ಬಡವರ ಪರ ಕಾವ್ಯ ಬರೆದ ಕಾರಣಕ್ಕೆ 18 ಬಾರಿ ಜೈಲಿಗೆ ಹೋದ ’ಹಬೀಬ್ ಜಾಲಿಬ್’ ಎಂಬ ಚುಂಬಕ…

ತಮ್ಮ ವಯಸ್ಕ ಜೀವನದ 45 ವರ್ಷಗಳಲ್ಲಿ 18 ಸಲ ಜೈಲಿಗೆ ಹೋದವರು ಪಾಕಿಸ್ತಾನದ ಲಾಹೋರಿನ ವಿಪ್ಲವ ಕವಿ, ಹಾಡುಗಾರ ಹಬೀಬ್ ಜಾಲಿಬ್. ಹತ್ತು ವರ್ಷಕ್ಕೂ ಹೆಚ್ಚು ಅವರು ಜೈಲಿನ ಕೋಣೆಗಳಲ್ಲಿ ಕಳೆದರು.

ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದೊಳಗ ನಡೀತಾ ಇರೋ ವಿದ್ಯಾರ್ಥಿ ಚಳುವಳಿಯೊಳಗ ಶಶಿಭೂಷಣ್ ಸಮದ್ ಅನ್ನೋ ಅಂಧ ಹಾಡುಗಾರ ಹಾಡಿದ ‘ಮೈ ನಹೀ ಮಾನತಾ ಮೈ ನಹೀ ಜಾನತಾ’ ಅನ್ನೋ ಹಾಡು ಭಾಳ ಫೇಮಸ್ ಆಗೇದ. ಅದು ಆ ವಿಶ್ವವಿದ್ಯಾಲಯದ ನಾಡಗೀತೆ ಆದಹಂಗ ಆಗಿ ಹೋಗೇದ. ಅದು ಯಾರು ಬರೆದ ಹಾಡು ಅಂತ ನೋಡಿದಾಗ ಅದು ತನ್ನನ್ನು ಬರೆದ ಕವಿಯನ್ನು ಐದು ಸಲೆ ಜೈಲಿಗೆ ಕಳಿಸಿದ ಹಾಡು ಅಂತ ಗೊತ್ತಾಗಿ ಭಾರಿ ವಿಚಿತ್ರ ಅನ್ನಿಸಿತು.

ಅಲ್ಲವೇ ಶುಕಭಾಷಿಣಿ?

ಹಂಗಾರ ಕಾವ್ಯ ಕವಿಯನ್ನು ಎಷ್ಟು ಸಾರಿ ಜೈಲಿಗೆ ಕಳಿಸಬಹುದು? ಒಂದೆರಡು ಸಲೆ, ಅಥವಾ ಐದಾರು ಸಲೆ. ಆದರ ‘ಇವನು ಇಂಥಾ ಕಾವ್ಯ ಬರೆದ’ ಅನ್ನುವ ಒಂದೇ ಕಾರಣಕ್ಕ ಕವಿಯೊಬ್ಬ 18 ಬಾರಿ ಜೈಲಿಗೆ ಹೋದ ಉದಾಹರಣೆಯೊಂದು ಜಾಗತಿಕ ಸಾಹಿತ್ಯ ಇತಿಹಾಸದಲ್ಲಿ ದಾಖಲಾಗೇದ.

ತಮ್ಮ ವಯಸ್ಕ ಜೀವನದ 45 ವರ್ಷಗಳಲ್ಲಿ 18 ಸಲ ಜೈಲಿಗೆ ಹೋದವರು ಪಾಕಿಸ್ತಾನದ ಲಾಹೋರಿನ ವಿಪ್ಲವ ಕವಿ, ಹಾಡುಗಾರ ಹಬೀಬ್ ಜಾಲಿಬ್. ಹತ್ತು ವರ್ಷಕ್ಕೂ ಹೆಚ್ಚು ಅವರು ಜೈಲಿನ ಕೋಣೆಗಳಲ್ಲಿ ಕಳೆದರು.
ಅದರಾಗ ‘ಮೈ ನಹೀ ಮಾನತಾ’ ಅಂತ ಸುರು ಆಗುವ `ದಸ್ತೂರ್’ (‘ವ್ಯವಸ್ಥೆ’, ‘ಸಂವಿಧಾನ’), ಅನ್ನೋ ಒಂದು ಹಾಡಿಗಾಗಿ ಅದನ್ನು ಬರೆದ ಜಾಲಿಬ್ ಐದು ಸಲ ಜೈಲಿಗೆ ಹೋದರು. ಒಂದು ಊರಿನ ಕೋರ್ಟನ್ಯಾಗ ವಿಚಾರಣೆ ಮುಗದ ಕೂಡಲೇ ಇನ್ನೊಂದು ಊರಿನ್ಯಾಗ ಸುರು ಆಗತಿತ್ತು. “ಆಗ ನನ್ನ ಹೆಂಡತಿ ನನಗೂ ನನ್ನ ವಕೀಲರಿಗೂ ರೊಟ್ಟಿ ಮಾಡಿಕೊಂಡು ಜಿಪ್ಸಿ ಹೆಣ್ಣು ಮಗಳಂತೆ ನನ್ನ ಹಿಂದೆ ಓಡೋಡಿ ಬರುತ್ತಿದ್ದಳು” ಅಂತ ಅವರು ವರ್ಣನಾ ಮಾಡಿಕೋತಿದ್ದರು. ಅರವತ್ತರ ದಶಕದಾಗ ಬರದ ಈ ಹಾಡು ಈಗ ರಾಕ್ ಸಂಗೀತದ ಹಾಡಾಗಿ ಜನಪ್ರಿಯ ಆಗೇದ.

(ಯೂಟ್ಯೂಬದಾಗ ನೋಡರಿ).

ದೆಹಲಿಯಿಂದ ಕೇವಲ ಒಂದು ರಾತ್ರಿ ಬಸ್ಸಿನ ಪ್ರಯಾಣದ ದೂರದ ಪಾಕಿಸ್ತಾನದ ಈ ಊರಿನ ಗರೀಬ ಬಸ್ತಿಯ ಚಾಳಿನಲ್ಲಿ ಎರಡು ಕೋಣೆಯ ಬಾಡಿಗೆ ಮನೆಯಲ್ಲಿ ಜೀವನ ಸವೆಸಿದ ಅವರು ಬಡವರ ಬದುಕಿನ ಬೆಳಕಾಗಿ ಮೇಣದ ಬತ್ತಿ ಹಂಗ ಉರದುರದು ಕರಗಿ ಹೋದವರು.

ಸಾಯೊ ತನಕಾ ತಮ್ಮ ಕ್ರಾಂತಿ ಗೀತೆಗಳಿಗಾಗಿ, ಪಾಕಿಸ್ತಾನದ ಮಿಲಿಟರಿ ಆಡಳಿತಗಾರರ, ಸರ್ವಾಧಿಕಾರಿಗಳ ವಿರೋಧಿಸಿ ಕವನಾ ಬರದದ್ದಕ್ಕಾಗಿ ಹೊಡತಾ ತಿಂದರು, ಜೈಲಿಗೆ ಹೋದರು, ಸರಕಾರಿ ಸೌಲತ್ತುಗಳಿಗೆ ಕೈಯೊಡ್ಡದೇ ತೀವ್ರ ಅನಾರೋಗ್ಯ, ಬಡತನ, ಅಸಹಾಯಕತೆಯಿಂದ ನೊಂದರು.

ಲಾಹೋರಿನ ಸ್ಥಳೀಯ ಉರ್ದು ಪತ್ರಿಕೆಗಳಲ್ಲಿ ಕರಡು ತಿದ್ದೋ ಕೆಲಸ ಮಾಡುತ್ತಿದ್ದ ಹಬೀಬ್ ಜಾಲಿಬ್ ಅತ್ಯಂತ ಬಡ ಕುಟುಂಬದಿಂದ ಬಂದವರು. ಪಂಜಾಬಿನ ಹೋಷಿಯಾರಪುರದಲ್ಲಿ ಹುಟ್ಟಿದ ಅವರ ಕುಟುಂಬ ಅವರ ಹರೆಯದಾಗ ಪಾಕಿಸ್ತಾನಕ್ಕ ವಲಸೆ ಹೋತು. ಅವರು ಹೆಚ್ಚಿಗೆ ಓದಿದವರಲ್ಲ. ಸಣ್ಣ ವಯಸ್ಸಿನಲ್ಲಿ ಸಣ್ಣ ಸಣ್ಣ ಕೆಲಸ ಮಾಡಿ ಹೊಟ್ಟಿ ತುಂಬಿಕೊಂಡರು. ಅವರು ತೀರಿಕೊಂಡಾಗ ಅವರಿಗೆ 63 ವರ್ಷ. ಹಬೀಬ್ ಅಹಮದ್ ಅನ್ನೋ ಹೆಸರಿನ ಅವರು ಹಬೀಬ್ ಜಾಲಿಬ್ (ಅಯಸ್ಕಾಂತ) ಎಂಬ ಕಾವ್ಯ ನಾಮ ಇಟ್ಟುಕೊಂಡರು.

ಔಷಧಿಗೆ ಹಣ ಇಲ್ಲದ್ದಕ್ಕ ತಮ್ಮ 13 ವರ್ಷದ ಮಗನನ್ನು ಕಳೆದುಕೊಂಡರು. ಅದಕ್ಕೆ ಕಣ್ಣೀರು ಹಾಕಿದ ಹೆಂಡತಿಗೆ ‘ಬರೇ ನಮ್ಮ ಮಗ ಹೋದ ಅಂತ ಅಳಬೇಡ. ಇನ್ನು ಮುಂದೆ ಯಾವ ಬಡವನ ಮಗನೂ ಹೋಗದಿರಲಿ” ಅಂತ ಹಾರೈಸು ಅಂತ ಸ್ಥೈರ್ಯ ತುಂಬಿದರು.

‘ಷಾಯರೇ ಆವಾಮ್’ ಅಥವಾ ‘ಶ್ರೀಸಾಮಾನ್ಯನ ಕವಿ’ ಅನ್ನಿಸಿಕೊಂಡ ಅವರ ಬಗ್ಗೆ ಇರೋ ಕತೆಗಳು ದಂತಕತೆಗಳಿಗಿಂತಲೂ ರೋಚಕ. ಬಿಬಿಸಿಗೆ ನೀಡಿದ ಸಂದರ್ಶನದಾಗ ಅವರು “ನನ್ನನ್ನು ಜೈಲಿಗೆ ಕಳಿಸಲು ಹಾಸ್ಯಸ್ಪದವೆಂದೆನಿಸದ ಯಾವ ಕಾರಣವೂ ನಮ್ಮ ಪೊಲೀಸರಿಗೆ ಸಿಗಲೇ ಇಲ್ಲ” ಅಂದರು. ಪೊಲೀಸರನ್ನು ನಾನು ತುಂಬಾ ಓಡಾಡಿಸಿದ್ದೇನೆ. ಒಮ್ಮೆ ಕಾಫಿ ಹೌಸಿನಿಂದ, ಒಮ್ಮೆ ನಮ್ಮ ಮನೆಯ ಮಂಚದಿಂದ, ಒಮ್ಮೆ ಆಸ್ಪತ್ರೆಯಿಂದ, ಒಮ್ಮೆಯಂತೂ ನಮ್ಮ ಮನೆಯ ಪಾಯಖಾನೆಯಿಂದ ನನ್ನನ್ನು ಕರೆದುಕೊಂಡು ಹೋಗಿದ್ದಾರೆ ಅಂತ ಹೇಳಿ ನಕ್ಕರು. ಒಮ್ಮೆ ಜೈಲಿನಿಂದ ಬಿಡಲು ಯಾರೂ ಜಾಮಿನು ಸಿಗದೇ, ಇವರ ಹತ್ತಿರ ಯಾವ ಆಸ್ತಿಯೂ ಇರದಿದ್ದರಿಂದ ಇವರ 12 ವರ್ಷದ ಮಗನನ್ನು ರಿಮ್ಯಾಂಡ್ ಹೋಮಿನಲ್ಲಿ ಒತ್ತೆ ಇಟ್ಟುಕೊಂಡರು.

ಅವರು ತೀರಿ ಹೋದಾಗ ಅವರ ಪತ್ನಿ ಹಾಗೂ ಮಗಳು ತಾಹಿರಾ ಅವರ ಅಂತ್ಯ ಸಂಸ್ಕಾರಕ್ಕೆ ಸರಕಾರ ನೀಡಿದ ದುಡ್ಡನ್ನು ತಿರಸ್ಕಾರ ಮಾಡಿದರು.

ಆದರ ಅವರು ಸತ್ತ ಮೇಲೆ ಸಹಿತ ಅಲ್ಲಿನ ಸರಕಾರ ಅವರ ಮೇಲೆ ದ್ವೇಷ ಸಾಧಿಸಿತು. ಅವರ ಕುಟುಂಬಕ್ಕೆ ಬರುತ್ತಿದ್ದ ಪಿಂಚಣಿಯನ್ನು ನಿಲ್ಲಿಸಿತು. ಸ್ವಲ್ಪ ದಿನಾ ಆದ ಮ್ಯಾಲ ಅವರ ಪತ್ನಿ ತೀರಿಹೋದರು. ಈಗ ಅವರ ಮಗಳು ತಾಹಿರಾ ಲಾಹೋರಿನ ಹತ್ತಿರ ಮುಸ್ತಫಾ ಎಂಬ ಊರಿನಲ್ಲಿ ಟ್ಯಾಕ್ಷಿ ಓಡಿಸತಾಳ ಅಂತ ‘ಫ್ರೈಡೇ ಟೈಂಸ್’ ಪತ್ರಿಕೆಯೊಳಗ ವರದಿ ಆಗೇದ.

ಜಾಲಿಬ್ ಅವರ ಬಗ್ಗೆ ಇರೋ ಕತೆಗಳು ದಂತಕತೆಗಳಿಗಿಂತ ರೋಚಕ. ಅವರ ಉಸಿರು ನಿಂತಾಗ
“ಉರ್ದು ಸಾಹಿತ್ಯದಲ್ಲಿ ಉಳಿದಿದ್ದೇನು?
ಗಾಲಿಬ್ – ಜಾಲಿಬ್‍ರನ್ನು ಬಿಟ್ಟು?”

ಅನ್ನೋ ಉದ್ಗಾರವನ್ನ ಮುಜಾಹಿದ ಅಲಿ ಎಂಬ ವಿಮರ್ಶಕರು ತಗದರಂತ. ಗಾಲಿಬ್ ಅನ್ನುವುದು ಶಾಸ್ತ್ರೀಯ ಸಾಹಿತ್ಯದ ‘ಮಾರ್ಗ’ ಆದರೆ, ಜಾಲಿಬ್ ಅನ್ನೋದು ಜನಪದರ, ಬಡವರ, ಹಿಂದುಳಿದವರ ಪಾಲಿನ ‘ದೇಸಿ’ ಶಿಸ್ತು ಅನ್ನೋದು ಅದರ ಅರ್ಥ ಇದ್ದಿರಬಹುದು.

ಪಾಕಿಸ್ತಾನ ಅನ್ನೋ ಶಬ್ದ ಕೇಳಿದ ತಕ್ಷಣ ಅಲ್ಲಿ ಇರೋವರೆಲ್ಲಾ ಖೂಳರು, ಖಳನಾಯಕರು, ಭಾರತ ದ್ವೇಷಿಗಳು, ಧರ್ಮಾಂಧರು, ನಮ್ಮ ವಿರುದ್ಧ ಸದಾ ಕತ್ತಿ ಮಸಿಯೋ ಭಯೋತ್ಪಾದಕರು ಅಂತ ಅಂದುಕೊಳ್ಳುವ ನಮಗ ಅಲ್ಲಿಯೂ ವ್ಯವಸ್ಥೆಯ ವಿರುದ್ಧ ಹೋರಾಡೋ ಜನಾ ಇದ್ದಾರ. ಅವರೂ ನಮ್ಮಂಗನ, ಅಲ್ಲಿಯೂ ಆಳುವವರು ಬ್ಯಾರೆ, ಆಳಿಸಿಕೊಳ್ಳುವವರು ಬ್ಯಾರೆ ಅಂತ ಗೊತ್ತಾಗಬೇಕು. ಪಾಕಿಸ್ತಾನ ಬ್ಯಾರೆ ಪಾಕಿಸ್ತಾನದ ಸರಕಾರ ಬ್ಯಾರೆ, ಅಲ್ಲಿನ ಜನಾ ಬ್ಯಾರೆ ಅನ್ನೋದು ತಿಳೀಬೇಕು. ಈ ನಿಟ್ಟಿನ್ಯಾಗ ನಮ್ಮಂಥಾ ಅಂಧರನ್ನು ಕೈಹಿಡಿದು ಕರಕೊಂಡು ಹೋಗಿ ಪುಟ್ಟಾಪೂರಾ ಬ್ಯಾರೆ ಜಗತ್ತನ್ನ ಪರಿಚಯ ಮಾಡಿಸಿದ ಶಶಿಭೂಷಣ ಸಮದ್ ಅವರಿಗೆ ಒಂದು ಧನ್ಯವಾದ ಹೇಳೋಣ?

ಕವಿಯನ್ನು ಐದು ಸಾರಿ ಜೈಲಿಗೆ ಕಳಿಸಿದ ಕವಿತೆ

‘ವ್ಯವಸ್ಥಾ’

ಎಲ್ಲೆ ಅರಮನಿಯೊಳಗಷ್ಟ ದೀಪ ಉರಿತಾವೋ
ಎಲ್ಲೆ ಕೆಲವರ ಖುಷಿ ಅಷ್ಟ ಲೆಕ್ಕಕ್ಕ ಬರತದೋ
ಎಲ್ಲೆ ದೊಡ್ಡವರು ತಮ್ಮದಷ್ಟ ತಾವು ನೋಡಿಕೋತಾರೋ,

ಈ ವ್ಯವಸ್ಥಾ ಅದ ಅಲ್ಲಾ,
ಅದು ಬೆಳಕು ಹರಿಯದ ಬೆಳಗು
ಅದನ್ನೆಲ್ಲಾ ನಾ ಒಪ್ಪಂಗಿಲ್ಲ
ಅಂಥಾದೆಲ್ಲಾ ನನಗ ಗೊತ್ತ ಇಲ್ಲ

ಈ ಗಲ್ಲು – ಗಿಲ್ಲಿಗೆಲ್ಲ ನಾ ಹೆದರಂಗಿಲ್ಲಾ
ಸೂಫಿ ಮನ್ಸೂರ ಇದ್ದಂಗ ನಾ
ನಾನ ದೇವರಂತ ತಿಳದವ ನಾ
ಅದಕ್ಕ ಬೇಕಾರ ನನ್ನ ಜೀವಾ ಕೊಟ್ಟೇನಿ
ಆ ಮಾರಿ ಇಲ್ಲದ ಮಾರಿಗೆ
ಹೋಗಿ ಈ ಮಾತು ಹೇಳರಿ

ಜೈಲಖಾನಿ ತೋರಿಸಿ ನನ್ನ ಯಾಕ ಹೆದರಿಸತೀರಿ?
ನಾ ಏನ ಹೆದರಂಗಿಲ್ಲಾ
ಇಂಥಾ ಪಾಪದ ಮಾತು
ಈ ಅಜ್ಞಾನದ ಕತ್ತಲಿ
ಅದನ್ನೆಲ್ಲಾ ನಾ ಒಪ್ಪಂಗಿಲ್ಲ
ಅಂಥಾದೆಲ್ಲಾ ನನಗ ಗೊತ್ತ ಇಲ್ಲ

ನೀವು ಬೇಕಾದ್ದು ಅಂತೀರಿಪಾ,
ಗಿಡದ ತುಂಬೆಲ್ಲಾ ಹೂವು ತುಂಬ್ಯಾವು
ಅಂತೀರಿ
ಇಲ್ಲೆ ಯಾರೂ ಹಸದಿಲ್ಲ, ನೀರಡಿಸಿಲ್ಲ
ಅಂತ ಬೇಕಾರ ಅಂದೀರಿ
ಎದೀ ಮ್ಯಾಲಿನ ಗಾಯ ತಮ್ಮಷ್ಟಕ್ಕ ತಾವ
ಹೊಲಕೊಂಡಾವು ಅಂತನೂ ಅಂತೀರಿ

ಇಷ್ಟೆಲ್ಲಾ ಖುಲ್ಲಂಖುಲ್ಲಾ ಸುಳ್ಳು
ನಮ್ಮೆಲ್ಲರ ಅಕಲಿನ ಖತ್ಲು
ಅದನ್ನೆಲ್ಲಾ ನಾ ಒಪ್ಪಂಗಿಲ್ಲ
ಅಂಥಾದೆಲ್ಲಾ ನನಗ ಗೊತ್ತ ಇಲ್ಲ

ನೀವೆಂಥಾ ಕಳ್ಳರು ಅಂದರ
ಸಾವಿರ ವರ್ಷದ ಸಮಾಧಾನ
ಕದ್ದೀರಿ
ಇನ್ನ ಭಾಳ ದಿವಸ ನಡಿಯಂಗಿಲ್ಲ
ನಿಮ್ಮ ಈ ಕಣ್ಕಟ್ಟು
‘ನಿಮ್ಮ ಸಂಕಟಕ್ಕ ನಾನೊಬ್ಬನ ಮದ್ದು’
ಅಂತೆಲ್ಲಾ ಯಾಕ ಅಂತೀರಿ?
ನಿಮ್ಮ ಕಡೆ ಯಾವ ಮದ್ದೂ ಅಲ್ಲ,
ನಮ್ಮ ಗಾಯಾ ಏನ ನೀವು ಮಾಯಿಸಂಗಿಲ್ಲ
ಬ್ಯಾರೆ ಯಾರರ ನಿಮ್ಮನ್ನ ನಂಬ್ಯಾರು

ಅದನ್ನೆಲ್ಲಾ ನಾ ಒಪ್ಪಂಗಿಲ್ಲ
ಅಂಥಾದೆಲ್ಲಾ ನನಗ ಗೊತ್ತ ಇಲ್ಲ
 – ಹಬೀಬ್ ಜಾಲಿಬ್

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

1 COMMENT

  1. ಈ ಹಾಡಿಗೆ ಗಡಿ-ಗಡಿಯಾರ ಯಾವುದೂ ಇಲ್ಲ. ಬರಹಕ್ಕಾಗಿ ಧನ್ಯವಾದ.

LEAVE A REPLY

Please enter your comment!
Please enter your name here