Homeಕರ್ನಾಟಕ"ಗೌಡರಿಗೆ ಕುಟುಂಬಪ್ರೀತಿ ಅನಿವಾರ್ಯವಾಯ್ತು, ಸಿದ್ರಾಮಯ್ಯನಿಗೆ ಸ್ವಪ್ರತಿಷ್ಠೆ ಹೆಚ್ಚಾಯ್ತು"

“ಗೌಡರಿಗೆ ಕುಟುಂಬಪ್ರೀತಿ ಅನಿವಾರ್ಯವಾಯ್ತು, ಸಿದ್ರಾಮಯ್ಯನಿಗೆ ಸ್ವಪ್ರತಿಷ್ಠೆ ಹೆಚ್ಚಾಯ್ತು”

ಕೋಮುವಾದ, ಕೋಮುವಾದಿಗಳು ಎಂಬ ಸೈದ್ಧಾಂತಿಕ ಮಡಿವಂತಿಕೆ, ಮೈಲಿಗೆಗಳು ಬರೀ ಅಧಿಕಾರಕ್ಕಾಗಿ ಮಾತ್ರವಾ?

- Advertisement -
- Advertisement -

| ಸಂದರ್ಶನ ತಂಡ: ಡಿ.ಉಮಾಪತಿ, ಗಿರೀಶ್ ತಾಳಿಕಟ್ಟೆ, ಅನಿಲ್ ಚಿಕ್ಕದಾಳವಟ್ಟ, ಸುನೀಲ್ ಸಿರ್ಸಂಗಿ |

ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ, ತುಂತುರು ಮಳೆಹನಿಯ ಅಡ್ಡಿಗಳನ್ನು ದಾಟಿಕೊಂಡು ನಮ್ಮ ತಂಡ ಶಾಸಕರ ಭವನದ ಅಂಗಳ ಹೊಕ್ಕಾಗ ಸಮಯ ಹೆಚ್ಚೂಕಮ್ಮಿ ಸಂಜೆ ಏಳೂವರೆಯನ್ನು ಸಮೀಪಿಸುತ್ತಿತ್ತು. ಕಳೆದ ಎರಡು ಸಂಚಿಕೆಗಳ ಹಿಂದೆಯೇ ಪತ್ರಿಕೆಯು ಎಚ್.ವಿಶ್ವನಾಥರ ಸಂದರ್ಶನ ಮಾಡಬೇಕಿತ್ತಾದರು ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಈ ಸಲ ಅದು ಕೈಗೂಡಿತು. ಆರಂಭದಲ್ಲಿ ನಾವು ಸಂದರ್ಶನಕ್ಕೆ ಸಮಯ ಕೇಳಿದಾಗ ರಾತ್ರಿ ಎಂಟೂವರೆ ನಂತರ ಬರಲು ತಿಳಿಸಿದ್ದರು. ಆದರೆ ಸಂಜೆ ಆರು ಗಂಟೆಯ ಹೊತ್ತಿಗೆ ಫೋನ್ ಮಾಡಿದ ಅವರ ಪಿ.ಎ ಈಗಲೇ ಬರುವುದಾದರೆ ಸಾಹೇಬರು ಫ್ರೀ ಇದ್ದಾರೆ ಎಂದು ತಿಳಿಸಿದರು. ವಿಶ್ವನಾಥರು ಬಿಚ್ಚು ಮಾತುಗಳಿಗೆ ಅಣಿಯಾಗಿ ಕೂತಿದ್ದಾರೆ ಎಂಬುದು ನಮಗೆ ಆಗಲೇ ಮನದಟ್ಟಾಯ್ತು.
ವಿಶ್ವನಾಥರನ್ನು ಸಂದರ್ಶನ ಮಾಡಲು ಹಲವು ಕಾರಣಗಳಿದ್ದವು. ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಒಂದು ನೆಪವಾಗಬಹುದಿತ್ತಷ್ಟೆ, ಸಿದ್ರಾಮಯ್ಯನವರ ವಿರುದ್ಧ ಕಿಡಿಕಾರುತ್ತಾರೆ ಅನ್ನೋದೂ ಒಂದು ವಿವಾದಕ್ಕಿಂತ ಮುಖ್ಯವಾಗುವಂತದ್ದಲ್ಲ. ಇನ್ನು ಅವರು ಬಿಜೆಪಿ ಸೇರುತ್ತಾರೆ ಎಂಬ ಸುದ್ದಿಯೂ ಒಂದು ವದಂತಿಗಿಂತ ಹೆಚ್ಚಾಗುವುದು ಸಾಧ್ಯವಿರಲಿಲ್ಲ. ಆದರೆ ಇವೆಲ್ಲವುಗಳನ್ನೂ ಮೀರಿ ಸಮಾಜ, ರಾಜಕಾರಣ, ಸಾಹಿತ್ಯದ ಅಭಿರುಚಿ, ಬದಲಾವಣೆಗಳ ಬಗ್ಗೆ ಮಾತನಾಡಬಲ್ಲ ಅತಿವಿರಳ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ವಿಶ್ವನಾಥರನ್ನು ಇವತ್ತಿನ ರಾಜಕೀಯ ಪರಿಸ್ಥಿತಿಯಲ್ಲಿ ಮಾತನಾಡಿಸಬೇಕು ಅನ್ನಿಸಿದ್ದರಿಂದ ಅವರ ಸಂದರ್ಶನಕ್ಕೆ ಮುಂದಾದೆವು.
ನಾವು ಅವರ ರೂಮು ಸೇರಿದಾಗ, ಅವರಿಂದ ನೆರವು ಅರಸಿ ಬಂದಿದ್ದ ಜನರಿಂದ ವರಾಂಡ ತುಂಬಿತ್ತು. ತಮ್ಮ ಖಾಸಗಿ ಕೋಣೆಯಿಂದ ಹೊರಬಂದ ವಿಶ್ವನಾಥರು ನಮ್ಮ ತಂಡವನ್ನು ಗುರುತು ಹಿಡಿದು ಪಕ್ಕದಲ್ಲಿದ್ದ ಡೈನಿಂಗ್ ಹಾಲ್‍ಗೆ ಕರೆದೊಯ್ದು ಕೂರಿಸಿಕೊಂಡು ಮಾತಿಗಿಳಿದರು. ಮುಖದ ಮೇಲೆ ಸಣ್ಣ ನಗು ಅರಳಿತ್ತಾದರು ಅದರ ಹಿಂದೆ ಅಡಗಿದ್ದ ಬೇಸರದ ಗೆರೆಗಳನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿತ್ತು. `ಪತ್ರಿಕೆ’ಯ ಆಗುಹೋಗುಗಳ ಬಗ್ಗೆ ಲೋಕಾರೂಢಿಯಾಗಿ ವಿಚಾರಿಸಿಕೊಂಡ ಅವರು ಪತ್ರಿಕೆಗೆ ಎರಡು ವರ್ಷದ ಚಂದಾ ಕೂಡಾ ಮಾಡಿಸಿಕೊಂಡರು. ಜೊತೆಗೆ, ಇತ್ತೀಚೆಗಷ್ಟೆ ಪ್ರಕಟಗೊಂಡ ಅವರ `ಅಥೆನ್ಸ್‍ನ ರಾಜ್ಯಾಡಳಿತ’ ಕೃತಿಯಲ್ಲಿ ಸಹಿ ಹಾಕಿ ನಮ್ಮ ತಂಡದ ಪ್ರತಿಯೊಬ್ಬರಿಗೂ ಒಂದೊಂದು ಪ್ರತಿಕೊಟ್ಟರು. ಅಲ್ಲಿಂದಾಚೆಗೆ ಅವರ ಮಾತುಗಳಲ್ಲಿ ಸಾಕಷ್ಟು ವಿಚಾರಗಳು ಬಂದವು. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೊಟ್ಟ ಅವರ ರಾಜೀನಾಮೆಯಿಂದ ಶುರುವಾಗಿ ದೇಶದ ರಾಜಕೀಯ ಚಿತ್ರಣ, ಜೆಡಿಎಸ್‍ನ ಆಂತರಿಕ ವ್ಯವಸ್ಥೆ, ದೇವೇಗೌಡರ ಆಲೋಚನೆಗಳ ಶಕ್ತಿ ಮತ್ತು ಮಿತಿಗಳು, ಮೈತ್ರಿ ಸರ್ಕಾರದ ಬಗೆಗಿರುವ ಬೇಸರ, ಸಿದ್ರಾಮಯ್ಯನವರ ಮೇಲಿನ ಸಿಟ್ಟು, ಲೋಕಸಭಾ ಚುನಾವಣೆಯ ಸೋಲು, ರಾಜಕೀಯ ದೃವೀಕರಣ, ಭವಿಷ್ಯದ ಕನಸುಗಳು ಹೀಗೆ ಸಾಕಷ್ಟು ಸಂಗತಿಗಳ ಬಗ್ಗೆ ಯಾವ ಮುಜುಗರವೂ ಇಲ್ಲದೆ ಮಾತಾದರು. ಒಮ್ಮೆ ಮಾತ್ರ ಒಂದು ಜೋಕ್ ಹೇಳಲು ಆಫ್ ದಿ ರೆಕಾರ್ಡ್ ಅಂದಿದ್ದು ಬಿಟ್ಟರೆ, ಮತ್ತ್ಯಾವ ಅಭಿಪ್ರಾಯವನ್ನೂ ಮುಚ್ಚಿಡುವ ಇರಾದೆ ಅವರಿಗೆ ಇದ್ದಂತಿರಲಿಲ್ಲ. ವಿಶ್ವನಾಥ್ ಅಂದರೇನೇ ಹಾಗೆ, ಆದರೆ ಈ ಸಲ ಅದಕ್ಕೂ ಹೆಚ್ಚೇ ಮಾತುಗಳನ್ನು ಬಿಚ್ಚಿಟ್ಟರು.
ಹೊರಗಡೆ ಅವರನ್ನು ಕಾಣಲು ಸೇರಿದ್ದ ಜನರ ಜಂಗುಳಿ ಹೆಚ್ಚಾದ್ದರಿಂದ ಅವರ ಸಾಹಿತ್ಯ ಕೃಷಿಯ ಬಗ್ಗೆ ಚರ್ಚಿಸಲು ಸಾಧ್ಯವಾಗದ ಕೊರಗಿನಿಂದಲೇ ನಾವು ಮಾತುಕತೆ ಮುಗಿಸಿ ಮೇಲೆದ್ದಾಗಲು ಅವರು ಇನ್ನಷ್ಟು ಹೊತ್ತು ಮಾತಾಡುವ ಹುಮ್ಮಸ್ಸಿನಲ್ಲಿದ್ದಂತೆ ಕಂಡುಬಂದರು. ಅವರಿಗೆ ವಿದಾಯ ಹೇಳಿ ಹೊರಬಂದಾಗ ನಮ್ಮ ತಂಡವನ್ನು ಕಾಡಿದ್ದು ಒಂದೇ ವಿಚಾರ. ಒಬ್ಬ ಮನುಷ್ಯನಾಗಿ, ಅದರಲ್ಲೂ ಒಬ್ಬ ರಾಜಕಾರಣಿಯಾಗಿ ವಿಶ್ವನಾಥರು ಹಲವು ತಪ್ಪು ಹೆಜ್ಜೆಗಳನ್ನಿಟ್ಟಿರಬಹುದು, ಆದರೆ ಒಂದು ಸಮಾಜ ಬಯಸುವ ಮುತ್ಸದ್ದಿ ರಾಜಕಾರಣದ ಪ್ರತಿನಿಧಿಗಳಾಗಿ ನಮಗೆ ವಿಶ್ವನಾಥರ ಸಮಕಾಲೀನ ಪೀಳಿಗೆಯೇ ಕೊನೆಯಾಗಬಹುದೇನೊ ಎಂಬ ಆತಂಕ. ಹೀಗೆ ಆಲೋಚಿಸುವಾಗ ನಮ್ಮ ತಲೆಯಲ್ಲಿ ಗಿರಕಿ ಹೊಡೆಯುತ್ತಿದ್ದುದು, ಮೊನ್ನೆ ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಸದನದ ಘನತೆಯನ್ನು ಮಣ್ಣುಪಾಲು ಮಾಡುವಂತೆ ವರ್ತಿಸಿದ ಸಂಸದರ ಚಿತ್ರಣ. ಓದು, ಕಲಾಭಿರುಚಿ, ಸಾಹಿತ್ಯ ಸಂವೇದನೆ, ಚಿಂತನೆ, ಅಧ್ಯಯನಶೀಲತೆ, ಸಂಯಮ ಇವ್ಯಾವೂ ಇಲ್ಲದ ಒಂದು ದುರಂತ ರಾಜಕೀಯ ಪೀಳಿಗೆ ಸೃಷ್ಟಿಯಾಗಿದೆ. ಮಾತಿನ ನಡುವೆ, ನಮ್ಮ ಸ್ವಾರ್ಥ ಮತ್ತು ಪ್ರತಿಷ್ಠೆಗಳಿಗೆ ಕಟ್ಟುಬಿದ್ದು ಉದಾತ್ತ ಮೌಲ್ಯಗಳನ್ನು ದಾಟಿಸುವ ಕೆಲಸದಲ್ಲಿ ಸೋತುಹೋದ ನಮ್ಮಂತ ಹಿರಿಯರ ವೈಫಲ್ಯವೇ ಇಂಥಾ ಅನಾಹುತಕಾರಿ ಪೀಳಿಗೆಯ ಸೃಷ್ಟಿಗೆ ಕಾರಣ ಎಂದು ಆರೋಪವನ್ನು ತಮ್ಮ ಮೇಲೆ ಎಳೆದುಕೊಂಡ ವಿಶ್ವನಾಥರ ಮಾತಿನಲ್ಲಿ ಸತ್ಯ ಇಣುಕುತ್ತಿತ್ತು…….

ಪತ್ರಿಕೆ: ಸಾರ್ ತಾವು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದೀರಿ. ಆದರೆ ಅದನ್ನು ಅಂಗೀಕರಿಸುವುದಿಲ್ಲ ಎಂದು ದೇವೇಗೌಡರು ಹೇಳಿದಾರೆ. ಯಾಕೆ ಈ ಗೊಂದಲ?
ವಿಶ್ವನಾಥ್: ಮೊದಲನೆಯದಾಗಿ ಅಧ್ಯಕ್ಷ ಆಗೋದೆ ನನಿಗೆ ಇಷ್ಟ ಇರಲಿಲ್ಲ. ಒಂದು ದಿನ ಪಕ್ಷ ಸಂಘಟನೆಯ ವಿಚಾರವಾಗಿ ಸಭೆ ಕರೆಯಲಾಗಿತ್ತು. ಅವತ್ತು ದೇವೇಗೌಡರು, ಕುಮಾರಸ್ವಾಮಿಯರಿಗೆ ಮುಖ್ಯಮಂತ್ರಿ ಸ್ಥಾನದ ಜೊತೆಗೆ ರಾಜ್ಯಾಧ್ಯಕ್ಷ ಸ್ಥಾನವನ್ನೂ ನಿಭಾಯಿಸೋದು ಕಷ್ಟವಾಗುತ್ತೆ, ಅಲ್ಲದೇ ನಮ್ಮ ಪಕ್ಷದಲ್ಲಿ ಒಬ್ಬ ವ್ಯಕ್ತಿಗೆ ಒಂದು ಸ್ಥಾನ ನಿಯಮವಿದೆ. ಹಾಗಾಗಿ ಅಧ್ಯಕ್ಷ ಸ್ಥಾನಕ್ಕೆ ಹೆಚ್.ಡಿ.ಕೆ ರಾಜೀನಾಮೆ ಕೊಡುತ್ತಾರೆ, ಆ ಸ್ಥಾನಕ್ಕೆ ಹೆಚ್.ವಿಶ್ವನಾಥ್‍ರನ್ನು ಆಯ್ಕೆ ಮಾಡುತ್ತಿದ್ದೇವೆ ಎಂದು ಘೋಷಣೆ ಮಾಡಿದರು. ಪಕ್ಕದಲ್ಲೇ ಕೂತಿದ್ದ ನನಗೆ ಶಾಕ್ ಆಗಿ, `ಸಾರ್, ಸಾರ್ ನನಗೆ ಇದೆಲ್ಲ ಬೇಡ’ ಎಂದೆ. ಅದಕ್ಕೆ ದೇವೇಗೌಡರು `ನೀನು ಸುಮ್ಮನೇ ಇರಪ್ಪ’ ಅಂದರು. ಕುಮಾರಸ್ವಾಮಿ `ನಾವೆಲ್ಲಾ ಇದೀವಿ ನೀವು ಒಪ್ಪಿಕೊಳ್ಳಲೇಬೇಕು’ ಎಂದರು. ನನಗೆ ಆರೋಗ್ಯ ಸರಿಯಿಲ್ಲ, ಅಧ್ಯಕ್ಷ ಅಂತ ಕೂತರೆ ಪ್ರವಾಸ ಮಾಡಬೇಕು, ಮುಂದೆ ಲೋಕಸಭಾ ಚುನಾವಣೆ ಬೇರೆ ಇದೆ ಬೇರೆಯವರನ್ನ ನಿಲ್ಲಿಸಿ ಪಕ್ಷ ಕಟ್ಟೋಣ ಎಂದೆ. ಆಗ ನೀವು ಕಡೇಪಕ್ಷ ಲೋಕಸಭಾ ಚುನಾವಣೆ ಮುಗಿಯುವರೆಗಾದರೂ ಜವಾಬ್ಧಾರಿ ವಹಿಸಿಕೊಳ್ಳಿ ಎಂದು ಹೇಳಿ ಬಾವುಟವನ್ನು ನನ್ನ ಕೈಗೆ ಕೊಟ್ಟರು. ಹೀಗೆ ನಾನು ಅಧ್ಯಕ್ಷನಾಗಿ ಪ್ರತಿಷ್ಠಾಪನೆಗೊಂಡೆ.
ಆದರೆ ನಂತರ ನೋಡಿದರೆ, ಪಕ್ಷ ಕಟ್ಟುವ ಬಗ್ಗೆ ದೇವೇಗೌಡರಿಗೆ ಇರುವ ಆಸಕ್ತಿ, ಶ್ರಮ, ಕಾಳಜಿ ಬೇರೆಯವರಿಗೆ ಯಾರಿಗೂ ಇರಲಿಲ್ಲ. ಕುಮಾರಸ್ವಾಮಿಯವರು ಪಾಪ ಅನಾರೋಗ್ಯದ ನಡುವೆಯು ವಿಧಾನಸಭಾ ಚುನಾವಣೆಯಲ್ಲಿ ಸಿರ್ಖಖಪಟ್ಟೆ ಓಡಾಡಿದರು. ಮುಖ್ಯಮಂತ್ರಿಯಾದ ನಂತರ ಅವರಲ್ಲು ಆಸಕ್ತಿ ಕಮ್ಮಿಯಾಯಿತು. ಇದು ಕೇವಲ ಜೆಡಿಎಸ್ ಅಥವಾ ಕುಮಾರಸ್ವಾಮಿಯವರಿಗೆ ಮಾತ್ರ ಅನ್ವಯಿಸುವಂತದ್ದಲ್ಲ. ಯಾವುದೇ ಪಕ್ಷವಾಗಲಿ ಅಧಿಕಾರಕ್ಕೆ ಬರುವಔರೆಗೂ ಅವರ ಪಕ್ಷ ಸಂಘಟನೆ ಒಂದು ರೀತಿ ಇರುತ್ತಾರೆ. ಅಧಿಕಾರಕ್ಕೆ ಬಂದಮೇಲೆ ಅದು ಇನ್ನೊಂಥರ ಇರುತ್ತೆ. ಅದೇ ನಮ್ಮಲ್ಲೂ ಕೂಡ ಆಯಿತು. ಆದರೆ ದೇವೇಗೌಡರಿಗೆ ನಾನು ಕಟ್ಟಿದ ಪಕ್ಷ ಎಲ್ಲಿಯೂ ಕಳೆದು ಹೋಗಬಾರದು ಎಂಬ ದೊಡ್ಡ ಆಸೆ. ಒಪ್ಪಂದದಂತೆ ಲೋಕಸಭಾ ಚುನಾವಣೆ ಆದಮೇಲೆ ದೇವೇಗೌಡರಿಗೆ ರಾಜೀನಾಮೆ ತೆಗೆದುಕೊಂಡು ಹೋಗಿ ಕೊಟ್ಟೆ. ಅವರು ಇಲ್ಲಪ್ಪ ಈ ಸಂದರ್ಭದಲ್ಲಿ ಬೇಡ ಎಂದರು. ಆಗ ನಾನು ‘ಸಾರ್ ನಾನು ಬಿಡುಗಡೆ ಮಾಡಿ ಅನ್ನುತ್ತಿದ್ದೇನೆ. ನೀವು ನನಗೆ ಬೇಡಿ ಹಾಕುತ್ತಿದ್ದೀರಿ. ಇದೇನು ಬಿಡುಗಡೆಯ ಬೇಡಿನಾ?’ ಎಂದೆ. ಹಾಗಲ್ಲ ಸ್ವಲ್ಪ ದಿವಸ ಹೋಗಲಿ ನಂತರ ನೋಡೋಣ ಎಂದರು. ಸಾರ್ ನಾನು ಸುಖಾಸುಮ್ಮನೆ ಅಧ್ಯಕ್ಷ ಅಂತ ಹಾಗೋದಿಲ್ಲ ದಯವಿಟ್ಟು ಸ್ವೀಕರಿಸಿ ಎಂದೆ.

ಪತ್ರಿಕೆ: ಒಂದು ಪಕ್ಷದ ಅಧ್ಯಕ್ಷರಾಗಿ ಮಾಧ್ಯಮಗಳ ಮೂಲಕ ರಾಜೀನಾಮೆ ಕೊಟ್ಟಿದ್ದೇನೆ ಎಂದು ಘೋಷಿಸೋದು. ಅದಕ್ಕೆ ಪ್ರತ್ಯುತ್ತರವಾಗಿ ಪಕ್ಷದ ನಾಯಕರೂ ಅದನ್ನು ಅಂಗೀಕರಿಸಲ್ಲ ಎಂದು ಮಾಧ್ಯಮಗಳ ಮೂಲಕವೇ ಉತ್ತರಿಸೋದು. ಇವೆಲ್ಲವೂ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಸೂಚಿಸುತ್ತದಲ್ಲವೇ?
ವಿಶ್ವನಾಥ್: ಅಲ್ಲ, ನೀವೇ ಹೇಳಿ. ನಾನು ರಾಜೀನಾಮೆಯನ್ನು ಕೊಡಲು ಹೋದಾಗ ಅದನ್ನು ಸ್ವೀಕರಿಸದಿದ್ದರೆ ಮತ್ತು ಆ ಸ್ಥಾನದಲ್ಲಿ ಮುಂದುವರೆಯಲು ನನಗೆ ಇಚ್ಛೆ ಇಲ್ಲದಿದ್ದರೆ ನಾನು ಬೇರೇನು ಮಾಡಬೇಕು. ಒಂದು ರಾಜಕೀಯ ಪಕ್ಷ ಅಂದಮೇಲೆ, ಅದರ ಕಾರ್ಯಕರ್ತರಿಗೆ ಅಧ್ಯಕ್ಷ ಬೇಕೇಬೇಕಾಗುತ್ತಾನೆ. ಅಂತವರೆಲ್ಲ ನನ್ನನ್ನು ಹುಡುಕಿಕೊಂಡು ಬರುತ್ತಾರೆ. ಹಾಗಾಗಿ ಜನರಿಗೆ ನನ್ನ ನಿರ್ಧಾರ ತಿಳಿಸುವ ಸಲುವಾಗಿ ಮಾಧ್ಯಮಗಳ ಮುಂದೆ ಹೇಳಿಕೆ ಕೊಟ್ಟೆ.

ಪತ್ರಿಕೆ: ನಿಮ್ಮನ್ನು ಪಕ್ಷದಲ್ಲಿ ಯಾವುದಕ್ಕೂ ಸಮಲೋಚಿಸುತ್ತಿರಲಿಲ್ಲ ಅನ್ನೋ ಮಾತಿದೆಯಲ್ಲ?
ವಿಶ್ವನಾಥ್: ನಾನು ಕಾಂಗ್ರೆಸ್‍ನಲ್ಲಿ ಬಹಳಷ್ಟು ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿಯಾಗಿದ್ದೆ. ಡಿ.ಕೆ.ನಾಯಕ್, ವೀರೇಂದ್ರ ಪಾಟೀಲ, ಧರ್ಮಸಿಂಗ್, ಎಸ್.ಎಂ.ಕೃಷ್ಣರವರ ಜೊತೆ ನಾನು ಕೆಲಸ ಮಾಡಿದ್ದೆ. ಆಗ ನನ್ನ ಮೇಲೆ ಜವಾಬ್ದಾರಿ ವಹಿಸುತ್ತಿದ್ದರು. 1998ರಲ್ಲಿ ಒಮ್ಮೆ ಎಸ್.ಎಂ.ಕೃಷ್ಣರಿಗೆ ಒಂದು ಸೂಚನೆ ಬಂತು. ಏನು ಅಂದ್ರೆ ಜನಾರ್ಧನ್ ಪೂಜಾರಿಯವರಿಗೆ, ಶಂಕರಾನಂದರಿಗೆ ಎಂಪಿ ಟಿಕೆಟ್ ನೀಡಬಾರದು ಅಂತ. ಇಬ್ಬರೂ ಹಿರಿಯ ರಾಜಕಾರಣಿಗಳು, ಅವರಿಗೆ ಏಕಾಏಕಿ ಟಿಕೆಟ್ ಇಲ್ಲವೆನ್ನಲಾಗುವುದೇ? ಅವರ ಕ್ಷೇತ್ರಗಳಲ್ಲಿ ಸಮೀಕ್ಷೆ ಮಾಡಿ, ಈ ಸಲ ನಿಂತರೆ ಅವರು ಸೋಲುವ ಸಾಧ್ಯತೆ ಎಷ್ಟು ದಟ್ಟವಾಗಿದೆ ಅನ್ನೋದರ ಕುರಿತು ಒಂದು ರಿಪೋರ್ಟ್ ತಯಾರು ಮಾಡಿ ಅದರ ಆಧಾರದಲ್ಲಿ ಟಿಕೆಟ್ ನಿರಾಕರಿಸಬೇಕಾಗಿತ್ತು. ಆ ಹೊಣೆಯನ್ನು ನನಗೆ ವಹಿಸಿದರೆ. ನಾನು ಮೂರು ತಿಂಗಳ ಗಡವು ಕೇಳಿದೆ. ಮಂಗಳೂರು ಮತ್ತು ಬೆಳಗಾವಿಗಳಲ್ಲಿ ಸುತ್ತಾಡಿ, ತಳಮಟ್ಟದ ಕಾರ್ಯಕರ್ತರು ಹಾಗೂ ಜನಸಾಮಾನ್ಯರ ಅಭಿಪ್ರಾಯ ಸಂಗ್ರಹಿಸಿ ವರದಿ ತಯಾರಿಸಿದೆ. ಕೊನೆಗೆ ಆ ವರದಿ ಪ್ರತಿಗಳನ್ನು ನಾನೇ ಆ ಇಬ್ಬರು ನಾಯಕರ ಕೈಗಿತ್ತು, ಅವರಿಗೆ ಈ ಸಲ ಟಿಕೇಟ್ ಸಿಗುವುದಿಲ್ಲ ಎಂದು ಹೇಳಿ ಬರಬೇಕು ಅಂದರು. ಆ ಕೆಲಸವನ್ನೂ ಮಾಡಿದೆ.
ಶಂಕರಾನಂದರು ನನ್ನನ್ನು ನೋಡಿ, `ವಿಶ್ವನಾಥ್ ಬಂದಿದಾನೆ. ಅವನಿಗೆ ಕುಂದಾ, ಟೀ ಕೊಟ್ಟು ಬಸ್ಸು ಹತ್ತಿಸಿ ಕಳುಹಿಸಿ. ಇಲ್ಲಿ ಬಂದು ಏನು ಮಾಡುತ್ತಾನಂತೆ’ ಎಂದು ಹೇಳಿದರು. ನಾನು ನನ್ನ ಕೆಲಸ ಮಾಡಿದೆ. ಇನ್ನು ಜನಾರ್ಧನ್ ಪೂಜಾರಿಯವರು ರಿಪೋರ್ಟ್ ನೋಡಿ `ನಿನಗೆ ಮಂಡೆ ಸರಿ ಇದೆಯಾ’ ಎಂದು ದೊಡ್ಡ ಗಲಾಟೆ ಮಾಡಿದರು. ನಾನು ತಲೆ ಕೆಡಿಸಿಕೊಳ್ಳಲಿಲ್ಲ. ಅವರಿಗೆ ಟಿಕೆಟ್ ಕೊಡಬಾರದು ಎಂಬುದರ ಜೊತೆಗೆ ಬೇರೆ ಯಾರಿಗೆ ಕೊಡಬಹುದು ಎಂಬ ಸಲಹೆಯನ್ನೂ ಕೊಟ್ಟಿದ್ದೆ. ಆದರೆ ಎಐಸಿಸಿ ಬೇರೆಯವರಿಗೆ ಟಿಕೆಟ್ ಕೊಟ್ಟಿದ್ದರಿಂದ ಆ ಸಲ ಅವರೂ ಸೋತರು.
ಇದನ್ನೆಲ್ಲ ಯಾಕೆ ಹೇಳ್ತಿದೀನಿ ಅಂದ್ರೆ, ಒಂದು ರಾಷ್ಟ್ರೀಯ ಪಕ್ಷದಲ್ಲಿದ್ದಾಗಲೆ ನಾನು ಯಾವ ಮುಲಾಜುಗಳಿಲ್ಲದೆ ಕೆಲಸ ಮಾಡಿದವನು. ಆದರೆ ನಮ್ಮ ಪಕ್ಷದಲ್ಲಿ ಈಗ ಹಾಗಿಲ್ಲ. ತುಂಬಾ ಹಸ್ತಕ್ಷೇಪಗಳಿವೆ.

ಪತ್ರಿಕೆ: ನಿಮ್ಮನ್ನು ಹೆಸರಿಗೆ ಮಾತ್ರ ಬಳಸಿಕೊಂಡರು ಅನ್ನಿಸೋದಿಲ್ಲವೇ? ತುಂಬಾ ನಿರ್ಧಾರಗಳನ್ನು ತೆಗೆದುಕೊಳ್ಳುವ ವಿಚಾರದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುತ್ತಿರಲಿಲ್ಲ ಎನ್ನಲಾಗುತ್ತಿದೆ.
ವಿಶ್ವನಾಥ್: ಒಬ್ಬ ರಾಜ್ಯಾಧ್ಯಕ್ಷ ಎಂದರೆ ಅವನು ಪಕ್ಷದ ಪ್ರಮುಖ ಚರ್ಚೆಗಳಲ್ಲಿ ಭಾಗವಹಿಸಬೇಕು. ತೀರ್ಮಾನಗಳಲ್ಲಿ ಅವನ ಅಭಿಪ್ರಾಯವಿರಬೇಕು. ಉದಾಹರಣೆಗೆ, ಎರಡು ಪಕ್ಷಗಳು ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡು ಲೋಕಸಭಾ ಎಲೆಕ್ಷನ್‍ಗೆ ಹೋಗುವುದು ಚರ್ಚೆಯೇ ಆಗಿರಲಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಖಾನ್‍ದಾನ್ ಶತ್ರುಗಳಿದ್ದಂತೆ, ನೆಲಮಟ್ಟದ ಕಾರ್ಯಕರ್ತರ ಮಟ್ಟದಲ್ಲಿ ಇದು ಸಫಲವಾಗಲ್ಲ ಎಂದು ನಾನು ಹೇಳಿದ್ದೆ. ಕಾರ್ಯಕರ್ತರನ್ನು ನಿಭಾಯಿಸುವ ಸಾಮಥ್ರ್ಯವಿರುವ ಎರಡೂ ಪಕ್ಷದ ಗ್ರೌಂಡ್‍ಲೆವೆಲ್ ನಾಯಕರನ್ನು ಕೂಡಿಸಿ ಚರ್ಚೆ ಮಾಡಬೇಕಿತ್ತು. ಅದು ನಡೆಯಲಿಲ್ಲ. ಕೇವಲ ದೊಡ್ಡವರು ಮಾತ್ರ ಒಂದಾದರು. ಇದು ಘೋರ ಸೋಲಿಗೆ ಕಾರಣವಾಯಿತು. ಹಾಗಾಗಿಯೇ ನಾನೆ ನೈತಿಕ ಹೊಣೆ ಹೊತ್ತು ಇಂತಹ ಹೀನಾಯ ಸೋಲನ್ನು ನೋಡಿ ರಾಜೀನಾಮೆ ನೀಡಿದೆ.

ಪತ್ರಿಕೆ: ನೀವು ನಿರ್ಧಾರಗಳಲ್ಲೇ ಭಾಗಿಯಾಗಿರಲಿಲ್ಲ ಎಂದಮೇಲೆ, ಸೋಲಿನ ಬಗ್ಗೆ ನೈತಿಕ ಹೊಣೆ ಹೊರುವ ಪ್ರಶ್ನೆಯೇ ಬರುವುದಿಲ್ಲ, ಅಲ್ಲವೇ ಸರ್?
ವಿಶ್ವನಾಥ್: ನೋಡಿ, ಇದೆಲ್ಲ ಪಕ್ಷದ ಒಳಗಿರುವವರಿಗೆ ಗೊತ್ತಿರುತ್ತೆ. ಆದ್ರೆ ಜನರಿಗೆ ನಾನೊಬ್ಬ ಅಧ್ಯಕ್ಷ. ಒಳಗಿನ ಹೊಂದಾಣಿಕೆಗಳು ಜನರಿಗೆ ಗೊತ್ತಿರುವುದಿಲ್ಲ. ಆದರೆ ಇದು ಜನ ಕೊಟ್ಟ ತೀರ್ಪು. ಹಾಗಾಗಿ ನಾನು ರಾಜೀನಾಮೆ ಕೊಟ್ಟೆ. ಹಲವಾರು ವಿಚಾರಗಳಲ್ಲಿ ಎಲ್ಲೋ ಒಂದುಕಡೆ ದೇವೆಗೌಡರ ಮಾತಿಗೂ ಮನ್ನಣೆ ಸಿಗುತ್ತಿರಲಿಲ್ಲ. ಕಾಂಗ್ರೆಸ್‍ಗೆ ತನ್ನದೇ ಆದ ಇತಿಹಾಸವಿದೆ. ಹಾಗೆಯೇ ಮೊದಲ ಕಾಂಗ್ರೆಸ್ಸೇತರ ಸರ್ಕಾರ ಕೊಟ್ಟ ನಮ್ಮ ಜನತಾ ಪರಿವಾರಕ್ಕೂ ಒಂದು ಇತಿಹಾಸವಿದೆ. ಕಾಲಾನುಕಾಲದಲ್ಲಿ ಕಾಂಗ್ರೆಸ್ ಇಬ್ಭಾಗವಾಗುತ್ತಾ ಬಂದಂತೆ, ಜನತಾ ಪರಿವಾರವೂ ವಿಘಟನೆಯಾಗುತ್ತಾ ಬಂತು. ಹೀಗೆ ಛಿದ್ರಗೊಂಡ ಜನತಾ ಪರಿವಾರವನ್ನು ಒಟ್ಟುಗೂಡಿಸಿ ಶಕ್ತಿ ತುಂಬಬೇಕೆಂಬ ಆಸೆ ನನ್ನಲ್ಲಿತ್ತು. ಬೇರೆಬೇರೆ ಪಕ್ಷಗಳಿಗೆ ಹಂಚಿಹೋಗಿರುವ ಎಲ್ಲಾ ಜನತಾ ಪರಿವಾರ ನಾಯಕರಿಗೆ ಓಪನ್ ಇನ್ವಿಟೇಷನ್ ಕೊಟ್ಟು ಮತ್ತೆ ಪಕ್ಷ ಸಂಘಟಿಸಬೇಕು ಎಂಬ ಪ್ರಯತ್ನಕ್ಕೆ ನಾನು ಮುಂದಾದದ್ದು ಇಲ್ಲಿನವರಿಗೆ ಆಪ್ಯಾಯಮಾನ ಎನಿಸಲಿಲ್ಲ. ಅವರಿಗೆ ದೇವೇಗೌಡರ ಹತ್ತು ತಿಂಗಳ ಪ್ರಧಾನಿ ಅವಧಿ ಮತ್ತು ಕುಮಾರಸ್ವಾಮಿಯವರ ಇಪ್ಪತ್ತು ತಿಂಗಳ ಮುಖ್ಯಮಂತ್ರಿ ಅವಧಿಗಳಷ್ಟೇ ತಮ್ಮ ಪಕ್ಷದ ಇತಿಹಾಸ ಎಂಬಂತೆ ನಡೆದುಕೊಂಡರು.

ಪತ್ರಿಕೆ: ದೇಶದ ರಾಜಕಾರಣದಲ್ಲಿ ಬಿಜೆಪಿಯ ನಾಗಾಲೋಟ ಪ್ರಾದೇಶಿಕ ಪಕ್ಷಗಳನ್ನು ಆಪೋಷನ ತೆಗೆದುಕೊಳ್ಳುತ್ತಿದೆ. ಇಂಥಾ ಸಂದರ್ಭದಲ್ಲಿ ಕರ್ನಾಟಕದ ಮಟ್ಟಿಗೆ ಸಮರ್ಥ ಪ್ರಾದೇಶಿಕ ಪಕ್ಷವಾಗಬಹುದಾಗಿದ್ದ ಜೆಡಿಎಸ್ ದುರ್ಬಲವಾಗಿದೆ ಎನಿಸುತ್ತಿಲ್ಲವೇ?
ವಿಶ್ವನಾಥ್: ನಮ್ಮ ಜೆಡಿಎಸ್‍ಗೆ ದೊಡ್ಡ ನೆಲೆ ಅಂತ ಇರುವುದೇ ಐದಾರು ಜಿಲ್ಲೆಗಳಲ್ಲಿ. ಅದರಾಚೆಗೆ ವಿಸ್ತರಣೆಗೊಳ್ಳುವ ದೊಡ್ಡ ಮಟ್ಟದ ಪ್ರಯತ್ನ ನಿರಂತರವಾಗಿ ನಡೆಯದೇ ಇರುವುದು ಪಕ್ಷದ ಏಳ್ಗೆಗೆ ದೊಡ್ಡ ಹಿನ್ನಡೆ ಆಗಿದೆ ಅನ್ನುವುದೇನೊ ಸತ್ಯ. ಆದರೆ ಉತ್ತರ ಕರ್ನಾಟಕದ ಭಾಗಗಳಲ್ಲೂ ಪಕ್ಷದ ಪರ ಒಲವಿದೆ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಬಲು ಬದ್ಧತೆಯಿಂದ ಆ ಭಾಗಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಿದ್ದನ್ನು, ರಾತ್ರೋರಾತ್ರಿ ಚಾನೆಲ್ ನಿರ್ಮಾಣ ಕಾಮಗಾರಿ ಶುರು ಮಾಡಿದ್ದನ್ನು ಅಲ್ಲಿನ ಜನ ಈಗಲೂ ನೆನಪಿಸಿಕೊಳ್ಳುತ್ತಾರೆ. ಚುನಾವಣೆ ಸಂದರ್ಭದಲ್ಲಿ ನಾನು ಆ ಭಾಗಕ್ಕೆ ಭೇಟಿ ನೀಡಿದಾಗ ಇದನ್ನು ಗಮನಿಸಿದೆ. ಇದನ್ನು ಪಕ್ಷಕ್ಕೆ ಲಾಭ ಮಾಡಿಕೊಳ್ಳುವಂತಹ ಕಾರ್ಯತಂತ್ರಗಳು ನಮ್ಮಿಂದ ಆಗಲಿಲ್ಲ.
ನಮ್ಮ ಸುಭದ್ರ ನೆಲೆಯಿಂದ ಆಚೆಗು ಹರಡಿಕೊಳ್ಳುವ ಪ್ರಯತ್ನಕ್ಕೆ ಯಾವುದೇ ಪಕ್ಷ ಮುಂದಾಗದಿದ್ದರೆ, ಅದರ ಬಲ ವೃದ್ಧಿಯಾಗುವುದಿಲ್ಲ. ನಾನು ರಾಜೀನಾಮೆ ಘೋಷಿಸಿದ ರಾತ್ರಿ ನಮ್ಮ ಪಕ್ಷದ ಜೆಡಿಎಲ್‍ಪಿ ಸಭೆ ಇತ್ತು. ಆ ಸಭೆಯಲ್ಲಿ ದೇವೇಗೌಡರು ಲೋಕಸಭಾ ಸೋಲಿನಿಂದ ಹತಾಶರಾಗದೆ, ನಾನು ಪಕ್ಷ ಸಂಘಟಿಸಲು ಈಗಲೂ ಹುಮ್ಮಸ್ಸಿನಲ್ಲಿದ್ದೇನೆ, ನಿಮ್ಮ ಸಲಹೆಗಳನ್ನು ಕೊಡಿ ಎಂದು ಶಾಸಕರ ಮುಂದೆ ಪ್ರಸ್ತಾಪವನ್ನಿಟ್ಟರು. ಆಗ ಎಲ್ಲಾ ಶಾಸಕರು ನಮ್ಮ ಕ್ಷೇತ್ರಕ್ಕೆ ಅಷ್ಟು ಅನುದಾನ ಕೊಡಿ, ಇಷ್ಟು ಅನುದಾನ ಕೊಡಿ ಅದರಿಂದ ಅಭಿವೃದ್ಧಿ ಕೆಲಸ ಮಾಡಿ ಪಕ್ಷ ಸಂಘಟಿಸುತ್ತೇವೆ ಎಂದರು. ಅವ್ಯಾವುವೂ ದೇವೇಗೌಡರಿಗೆ ತೃಪ್ತಿ ನೀಡಿದಂತೆ ಕಾಣಲಿಲ್ಲ. ನನ್ನ ಅಭಿಪ್ರಾಯ ಕೇಳಿದರು. ಆಗ ನಾನು ಹೇಳಿದ್ದಿಷ್ಟೆ. ನಮ್ಮ ಶಾಸಕರು ಅನುದಾನದ ಮೂಲಕ ಪಕ್ಷ ಸಂಘಟಿಸುವ ಮಾತಾಡುತ್ತಿದ್ದಾರೆ. ಅಂದರೆ ನಮ್ಮ ಜೆಡಿಎಸ್ ಶಾಸಕರು ಯಾವ್ಯಾವ ಕ್ಷೇತ್ರದಲ್ಲಿದ್ದಾರೊ ಆ ಕ್ಷೇತ್ರಗಳಲ್ಲಿ ಪಕ್ಷ ಸಂಘಟಿಸುವುದಕ್ಕಷ್ಟೇ ಅವರು ಸೀಮಿತಗೊಂಡಿದ್ದಾರೆ. ಅದರಾಚೆಗೆ ವಿಸ್ತರಣೆಯ ಕಲ್ಪನೆಯ ಅವರ್ಯಾರಿಗೂ ಇದ್ದಂತಿರಲಿಲ್ಲ. ಇಂಥಾ ಮಿತಿಯನ್ನು ಮುರಿಯುವ ಸಾಹಸಕ್ಕೆ ಕೈಹಾಕಬೇಕಿದೆ. ಅಷ್ಟಕ್ಕೂ ಅನುದಾನಗಳಿಂದ ಪಕ್ಷ ಸಂಘಟನೆ ಸಾಧ್ಯವೇ? ನಾವು ಬಜೆಟ್‍ನಲ್ಲಿ ಮಂಡ್ಯಕ್ಕೆ ರೂ.6780 ಕೋಟಿ ಅನುದಾನ ಕೊಟ್ಟೆವು. ಆದರೆ ಲೋಕಸಭೆ ಎಲೆಕ್ಷನ್‍ನಲ್ಲಿ ಆದದ್ದೇನು? ಪಕ್ಷ ಅಲ್ಲಿ ಸೋತುಹೋಯ್ತು.
ಪಕ್ಷ ಸಂಘಟನೆಯೆಂದರೆ, ಅನುದಾನ ಅಭಿವೃದ್ಧಿಗಳಷ್ಟೇ ಅಲ್ಲ. ಎಲ್ಲಾ ಜಾತಿ,ಧರ್ಮ ,ಪ್ರದೇಶದವರಿಗೂ ಅಧಿಕಾರ ಹಂಚಿಕೆಯಾಗುವ ರೀತಿ ನೋಡಿಕೊಳ್ಳಿ. ಭರ್ತಿಯಾಗದೆ ಉಳಿದಿರುವ ಎರಡು ಸಚಿವ ಸ್ಥಾನಗಳಲ್ಲಿ ಒಂದನ್ನು ದಲಿತರಿಗೆ ಮತ್ತೊಂದನ್ನು ಅಲ್ಪಸಂಖ್ಯಾತರಿಗೆ ಕೊಡಿ. ಖಾಲಿಯಿರುವ ನಿಗಮ ಮಂಡಳಿಗಳಿಗೆ ದೇವರಾಜ್ ಅರಸು ಮಾದರಿಯಲ್ಲಿ ಎಲ್ಲಾ ವರ್ಗದವರಿಗೆ ಪ್ರಾತಿನಿಧ್ಯ ಕೊಟ್ಟು ಹಂಚಿಕೆ ಮಾಡಿ. ಆಗ ತಳ್ಳಮಟ್ಟದ ಕಾರ್ಯಕರ್ತರೆಲ್ಲ ಖುಷಿಯಿಂದ, ಹೆಮ್ಮೆಯಿಂದ ಇದು ನಮ್ಮ ಜೆಡಿಎಸ್ ಪಕ್ಷ ಎಂದು ದುಡಿಯುತ್ತಾರೆ. ಪಕ್ಷ ಸಂಘಟನೆಯಾಗುತ್ತದೆ ಎಂಬ ಸಲಹೆ ಕೊಟ್ಟೆ. ಅದನ್ನು ಸ್ವೀಕರಿಸುವುದು ಬಿಡುವುದು ಪಕ್ಷಕ್ಕೆ ಬಿಟ್ಟದ್ದು. ಆದರೆ ಇಂಥಾ ಸಾಕಷ್ಟು ಮಿತಿಗಳೇ ಜೆಡಿಎಸ್ ಅನ್ನು ಕಟ್ಟಿಹಾಕಿವೆ.

ಪತ್ರಿಕೆ: ಕೆಲವೊಮ್ಮೆ ದೇವೇಗೌಡರ ಮಾತಿಗೂ ಮನ್ನಣೆ ಸಿಗುತ್ತಿರಲಿಲ್ಲ, ಅವರು ಅಸಹಾಯಕರಾಗಿರುತ್ತಿದ್ದರು ಎಂದು ಹೇಳುತ್ತಿದ್ದೀರಿ. ಮಂಡ್ಯ ಮತ್ತು ಹಾಸನದ ಟಿಕೆಟ್ ಹಂಚಿಕೆಯ ಬಗ್ಗೆಯೂ ಅವರು ಅಸಹಾಯಕರಾಗಿದ್ದರೆ?
ವಿಶ್ವನಾಥ್: ವಯಸ್ಸು ಅವರಿಗೆ ಅಂಥಾ ಅಸಹಾಯಕತೆಯನ್ನು ನಿರ್ಮಾಣ ಮಾಡುತ್ತೆ. ಹಾಸನ ದೇವೇಗೌಡರ ಕರ್ಮಭೂಮಿ. ಅದನ್ನು ಬಿಟ್ಟು ಅವರು ಹೊರಬರಬಾರದಿತ್ತು. ಬಹುಶಃ ಇದು ಅವರ ಕೊನೇ ಚುನಾವಣೆಯೂ ಆಗಿರಬಹುದು. ಒಬ್ಬ ಮಾಜಿ ಪ್ರಧಾನಿಯವರ ರಾಜಕೀಯ ಬದುಕಿನಲ್ಲಿ ಮುಸ್ಸಂಜೆಯ ಇಂಥಾ ಸೋಲುಗಳು ಒಳ್ಳೆಯ ಸಂದೇಶವನ್ನು ಹುಟ್ಟಿಹಾಕುವುದಿಲ್ಲ. ದೇವೇಗೌಡರು ಹಾಸನವನ್ನು ಬಿಟ್ಟುಕೊಡುತ್ತೇನೆ ಎಂದಾಗ ಅವರ ಕುಟುಂಬವೇ ಅದನ್ನು ಒಪ್ಪಿಕೊಳ್ಳಬಾರದಿತ್ತು. ಈಗ ಪ್ರಜ್ವಲ್‍ಗೆ ಅದು ಅರ್ಥವಾಗಿರುವಂತಿದೆ. ದೇವೇಗೌಡರಿಗೋಸ್ಕರ ರಾಜೀನಾಮೆ ಕೊಡುವುದಾಗಿ ಹೇಳಿದ್ದಾರೆ. ಆದರೆ ಸ್ವತಃ ದೇವೇಗೌಡರೆ ಅದನ್ನು ಒಪ್ಪಲಾರರು.
ದೇವೆಗೌಡರು ಜನರ ಪ್ರಭಾವಳಿಯ ನಡುವೆ ಬೆಳೆದವರು. ಆದರೆ ಅವರ ಕುಟುಂಬ ದೇವೇಗೌಡರ ಪ್ರಭಾವಳಿಯಲ್ಲಿ ಬೆಳೆಯಿತು. ಅಂತಹ ಪ್ರಭಾವಳಿಯನ್ನೆ ಮಸುಕು ಮಾಡುವಂತಹ ತೀರ್ಮಾನ ತೆಗೆದುಕೊಂಡಾಗ ಕುಟುಂಬ ಒಪ್ಪಿಕೊಳ್ಳಬಾರದಿತ್ತು. ದೇವೆಗೌಡರಂತಹ ಆಲದ ಮರದ ರಾಜಕೀಯ ಸಮಾಧಿ ಮೇಲೆ ತುಂಬೆಗಿಡ ನೆಡಲು ಬಂದ ಹಾಗೆ ಆಗಿದೆ. ಅವರ ಜೀವಿತದ ಕೊನೆಯ ಚುನಾವಣೆಯಲ್ಲಿ ಕುಟುಂಬ ಹೇಗೆ ನಡೆದುಕೊಳ್ಳಬೇಕೋ ಹಾಗೆ ನಡೆದುಕೊಳ್ಳಲಿಲ್ಲ. ನಾನು ನನ್ನ ರಾಜೀನಾಮೆ ಪತ್ರದಲ್ಲಿ `ನಿಮಗಾದ ಸೋಲು, ಅದು ನಮ್ಮೆಲ್ಲರ ಸೋಲು’ ಎಂದು ದೇವೇಗೌಡರ ಬಗ್ಗೆ ಬರೆದಿದ್ದೇನೆ. ಮಾಜಿ ಪ್ರಧಾನಿಗಳಾಗಿ ದೇವೇಗೌಡರ ಅನುಭವ ದೊಡ್ಡದು. ಕಾವೇರಿ ನೀರಿನ ಸಮಸ್ಯೆ ಬಂದಾಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ದೇವೇಗೌಡರ ಹತ್ತಿರ ಬರಬೇಕಾಯಿತು. ಪಾರ್ಲಿಮೆಂಟಿನಲ್ಲಿ ಅಂತವರ ಅನುಪಸ್ಥಿತಿ ರಾಜ್ಯವನ್ನು ಬಾಧಿಸಲಿದೆ. ಅವರ ಸೋಲಿನಿಂದ ಒಂದು ಮುತ್ಸದ್ದಿ ಆಡಳಿತ ಅನುಭವ ಸತ್ತೋಗ್ತಾ ಇದೆ.. ದೇವೆಗೌಡರಿಗೆ ಅನಿವಾರ್ಯವಾದ ಕುಟುಂಬ ಪ್ರೀತಿಯು ಜಾಸ್ತಿಯಾಯಿತು ಅನಿಸುತ್ತೆ.

ಪತ್ರಿಕೆ: ದಕ್ಷಿಣ ಭಾರತದಲ್ಲಿ ಎಲ್ಲೂ ಬಿಜೆಪಿ ದೊಡ್ಡಮಟ್ಟದ ಸಾಧನೆ ತೋರಲು ಇದುವರೆಗೆ ಸಾಧ್ಯವಾಗಿಲ್ಲ. ಆದರೆ ಕರ್ನಾಟಕದಲ್ಲಿ 25 ಸೀಟುಗಳನ್ನು ಗೆದ್ದುಕೊಂಡಿದೆ. ಇದಕ್ಕೆ ರಾಜ್ಯದಲ್ಲಿರುವ ರಾಷ್ಟ್ರೀಯ ಪಕ್ಷದ ವೈಫಲ್ಯ ಕಾರಣ ಅನ್ನಿಸುತ್ತೋ ಜೆಡಿಎಸ್ ವೈಫಲ್ಯ ಅನ್ನಿಸುತ್ತೊ, ನಿಮ್ಮ ಅಭಿಪ್ರಾಯವೇನು?
ವಿಶ್ವನಾಥ್: ನಾನು ಮೊದಲೇ ಹೇಳಿದಂತೆ ಚುನಾವಣಾ ಪೂರ್ವ ಮೈತ್ರಿಯೇ ದೊಡ್ಡ ಹಿನ್ನಡೆ. ನಾವು ಬೇರೆಬೇರೆಯಾಗಿಯೇ ಸ್ಪರ್ಧಿಸಿದ್ದರೆ ಕನಿಷ್ಠ ನಾವು ನಾಲ್ಕು ಕ್ಷೇತ್ರಗಳಲ್ಲಿ, ಅವರು (ಕಾಂಗ್ರೆಸ್) ಆರರಿಂದ ಏಳು ಕ್ಷೇತ್ರಗಳಲ್ಲಿ ಗೆಲ್ಲುತ್ತಿದ್ದರು. ಆದರೆ ತಳಮಟ್ಟದಲ್ಲಿ ಯಾವ ತಯಾರಿಯನ್ನೂ ಮಾಡದೆ ನಾಯಕರ ಮಟ್ಟದಲ್ಲಿ ಮೈತ್ರಿಯನ್ನು ಹೇರಿದ್ದು ಕಾರ್ಯಕರ್ತರು ವಿಚಲಿತರಾಗುವಂತೆ ಮಾಡಿತು. ನೇರವಾಗಿ ಹೇಳುವುದಾದರೆ ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ದೊಡ್ಡ mischief ಮಾಡಿದರು. ಯಾರಾದರೂ ಹಾಲಿ ಸಂಸದರನ್ನು ಬಿಟ್ಟು ಬೇರೆಯವರನ್ನು ನಿಲ್ಲಿಸುತ್ತಾರಾ? ಅದು ಒಳ್ಳೆಯ ಬೆಳವಣಿಗೆಯಾ? ಮುದ್ದುಹನುಮೇಗೌಡರಿಗೆ ಟಿಕೆಟ್ ತಪ್ಪಿಸಿ ಆ ಜಾಗದಲ್ಲಿ ದೇವೆಗೌಡರನ್ನು ಕೂರಿಸೋದು ಅಂದ್ರೆ, ಏನರ್ಥ ನೇರವಾಗಿ ಗೌಡರನ್ನು ಮುಗಿಸುವುದೇ ಅಲ್ಲವೇ. ನಾವೆಲ್ಲ ಮೈಸೂರಿಗಾದರೂ ಕೊಡಿ ಎಂದೆವು. ಆದರೆ ಸಿದ್ದರಾಮಯ್ಯ ಹಠ ಮಾಡಿದರು.
ಇನ್ನು ಮಂಡ್ಯದಲ್ಲಿ ಸೋತಿದ್ದು ಮುಖ್ಯವಾಗಿ ನಮ್ಮ ಜೆಡಿಎಸ್ ಮುಖಂಡರ ನಡವಳಿಕೆಯಿಂದ. ಎದುರಾಳಿ ಅಭ್ಯರ್ಥಿ ಕುರಿತು ಅವರಿಂದ ಬಂದ ಅಪಚ್ಯ ಮಾತುಗಳೂ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿವೆ. ಅಂಬರೀಷ್‍ರ ಹೆಂಡತಿ ರಾಜಕೀಯದ ಹೊರತಾಗಿ ಅವರು ಮಂಡ್ಯದ ಸೊಸೆ. ನಮ್ಮ ಹೆಣ್ಮಗಳಿಗೆ ಕೊಡಬೇಕಾದ ಗೌರವವನ್ನು ನಾವು ಕೊಡಲೇಬೇಕು. ನಮ್ಮವರ ಮಾತಿನಿಂದ ನಾನು ವೈಯಕ್ತಿಕವಾಗಿ ಬೇಸರಗೊಂಡು ರಾಜ್ಯಾಧ್ಯಕ್ಷನಾಗಿ ಕ್ಷಮೆ ಕೇಳಿದೆ.
ಚುನಾವಣೆಗೆ ತಯಾರಿ ಮಾಡಿಕೊಳ್ಳುವ ಕುರಿತು ಎರಡೂ ಪಕ್ಷಗಳ ಮುಖಂಡರು ಕಲೆತು ಚರ್ಚೆ ನಡೆಸಬೇಕಿತ್ತು. ಮೈತ್ರಿ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷರು, ಎರಡು ಪಕ್ಷಗಳ ಅಧ್ಯಕ್ಷರಗಳು, ಹಿರಿಯರು ಸೇರಿ ಸಭೆ ಮಾಡಬೇಕಿತ್ತು. ಅದೂ ಆಗಲಿಲ್ಲ. ಸ್ಟ್ರಾಟಜಿ ಮಾಡುವಲ್ಲಿ ನಿಷ್ಣಾತರೆನಿಸಿದ ದೇವೇಗೌಡರ ನೇತೃತ್ವದಲ್ಲೇ ಒಂದೂ ಸಭೆ ನಡೆಯಲಿಲ್ಲ.

ಪತ್ರಿಕೆ: ಇಂದಿನ ದಿನಮಾನಗಳಲ್ಲಿ ದೇಶ ತುಂಬ ಸಂದಿಗ್ಧ ಪರಿಸ್ಥಿತಿಯಲ್ಲಿದೆ, ಬಲಪಂಥೀಯ ಶಕ್ತಿಗಳ ಕೈ ಮೇಲಾಗುತ್ತಿದೆ. ಇಂತಹ ಸಮಯದಲ್ಲಿ ನಿಮ್ಮಂತಹ ಹಿರಿಯರು ಜವಾಬ್ದಾರಿಯಿಂದ ಕೆಳಗಿಳಿದರೆ ಏನು ಸಂದೇಶ ಕೊಡಬಹುದು?
ವಿಶ್ವನಾಥ್: (ನಗುತ್ತಾ) ಜವಾಬ್ಧಾರಿಯಿಂದ ಕೆಳಗಿಳಿಯೋದು ಅಂತಂದರೆ ಹೇಗೆ ಹೇಳೋದು? ಇಷ್ಟೊತ್ತು ಅದನ್ನೆ ಮಾತಾನಾಡಿದ್ದೇವೆ.

ಪತ್ರಿಕೆ- ಇದೇ ಸಮಯದಲ್ಲಿ ಬಿಜೆಪಿಗೆ ಹೋಗುವುದು ಒಂದು ಟ್ರೆಂಡ್ ತರ ಆಗಿದೆ. ನೀವು ಕೂಡ ಹೋಗುತ್ತೀರಿ ಎಂದು ಸುದ್ದಿ ಹಬ್ಬಿದೆ. ಇದರ ಬಗ್ಗೆ ಏನು ಹೇಳ್ತೀರಿ…
ವಿಶ್ವನಾಥ್: ಮೊನ್ನೆ ಒಬ್ಬ ಹುಡುಗ ತನ್ನ ವೆಬ್‍ಸೈಟ್‍ನಲ್ಲಿ ವಿಶ್ವನಾಥ್ 28 ಕೋಟಿಗೆ ಬಿಜೆಪಿಗೆ ಸೇಲಾಗಿದ್ದಾರೆ ಅಂತ ವೀಡಿಯೊ ಮಾಡಿ ಹಾಕಿದ್ದ. ಇಂತವೆಲ್ಲ ಬರೋದು ಸಹಜ. ಆದ್ರೆ ನಾನು ಕೆಲವೊಂದು ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತೇನೆ. ಜನ ಮತ್ತು ಪಕ್ಷದ ಹಿತದೃಷ್ಟಿಯಿಂದ ನಾನು ಆ ಪ್ರಶ್ನೆಗಳನ್ನು ಕೇಳಿದ ಕೂಡಲೇ ಇಂಥಾ ಗಾಳಿ ಸುದ್ದಿ ಹಬ್ಬಿಸುವವರಿಗೆ ನಾನು ಬಿಜೆಪಿಗೆ ಹೋಗಲು ಹೀಗೆಲ್ಲ ಮಾತನಾಡುತ್ತಿದ್ದೇನೆ ಅನ್ನಿಸಬಹುದು. ನಾನು ಸಮನ್ವಯ ಸಮಿತಿ ಸದಸ್ಯರಿಗೆ ಕೇಳಿದೆ, ಕೋಮುವಾದಿಗಳನ್ನ ದೂರ ಇಡುತ್ತೇವೆ ಎಂದು ಎರಡು ಜಾತ್ಯತೀತ ಪಕ್ಷಗಳು ಅಧಿಕಾರಕ್ಕೆ ಬಂದಿದ್ದೀರಿ, ಓಕೆ, ನಿಮ್ಮ ಅಚೀವ್‍ಮೆಂಟ್ ಏನು? ಶ್ರೀಸಾಮಾನ್ಯನಿಗೆ ಕೋಮುವಾದ, ಫ್ಯಾಸಿಸಂ ಇವೆಲ್ಲ ಅರ್ಥವಾಗುವುದಿಲ್ಲ. ಅವನು ದಾಹಕ್ಕೆ ನೀರು ಕೊಟ್ಟಿದ್ದೀಯಾ, ಹಸಿವಿಗೆ ಅನ್ನ ನೀಡಿದ್ದೀಯಾ, ನನ್ನ ಮಕ್ಕಳಿಗೆ ಶಿಕ್ಷಣ ಕೊಟ್ಟಿದ್ದೀಯಾ, ದುಡಿಯುವ ಕೈಗಳಿಗೆ ಉದ್ಯೋಗ ಕೊಟ್ಟಿದ್ದೀಯಾ ಎಂದು ಕೇಳುತ್ತಾನೆ. ಈ ಪ್ರಶ್ನೆಗಳಿಗೆ ಉತ್ತರ ಹೇಳುವಂತದ್ದನ್ನು ನಾವೇನು ಮಾಡಿದ್ದೇವೆ ಹೇಳಿ. ಹಾಗಿದ್ದರೆ, ಕೋಮುವಾದ, ಕೋಮುವಾದಿಗಳು ಎಂಬ ಸೈದ್ಧಾಂತಿಕ ಮಡಿವಂತಿಕೆ, ಮೈಲಿಗೆಗಳು ಬರೀ ಅಧಿಕಾರಕ್ಕಾಗಿ ಮಾತ್ರವಾ? ಇದರಿಂದ ಜನಗಳಿಗೆ ಪ್ರಯೋಜನ ಏನು? ಸಮನ್ವಯ ಸಮಿತಿ ಅಧ್ಯಕ್ಷನಾಗಿ ಸಿದ್ರಾಮಯ್ಯ ಇದಕ್ಕೆಲ್ಲ ಉತ್ತರ ಕೊಡಲಿ. ಆಗ ಬಿಜೆಪಿ ಯಾಕೆ ಇಷ್ಟು ದೊಡ್ಡಮಟ್ಟದಲ್ಲಿ ಗೆದ್ದಿತು ಎಂಬುದಕ್ಕೂ ನಮಗೆ ಉತ್ತರ ಸಿಗುತ್ತೆ. ಕೋಮುವಾದಿಗಳನ್ನು ಹೊರಗಿಡೋಕೆ ಒಂದಾಗತೀವಿ ಅಂತೀರ, ನೀವು ಒಂದಾಗಿ ಏನ್ ಮಾಡುತ್ತಿದ್ದೀರಿ? ಜಗಳ ಆಡತಿದೀರ ಅಷ್ಟೇ. ಪಕ್ಷಗಳು ಮತ್ತು ಸರ್ಕಾರಗಳು ಇಂಥಾ ಡೋಲಾಯಮಾನಕ್ಕೆ ಬಿದ್ದಾಗ ಕಾರ್ಯಕರ್ತರಿಗೆ ಮತ್ತು ನಾಯಕರಿಗೆ ಬೇರೊಂದು ಪಕ್ಷಕ್ಕೆ ವಲಸೆ ಹೋಗುವ ಆಲೋಚನೆ ಬರೋದ್ರಲ್ಲಿ ಸಹಜವೇ ತಾನೆ, ಅದೇ ಈಗ ಬಿಜೆಪಿಗೆ ಹೋಗುವ ಟ್ರೆಂಡ್ ಆಗಿ ಬದಲಾಗಿದೆ. ನನ್ನ ಮುಂದೆಯೇ ಎಷ್ಟೊಂದ್ ಜನ `ಅಯ್ಯೋ ಇಲ್ಲಿದ್ದು ಯಾಕೆ ಸಾಯ್ತೀರಿ ಸಾರ್, ಬಿಜೆಪಿಗೆ ಹೋಗಿ ಅರಾಮಾಗಿ ಇರಬಾರ್ದಾ’ ಅಂತಾ ಹೇಳಿದ್ದಿದೆ. ಅಂತವರಿಗೆ ಸಿದ್ದಾಂತ, ಗಿದ್ದಾಂತ ಎಲ್ಲಾ ಅರ್ಥ ಆಗೋಲ್ಲ ಅನ್ನೋದು ಸತ್ಯ. ಜೊತೆಗೆ, ಆತ ಹಾಗೆ ಮಾತನಾಡುವಲ್ಲಿ ಅವನ ತಪ್ಪೆಷ್ಟಿದೆ, ಪಕ್ಷದ ತಪ್ಪೆಷ್ಟಿದೆ ಅನ್ನೋದನ್ನೂ ಯೋಚನೆ ಮಾಡಬೇಕಲ್ವಾ?

ನಾನು, ಶ್ರೀನಿವಾಸ್ ಪ್ರಸಾದ್ ತುಂಬಾ ವರ್ಷಗಳ ಸ್ನೇಹಿತರು ಅವರ ಮನೆಗೆ ಹೋದ್ರೆ ಬಿಜೆಪಿಗೆ ಹೋದ ಹಾಗಾ? ರಾಜಕಾರಣದಲ್ಲಿ ಕೆಲವು ಸಣ್ಣತನಗಳನ್ನು ನಮ್ಮ ನಾಯಕರು ಬಿಡಬೇಕಾಗಿದೆ. ರಾಜಕಾರಣ ಇಷ್ಟು ಸಂಕುಚಿತ ಅರ್ಥಕ್ಕೆ ಕುಸಿದಿರುವುದರಿಂದಲೇ ರಾಜಕಾರಣಿಗಳ ನಡುವೆ ಆರೋಗ್ಯಕರ ಸ್ನೇಹ, ಬಾಂಧವ್ಯ ಸಾಧ್ಯವಾಗುತ್ತಿಲ್ಲ.

ಪತ್ರಿಕೆ: ಸೆಕ್ಯುಲರ್ ಸಿದ್ದಾಂತ ಚೌಕಟ್ಟಿನಲ್ಲಿ ಒಂದಾದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಹೇಳಿಕೊಳ್ಳುವಂತಹ ಸಾಧನೆ ತೋರುತ್ತಿಲ್ಲ. ಇದಕ್ಕೆ ಕಾರಣ ಏನು?
ವಿಶ್ವನಾಥ್: ಈ ಸರ್ಕಾರದಲ್ಲಿ ಯೋಜನೆಯೇ ಇಲ್ಲ. ಇಲ್ಲಿಯವರೆಗೂ ಕಾಮನ್ ಮಿನಿಮಮ್ ಪ್ರೋಗ್ರಾಮ್ ತಯಾರು ಮಾಡಿಲ್ಲ. ಎಷ್ಟು ಬಾರಿ ಹೇಳಿದ್ದೇನೆ ಈ ಬಗ್ಗೆ. ಸಭೆಗಳಿಗೆ ವಿಶ್ವನಾಥ್‍ನ ಒಳಗಡೆ ಸೇರಿಸಬೇಡಿ ಎನ್ನುತ್ತಾರೆ. ದ್ವೇಷ ರಾಜಕಾರಣ, ವ್ಯಕ್ತಿಗತ ವೈಷಮ್ಯ ಇವುಗಳು ರಾಜಕಾರಣಕ್ಕೆ ಒಳ್ಳೆಯ ಲಕ್ಷಣಗಳಲ್ಲ. ಮೈಸೂರಿನಲ್ಲಿ ನಡೆಯುವ ಒಂದು ಸಭೆಗೂ ನನ್ನನ್ನು ಕರೆದಿಲ್ಲ. ನಾನು ಒಂದು ಪಕ್ಷದ ಶಾಸಕ, ಆ ಪಕ್ಷದ ರಾಜ್ಯಾಧ್ಯಕ್ಷನ ಹುದ್ದೆಯಲ್ಲಿದ್ದಂತವನು, ಹಾಗಿದ್ದರೂ ನನ್ನನ್ನು ನನ್ನದೇ ಜಿಲ್ಲೆಯ ಸಭೆಗಳಿಂದ ಹೊರಗಿಡುತ್ತಾರೆ ಎಂದರೆ ಇನ್ನು ಸರ್ಕಾರದ ಕಾರ್ಯವೈಖರಿ ಎಷ್ಟು ಸ್ವತಂತ್ರವಾಗಿರಬಹುದು ನೀವೇ ಯೋಚಿಸಿ.

ಪತ್ರಿಕೆ: ಸಿದ್ದರಾಮಯ್ಯನವರನ್ನು ಕಾಂಗ್ರೆಸ್‍ಗೆ ಕರೆತರುವಲ್ಲಿ, ಪ್ರಧಾನ ಪಾತ್ರ ವಹಿಸಿದವರಲ್ಲಿ ನೀವೂ ಒಬ್ಬರು. ಆದರೆ ನಂತರ ನಿಮ್ಮ, ಅವರ ನಡುವೆಯೇ ಮನಸ್ತಾಪ ಬಂದು, ನೀವೇ ಕಾಂಗ್ರೆಸ್‍ನಿಂದ ಹೊರಬರಬೇಕಾಯ್ತು. ಇದಕ್ಕೆಲ್ಲ ಏನು ಕಾರಣ?
ವಿಶ್ವನಾಥ್: ಇದೇ ವಿಚಾರವನ್ನು ಹಲವಾರು ಬಾರಿ ಚರ್ಚಿಸಿದ್ದೇನೆ. ಒಂದು, ಎರಡು ಅಂತಲ್ಲ ಸುಮಾರಷ್ಟು ಕಾರಣಗಳಿವೆ. ಸಿದ್ರಾಮಯ್ಯನಿಗೆ ಯಾರೂ ಪ್ರಶ್ನೆ ಮಾಡಬಾರದು. ಯಾರಾದರು ಪ್ರಶ್ನೆ ಮಾಡಿದರೆ, ಆತನ ಕಣ್ಣಿಗೆ ಅವರೆಲ್ಲ ವಿರೋಧಿಗಳ ಥರಾ ಕಾಣ್ತಾರೆ. ಇಂತವರು ದೀರ್ಘ ಕಾಲ ಯಾರಿಗೂ ಆಪ್ತರಾಗಲಾರರು. ಹೀಗಾಗಿ ಅಧಿಕಾರ ಚಲಾವಣೆಯ ಮೂಲಕ ಹಿಡಿತದಲ್ಲಿಟ್ಟುಕೊಳ್ಳಲು ಯತ್ನಿಸುತ್ತಾರೆ. ಅದು ನನಗೆ ಸರಿ ಕಾಣಲಿಲ್ಲ. ನಮ್ಮ ಶೋಷಿತ ಸಮುದಾಯಗಳ ನಾಯಕರಾದ ಅಂಬೇಡ್ಕರರೇ ಪ್ರಶ್ನೆ ಮಾಡಿ ಎಂದು ಹೇಳಿದ್ದಾರೆ. ಆದರೆ ಅವರ ಹೆಸರಲ್ಲಿ ಅಧಿಕಾರಕ್ಕೆ ಬಂದವರು ಪ್ರಶ್ನೆ ಮಾಡಿದರೇನೆ ಸಿಡಿಮಿಡಿಗೊಳ್ಳುತ್ತಿದ್ದಾರೆ. ದುರಂತವೆಂದರೆ, ಈಗಿನ ನಾಯಕರಲ್ಲಿ ಹೀಗೆ ಪ್ರಶ್ನೆ ಮಾಡಿದರೆ ಕೋಪಗೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಬಿಜೆಪಿಯಲ್ಲಿ ಇದು ಇನ್ನೂ ಜಾಸ್ತಿ. ಮೋದಿಯನ್ನು ಯಾರೂ ಪ್ರಶ್ನೆ ಮಾಡುವ ಹಾಗಿಲ್ಲ.

ಪತ್ರಿಕೆ: ದೇಶದಲ್ಲಿ ಕೋಮುವಾದಿ ಶಕ್ತಿಗಳು ಬಲವಾಗುತ್ತಿವೆ. ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಇದನ್ನು ಹೇಗೆ ಕೌಂಟರ್ ಮಾಡಬಹುದು. ನಿಮಗೆ ಏನಾದರು ನಿರ್ದಿಷ್ಟ ಆಲೋಚನೆಗಳಿವೆಯೇ?
ವಿಶ್ವನಾಥ್: ಅದಕ್ಕೆ ವಿಶಾಲವಾದ ಚರ್ಚೆ ಆಗಬೇಕು. ಒಂದೆರಡು ಗಂಟೆ, ಮೂರ್ನಾಲ್ಕು ದಿನಗಳ ಚರ್ಚೆಯಿಂದ ಅದಕ್ಕೆ ಪರಿಹಾರ ಕಂಡುಹಿಡಿಯಲು ಸಾಧ್ಯವಿಲ್ಲ. ಎಲ್ಲರೂ ಮನಸ್ಸು ಬಿಚ್ಚಿ ಕುಳಿತುಕೊಳ್ಳಬೇಕು. ಮೊದಲು ಜಾತ್ಯತೀತರು, ಪ್ರಗತಿಪರರು ಎಂದು ಕರೆದುಕೊಳ್ಳುವ ನಮ್ಮೆಲ್ಲರ ಭಾಷೆ ಬದಲಾಗಬೇಕಿದೆ. ಮಡಿವಂತಿಕೆಯಿಂದ ಹೊರಬಂದು ಮುಕ್ತವಾಗಬೇಕಿದೆ. ನಾವು ಜನರ ಭಾಷೆಯಲ್ಲಿ ಮಾತನಾಡದೆ ಇದ್ದರೆ, ನಮ್ಮ ಎಲ್ಲಾ ಪ್ರಯತ್ನಗಳು ಕೋಮುವಾದಿಗಳಿಗೆ ನೆರವಾಗುತ್ತವೆಯೇ ಹೊರತು ಬೇರೇನೂ ಆಗುವುದಿಲ್ಲ.
ತುಂಬಾ ಹಿಂದೆಯೇ ನಾನು ಕಾಂಗ್ರೆಸ್ಸಿನಲ್ಲಿದ್ದಾಗಲೆ ಎ.ಐ.ಸಿ.ಸಿ.ಯ ಹೈದಾರಾಬಾದ್ ಸಭೆಯಲ್ಲಿ ಒಂದು ಸಲಹೆ ಕೊಟ್ಟೆ. ನಮ್ಮ ಪಕ್ಷದಲ್ಲಿ ಒಂದು ರೀಸರ್ಚ್ ಅಂಡ್ ಅನಾಲಿಸೀಸ್ (ರಾ) ಟೀಮ್ ಇರಬೇಕು ಎಂದು ಹೇಳಿದೆ. ಇದರಲ್ಲಿ ಇರೋರು ಎಲೆಕ್ಷನ್‍ಗೆ ನಿಲ್ಲಬಾರದು. ಇನ್ವಿಸ್ಟಿಗೇಷನ್ ವೃತ್ತಿಯಿಂದ ಬಂದಂತಹ ನಿವೃತ್ತ ಅಧಿಕಾರಿಗಳು ಇದರಲ್ಲಿ ಇರಬೇಕು. ಇಡೀ ವರ್ಷನುಗಟ್ಟಲೇ ಕೆಲಸ ಮಾಡಬೇಕು. ಜನರ ಮನಸ್ಸು ಮತ್ತು ಸಮಾಜದ ಸಣ್ಣಪುಟ್ಟ ಆಗುಹೋಗುಗಳನ್ನೂ ಗಮನಿಸಿ ಅವರು ಪಕ್ಷಕ್ಕೆ ಸಲಹೆ ನೀಡಬೇಕು ಅಂತ ಹೇಳಿದ್ದೆ. ನೋಡಿ, ಇವತ್ತು ಹೆಂಡ ಮಾರೋ ದೊಡ್ಡ ಕಂಪನಿ ಒಡೆಯ ಕೂಡಾ ರಿಸರ್ಚ್ ಅಂಡ್ ಅನಾಲಿಸೀಸ್ ಟೀಮ್ ಇಟ್ಟುಕೊಂಡಿದ್ಧಾನೆ. ಬಾಟಲಿ ಯಾವ ಕಲರ್ ಇರಬೇಕು, ಯಾವ ಡಿಸೈನ್ ಇರಬೇಕು, ಹೇಗೆ ಜನರಿಗೆ ಹೆಚ್ಚು ಹೆಂಡ ಕುಡಿಸಬೇಕು ಅಂತ ಯೋಜನೆ ಮಾಡ್ತಾರೆ. ಇನ್ನು ದೇಶ ಆಳೋಕೆ ಬರ್ತೀವಿ ಅನ್ನೋರು ಹೇಗೆ ಇರಬೇಕು. ಕೋಮುವಾದಕ್ಕೆ ವಿರುಧ್ಧವಾಗಿ ಯೋಚನೆ ಮಾಡುವಂತೆ ಮನಸ್ಸುಗಳನ್ನು ತಯಾರಿಸಬೇಕಿದೆ. ಅದು ಸಂಕೀರ್ಣವಾದ, ಸುದೀರ್ಘವಾದ ಕೆಲಸ.
ನಮ್ಮ ರಾಜಕೀಯ ಪಕ್ಷಗಳು ಎಲೆಕ್ಷನ್ ಬಂದಾಗಲಷ್ಟೇ ಪಕ್ಷ ಸಂಘಟನೆಯ ತರಾತುರಿಗೆ ಇಳಿಯುತ್ತವೆ. ಆದ್ರೆ ಬಿಜೆಪಿ ಐದು ವರ್ಷದಿಂದಲೇ ಜನರ ಮನಸ್ಸನ್ನು ನಿಯಂತ್ರಿಸುತ್ತಾ ಬಂತು. ಬಿಜೆಪಿ ಅಂದರೆ ರಾಷ್ಟ್ರಭಕ್ತರು, ಹಿಂದೂಗಳ ಪರ ಅಂತ ಬಿಂಬಿಸಿಕೊಳ್ಳುತ್ತಲೇ ಕಾಂಗ್ರೆಸ್ ಅಂದ್ರೆ ರಾಷ್ಟ್ರದ್ರೋಹಿ, ಮುಸ್ಲಿಂ ಪರ ಅಂತ ಅಭಿಪ್ರಾಯ ರೂಪಿಸಿತು. ಇವರ್ಯಾರೂ ಎಚ್ಚೆತ್ತುಕೊಳ್ಳಲೇ ಇಲ್ಲಾ. ಇವತ್ತು `ಮೋದಿ ಎಂಬ ಒಬ್ಬ ಲೀಡರ್‍ನ ಸುತ್ತ ಚುನಾವಣೆ ನಡೆಯುತ್ತಿದೆ’ ಎಂದು ಕೆಲವರು ಹೇಳ್ತಾರೆ. ಆದ್ರೆ ಇಂಥಾ ಪ್ರವೃತ್ತಿ ಕೆಲ ವರ್ಷಗಳಲ್ಲಿ ಸೃಷ್ಟಿಯಾದದ್ದಲ್ಲ. ನನಗೆ ತಿಳಿದಂತೆ ಈ ದೇಶದಲ್ಲಿ ನಡೆದ issue bಚಿseಜ ಕೊನೆಯ ಚುನಾವಣೆ ಅಂದ್ರೆ 1975ರಲ್ಲಿ ನಡೆದದ್ದು. ಗರೀಬಿ ಹಠಾವೊ ವಿಚಾರ ಇಟ್ಕೊಂಡು. ಅದಾದ ಮೇಲೆ ಲೀಡರ್‍ಶಿಪ್ ಅವಲಂಬಿಸಿಯೇ ಚುನಾವಣೆಗಳು ನಡೆಯುತ್ತಿವೆ. ಅದು ಇವತ್ತು ವಿಪರೀತಕ್ಕೆ ಬಂದು ನಿಂತಿದೆ.

ಪತ್ರಿಕೆ: ಈಗ ಬಿಜೆಪಿಯವರು ಆಪರೇಷನ್ ಕಮಲ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದ ನಡುವೆ ಹೊಂದಾಣಿಕೆ ಇಲ್ಲ. ಇಂಥಾ ಸಮಯದಲ್ಲಿ ಮಧ್ಯಂತರ ಚುನಾವಣೆ ಬರಬಹುದಾ?
ವಿಶ್ವನಾಥ್: ಈಗಿರುವ ಸಂದರ್ಭದಲ್ಲಿ ಏನನ್ನೂ ಹೇಳಲಿಕ್ಕೆ ಬರುವುದಿಲ್ಲ. ಈಗಾಗಲೇ ಅನಾಹುತಗಳು ನಡೆದು ಹೋಗಿವೆ. ಮಲ್ಲಿಕಾರ್ಜುನ ಖರ್ಗೆ, ದೇವೇಗೌಡರು, ಮೊಯ್ಲಿ, ಮುನಿಯಪ್ಪನಂತಹವರನ್ನು ಸೋಲಿಸಿದ್ದು ಯಾರು? ನಾವೇ ದೊಡ್ಡ ನಾಯಕರೇ ಸೋಲಿಸಿದ್ದು. ಸ್ವಾರ್ಥ, ಸ್ವಪ್ರತಿಷ್ಟೆ ಇದಕ್ಕೆ ಕಾರಣ. ಕರ್ನಾಟಕದ ರಾಜಕಾರಣ ಅಧೋಗತಿಗೆ ಬಂದಿದೆ. ಇಷ್ಟೆಲ್ಲಾ ಆದರೂ ಒಂದು ಅಧ್ಯಯನ ಇಲ್ಲ. ಇದುವರೆಗೂ ಈ ಕುರಿತು ಚರ್ಚೆಯಿಲ್ಲ. ಸೋಲಿಗೆ ಆತ್ಮಾವಲೋಕನ ಆಗಿಲ್ಲ. ಇದೇ ಬಿಜೆಪಿ ಮೇಲುಗೈ ಆಗಲು ಕಾರಣ. ಇಂಥಾ ಪರಸ್ಪರ ಅಪನಂಬಿಕೆಯ ವಾತಾವರಣದಲ್ಲಿ ಮಧ್ಯಂತರ ಚುನಾವಣೆಯ ಬಗ್ಗೆ ಏನನ್ನೂ ಹೇಳಲಿಕ್ಕಾಗದು. ಏನು ಬೇಕಾದರು ಆಗಬಹುದು. ಜೆಡಿಎಸ್ ಮತ್ತು ಕಾಂಗ್ರೆಸ್ ಎರಡರಲ್ಲೂ ಒಂದು ಬೇರೆಡೆ ಹಾರಲು ಕಾಯುತ್ತಿರುವ ಶಾಸಕರ ಗುಂಪಿದೆ. ಈ ವಾಸ್ತವವನ್ನು ನಿಭಾಯಿಸುವುದು ನಾಯಕತ್ವಗಳ ಮುಂದಿರುವ ತತ್‍ಕ್ಷಣದ ಸವಾಲು.

ಪತ್ರಿಕೆ: ಪಕ್ಷದೊಳಗೆ ನಿಮ್ಮ ಅಸಮಾಧಾನಕ್ಕಿರುವ ಕಾರಣಗಳು ಒಂದಷ್ಟು ಸರಿ ಹೋದರೆ ನೀವು ಮತ್ತೆ ಅಧ್ಯಕ್ಷ ಸ್ಥಾನ ಸ್ವೀಕರಿಸುತ್ತೀರಾ?
ವಿಶ್ವನಾಥ್: ಇಲ್ಲಾ ಸಾರ್. ಖಂಡಿತ ಬೇಡ. ಯಾರಾದರೂ ಯಂಗ್‍ಸ್ಟರ್‍ನ ಮಾಡಬೇಕು. ಮಧು ಬಂಗಾರಪ್ಪ, ಸಕಲೇಶಪುರ ಶಾಸಕ ಕುಮಾರಸ್ವಾಮಿಯಂತವರು ಇದ್ದಾರೆ. ಇಲ್ಲವೆಂದರೆ ಮುಖ್ಯಮಂತ್ರಿಗಳೇ ಆ ಜವಾಬ್ಧಾರಿ ಹೊತ್ತುಕೊಳ್ಳಬಹುದು. ಮುಖ್ಯವಾಗಿ ಒಂದು ಮಾತು ಹೇಳಲೇಬೇಕು. ನಾನು ಮನಸ್ಸನ್ನ ಕಹಿ ಮಾಡಿಕೊಂಡು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ, ಸನ್ನಿವೇಶಗಳಿಗೆ ಸ್ಪಂದಿಸಿ ರಾಜೀನಾಮೆ ಕೊಟ್ಟಿದ್ದೇನೆ. ಹಾಗಾಗಿ ಮತ್ತೆ ಆ ಹೊಣೆ ನನಗೆ ಬೇಡ.

ಪತ್ರಿಕೆ: ನಿಮ್ಮ ಮುಂದಿನ ನಡೆಯೇನು?
ವಿಶ್ವನಾಥ್: ಅಧಿಕಾರ ಇರಲಿ ಬಿಡಲಿ ಉಸಿರು ಇರುವವರೆಗೂ ನಾನು ಸಾರ್ವಜನಿಕ ಜೀವನದಲ್ಲಿ ಇರುತ್ತೇನೆ. ದೇಶದಲ್ಲಿ ಪ್ರಜಾಪ್ರಭುತ್ವ ಹೇಗೆ ನಡೆಯುತ್ತಿದೆ, ಜನಗಳು ಇದನ್ನು ಹೇಗೆ ಅನುಭವಿಸುತ್ತಿದ್ದಾರೆ ಎಂಬಂತಹ ಚರ್ಚೆಗಳೇ ಇಲ್ಲ. ಬರೀ ಟೀಕೆಗಳು ನಡೆಯುತ್ತಿವೇ ಹೊರತು. ರಚನಾತ್ಮಕವಾದ ಕೆಲಸ ನಡೆಯುತ್ತಿಲ್ಲ. ರಾಜಕೀಯ ವ್ಯವಸ್ಥೆಯಲ್ಲಿ ಇಂಥಾ ರಚನಾತ್ಮಕ ಪ್ರಯೋಗಗಳನ್ನು ತರುವ ಸಲುವಾಗಿ ಇಂಡಿಯಾ ಇಂಟರ್‍ನ್ಯಾಷನಲ್ ಪೊಲಿಟಿಕಲ್ ಅಕ್ಯಾಡೆಮಿಯನ್ನು ಸ್ಥಾಪಿಸಿ, ಅದರಲ್ಲಿ ತೊಡಗಿಕೊಳ್ಳಬೇಕೆನ್ನುವ ಯೋಜನೆ ಇದೆ. ರಾಜಕೀಯವೇ ಉಸಿರಾಗಿರುವ ಭಾರತದಲ್ಲಿ ಪ್ರಜಾಪ್ರಭುತ್ವದ ಬಗೆಗೆ ಅಧ್ಯಯನ ಮಾಡುವ ಸಂಸ್ಥೆ ಇದಾಗಲಿದೆ. ಅದಕ್ಕಾಗಿ ಈಗಾಗಲೇ ಕಬಿನಿ ಹಿನ್ನೀರು ಪ್ರದೇಶದಲ್ಲಿ ಎರಡು ಎಕರೆ ಜಾಗವನ್ನೂ ಗುರುತು ಮಾಡಿದ್ದೇನೆ. ಸರ್ಕಾರ, ಯೂನಿವರ್ಸಿಟಿಗಳು ಮತ್ತು ಎಲ್ಲಾ ರಾಜಕೀಯ ಪಕ್ಷಗಳು ಪಕ್ಷಬೇಧ ಮರೆತು ಈ ಕಾರ್ಯಕ್ಕೆ ಕೈ ಜೋಡಿಸಬೇಕಿದೆ. ಯಾಕೆಂದರೆ ನಮ್ಮ ದೇಶದಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿರುವ ಗ್ರಾಮ ಪಂಚಾಯತ್ ವ್ಯವಸ್ಥೆಯ ಬಗ್ಗೆ ಸರಿಯಾದ ಪಿ.ಎಚ್.ಡಿ ಕೂಡಾ ಯಾರೂ ಮಾಡಿಲ್ಲ. 2015ರಲ್ಲೇ ರಾಜ್ಯಶಾಸ್ತ್ರ ಅಕ್ಯಾಡೆಮಿ ಮಾಡಬೇಕು ಅಂತ ಕೆಲವು ಡಾಕ್ಟರೇಟ್ ಪ್ರೊಫೆಸರುಗಳನ್ನು ಮಾತಾಡಿಸಿದೆ. ಆಗ ನನಗೆ ಗೊತ್ತಾದದ್ದೆಂದರೆ ನಮ್ಮ ವಿವಿಗಳ ಅರ್ಥಶಾಸ್ತ್ರ ವಿಭಾಗಗಳಲ್ಲಿ ಸರ್ಕಾರದ ಬಿಜೆಟ್ ವಿಶ್ಲೇಷಣೆ ಮಾಡುವುದನ್ನೇ ಕಲಿಸುವುದಿಲ್ಲ. ಅದೆಲ್ಲ ಇರಲಿ, 1975ರಲ್ಲಿ ಬಂದ ತುರ್ತು ಪರಿಸ್ಥಿತಿಯ ಬಗ್ಗೆಯೇ ಸಾಕಷ್ಟು ರಾಜಕಾರಣಿಗಳಿಗೆ, ಅಕ್ಯಾಡೆಮಿಷಿಯನ್‍ಗಳಿಗೆ ಗೊತ್ತಿಲ್ಲ. ಅದಕ್ಕಾಗಿಯೇ ನಾನು `ಆಪತ್ ಸ್ಥಿತಿಯ ಆಲಾಪನೆಗಳು’ ಎಂದು ಬರೆದೆ.
ಇವತ್ತಿನ ಮಾಧ್ಯಮಗಳಲ್ಲಿಯೂ ಸಹ ಪ್ರಜಾಪ್ರಭುತ್ವದ ಬಗ್ಗೆ ಚರ್ಚೆಗಳೇ ನಡೆಯುತ್ತಿಲ್ಲ, ತನಿಖಾ ಬರಹಗಳು, ಸಂವಿಧಾನದ ಕುರಿತು ಬರಹಗಳು ಬರುತ್ತಿಲ್ಲ. ನಾನು ಕೆಪಿಸಿಸಿಯಲ್ಲಿದ್ದಾಗ ಉಪಾಧ್ಯಕ್ಷರಾದ ನಾರಾಯಣನ್ ಇಂಡಿಯಾ ಡೆಮಾಕ್ರಸಿ ಪ್ರಾಂಚೇಸ್ ಎಂಬ ವಿಷಯದ ಬಗ್ಗೆ ಒಂದು ಸೆಮಿನಾರ್ ಮಾಡಿಸಿದ್ದರು. ನಾನು ಭಾಗವಹಿಸಿದ್ದೆ. ನನ್ನ ಮೊದಲ ಅವಧಿಯಲ್ಲಿ ದೆಹಲಿಯಲ್ಲಿ ಕಾಮನ್ ವೆಲ್ತ್ ದೇಶಗಳ ಸಭೆಯಾಯಿತು. ಸ್ಪೀಕರ್ ಆಗಿದ್ದ ರಂಗನಾಥ್ ಅವರು ಮೇಲ್ಮನೆಯಿಂದ ಡಿ.ಬಿ.ಚಂದ್ರೇಗೌಡ, ಕೆಳಮನೆಯಿಂದ ನನ್ನನ್ನ ಕಳುಹಿಸಿದ್ದರು. ‘ಹವ್ ಟೂ ಮೇಕ್ ಕೊಶ್ಚನ್ ಹವರ್ ಎಫೆಕ್ಟೀವ್ ವನ್’ ಅನ್ನೋ ವಿಷಯದ ಮೇಲೆ ಮೂರು ದಿನ ಸೆಮಿನಾರ್ ಅಧ್ಭುತವಾಗಿ ನಡೆಯಿತು. ಇಂಥಾ ಅನುಭವಗಳನ್ನಿಟ್ಟುಕೊಂಡು, ಅಧ್ಯಯನಶೀಲ ಸಂಸ್ಥೆ ಸ್ಥಾಪಿಸಬೇಕೆನ್ನುವುದು ನನ್ನ ಕನಸು ಮತ್ತು ಅದು ಈ ಕಾಲದ ಅನಿವಾರ್ಯತೆಯೂ ಹೌದು.

ಪತ್ರಿಕೆ: ನಿಮ್ಮ ಮುಂದಿನ ರಾಜಕೀಯ ಹಾದಿಗೆ ಶುಭವಾಗಲಿ ಸಾರ್
ವಿಶ್ವನಾಥ್: ನಿಮಗೂ ಶುಭವಾಗಲಿ, ಧನ್ಯವಾದಗಳು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ನನ್ನ ಬಂಧನ ಸಂಘಟಿತ ಪಿತೂರಿಯ ಭಾಗ..’; ರಾಂಚಿ ವಿಶೇಷ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ...

0
ಜಾರ್ಖಂಡ್‌ನ ಮಾಜಿ ಸಿಎಂ ಹೇಮಂತ್ ಸೊರೇನ್ ಮಂಗಳವಾರ ರಾಂಚಿಯ ವಿಶೇಷ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದು, 'ನನ್ನ ಬಂಧನವು ರಾಜಕೀಯ ಪ್ರೇರಿತವಾಗಿದೆ; ಬಿಜೆಪಿಗೆ ಸೇರುವಂತೆ ಒತ್ತಾಯಿಸುವ ಸುಸಂಘಟಿತ ಪಿತೂರಿಯ ಭಾಗವಾಗಿದೆ' ಎಂದು ಆರೋಪಿಸಿದರು. ಇದಕ್ಕೆ...