‘ಡೌರಿಯ ಅನುಕೂಲಗಳು’ : ಗುಜರಾತ್ ಪಠ್ಯವಲ್ಲ, ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನದ್ದು, ಆದರೆ…

ಮಿಥ್ಯ: ನಿನ್ನೆ (ಸೋಮವಾರ) ಫೇಸ್‍ಬುಕ್‍ನಲ್ಲಿ ಒಂದು ಪಠ್ಯದ ಕಾಗದದ ತುಂಡು ತುಂಬ ಸದ್ದು ಮಾಡುತ್ತಿದ್ದು, ಅದರಲ್ಲಿ ‘ಡೌರಿಯ ಅನುಕೂಲಗಳು’ ಎಂಬ ಉಪಶೀರ್ಷಿಕೆಯಿದೆ. ಅದರಲ್ಲಿ ’ಡೌರಿಯಿಂದ ಕುರೂಪಿ ಹುಡುಗಿಯರ ಮದುವೆ ಸಾಧ್ಯ… ಸುಂದರ ಗಂಡಸರನ್ನು ಮದುವೆಯಾಗಬಹುದು.. ಒಲ್ಲದ ಯುವಕರನ್ನು ಸೆಳೆಯಬಹುದು….’ ಇತ್ಯಾದಿ ಸಾಲುಗಳ ಕೆಳಗಡೆ ಮಾರ್ಕರ್‍ನಿಂದ ಅಂಡರ್‍ಲೈನ್ ಮಾಡಲಾಗಿದೆ. ಗುಜರಾತಿನ ಸರ್ಕಾರಿ ಶಾಲೆಗಳ ಸಮಾಜ ವಿಜ್ಞಾನ ಪುಸ್ತಕದಲ್ಲಿ ಇದು ಇದೆ ಎಂದೂ, ಗುಜರಾತ್ ಸರ್ಕಾರದ ಕಂದಾಚಾರದ ಮೌಲ್ಯಗಳಿಗೆ ಇದು ಸಾಕ್ಷಿ ಎಂದೂ ಟೀಕಿಸಲಾಗಿದೆ. ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಕೂಡ ಇದನ್ನು ಶೇರ್ ಮಾಡಿದ್ದು, ‘ಗುಜರಾತ್ ಮಾದರಿಯ ಕುರೂಪಿ ಪ್ರದರ್ಶನ’ ಎಂದು ಕಿಡಿಕಾರಿದೆ.

ಸತ್ಯ: ಇದು ಸಾಕಷ್ಟು ವೈರಲ್ ಆಗಿದ್ದು ನಮ್ಮ ಪ್ರಗತಿಪರ ಮಿತ್ರರೂ ಇದನ್ನು ಶೇರ್ ಮಾಡಿ ಗುಜರಾತ್ ಬಿಜೆಪಿ ಸರ್ಕಾರದ ಮೇಲೆ ಹರಿ ಹಾಯ್ದಿದ್ದಾರೆ. ಆದರೆ ಫ್ಯಾಕ್ಟ್ ಚೆಕ್ ಮಾಡಿದಾಗ ಗುಜರಾತ್ ಶಿಕ್ಷಣ ಇಲಾಖೆ ಪ್ರಕಟಿಸಿದ ಯಾವ ಪಠ್ಯಪುಸ್ತಕದಲ್ಲೂ ಈ ಕಾಗದದ ತುಣುಕಿನ ಸಾರಾಂಶ ಇರುವ ಪಾಠವಿಲ್ಲ. ಇದರ ಮೂಲ ಹುಡುಕುತ್ತ ಹೋದರೆ ಅದು ಬೆಂಗಳೂರಿಗೆ ಬಂದು ತಲುಪುತ್ತದೆ.

ಇಲ್ಲಿ ಪ್ರಕಟಿಸಿರುವ ಪಠ್ಯದ ಭಾಗ 2017ರಲ್ಲಿ ಸುದ್ದಿಯಲ್ಲಿತ್ತು. ಬೆಂಗಳೂರಿನ ಶಾಂತಿನಗರದ ಸೇಂಟ್ ಜೋಸೆಫ್ ಕಾಲೇಜಿನ ಸಮಾಜಶಾಸ್ತ್ರ ಪುಸ್ತಕದಲ್ಲಿ ಇದು ಇತ್ತು ಎಂದು ವರದಿಯಾಗಿತ್ತು. ಅಕ್ಟೋಬರ್ 21, 2017ರಂದು ಈ ಕುರಿತು ವರದಿ ಪ್ರಕಟಿಸಿದ್ದ ‘ಟೈಮ್ಸ್ ಆಫ್ ಇಂಡಿಯಾ’, ಈ ಪಾಠದಲ್ಲಿನ ಅಂಶಗಳಿಗಾಗಿ ಕಾಲೇಜಿನ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು ಎಂದು ಬರೆದಿತ್ತು.

ಇದಕ್ಕೂ ಮೊದಲು ‘ದಿ ನ್ಯೂಸ್ ಮಿನಿಟ್’ ಪ್ರಕಟಿಸಿದ್ದ ವರದಿಯಲ್ಲಿ, ಸೇಂಟ್ ಜೋಸೆಫ್ ಕಾಲೇಜಿನ ಬಿ.ಎ. ತರಗತಿಯ ಸಮಾಜಶಾಸ್ತ್ರ ಪುಸ್ತಕದಲ್ಲಿ ಈ ಪಠ್ಯ ಇದೆ ಎಂಬುದನ್ನು ಯುವತಿಯೊಬ್ಬಳು ಬೆಳಕಿಗೆ ತಂದಿದ್ದಾಳೆ ಎಂದು ವಿವರಿಸಿತ್ತು.

ಸೇಂಟ್ ಜೋಸೆಫ್ ಕಾಲೇಜು ಇಂತಹ ಕಂದಾಚಾರದ ಪಠ್ಯ ಅಳವಡಿಸಲು ಸಾಧ್ಯವೇ? ಖಂಡಿತ ಇಲ್ಲ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಟವಾದ ದಿನವೇ ಕಾಲೇಜಿನ ಪ್ರೊಫೆಸರ್‍ಗಳು ಒಟ್ಟಾಗಿ, ‘ಸಿಟಿಜನ್ ಜರ್ನಲಿಸ್ಟ್ ಹೆಸರಿನಲ್ಲಿ ಯುವತಿಯೊಬ್ಬಳು ಮಾಡಿದ ಕುಚೋದ್ಯ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇಂಗ್ಲಿಷ್ ವಿಭಾಗದ ಪ್ರೊಫೆಸರ್ ಚೆರಿಯನ್ ಅಲೆಕ್ಸಾಂಡರ್ ಈ ಕುರಿತು ವಿವರಣೆ ನೀಡಿ, ‘ಸಿಟಿಜನ್ ಜರ್ನಲಿಸ್ಟ್-ಕಮ್-ವೆಲ್ಲೂರ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಇಡೀ ಪಠ್ಯದಲ್ಲಿ ಆಯ್ದ ಭಾಗವನ್ನಷ್ಟೇ ಪ್ರಕಟಿಸಿ ಕುಚೋದ್ಯ ಮಾಡಿದ್ದಾಳೆ.

‘ವರದಕ್ಷಿಣೆಯ ಅನುಕೂಲಗಳು’ ಎಂದು ಸಮಾಜದ ಕೆಲವು ಕಂದಾಚಾರಿ ಮನಸ್ಸುಗಳ ಭಾವಿಸಿರುವುದನ್ನು ಆ ಉಪಶೀರ್ಷಿಕೆಯಡಿ ವಿವರಿಸಿದ್ದು, ಇಂತಹ ಕಂದಾಚಾರಗಳ ವಿರುದ್ಧ ಧ್ವನಿ ಎತ್ತುವ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು ಎಂಬ ಪಠ್ಯವೂ ಇದ್ದು ಅದನ್ನು ಬೇಕೆಂತಲೇ ಪ್ರಕಟಿಸಿಲ್ಲ. ಇಡೀ ಪಾಠ ವರದಕ್ಷಿಣೆ ಎಂಬ ಪಿಡುಗಿನ ವಿರುದ್ಧವೇ ಇದೆ. ನಮ್ಮ ಸಂಸ್ಥೆ ಎಂದೂ ಕಂದಾಚಾರ, ಮೌಢ್ಯ ಮತ್ತು ಪುರುಷ ಪ್ರಧಾನ ನಿಲುವುಗಳ ವಿರುದ್ಧವಾಗಿಯೇ ಇದೆ ಎಂದು ಸ್ಪಷ್ಟೀಕರಣ ನೀಡಿದ್ದರು. ಮರುದಿನ ಟೈಮ್ಸ್ ಆಫ್ ಇಂಡಿಯಾ ಈ ಸ್ಪಷ್ಟಿಕರಣವನ್ನು ಪ್ರಕಟಿಸಿತ್ತು.

ಈಗ ಅದೇ ಪಠ್ಯದ ಭಾಗ ವೈರಲ್ ಆಗಿದ್ದು, ಗುಜರಾತಿನ ಶಾಲೆಗಳಲ್ಲಿ ಈ ಪಾಠವಿದೆ ಎಂದು ಸುಳ್ಳನ್ನು ತೇಲಿಬಿಡಲಾಗಿದೆ.
(ಆಧಾರ: ಅಲ್ಟ್ ನ್ಯೂಸ್)

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here