Homeಚಳವಳಿಗುಂಪು ಹತ್ಯೆಗಳ ಹಿಂದಿನ ಅದೃಶ್ಯ ಹಸ್ತಗಳು ಯಾವುವು? -ಡಿ.ಉಮಾಪತಿಯವರ ಲೇಖನ

ಗುಂಪು ಹತ್ಯೆಗಳ ಹಿಂದಿನ ಅದೃಶ್ಯ ಹಸ್ತಗಳು ಯಾವುವು? -ಡಿ.ಉಮಾಪತಿಯವರ ಲೇಖನ

NDTV ಅಧ್ಯಯನದ ಪ್ರಕಾರ 2009-2014ರ ನಡುವೆ ದೇಶದಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ಒಂದೇ ಒಂದು ಗುಂಪು ಹತ್ಯೆಯ ಪ್ರಕರಣ ಜರುಗಿದೆ. 2014-2019ರ ನಡುವೆ ಇಂತಹ 109 ಪ್ರಕರಣಗಳು ನಡೆದಿದ್ದು, 40 ಮಂದಿಯ ಹತ್ಯೆಯಾಗಿದೆ. 123 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

- Advertisement -
- Advertisement -

ಅಪರಾಧಿಗಳು ರಾಜಕೀಯ ಆಶ್ರಯ ಪಡೆದು ನ್ಯಾಯ ಪ್ರಕ್ರಿಯೆ ಮತ್ತು ಶಿಕ್ಷೆಯಿಂದ ಜಾರಿಕೊಳ್ಳುತ್ತಿದ್ದಾರೆ. ಇವರನ್ನು ನ್ಯಾಯಾಂಗದ ಕಟಕಟೆಯಲ್ಲಿ ನಿಲ್ಲಿಸುವುದು ಕಾನೂನು ವ್ಯವಸ್ಥೆಯ ಪಾಲಿಗೆ ಗಂಭೀರ ಸವಾಲೇ ಸರಿ. ಜನಾಂಗ ಹತ್ಯೆಯಾಗಲಿ, ಮಾನವೀಯತೆ ವಿರುದ್ಧ ಜರುಗುವ ಪಾತಕಗಳಾಗಲಿ ನಮ್ಮ ದೇಶದ ಅಪರಾಧ ಕಾನೂನಿನ ಭಾಗ ಆಗಿಲ್ಲ. ಈ ದೋಷವನ್ನು ತುರ್ತಾಗಿ ಸರಿಪಡಿಸಬೇಕಿದೆ ಎಂದಿತ್ತು ದೆಹಲಿ ಹೈಕೋರ್ಟ್. ಗುಂಪು ಹತ್ಯೆಗಳನ್ನೂ ಈ ಸಾಲಿಗೆ ಸೇರಿಸಬೇಕಿದೆ.

ದನಗಳನ್ನು ಖರೀದಿಸಿ ತನ್ನ ರಾಜ್ಯ ಹರಿಯಾಣಕ್ಕೆ ಸಾಗಿಸುತ್ತಿದ್ದ ಪೆಹಲೂಖಾನ್ ನನ್ನು ಗುಂಪೊಂದು ರಾಜಸ್ತಾನದ ಅಲ್ವರ್ ನಲ್ಲಿ ಬಡಿದು ಜಜ್ಜಿ ಕೊಂದಿತ್ತು. ಸಂಬಂಧಪಟ್ಟ ಕಾನೂನು ನಿಯಮ ನಿಬಂಧನೆಗಳನ್ನು ಪಾಲಿಸಿಯೇ ಖರೀದಿಸಿದ್ದ. ಸಾಗಾಟಕ್ಕೆ ಅನುಮತಿ ಪತ್ರವೂ ಆತನ ಬಳಿ ಇತ್ತು. ಆದರೆ ಗೋರಕ್ಷಕರೆಂದು ಹೇಳಿಕೊಳ್ಳುವ ಕೋಮುದ್ವೇಷಿ ಹಂತಕರಿಗೆ ಇದ್ಯಾವುದೂ ಬೇಕಿರಲಿಲ್ಲ. ವ್ಯಾನಿನಲ್ಲಿ ದನಗಳಿದ್ದವು ಮತ್ತು ಅವುಗಳನ್ನು ಸಾಗಿಸುತ್ತಿದ್ದವರು ಮುಸಲ್ಮಾನರು ಎಂಬ ಎರಡು ಸಂಗತಿಗಳು ಸಾಕಿತ್ತು.

 

ಎರಡು ವರ್ಷಗಳ ನಂತರ ಈ ಪ್ರಕರಣದ ತೀರ್ಪು ಹೊರಬಿದ್ದಿದ್ದು ಎಲ್ಲ ಆರು ಮಂದಿ ಆರೋಪಿಗಳನ್ನೂ ಜಿಲ್ಲಾ ನ್ಯಾಯಾಲಯ ಖುಲಾಸೆಗೊಳಿಸಿದೆ. ಆರೋಪಿಗಳ ಮೇಲಿನ ಆಪಾದನೆಯನ್ನು ಸೂಕ್ತ ಸಾಕ್ಷ್ಯಾಧಾರಗಳ ಸಹಿತ ಸಾಬೀತು ಮಾಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದಿದೆ. ದೇಶದ ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆ ಹಿಡಿದಿರುವ ಇಳಿಜಾರಿನ ದಾರಿಯತ್ತ ಈ ಪ್ರಕರಣದ ವಿಚಾರಣೆಯು ಬೆರಳು ಮಾಡಿದೆ.

ಆರೋಪಿಗಳನ್ನು ಗುರುತಿಸಿ ಬಂಧಿಸಲು ಪೊಲೀಸರು ಅವಲಂಬಿಸಿದ ಮೊಬೈಲ್ ವಿಡಿಯೋ ಚಿತ್ರೀಕರಣವನ್ನು ಸಾಕ್ಷ್ಯಾಧಾರ ಎಂದು ಒಪ್ಪಿಕೊಳ್ಳಲು ನ್ಯಾಯಾಲಯ ನಿರಾಕರಿಸಿದೆ ಯಾಕೆಂದರೆ ವಿಡಿಯೋ ಚಿತ್ರೀಕರಿಸಿದ್ದ ಫೋನನ್ನು, ಇಲ್ಲವೇ ವಿಡಿಯೋ ತಮಗೆ ದೊರೆತ ಫೋನುಗಳನ್ನು ಸಾಕ್ಷ್ಯಗಳನ್ನಾಗಿ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸದೆ ದೊಡ್ಡ ಕರ್ತವ್ಯಲೋಪ ಎಸಗಿದ್ದಾರೆ. ಈ ವಿಡಿಯೋ ತಮಗೆ ದೊರೆತದ್ದು ಹೇಗೆಂದು ಇಬ್ಬರು ಪೊಲೀಸ್ ಅಧಿಕಾರಿಗಳು ನ್ಯಾಯಾಲಯಕ್ಕೆ ಎರಡು ಬಗೆಯ ಪರಸ್ಪರ ವ್ಯತಿರಿಕ್ತ ಹೇಳಿಕೆಗಳನ್ನು ನೀಡಿದ್ದಾರೆ. ವಿಡಿಯೋ ಚಿತ್ರೀಕರಿಸಿದ ಮೊಬೈಲ್ ಫೋನನ್ನು ವಶಪಡಿಸಿಕೊಂಡು ನ್ಯಾಯಾಲಯದ ಮುಂದೆ ಹಾಜರುಪಡಿಸಿಲ್ಲದಿರುವುದು ಮತ್ತು ಈ ಫೋನಿಗೂ ಅದರ ಒಡೆಯನಿಗೂ ಸಂಬಂಧವನ್ನು ಸಾಧಿಸಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಇದು ಗಂಭೀರ ಕರ್ತವ್ಯಲೋಪವನ್ನು ಸೂಚಿಸುತ್ತದೆ ಎಂಬುದಾಗಿ ನ್ಯಾಯಾಧೀಶೆ ಸರಿತಾ ಸ್ವಾಮಿ ಟೀಕಿಸಿದ್ದಾರೆ. ಈ ಎರಡು ಅಂಶಗಳು ವಿಚಾರಣೆಯ ಮೇಲೆ ತೀವ್ರ ಪರಿಣಾಮ ಬೀರಿದ್ದು ಅದರ ದಿಕ್ಕನ್ನೇ ಬದಲಿಸಿವೆ. ಉದ್ದೇಶಪೂರಿತ ಗೊಂದಲಗಳನ್ನು ಸೃಷ್ಟಿಸಲಾಗಿದೆ.

ಪೆಹಲೂಖಾನನ್ನು ಬಡಿದು ಕೊಂದ ಮೊಬೈಲ್ ಫೋನ್ ವಿಡಿಯೋವನ್ನು ಫೊರೆನ್ಸಿಕ್ ಪರೀಕ್ಷೆಗೆ ನೀಡಿಲ್ಲ ಎಂದು ಪೊಲೀಸರು ಹೇಳಿಕೆ ನೀಡಿದ್ದರು. ಆದರೆ ಅದನ್ನು ಜೈಪುರದಲ್ಲಿಯೇ ಫೊರೆನ್ಸಿಕ್ ಪರೀಕ್ಷೆಗೆ ಒಪ್ಪಿಸಲಾಗಿತ್ತು ಎಂಬುದು ಇಂದು ತಡವಾಗಿ ಬಳಕೆಗೆ ಬಂದಿದೆ. ತನ್ನ ನೇತೃತ್ವದ ಗುಂಪೊಂದು ಪೆಹಲೂಖಾನ್ ನನ್ನು ಒಂದೂವರೆ ತಾಸಿನ ಕಾಲ ಬಡಿದು ಕೊಂದದ್ದು ಹೌದೆಂದು NDTV ನಡೆಸಿದ್ದ ಗುಪ್ತ ಕ್ಯಾಮೆರಾ ಕುಟುಕು ಕಾರ್ಯಾಚರಣೆಯಲ್ಲಿ ವಿಪಿನ್ ಯಾದವ್ ಎಂಬಾತ ಒಪ್ಪಿಕೊಂಡಿದ್ದ. ಈ ಎರಡೂ ವಿಡಿಯೋಗಳು ಅಸಲಿ ಎಂಬುದಾಗಿ ಜೈಪುರದ ವಿಧಿವಿಜ್ಞಾನ ಪ್ರಯೋಗಾಲಯ ಪ್ರಮಾಣೀಕರಿಸಿದೆ. ಈ ಪ್ರಮಾಣೀಕರಣವನ್ನು ಕೇಸಿನ ದಾಖಲೆಗಳಿಗೆ ಲಗತ್ತಿಸಲಾಗಿದೆ. ಆದರೆ ಛಾರ್ಜ್ ಶೀಟ್ ಸಲ್ಲಿಸಿ ಎರಡೂವರೆ ತಿಂಗಳುಗಳ ನಂತರ ಮತ್ತು ಪೆಹಲೂಖಾನ್ ಹತ್ಯೆಯಾದ ಎಂಟು ತಿಂಗಳ ನಂತರ ಹತ್ಯೆಯ ವಿಡಿಯೋವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ.

ಪೊಲೀಸರ ಈ ಕೃತ್ಯ ವಿಚಾರಣೆಯನ್ನು ಹಳ್ಳ ಹಿಡಿಸುವ ಪ್ರಜ್ಞಾಪೂರ್ವಕ ನಡೆಯಲ್ಲದೆ ಮತ್ತೇನೂ ಆಗಿರಲು ಸಾಧ್ಯವಿಲ್ಲ. ಮರಣಕ್ಕೆ ಮುನ್ನ ಪೆಹಲೂಖಾನ್ ನೀಡಿದ್ದ ಹೇಳಿಕೆಯಲ್ಲಿ ಹೆಸರಿಸಿದ್ದ ಎಲ್ಲ ಆರೂ ಮಂದಿ ಹಂತಕರನ್ನು ಬಿಡುಗಡೆ ಮಾಡಲಾಗುತ್ತದೆ. ಅವರ ಬದಲಿಗೆ ಇತರರನ್ನು ಬಂಧಿಸಿ ಅವರ ಮೇಲೆ ಆಪಾದನೆ ಹೊರಿಸಿ ನ್ಯಾಯಾಲಯದ ಮುಂದೆ ಆರೋಪಿಗಳೆಂದು ನಿಲ್ಲಿಸಲಾಗುತ್ತದೆ. ಕುಟುಕು ಕಾರ್ಯಾಚರಣೆಯ ವಿಡಿಯೋದಲ್ಲಿ ಹತ್ಯೆಯ ನೇತೃತ್ವ ತಾನೇ ವಹಿಸಿದ್ದು ಎಂದು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ವಿಪಿನ್ ಯಾದವ್ ನ ಜಾಮೀನನ್ನು ರದ್ದು ಮಾಡಬೇಕು ಎಂಬ ಪೊಲೀಸರ ಕೋರಿಕೆಯನ್ನು ರಾಜಸ್ತಾನ್ ಹೈಕೋರ್ಟ್ ತಳ್ಳಿ ಹಾಕಿತ್ತು.

ಐವತ್ತೈದು ವರ್ಷದ ಪೆಹಲೂಖಾನ್ 2017ರ ಏಪ್ರಿಲ್ ಒಂದರಂದು ತನ್ನ ಇಬ್ಬರು ಗಂಡುಮಕ್ಕಳ ಜೊತೆಗೆ ಜೈಪುರದ ಜಾತ್ರೆಯೊಂದರಲ್ಲಿ ಖರೀದಿಸಿದ್ದ ದನಗಳನ್ನು ಎರಡು ವ್ಯಾನುಗಳಲ್ಲಿ ತುಂಬಿಕೊಂಡು ಹರಿಯಾಣದ ತಮ್ಮ ಹಳ್ಳಿಗೆ ಒಯ್ಯುತ್ತಿದ್ದಾಗ ಜರುಗಿದ್ದ ಹತ್ಯೆಯಿದು..

ಪೆಹಲೂಖಾನ್ ಸಾಯುವ ಮುನ್ನ ನೀಡಿದ್ದ ಹೇಳಿಕೆಯಲ್ಲಿ ತನ್ನ ಹತ್ಯೆಯಲ್ಲಿ ಭಾಗಿಗಳಾಗಿದ್ದ ಆರು ಮಂದಿ ಆರೋಪಿಗಳ ಹೆಸರುಗಳನ್ನು ಹೇಳಿದ್ದ. ಈ ಆರೂ ಮಂದಿಯನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದರು. ಕೇಸು ದಾಖಲಿಸಿದ ನಂತರ ಪೊಲೀಸರು ಹೆಸರಿಸಿದ್ದ ಒಂಬತ್ತು ಮಂದಿ ಆರೋಪಿಗಳ ಪೈಕಿ ಮೂವರು ಅಪ್ರಾಪ್ತ ವಯಸ್ಕರು. ಉಳಿದ ಆರು ಮಂದಿಯನ್ನು ನ್ಯಾಯಾಲಯ ಸಂದೇಹದ ಲಾಭ ನೀಡಿ ಬುಧವಾರ ಖುಲಾಸೆ ಮಾಡಿತು.

ಆರೋಪಿಗಳ ಖುಲಾಸೆಯ ತೀರ್ಪು ಹೊರಬೀಳುತ್ತಿದ್ದಂತೆ, ನ್ಯಾಯಾಲಯದ ಹೊರಗೆ ಸೇರಿದ್ದ ಜನ ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಕೂಗುತ್ತಾರೆ. ಆರೋಪಿಗಳ ಕುರಿತು ಸಹಾನುಭೂತಿ ತೋರುತ್ತಾರೆ. ಹಾಡುಹಗಲಲ್ಲಿ ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿ ನಡೆದ ಹತ್ಯೆಯ ಅಪರಾಧಿಗಳು ಕಾನೂನಿನ ಕುಣಿಕೆಯಿಂದ ಪಾರಾಗುವುದು ಭಾರತ ಮಾತೆಗೆ ಜೈಕಾರ ಹೇಳುವ ಸಂಭ್ರಮದ ಸುದ್ದಿಯೇ ಎಂಬ ಪ್ರಶ್ನೆಗೆ ಯಾರು ಉತ್ತರ ಕೊಡಬೇಕು?

ಮರಣೋತ್ತರ ಪರೀಕ್ಷೆಯಲ್ಲಿ ಸಾವಿನ ಕಾರಣವನ್ನು ಖಾಸಗಿ ವೈದ್ಯರು ಹೃದಯಾಘಾತ ಎಂತಲೂ, ಸರ್ಕಾರಿ ವೈದ್ಯರು ಥಳಿಸುವಿಕೆ ಎಂದು ಬರೆದಿರುವುದು, ಆರೋಪಿಗಳು ಖುಲಾಸೆಯಾದ ಕೂಡಲೇ ಕೂಗಲಾದ ಭಾರತ್ ಮಾತಾ ಕೀ ಜೈ ಘೋಷಣೆಗಳು ಕಾಣದ ಕಹಿ ಸತ್ಯವೊಂದರತ್ತ ಇಷಾರೆ ಮಾಡುತ್ತವೆ. ಪೆಹಲೂಖಾನ್ ಸಾಯುವ ಮುನ್ನ ನೀಡಿದ್ದ ಹೇಳಿಕೆಗೆ ಸಂಬಂಧಪಟ್ಟ ವೈದ್ಯ ಮತ್ತು ಮ್ಯಾಜಿಸ್ಟ್ರೇಟ್ ಸಹಿ ಹಾಕಲು ನಿರಾಕರಿಸಿದ್ದ ಕಾರಣಗಳ ತನಿಖೆಯಾಗಿಲ್ಲ. ಈ ಹತ್ಯೆಯ ಪ್ರತ್ಯಕ್ಷ ಸಾಕ್ಷಿಗಳಾದ ಪೆಹಲೂನ ಇಬ್ಬರು ಗಂಡು ಮಕ್ಕಳನ್ನು ಕರೆಯಿಸಿ ಅವರ ಮುಂದೆ ಆಪಾದಿತರನ್ನು ಗುರುತಿಸುವ ಐ.ಡಿ.ಪರೇಡ್ ನಡೆಯದಿರುವುದು ಪ್ರಶ್ನಾರ್ಹ ಕರ್ತವ್ಯಚ್ಯುತಿ. ಈ ಸಾಕ್ಷಿಗಳಿಗೆ ಪ್ರಾಣ ಬೆದರಿಕೆ ಹಾಕಲಾದ ನಂತರ ಅವರಿಗೆ ರಕ್ಷಣೆ ಒದಗಿಸಿಲ್ಲ.

ಬಂಧಿಸಲಾಗಿದ್ದ ಆರೋಪಿಗಳು ಘಟನೆ ನಡೆದ ದಿನ ಹತ್ಯೆಯ ಸ್ಥಳದಲ್ಲೇ ಇದ್ದರು ಎಂಬುದಾಗಿ ಅವರ ಮೊಬೈಲ್ ಫೋನುಗಳ ಕರೆಗಳ ವಿವರಗಳು ಹೇಳುತ್ತವೆ. ಪೆಹಲೂ ಖಾನನ್ನು ಥಳಿಸಲು ಬಳಸಿದ ದೊಣ್ಣೆಯು ಮಹತ್ವದ ಸಾಕ್ಷ್ಯ. ಆದರೆ ಅದು ಪೊಲೀಸರ ವಶದಿಂದ ಮಾಯವಾಗುತ್ತದೆ. ಈ ಕರ್ತವ್ಯಲೋಪಕ್ಕೆ ಸಂಬಂಧಿಸಿದ ಪೊಲೀಸರ ಮೇಲೆ ಯಾವುದೇ ಕ್ರಮ ಜರುಗುವುದಿಲ್ಲ. ಉತ್ತರ ಪ್ರದೇಶದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಬಿಕ್ರಮ್ ಸಿಂಗ್ ಅವರ ಪ್ರಕಾರ ಒಬ್ಬ ಮುಖ್ಯ ಪೇದೆ ಕೂಡ ಸಲೀಸಾಗಿ ಕೇಸು ದಾಖಲಿಸಿ ಅಪರಾಧಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆ ಕೊಡಿಸಬಹುದಾಗಿದ್ದ ನಿಚ್ಚಳ ಸಾಕ್ಷ್ಯಗಳಿದ್ದ ಪ್ರಕರಣವಿದು. ಹೀಗಿದ್ದಾಗ ಕಳಪೆ ತನಿಖೆ ನಡೆಸುವ ಮೂಲಕ ಕೇಸು ಬಿದ್ದು ಹೋಗುವಂತೆ ಮಾಡಲು ಪೊಲೀಸರ ಮೇಲೆ ಪ್ರಭಾವ ಬೀರಿದ ಶಕ್ತಿಗಳು ಯಾವುವೆಂದು ಬಯಲಾಗಬೇಕಿದೆ.

ಕಳೆದ ಹಲವು ವರ್ಷಗಳಿಂದ ದೇಶಾದ್ಯಂತ ಗುಂಪುಹತ್ಯೆಗಳಿಗೆ ನ್ಯಾಯಬದ್ಧತೆ ಒದಗಿಸಿರುವ ವಾತಾವರಣ ಸೃಷ್ಟಿಯಾಗಿದೆ. ಝಾರ್ಖಂಡದ ಗುಂಪು ಹತ್ಯೆ ಆರೋಪಿಗಳನ್ನು ಅಂದಿನ ಕೇಂದ್ರ ಮಂತ್ರಿ ಜಯಂತ್ ಸಿನ್ಹಾ ಸನ್ಮಾನಿಸಿದರೂ ಅದು ತಪ್ಪೆಂದು ಸರ್ಕಾರದ ಎತ್ತರದ ಸ್ಥಾನದಲ್ಲಿರುವವರು ಹೇಳುವುದಿಲ್ಲ. ಮನೆಯ ರೆಫ್ರಿಜರೇಟರಿನಲ್ಲಿ ಗೋಮಾಂಸ ಇಟ್ಟಿದ್ದನೆಂದು ಉತ್ತರಪ್ರದೇಶದ ದಾದ್ರಿಯಲ್ಲಿ ಅಖ್ಲಾಕ್ ಅಹ್ಮದನನ್ನು ಗುಂಪೊಂದು ಜಜ್ಜಿ ಕೊಂದಿತ್ತು. ಈ ಆಪಾದಿತರ ಪೈಕಿ ಕಾಯಿಲೆಯಿಂದ ಮೃತಪಟ್ಟ. ಆತನ ಕಳೇಬರಕ್ಕೆ ತ್ರಿವರ್ಣಧ್ವಜ ಹೊದಿಸಿ, ಆತನಿಗೆ ಹುತಾತ್ಮ ಪಟ್ಟ ನೀಡಲಾಗುತ್ತದೆ. ರಾಜಸ್ತಾನದ ಪೊಲೀಸರು ಅಪರಾಧಿಗಳೊಂದಿಗೆ ಶಾಮೀಲಾಗಿ ಸಾಕ್ಷ್ಯಾಧಾರಗಳನ್ನು ಹೂತು ಹಾಕಿ ವಿಚಾರಣೆಯ ದಾರಿ ತಪ್ಪಿಸಿರುವುದು ಮೇಲ್ನೋಟಕ್ಕೇ ಸ್ಪಷ್ಟವೇದ್ಯ. ಒಂಬತ್ತು ತಿಂಗಳ ಹಿಂದೆ ಕಾಂಗ್ರೆಸ್ ಸರ್ಕಾರ ರಾಜಸ್ತಾನದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವೂ ಈ ಪ್ರಕರಣದ ದೊಡ್ಡ ದೋಷಿ. ತನಿಖೆ ಹಿಡಿದಿರುವ ಅಡ್ಡದಾರಿಯನ್ನು ಗಮನಿಸದೆ ತೋರಿರುವ ನಿರ್ಲಕ್ಷ್ಯ ಅಕ್ಷಮ್ಯ.

ಗುಜರಾತ್ ನರಮೇಧದ ಬೆಸ್ಟ್ ಬೇಕರಿ ಹತ್ಯಾಕಾಂಡದ ಆರೋಪಿಗಳನ್ನು ಅಹ್ಮದಾಬಾದ್ ಹೈಕೋರ್ಟ್ ಖುಲಾಸೆ ಮಾಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿ, ಮರುವಿಚಾರಣೆಗೆ ಆದೇಶ ನೀಡಿದ್ದ ಉದಾಹರಣೆ ಇದೆ. ವಿಚಾರಣೆಯನ್ನು ಗುಜರಾತಿನ ಹೊರಕ್ಕೆ ಮುಂಬಯಿಗೆ ವರ್ಗಾಯಿಸಲಾಗಿತ್ತು. ಮುಂಬಯಿ ನ್ಯಾಯಾಲಯ ಮರುವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಿತ್ತು. ತಡವಾಗಿ ಎಚ್ಚೆತ್ತಿರುವ ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹಲೊತ್ ತನಿಖೆಯ ಕುರಿತು ವರದಿ ನೀಡಲು ಅಧಿಕಾರಿಗಳ ವಿಶೇಷ ತಂಡ ರಚಿಸಿದ್ದಾರೆ. ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವುದಾಗಿ ಪ್ರಕಟಿಸಿದ್ದಾರೆ.

NDTV ಅಧ್ಯಯನದ ಪ್ರಕಾರ 2009-2014ರ ನಡುವೆ ದೇಶದಲ್ಲಿ ಗೋರಕ್ಷಣೆಯ ಹೆಸರಿನಲ್ಲಿ ಒಂದೇ ಒಂದು ಗುಂಪು ಹತ್ಯೆಯ ಪ್ರಕರಣ ಜರುಗಿದೆ. 2014-2019ರ ನಡುವೆ ಇಂತಹ 109 ಪ್ರಕರಣಗಳು ನಡೆದಿದ್ದು, 40 ಮಂದಿಯ ಹತ್ಯೆಯಾಗಿದೆ. 123 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಈ ಹಿಂದೆ ನರಮೇಧಗಳ ವಿಚಾರಣೆಗಳನ್ನು ದಶಕಗಟ್ಟಲೆ ದಾರಿ ತಪ್ಪಿಸುವ ಕೆಲಸ ನಮ್ಮ ದೇಶದಲ್ಲಿ ಯಶಸ್ವಿಯಾಗಿ ಜರುಗಿದೆ.

ದೇಶವಿಭಜನೆಯ ದಳ್ಳುರಿಯ ದಿನಗಳಲ್ಲಿ ತಮ್ಮ ಇಬ್ಬರು ಪುಟ್ಟ ಮಕ್ಕಳನ್ನು ಎದೆಗವಚಿಕೊಂಡು ಲಾಹೋರಿನಿಂದ ದೆಹಲಿಯತ್ತ ಧಾವಿಸುತ್ತಾರೆ ಯುವ ಕವಿ ಅಮೃತಾ ಪ್ರೀತಂ. ಹಾದಿಯುದ್ದಕ್ಕೆ ದ್ವೇಷ, ಕ್ರೌರ್ಯ, ದುಃಖ ದುರಂತವನ್ನು ಹಾಯುತ್ತಾರೆ. ಹಬ್ಬಿದ ವಿಷದ ಬಳ್ಳಿಗಳು, ದ್ವೇಷದ ಬೀಜಗಳು, ಎಲ್ಲೆಲ್ಲೂ ರಕ್ತಪಾತ, ಕೊಳಲುಗಳನ್ನು ವಿಷ ಸರ್ಪಗಳಾಗಿ ಬದಲಾಯಿಸುವ ಅಡವಿಯ ವಿಷಪೂರಿತ ಗಾಳಿ, ಹಸಿರು ಪಂಜಾಬನ್ನು ನೀಲಿಗಟ್ಟಿಸಿದ ದ್ವೇಷದ ವಿಷವನ್ನು ತಮ್ಮ ಕವಿತೆಯೊಂದರಲ್ಲಿ ಚಿತ್ರಿಸುತ್ತಾರೆ. ಸರಿಯಾಗಿ ಮೂವತ್ತೇಳು ವರ್ಷಗಳ ನಂತರ, ಇಂದಿರಾ ಗಾಂಧಿ ಹತ್ಯೆಯ ತರುವಾಯ ಇಂತಹುದೇ ಕೋಮುವಾದಿ ದ್ವೇಷದ ವಿಷ ಪುನಃ ದೆಹಲಿಯ ಹಾದಿ ಬೀದಿಗಳಲ್ಲಿ ಸಾಮೂಹಿಕ ಹತ್ಯೆಗಳ ರೂಪ ಧರಿಸಿ ಭುಸುಗುಟ್ಟಿ ಹರಿಯುತ್ತದೆ. 1894ರ ಸಿಖ್ ವಿರೋಧಿ ಗಲಭೆಗಳ ಕುರಿತು ದೆಹಲಿ ಹೈಕೋರ್ಟ್ ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಸಜ್ಜನ್ ಕುಮಾರ್ ವಿರುದ್ಧ ನೀಡಿದ್ದ ತೀರ್ಪಿನ ಆರಂಭದ ಸಾಲುಗಳಿವು.

ಮಾನವೀಯತೆಯನ್ನು ಬೆಚ್ಚಿ ಬೀಳಿಸುವ ಈ ಕೊಲೆಗಡುಕರಿಗೆ ರಾಜಕೀಯ ರಕ್ಷಣೆ ದೊರೆಯುತ್ತದೆ. ಇಪ್ಪತ್ತು ವರ್ಷಗಳ ಕಾಲ ಕಾನೂನು ಇವರನ್ನು ಮುಟ್ಟಲಾಗುವುದಿಲ್ಲ. ಹತ್ತು ಸಮಿತಿಗಳು ಮತ್ತು ಆಯೋಗಗಳು ತನಿಖೆ ನಡೆಸುತ್ತವೆ. 21 ವರ್ಷಗಳ ನಂತರ 2005ರಲ್ಲಿ ಕೆಲವು ಅಪರಾಧಿಗಳ ಪಾತ್ರವನ್ನು ಸಿಬಿಐ ತನಿಖೆಗೆ ಒಪ್ಪಿಸಲಾಗುತ್ತದೆ. ಇನ್ನೂ ಬಹುಕಾಲ ಸಮಾಜದ ಸಾಮೂಹಿಕ ಆತ್ಮಸಾಕ್ಷಿಗೆ ಆಘಾತ ಉಂಟು ಮಾಡುತ್ತಲೇ ಇರುವ ಘೋರ ಪ್ರಕರಣವಿದು. ಮಾನವೀಯತೆಯ ವಿರುದ್ಧ ನಡೆದ ಪಾತಕ.

1993ರ ಮುಂಬಯಿ ಗಲಭೆಗಳು, 2002ರ ಗುಜರಾತ್ ಗಲಭೆಗಳು, 2008ರ ಒಡಿಶಾದ ಕಾಂಧಮಾಲ್ ಗಲಭೆಗಳು, 2013ರ ಮುಝಫ್ಫರ್ನಗರ ಗಲಭೆಗಳು ಈ ಸಾಲಿಗೆ ಸೇರುವ ಇನ್ನು ಕೆಲವು ಅಮಾನುಷ ನರಮೇಧಗಳು. ಪ್ರಬಲ ರಾಜಕೀಯ ಪಕ್ಷಗಳ ಪಾತ್ರಧಾರಿಗಳು ಮುನ್ನಡೆಸಿದ ಈ ಗಲಭೆಗಳಿಗೆ ಸರ್ಕಾರಗಳೇ ನಡೆಮುಡಿ ಹಾಸಿಕೊಟ್ಟವು. ಈ ಗಲಭೆಗಳ ಅಪರಾಧಿಗಳು ರಾಜಕೀಯ ಆಶ್ರಯ ಪಡೆದು ನ್ಯಾಯ ಪ್ರಕ್ರಿಯೆ ಮತ್ತು ಶಿಕ್ಷೆಯನ್ನು ಯಶಸ್ವಿಯಾಗಿ ತಪ್ಪಿಸಿಕೊಂಡಿದ್ದಾರೆ. ಇವರನ್ನು ನ್ಯಾಯಾಂಗದ ಕಟಕಟೆಯಲ್ಲಿ ನಿಲ್ಲಿಸುವುದು ನಮ್ಮ ಕಾನೂನು ವ್ಯವಸ್ಥೆಯ ಪಾಲಿಗೆ ಗಂಭೀರ ಸವಾಲೇ ಸರಿ. ಜನಾಂಗ ಹತ್ಯೆಯಾಗಲಿ, ಮಾನವೀಯತೆ ವಿರುದ್ಧ ಜರುಗುವ ಪಾತಕಗಳಾಗಲಿ ನಮ್ಮ ದೇಶದ ಅಪರಾಧ ಕಾನೂನಿನ ಭಾಗ ಆಗಿಲ್ಲ. ಈ ದೋಷವನ್ನು ತುರ್ತಾಗಿ ಸರಿಪಡಿಸಬೇಕಿದೆ ಎಂದು ತೀರ್ಪು ಆಗ್ರಹಿಸಿತ್ತು. ನಮ್ಮ ರಾಜಕೀಯ-ಸಾಮಾಜಿಕ ವ್ಯವಸ್ಥೆಗೆ ನ್ಯಾಯಾಂಗ ಹಿಡಿದ ಕನ್ನಡಿಯಿದು. ತೋರಿ ಬರುವ ಪ್ರತಿಬಿಂಬ ವ್ಯವಸ್ಥೆಯನ್ನು ಇನ್ನಾದರೂ ಬೆಚ್ಚಿ ಬೀಳಿಸಬೇಕು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...