ಹಂಪಿಯಲ್ಲಿ ಪ್ರವಾಹ: ಪ್ರವಾಸಿಗರು, ಹೋಟೆಲ್ ಮಾಲೀಕರು ಮಾಡಿದ್ದು ತಪ್ಪಲ್ಲವೇ? ಇದಕ್ಕೆ ಶಿಕ್ಷೆಯಿಲ್ಲವೇ?

ಅತ್ತ ಸಹ್ಯಾದ್ರಿ ಪರ್ವತ ಶ್ರೇಣಿ ಮತ್ತು ಮಲೆನಾಡಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದಂತೆ ಇತ್ತ ದೂರದ ಕೊಪ್ಪಳ ಜಿಲ್ಲೆಯಲ್ಲಿರುವ ತುಂಗಭದ್ರಾ ಜಲಾಶಯ ತುಂಬುವುದು ಎಲ್ಲರಿಗೂ ಖಾತ್ರಿಯಾಗಿ ಹೋಯಿತು. ಮಳೆ ಸುರಿಯುವ ಮೊದಲು ಜಲಾಶಯದಲ್ಲಿ ಬರೀ 32 ಟಿಎಂಸಿ ಅಡಿ ನೀರಿತ್ತು. ಒಂದೇ ವಾರದಲ್ಲಿ 100 ಟಿಎಂಸಿ ಅಡಿಗೆ ಬಂತು ನಿಂತಿತು. ಆದರೆ, ಮಲೆನಾಡಿನಲ್ಲಿ ಮಳೆ ಮಾತ್ರ ನಿಂತಿರಲಿಲ್ಲ. ಸುಮಾರು 2 ಲಕ್ಷ ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಲೇ ಇತ್ತು. ಜಲಾಶಯದ ಗೇಟುಗಳನ್ನು ತೆರೆದು ನದಿಗೆ ನೀರು ಬಿಡುವುದು ಅನಿವಾರ್ಯವಾಯಿತು.

ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದ್ದ ಕೊಪ್ಪಳದ ಯುವ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಜಲಾಶಯದಿಂದ ಎರಡೂವರೆ-ಮೂರು ಲಕ್ಷ ಕ್ಯೂಸೆಕ್ ನೀರನ್ನು ಬಿಟ್ಟರೆ ಜಗತ್ಪ್ರಸಿದ್ಧ ವಿಶ್ವಪಾರಂಪರಿಕ ತಾಣವಾದ ಹಂಪಿಯ ಕೆಲ ಸ್ಮಾರಕಗಳು ಜಲಾವೃತವಾಗುತ್ತವೆ ಹಾಗೂ ಹಂಪಿಯ ಪಕ್ಕದಲ್ಲಿರುವ ವಿರುಪಾಪುರ ನಡುಗಡ್ಡೆಯಲ್ಲಿನ ಜನ ತೊಂದರೆಗೆ ಸಿಲುಕಿಕೊಳ್ಳುತ್ತಾರೆ ಎಂಬುದನ್ನು ಮೊದಲೇ ಊಹಿಸಿದ್ದರು. ಅದಕ್ಕಾಗಿಯೇ ಅವರು ಅತ್ತ ಜಲಾಶಯದ ನೀರಿನ ಮಟ್ಟ ಏರುತ್ತಿದ್ದಂತೆ ವಿರುಪಾಪುರ ನಡುಗಡ್ಡೆಯಿಂದ ಜನರನ್ನು ತೆರವುಗೊಳಿಸುವ ಸಿದ್ಧತೆ ಮಾಡಿಕೊಂಡರು. ಮೊದಲು ತನ್ನ ಅಧಿಕಾರಿಗಳನ್ನು ಕಳಿಸಿ ಪ್ರವಾಸಿಗರು ನಡುಗಡ್ಡೆಗೆ ಬರುವುದನ್ನು ತಡೆಯಲು ಪ್ರಯತ್ನಿಸಿದರು. ಡಂಗೂರ ಹೊಡೆಸಿ ನಡುಗಡ್ಡೆಯಲ್ಲಿರುವ ಜನ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಸಾರಿಸಿದರು. ಕೊನೆಗೆ ತಾವೇ ಖುದ್ದಾಗಿ ನಡುಗಡ್ಡೆಗೆ ಹೋಗಿ ಎಲ್ಲಾ ಹೊಟೇಲ್ ಮತ್ತು ರೆಸಾರ್ಟ್ ಗಳನ್ನು ಮುಚ್ಚಬೇಕು ಎಂದು ಅವುಗಳ ಮಾಲಿಕರಿಗೆ ನಿರ್ದೇಶನ ಕೊಟ್ಟು ಬಂದರು. ಅಷ್ಟೇ ಅಲ್ಲದೇ, ಈ ನಿಟ್ಟಿನಲ್ಲಿ ಒಂದು ಅಧಿಕೃತ ಆದೇಶವನ್ನೂ ಹೊರಡಿಸಿದರು.

ಇಷ್ಟೆಲ್ಲಾ ಮಾಡಿದ ನಂತರವೂ ಆಗಿದ್ದೇನು ಗೊತ್ತೆ?

ವಿಶ್ವಪ್ರಸಿದ್ಧ ಹಂಪಿಗೆ ದೇಶವಿದೇಶಗಳಿಂದ ಹಲವು ಪ್ರವಾಸಿಗರು ಬರುತ್ತಾರೆ. ಬಂದವರಲ್ಲಿ ಬಹುತೇಕರು ಮೋಜು-ಮಸ್ತಿಗೆ ಹೆಸರುವಾಸಿಯಾದ ಈ ವಿರುಪಾಪುರ ಗಡ್ಡಿಗೆ ಬಂದೇ ಬರುತ್ತಾರೆ. ದೇಶಿ-ವಿದೇಶಿ ಪ್ರವಾಸಿಗರನ್ನು ಹಲವು ರೀತಿಯಲ್ಲಿ ತೃಪ್ತಿಪಡಿಸುವುದಕ್ಕಾಗಿಯೇ ಅಲ್ಲಿ ಅನೇಕ ಐಷಾರಾಮಿ ಹೊಟೇಲುಗಳು, ರೆಸಾರ್ಟುಗಳು ತಲೆಯೆತ್ತಿವೆ. ದುಡ್ಡು ಮಾಡುವ ಖಯಾಲಿಗೆ ಬಿದ್ದಿರುವ ಹೊಟೇಲ್ ಮಾಲಿಕರು ಜಿಲ್ಲಾಧಿಕಾರಿ ನೀಡಿದ ಮನವಿ, ನಿರ್ದೇಶನ, ಎಚ್ಚರಿಕೆ ಮತ್ತು ಆದೇಶವನ್ನೂ ಗಾಳಿಗೆ ತೂರಿ ತಮ್ಮ ಹೊಟೇಲ್ ಮತ್ತು ರೆಸಾರ್ಟುಗಳನ್ನು ಬಂದ್ ಮಾಡಲಿಲ್ಲ.

ಅದೂ ಸಾಲದೆಂಬಂತೆ, “ನದಿಯಲ್ಲಿ ನೀರು ಹೆಚ್ಚಾದರೆ, ನಾವೇ ನಿಮ್ಮನ್ನು ಖಾಸಗಿ ದೋಣಿಗಳಲ್ಲಿ ಆಚೆಗೆ ಬಿಟ್ಟುಬರುತ್ತೇವೆ. ನೀವೇನು ಹೆದರಬೇಡಿ. ಬೇಕಿದ್ದರೆ ನಿಮ್ಮ ಕಾರುಗಳನ್ನು ನದಿಯಿಂದ ದೂರ ನಿಲ್ಲಿಸಿ ಬನ್ನಿ” ಎಂದು ಪ್ರವಾಸಿಗರನ್ನು ಹುರಿದುಂಬಿಸಿ, ಅವರಿಗೆ ಆಶ್ವಾಸನೆಗಳನ್ನು ಕೊಟ್ಟು ತಮ್ಮಲ್ಲೇ ಉಳಿಸಿಕೊಂಡರು. ಎರಡನೇ ಶನಿವಾರ, ಭಾನುವಾರ ಮತ್ತು ಸೋಮವಾಗ (ಈದ್) ರಜಾ ದಿನಗಳಾಗಿದ್ದರಿಂದ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿತ್ತು; ಅಂತೆಯೇ ಹೊಟೇಲ್ ಮಾಲಿಕರಿಗೆ ಲಾಭವೂ ಕೂಡ.

ಆಮೇಲೆ ಏನಾಯಿತು? ಜಿಲ್ಲಾಧಿಕಾರಿ ಸುನೀಲ್ ಕುಮಾರ್ ನಿರೀಕ್ಷಿಸಿದಂತೆಯೇ ಮಲೆನಾಡಿನಲ್ಲಿ ಮಳೆ ಬಿಡಲಿಲ್ಲ. ತುಂಗಭದ್ರಾ ಜಲಾಶಯಕ್ಕೆ ಬೃಹತ್ ಪ್ರಮಾಣದ ಒಳಹರಿವು ಬರುವುದು ನಿಲ್ಲಲಿಲ್ಲ. ಜಲಾಶಯದಿಂದ ನೀರು ಹೊರಹರಿಸುವುದೂ ಅನಿವಾರ್ಯವಾಯಿತು. ಯಾವಾಗ ಜಲಾಶಯದಿಂದ ಹೊರಹರಿವು ಎರಡೂವರೆ ಲಕ್ಷ ಕ್ಯೂಸೆಕ್ ದಾಟಿತೋ ಅತ್ತ ಹಂಪಿ ಸ್ಮಾರಕಗಳೂ ಜಲಾವೃತವಾದವು, ಇತ್ತ ನಡುಗಡ್ಡೆಯಲ್ಲೂ ಜನ ನೆರವಿಗಾಗಿ ಕೂಗಲಾರಂಭಿಸಿದರು.

ನಡುಗಡ್ಡೆಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ಪ್ರತಿಸ್ಪಂದನಾ ಪಡೆ (NDRF), ನಾಗರಿಕ ರಕ್ಷಣಾ ಪಡೆ ಮತ್ತು ಅಗ್ನಿಶಾಮಕ ದಳಗಳನ್ನು ಕರೆಸಲಾಯಿತು. ಮೋಜು-ಮಸ್ತಿಗಾಗಿ ನಡುಗಡ್ಡೆಯಲ್ಲಿ ಉಳಿದಿದ್ದ ಪ್ರವಾಸಿಗರನ್ನು ಹಾಗೂ ಲಾಭಕ್ಕಾಗಿ ಅವರನ್ನು ಉಳಿಸಿಕೊಂಡಿದ್ದ ಹೊಟೆಲ್ ಮಾಲಿಕರು/ನಿರ್ವಾಹಕರನ್ನು ರಕ್ಷಿಸಲು ರಕ್ಷಣಾ ದಳಗಳ ಯೋಧರು ತಮ್ಮ ಪ್ರಾಣಗಳನ್ನು ಪಣಕ್ಕೊಡ್ಡಿ ಮೈಯಿಗೆ ಲೈಫ್ ಜಾಕೇಟ್ ಹಾಕಿಕೊಂಡು ಭೋರ್ಗರೆಯುತ್ತಿದ್ದ ನದಿಗೆ ಇಳಿಯಬೇಕಾಯಿತು. ಎನ್.ಡಿ.ಆರ್.ಎಫ್ ತಂಡ ಆಗಲೇ ರಬ್ಬರ್ ಬೋಟ್ ಬಳಸಿ ಒಂದು ಟ್ರಿಪ್ ಹೋಗಿ ಬಂದು ವಿದೇಶಿ ಪ್ರವಾಸಿಗರನ್ನು ಕರೆತಂದಿತ್ತು. ನಡುಗಡ್ಡೆಯಲ್ಲಿ ಸುಮಾರು ಮುನ್ನೂರು ಜನ ಇದ್ದಿದ್ದರಿಂದ ಒಂದೇ ದೋಣಿಯಲ್ಲಿ ಪ್ರತೀ ಸಾರಿ ನಾಲ್ಕೈದು ಜನರನ್ನು ರಕ್ಷಿಸುತ್ತಾ ಹೋದರೆ ಒಂದು ವಾರ ಬೇಕಾಗುತ್ತದೆ. ಆದ್ದರಿಂದ ಇನ್ನೊಂದು ದೋಣಿ ಧುಮ್ಮಿಕ್ಕಿ ಬರುತ್ತಿದ್ದ ಅಪಾಯಕಾರಿ ನದಿಗೆ ಇಳಿಯಿತು. ಅದರಲ್ಲಿ ಐವರು ರಕ್ಷಣಾ ಸಿಬ್ಬಂದಿಗಳಿದ್ದರು. ಅದು ತನ್ನ ಮೊದಲ ಬಾರಿಗೆ ಪ್ರವಾಸಿಗರನ್ನು ಕರೆತರಲು ನಡುಗಡ್ಡೆಯತ್ತ ಹೋಗುವಾಗಲೇ ನದಿಯ ನಡುವೆ ನಿಂತಿದ್ದ ಮರಕ್ಕೆ ಬಡಿದು ಮಗುಚಿಬಿದ್ದಿತು..! ಜನರ ರಕ್ಷಣೆಗೆ ಹೋಗಿದ್ದ ಐವರೂ ರಭಸವಾಗಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದರು.

ಕೂಡಲೇ ಜಿಲ್ಲಾಧಿಕಾರಿ ಸುನೀಲ್ ಕುಮಾರ್ ವಾಯುಪಡೆ ಮತ್ತು ನೌಕಾಪಡೆಗಳನ್ನು ಸಂಪರ್ಕಿಸಿ ಮೂರು ಹೆಲಿಕ್ಯಾಪ್ಟರ್ ಗಳನ್ನು ತರಿಸಿ ಮೊದಲು ನದಿಯಲ್ಲಿ ಕೊಚ್ಚಿ ಹೋಗಿದ್ದ ರಕ್ಷಣಾ ಸಿಬ್ಬಂದಿಯನ್ನು ರಕ್ಷಿಸುವ ಕೆಲಸ ಪ್ರಾರಂಭಿಸಿದರು. ಅದೃಷ್ಟವಶಾತ್ ಕೆಲವೇ ಗಂಟೆಗಳಲ್ಲಿ ಎಲ್ಲಾ ಐವರನ್ನೂ  ರಕ್ಷಿಸುವಲ್ಲಿ ವಾಯುಪಡೆ ಮತ್ತು ನೌಕಾಪಡೆಯ ಹೆಲಿಕ್ಯಾಪ್ಟರುಗಳು ಯಶಸ್ವಿಯಾದವು.

ಕೊನೆಗೆ ದೋಣಿಯ ಮೂಲಕ ನಡುಗಡ್ಡೆಯಲ್ಲಿ ಸಿಲುಕಿರುವ ಪ್ರವಾಸಿಗರನ್ನು ರಕ್ಷಿಸುವ ಯೋಚನೆಯನ್ನೇ ಬಿಟ್ಟು ಇದೇ ಹೆಲಿಕ್ಯಾಪ್ಟರುಗಳ ಮೂಲಕ ಅವರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸುವ ಕೆಲಸ ಪ್ರಾರಂಭಿಸಿದರು.

ವಾಯುಪಡೆಯ ಒಂದು ಹೆಲಿಕ್ಯಾಪ್ಟರ್ 20 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದರೆ ಇನ್ನೊಂದು ಹೆಲಿಕ್ಯಾಪ್ಟರ್ 10 ಜನರನ್ನು ತುಂಬಿಕೊಂಡು ಹೋಗುವ ಸಾಮರ್ಥ್ಯ ಹೊಂದಿತ್ತು. ಈ ಹೆಲಿಕ್ಯಾಪ್ಟರುಗಳು ಕಂಡಕಂಡಲ್ಲಿ ಇಳಿಯುವುದು ಕಷ್ಟ. ಹಾಗಾಗಿ, ನಡುಗಡ್ಡೆಯಿಂದ ಹೊತ್ತೊಯ್ದ ಜನರನ್ನು ಜಿಂದಾಲ್ ಏರ್ ಸ್ಟ್ರಿಪ್ ನಲ್ಲಿ ಇಳಿಸಿದವು. ಇನ್ನೊಂದು ನೌಕಾಪಡೆಯ ಹೆಲಿಕ್ಯಾಪ್ಟ್ ಕೇವಲ ಏಳೆಂಟು ಜನರನ್ನು ಹೊತ್ತೊಯ್ಯುವ ಸಾಮರ್ಥ್ಯವಿದ್ದು ಅದು ಯಾವುದೇ ಸಪಾಟು ನೆಲದ ಮೇಲೆ ಇಳಿಯಬಲ್ಲದು. ಅದು ಸಮೀಪದ ರಸ್ತೆಗಳಲ್ಲಿಯೇ ಜನರನ್ನು ಇಳಿಸಿತು. ಹೀಗೆ ಸಂಜೆಯ ಹೊತ್ತಿಗೆ ಸುಮಾರು ಇನ್ನೂರೈವತ್ತು ಜನರನ್ನು ವಾಯುಪಡೆ ಮತ್ತು ನೌಕಾಪಡೆಯ ಯೋಧರು ರಕ್ಷಿಸಿದರು. ಇನ್ನೂ ನೂರು ಮಂದಿ ಅಲ್ಲೇ ಉಳಿದಿದ್ದರು. ಇವತ್ತು ಅವರನ್ನು ಕರೆತರುವ ಕಾರ್ಯಾಚರಣೆ ಶುರುವಾಗಿಬಹುದು.

ಇಷ್ಟೆಲ್ಲಾ ಏಕೆ ಬರೆಯಬೇಕಾಯಿತು ಎಂದರೆ, ಜಿಲ್ಲಾಧಿಕಾರಿಯ ಮಾತನ್ನು ಪ್ರವಾಸಿಗರು, ಹೊಟೇಲ್ ಮಾಲಿಕರು ಕೇಳಿದ್ದರೆ ಇಷ್ಟೆಲ್ಲಾ ತೊಂದರೆಯಾಗುವ ಪ್ರಮೇಯವೇ ಬರುತ್ತಿರಲಿಲ್ಲ. ಇಷ್ಟೊಂದು ಸಮಯ, ಹಣ, ಶಕ್ತಿ ಪೋಲಾಗುವ ಸಂಭವವೇ ಇರುತ್ತಿರಲಿಲ್ಲ. ಮೋಜು-ಮಸ್ತಿ ಮಾಡುವವರ ರಕ್ಷಣೆಗಾಗಿ ತಮ್ಮ ಜೀವದ ಹಂಗು ತೊರೆದು ನದಿಗಿಳಿದು ಕೊಚ್ಚಿಹೋದ ಯೋಧರಿಗೆ ಏನಾದರೂ ಹೆಚ್ಚೂಕಮ್ಮಿಯಾಗಿದ್ದರೆ ಅದಕ್ಕೆ ಯಾರು ಹೊಣೆ?

ನಮ್ಮ ಜನಕ್ಕೆ ಯಾವಾಗ ಬುದ್ದಿ ಬರುತ್ತೆ ಅಂತ ಅರ್ಥವಾಗುತ್ತಿಲ್ಲ. 

ಅಂದಹಾಗೆ, ಜಿಲ್ಲಾಧಿಕಾರಿ ಸುನೀಲ್ ಕುಮಾರ್ ಗೂ ಈಗ ಪಿತ್ತ ನೆತ್ತಿಗೇರಿದ ಹಾಗೆ ಕಾಣುತ್ತಿದೆ. ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆ ಮಾಡಿದ್ದಕ್ಕಾಗಿ ಹೊಟೆಲ್/ ರೆಸಾರ್ಟ್ ಮಾಲಿಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಕ್ಕೆ ಅವರು ಮುಂದಾಗಿದ್ದಾರೆ. ಪ್ರಾಕೃತಿಕ ವಿಕೋಪ ನಿರ್ವಹಣೆಯಲ್ಲಿ ತನಗೆ ಸಹಕಾರ ತೋರದ ಈ ಮಾಲಿಕರ ವಿರುದ್ಧ  ವಿಕೋಪ ನಿರ್ವಹಣಾ ಕಾಯ್ದೆಯ ಅಡಿಯಲ್ಲೂ ಕ್ರಮ ಜರುಗಿಸಲು ಮುಂದಾಗಿದ್ದಾರೆ. ಇವರ ಲೈಸನ್ಸುಗಳನ್ನು ರದ್ಧುಪಡಿಸುವ ಸಂಭವವೂ ಇದೆ. ಹಾಗಾದಾಗ ಮಾತ್ರ ಈ ಧನದಾಹಿಗಳು ಒಂದಿಷ್ಟು ಬುದ್ದಿಕಲಿಯುತ್ತಾರೆ ಅನ್ನಿಸುತ್ತದೆ.

ಕೃಪೆ- ಕುಮಾರ್ ಬುರಡಿಕಟ್ಟಿಯವರ ಫೇಸ್ ಬುಕ್ ಗೋಡೆಯಿಂದ

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here