Homeಮುಖಪುಟಮಹಾರಾಷ್ಟ್ರದ ಜಂಗೀ ಕುಸ್ತಿ : ‘ಮೋಶಾ' ಜೋಡಿಯ ಚಿತ್ತು ಮಾಡಿದ ಪವಾರ್

ಮಹಾರಾಷ್ಟ್ರದ ಜಂಗೀ ಕುಸ್ತಿ : ‘ಮೋಶಾ’ ಜೋಡಿಯ ಚಿತ್ತು ಮಾಡಿದ ಪವಾರ್

ಅಧಿಕಾರಕ್ಕಾಗಿ ನಡೆದ ಈ ನಿರ್ಲಜ್ಜ ಕುಣಿತದಲ್ಲಿ ಎಲ್ಲ ಪಕ್ಷಗಳೂ ಒಂದಲ್ಲ ಒಂದು ರೀತಿಯಲ್ಲಿ ಬೆತ್ತಲಾಗಿವೆ.

- Advertisement -
- Advertisement -

ನಾಟಕೀಯ ರಾಜಕಾರಣದಲ್ಲಿ ಕರ್ನಾಟಕವನ್ನು ಮೀರಿಸುವ ಮತ್ತೊಂದು ರಾಜ್ಯವಿಲ್ಲ ಎಂದು ರಾಜಧಾನಿ ದೆಹಲಿಯ ರಾಜಕೀಯ ಮತ್ತು ಮಾಧ್ಯಮ ವಲಯಗಳು ಲೇವಡಿ ಮಾಡುತ್ತಿದ್ದುದು ಉಂಟು. ಆದರೆ ನೆರೆಯ ರಾಜ್ಯ ಮಹಾರಾಷ್ಟ್ರದ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಕರ್ನಾಟಕದ ‘ನಾಟಕದ ಕೀರ್ತಿ’ಯನ್ನು ಕಸಿಯಲು ಪೈಪೋಟಿ ನಡೆಸಿದಂತಿವೆ.

ಅಡ್ಡದಾರಿಯನ್ನಾದರೂ ಹಿಡಿದು ಅಧಿಕಾರ ಕೈವಶ ಮಾಡಿಕೊಳ್ಳುವ ಮೋದಿ-ಅಮಿತ್ ಶಾ ಅವರ ತಂತ್ರಗಾರಿಕೆಯ ರಾಜಕಾರಣ ಮಹಾರಾಷ್ಟ್ರದಲ್ಲಿ ಹಿಮ್ಮೆಟ್ಟಿರುವುದು ಗಮನಾರ್ಹ ಬೆಳವಣಿಗೆ. ಎಂಬತ್ತರ ಇಳಿವಯಸ್ಸಿನಲ್ಲಿಯೂ ಏಟಿಗೆ ಎದುರೇಟು ನೀಡಿದ್ದಾರೆ ಶರದ್ ಪವಾರ್. ಅಧಿಕಾರ ರಾಜಕಾರಣದ ಏಳುಬೀಳುಗಳು, ಪಟ್ಟು ಪ್ರತಿಪಟ್ಟುಗಳಲ್ಲಿ ಸಣ್ಣವಯಸ್ಸಿನಿಂದಲೇ ಪಳಗಿರುವ ಪವಾರ್ ಸಾಮಥ್ರ್ಯವನ್ನು ಕಡೆಗಣಿಸಿದ ‘ಮೋಶಾ’ ಜೋಡಿ ಅನಿರೀಕ್ಷಿತ ಎದುರೇಟಿಗೆ ತತ್ತರಿಸಿ ತಡವರಿಸಿದೆ. ತತ್ವರಹಿತ ರಾಜಕಾರಣಕ್ಕೆ ‘ಚಾಣಕ್ಯತಂತ್ರ’ವೆಂದು ವೈಭವೀಕರಿಸುವ ಪ್ರವೃತ್ತಿ ಮುಖಭಂಗ ಎದುರಿಸಿದೆ.

ಆದರೆ ಕರ್ನಾಟಕದ ಉದಾಹರಣೆಯನ್ನು ನೋಡಿದರೆ ಈ ಹಿನ್ನಡೆ ತಾತ್ಕಾಲಿಕವೇ ಇದ್ದೀತು. 2018ರ ಚುನಾವಣೆಗಳು ರಾಜ್ಯದಲ್ಲಿ ತ್ರಿಶಂಕು ವಿಧಾನಸಭೆಯನ್ನು ಚಿಮ್ಮಿಸಿದಾಗ ಮುಖ್ಯಮಂತ್ರಿ ಹುದ್ದೆಯನ್ನು ಜಾತ್ಯತೀತ ಜನತಾದಳಕ್ಕೆ ಬಿಟ್ಟುಕೊಟ್ಟು ಸರ್ಕಾರ ರಚನೆಗೆ ಮುಂದಾಗಿತ್ತು ಕಾಂಗ್ರೆಸ್ ಪಕ್ಷ. ಬಹುಮತ ಸಿಗದಿದ್ದರೂ ಏಕೈಕ ದೊಡ್ಡ ಪಕ್ಷವಾಗಿ ಹೊಮ್ಮಿದ್ದ ಬಿಜೆಪಿಯನ್ನು ಸರ್ಕಾರ ರಚಿಸುವಂತೆ ರಾಜ್ಯಪಾಲರು ಆಹ್ವಾನಿಸಿದ್ದರು. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ನವರು ವಿಶ್ವಾಸಮತ ಸಾಬೀತುಮಾಡುವ ಮುನ್ನವೇ ಸೋಲೊಪ್ಪಿ ರಾಜೀನಾಮೆ ನೀಡಿದ್ದರು.

ದಳ ಮತ್ತು ಕಾಂಗ್ರೆಸ್ ಪಕ್ಷ ರಚಿಸಿದ್ದ ಸರ್ಕಾರ ‘ನಾಯಿ ತಲೆಮೇಲಿನ ಬುತ್ತಿ’ಯಾಗಿತ್ತು. ಹಲವು ವಿಫಲ ಯತ್ನಗಳ ನಂತರ ಮೋಶಾ ಮಾರ್ಗದರ್ಶನ ದಲ್ಲಿ ದಳ-ಕಾಂಗ್ರೆಸ್ ಸರ್ಕಾರವನ್ನು ವರ್ಷದೊಪ್ಪತ್ತಿನಲ್ಲಿ ಉರುಳಿಸಲಾಯಿತು. ಕಾಂಗ್ರೆಸ್- ದಳದ ಶಾಸಕರನ್ನು ಖರೀದಿಸಿ ಅವರಿಂದ ರಾಜೀನಾಮೆ ಕೊಡಿಸಿ ಬಹುಮತದ ಸಂಖ್ಯೆಯನ್ನು 103ಕ್ಕೆ ಇಳಿಸಿ ಗೆದ್ದಿತ್ತು ಬಿಜೆಪಿ. ಇದೀಗ ಈ ಶಾಸಕರನ್ನು ಉಪಚುನಾವಣೆಗಳಲ್ಲಿ ಗೆಲ್ಲಿಸಿ ತರಲು ಬಿಜೆಪಿ ಆಕಾಶ ಭೂಮಿ ಒಂದು ಮಾಡಿದೆ.

ಕರ್ನಾಟಕದ ಈ ಪ್ರಯೋಗ ಮಹಾರಾಷ್ಟ್ರದಲ್ಲಿ ನಡೆಯುವುದಿಲ್ಲ ಎಂದು ಯಾರೂ ಎದೆತಟ್ಟಿ ಹೇಳಲಾರರು. ಮೊನ್ನೆಮೊನ್ನೆಯ ತನಕ ಕಟ್ಟರ್ ಹಿಂದೂವಾದಿ ಸಿದ್ಧಾಂತದ ಪ್ರತಿಪಾದಕ ಪಕ್ಷವಾಗಿದ್ದ ಶಿವಸೇನೆ ಮತ್ತು ಈ ನೀತಿಯನ್ನು ವಿರೋಧಿಸುತ್ತ ಬಂದಿರುವ ಕಾಂಗ್ರೆಸ್ ಮತ್ತು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷಗಳು ಸರ್ಕಾರ ರಚನೆಗಾಗಿ ಕೈಕಲೆಸಿವೆ. ತಮ್ಮದೇ ಆದ ನಾನಾಕಾರಣಗಳಿಗಾಗಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸಲು ಈ ಪಕ್ಷಗಳು ಒಟ್ಟಾಗಿರುವುದು ಅವಕಾಶವಾದಿ ಮೈತ್ರಿಯಲ್ಲದೆ ಮತ್ತೇನೂ ಅಲ್ಲ.

ಈ ಅಂತರ್‌ ವಿರೋಧಕ್ಕೆ ಬೆಂಕಿ ಇಟ್ಟು ಗಾಳಿ ಊದುವ ಸಣ್ಣ ಅವಕಾಶವನ್ನೂ ಬಿಜೆಪಿ ಬಳಸಿಕೊಳ್ಳದೆ ಬಿಡುವುದಿಲ್ಲ. ಹಿಂದುತ್ವವನ್ನು ಸೋನಿಯಾಗಾಂಧಿ ಪದತಲದಲ್ಲಿ ಶರಣಾಗಿಸಿದೆ ಎಂದು ಶಿವಸೇನೆಯನ್ನು ದೂರಿದೆ ಬಿಜೆಪಿ. ಆದರೆ ಜಮ್ಮು-ಕಾಶ್ಮೀರದಲ್ಲಿ ಅಧಿಕಾರ ಹಿಡಿಯಲು ಪ್ರತ್ಯೇಕತಾವಾದಿಗಳ ಕುರಿತು ಸಹಾನುಭೂತಿ ಹೊಂದಿದ್ದ ಮುಫ್ತಿ ಕುಟುಂಬದ ಪಿ.ಡಿ.ಪಿ ಜೊತೆ ತಾನು ಕೈ ಜೋಡಿಸಿದ್ದನ್ನು ಅದು ಬಹಳ ಬೇಗ ಮರೆತಂತಿದೆ.

ಅಧಿಕಾರಕ್ಕಾಗಿ ಮಹಾರಾಷ್ಟ್ರದಲ್ಲಿ ನಡೆದ ನಿರ್ಲಜ್ಜ ನಗ್ನ ಕುಣಿತದಲ್ಲಿ ಎಲ್ಲ ಪಕ್ಷಗಳೂ ಒಂದಲ್ಲ ಒಂದು ರೀತಿಯಲ್ಲಿ ಬೆತ್ತಲಾಗಿವೆ. ಸಂಸದೀಯ ಜನತಾಂತ್ರಿಕ ವ್ಯವಸ್ಥೆಯ ಬಲವನ್ನು ಇನ್ನಷ್ಟು ಕುಂದಿಸಿವೆ. ಈ ಕೃತ್ಯದಲ್ಲಿ ಬಿಜೆಪಿಯದು ಸಿಂಹಪಾಲು. ಅದು ಅರಿತೋ ಅರಿಯದೆಯೋ ಅತ್ಯಂತ ಅಪಾಯಕಾರಿ ಪೂರ್ವನಿದರ್ಶನಗಳನ್ನು ಸ್ಥಾಪಿಸಿಬಿಟ್ಟಿದೆ.

ಗೋವಾ, ಮಣಿಪುರ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಗೆ ಜನಾದೇಶ ಸಿಕ್ಕಿರಲಿಲ್ಲ. ಆದರೂ ಪ್ರತಿಪಕ್ಷಗಳನ್ನು ಒಡೆದು ಸರ್ಕಾರ ರಚಿಸಿದ ಬಿಜೆಪಿ, ಮಹಾರಾಷ್ಟ್ರದಲ್ಲಿ ಜನಾದೇಶ ತನ್ನ ಪರವಾಗಿತ್ತೆಂದು ಹೇಳಿಕೊಳ್ಳುವ ನೈತಿಕ ದನಿಯನ್ನು ಕಳೆದುಕೊಂಡಿದೆ.

ಶಿವಸೇನೆ, ಎನ್.ಸಿ.ಪಿ., ಕಾಂಗ್ರೆಸ್ ಒಟ್ಟಾಗಿ ಸರ್ಕಾರ ರಚನೆಗೆ ಮುಂದಾದದ್ದು ಜನಾದೇಶದ ಅಣಕವಾಗಿದ್ದರೆ, ಭ್ರಷ್ಟಾಚಾರದ ಕೇಸುಗಳ ಬೆದರಿಕೆ ಮತ್ತು ಅವುಗಳನ್ನು ವಾಪಸು ಪಡೆಯುವ ಆಮಿಷ ಇರಿಸಿ ಕತ್ತಲ ರಾತ್ರಿಯ ಕಾರ್ಯಾಚರಣೆಯಲ್ಲಿ ಅಜಿತ್ ಪವಾರ್ ಮೂಲಕ ಎನ್.ಸಿ.ಪಿ ‘ಕುದುರೆ ಲಾಯ’ದ ವ್ಯಾಪಾರ ಕುದುರಿಸಲು ಹೊರಟ ಕೌಟಿಲ್ಯ ತಂತ್ರಕ್ಕೆ ಏನು ಹೆಸರಿಡಬೇಕು?

ದೇವೇಂದ್ರ ಫಡ್ನವೀಸ್ ಅವರ 2014ರ ವಿಧಾನಸಭಾ ಚುನಾವಣಾ ಬಹಿರಂಗ ಭಾಷಣದ ಪ್ರಕಾರ ಬಿಜೆಪಿ ಅಧಿಕಾರಕ್ಕೆ ಬಂದರೆ ಅಜಿತ್ ಪವಾರ್ ಮುಂಬಯಿಯ ಆರ್ಥರ್ ರೋಡ್ ಜೈಲಿನ ಕಂಬಿ ಎಣಿಸಬೇಕಿತ್ತು. ಬಿಜೆಪಿ ಅಧಿಕಾರಕ್ಕೆ ಬಂದಿತು. ಅಜಿತ್ ಪವಾರ್ ಜೈಲು ಪಾಲಾಗಲಿಲ್ಲ. ತಿಂಗಳ ಹಿಂದೆ ವಿಧಾನಸಭೆಗೆ ಮತ್ತೊಂದು ಚುನಾವಣೆ ಜರುಗಿತು. ಮಿತ್ರಪಕ್ಷ ಶಿವಸೇನೆ ಕೈ ಕೊಟ್ಟಿತೆಂದು ಬಿಜೆಪಿಯ ಮಹಾರಥಿಗಳು ಕೈ ಕಟ್ಟಿ ಕುಳಿತುಕೊಳ್ಳಲಿಲ್ಲ. ಅಧಿಕಾರ ರಚನೆಯ ಎಲ್ಲ ಬಾಗಿಲುಗಳು ಮುಚ್ಚಿದಾಗ ಹಗರಣಗಳು ಕೊರಳು ಸುತ್ತಿದ್ದ ಎನ್.ಸಿ.ಪಿ.ಯ ಅಜಿತ್ ಪವಾರ್ ಎಂಬ ಕೀಲಿ ಕೈಯನ್ನು ಕಂಡು ಹಿಡಿಯಿತು. ಮತ್ತು ತಾವು ಜೈಲಿಗೆ ಕಳಿಸುವುದಾಗಿ ಸಾರ್ವಜನಿಕವಾಗಿ ಸಾರಿ ಹೇಳಿದ್ದ ಅದೇ ಅಜಿತ್ ಪವಾರ್ ಅವರನ್ನು ದೇವೇಂದ್ರ ಫಡ್ನವೀಸ್ ಆಲಂಗಿಸಿಬಿಟ್ಟಿದ್ದರು. ಶನಿವಾರ ಮುಂಜಾನೆ ಮಹಾರಾಷ್ಟ್ರದ ಜನ ಹಾಸಿಗೆಯಿಂದೆದ್ದು ಕಣ್ಣುಜ್ಜಿಕೊಳ್ಳುವ ಹೊತ್ತಿಗಾಗಲೆ ತಮ್ಮ ಜೊತೆಗೆ ಉಪಮುಖ್ಯಮಂತ್ರಿಯಾಗಿ ಅವರಿಗೆ ಪ್ರಮಾಣವಚನ ಕೊಡಿಸಿದ್ದರು. ಬಿಜೆಪಿಯ ಮಹಾಶಕ್ತಿ ‘ಮೋಶಾ’ ಬೆಂಬಲವಿಲ್ಲದೆ ಈ ಪವಾಡ ನಡೆಯುವುದು ಸಾಧ್ಯವೇ ಇರಲಿಲ್ಲ.

ಮಹಾರಾಷ್ಟ್ರದ ಮೇಲೆ ಹೇರಿದ್ದ ರಾಷ್ಟ್ರಪತಿ ಆಡಳಿತದ ಅಧ್ಯಾದೇಶವನ್ನು ರಾತ್ರೋರಾತ್ರಿ ವಾಪಸು ಪಡೆಯಲಾಯಿತು. ವಿಶೇಷಾಧಿಕಾರವನ್ನು ಬಳಸಿದ ಪ್ರಧಾನಿಯವರು ರಾಷ್ಟ್ರಪತಿ ಆಡಳಿತವನ್ನು ವಾಪಸು ಪಡೆಯುವ ಸಚಿವಸಂಪುಟ ಸಭೆಯ ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಂಡರು. ರಾಷ್ಟ್ರಪತಿಯವರನ್ನು ನಿದ್ದೆಯಿಂದ ಎಬ್ಬಿಸಿ ಅವರ ಅಂಕಿತ ಪಡೆಯಲಾಯಿತು. ರಾಜ್ಯಪಾಲರೂ ನಿದ್ದೆಗೆಟ್ಟು ಬೆಳಗಿನ ಜಾವ ಐದೂ ಮುಕ್ಕಾಲಿಗೆ ರಾಷ್ಟ್ರಪತಿ ಆಡಳಿತ ಹಿಂತೆಗೆದುಕೊಂಡ ಆದೇಶ ಪ್ರಕಟಿಸಿದರು. ಬೆಳ್ಳಂಬೆಳಿಗ್ಗೆ ಪ್ರಮಾಣವಚನ ಬೋಧಿಸಿದ್ದರು. ತುರ್ತುಪರಿಸ್ಥಿತಿಯಲ್ಲಿ ಇಂದಿರಾಗಾಂಧಿಯವರು ಅಂದಿನ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರನ್ನು ರಬ್ಬರ್ ಮೊಹರಿನಂತೆ ಬಳಸುತ್ತಿದ್ದರು. ಸುಗ್ರೀವಾಜ್ಞೆಗಳನ್ನು ಯಾವಾಗೆಂದರೆ ಆವಾಗ ಅವರ ಅಂಕಿತಕ್ಕಾಗಿ ಕಳಿಸುತ್ತಿದ್ದರು. ಈ ಕುರಿತು ಅಬು ಅಬ್ರಹಾಂ ರಚಿಸಿದ್ದ ವ್ಯಂಗ್ಯಚಿತ್ರ ಐತಿಹಾಸಿಕ. ಬಾತ್ ಟಬ್ಬಿನಲ್ಲೇ ಎದ್ದು ನಿಂತು ಮೈಯಿಂದ ನೀರು ತೊಟ್ಟಿಕ್ಕುತ್ತಿರುವಂತೆ ಸುಗ್ರೀವಾಜ್ಞೆಗೆ ಸಹಿ ಹಾಕುತ್ತಿರುವ ರಾಷ್ಟ್ರಪತಿ ಅಹ್ಮದ್ ಅವರು ಹೇಳುತ್ತಾರೆ- ‘ಇನ್ನೂ ಸುಗ್ರೀವಾಜ್ಞೆಗಳಿದ್ದರೆ ಕಾಯಲು ಹೇಳಿ’ ಎಂದಿತ್ತು.

ತುರ್ತುಪರಿಸ್ಥಿತಿ ಮತ್ತು ರಾಷ್ಟ್ರಪತಿ- ರಾಜ್ಯಪಾಲರ ಹುದ್ದೆಗಳ ದುರುಪಯೋಗ ಕುರಿತು ಪುಸ್ತಕಗಳನ್ನು ಬರೆದು ದೂರಿರುವ, ವಿಡಂಬನೆ ಮಾಡಿರುವ ಅದೇ ಬಿಜೆಪಿ ಇಂದು ಮಾಡುತ್ತಿರುವುದೇನು? ಸಂವಿಧಾನ ದಿನಾಚರಣೆ ಕದ ಬಡಿದಿದ್ದ ಹೊತ್ತಿನಲ್ಲಿ ಅದರ ಆಶಯಗಳನ್ನು ಬುಡಮೇಲು ಮಾಡಿ ವ್ಯವಹರಿಸಿದ ಈ ವೈಖರಿ ಇತಿಹಾಸದಲ್ಲಿ ದಾಖಲಾಗದೆ ಇದ್ದೀತೇ?

ಅಧಿಕಾರ ಹಿಡಿಯಲು, ಎದುರಾಳಿಗಳನ್ನು ಮಟ್ಟ ಹಾಕಲು ಯಾವ ಅಡ್ಡದಾರಿಯನ್ನು ಹಿಡಿಯಲೂ ತಯಾರು, ಎಷ್ಟು ಕೆಳಗೆ ಬೇಕಾದರೂ ಕುಸಿಯಲು ತಯಾರೆಂದು ಬಿಜೆಪಿ ಇತ್ತೀಚಿನ ವರ್ಷಗಳಲ್ಲಿ ರುಜುವಾತು ಮಾಡಿತೋರಿಸಿದೆ. ತಾನು ಪ್ರತಿಪಾದಿಸುವುದಾಗಿ ಹೇಳಿದ್ದ ಮೌಲ್ಯಗಳನ್ನು ಗಾಳಿಗೆ ತೂರಿದೆ. ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಸಿಬಿಐ ಅಸ್ತ್ರಗಳನ್ನು ಝಳಪಿಸಿ ವಿರೋಧಿಗಳನ್ನು ಕುಣಿಸುತ್ತಿದೆ. ಇವು ಮೂರೂ ಕೆಲಸ ಮಾಡದೆ ಹೋದರೆ ಭಾರೀ ಹಣದ ಥೈಲಿಗಳ ಆಮಿಷ ಒಡ್ಡುತ್ತಿದೆ. ಚುನಾವಣೆಗಳನ್ನು ಗೆಲ್ಲಲು ಭ್ರಷ್ಟರು, ಕೊಲೆ ಆಪಾದಿತರನ್ನು, ಹಸಿಹಸಿ ಕೋಮುವಾದಿಗಳನ್ನು ಸೇರಿಸಿಕೊಳ್ಳಲು ಹಿಂದೆಮುಂದೆ ನೋಡುತ್ತಿಲ್ಲ.

ಮಹಾರಾಷ್ಟ್ರದೊಂದಿಗೆ ಚುನಾವಣೆ ಎದುರಿಸಿದ ಹರಿಯಾಣದಲ್ಲಿ ಬಹುಮತ ಸಿಗದೆ, ರಾಜಕೀಯ ಎದುರಾಳಿಯಾಗಿದ್ದ ದುಷ್ಯಂತ್ ಚೌಟಾಲಾ ಅವರ ಜನನಾಯಕ ಜನತಾ ಪಾರ್ಟಿಯ ಜೊತೆ ಕೈಕಲೆಸಿತು. ದುಷ್ಯಂತ್‌ಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಜೊತೆಗೆ, ಭ್ರಷ್ಟಾಚಾರ ಹಗರಣದಲ್ಲಿ ಜೈಲಿನಲ್ಲಿದ್ದ ಆತನ ತಂದೆ ಅಜಯ್ ಚೌಟಾಲಾ ಅವರನ್ನು 14 ದಿನಗಳ ‘ಫರ್ಲೋ’ ಮೇರೆಗೆ ಬಿಡುಗಡೆ ಮಾಡಿಸಲಾಯಿತು. ಅಕ್ಟೋಬರ್ ಮಾಸಾಂತ್ಯದಲ್ಲಿ ಬಿಡುಗಡೆಯಾಗಿದ್ದ ಅಜಯ್ ಚೌಟಾಲಾ ವಾಪಸು ಜೈಲಿಗೆ ಮರಳಿರುವ ವರದಿಗಳಿಲ್ಲ.

ಇನ್ನು 70ರಿಂದ 90 ಸಾವಿರ ಕೋಟಿ ರುಪಾಯಿಗಳ ಹಗರಣವನ್ನು ಮಹಾರಾಷ್ಟ್ರದಲ್ಲಿ ಪ್ರತಿಪಕ್ಷದ ಸ್ಥಾನದಲ್ಲಿದ್ದಾಗ ಅಂದಿನ ನೀರಾವರಿ ಮಂತ್ರಿ ಅಜಿತ್ ಪವಾರ್ ತಲೆಗೆ ಕಟ್ಟಿತ್ತು ಬಿಜೆಪಿ. ಅಧಿಕಾರ ಹಿಡಿಯಲೆಂದು ಅದೇ ಅಜಿತ್ ಪವಾರ್ ಅವರಿಗೆ ಉಪಮುಖ್ಯಮಂತ್ರಿ ಮಾಡಿ ಪಕ್ಕದಲ್ಲಿ ನಿಲ್ಲಿಸಿಕೊಂಡಿದ್ದಾದರೂ ಹೇಗೆ? ಗೋವಾ, ಮಣಿಪುರ ‘ಪಾರ್ಟಿ ವಿತ್ ಎ ಡಿಫರೆನ್ಸ್’ ಎಂದು ಬರೆದುಕೊಂಡಿರುವುದನ್ನು ಪಾರ್ಟಿ ವಿತೌಟ್ ಎ ಡಿಫರೆನ್ಸ್ ಎಂದು ತುರ್ತಾಗಿ ತಿದ್ದುಪಡಿ ಮಾಡಿಕೊಳ್ಳುವುದು ಒಳ್ಳೆಯದು.

ಮಹಾರಾಷ್ಟ್ರದ ಈ ಮಹಾನಾಟಕದ ಈ ಅಂಕಕ್ಕೆ ಸದ್ಯಕ್ಕಾದರೂ ತೆರೆ ಬೀಳುವುದೇ ಇಲ್ಲವೇ ವಿಧಾನಸಭೆ ವಿಸರ್ಜನೆಯ ಗೋಪ್ಯ ಅಸ್ತ್ರ ಮೋಶಾ ಬತ್ತಳಿಕೆಯಿಂದ ಹೊರಬೀಳುವುದೇ? ಕಾದು ನೋಡಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ಆಡಳಿತದ 10 ವರ್ಷಗಳಲ್ಲಿ ‘ED’ ದಾಳಿಗಳಲ್ಲಿ ಹೆಚ್ಚಳ: ವರದಿ

0
ಮೋದಿ ಆಡಳಿತದ ಕಳೆದ 10 ವರ್ಷಗಳಲ್ಲಿ ಜಾರಿ ನಿರ್ದೇಶನಾಲಯದ ದಾಳಿ ಮತ್ತು, ಆಸ್ತಿಮುಟ್ಟುಗೋಲು ಪ್ರಮಾಣದಲ್ಲಿ ಭಾರೀ ಹೆಚ್ಚಳವಾಗಿದೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಬಿಜೆಪಿ ಸರಕಾರ 'ಇಡಿ' ಮತ್ತು ಸಿಬಿಐಯಂತಹ ಸರಕಾರಿ ಸಂಸ್ಥೆಗಳನ್ನು ಪ್ರತಿಪಕ್ಷಗಳ...