ಧೀರಗಂಭೀರ ಗಿರೀಶ್ ಕಾರ್ನಾಡ್

| ರಹಮತ್ ತರೀಕೆರೆ |

ಹಿರಿಯ ಲೇಖಕರಲ್ಲಿ ಅನಂತಮೂರ್ತಿ ಅವರೊಡನೆ ನನಗಿದ್ದ ಮಾತುಕತೆ ವಿಚಾರ ವಿನಿಮಯ ಗಿರೀಶ ಕಾರ್ನಾಡರಲ್ಲಿ ಇರಲಿಲ್ಲ. ಮೇಷ್ಟರಾಗಿದ್ದರಿಂದಲೊ ಭಾಷಣಕಾರರಾಗಿ ಸುತ್ತಾಟ ಮಾಡುತ್ತಿದ್ದರಿಂದಲೊ, ಅನಂತಮೂರ್ತಿ ಅವರಿಗೆ ಹೊಸತಲೆಮಾರಿನ ಲೇಖಕರ ಜತೆ ಒಳ್ಳೆಯ ಒಡನಾಟ ಸ್ಥಾಪನೆಯಾಗಿತ್ತು. ಆದರೆ ಕಾರ್ನಾಡರು ತಮ್ಮ ಕಾಲದ ಕಿರಿಯ ಲೇಖಕರ ಜತೆ ಹೀಗೆ ನಂಟಿರಿಸಿಕೊಂಡವರಲ್ಲ. ಅವರು ಯಾರಿಗಾದರೂ ಮುನ್ನುಡಿ ಬರೆದಿದ್ದೂ ನನಗೆ ತಿಳಿದಿಲ್ಲ. ತಾವಾಯಿತು ತಮ್ಮ ಬರೆಹ, ಸಿನಿಮಾ ಆಯಿತು ಎಂದು ಇದ್ದವರು. ಜೀವಿತದ ಬಹುಕಾಲ ಕರ್ನಾಟಕದ ಹೊರಗೆ ಇದ್ದ ಅವರು ಕರ್ನಾಟಕದ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಹೆಚ್ಚು ಕಾಣಿಸಿದವರಲ್ಲ. ಲಾಗಾಯ್ತಿನಿಂದ ಲಂಕೇಶ್ ಅನಂತಮೂರ್ತಿ ಅವರಂತೆ ಅವರೊಬ್ಬ ಪಬ್ಲಿಕ್ ಇಂಟಲೆಕ್ಚುವಲ್ ಅಲ್ಲ. ಕರ್ನಾಟಕದ ಕಷ್ಟದ ದಿನಗಳಲ್ಲಿ ತಮ್ಮ ಮಾತು ಭಾಷಣ ಬರೆಹಗಳಿಂದ ಜನಾಭಿಪ್ರಾಯ ರೂಪಿಸುವ ಕೆಲಸ ಮಾಡಿದವರಲ್ಲ.

ಆದರೆ ಹೀಗಿದ್ದ ಕಾರ್ನಾಡರು ತಮ್ಮ ಕೊನೆಯ ವರ್ಷಗಳು ಬದಲಾದರು. ಸಾರ್ವಜನಿಕ ಮಹತ್ವದ ಪ್ರಸಂಗಗಳಲ್ಲಿ ಅವರು ಮಾತಾಡಿದರು. ಹಠಬಿದ್ದಂತೆ ಬೀದಿಗಿಳಿದರು. ಈ ಪಲ್ಲಟ ಮತ್ತು ರೂಪಾಂತರಗಳಿಗೆ ಕಾರಣ, ಭಾರತದಲ್ಲಿ ಪ್ರಭುತ್ವವು ರಾಜಕೀಯ ಸೈದ್ದಾಂತಿಕ ಭಿನ್ನಮತಗಳನ್ನು ದಮನಿಸುವ ನಡೆಗಳು. ಅನಂತಮೂರ್ತಿ ತೇಜಸ್ವಿ ಲಂಕೇಶ್ ಮುಂತಾದ ಲೇಖಕರು ತೀರಿಕೊಂಡ ಬಳಿಕ, ಕನ್ನಡದಲ್ಲಿ ಉಂಟಾದ ರಿಕ್ತತೆ ಕೂಡ ಅವರನ್ನು ಈ ಹೊಸ ಪಾತ್ರ ನಿರ್ವಹಿಸುವಂತೆ ಆಹ್ವಾನಿಸಿರಬೇಕು. ಅವರು ತಮ್ಮ ಮಾತು ಕೃತಿ ಮತ್ತು ಕ್ರಿಯೆಗಳಲ್ಲಿ ಭಾರತವನ್ನು ಆವರಿಸುತ್ತಿರುವ ಫ್ಯಾಸಿಸಮ್ಮನ್ನು ಕುರಿತು ವ್ಯಗ್ರರಾಗಿದ್ದರು. ಅವರು ಕಳೆದ ಹತ್ತಿಪ್ಪತ್ತು ವರ್ಷಗಳಲ್ಲಿ ಮಾಡಿದ ಪ್ರತಿರೋಧದ ಪ್ರಕರಣಗಳನ್ನು ಗಮನಿಸಬೇಕು. ಬಾಬರಿ ಮಸೀದಿಯ ಧ್ವಂಸವನ್ನು ವಿರೋಧಿಸಿದ್ದು; ವಿ.ಎಸ್. ನೈಪಾಲರ ಹಿಂದುತ್ವವನ್ನು ಬೆಂಬಲಿಸುವ ನಿಲುವನ್ನು ಖಂಡಿಸಿದ್ದು; ಬಾಬಾಬುಡನಗಿರಿ ಚಳುವಳಿಯಲ್ಲಿ ಭಾಗವಹಿಸಿದ್ದು; ಟಿಪ್ಪು ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಮತ್ತು ಅವನ ಕುರಿತು ನಾಟಕಗಳನ್ನು ಬರೆದಿದ್ದು; ಎಂ. ಎಫ್. ಹುಸೇನರ ಸೃಜನಶೀಲತೆಯ ಪರವಾಗಿ ನಿಂತಿದ್ದು; ದನದ ಮಾಂಸದ ವಿಷಯದಲ್ಲಿ ನಡೆಯುತ್ತಿರುವ ಹಲ್ಲೆಯನ್ನು ವಿರೋಧಿಸಿ `ನಮ್ಮ ಆಹಾರ ನಮ್ಮ ಹಕ್ಕು’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು. ಕೊನೆಯ ಕಾರ್ಯಕ್ರಮದಲ್ಲಿ ಅನಂತಮೂರ್ತಿಯವರೂ ಇದ್ದರು. ಭಾರತದಲ್ಲಿ ಇಬ್ಬರು ಜ್ಞಾನಪೀಠ ಪಡೆದ ಲೇಖಕರು ಇಂತಹದೊಂದು ಕಾರ್ಯಕ್ರಮದಲ್ಲಿ ಒಟ್ಟಿಗೆ ಭಾಗವಹಿಸಿದ್ದು ವಿಶಿಷ್ಟವಾಗಿತ್ತು.

ಬಾಬಾಬುಡನಗಿರಿ ಚಳುವಳಿಯಲ್ಲಿ ಅವರ ಜತೆ ಪಯಣಿಸಿದ ಘಟನೆ ನೆನಪಾಗುತ್ತಿದೆ. ಸೂಫಿಗಳ ಮೇಲೆ ಅಧ್ಯಯನ ಮಾಡಿವನೆಂದು ನನ್ನನ್ನು ಅವರೊಟ್ಟಿಗೆ ಕೂರಿಸಲಾಗಿತ್ತು. ಚಿಕ್ಕಮಗಳೂರಿನಿಂದ ಗಿರಿಯನ್ನು ಕಾರು ಹತ್ತುತ್ತಿರುವಾಗ, ಮೇಲಿನ ಶಿಖರಗಳನ್ನೂ ಕೆಳಗಿನ ಕಣಿವೆಗಳನ್ನೂ ನೋಡುತ್ತ `ಓಹ್ ಎಷ್ಟೊಂದು ಸುಂದರವಾಗಿದೆಯಲ್ಲ ಈ ಜಾಗ’’ ಎಂದು ಎಳೆ ಮಗುವಿನಂತೆ ಪುಟಿಯುತ್ತ ಉದ್ಗರಿಸುತ್ತಿದ್ದರು. ಅವರೊಬ್ಬ ಸೆಲೆಬ್ರಿಟಿಯಾದರೂ ಬಹಳ ಸರಳ ವ್ಯಕ್ತಿ. ಗೋಕರ್ಣದಲ್ಲಿ ನಡೆದ ಗೌರೀಶ ಕಾಯ್ಕಿಣಿಯವರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ನಮ್ಮನ್ನು ಒಂದು ತೋಟದ ಮನೆಯಲ್ಲಿ ಉಳಿಸಲಾಗಿತ್ತು. ಕಾರ್ನಾಡರು ನನಗಿಂತಲೂ ವೈದ್ಯೆಯಾದ ನನ್ನ ಮಗಳ ಜತೆ ಹೆಚ್ಚು ಮಾತನಾಡಿದರು. ಆದಿನ ನಾನು ಅವರ ಆಡಾಡ್ತಾ ಆಯುಷ್ಯವನ್ನು ಒಳಗೊಂಡಂತೆ ನಾನು ಕನ್ನಡದ ಆತ್ಮಕತೆಗಳ ಸ್ವರೂಪದ ಬಗ್ಗೆ ಉಪನ್ಯಾಸ ಮಾಡಿದೆ. ಉಪನ್ಯಾಸ ಕೇಳಿದ ಬಳಿಕ ಕಾರ್ನಾಡರು “ಭಾರತದ ಮೊಟ್ಟಮೊದಲ ಆತ್ಮಕಥೆ ನೀವು ಓದಿಲ್ಲ ಅಂದರೆ ಓದಲೇಬೇಕು. ಅಪರೂಪದ ಪುಸ್ತಕ ಅದು. 16ನೇ ಶತಮಾನದ್ದು’’ ಎಂದರು. ಬೆಂಗಳೂರಿಗೆ ಹೋದೊಡನೆ `ಅರ್ಧ ಕಥಾನಕ’ದ ನೆರಳಚ್ಚನ್ನು ಕಳಿಸಿಕೊಟ್ಟರು.
ಆದರೆ ನಮ್ಮೀ ಕ್ಷೀಣ ಸಂಬಂಧವು `ಅಮೀರ್‍ಬಾಯಿ ಕರ್ನಾಟಕಿ’ ಪುಸ್ತಕದ ಬಿಡುಗಡೆ ಸನ್ನಿವೇಶದಲ್ಲಿ ಧಕ್ಕೆಗೆ ಒಳಗಾಯಿತು.

ಕಾರ್ನಾಡರು `ಸಾಹಿತ್ಯ ಸಂಭ್ರಮ’ದ ಕಾರ್ಯಕ್ರಮಕ್ಕಾಗಿ ಒಂದು ದಿನ ಮೊದಲೇ ಧಾರವಾಡಕ್ಕೆ ಬರುತ್ತಿರುವುದರಿಂದ, ಆ ದಿನ ಸಂಜೆ ಬಿಡುಗಡೆ ಮಾಡಲು ಸಾಧ್ಯವೇ ಎಂದು ಕೇಳಿದೆ. ಕೂಡಲೇ ಒಪ್ಪಿದರು. ಆದರೆ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಸ್ವರೂಪದ ಬಗ್ಗೆ ಭಿನ್ನಮತ ವ್ಯಕ್ತಪಡಿಸಿ ನಾನು ಅದರಲ್ಲಿ ಭಾಗವಹಿಸದೆ ಹೊರಗುಳಿದಿದೆ. ಸಂಘಟಕರು ಇದನ್ನು ಅವರಿಗೆ ತಿಳಿಸಿರಬೇಕು. ಅವರು ನನಗೆ ಕರೆ ಮಾಡಿ `ನೀವು ಸಂಭ್ರಮ ಕಾರ್ಯಕ್ರಮವನ್ನು ವಿರೋಧಿಸುತ್ತಿರುವುದು ನಿಜವೇ?’ ಎಂದು ಕೇಳಿದರು. `ಹೌದು’ ಎಂದೆ. `ಹಾಗಿದ್ದಲ್ಲಿ ನಿಮ್ಮ ಕಾರ್ಯಕ್ರಮಕ್ಕೆ ಬರಲಾರೆ, ಕ್ಷಮಿಸಿ’ ಎಂದರು. `ಆಗಲಿ’ ಎಂದೆ. ಅವರಿಗೆ ತಾನು ಹಾಗೆ ಮಾಡಿದ್ದು ಸರಿಯಲ್ಲ ಅನಿಸಿರಬೇಕು. ಧಾರವಾಡದಲ್ಲಿರುವ ತಮ್ಮ ಒಡನಾಡಿ ಸುರೇಶ ಕುಲಕರ್ಣಿಯವರೊಟ್ಟಿಗೆ ತಮ್ಮ ಚಡಪಡಿಕೆಯನ್ನು ಹಂಚಿಕೊಂಡರಂತೆ. ಆದರೆ ನಾನು ಕಾರ್ಯಕ್ರಮ ಮುಗಿದ ಬಳಿಕ ಪುಸ್ತಕವನ್ನು ಅವರಿಗೆ ಕಳಿಸಿಕೊಟ್ಟೆ. ಬಹಳ ಚೆನ್ನಾಗಿ ಬಂದಿದೆ ಎಂದು ಪತ್ರ ಬರೆದರು. ಅವರು ಆ ಘಟನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಂತೆ ಕಾಣಲಿಲ್ಲ. ತಮ್ಮ ಪರಿಚಿತರು ಯಾರಾದರೂ ಹಂಪಿ ನೋಡಬಯಸಿದರೆ, ನನ್ನನ್ನು ಕಾಣಲು ಹೇಳಿರುತ್ತಿದ್ದರು. ಒಮ್ಮೆ ಅವರ ನಾಟಕಗಳಲ್ಲಿ ನಟಿಸುವ ಒಬ್ಬ ಬಂಗಾಳದ ನಟಿ ಹಂಪಿಗೆ ಬಂದು ಹಣ ಪಾಸ್‍ಪೋರ್ಟು ಇರುವ ಪರ್ಸನ್ನು ಕಳೆದುಕೊಂಡಳು. ಕಾರ್ನಾಡರು ಕರೆಮಾಡಿ ಆಕೆಗೆ ಬೆಂಗಳೂರಿನ ತನಕ ಬರಲು ಹಣ ಕೊಡಲು ಸಾಧ್ಯವೇ ಎಂದು ಕೇಳಿದರು. ಕೂಡಲೇ ನನಗೊಂದು ಚೆಕ್ಕನ್ನು ಕಳಿಸಿಕೊಟ್ಟರು.

ಅನಂತಮೂರ್ತಿ ಸಂವಾದಕ್ಕೆ ಸದರವಾಗಿ ಸಿಗುವ ಲೇಖಕರಲ್ಲದ ಗಿರೀಶ್, ತಮಗೆ ಅರಿಯದಂತೆ ಅನಂತಮೂರ್ತಿ ಲಂಕೇಶ್ ತೇಜಸ್ವಿ ಬಳಿಕ ಕನ್ನಡದ ಸಾಹಿತ್ಯ ಲೋಕದಲ್ಲಿರುವ ಸಾಂಸ್ಕøತಿಕ ನಾಯಕನ ದನಿಯಾಗತೊಡಗಿದ್ದರು. ಬಾಬ್ರಿ ಮಸೀದಿ ಕೆಡವಿದ್ದನ್ನು, ಬಾಬಾಬುಡನಗಿರಿಯನ್ನು ವಶಪಡಿಸಿಕೊಳ್ಳುವುದನ್ನು, ದನದ ಮಾಂಸ ತಿನ್ನುವುದನ್ನು ನಿಷೇಧಿಸುವುದನ್ನು, ಟಿಪ್ಪುವನ್ನು ದುಷ್ಟನಾಗಿ ಚಿತ್ರಿಸುವುದನ್ನು ವಿರೋಧಿಸುವಾಗೆಲ್ಲ, ಪರಿಣಾಮ ಲೆಕ್ಕಿಸದೆ ದಿಟ್ಟತನದ ನಿಲುವು ತೆಗೆದುಕೊಂಡರು. ಇದುವೇ ಹಿಂದುತ್ವವಾದಿಗಳು ಅವರನ್ನು ದ್ವೇಷಿಸಲು ಕಾರಣವಾಯಿತು. ಅವರು ಗೌರಿಲಂಕೇಶ್ ಸ್ಮರಣೆಯ ಕಾರ್ಯಕ್ರಮಕ್ಕೆ ನಾನೂ ನಗರ ನಕ್ಸಲ್ ಎಂದು ಕೊರಳಿಗೆ ಬೋರ್ಡು ಸಿಕ್ಕಿಸಿಕೊಂಡು ಬಂದ ಪ್ರಕರಣವು, ಅವರ ಧೈರ್ಯದ ನಾಟಕೀಯ ರೂಪದಂತಿತ್ತು. ಅವರ ಸಿಟ್ಟು, ಹತಾಶೆ ಮತ್ತು ಕ್ರಿಯಾಶೀಲತೆಯ ಆತ್ಯಂತಿಕ ರೂಪಕದದಂತಿತು. ಆಗ ಅವರ ಆರೋಗ್ಯ ಸರಿಯಿರಲಿಲ್ಲ. ಕೈಯಲ್ಲಿ ಆಮ್ಲಜನಕದ ಸಿಲಿಂಡರನ್ನು ಹಿಡಿದುಕೊಂಡೇ ಬಂದಿದ್ದರು. ಫಲಕಗಳನ್ನು ಅಪರಾಧಿಗಳ ಕೊರಳಿಗೆ ತೂಗುಹಾಕುವುದು ಒಂದು ಪದ್ಧತಿ. ಆದರೆ ಅವರು `ವಿಚಾರ ಮಾಡುವುದು, ಪ್ರಭುತ್ವದ ಕ್ರೌರ್ಯವನ್ನು ಖಂಡಿಸುವುದು ಅಪರಾಧವಾದರೆ ನಾನೂ ಅಪರಾಧಿ’ ಎಂದು ಸ್ವಯಂ ಫಲಕ ಹಾಕಿಕೊಂಡಿದ್ದರು. ಅವರು ನಾಗರಿಕ ಸಮಾಜವೊಂದರಲ್ಲಿ ಸಹಜವಾಗಿ ಇರಬೇಕಾದ ಸ್ವಾತಂತ್ರ್ಯದ ಪರವಾಗಿ ಯೋಚಿಸುತ್ತಿದ್ದರು.

ಭಾರತೀಯ ಜಾನಪದ ಪುರಾಣಗಳನ್ನು ದುಡಿಸಿಕೊಂಡ ಕಾರ್ನಾಡರು ನಾಗರಿಕ ಹಕ್ಕುಗಳ ವಿಷಯ ಬಂದರೆ, ಮುಕ್ತ ಸಮಾಜದ ಪಾಶ್ಚಿಮಾತ್ಯರೇ. ಅವರ ಹಸ್ತಾಕ್ಷರ ಬಲ್ಲವರಿಗೆ ಆ ಫಲಕದ ಬರೆಹ ಬರೆದಿದ್ದು ಅವರೇ ಎಂದು ಗೊತ್ತಿತ್ತು. ಲೋಕದ ಸುದ್ದಿಯಾಗಬೇಕೆಂದೇ ಫಲಕವನ್ನು ಇಂಗ್ಲೀಶಿನಲ್ಲಿ ಬರೆಯಲಾಗಿತ್ತು. ಅದು ಆಕ್ಸ್‍ಫರ್ಡಿನ ಪದವೀಧರರಾದ ಅವರ ವ್ಯಕ್ತಿತ್ವದ ಹರಹಿನ ಸಂಕೇತವಾಗಿತ್ತು. ಆದರೆ ತಾನೊಬ್ಬ ಕನ್ನಡದ ಲೇಖಕ ಎಂಬುದನ್ನು ಮರೆಯದಂತೆ `ನಾನು ಕೂಡ’ ಎಂಬುದನ್ನು ಕನ್ನಡದಲ್ಲಿ ಅಲ್ಲಿ ಬರೆಯಲಾಗಿತ್ತು. ಉಸಿರುಗಟ್ಟಿಸುವ ಸನ್ನಿವೇಶದಲ್ಲಿ ಬದುಕುತ್ತಿರುವವರ ಕಷ್ಟಗಳಿಗೆ ಮಿಡಿಯುವಂತೆ ಅವರು ಕೈಯಲ್ಲಿ ಹಿಡಿದಿದ್ದ ಆಕ್ಸಿಜನ್ ಸಿಲಿಂಡರಿತ್ತು. ಅದೊಂದು ಅಭಿಮಾನ ಉಕ್ಕಿಸುವ ಮತ್ತು ಎದೆಕರಗಿಸುವ ಚಿತ್ರ. ಸಮಾಜದ ಆರೋಗ್ಯಕ್ಕಾಗಿ ತನ್ನ ಅನಾರೋಗ್ಯದಲ್ಲೂ ಒಬ್ಬ ಲೇಖಕ ಇಷ್ಟೊಂದು ಕಷ್ಟ ತೆಗೆದುಕೊಂಡಿದ್ದು ನನಗೆ ತಿಳಿದಿಲ್ಲ. ಕಾರ್ನಾಡರು ಒಬ್ಬ ನಟರಾಗಿದ್ದರು. ಆದರೆ ತಾತ್ವಿಕ ಪ್ರತಿರೋಧ ಮಾಡುವಾಗ ಅವರ ನಡೆನುಡಿಯಲ್ಲಿ ನಟನೆಯಿರಲಿಲ್ಲ. ದ್ವಂದ್ವವಿರಲಿಲ್ಲ. ಅವರಷ್ಟು ಅಂತರಂಗಕ್ಕೆ ಸರಿಯೆನಿಸಿದ್ದನ್ನು ಪರಿಣಾಮ ಲೆಕ್ಕಿಸದೆ ಹೇಳುವ ಮಾಡುವ ಧೀರಗಂಭೀರ ಕನ್ನಡ ಲೇಖಕರು ಕಡಿಮೆ. ಇದು ಅವರ ಶವಸಂಸ್ಕಾರದ ಘಟನೆಯಲ್ಲೂ ವ್ಯಕ್ತವಾಯಿತು.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here