Homeಚಳವಳಿಪಕ್ಷಾಂತರ ನೀಷೇಧ ಕಾಯ್ದೆಯ ಜೀವ ತೆಗೆಯುತ್ತಿದ್ದಾರೆ: ದೇವನೂರು ಮಹಾದೇವ

ಪಕ್ಷಾಂತರ ನೀಷೇಧ ಕಾಯ್ದೆಯ ಜೀವ ತೆಗೆಯುತ್ತಿದ್ದಾರೆ: ದೇವನೂರು ಮಹಾದೇವ

ರಾಜೀನಾಮೆ ಅಂಗೀಕಾರವಾಗುವವರೆಗೆ ಮುಂಬೈ ಹೋಟೆಲ್‍ಗೆ ಹೋಗಿ ಕೂತಿದ್ದು ಅನೈತಿಕತೆಯ ವಾಸನೆ ಹೊಡಿಸ್ತು

- Advertisement -
- Advertisement -

15ಕ್ಕೂ ಹೆಚ್ಚು ಶಾಸಕರು ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿ ಮುಂಬೈಗೆ ಹಾರಿಹೋದಾಗಿನಿಂದ ರಾಜ್ಯ ರಾಜಕಾರಣ ದಿನಕ್ಕೊಂದು ತಿರುವು ಪಡೆದುಕೊಂಡು ಅಸಹ್ಯ ಹುಟ್ಟಿಸುತ್ತಿದೆ. ಇದನ್ನು ವಿರೋಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾಡಿನ ಹಿರಿಯ ಸಾಕ್ಷಿಪ್ರಜ್ಞೆಗಳಾದ ದೇವನೂರು ಮಹಾದೇವ ಮತ್ತು ಎಚ್.ಎಸ್ ದೊರೆಸ್ವಾಮಿಯವರು ಸ್ಪೀಕರ್ ರಮೇಶ್ ಕುಮಾರ್ ರವರಿಗೆ ಪತ್ರ ಬರೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ನಾನುಗೌರಿ.ಕಾಂ ವತಿಯಿಂದ ದೇವನೂರು ಮಹಾದೇವರನ್ನು ಸಂದರ್ಶಿಸಲಾಯಿತು.

ಪತ್ರಿಕೆ: ನೀವು ಸ್ಪೀಕರ್‍ರಿಗೆ ಪತ್ರ ಬರೆಯಬೇಕೆಂದುಕೊಂಡಿದ್ದು ಯಾಕೆ ಸಾರ್?
ದೇವನೂರ ಮಹಾದೇವ: ರಾಜ್ಯದ ಶಾಸಕರ ನಾಪತ್ತೆ ರಾಜಕಾರಣವನ್ನು ಮಾಧ್ಯಮಗಳೆಲ್ಲವೂ ಹೈಡ್ರಾಮಾ ಎಂದು ಬಿಂಬಿಸುತ್ತಿವೆ. ಆದರೆ ನಡೀತಿರೋದು ಕೊಳಕು ಡ್ರಾಮಾ. ಈಗ ಏನು ನಡೀತಿದೆ ಗೊತ್ತೇ? ಇದು ಪಕ್ಷಾಂತರ ನಿಷೇಧ ಕಾಯ್ದೆಯ ಜೀವ ತೆಗೀತಿರೋದು. ಇದಕ್ಕೆ ನಮ್ಮ ನ್ಯಾಯಾಂಗ, ರಾಜ್ಯಪಾಲರು ಹಾಗೂ ರಾಜಕಾರಣಿಗಳು ಒಂದಲ್ಲಾ ಒಂದು ರೀತಿ ಕಾರಣರಾಗಿದ್ದಾರೆ. ಮೇಲ್ಕಂಡವರಿಗೆ ಸಂವಿಧಾನದ ಬಗ್ಗೆ, ನ್ಯಾಯಾಲಯದ ಬಗ್ಗೆ ನಂಬಿಕೆ ಗೌರವ ಇದೆಯಾ ಎನ್ನೋ ಅನುಮಾನ ದಿನೇ ದಿನೇ ಹೆಚ್ಚಾಗ್ತಿದೆ. ಹೀಗಾಗಿ ಸುಮ್ಮನಿರಬಾರ್ದು ಅನ್ನಿಸ್ತು.

ಪತ್ರಿಕೆ: ಸ್ಪೀಕರ್‍ರಿಗೇ ಯಾಕೆ ಬರೆದ್ರಿ?
ದೇ.ಮ: ನೋಡಿ, ಇಲ್ಲಿ ಕೆಲವ್ರು ಆಪರೇಷನ್ ಮಾಡ್ತಾ ಇದಾರೆ. ಕೆಲವ್ರು ಆಪರೇಷನ್ ಮಾಡಿಸ್ಕತಾ ಇದಾರೆ. ಕೊನೇಗೆ ಇದು ನಮ್ಮನ್ನ ಎಲ್ಲಿಗೆ ಕರೆದೊಯ್ತದೆ? ಈ ರೆಸಾರ್ಟ್ ರಾಜಕಾರಣದಿಂದ ನಾವೂ ತಲೆ ತಗ್ಗಿಸೋಂಗಾಗಿದೆ. ಸ್ಪೀಕರ್ ನಡೆ ನುಡಿ ನೋಡಿದರೆ ಅವ್ರು ಸಾಕ್ಷಿಪ್ರಜ್ಞೆ ಇಟ್ಟುಕೊಂಡು ಸೂಕ್ತವಾಗಿ ನಿರ್ವಹಿಸಬಹುದು ಅಂತ ಅನ್ನಿಸ್ತು. ಹಾಗಾಗಿ ಅವ್ರಲ್ಲಿ ಪ್ರಾರ್ಥನೆ ಮಾಡ್ಕೊಂಡ್ವಿ. ಅದಕ್ಕಿಂತ ಮುಖ್ಯವಾಗಿ ಸ್ಪೀಕರ್ ಶಾಸಕಾಂಗದ, ಶಾಸಕರ ಕಸ್ಟೋಡಿಯನ್ ಎಂಬ ಭಾವನೆ ಇದೆ. ಈ ಮಾತು ಅನೇಕ ಸಲ ಶಾಸನ ಸಭೆಯ ಚರ್ಚೆಯಲ್ಲೂ ಬಂದಿದೆ. ಅವ್ರು ಪ್ರತ್ಯಕ್ಷವಾಗಿ ಶಾಸಕರ ಕಸ್ಟೋಡಿಯನ್ ಆಗಿರುವುದಾದರೆ, ಪರೋಕ್ಷವಾಗಿ ಆ ಶಾಸಕರನ್ನು ಆರಿಸಿದ ಮತದಾರರ ಆಯ್ಕೆಯ ಹಕ್ಕಿನ ಕಸ್ಟೋಡಿಯನ್ ಸಹಾ ಆಗ್ಬೇಕು. ಆದ್ರಿಂದ ಅವ್ರಿಗೆ ಪತ್ರ ಬರೆದೆವು.

ಪತ್ರಿಕೆ: ಶಾಸಕರಿಗೆ ರಾಜೀನಾಮೆ ನೀಡೋ ಹಕ್ಕೇ ಇಲ್ಲ ಅಂತ ಹೇಳೋಕಾಗುತ್ತಾ?
ದೇ.ಮ: ಖಂಡಿತವಾಗ್ಲೂ ಇಲ್ಲ. ನಾವು ಯಾರಿಗೂ ರಾಜೀನಾಮೆ ಕೊಡೋದು ಬೇಡ ಅಂತ ಹೇಳಲ್ಲ. ಆದರೆ ಆ ಶಾಸಕರು ರಾಜೀನಾಮೆ ಊರ್ಜಿತವಾಗೋ ತನಕವಾದರೂ ಆ ಕಾಲವಧಿಯಲ್ಲಿ ಜನರ ಜೊತೆ ಇರಬೇಕೆಂದು ಕೇಳುವುದು ನ್ಯಾಯ ತಾನೇ? ಅದು ನೈತಿಕವಾಗಿ ಸರಿ ತಾನೇ? ತಮ್ಮದೇ ನಿರ್ಧಾರದ ಬಗ್ಗೆ ಗ್ಯಾರಂಟಿ ಇಲ್ಲದೇ ಬೇರೆ ರಾಜ್ಯದ ರೆಸಾರ್ಟ್‍ನಲ್ಲಿ ಕೂರೋದು ಕೊಡೋ ಸಂದೇಶ ಏನಂದ್ರೆ ಅದ್ರಲ್ಲಿ ಒಂದೋ ಬೇರೆ ಅನೈತಿಕ ಹಿತಾಸಕ್ತಿ ಇದೆ, ಇಲ್ಲವೇ ಯಾರೋ ಇವ್ರನ್ನ ಹಿಡ್ಕೊಂಡು ಕೂರಿಸ್ಕೊಂಡಿದಾರೆ ಅಂತ.

ಪತ್ರಿಕೆ: ಇದನ್ನ ತಡೆಯೋಕೆ ಏನು ಮಾಡಬೇಕು ಅನಿಸುತ್ತೆ ಸಾರ್?
ದೇ.ಮ: ರಾಜೀನಾಮೆ ಕೊಡೋರು ತಮ್ಮ ಮತದಾರರ ಜೊತೆಗೇ ಇರಬೇಕು ಅಂತ ಮಾಡ್ಬೇಕು. ಇಂತಹ ಹೊಸದೊಂದು ಪರಂಪರೆಯನ್ನು ನಮ್ಮ ಸ್ಪೀಕರ್ ರವರು ಹುಟ್ಟು ಹಾಕುತ್ತಾರೆಂಬ ನಂಬಿಕೆ ನಮಗಿದೆ. ಅಂತಹ ಕಾನೂನು ಸಹಾ ಇಲ್ಲ ನಿಜ. ಇವೆಲ್ಲವನ್ನ ಕೇವಲ ಕಾನೂನಿನ ನಿಯಮಗಳ ಪುಸ್ತಕ ಇಟ್ಕೊಂಡೇ ಬದಲಾಯಿಸಕ್ಕೆ ಆಗಲ್ಲ. ಆದ್ರೆ, ಇವತ್ತಿನ ಸಂದರ್ಭದಲ್ಲಿ ರೆಸಾರ್ಟ್ ರಾಜಕಾರಣದಂತಹ ಚೆಂಗಲು, ಎಂಜಲು ಮತ್ತು ಅಹಂನ ಮದದ ರಾಜಕಾರಣಿಗಳಿಗೆ ಮಾನ ಮರ್ಯಾದೆಗೆ ಹೆದರೋ ಥರದ ಒಂದು ತೀರ್ಮಾನ ಸ್ಪೀಕರ್ ಕಡೆಯಿಂದ ಆಗ್ಲೇಬೇಕು ಅಂತ ನನಗೆ ಅನ್ನಿಸುತ್ತೆ.

ಇದನ್ನೂ ಓದಿ: ದೇವನೂರು ಮತ್ತು ದೊರೆಸ್ವಾಮಿಯವರಿಂದ ಸ್ಪೀಕರ್ ರಿಗೆ ದೂರು ಸಲ್ಲಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಬಾಂಡ್‌ ಹಗರಣ: ಸುಪ್ರೀಂ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ತನಿಖೆಗೆ ಮನವಿ

0
ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪ್ರೇರಿತ ಹಣಕಾಸು ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಶಂಕಿತ ಹಗರಣದ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಗೆ ಒತ್ತಾಯಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು...