Homeಮುಖಪುಟಗೋಕಾಕ್ ಉಪಚುನಾವಣೆ: ಅವರಿವರ ಜೊತೆ ಇದ್ದಾರೆಯೇ ಇಲ್ಲವೇ? ಸದ್ಯಕ್ಕೆ ವದಂತಿಗಳದ್ದೇ ಅಬ್ಬರ

ಗೋಕಾಕ್ ಉಪಚುನಾವಣೆ: ಅವರಿವರ ಜೊತೆ ಇದ್ದಾರೆಯೇ ಇಲ್ಲವೇ? ಸದ್ಯಕ್ಕೆ ವದಂತಿಗಳದ್ದೇ ಅಬ್ಬರ

- Advertisement -
- Advertisement -

ಸಮ್ಮಿಶ್ರ ಸರ್ಕಾರವನ್ನು ಅತಂತ್ರಗೊಳಿಸಲು ಸತತ ಪ್ರಯತ್ನಮಾಡಿ ಕಡೆಗೂ ಬಿಜೆಪಿ ಸರ್ಕಾರ ಬರಲು ಕಾರಣವಾದ ರಮೇಶ್ ಜಾರಕಿಹೊಳಿಯ ಗೋಕಾಕ್ ವಿಧಾನಸಭಾ ಕ್ಷೇತ್ರ ಈಗ ರಾಜ್ಯದ ಪ್ರತಿಷ್ಟಿತ ಕಣವಾಗಿ ಮಾರ್ಪಟ್ಟಿದೆ. ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಮತ್ತೆ ಗೋಕಾಕ್ ಕ್ಷೇತ್ರದಿಂದ ಆರಿಸಿ ಬರಲು ಯತ್ನಿಸುತ್ತಿದ್ದು,ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ಆದರೆ ಈತನಿಗೆ ಎದುರಾಳಿಯಾಗಿ ಕಾಂಗ್ರೆಸ್‍ನಿಂದ ಈತನ ಸಹೋದರ ಲಖನ್ ಜಾರಕಿಹೊಳಿ ಕಣಕ್ಕಿಳಿದಿದ್ದು ಲಖನ್‍ಗೆ ಸತೀಶ್ ಜಾರಕಿಹೊಳಿಯ ಸಂಪೂರ್ಣ ಬೆಂಬಲವಿದೆ. ಇವರಿಬ್ಬರಿಗೂ ಪೈಪೋಟಿಯಾಗಿ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಕಣದಲ್ಲಿದ್ದಾರೆ. ಲಖನ್ ಜಾರಕಿಹೊಳಿ ಜೊತೆ ಸತೀಶ್ ಜಾರಕಿಹೊಳಿಯು ಸಹ ನಾಮಪತ್ರ ಸಲ್ಲಿಸಿ ಹುಬ್ಬೇರಿಸುವಂತೆ ಮಾಡಿದ್ದರು. ಲಖನ್ ನಾಮಪತ್ರವೇನಾದರೂ ಕೊನೆಕ್ಷಣದಲ್ಲಿ ತಿರಸ್ಕೃತವಾದರೆ ಇರಲಿ ಎನ್ನುವ ತಂತ್ರ ಇದಾಗಿದೆ ಎನ್ನಲಾಗಿದೆ. ಆದ್ದರಿಂದ ಈ ಕ್ಷೇತ್ರ ಸದ್ಯಕ್ಕೆ ತ್ರಿಕೋನ ಸ್ಪರ್ಧೆಯಾಗಿ ಮಾರ್ಪಡುವ ಸಾಧ್ಯತೆಯೇ ಹೆಚ್ಚು. ರಮೇಶ್ ಮತ್ತು ಸತೀಶ್ ಜಾರಕಿಹೊಳಿ ಸಹೋದರರ ನಡುವೆ ಬಿರುಕು ಉಂಟಾಗಿದ್ದು ರಮೇಶ್‍ರನ್ನು ಸೋಲಿಸಲೇಬೇಕಿಂದ ಸತೀಶ್, ಲಖನ್ ಜಾರಕಿಹೊಳಿಯನ್ನು ನಿಲ್ಲಿಸಿ ಶತಾಯಗತಾಯ ಗೆಲ್ಲಿಸಲು ಪ್ರಯತ್ನ ಪಡುತ್ತಿದ್ದಾರೆ. ಸತತ ಮೂರು ಬಾರಿ ರಮೇಶ್ ಜಾರಕಿಹೊಳಿ ವಿರುದ್ಧ ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿದ್ದ ಅಶೋಕ ಪೂಜಾರಿ ಬಿಜೆಪಿಯಲ್ಲಿ ಟಿಕೆಟ್ ಸಿಗದ ಕಾರಣ ಜೆಡಿಎಸ್ ಅಭ್ಯರ್ಥಿಯಾಗಿ ಮತಯಾಚನೆಗೆ ಸಿದ್ಧರಾಗಿದ್ದಾರೆ.

ಬೆಳಗಾವಿಯು ರಮೇಶ್ ಜಾರಕಿಹೊಳಿಯ ಹಲವು ಪ್ರಹಸನಗಳಿಂದ ಗಮನಸೆಳೆಯುವ ಜೊತೆಗೆ ಸಹೋದರರ ಜಗಳ, ಜಾರಕಿಹೊಳಿ ಕುಟುಂಬ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ ಜಗಳ, ಡಿಕೆಶಿ ವರ್ಸಸ್ ಜಾರಕಿಹೊಳಿ ಕುಟುಂಬ, ಉಮೇಶ್ ಕತ್ತಿ ವರ್ಸಸ್ ಲಕ್ಷ್ಮಣ ಸವದಿ ಈ ರೀತಿಯ ಜಗಳಗಳಿಗೂ ಸಹ ಗಮನ ಸೆಳೆಯುತ್ತಿತ್ತು. ಈಗ ಈ ಎಲ್ಲಾ ಒಳ ಮತ್ತು ಹೊರ ಜಗಳಗಳೂ ಸಹ ಗೋಕಾಕ್ ವಿಧಾನಸಭಾ ಉಪಚುನಾವಣೆಯ ಮೇಲೆ ದಟ್ಟವಾದಂತಹ ಪ್ರಭಾವವನ್ನು ಬೀರುವುದು ಖಚಿತವಾಗಿದೆ. ಶತ್ರುಗಳ ಶತ್ರು ಮಿತ್ರ ಎನ್ನುವಂತೆ ಮೂವರು ಅಭ್ಯರ್ಥಿಗಳಿಗೂ ಊಹಿಸದ ರೀತಿಯಲ್ಲಿ ಸ್ವಪಕ್ಷದಿಂದ ಅಲ್ಲದೇ ಹೊರಗಿನಿಂದಲೂ ಸಹ ಬೆಂಬಲ ವ್ಯಕ್ತವಾಗುತ್ತಿದೆ ಮತ್ತು ಸ್ವಪಕ್ಷದವರೇ ಕಾಲೆಳೆಯುವ ಸಾಧ್ಯತೆಗಳು ಹೆಚ್ಚಾಗಿರುವುದು ವಿಚಿತ್ರವಾದ ಸಂಗತಿಯಾಗಿದೆ. ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯೆ ಅಷ್ಟೊಂದು ಜಗಳಗಳಿದ್ದರೂ, ಸತೀಶ್ ಜಾರಕಿಹೊಳಿಯ ಜೊತೆಗೆ ಇಬ್ಬರಿಗೂ ತಗಾದೆ ಇರುವುದರಿಂದ ಲಕ್ಷ್ಮೀ ಹೆಬ್ಬಾಳಕರ್ ರಮೇಶ್‍ಗೆ ಬೆಂಬಲಿಸುವ ಒಳ ಒಪ್ಪಂದವಾಗಿದೆಯೆಂದು ಕ್ಷೇತ್ರದ ಜನ ಮಾತಾಡಿಕೊಳ್ಳುತ್ತಿದ್ದಾರೆ. ಹಾಗಾಗಿಯೇ ಲಕ್ಷ್ಮೀ ಒಬ್ಬರಿಗೇ ಕಾಂಗ್ರೆಸ್‍ನಿಂದ ಗೋಕಾಕ್ ಉಸ್ತುವಾರಿ ನೀಡಲಾಯಿತು, ಆದರೂ ನಾಮಪತ್ರ ಸಲ್ಲಿಕೆಗೆ ಅವರು ಹೋಗಿರದಿದ್ದು ವದಂತಿಗಳಿಗೆ ಕಾರಣವಾಗಿದೆ.

ಇತ್ತೀಚಿಗೆ ಕನಕಪುರದ ಹತ್ತಿರ ಕೆಲವು ಮುಖಂಡರು ಮತ್ತು ಸ್ವಾಮೀಜಿಯ ಜೊತೆ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಚರ್ಚೆ ಮಾಡಿರುವ ಫೋಟೋ ಹರಿದಾಡುತ್ತಿದ್ದು ಇದು ಡಿಕೆ ಶಿವಕುಮಾರ್ ಅಣತಿಯಂತೆ ಗೋಕಾಕ್ ಮತಕ್ಷೇತ್ರದ ಕುರಿತು ನಡೆದ ಪ್ಲಾನಿಂಗ್ ಮೀಟಿಂಗ್ ಎಂದು ಹೇಳಲಾಗುತ್ತಿದೆ. ಡಿಕೆಶಿ ಜಾರಕಿಹೊಳಿ ಕುಟುಂಬದ ನಡುವೆ ಒಳ ಜಗಳಗಳಿದ್ದು ಡಿಕೆಶಿ ತಮ್ಮದೇ ಪಕ್ಷದ ಅಭ್ಯರ್ಥಿ ಲಖನ್ ಜಾರಕಿಹೊಳಿಗೆ ಬೆಂಬಲಿಸದೆ ಅಶೋಕ್ ಪೂಜಾರಿಗೆ ಬೆಂಬಲಿಸುವ ಸಾಧ್ಯತೆ ಇದೆಯೆಂದು ಈ ಫೋಟೋ ಇಟ್ಟುಕೊಂಡು ಚರ್ಚೆ ಶುರುಮಾಡಿದ್ದಾರೆ. ಡಿಕೆಶಿ ಮತ್ತು ಲಕ್ಷ್ಮಿ ಬೇರೆ ಬೇರೆ ಅಭ್ಯರ್ಥಿಗಳಿಗೆ ಬೆಂಬಲಿಸುವ ಸಾಧ್ಯತೆ ಇರದಿದ್ದರೂ, ವದಂತಿಗಳಿಗೆ ಅದರದ್ದೇ ಆದ ತರ್ಕಗಳಿವೆ.
ಹಾಗೆಯೇ ಅರಭಾವಿ ಶಾಸಕ ಜಾರಕಿಹೊಳಿ ಸೋದರರಲ್ಲೊಬ್ಬರಾದ ಬಾಲಚಂದ್ರ ಮೇಲ್ನೋಟಕ್ಕೆ ಪಕ್ಷದ ಅಭ್ಯರ್ಥಿ ರಮೇಶ್ ಪರ ಒಂದು ಹೇಳಿಕೆ ನೀಡಿದ್ದರೂ, ವಿರುದ್ಧವಾಗಿ ಕೆಲಸ ಮಾಡುತ್ತಾರೆಂಬ ಗುಮಾನಿಯೂ ಹರಿದಾಡುತ್ತಿದೆ.

ಇತ್ತ ಉಪ ಮುಖ್ಯಮಂತ್ರಿ ಸ್ಥಾನ ತನಗೆ ಸಿಗದೇ ಲಕ್ಷ್ಮಣ ಸವದಿಗೆ ಸಿಕ್ಕಿತೆಂದು ಉಮೇಶ್ ಕತ್ತಿ ಸಹಾ ಬಿಜೆಪಿ ಮೇಲೆ ಗರಂ ಆಗಿದ್ದರು. ಜಾರಕಿಹೊಳಿ ಕುಟುಂಬದ ಜೊತೆ ತಗಾದೆ ಇರುವ ಲಕ್ಷ್ಮಣ ಸವದಿಯನ್ನು ದುರ್ಬಲಗೊಳಿಸಬೇಕೆಂದರೆ ರಮೇಶ್ ಜಾರಕಿಹೊಳಿಯ ಬೆಂಬಲಕ್ಕೆ ನಿಲ್ಲಲೇಬೇಕು ಎನ್ನುವ ತೀರ್ಮಾನಕ್ಕೆ ಉಮೇಶ್ ಕತ್ತಿ ಬಂದಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಈ ಕ್ಷೇತ್ರದಲ್ಲಿ ಲಿಂಗಾಯತ ಮತದಾರರು ನಿರ್ಣಾಯಕ ವಾಗಿದ್ದು ಲಿಂಗಾಯತರ ಮತಗಳು ಯಾರಿಗೆ ಬೀಳಲಿದೆ ಎಂಬುದು ಬಹಳ ಮುಖ್ಯವಾಗುತ್ತದೆ. ಹಾಗೆ ನೋಡಿದರೆ ಸಾಂಪ್ರದಾಯಿಕ ವಾಗಿ ಬಿಜೆಪಿಗೆ ಈ ಸಮುದಾಯದ ಮತಗಳು ಬೀಳುತ್ತವೆ. ಆದರೆ ರಮೇಶ್ ಜಾರಕಿಹೊಳಿ ಲಿಂಗಾಯಿತರ ಜೊತೆ ಅಷ್ಟೇನು ಚೆನ್ನಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದು ಇವು ಲಿಂಗಾಯತ ಸಮುದಾಯದ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿಯ ಮಡಿಲು ಸೇರಲಿವೆಯಾ ಎಂಬುದು ಸಹ ಒಂದು ಯಕ್ಷಪ್ರಶ್ನೆಯಾಗಿದೆ.

ಗೋಕಾಕ್ ವಿಧಾನಸಭಾ ಕ್ಷೇತ್ರ ಈ ಬಾರಿ ಕ್ಷೇತ್ರದ ಜನತೆಯ ರಾಜಕೀಯ ಪ್ರಜ್ಞೆಯನ್ನು ಪರೀಕ್ಷೆಗೆ ಒಳಪಡಿಸುವಂತೆ ಭಾಸವಾಗುತ್ತಿದೆ. ಯಾಕೆಂದರೆ ಗೆದ್ದು ಕ್ಷೇತ್ರದ ಹಿತಾಸಕ್ತಿಗಾಗಿ ಕೆಲಸ ಮಾಡದೆ ಸ್ವಲಾಭಕ್ಕಾಗಿ ಪದೇ ಪದೇ ರೇಸಾರ್ಟ್‍ಗೆ ಹೋದಂತಹ ರಮೇಶ್ ಜಾರಕಿಹೊಳಿ ಮತ್ತೆ ಗೆಲ್ಲದಂತೆ ಮಾಡುತ್ತಾರೋ, ಮತ್ತೆ ಗೆಲ್ಲಿಸಿ ವಿಧಾನ ಸಭೆಗೆ ಕಳುಹಿಸುತ್ತಾರೋ ಕಾದು ನೋಡಬೇಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...