ಮಹಿಳೆಯರಿಗೆ ಉಚಿತ ಪ್ರಯಾಣ ಬೇಡವೆಂದ ಶ್ರೀಧರನ್ ಗೆ ಪ್ರತಿ ಪತ್ರ ಬರೆದ ಮನೀಶ್ ಸಿಸೋಡಿಯ

| ನಾನುಗೌರಿ ಡೆಸ್ಕ್ |

ಸಾರ್ವಜನಿಕ ವಾಹನಗಳನ್ನು ಬಳಸುವಂತೆ ಪ್ರೇರೆಪಿಸಲು ಮತ್ತು ಭದ್ರತೆಯ ದೃಷ್ಟಿಯಿಂದ ಇನ್ನು ಮುಂದೆ ದೆಹಲಿಯಲ್ಲಿ ಮಹಿಳೆಯರಿಗೆ ಸಂಪೂರ್ಣ ಉಚಿತವಾಗಿ ಮೆಟ್ರೊ ಮತ್ತು ಬಸ್ ಪ್ರಯಾಣ ಸೇವೆ ಒದಗಿಸಲು ಮುಂದಾಗಿದ್ದ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ನಡೆಗೆ ಆರಂಭದಲ್ಲೇ ವಿಘ್ನವುಂಟಾಗಿದೆ. ದೆಹಲಿ ಮೆಟ್ರೊದ ಮಾಜಿ ಅಧ್ಯಕ್ಷ ಇ.ಶ್ರೀಧರನ್ ರವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು ಯಾವ ಕಾರಣಕ್ಕೂ ಈ ಯೋಜನೆಗೆ ಒಪ್ಪಿಗೆ ನೀಡಬೇಡಿ ಎಂದು ಬಹಿರಂಗ ಪತ್ರ ಬರೆದಿದ್ದಾರೆ.

ಡೆಲ್ಲಿ ಟ್ರಾನ್ಸ್‍ಪೋರ್ಟ್ ಕಾರ್ಪೋರೇಷನ್ ಬಸ್‍ಗಳಲ್ಲಿ ಮತ್ತು ಡೆಲ್ಲಿ ಮೆಟ್ರೊದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೇವೆಯ ಕುರಿತು ಜೂನ್ 1 ರಂದು  ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದರು. ಈಗ ಅದರಿಂದ ದೆಹಲಿ ಮೆಟ್ರೊ ಆರ್ಥಿಕ ದಿವಾಳಿತನ ಎದುರಿಸಬೇಕಾಗುತ್ತದೆ, ಅಷ್ಟೇ ಅಲ್ಲದೇ ದೇಶದ ಇತರ ಮೆಟ್ರೊಗಳ ಮೇಲೂ ಇದು ಪರಿಣಾಮ ಬೀರುತ್ತದೆ ಎಂದು ಕಾರಣ ನೀಡಿ ಉಚಿತ ಮಾಡಬೇಡಿ ಎಂದು ಪತ್ರದಲ್ಲಿ ಇ.ಶ್ರೀಧರನ್ ಉಲ್ಲೇಖಿಸಿದ್ದಾರೆ.

ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾರವರು ಹಾಲಿ ದೆಹಲಿ ಮೆಟ್ರೊಗೆ ಮಾರ್ಗದರ್ಶಕರಾಗಿರುವ ಇ.ಶ್ರೀಧರನ್ ರವರಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ” ನೀವು ಪ್ರಧಾನ ಮಂತ್ರಿಗಳಿಗೆ ಬರೆದ ಪತ್ರ ಓದಿ ಆಶ್ಚರ್ಯ ಮತ್ತು ನೋವುಂಟಾಯಿತು. ನೀವು ಪ್ರಸ್ತುತ ಯೋಜನೆಯ ಬಗ್ಗೆ ತಪ್ಪು ಮಾಹಿತಿ ಪಡೆದಿರುವ ಕಾರಣಕ್ಕೆ ಈಗಾಗಿದೆ. ದೆಹಲಿ ಮೆಟ್ರೊದ ಮೂರನೇ ಹಂತ ಪೂರ್ಣಗೊಂಡ ನಂತರ ನೀವು ಖಂಡಿತ ಶ್ಲಾಘಿಸುತ್ತೀರೆಂಬ ವಿಶ್ವಾಸವಿದೆ, ಆಗ ದೆಹಲಿ ಮೆಟ್ರೊದಲ್ಲಿ 40 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡಬಹುದಾದ ಸಾಮರ್ಥ್ಯವನ್ನು ನಾವು ಹೊಂದಲಿದ್ದೇವೆ” ಎಂದಿದ್ದಾರೆ.

ಮುಂದುವರೆದು ಈಗ ಸದ್ಯಕ್ಕೆ ದೆಹಲಿ ಮೆಟ್ರೊದಲ್ಲಿ ದಿನವೊಂದಕ್ಕೆ ಕೇವಲ 25 ಲಕ್ಷ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಉಳಿದ ಸಾಮರ್ಥ್ಯ ವ್ಯರ್ಥವಾಗುತ್ತಿದೆ. ಹಾಗಾಗಿ ಮಹಿಳೆಯರಿಗೆ ಉಚಿತ ಸೇವೆ ನೀಡಿದ್ದಲ್ಲಿ ಶೇ.50% ಮಹಿಳೆಯರು ಪ್ರಯಾಣಿಸುವುದರಿಂದ ದೆಹಲಿ ಮೆಟ್ರೊ ಸಾಮರ್ಥ್ಯ ಸಂಪೂರ್ಣ ಸದ್ಬಳಕೆಯಾಗುತ್ತದೆ. ಹಾಗಾಗಿ ಇದನ್ನು ಪ್ರಶಂಸಿಸುವುದು ಬಿಟ್ಟು ವಿರೋಧಿಸುವುದು ಸರಿಯಲ್ಲ ಎಂದು ಬರೆದಿದ್ದಾರೆ.

ಮಹಿಳೆಯರಿಗೆ ಭದ್ರತೆ ಮತ್ತು ಸಾರ್ವಜನಿಕ ವಾಹನಗಳನ್ನು ಬಳಸುವಂತೆ ಪ್ರೇರೆಪಿಸಲು ನಾವು ಈ ಯೋಜನೆ ಘೋಷಿಸಿದ್ದೇವೆ. ಇದರಿಂದ ಖಾಸಗಿ ವಾಹನಗಳ ಬಳಕೆ ತಪ್ಪಿ ವಾಯುಮಾಲಿನ್ಯವನ್ನು ಕಡಿಮೆ ಮಾಡಬಹುದು. ಮಹಿಳೆಯರ ಸಬಲೀಕರಣಕ್ಕಾಗಿ ಇದೊಂದು ಕ್ರಾಂತಿಕಾರಕ ನಡೆಯಾಗಿದ್ದು ಇದು ಮಹಿಳೆಯರ ಪಾಲಿಗೆ ಹೊಸ ಅವಕಾಶಗಳನ್ನು ತೆರೆದಯುತ್ತದೆ. ನಾವು ದಿನಪ್ರತಿ ಮಿಲಿಯನ್ ಕೂಪನ್ ಗಳನ್ನು ಪಡೆದು ಮಹಿಳೆಯರಿಗೆ ಹಂಚಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡುತ್ತಿದ್ದೇವೆ. ಇದನ್ನು ವಿರೋಧಿಸುವುದರಲ್ಲಿ ಏನರ್ಥವಿದೆ? ಹಾಗಾಗಿ ಈ ಪ್ರಗತಿಪರ ಯೋಜನೆಗೆ ವಿರೋಧ ಮಾಡುವುದರ ಕುರಿತು ಯೋಚಿಸಿ ಎಂದು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಪ್ರಗತಿಪರ ಲೇಖಕ ಬಿ.ಶ್ರೀಪಾದ್ ಭಟ್ “ಮಹಿಳೆಯರಿಗೆ ಉಚಿತ ಪ್ರಯಾಣವೆಂದರೆ ಅದು ಭಿಕ್ಷೆಯಲ್ಲ. ಬದಲಿಗೆ ದೇಶವನ್ನು ಮುನ್ನಡೆಸುವಲ್ಲಿ ಅರ್ಧ ಕೊಡುಗೆ ಕೊಡುವ ಮಹಿಳೆಯರ ಸಬಲೀಕರಣ ಎಂಬ ಪರಿಜ್ಞಾನ ಮೆಟ್ರೊ ಮಾಜಿ ಅಧ್ಯಕ್ಷ ಇ.ಶ್ರೀಧರನ್ ರವರಿಗೆ ಇದ್ದಂತಿಲ್ಲ. ಹಾಗಾಗಿ ಬಹುಮುಖ್ಯ ಯೋಜನೆಯೊಂದನ್ನು ವಿರೋಧಿಸಿ ಪತ್ರ ಬರೆದಿದ್ದಾರೆ. ಅವರಿಗೆ ತುರ್ತಾಗಿ ಸಬಲೀಕರಣದ ಕುರಿತು ಪಾಠ ಹೇಳಬೇಕಾಗಿದೆ” ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನು ಓದಿ:

ದೆಹಲಿಯಲ್ಲಿ ಮಹಿಳೆಯರಿಗೆ ಮೆಟ್ರೊ ಮತ್ತು ಬಸ್ ಪ್ರಯಾಣ ಫುಲ್ ಫ್ರಿ : ಕೇಜ್ರಿವಾಲ್

 

 

 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here