿಕೊಟ್ಟರು?

ಇಷ್ಟೆಲ್ಲಾ ಆಗುವಾಗ, ವಿಶ್ವವಿದ್ಯಾಲಯದ ಕುಲಪತಿಗಳು ಉನ್ನತ ಶಿಕ್ಷಣ ಇಲಾಖೆಯ ಸೂಚನೆ ಇದ್ದಾಗ್ಯೂ ಕನಿಷ್ಠ ಒಮ್ಮೆಯಾದರೂ ವಿದ್ಯಾರ್ಥಿಗಳ ಜೊತೆ ಯಾಕೆ ಮಾತಾಡಲು ಸಿದ್ಧರಿಲ್ಲ ಎಂಬುದೂ ನನಗೆ ಅರ್ಥವಾಗುತ್ತಿಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...