Homeಕರ್ನಾಟಕಫ್ಯಾಸಿಸ್ಟ್ ಶಕ್ತಿಗಳು ವೈವಿಧ್ಯತೆಯನ್ನು ಸಹಿಸಲಾರವು: ಬಂಡಾಯ ಸಾಹಿತ್ಯ ಕಾರ್ಯಗಾರದಲ್ಲಿ ಜಿ.ಪಿ ರಾಮಚಂದ್ರನ್‌..

ಫ್ಯಾಸಿಸ್ಟ್ ಶಕ್ತಿಗಳು ವೈವಿಧ್ಯತೆಯನ್ನು ಸಹಿಸಲಾರವು: ಬಂಡಾಯ ಸಾಹಿತ್ಯ ಕಾರ್ಯಗಾರದಲ್ಲಿ ಜಿ.ಪಿ ರಾಮಚಂದ್ರನ್‌..

ಹಿಂದಿ ಮಾತ್ರ ಶ್ರೇಷ್ಟವಲ್ಲ. ಕನ್ನಡ, ಮಲೆಯಾಳಂ, ತೆಲುಗು, ತಮಿಳು ಮೊದಲಾದ ಭಾಷೆಗಳು ಭಾರತದ ಸೌಂದರ್ಯವನ್ನು ಹೆಚ್ಚಿಸಿವೆ

- Advertisement -
- Advertisement -

ತುಮಕೂರು ನಗರದ ಕನ್ನಡ ಭವನದಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯ ವತಿಯಿಂದ ಹಮ್ಮಿಕೊಂಡಿರುವ ಎರಡು ದಿನಗಳ ರಾಜ್ಯಮಟ್ಟದ ಯುವ ಬರಹಗಾರರ ಕಾರ್ಯಾಗಾರಕ್ಕೆ ಪ್ರಸಿದ್ಧ ಮಲೆಯಾಳಿ ಸಾಹಿತಿ ಹಾಗೂ ಸಿನೆಮಾ ವಿಮರ್ಶಕ ಜಿ.ಪಿ.ರಾಮಚಂದ್ರನ್ ಚಾಲನೆ ನೀಡಿದರು.

ಅವರು ಪ್ರಗತಿಪರ ಸಾಹಿತಿಗಳ ಮುಂದಿರುವ ಸವಾಲುಗಳು, ಜಾಗತೀಕರಣ, ಉದಾರೀಕರಣ, ಖಾಸಗೀಕರಣ, ಫ್ಯಾಸಿಸ್ಟ್ ಶಕ್ತಿಗಳ ಅಟ್ಟಹಾಸದ ಕುರಿತು ಮಾತನಾಡಿ ಗಮನಸೆಳೆದರು.

ದೇಶದಲ್ಲಿ ಇಂದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ. ಸತ್ಯವನ್ನು ಹೇಳಲು ಕಷ್ಟವಾಗುತ್ತಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಸವಾಲುಗಳು ಎದುರಾಗಿವೆ. ಫ್ಯಾಸಿಸ್ಟ್ ಶಕ್ತಿಗಳು ದೇಶವನ್ನು ಆಳ್ವಕೆ ಮಾಡುತ್ತಿದ್ದು, ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದೆ. ಬಿಜೆಪಿ ಮತ್ತು ಸಂಘಪರಿವಾರ ತಮ್ಮ ಶತ್ರುಗಳು ಯಾರು ಎಂಬುದನ್ನು ಗುರುತಿಸಿಕೊಂಡಿದ್ದಾರೆ. ಪ್ರಗತಿಪರರ ಮೇಲೆ ಯುದ್ದವನ್ನು ಆರಂಭಿಸಿದ್ದಾರೆ. ಸರ್ಕಾರದ ನೀತಿಗಳನ್ನು ಪ್ರಶ್ನಿಸುವವರು ಮತ್ತು ಪ್ರತಿಭಟಿಸುವವರನ್ನು ದೇಶದ್ರೋಹಿಗಳೆಂದು ತೀರ್ಮಾನಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಗತಿಪರ ಬರಹಗಾರರು ಪರಂಪರೆಯನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತಲೇ ಬರುತ್ತಿದ್ದಾರೆ. ಅವರು ಪರಂಪರೆಯನ್ನು ತಿರಸ್ಕರಿಸಿಲ್ಲ. ಸತ್ಯವನ್ನು ಹೇಳಿದ್ದಾರೆ. ಚಾರ್ವಾಕನನ್ನು ಕೊಂದುಹಾಕಿದರು. ವಿಚಾರ ಭಿನ್ನತೆ ಕಾರಣಕ್ಕಾಗಿ ಗೋವಿಂದ ಪನ್ಸಾರೆ, ಎಂ.ಎಂ. ಕಲ್ಬುರ್ಗಿ, ಹಿರಿಯ ಪತ್ರಕರ್ತೆ ಗೌರಿಲಂಕೇಶ್ ಅವರನ್ನು ಹತ್ಯೆ ಮಾಡಿದರು. ಸಂಘಪರಿವಾರ ಮತ್ತು ಬಿಜೆಪಿ ತನಗೆ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸುವವರ ದನಿಯನ್ನು ಅಡಗಿಸುವ ಕೆಲಸ ಮಾಡುತ್ತಿದೆ. ಇದನ್ನು ಎದುರಿಸಲು ನಾವು ಒಗ್ಗೂಡಬೇಕಾಗಿದೆ ಎಂದರು.

ಫ್ಯಾಸಿಸ್ಟ್ ಶಕ್ತಿಗಳು ವೈವಿಧ್ಯತೆಯನ್ನು ಸಹಿಸಲಾರವು. ಆ ಶಕ್ತಿಗಳು ನಮ್ಮ ಸಂವಿಧಾನವನ್ನು ಒಪ್ಪಿಕೊಳ್ಳುವುದಿಲ್ಲ. ಅವರಿಗೆ ಮನುಸ್ಮೃತಿ ಸಂವಿಧಾನ. ಅದಕ್ಕಾಗಿಯೇ ದೇಶದಲ್ಲಿ ಗುಂಪುಹತ್ಯೆ, ಹಲ್ಲೆ ಮೊದಲಾದವುಗಳು ನಡೆಯುತ್ತಿವೆ. ಹಿಂದಿ ಮಾತ್ರ ಶ್ರೇಷ್ಟವಲ್ಲ. ಕನ್ನಡ, ಮಲೆಯಾಳಂ, ತೆಲುಗು, ತಮಿಳು ಮೊದಲಾದ ಭಾಷೆಗಳು ಭಾರತದ ಸೌಂದರ್ಯವನ್ನು ಹೆಚ್ಚಿಸಿವೆ. ಆದರೆ ದೇಶದಲ್ಲಿ ಏನಾಗುತ್ತಿದೆ. ಇತ್ತೀಚಿನ ಸರ್ಕಾರದ ನೀತಿಗಳನ್ನು ಖಂಡಿಸಿ ಪ್ರತಿಭಟಿಸುತ್ತಿರುವ ಯುವ ಸಮುದಾಯವನ್ನು ದೇಶದ್ರೋಹಿಗಳೆಂದು ಕರೆಯುತ್ತಿದ್ದಾರೆ. ಆದರೂ ಯುವಜನತೆ ಎಚ್ಚೆತ್ತುಕೊಂಡು ಹೋರಾಟಕ್ಕೆ ಇಳಿದಿರುವುದು ಶ್ಲಾಘನೀಯ ಎಂದರು.

ನಾವು ಕಠಿಣ ಪರಿಸ್ಥಿಯಲ್ಲಿ ಜೀವಿಸುತ್ತಿದ್ದೇವೆ. ನಮ್ಮ ಮುಂದೆ ಹಲವು ಸವಾಲುಗಳು ನರ್ತನ ಮಾಡುತ್ತಿವೆ. ಫ್ಯಾಸಿಸ್ಟ್ ಶಕ್ತಿಗಳು ನಮ್ಮಿಂದ ನೆಮ್ಮದಿಯನ್ನು ಕಿತ್ತುಕೊಳ್ಳುತ್ತಿವೆ. ದೇಶವನ್ನು ಕಸಿದುಕೊಂಡಿವೆ. ಸ್ವಾತಂತ್ರ್ಯ ಹರಣವಾಗುತ್ತಿದೆ. ಮೌಲ್ಯಗಳಿಗೆ ಧಕ್ಕೆ ಒದಗಿದೆ. ಈ ಹಿನ್ನೆಲೆಯಲ್ಲಿ ಕೇರಳದಲ್ಲಿ ಪ್ರಗತಿಪರ ಸಾಹಿತಿಗಳ ವೇದಿಕೆ ಜನವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ದ ಕಾರ್ಮಿಕ ಸಂಘಟನೆಗಳು ಜನವರಿ 8ರಂದು ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದೆ ಎಂದು ತಿಳಿಸಿದರು.

ಕಲೆ, ಸಾಹಿತ್ಯ, ಸಂಸ್ಕೃತಿ ಎಲ್ಲದರಲ್ಲೂ ರಾಜಕೀಯವಿದೆ. ರಾಜಕೀಯವಿಲ್ಲದ ಕ್ಷೇತ್ರವೇ ಇಲ್ಲ. ಬರಹಗಾರರು ಯಾವುದಾದರೂ ಒಂದು ಕಡೆ ಗುರುತಿಸಿಕೊಳ್ಳಲೇಬೇಕು. ಅದು ಬಲಪಂಥೀಯವಾಗಿರಬಹುದು ಇಲ್ಲವೇ ಎಡ ಪಂಥೀಯವಾಗಿರಬಹುದು. ಇದರಿಂದ ಯಾರೂ ಹೊರತಾಗಿಲ್ಲ. ಇಂತಹ ಸನ್ನಿವೇಶದಲ್ಲಿ ಪ್ರಗತಿಪರ ಬರಹಗಾರರು ಭಾರತದ ಸಂವಿಧಾನ ಉಳಿಸಲು, ಪ್ರಜಾತಾಂತ್ರಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಮತ್ತಷ್ಟು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಉದ್ಘಾಟನಾ ಸಮಾರಂಭದಲ್ಲಿ ನಿವೃತ್ತ ಪ್ರಾಂಶುಪಾಲ ಜಿ.ಎಂ/ಶ್ರೀನಿವಾಸಯ್ಯ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಅತಿಥಿಗಳಾಗಿ ಪ್ರೊ. ಬರಗೂರು ರಾಮಚಂದ್ರಪ್ಪ, ಸೋಮಶೇಖರ್, ಎಸ್. ರಮೇಶ್ ಉಪಸ್ಥಿತರಿದ್ದರು. ಎರಡು ದಿನಗಳ ಕಾಲ ವಿವಿಧ ವಿಷಯಗಳ ಕುರಿತು ಆರು ಗೋಷ್ಠಿಗಳು ನಡೆಯಲಿವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...