ಗಂಡಸರ ಒಳಚಡ್ಡಿ ಬನೀನಿನ ಮಾರಾಟ ಕ್ಷೀಣಗೊಂಡಿದ್ದು ಇದು ದೇಶದ ಆರ್ಥಿಕತೆ ದುರ್ಬಲಗೊಳ್ಳುತ್ತಿರುವುದರ ಲಕ್ಷಣ

ಇದು ಬಹುಕಾಲ ಅಮೇರಿಕದ ಫೆಡರಲ್ ರಿಜರ್ವ್ ಮುಖ್ಯಸ್ಥರಾಗಿದ್ದ ಆಲನ್ ಗ್ರೀನ್-ಸ್ಪ್ಯಾನ್ ಅವರು 1970ರಲ್ಲಿ ನೀಡಿದ ಹೇಳಿಕೆ ಮತ್ತು ಅವರ ಪ್ರಕಾರ ಇದೊಂದು ಮುಖ್ಯ ಆರ್ಥಿಕ ಸೂಚ್ಯಾಂಕ ಎಂದು ತಿಳಿಸುತ್ತಾ, ಪ್ರತಿಷ್ಠಿತ ಗುಲಾಬಿ ಪತ್ರಿಕೆ ದಿ ಎಕನಾಮಿಕ್ ಟೈಂಸ್ ಇಂದು ವರದಿಮಾಡಿದೆ. ಜೂನ್ ತಿಂಗಳಿಗೆ ಮುಗಿದ ಈ ವರ್ಷದ ಎರಡನೆಯ ತ್ರೈಮಾಸಿಕ ಅಂಕಿ-ಅಂಶಗಳ ಪ್ರಕಾರ ಪೇಜ್ ಇಂಡಸ್ಟ್ರೀಸ್ ಅವರ ಜಾಕಿ ಬ್ರ್ಯಾಂಡಿನ ಮಾರಾಟ ಕೇವಲ 2% ವೃದ್ಧಿ ಕಂಡಿದ್ದರೆ, ಡಾಲರ್ ಮತ್ತು ವಿಐಪಿ ಅವರ ಮಾರಾಟ ತಲಾ 4% ಮತ್ತು 20% ಕಡಿಮೆ ಆಗಿದೆ ಹಾಗೂ ಲಕ್ಸ್ ಅವರ ಮಾರಾಟ ಮಂಕಾಗಿದೆ. “ಮಾರುಕಟ್ಟೆಯ ಈ ಕ್ಷೇತ್ರದ ಅತ್ಯಂತ ಒಳ್ಳೆಯ ಸಮಯವಂತೂ ಇದಲ್ಲ” ಎಂದು ಪೇಜ್ ಇಂಡಸ್ಟ್ರೀಸ್ ಅವರ ಸಿಇಒ ವೇದ್ಜಿ ಟಿಕು ತಿಳಿಸಿರುವುದಾಗಿ ಪತ್ರಿಕೆ ವರದಿ ಮಾಡಿದೆ.

ಹಾಗಾದರೆ ಗಂಡಸರು ಕಾಚಾ ಹಾಕುವುದನ್ನು ಬಿಟ್ಟಿದ್ದಾರೆಯೇ? ಎಂಬುದು ಹಲವರ ಆಶ್ಚರ್ಯಚಕಿತವಾದ ಪ್ರಶ್ನೆ ಆಗಿರಬಹುದು. ಜನರ ಬಳಿ ಖರ್ಚು ಮಾಡಲು ಹಣದ ಕೊರತೆಯಿಂದಾಗಿ ಇಂತಹ ವಸ್ತುಗಳ ಖರೀದಿಯನ್ನು ಅವರು ಮುಂದೂಡುತ್ತಿದ್ದಾರೆ ಎಂಬುದು ದೇಶದ ಆರ್ಥಿಕ ತಜ್ಞರ ಅಭಿಪ್ರಾಯ. ಹಾಗಾದರೆ ಬಹುತೇಕ ಲಾಂಡ್ರಿ ಬದಿಯಲ್ಲಿರುವ ರಫೂ ಅಂಗಡಿಯ ವ್ಯಾಪಾರವಾದರೂ ಜೋರಾಗಿರಬೇಕಲ್ಲ, ಇಲ್ಲವಾದರೆ ಹರಿದ ಕಾಚಾಗಳನ್ನೇ ಧರಿಸಿಕೊಂಡು ಜನರು ಓಡಾಡುತ್ತಿದ್ದಾರೆಯೇ ಎಂಬುದು ನಿಮ್ಮ ಮುಂದಿನ ಪ್ರಶ್ನೆ ಆಗಿರಬಹುದು.  ಆದರೆ ಹೇಗೆ ತನಿಖೆ ಮಾಡುವುದು? ಪೋಲಿಸ್ ಮುಖ್ಯಸ್ಥರನ್ನು ಕೇಳಿದರೆ ಹೇಗೆ?

ಡಾಲರ್ ಇಂಡಸ್ಟ್ರೀಸ್ ಮ್ಯಾನೇಜಿಂಗ್ ಡೈರೆಕ್ಟರ್ ವಿನೋದ್ ಗುಪ್ತಾ ಅವರು ಈ ಪರಿಸ್ಥಿತಿಗೆ ಮುಖ್ಯ ಕಾರಣ ಗ್ರಾಮೀಣ ದುಃಸ್ಥಿತಿ, ಎಲ್ಲೂ ಸಾಲ ಸಿಗದಂತಾಗಿರುವ ಪರಿಸ್ಥಿತಿ, ಬ್ಯಾಂಕುಗಳಲ್ಲಿ ಹೆಚ್ಚಾಗಿರುವ ಎನ್.ಪಿ.ಎ., ಹಾಗೂ ನಾನ್-ಬ್ಯಾಂಕಿಂಗ್ ಫೈನಾನ್ಶಿಯಲ್ ಇನ್ಸ್ಟಿಟ್ಯೂಷನ್ ಅವರ ಅನಾರೋಗ್ಯ ಎನ್ನುತ್ತಾರೆ. ಹೌದು, ಕಾಚಾ ಖರೀದಿಸಲು ಯಾವ ಬ್ಯಾಂಕ್ ತಾನೇ ಸಾಲ ಕೊಡುತ್ತದೆ ಹೇಳಿ. ಅಥವಾ ಬ್ಯಾಂಕುಗಳು ಎನಾದರೂ ಸಾಲಗಾರರ ಚಡ್ಡಿ-ಬನೀನನ್ನೂ ಕಿತ್ತುಕೊಂಡು ತಮ್ಮ ಸಾಲ ವಸೂಲು ಮಾಡುವ ಯೋಜನೆ ಹಾಕುತ್ತಿದ್ದಾರೇನೋ ಗೊತ್ತಿಲ್ಲ. ಹಾಗೇನಾದರೂ ಇದ್ದಲ್ಲಿ ಹರಾಜು ಹಾಕಿದ ಚಡ್ಡಿ-ಬನೀನು ನಮ್ಮ ಜನ ಕೊಂಡುಕೊಳ್ಳುತಾರೆಯೇ ಎಂಬುದೂ ಸಹ ಯಕ್ಷ ಪ್ರಶ್ನೆ.

ಈ ಚಡ್ಡಿ-ಬನೀನಿನ ವಾರ್ಷಿಕ (ಅಂದಾಜು) ಮಾರಾಟ ರೂ. 27,931 ಕೋಟಿ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಅಷ್ಟೇ ಅಲ್ಲ ಇದು ಪ್ರತಿವರ್ಷ 10% ವೃದ್ಧಿಗೊಳ್ಳುತ್ತಿದ್ದ ಕ್ಷೇತ್ರವಾಗಿದ್ದು ಮುಂದಿನ ದಶಕದಲ್ಲಿ ಇದು ರೂ. 74,258 ಕೋಟಿ ತಲುಪಬಹುದಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ. ಮುಂದಿನ ನಾಲ್ಕೂವರೆ ವರ್ಷಗಳಲ್ಲಿ ದೇಶದ ಜಿಡಿಪಿ ಐದು ಲಕ್ಷ ಕೋಟಿ ತಲುಪುತ್ತದೆ ಎಂದು ಪ್ರಧಾನ ಮಂತ್ರಿಗಳು ಭವಿಷ್ಯವಾಣಿ ನುಡಿದಿರುವಾಗ ಈ ಕುಸಿದಿರುವ ಮಾರಾಟ ಅಂಕಿ-ಅಂಶ ನಿಜಕ್ಕೂ ಆಘಾತಕಾರಿ ಎಂದೆನಿಸುತ್ತದೆ. ಇನ್ನು ಮುಂದೆ ಎಲ್ಲರೂ ಕನಿಷ್ಠ ಎರಡೆರಡು ಜೊತೆ ಚಡ್ಡಿ-ಬನೀನು ತೊಡಬೇಕೆಂಬ ಆದೇಶವೇನಾದರೂ ಹೊರಬಂದಲ್ಲಿ ಏನುಮಾಡುವುದು?

ಹಾಗಿರಲಾರದು ಏಕೆಂದರೆ ಆರ್ಥಿಕ ಒಳನೋಟ ಇರುವ ಸಂಸ್ಥೆ ಕ್ರೆಡಿಟ್-ಸ್ವಿಸ್ ಪೇಜ್ ಇಂಡಸ್ಟ್ರೀಸ್ ಅವರ ಲಾಭಾದಾಯವನ್ನು 9-11% ಕಡಿಮೆ ಮಾಡಿದೆ ಮತ್ತು ಕೋಟಕ್ ಇಕ್ವಿಟೀಸ್ ಅವರು ಕ್ಷೀಣಗೊಂಡಿರುವ ಕಂಪನಿಯ ಆದಾಯದ ಮೇರೆಗೆ ಶೇರು ಬೆಲೆಯನ್ನು 5-6%  ಕಡಿತಗೊಳಿಸಿದೆ.

ನಾನಾದರೂ ಇವೆಲ್ಲವನ್ನು ತಪ್ಪು ಮಾಹಿತಿ ಮತ್ತು ದೇಶದ ನಾಯಕತ್ವವನ್ನು ಕೆಟ್ಟದಾಗಿ ಬಿಂಬಿಸುವ ಹುನ್ನಾರ ಎಂದು ಭಾವಿಸುತ್ತೇನೆ ಏಕೆಂದರೆ ನೆನ್ನೆ ತಾನೇ ನಾನು ಅರ್ಧ ಡಜನ್ ಒಳಚಡ್ಡಿ ಬನೀನು ಕೊಂಡುಕೊಂಡಿದ್ದೇನೆ. ದೇಶದ ಆರ್ಥಿಕ ಸಂರಕ್ಷಣೆಯಲ್ಲಿ ನಿಮ್ಮ ಯೋಗದಾನವೂ ಇರಲಿ.

 

 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here