Homeಆ ವಾರದ ಕಣ್ಣೋಟಸ್ವಾತಂತ್ರ್ಯವೀರ ಟಿಪ್ಪುಗೆ ಇದೆಂಥಾ ಅನ್ಯಾಯ!

ಸ್ವಾತಂತ್ರ್ಯವೀರ ಟಿಪ್ಪುಗೆ ಇದೆಂಥಾ ಅನ್ಯಾಯ!

- Advertisement -
- Advertisement -

ಕರ್ನಾಟಕದ ವೀರಾಧಿವೀರ, ಧೀರಾಧಿದೀರ ಟಿಪ್ಪು ಸುಲ್ತಾನನನ್ನು ಸಂಘ ಪರಿವಾರದವರು ಟೀಕಿಸಿದಷ್ಟೂ ಆತ ಜನರಿಗೆ ಹತ್ತಿರವಾಗುತ್ತಾನೆ, ವರ್ಚಸ್ಸನ್ನು ಹೆಚ್ಚಿಸಿಕೊಳ್ಳುತ್ತಾನೆ. ಯಾಕೆಂದರೆ ಆತನನ್ನು ವಿರೋಧಿಸಲು ಸಂಘಿಗಳು ಪ್ರಯೋಗಿಸುತ್ತಿರುವ ತರ್ಕಗಳೇ ಅಷ್ಟು ಹಾಸ್ಯಾಸ್ಪದವಾಗಿವೆ!

ಉದಾಹರಣೆಗೆ ಗೋ ಮಧುಸೂದನ ಮಂಡಿಸಿರುವ ತರ್ಕವನ್ನೇ ತೆಗೆದುಕೊಳ್ಳಿ. `ಟಿಪ್ಪು ಭಾರತಕ್ಕೆ ಅಫಘಾನಿಸ್ತಾನದ ರಾಜ ಅಹಮದ್ ಷಾ ಅಬ್ದಾಲಿಯನ್ನು ಆಹ್ವಾನಿಸಿದ್ದ ಎಂಬುದನ್ನು ಮರೆಯಬಾರದು. ಇದರಿಂದಲೇ ಆತ ದೇಶದ್ರೋಹಿ ಆಗಿದ್ದ ಎಂಬುದು ಸಾಬೀತಾಗುತ್ತದೆ’’ ಎಂದು ಅಬ್ಬರಿಸಿದ್ದಾನೆ. ಹಲವು ಇತಿಹಾಸ ತಜ್ಞರು ಸ್ಪಷ್ಟಪಡಿಸಿರುವಂತೆ ಅಫಘಾನಿಸ್ತಾನದ ರಾಜ ಅಹಮದ್ ಷಾ ಅಬ್ದಾಲಿ ಭಾರತದ ಮೇಲೆ ಮೊದಲು ದಾಳಿ ಇಟ್ಟದ್ದು 1748ರಲ್ಲಿ. ಆಗಿನ್ನೂ ಟಿಪ್ಪು ಹುಟ್ಟೇ ಇರಲಿಲ್ಲ! ಅಷ್ಟೇ ಅಲ್ಲ, ಅಹಮದ್ ಷಾ ಅಬ್ದಾಲಿ 1761ರಲ್ಲಿ ಮರಾಠರನ್ನು ಪಾಣಿಪಟ್ ಯುದ್ಧದಲ್ಲಿ ಸೋಲಿಸಿದಾಗ ಟಿಪ್ಪು ಹತ್ತು ವರ್ಷದ ಬಾಲಕ!!

ಇದನ್ನು ಓದಿ: ಟಿಪ್ಪು ಜಯಂತಿ ಆಚರಣೆ ರದ್ದು ಮಾಡಿರುವುದು ಅಪರಾಧ: ಮಾಜಿ ಸಿಎಂ ಸಿದ್ದರಾಮಯ್ಯ

ಟಿಪ್ಪು ಭಾರತಕ್ಕೆ ಆಹ್ವಾನಿಸಿದ್ದು ಅಹಮದ್ ಷಾ ಅಬ್ದಾಲಿಯ ಮೊಮ್ಮಗ ಜಮನ್ ಷಾ ದುರ್ರಾನಿಯನ್ನು. ಅಷ್ಟೇ ಅಲ್ಲ, ಟಿಪ್ಪು ಫ್ರಾನ್ಸಿನ ನೆಪೋಲಿಯನ್ ಬೋನಾಪಾರ್ಟೆಯನ್ನೂ, ಟರ್ಕಿಯ ಒಟ್ಟಮಾನ್ ಸಾಮ್ರಾಜ್ಯದ ದೊರೆಯನ್ನೂ ಭಾರತಕ್ಕೆ ಆಹ್ವಾನಿಸಿದ್ದ ಎಂಬುದೂ ಐತಿಹಾಸಿಕ ವಾಸ್ತವ. ಅದನ್ನು ಯಾರೂ ನಿರಾಕರಿಸಲಾಗುವುದಿಲ್ಲ. ಆದರೆ ಅವರೆಲ್ಲರನ್ನು ಟಿಪ್ಪು ಯಾತಕ್ಕೆ ಆಹ್ವಾನಿಸಿದ್ದ ಎಂಬುದು ಮುಖ್ಯ. ಆತ ಅವರೆಲ್ಲರೊಂದಿಗೆ ಜೊತೆಗೂಡಿ `ಮಹಾಮೈತ್ರಿಕೂಟ’ವನ್ನು ನಿರ್ಮಿಸಲು ಹೊರಟಿದ್ದು ಭಾರತದಿಂದ ಬ್ರಿಟಿಷರನ್ನು ಒದ್ದೋಡಿಸುವ ಉದ್ದೇಶದಿಂದಾಗಿ ಎಂಬುದು ವಾಸ್ತವ.

ಇಲ್ಲಿ ಸಂಘಿಗಳ ತರ್ಕದಲ್ಲಿ ಎರಡು ದೋಷಗಳು ಎದ್ದುಕಾಣುತ್ತವೆ.

ಒಂದು: ಬ್ರಿಟಿಷರ ವಿರುದ್ಧ ಯುದ್ಧ ಮಾಡಲು ಅಫಘಾನಿಸ್ತಾನ, ಫ್ರಾನ್ಸ್ ಮತ್ತು ಟರ್ಕಿಯ ಸೈನ್ಯಗಳನ್ನು ಭಾರತಕ್ಕೆ ಟಿಪ್ಪು ಆಹ್ವಾನಿಸಿದ್ದು `ದೇಶದ್ರೋಹ’ ಕೆಲಸವಾದರೆ ಸಂಘಿ ಮತ್ತು ಗೋ-ಮ ಪ್ರಕಾರ ಬ್ರಿಟಿಷರು ನ್ಯಾಯಸಮ್ಮತವಾಗಿ ಭಾರತದ ದೊರೆಗಳಾಗಿದ್ದರು! ಆ ಕಾರಣಕ್ಕೇ ಆತ ಮಾಡಿದ್ದು ದೇಶದ್ರೋಹದ ಕೆಲಸ!! ಇದಕ್ಕಿಂತ ಹುಚ್ಚುತನ ಮತ್ತೊಂದಿರಲು ಸಾಧ್ಯವೇ?

ಇದನ್ನು ಓದಿ: ಇತಿಹಾಸ ಮರೆತ ‘ಟಿಪ್ಪುವಿನ ಹಿಂದೂ ವೀರಸಂಗಾತಿಗಳು’ 

ಎರಡನೆಯದು: ಯುದ್ಧದಲ್ಲಿ ವೈರಿಯ ವೈರಿ ತನ್ನ ಮಿತ್ರ ಎಂಬ ತರ್ಕವನ್ನು ಹಲವರು ಈ ಹಿಂದೆ ಅಳವಡಿಸಿಕೊಂಡಿದ್ದಿದೆ. ಆ ನಿಟ್ಟಿನಲ್ಲೇ ಟಿಪ್ಪು ಸುಲ್ತಾನ ಕೂಡ ಬ್ರಿಟಿಷರ ವಿರುದ್ಧ ಹೋರಾಡಲು ಬೇರೆ ದೇಶಗಳ ಸೈನ್ಯದೊಂದಿಗೆ ಕೈ ಜೋಡಿಸಲು ಯತ್ನಿಸಿದ್ದು. ಟಿಪ್ಪುವಿನ ಈ ಯತ್ನವೂ ದೇಶದ್ರೋಹಕ್ಕೆ ಸಮಾನವಾದರೆ, ಸುಭಾಷ್ ಚಂದ್ರ ಬೋಸ್ ಅವರೂ ಬ್ರಿಟಿಷರನ್ನು ಭಾರತದಿಂದ ಒದ್ದೋಡಿಸಲು ಜರ್ಮನಿ, ಇಟಲಿ ಮತ್ತು ಜಪಾನ್ ಜೊತೆ ಕೈಜೋಡಿಸಿದ್ದೂ ದೇಶಕ್ಕೆ ಬಗೆದ ದ್ರೋಹವಾಗತ್ತದೆ ತಾನೆ? ಟಿಪ್ಪುಗೆ ಮಾತ್ರ ಯಾಕೆ ಅವಮಾನ ಮತ್ತು ಬೋಸ್ ಅವರಿಗೆ ಮಾತ್ರ ಯಾಕೆ ಸ್ಥಾನಮಾನ?

ಇನ್ನು ಸಿ.ಟಿ.ರವಿ `ಇವತ್ತು ಟಿಪ್ಪುವಿನ ಜನ್ಮೋತ್ಸವವನ್ನು ಆಚರಿಸಿದಂತೆ ನೂರು ವರ್ಷಗಳ ನಂತರ ಒಸಾಮಾ ಬಿನ್ ಲಾಡನ್ ಮತ್ತು ದಾವೂದ್ ಇಬ್ರಾಹಿಂ ಅವರ ಜನ್ಮೋತ್ಸವವನ್ನೂ ಆಚರಿಸಬೇಕು ಎನ್ನುತ್ತೀರಾ’’ ಎಂದು ಹಲುಬಿದ್ದಾನೆ. ಈ ಸಿ.ಟಿ. ರವಿಗೆ ಸ್ವಾತಂತ್ರ ಹೋರಾಟದಲ್ಲಿ ಮಡಿದವರಿಗೂ, ಭಯೋತ್ಪಾದಕರಿಗೂ ವ್ಯತ್ಯಾಸವೇ ಗೊತ್ತಿಲ್ಲ. ಅದಕ್ಕೆ ಕಾರಣಗಳೂ ಹಲವಾರು ಇವೆ. ಮೊದಲನೆಯದಾಗಿ, ಈ ರವಿ ಮತ್ತಾತನ ಬಳಗ ಮೆಚ್ಚಿಕೊಂಡಾಡುವ ಮತ್ತು ಹಿಂಬಾಲಿಸುವ ಆರೆಸ್ಸೆಸ್‍ನ ಯಾವ ನಾಯಕನೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿಯುವುದಿರಲಿ, ತಮ್ಮನ್ನು ತೊಡಗಿಸಿಕೊಳ್ಳುವುದಿರಲಿ, ಕನಿಷ್ಠ ಕೈಯೆತ್ತಿ ಧಿಕ್ಕಾರ ಕೂಗುವಷ್ಟು ಧೈರ್ಯವನ್ನಾಗಲಿ, ದಿಟ್ಟತನವನ್ನಾಗಲಿ ಪ್ರದರ್ಶಿಸಿದವರಲ್ಲ. ಅಷ್ಟೇ ಅಲ್ಲ, ಇವರ ಮುಖ್ಯ ನೇತಾರ ವಿ.ಡಿ.ಸಾವರ್ಕರ್ ಬ್ರಿಟಿಷರಿಗೆ ಶರಣಾಗಿ, ಅವರೇ ತನ್ನ ದೊರೆಗಳೆಂದು ಒಪ್ಪಿಕೊಂಡು, ಬ್ರಿಟಿಷರ ವಿರುದ್ಧ ಹೋರಾಡುವುದಿಲ್ಲವೆಂದು ಮುಚ್ಚಳಿಕೆ ಬರೆದುಕೊಟ್ಟು ಜೈಲಿನಿಂದ ಬಿಡುಗಡೆಯನ್ನು ಗಿಟ್ಟಿಸಿಕೊಂಡ `ಪುಣ್ಯಾತ್ಮ.’

ಎರಡನೆಯದಾಗಿ, ರವಿಯ ಅಚ್ಚುಮೆಚ್ಚಿನ ವಿಶ್ವಹಿಂದೂ ಮಹಾಸಭಾ ಗಾಂಧಿಯವರ `ಭಾರತ ಬಿಟ್ಟು ತೊಲಗಿ’ ಸಂಗ್ರಾಮವನ್ನು ವಿರೋಧಿಸಿತ್ತಲ್ಲದೆ `ಯಾವ ಹಿಂದೂ ಕೂಡ ತಮ್ಮ ಕೆಲಸಗಳನ್ನು ಬಿಟ್ಟು ಬ್ರಿಟಿಷರ ವಿರುದ್ಧದ ಸಂಗ್ರಾಮದಲ್ಲಿ ಭಾಗವಹಿಸಕೂಡದು’’ ಎಂದು ಠರಾವು ಹೊರಡಿಸಿದ್ದ `ಧೀರ’ರ ಸಂಘಟನೆ!!

ಇದನ್ನು ಓದಿ: ಆಧುನಿಕ ಶಿಕ್ಷಣದ ಪ್ರವಾದಿ, ವೈಚಾರಿಕ ಚಿಂತಕ : ಸೈಯದ್ ಅಹ್ಮದ್ ಖಾನ್  

ಹಿಂದೂತ್ವವಾದಿಗಳ ತರ್ಕರಹಿತ ವಾದದಲ್ಲಿ ಮತ್ತೊಂದು ಯಾವುದೆಂದರೆ ಟಿಪ್ಪು 800 ರಿಂದ 8000 ದೇವಸ್ಥಾನಗಳನ್ನು ಧ್ವಂಸ ಮಾಡಿದ್ದರಿಂದ ಆತನನ್ನು ಮೆಚ್ಚಲಾಗದು ಎಂಬುದು. ಟಿಪ್ಪು ಹಲವಾರು ದೇವಸ್ಥಾನಗಳನ್ನು ಧ್ವಂಸಗೊಳಿಸಿದ್ದು ನಿಜವಾದರೂ ನಿಖರವಾಗಿ ಆತ ಎಷ್ಟು ದೇವಸ್ಥಾನಗಳನ್ನು ನಾಶಮಾಡಿದ ಎಂಬುದನ್ನು ಲೆಕ್ಕ ಇಟ್ಟವರಿಲ್ಲ. ಇರಲಿ, ದೇವಸ್ಥಾನಗಳನ್ನು ನಾಶ ಮಾಡಿದವರನ್ನು ಮೆಚ್ಚಲಾಗುವುದಿಲ್ಲ ಎನ್ನುವ ಹಿಂದೂತ್ವವಾದಿಗಳ ನಿಲುವು ಸರಿಯಾದದ್ದೇ ಆದರೆ ಅವರು ಮರಾಠರನ್ನು ಅದು ಹೇಗೆ ಮೆಚ್ಚುತ್ತಾರೆ?
ಈ ಪ್ರಶ್ನೆ ಯಾಕೆ ಮುಖ್ಯ ಎಂದರೆ ಇದೇ ಮರಾಠರು ಕರ್ನಾಟಕದಲ್ಲಿರುವ ಒಂದು ದೇವಸ್ಥಾನವನ್ನು ನಾಶ ಮಾಡಿದ್ದರು. ಅದೂ ಯಾವ ದೇವಸ್ಥಾನವನ್ನು ಎನ್ನುತ್ತೀರಿ? ದೇಶದಾದ್ಯಂತ ಬೌದ್ಧ ಧರ್ಮವನ್ನು ದಮನ ಮಾಡಿ ಪುರೋಹಿತಶಾಹಿಗಳ ಹಿತಾಸಕ್ತಿ ಕಾಪಾಡುವ ಹಿಂದೂ ಧರ್ಮಕ್ಕೆ ಮರುಜೀವ ಕೊಟ್ಟ ಶಂಕರಾಚಾರ್ಯರೇ ಶೃಂಗೇರಿಯಲ್ಲಿ ಸ್ಥಾಪಿಸಿದ್ದ ಪೀಠದಲ್ಲಿರುವ ಶಾರದಾ ದೇವಿ ಪೂಜಾಮಂದಿರವನ್ನು!

1791ರಲ್ಲಿ ರಘುನಾಥರಾವ್ ಪಟ್ಟವರ್ಧನ್ ನೇತೃತ್ವದಲ್ಲಿ ಶೃಂಗೇರಿಯ ಮೇಲೆ ದಾಳಿ ಮಾಡಿದ ಮರಾಠರು ಹಲವಾರು ಬ್ರಾಹ್ಮಣರನ್ನು ಕೊಂದು, ಮಠದಲ್ಲಿದ್ದ ಹಣ ಮತ್ತು ಆಭರಣಗಳನ್ನು ಲೂಟಿ ಮಾಡಿದ್ದರಲ್ಲದೆ ಪವಿತ್ರ ಶಾರದಾ ದೇವಿಯ ಮೂರ್ತಿಯನ್ನೂ ಕಿತ್ತು ಬಿಸಾಡುವಷ್ಟು ಉದ್ಧಟತನವನ್ನು ಮೆರೆದಿದ್ದರು. ಅಷ್ಟೇ ಅಲ್ಲ, ದಿಲೀಪ್ ಮೆನನ್ ಎಂಬ ಇತಿಹಾಸ ತಜ್ಞ ಹೇಳುವ ಪ್ರಕಾರ “ಟಿಪ್ಪು ಇದ್ದ 18ನೇ ಶತಮಾನದಲ್ಲಿ ವಿವಿಧ ಸೈನ್ಯಗಳು ದೇವಸ್ಥಾನಗಳ ಮೇಲೆ ದಾಳಿ ಮಾಡುವುದು ಸಹಜವಾಗಿತ್ತು. ಯಾಕೆಂದರೆ ಆಗ ದೇವಸ್ಥಾನಗಳ ಗರ್ಭಗುಡಿಯಲ್ಲಿ ಚಿನ್ನಾಭರಣಗಳನ್ನು ಬಚ್ಚಿಡುತ್ತಿದ್ದರು. ಹಾಗೆ ನೋಡಿದರೆ, ಆ ಶತಮಾನದಲ್ಲಿ ಮರಾಠರು ಪೂರ್ವ ಮತ್ತು ದಕ್ಷಿಣ ಭಾರತದಲ್ಲಿದ್ದ ದೇವಸ್ಥಾನಗಳನ್ನು ನಿರಂತರವಾಗಿ ಕೊಳ್ಳೆಹೊಡೆಯುತ್ತಿದ್ದರು. ಅವರು ಗರ್ಭಗುಡಿಯಲ್ಲೇ ಸೈನ್ಯಗಳ ತುಕಡಿಗಳನಿಟ್ಟು ದೇವಸ್ಥಾನದಲ್ಲಿ ಸಿಗುವ ಲೋಹಗಳನ್ನೆಲ್ಲ ಕರಗಿಸಿ ಯುದ್ಧಕ್ಕೆ ಬೇಕಾದ ಅಸ್ತ್ರಗಳನ್ನು ತಯಾರಿಸುತ್ತಿದ್ದರು.”

ಈ ಕಾರಣಕ್ಕೆ ಟಿಪ್ಪುವನ್ನು ಹಿಂದೂತ್ವವಾದಿಗಳು ವಿರೋಧಿಸುವುದಾದರೆ ಶೃಂಗೇರಿ ದೇವಸ್ಥಾನದ ಮೇಲೆ ದಾಳಿ ಮಾಡಿದ ಮರಾಠರನ್ನೇ ಮೊದಲು ವಿರೋಧಿಸಬೇಕಲ್ಲವೇ? ಯಾಕೆ ಮರಾಠರಿಗೆ ಒಂದು ನ್ಯಾಯ, ಟಿಪ್ಪುಗೆ ಇನ್ನೊಂದು ನ್ಯಾಯ?

25 ನವೆಂಬರ್, 2015 (ಸಂಪಾದಕೀಯದಿಂದ)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...