Homeಎಂಟರ್ತೈನ್ಮೆಂಟ್ಹಾಲಿವುಡ್‍ನ ಕಿರಾತಕ ನಿರ್ದೇಶಕ ಕ್ವೆಂಟಿನ್ ಟ್ಯಾರಂಟಿನೊ

ಹಾಲಿವುಡ್‍ನ ಕಿರಾತಕ ನಿರ್ದೇಶಕ ಕ್ವೆಂಟಿನ್ ಟ್ಯಾರಂಟಿನೊ

- Advertisement -
- Advertisement -

“ಹಿಂಸೆ ಎಷ್ಟು ಒಳ್ಳೇದು, ಅದು ನೋಡುಗರ ಮೇಲೆ ಎಷ್ಟು ಪರಿಣಾಮ ಬೀರುತ್ತೆ”

“ನಾನು ಸಂಭಾಷಣೆ ಬರೆಯುವುದಿಲ್ಲ, ಪಾತ್ರಗಳು ಪರಸ್ಪರ ಮಾತನಾಡುವಂತೆ ಮಾಡುತ್ತೇನೆ.”

2018ರಲ್ಲಿ ಆಕ್ಸ್‍ಫರ್ಡ್ ಡಿಕ್ಷನರಿಯಲ್ಲಿ ಒಂದು ಪದ ಸೇರ್ಪಡೆಯಾಯಿತು, ‘Tarantinoesque’ ಅದರ ಅರ್ಥ ‘characterized by graphic and stylized violence, non-linear storylines, cineliterate references, satirical themes and sharp dialogues’ ಎಂದು ಬರೆಯಲಾಗಿದೆ.

1963ರಲ್ಲಿ ಹುಟ್ಟಿದ ಕ್ವೆಂಟಿನ್ ಪ್ರತಿಭಾವಂತನಾಗಿದ್ದರೂ ಶಾಲಾಶಿಕ್ಷಣವನ್ನು ಮುಗಿಸಲಿಲ್ಲ. ನೀಲಿ ಚಿತ್ರಗಳನ್ನು ತೋರಿಸುವ ಥಿಯೇಟರ್ ಒಂದರಲ್ಲಿ ಟಾರ್ಚ್ ಹಾಕಿ ಜಾಗ ತೋರಿಸುವ (ಅಶರ್) ಕೆಲಸದೊಂದಿಗೆ ಇನ್ನಿತರ ಕೆಲಸಗಳನ್ನು ಮಾಡಿದ ಟೊರೆಂಟಿನೊ ತನ್ನ 15ನೇ ವಯಸ್ಸಿನಲ್ಲಿಯೇ ಒಂದು ಚಿತ್ರಕಥೆಯನ್ನು ಬರೆದ. ತದನಂತರ ಅಭಿನಯದ ತರಬೇತಿ ಪಡೆದ ಕ್ವೆಂಟಿನ್ ಕೆಲವು ಚಿತ್ರಕಥೆಗಳನ್ನು ಬರೆದ. ಅದರಲ್ಲಿ ಒಂದು ರೆಸರ್ವಾಯರ್ ಡಾಗ್ಸ್ ಎನ್ನುವ ಚಿತ್ರದ ಕಥೆ.

ಹಾಲಿವುಡ್‍ನಲ್ಲಿ ಸ್ಟುಡಿಯೋ ವ್ಯವಸ್ಥೆ ಇದೆ; ಅಲ್ಲಿ ಚಿತ್ರಗಳನ್ನು ನಿರ್ಮಿಸುವವರು ದೊಡ್ಡ ದೊಡ್ಡ ಸ್ಟುಡಿಯೋಗಳು. ಸ್ಟುಡಿಯೊಗಳ ಸಹಕಾರವಿಲ್ಲದೇ ಮಾಡುವ ಸಿನೆಮಾಗಳನ್ನು ಇಂಡಿ ಫಿಲ್ಮ್ಸ್ ಎಂದು ಕರೆಯಲಾಗುತ್ತದೆ. (ಹಾಗೆ ನೋಡಿದರೆ ನಮ್ಮಲ್ಲಿಯ ಎಲ್ಲಾ ಸಿನೆಮಾಗಳು ಇಂಡಿ ಚಿತ್ರಗಳೆ) ಕ್ವೆಂಟಿನ್ ತಾನು ಬರೆದ ಚಿತ್ರಕಥೆಯನ್ನು ತನ್ನ ಗೆಳೆಯರಿಗೆ ತೋರಿಸಿದ, ಹೇಗೋ ಆ ಚಿತ್ರಕಥೆ ಹಾರ್ವಿ ಕೀಟೆಲ್‍ಗೆ ತಲುಪಿತು. ಅವರ ಮತ್ತಿತರ ಸ್ನೇಹಿತರ ಸಹಕಾರದಿಂದ ರೂಪುಗೊಂಡಿತು ಆ ಇಂಡಿ ಚಿತ್ರ.

ಆ ಚಿತ್ರದಲ್ಲಿಯ ಹಿಂಸೆ, ಸಂಭಾಷಣೆ, ಹಿಂದಕ್ಕೆ ಮುಂದಕ್ಕೆ ಸಾಗುವ ಕಥೆ ನೋಡುಗರನ್ನು ಬೆಚ್ಚಿಬೀಳಿಸಿತು. ಇಂಡಿ ಚಿತ್ರವಾಗಿದ್ದರೂ ದಿನೇದಿನೇ ಅದರ ಪ್ರಸಿದ್ಧಿ ಹೆಚ್ಚಿ, ಈಗ ಅದೊಂದು ಕಲ್ಟ್ ಸಿನೆಮಾ ಎಂದು ಪರಿಗಣಿಸಲಾಗಿದೆ. ಆ ಚಿತ್ರದಲ್ಲಿಯ ಸಂಭಾಷಣೆಗಳು ಟ್ಯಾರಂಟಿನೋ ಅವರ ಮುಂದಿನ ಚಿತ್ರಗಳ ಝಲಕ್ ಅನ್ನೂ ತೋರಿಸಿತು. ಆ ಚಿತ್ರದ ನಂತರ ಟ್ಯಾರಂಟಿನೊಗೆ ಅನೇಕ ಚಿತ್ರಗಳನ್ನು ನಿರ್ದೇಶಿಸುವ ಆಫರ್‍ಗಳು ಬಂದವು, ಅದರಲ್ಲಿ ಸೂಪರ್‍ಹಿಟ್ ಚಿತ್ರಗಳಾದ ಸ್ಪೀಡ್ ಮತ್ತು ಮೆನ್ ಇನ್ ಬ್ಲ್ಯಾಕ್ ಕೂಡ ಸೇರಿದ್ದವು. ಆದರೆ ಟ್ಯಾರಂಟಿನೊ ಅವುಗಳನ್ನು ತಿರಸ್ಕರಿಸಿ ತನ್ನ ಮುಂದಿನ ಚಿತ್ರ ಪಲ್ಪ್ ಫಿಕ್ಷನ್ ಬರೆಯಲು ಪ್ರಾರಂಭಿಸಿದ.

1994ರಲ್ಲಿ ಪಲ್ಪ್ ಫಿಕ್ಷನ್ ಬಿಡುಗಡೆಯಾಯಿತು; ಚಿತ್ರದಲ್ಲಿ ಜಾನ್ ಟ್ರೆವೊಲ್ಟಾ, ಸ್ಯಾಮ್ಯುವೆಲ್ ಜಾಕ್ಸನ್, ಟಿಮ್ ರಾಥ್, ಬ್ರೂಸ್ ವಿಲಿಸ್ ಮುಂತಾದ ಸ್ಟಾರ್‍ಗಳನ್ನು ಒಳಗೊಂಡಿತ್ತು. ಈ ಚಿತ್ರದಲ್ಲಿಯೂ ಉದ್ದುದ್ದ ಸಂಭಾಷಣೆಗಳಿವೆ, ಅಂದರೆ ಪಾತ್ರಗಳು ಹಲವಾರು ನಿಮಿಷಗಳವರೆಗೆ ಆ ದೃಶ್ಯಕ್ಕೆ ನೇರವಾಗಿ ಸಂಬಂಧವಿಲ್ಲದ ವಿಷಯಗಳ ಬಗ್ಗೆ ಮಾತನಾಡುತ್ತಾರೆ; ಸ್ಯಾಮುವೆಲ್ ಜಾಕ್ಸನ್‍ನ ಪಾತ್ರ ಬೈಬಲ್‍ನ ಸಾಲುಗಳನ್ನು ಪದೇ ಪದೇ ಉಲ್ಲೇಖಿಸುತ್ತಾರೆ. ಈ ಉದ್ದುದ್ದ ಸಂಭಾಷಣೆಗಳು ಇದ್ದಾಗಲೂ ಮುಂದೇನಾಗುವುದು ಎನ್ನುವ ಆತಂಕ ನೋಡುಗರಿಗೆ ಒಂದುಕ್ಷಣವೂ ತಪ್ಪುವುದಿಲ್ಲ. ಅತ್ಯಂತ ಹಿಂಸಾತ್ಮಕ ಘಟನೆ, ಆ ಘಟನೆಗೆ ಮುಂಚೆ ಹಿಂಸೆಯಲ್ಲಿ ಪಾಲ್ಗೊಳ್ಳಲಿರುವ ವ್ಯಕ್ತಿಗಳು ಲೋಕಾಭಿರಾಮವಾಗಿ ಮಾತನಾಡುವುದು ಟ್ಯಾರಂಟಿನೊ ಅವರ ಸಿನೆಮಾದ ಸ್ಟೈಲ್ ಎಂದಾಯಿತು ಈ ಸಿನೆಮಾದಿಂದ. ಇದೇ ಸಿನೆಮಾದಲ್ಲಿ ಆಫ್ರಿಕ ಮೂಲದ ವ್ಯಕ್ತಿಗಳಿಗೆ ‘ನಿಗರ್’ ಎನ್ನುವ ಪದವನ್ನು ಯಥೇಚ್ಛವಾಗಿ ಬಳಸುತ್ತಾರೆ.

ಹಿಂಸೆಯ ಪ್ರದರ್ಶನದೊಂದಿಗೆ ಈ ಪದದ ಬಳಕೆಯೂ ಟೀಕೆಗೆ ಒಳಗಾದವು. “ನಾನಿರುವ ಸ್ಥಳದಲ್ಲಿ ಆ ಪದವನ್ನು ಬಳಸುತ್ತಾರೆ; ಒಬ್ಬ ಆಫ್ರಿಕನ್ ಮೂಲದ ವ್ಯಕ್ತಿ ನಿಗರ್ ಎನ್ನುವ ಪದವನ್ನು ಬಳಸಿದರೆ ಅದು ತಪ್ಪಾಗುವುದಿಲ್ಲ, ನಾನು ಒಬ್ಬ ಬಿಳಿಯನಾಗಿ ಬಳಸಿದರೆ ಅದು ತಪ್ಪು ಎಂದು ಹೇಳುವುದೇ ಜನಾಂಗೀಯವಾದ ಲಕ್ಷಣ’ ಎಂದು ಟ್ಯಾರಂಟಿನೊ ಆ ಪದದ ಬಳಕೆಯನ್ನು ಸಮರ್ಥಿಸಿಕೊಂಡರು. ಈ ಚಿತ್ರದಲ್ಲಿ ಹಲವಾರು ಕಥೆಗಳು ಹಿಂದಿನಿಂದ ಮುಂದಕ್ಕೆ, ಕೆಲವು ಸಲ ಹಿಂದಕ್ಕೆ ಸಾಗುತ್ತಿರುವಾಗ ಒಂದನ್ನೊಂದು ಸಂಧಿಸುತ್ತವೆ. ಈ ರೀತಿಯ ನಿರೂಪಣೆ ಇದೇ ಮೊದಲ ಬಾರಿ ಎಂದು ಹೇಳಲು ಆಗುವುದಿಲ್ಲವಾದರೂ ಈ ಕಥನಶೈಲಿ ನೋಡುಗರನ್ನು ದಂಗುಬಡಿಸುವ ರೀತಿಯಲ್ಲಿ ಬಳಸಿದ್ದು ಬಹುಶಃ ಇದೇ ಮೊದಲು.

ಈ ಚಿತ್ರವೇ ಟ್ಯಾರಂಟಿನೊ ಅವರ ಮಾಸ್ಟರ್‍ಪೀಸ್ ಎನ್ನಬೇಕು ಅಂದುಕೊಂಡರೂ, ಅವರ ಬತ್ತಳಿಕೆಯಲ್ಲಿ ಇನ್ನಷ್ಟು ಕಥೆಗಳಿದ್ದವು, ಅದರಲ್ಲಿ ಹಿಟ್ಲರ್ ಅನ್ನು ಕೊಲ್ಲಲು ಹೊರಟ ಅಮೆರಿಕದ ಜ್ಯೂಗಳ ತಂಡವು ಹೊರಡುವ ಮಹತ್ವಾಕಾಂಕ್ಷೆಯ ಚಿತ್ರ. ಆದರೆ ಪಲ್ಪ್ ಫಿಕ್ಷನ್ ಚಿತ್ರದ ನಂತರ ಬಂದ ಚಿತ್ರ ಕಿಲ್ ಬಿಲ್ ಎಷ್ಟು ಮಹತ್ವಾಕಾಂಕ್ಷೆಯ ಚಿತ್ರವಾಗಿತ್ತೆಂದರೆ, ಚಿತ್ರದ ಅವಧಿಯೇ ನಾಲ್ಕು ಗಂಟೆಗಳನ್ನು ಮೀರಿತು. ಆಗ ಅದನ್ನು ಕಿಲ್‍ಬಿಲ್-1 2003ರಲ್ಲಿ ಹಾಗೂ ಎರಡನೇ ಭಾಗ ಕಿಲ್‍ಬಿಲ್-2 ಮಾರನೇ ವರ್ಷ ಬಿಡುಗಡೆಯಾಯಿತು. ಈ ಎರಡು ಚಿತ್ರಗಳಲ್ಲಿ ಸುಮಾರು 1700 ಲೀಟರ್‍ಗಳಷ್ಟು ಕೃತ್ರಿಮ ರಕ್ತವನ್ನು ಹರಿಸಲಾಯಿತು. ಈ ಚಿತ್ರದಲ್ಲೂ ಟ್ಯಾರಂಟಿನೊ ಅವರ ‘ಮ್ಯೂಸ್’ ಎಂದು ಪರಿಗಣಿಸಲಾಗಿರುವ ಉಮಾ ಥರ್ಮನ್ ಪ್ರಮುಖ ಪಾತ್ರವನ್ನು ಮಾಡಿದ್ದಾರೆ.

ಇದನ್ನು ಓದಿ: ಪಾಲ್ ಥಾಮಸ್ ಆಂಡರ್ಸನ್ – ಸಿನಿಯಾನದಲ್ಲಿ ರಾಜಶೇಖರ್ ಅಕ್ಕಿಯವರ ಬರಹ

ಉಮಾ ಥರ್ಮನ್ ಮಾಡಿದ ಪಾತ್ರವನ್ನು ಬ್ರೈಡ್ ಎಂದು ಕರೆಯಲಾಗುತ್ತೆ; ಅವಳು ಮದುವೆಯಾಗುವಾಗ ಅವಳ ಹತ್ಯೆಯ ಪ್ರಯತ್ನ ನಡೆಯುತ್ತೆ ಹಾಗಾಗಿ. ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ವರ್ಷಗಳ ಕಾಲ ಇರುವ ಈ ಬ್ರೈಡ್‍ಗೆ ತನ್ನ ಮತ್ತು ತನ್ನ ಮದುವೆಗೆ ಬಂದವರ ಮೇಲೆ ಗುಂಡಿನ ಸುರಿಮಳೆಗೈದ ನಾಲ್ವರ ಮೇಲೆ ಸೇಡು ತೀರಿಸಿಕೊಳ್ಳಬೇಕಿದೆ. ಬಿಲ್ ಎನ್ನುವವನು ಆ ಗ್ಯಾಂಗ್‍ನ ಮುಖ್ಯಸ್ಥ; ಈ ಬ್ರೈಡ್ ಕೂಡ ಅದೇ ಗ್ಯಾಂಗ್‍ನ ಸದಸ್ಯೆಯಾಗಿದ್ದವಳು. ಒಬ್ಬರನ್ನು ಕೊಲ್ಲುವುದೂ ಒಂದು ದೀರ್ಘ ಪಯಣ. ಟೊಕ್ಯೋದ ಭೂಗತ ಜಗತ್ತಿನ ರಾಣಿಯಾಗಿರುವ ಓರೆನ್ ಶಿ (ಲೂಸಿ ಲಿಯು) ಅನ್ನು ಕೊಲ್ಲಲು ಹೋದಾಗ, ಅವಳನ್ನು ಸಂಧಿಸುವ ಮುನ್ನ ಅವಳ ನೂರಾರು ಸಹಚರರನ್ನು ಒಬ್ಬಂಟಿಯಾಗಿ ಸೆಣೆಸಬೇಕಾಗುತ್ತದೆ. ಐದು ನಿಮಿಷದ ಫೈಟ್ ಸಿಕ್ವೆನ್ಸ್‍ನಲ್ಲಿ ಬ್ರೈಡ್‍ನ ಖಡ್ಗದಿಂದ ಉರುಳಿಬೀಳುವವರ ಸಂಖ್ಯೆ ಎಣಿಕೆಗೆ ಸಿಗುವುದಿಲ್ಲ.

ಈ ಹಿಂಸೆಯೊಂದಿಗೆ ತನ್ನದೇ ನಿಯಮಗಳನ್ನೊಳಗೊಂಡ ಒಂದು ಅದ್ಭುತ ಜಗತ್ತನ್ನು ಸೃಷ್ಟಿಸಿದ್ದಾನೆ ಟ್ಯಾರಂಟಿನೊ. ಹಿಂಸೆ ಪ್ರತೀಕಾರದ ಈ ಚಿತ್ರದಲ್ಲಿ ಒಂದು ಬಾರಿಯೂ ಒಬ್ಬನೇ ಪೊಲೀಸ್ ಕಾಣಿಸಿಕೊಳ್ಳುವುದಿಲ್ಲ; ಅಂತಹ ವ್ಯವಸ್ಥೆಯ ಸುಳಿವೇ ಇಲ್ಲ. ಆದರೆ ನೋಡುಗÀ ಇದನ್ನೆಂದೂ ಪ್ರಶ್ನಿಸುವುದಿಲ್ಲ. ಉದ್ದುದ್ದ ಸಂಭಾಷಣೆಗಳು ಬೋರ್ ಹೊಡೆಸುವುದಿಲ್ಲ. ಚಿತ್ರದ ಮಧ್ಯದಲ್ಲೇ ಒಂದು ದೀರ್ಘವಾದ ಮಂಗಾ ಅನಿಮೇಷನ್ ಸೀಕ್ವೆನ್ಸ್ ಅನ್ನು ಬಳಸಲಾಗಿದೆ. ಇದೊಂದು ಹೊಸತನದ ಪ್ರಯೋಗ ಎಂದುಕೊಂಡರೂ ಟ್ಯಾರಂಟಿನೊ ಇದನ್ನು ಆಯಾ ಶೈಲಿಗಳ ಅನುಕರಣೆ ಮಾಡಿ, ಅವೆಲ್ಲವುಗಳನ್ನು ಒಂದೆಡೆ ತರುವ ಪ್ರಯತ್ನವನ್ನಷ್ಟೇ ಮಾಡಬೇಕು ಎಂದುಕೊಂಡು ಈ ಸಿನೆಮಾ ನಿರ್ದೇಶಿಸಿದ್ದು.

ಇದರ ನಂತರ ಚಿತ್ರದಲ್ಲಿ ಹಾಲಿವುಡ್‍ನಲ್ಲಿ ಸ್ಟಂಟ್ ಮಾಡುವ ನಿಜವಾದ ಫೈಟರ್‍ಗಳನ್ನು ಇಟ್ಟುಕೊಂಡು ಡೆತ್ ಪ್ರೂಫ್ ಎನ್ನುವ ಚಿತ್ರ ಮಾಡಿ, ಬಹಳ ವರ್ಷಗಳಿಂದ ಮಾಡಬೇಕೆಂದಿದ್ದ ಇಂಗ್ಲೋರಿಯಸ್ ಬಾಸ್ಟಡ್ರ್ಸ್ ಎನ್ನುವ ಚಿತ್ರವನ್ನು ನಿರ್ದೇಶಿಸಿದ. ಹಿಟ್ಲರ್ ತನ್ನ ಉತ್ತುಂಗದಲ್ಲಿದ್ದಾಗ ಅಮೆರಿಕದ ಕೆಲವು ಜ್ಯುಗಳು ಅವನನ್ನು ಕೊಲ್ಲುವ ಯೋಜನೆ ಮಾಡಿ, ಅದನ್ನು ಹೇಗೆ ಕಾರ್ಯಗತಗೊಳಿಸುವವರು ಎನ್ನುವುದೇ ಕಥೆ. ಪ್ರತೀಕಾರದ ಈ ಕಥೆಯಲ್ಲಿ ಪರ್ಯಾಯ ಇತಿಹಾಸವನ್ನು ಅತ್ಯಂತ ರೋಚಕವಾಗಿ ಸೃಷ್ಟಿಸಲಾಗಿದೆ.

ಹಾಲಿವುಡ್ ಅತ್ಯಂತ ಪ್ರಭಾವಶಾಲಿ ನಿರ್ದೇಶಕ ಎಂದು ಹೆಸರುವಾಸಿಯಾದ ಟ್ಯಾರಂಟಿನೊ ಅವರ ಅದ್ಭುತ ಪ್ರತಿಭೆಯೊಂದಿಗೆ ಅವರ ಅಹಂಕಾರವೂ ಅಷ್ಟೇ ಇದೆ ಎನ್ನುವವರು ಕೆಲವರಿದ್ದಾರೆ. ಜಾಂಗೋ ಅನ್‍ಚೇನಡ್(2012) ಮತ್ತು ಹೇಟ್‍ಫುಲ್ ಏಯಟ್(2015) ಚಿತ್ರಗಳನ್ನು ನೋಡಿದಾಗ ಹಾಗೆ ಅನಿಸಿದರೆ ತಪ್ಪಲ್ಲ. ಜನಾಂಗೀಯತೆಯ ಬಗ್ಗೆ ಅತೀವ ಕಾಳಜಿಯನ್ನು ಹೊಂದಿದ ಟ್ಯಾರಂಟಿನೊ, ಜಾಂಗೋ ಅನ್‍ಚೇನಡ್ ಚಿತ್ರದಲ್ಲಿ ಅಮೇರಿಕದ ಗುಲಾಮಗಿರಿಯ ಇತಿಹಾಸದ ಬಗ್ಗೆ ರೋಚಕವಾದ ಚಿತ್ರ ಮಾಡಿದ್ದರೂ, ಸ್ಯಾಮುವೆಲ್ ಜಾಕ್ಸನ್ ಅವರ ಪಾತ್ರಕ್ಕೆ ಚಿತ್ರದಲ್ಲಿ ಸಿಗುವ ಮನ್ನಣೆ ಗುಲಾಮಗಿರಿಯ ಸ್ವರೂಪವನ್ನು ತಪ್ಪಾಗಿ ಅರ್ಥೈಸುತ್ತದೆ. ನಂತರ ಬಂದ ಹೇಟ್‍ಫುಲ್ ಏಯ್ಟ್‍ನಲ್ಲಿ ಎಲ್ಲಾ ಪಾತ್ರಗಳೂ ನೆಗೆಟಿವ್ ಪಾತ್ರಗಳೇ, ಹಾಗಾಗಿ ಕಥೆಯನ್ನು ಎಷ್ಟೇ ರೋಚಕವಾಗಿ ನಿರೂಪಿಸಿದರೂ ಮಜಾ ಕೊಡುವುದಿಲ್ಲ, ಅವರ ಟ್ರಂಪ್‍ಕಾರ್ಡ್ ಆಗಿದ್ದ ಸಂಭಾಷಣೆಗಳು ಆಸಕ್ತಿ ಹುಟ್ಟಿಸುವುದಿಲ್ಲ.

ಜುಲೈ 25ರಂದು ಅವರ ಹೊಸ ಚಿತ್ರ ‘ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್’ ಬಿಡುಗಡೆಯಾಗಿದೆ. ಇಲ್ಲಿ ಬಂದಾಗ ನೋಡಿ, ಟ್ಯಾರಂಟಿನೊ ಅವರ ಪಯಣ ಎತ್ತ ಸಾಗಿದೆ ಎನ್ನುವುದನ್ನು ತಿಳಿದುಕೊಳ್ಳಬಹುದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

‘ಸಕ್ಕರೆ ಮಟ್ಟ ಹೆಚ್ಚಿಸಿಕೊಳ್ಳಲು ಮಾವಿನಹಣ್ಣು, ಸಿಹಿತಿಂಡಿ ಸೇವಿಸುತ್ತಿರುವ ಕೇಜ್ರಿವಾಲ್..; ಇಡಿ ಆರೋಪ

0
ಮಧುಮೇಹಿಯಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವೈದ್ಯಕೀಯ ಜಾಮೀನು ಪಡೆಯಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಪ್ರತಿದಿನ ಮಾವಿನಹಣ್ಣು, ಆಲೂ ಪುರಿ ಮತ್ತು ಸಿಹಿತಿಂಡಿಗಳನ್ನು ಸೇವಿಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಗುರುವಾರ...