Homeಚಳವಳಿಎನ್ಕೌಂಟರ್ ಕೊಲೆಗಳು ಲೈಂಗಿಕ ದೌರ್ಜನ್ಯದಿಂದ ಮಹಿಳೆಯರನ್ನು ರಕ್ಷಿಸುವುದಿಲ್ಲ... ಏಕೆಂದರೆ

ಎನ್ಕೌಂಟರ್ ಕೊಲೆಗಳು ಲೈಂಗಿಕ ದೌರ್ಜನ್ಯದಿಂದ ಮಹಿಳೆಯರನ್ನು ರಕ್ಷಿಸುವುದಿಲ್ಲ… ಏಕೆಂದರೆ

- Advertisement -
- Advertisement -

ಹೈದರಾಬಾದ್‌ನಲ್ಲಿ 26 ವರ್ಷದ ಪಶುವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ ನಾಲ್ವರು ಆರೋಪಿಗಳನ್ನು ‘ಎನ್‌ಕೌಂಟರ್’ ಮಾಡಿದ್ದರ ಬಗ್ಗೆ, 2019ರ ಡಿಸೆಂಬರ್ 6 ರಂದು ತೆಲಂಗಾಣ ಪೊಲೀಸರು “ಕಾನೂನು ತನ್ನ ಕರ್ತವ್ಯವನ್ನು ನಿರ್ವಹಿಸಿದೆ” ಎಂದು ಘೋಷಿಸಿದರು. ಇತರ ರಾಜ್ಯಗಳ ಹಲವಾರು ಪೊಲೀಸ್ ಅಧಿಕಾರಿಗಳು ತೆಲಂಗಾಣ ಪೊಲೀಸರ ಕ್ರಮವನ್ನು ಶ್ಲಾಘಿಸಿ, ಶಹಬ್ಬಾಸ್‌ ಎಂದಿದ್ದಾರೆ.

ಆರೋಪಿಗಳನ್ನು ಕೈಕೋಳವಿಲ್ಲದೆ ಮುಂಜಾನೆ 3 ಗಂಟೆಗೆ ಹೊರಗೆ ಕರೆದೊಯ್ದಿದ್ದ ಪ್ರಶ್ನೆ ಬಗ್ಗೆ ತೆಲಂಗಾಣ ಪೊಲೀಸರಲ್ಲಿ ಯಾವುದೇ ವಿವರಣೆ ಇಲ್ಲ. ಅಥವಾ ನಾಲ್ಕು ಶಸ್ತ್ರರಹಿತ ಪುರುಷರು ಹತ್ತು ಶಸ್ತ್ರಸಜ್ಜಿತ ಪೊಲೀಸರ ಮೇಲೆ ದಾಳಿ ಮಾಡಲು ಹೇಗೆ ಸಾಧ್ಯ ಎಂಬುದರ ಬಗ್ಗೆ ಅವರು ವಿವರಣೆ ನೀಡುವುದಿಲ್ಲ. ಏಕೆಂದರೆ, ಇದು ಪೂರ್ವ ನಿಯೋಜಿತ ಕಸ್ಟಡಿ ಕೊಲೆ ಪ್ರಕರಣವಾಗಿದೆ.

ಮಹಿಳೆಯರ ಸುರಕ್ಷತೆಯ ಹೆಸರಿನಲ್ಲಿ ಹಿಂಸಾಚಾರದ ಬಳಕೆಯನ್ನು ಒಪ್ಪಿಕೊಳ್ಳುವುದು, ವ್ಯಾಪಕವಾಗಿರುವ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕೊನೆಗೊಳಿಸಲು ಬೇಕಿರುವ ನೈಜ ಪರಿಹಾರಗಳನ್ನು ಕಂಡುಕೊಳ್ಳುವುದನ್ನು ದೂರಮಾಡುತ್ತದೆ. ತೀರಾ ಇತ್ತೀಚೆಗೆ, ಉನ್ನಾವೊದಲ್ಲಿ ಅತ್ಯಾಚಾರಕ್ಕೊಳಗಾದ ಸಂತ್ರಸ್ಥೆಗೆ ದುಷ್ಕರ್ಮಿಗಳು ಬೆಳಗಿನ ಸಮಯದಲ್ಲೇ ಬೆಂಕಿ ಹಚ್ಚಿರುವ ಪ್ರಕರಣವು ದೌರ್ಜಕ್ಕೊಳಗಾದ ಬಲಿಪಶುಗಳು ಜೀವಂತವಾಗಿದ್ದಾಗ ಅವರನ್ನು ರಕ್ಷಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆಂದು ತೋರಿಸುತ್ತದೆ. ಅತ್ಯಾಚಾರಕ್ಕೊಳಗಾಗಿ, ಬೆಂಕಿ ದಾಳಿಗೆ ಒಳಗಾದ ಮಹಿಳೆ ಶನಿವಾರ ಅಸುನೀಗಿದ್ದಾಳೆ.

ಪೊಲೀಸ್‌ ಇಲಾಖೆಯು ತಮ್ಮ ಕರ್ತವ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ವಿಫಲವಾದಾಗ “ಎನ್ಕೌಂಟರ್‌ಗಳು” ವ್ಯವಸ್ಥಿತವಾಗಿ ಸಮಾಜದ ಗಮನವನ್ನು ಬದಲಾಯಿಸುತ್ತದೆ. ಪ್ರಸ್ತುತ ಪ್ರಕರಣದಲ್ಲಿ,  ಆರೋಪಿಗಳು ನಿಜಕ್ಕೂ ಅಪರಾಧ ಮಾಡಿದ ಅಪರಾಧಿಗಳೇ ಅಥವಾ ಸಾರ್ವಜನಿಕರ ಕೋಪವನ್ನು ಶಮನ ಮಾಡಲು ಪೊಲೀಸರು ಬಳಸಿದ ಬಲಿಪಶುಗಳೇ ಎಂದು ತಿಳಿಯಲು ಯಾವುದೇ ಸುಳಿವಿಲ್ಲ. ಪೊಲೀಸರ ಸಾಂವಿಧಾನಿಕ ಕರ್ತವ್ಯವು ಅಪರಾಧಗಳನ್ನು ತಡೆಗಟ್ಟುವುದು ಮತ್ತು ಅವುಗಳನ್ನು ತನಿಖೆ ಮಾಡುವುದು. ಈ ಕರ್ತವ್ಯವನ್ನು ಅವರು ಕಾನೂನು ಮತ್ತು ಸಂವಿಧಾನಕ್ಕೆ ಅನುಗುಣವಾಗಿ ನಿರ್ವಹಿಸಬೇಕು.

ಎನ್ಕೌಂಟರ್ಗಳ ಕಾನೂನುಬದ್ಧತೆ ಏನು?
“ಎನ್ಕೌಂಟರ್” ಎಂಬುದು, ಬಂಧನದಲ್ಲಿದ್ದಾಗ ಮಾಡಿರುವ ಹತ್ಯೆಗಳನ್ನು ತೆಲಂಗಾಣ ಪೊಲೀಸರು ತಮ್ಮ ಲಜ್ಜೆಗೆಟ್ಟ ಕಾನೂನುಬಾಹಿರ ಕೃತ್ಯಗಳಿಗೆ ನ್ಯಾಯಸಮ್ಮತತೆಯನ್ನು ಪಡೆಯಲು ಮಾಡುತ್ತಿರುವ ಪ್ರಯತ್ನವಾಗಿದೆ. ಕಾನೂನಿನ ಪ್ರಕಾರ, ಆತ್ಮ ರಕ್ಷಣೆಯನ್ನು ಹೊರತು ಪಡಿಸಿ, ಅಂತಹ ಹತ್ಯೆಗಳು ಕೊಲೆ ಅಪರಾಧಕ್ಕೆ ಸಮನಾಗಿರುತ್ತದೆ. ಇಂತಹ ಕೃತ್ಯಗಳಲ್ಲಿ ತನಿಖೆ ನಡೆದು ಅದು ನಕಲಿ ಎಂದಾದರೆ ಶಿಕ್ಷೆಯಲ್ಲಿ ಪೊಲೀಸರಿಗೆ ಯಾವುದೇ ವಿನಾಯಿತಿ ಇಲ್ಲ.

ಕಾನೂನು ಮತ್ತು ಸುವ್ಯವಸ್ಥೆಯ ನಿರ್ವಹಣೆಯ ಹೆಸರಿನಲ್ಲಿ ಎನ್‌ಕೌಂಟರ್‌ಗಳನ್ನು ಕಾನೂನುಬದ್ಧ ಪ್ರಕ್ರಿಯೆಯೆಂದು ಸಮರ್ಥಿಸುವುದು ಕಾನೂನಿನ ನಿಯಮಗಳಿಗೆ ವಿರುದ್ಧವಾಗಿದೆ. ವಾಸ್ತವವಾಗಿ, ಪೊಲೀಸರ ಇಂತಹ ಅಧಿಕಾರ ದುರುಪಯೋಗವನ್ನು ಸುಪ್ರೀಂ ಕೋರ್ಟ್ “ಪ್ರಭುತ್ವ ಪ್ರಾಯೋಜಿತ ಭಯೋತ್ಪಾದನೆ” ಎಂದು ಪರಿಗಣಿಸಿದೆ. ಅಲ್ಲದೆ ಅಂತಹ ಪೊಲೀಸ್ ಎನ್ಕೌಂಟರ್‌ಗಳ ತನಿಖೆಯ ಬಗ್ಗೆ ವಿವರವಾದ ಮಾರ್ಗಸೂಚಿಗಳನ್ನು ನೀಡಿದೆ.

ಪೊಲೀಸ್ ಕಸ್ಟಡಿಯಲ್ಲಿಲ್ಲಾಗುವ ಕೊಲೆಗಳು, ಹತ್ಯೆಮಾಡುವರ ಪ್ರಭಾವದಿಂದ ಕಾನೂನು ವ್ಯವಸ್ಥೆಯ ನ್ಯಾಯಸಮ್ಮತತೆಯ ಮೇಲೆ ಬೀರುವ ಪರಿಣಾಮಗಳನ್ನು ವಿಶೇಷವಾಗಿ ಪರಿಗಣಿಲಾಗಿದೆ. ಉದಾಹರಣೆಗೆ, ಡಿ.ಕೆ.ಬಸು ವರ್ಸಸ್‌ ಪಶ್ಚಿಮ ಬಂಗಾಳದ ಸರ್ಕಾರದ ಪ್ರಕರಣದಲ್ಲಿ, “ಸರ್ಕಾರದ ಕಾರ್ಯಪಾಲಕರು ಕಾನೂನನ್ನೂ ಮೀರಿ ಕಾನೂನು ಬಾಹಿರವಾಗಿದ್ದರೆ, ಅದು ಕಾನೂನಿನ ತಿರಸ್ಕಾರವನ್ನು ವೃದ್ಧಿಸುತ್ತದೆ ಮತ್ತು ಕಾನೂನುಬಾಹಿರ ಚಟುವಟಿಯನ್ನು ಉತ್ತೇಜಿಸುತ್ತದೆ. ಅಲ್ಲದೆ ಪ್ರತಿಯೊಬ್ಬ ಮನುಷ್ಯನು ತನಗೆ ತಾನೇ ಕಾನೂನಾಗುವ ಪ್ರವೃತ್ತಿಯನ್ನು ಹೊಂದಿರುತ್ತಾನೆ. ಇದರಿಂದಾಗಿ ಅರಾಜಕತಾವಾದ ಬೆಳೆಯಲು ಕಾರಣವಾಗುತ್ತದೆ. ಯಾವುದೇ ನಾಗರಿಕ ರಾಷ್ಟ್ರಗಳು ಅದನ್ನು ಮಾಡಲು ಅನುಮತಿಸುವುದಿಲ್ಲ” ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.

ತೆಲಂಗಾಣ ಪೊಲೀಸರು ಬಂಧಿಸಿ ಮಾಡಲಾಗುವ ಈ ಕೊಲೆಗಳು ಪೊಲೀಸರು ಅಧಿಕಾರ ದುರುಪಯೋಗಪಡಿಸಿಕೊಂಡ ಏಕೈಕ ಉದಾಹರಣೆಯಲ್ಲ. ಇದು ಪೂರ್ವಾಭ್ಯಾಸ ಮಾಡಿದ ಮಾದರಿಯಂತೆ ಕಂಡುಬರುತ್ತದೆ ಎಂದು ವರದಿಗಳು ಸೂಚಿಸುತ್ತವೆ. 2008 ರಲ್ಲಿ, ಆಂಧ್ರಪ್ರದೇಶದ ವಾರಂಗಲ್‌ನಲ್ಲಿ 20 ವರ್ಷದ ಇಬ್ಬರು ಮಹಿಳೆಯರ ಮೇಲೆ ಆಸಿಡ್ ದಾಳಿ ಮಾಡಿದ್ದ ಮೂವರು ಆರೋಪಿಗಳೂ ಈ ಪ್ರಕರಣದಲ್ಲಿದ್ದಂತೆ ಅದೇ ಪೊಲೀಸ್ ಅಧಿಕಾರಿಯ ನೇತೃತ್ವದ ತಂಡದೊಂದಿಗೆ ನಡೆದ “ಎನ್‌ಕೌಂಟರ್‌ನಲ್ಲಿ” ಕೊಲ್ಲಲ್ಪಟ್ಟರು. ಆದರೆ, ಆಸಿಡ್ ದಾಳಿಗೆ ಸುಮಾರು ಮೂರು ವಾರಗಳ ಮೊದಲು ಸಂತ್ರಸ್ಥೆ ಸಲ್ಲಿಸಿದ ದೂರಿನ ಮೇರೆಗೆ ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ಸಂತ್ರಸ್ತೆ ಆರೋಪಿಸಿದ್ದಳು. ಆ ಪ್ರಕರಣದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಬಗ್ಗೆ ಪೊಲೀಸರು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. “ಎನ್‌ಕೌಂಟರ್” ನಂತರ ಇದ್ದಕ್ಕಿದ್ದಂತೆ ಅದೇ ಪೊಲೀಸರು ವೀರರೆಂದು ಶ್ಲಾಘಿಸಲ್ಪಟ್ಟರು.

ನಿಯಂತ್ರಣ ಮೀರಿದ ಪೊಲೀಸ್ ಅಧಿಕಾರವು ಲೈಂಗಿಕ ದೌರ್ಜನ್ಯವನ್ನು ತಡೆಯುತ್ತದೆಯೇ?

ನಮ್ಮ ದೇಶದಲ್ಲಿ ಲೈಂಗಿಕ ದೌರ್ಜನ್ಯದ ವಿರುದ್ಧದ ನಡೆಯುತ್ತಿರುವ ಸುದೀರ್ಘ ಹೋರಾಟಗಳು ದೇಶದಲ್ಲಿರುವ ಆಳವಾದ ಲಿಂಗ ಬೇಧ, ಜಾತಿ, ಧಾರ್ಮಿಕ ಮತ್ತು ವರ್ಗ ಪೂರ್ವಾಗ್ರಹದೊಂದಿಗಿನ ತಾರತಮ್ಯವನ್ನು ಎತ್ತಿ ತೋರಿಸಿದೆ. ಈ ತಾರತಮ್ಯವು ತನಿಖಾ ಸಂಸ್ಥೆಗಳಲ್ಲಿ ವ್ಯಾಪಿಸಿದೆ. ಅದೇ ಪೊಲೀಸರ ಕೈಯಲ್ಲಿ ಅನಿಯಂತ್ರಿತ ಅಧಿಕಾರವನ್ನು ನೀಡುವುದರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಿಗೆ ನ್ಯಾಯ ವ್ಯವಸ್ಥೆ ಬದಲಾಗುವುದಾಗಲೀ, ಸುಲಭಗೊಳಿಸುವುದಾಗಲೀ ಆಗುವುದಿಲ್ಲ.

ಉನ್ನಾವೊ ಪ್ರಕರಣದಲ್ಲಿ, ಅತ್ಯಾಚಾರದ ದೂರು ದಾಖಲಿಸಲು ಕಾನೂನು ಆದೇಶದ ಹೊರತಾಗಿಯೂ, ಸಂತ್ರಸ್ತೆಯು ನ್ಯಾಯಾಲಯದ ಮೊರೆ ಹೋಗಿ, ಕೋರ್ಟ್‌ ಮಧ್ಯಪ್ರವೇಶಿಸಿದ ನಂತರವೇ ಎಫ್‌ಐಆರ್ ದಾಖಲಿಸಲಾಗಿದೆ. ಹೈದರಾಬಾದ್ ಪ್ರಕರಣದಲ್ಲಿ, ಕಾಣೆಯಾದ ವ್ಯಕ್ತಿಯ ಬಗ್ಗೆ ದೂರು ನೀಡಲು ಹೋದ ಕುಟುಂಬವನ್ನೂ, ಕಾಣೆಯಾಗಿದ್ದ ಸಂತ್ರಸ್ತೆಯನ್ನೂ ನಿಷ್ಕ್ರಿಯ ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ದೂರು ತೆಗೆದುಕೊಳ್ಳಲು ಒಂದು ಸ್ಟೇಷನ್‌ನಿಂದ ಇನ್ನೊಂದು ಸ್ಟೇಷನ್‌ಗೆ ಅಲೆಸಿದ್ದರು. ಇಂತಹ ಧೂಷಣೆಯನ್ನು ಕೇಳಲು ಬಲಿಪಶುವಿನ ಕುಟುಂಬ ಹೋದಂತಾಯಿತು. ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ, ಅತ್ಯಾಚಾರಕ್ಕೊಳಗಾದ ಬಲಿಪಶುವನ್ನು ಮೌನಗೊಳಿಸಲು ಮತ್ತು ಸಾಮೂಹಿಕ ಅತ್ಯಾಚಾರದ ಗಂಭೀರ ಕೃತ್ಯದ ಆರೋಪ ಹೊತ್ತಿರುವ ಬಿಜೆಪಿ ಶಾಸಕ ಕುಲದೀಪ್ ಸೆಂಗಾರ್‌ನನ್ನು ರಕ್ಷಿಸಲು ಪೊಲೀಸರು ಪ್ರಮುಖ ಪಾತ್ರ ವಹಿಸಿದ್ದಾರೆ. ಬಲಿಪಶುವಿನ ಸ್ವಂತ ತಂದೆಯನ್ನು ಪೊಲೀಸ್ ಕಸ್ಟಡಿಯಲ್ಲಿ ಥಳಿಸಿ ಕೊಲ್ಲಲಾಯಿತು ಎಂದು ನೆನಪಿಟ್ಟುಕೊಳ್ಳುವುದು ಬಹಳ ದುಃಖಕರವಾಗಿದೆ. ಅದೇ ರೀತಿ, ಮಾಜಿ ಸಂಸದ ಚಿನ್ಮಯಾನಂದ್ ಪ್ರಕರಣದಲ್ಲಿ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯನ್ನು ಸುಲಿಗೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ.

ತೆಲಂಗಾಣದ ಸೋ-ಕಾಲ್ಡ್‌ ’ಎನ್‌ಕೌಂಟರ್’ ಮಾಡಿದ ಪೊಲೀಸರು ಅಭಿನಂದಿಸಲ್ಪಡುತ್ತಿರುವ, ದೇಶಾದ್ಯಂತದ ಪೊಲೀಸರು ತಮ್ಮ ಪ್ರಾಥಮಿಕ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ವಿಫಲಾಗಿರುವುದನ್ನು ನಾವು ಮರೆತಿದ್ದೇವೆ. ಪೊಲೀಸರು ತಾವು ನಿರ್ವಹಿಸಬೇಕಾದ ಕಾರ್ಯಗಳನ್ನು ಮರೆತು, ತಮ್ಮ ಅಧಿಕಾರ ಮಿತಿಯನ್ನು ಮೀರಿದ್ದಾರೆ. ಈಗ ಪ್ರಕರಣವನ್ನು ಅಪಾಯಕಾರಿ ನಿದರ್ಶನದೊಂದಿಗೆ ಮುಚ್ಚಿಹಾಕಿದ್ದಾರೆ – ಇಂತಹ ಪ್ರಕರಣಗಳಲ್ಲಿ ಎಲ್ಲಾ ಸಮಯದಲ್ಲೂ ತಮಗಾಗಿ ಮತ್ತು ತಮ್ಮ ರಾಜಕೀಯ ಪ್ರಭಾವಕ್ಕಾಗಿ ಅನೈತಿಕ ಮೇಲುಗೈ ಸಾಧಿಸುತ್ತಿದೆ.

ಲೈಂಗಿಕ ದೌರ್ಜನ್ಯದ ವಿರುದ್ಧ ನಡೆದಿರುವ ಹೋರಾಟದ ಇತಿಹಾಸವು ಪೊಲೀಸ್ ಹಿಂಸೆ ಮತ್ತು ಲೈಂಗಿಕ ದೌರ್ಜನ್ಯದ ನಡುವಿನ ಆಳವಾದ ತೊಡಕುಗಳನ್ನು ತೋರಿಸುತ್ತದೆ. ಮಥುರಾ(1972) ಮತ್ತು ರಮೀಜಾ ಬೀ(1978), ಈ ಇಬ್ಬರು ಮಹಿಳೆಯರ ಮೇಲೆ ಪೊಲೀಸ್‌ ಬಂಧನದಲ್ಲಿ ನಡೆದ ಅತ್ಯಾಚಾರ(ಕಸ್ಟಡಿಯಲ್ ರೇಪ್)ದಿಂದಾಗಿ ರಾಷ್ಟ್ರವ್ಯಾಪಿ ನಡೆದ  ಲೈಂಗಿಕ ದೌರ್ಜನ್ಯದ ವಿರುದ್ಧದ ಮೊದಲ ಹೋರಾಟವು  ಕ್ರಿಮಿನಲ್ ಕಾನೂನು (ತಿದ್ದುಪಡಿ) ಕಾಯ್ದೆ, 1983 ರ ಅಂಗೀಕಾರಕ್ಕೆ ಕಾರಣವಾಯಿತು. ಅತ್ಯಾಚಾರಕ್ಕೊಳಗಾದ ಈ ಇಬ್ಬರೂ ತಳಸಮುದಾಯಗಳ ಮಹಿಳೆಯರಾಗಿದ್ದರು.

ಕುನಾನ್ ಪೋಶ್‌ಪುರದಲ್ಲಿ (2004) ಭಾರತೀಯ ಭದ್ರತಾ ಪಡೆಗಳು ನಡೆಸಿದ ಸಾಮೂಹಿಕ ಅತ್ಯಾಚಾರಗಳು ಮತ್ತು, ಮಣಿಪುರದಲ್ಲಿ ಭದ್ರತಾ ಪಡೆಗಳು ಮನೋರಮರನ್ನು ಕ್ರೂರವಾಗಿ ಅತ್ಯಾಚಾರ ಮತ್ತು ಹತ್ಯೆ ಮಾಡಲಾದ ಪ್ರಕರಣಗಳು ಅನಿಯಂತ್ರಿತ ಪೊಲೀಸ್ ಶಕ್ತಿ ಮತ್ತು ಲೈಂಗಿಕ ದೌರ್ಜನ್ಯದ ನಡುವಿನ ಬಲವಾದ ಸಂಬಂಧವನ್ನು ತರುತ್ತದೆ. ಈ ಪ್ರಕರಣಗಳಲ್ಲಿ ತಳ ಸಮುದಾಯಗಳಾದ ದಲಿತರು, ಬುಡಕಟ್ಟು ಜನಾಂಗದವರು, ಮುಸ್ಲೀಮರು ಪೊಲೀಸರ ಅನೈತಿಕ ಹಿಂಸಾಚಾರವನ್ನು ಅನುಭವಿಸಿದ್ದಾರೆ. ಅದರಲ್ಲೂ  ವಿಶೇಷವಾಗಿ ಈ ಸಮುದಾಯಗಳ ಮಹಿಳೆಯರು ಹೆಚ್ಚು ಹಿಂಸೆಗೆ ಒಳಪಟ್ಟವರು ಎಂಬುದನ್ನು ಈ ಪ್ರಕರಣಗಳು ಬಲವಾಗಿ ತೋರಿಸುತ್ತವೆ.

ಲೈಂಗಿಕ ದೌರ್ಜನ್ಯವನ್ನು ಎದುರಿಸಲು ವ್ಯವಸ್ಥಿತ ಬದಲಾವಣೆಗಳ ಅಗತ್ಯವಿದೆ

ಕಾನೂನುಬಾಹಿರ ಹತ್ಯೆಗಳ ಹೊರತಾಗಿಯೂ, ರಾಜಕಾರಣಿಗಳು ಮತ್ತು ಸಾರ್ವಜನಿಕರು ತೆಲಂಗಾಣ ಪೊಲೀಸರನ್ನು “ನ್ಯಾಯಕ್ಕಾಗಿ” ಶ್ಲಾಘಿಸಲು ಮುಂದಾಗಿದ್ದಾರೆ. ಇದು ಅವರ ಚಮತ್ಕಾರದ ಪ್ರಯೋಜನಗಳನ್ನು ಪಡೆದುಕೊಳ್ಳುತ್ತವೆ. ಆದರೆ, ಇಂತಹ ಎನ್‌ಕೌಂಟರ್‌ಗಳಿಗೆ ದೊಡ್ಡ ಬಲಿಪಶುವಾಗುವುದು ನ್ಯಾಯ ವ್ಯವಸ್ಥೆ. ಅಲ್ಲದೆ ಪ್ರತಿಯೊಬ್ಬ ಸಂತ್ರಸ್ತರೂ ಅದರ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾರೆ.

ಎನ್‌ಕೌಂಟರ್‌ಗಳು, ಲಿಂಚಿಂಗ್ ಅಥವಾ ಮರಣದಂಡನೆಗಳ ಮೂಲಕ ಸಾರ್ವಜನಿಕ ಮನಸ್ಸಿನಲ್ಲಿ “ನೀತಿವಂತ ಹಿಂಸಾಚಾರ” ವನ್ನು ವೈಭವೀಕರಿಸುವುದು ಲೈಂಗಿಕ ದೌರ್ಜನ್ಯಕ್ಕೆ ಪರಿಹಾರಗಳನ್ನು ನೀಡುವುದಿಲ್ಲ. ಅತ್ಯಾಚಾರವು ಪಿತೃಪ್ರಭುತ್ವದ ನಿಯಂತ್ರಣ ಸಾಧನವಾಗಿದೆ ಮತ್ತು ರಕ್ಷಣಾಶೈಲಿಯ ಹಿಂಸಾಚಾರವು ಪಿತೃಪ್ರಭುತ್ವದ ವಿಷಕಾರಿ ಪುರುಷತ್ವ ಸಂಸ್ಕೃತಿಯನ್ನು ಮಾತ್ರ ಬಲಪಡಿಸುತ್ತದೆ. ಇದರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರು ನ್ಯಾಯ ಪಡೆಯುವುದು ಹೆಚ್ಚು ಕಷ್ಟಕರವಾದುದು. ಲೈಂಗಿಕ ಹಿಂಸೆಗಳ ನಿವಾರಣೆಗೆ ಮನಸ್ಥಿತಿ ಮತ್ತು ಸಂಸ್ಥೆಗಳಲ್ಲಿ ಸಮಗ್ರ ಮತ್ತು ರಚನಾತ್ಮಕ ಬದಲಾವಣೆಯ ಅಗತ್ಯವಿದೆ.

ಉನ್ನಾವೊ ಪ್ರಕರಣದಲ್ಲಿ ಬಲಿಯಾದವರ ದುರಂತ ಸಾವಿನಿಂದ ನಾವು ಏನನ್ನಾದರೂ ಕಲಿಯಲು ಸಾಧ್ಯವಾದರೆ, ಅದು ಸಮಗ್ರ ಸಾಕ್ಷಿ ಮತ್ತು ಬಲಿಪಶುಗಳನ್ನು ರಕ್ಷಿಸಿಕೊಳ್ಳುವ ಯೋಜನೆಯ ತುರ್ತು ಅಗತ್ಯವಾಗಿದೆ. ಲೈಂಗಿಕ ಅಪರಾಧಗಳ ಆರೋಪಿಗಳಿಗೆ ಜಾಮೀನು ನೀಡಲು ನಿರ್ಧರಿಸುವ ಮೊದಲು ವಯಸ್ಕ ಅತ್ಯಾಚಾರ ಸಂತ್ರಸ್ತರ ಅಭಿಪ್ರಾಯವನ್ನು ಪಡೆಯುವಂತಾಗಬೇಕು ಮತ್ತು ಸಂತ್ರಸ್ತೆಗೆ ಅಭಿಪ್ರಾಯ ಮಂಡಿಸುವ ಹಕ್ಕನ್ನು ನೀಡುವಂತಹ ಕಾನೂನು ಸುಧಾರಣೆಯ ಅಗತ್ಯವಿದೆ. ಹೆಚ್ಚು ತರಬೇತಿ ಪಡೆದ ಡಿಎನ್‌ಎ ತಜ್ಞರು ಮತ್ತು ಡಿಎನ್‌ಎ ಪರೀಕ್ಷಾ ಕೇಂದ್ರಗಳು ಬೇಕಾಗುತ್ತವೆ. ಸರ್ಕಾರವು ಸ್ತ್ರೀವಾದಿ ಕಾನೂನು ಸುಧಾರಣಾ ತಜ್ಞರ ಅಭಿಪ್ರಾಯವನ್ನು ಕೇಳಬೇಕು ಮತ್ತು ನ್ಯಾಯಾಂಗವನ್ನು ಬಲಪಡಿಸುವ ಸಲುವಾಗಿ ನ್ಯಾಯ ವಿತರಣಾ ವ್ಯವಸ್ಥೆಯಲ್ಲಿ ಸಮಯೋಚಿತ ಬದಲಾವಣೆಯನ್ನು ತರಬೇಕು.

ಕಾನೂನುಬಾಹಿರ ನ್ಯಾಯ ವ್ಯವಸ್ಥೆಯನ್ನು ಜಾರಿಗೊಳಿಸುವುದು ವ್ಯವಸ್ಥೆಯಲ್ಲಿನ ಪೊಲೀಸ್, ವಕೀಲರು, ಪ್ರಾಸಿಕ್ಯೂಟರ್‌ಗಳು ಅಥವಾ ನ್ಯಾಯಾಧೀಶರು – ಕಾನೂನು ಮತ್ತು ಸಂವಿಧಾನದ ಪ್ರಕಾರ ತಮ್ಮ ಪಾತ್ರವನ್ನು ನಿರ್ವಹಿಸದಂತೆ ತಡೆಯುತ್ತದೆ. ಸರಿಯಾದ ತನಿಖೆಯನ್ನು ಮಾಡದೆ ಆರೋಪಿಗಳನ್ನು ಅಥವಾ ಶಂಕಿತರನ್ನು ಕೊಲೆ ಮಾಡುವುದನ್ನು ಸಮ್ಮತಿಸುವುದು ತನಿಖೆಯನ್ನು ದಿಕ್ಕನ್ನು ಬದಲಿಸಲು ಪೊಲೀಸರಿಗೆ ಅವಕಾಶ ನೀಡಿದಂತಾಗುತ್ತದೆ. ಆ ಮೂಲಕ ನ್ಯಾಯ ವ್ಯವಸ್ಥೆಯನ್ನು ಮತ್ತಷ್ಟು ಹಾಳುಮಾಡಲು ನಾವು ಅನುಮತಿಸುತ್ತೇವೆ.

ಕಾನೂನಿನಡಿಯಲ್ಲಿ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಬೇಕು
ಎನ್ಕೌಂಟರ್ ಬಗ್ಗೆ ತನಿಖೆ ನಡೆಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನಿರ್ಧರಿಸಿದೆ. ತೆಲಂಗಾಣ ಹೈಕೋರ್ಟ್ ಕೂಡ ಎನ್‌ಕೌಂಟರ್ ಬಗ್ಗೆ ನ್ಯಾಯಾಂಗದ ಗಮನ ಸೆಳೆದಿದ್ದು, ನಾಲ್ವರು ಶಂಕಿತರ ಶವಗಳ ಮರಣೋತ್ತರ ಪರೀಕ್ಷೆಯ ವಿಡಿಯೋವನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸುವಂತೆ ಆದೇಶಿಸಿದೆ. ಡಿಸೆಂಬರ್ 9 ರಂದು ರಾತ್ರಿ 8 ಗಂಟೆಯವರೆಗೆ ಶವಗಳನ್ನು ಸಂರಕ್ಷಿಸಬೇಕೆಂದು ಹೈಕೋರ್ಟ್ ನಿರ್ದೇಶಿಸಿದೆ. ಹಾಗೂ ಎನ್ಕೌಂಟರ್ ಹತ್ಯೆಗಳ ವಿಚಾರಣೆ ಕೈಗೊಳ್ಳಲು ಸುಪ್ರೀಂ ಕೋರ್ಟ್‌ಗೆ ಪಿಐಎಲ್ ಸಲ್ಲಿಸಲಾಗಿದೆ.

ನ್ಯಾಯೋಚಿತವಲ್ಲದ ಹತ್ಯೆಗಳ ತನಿಖೆ ಕುರಿತ ಪಿಯುಸಿಎಲ್ ವರ್ಸಸ್ ಮಹಾರಾಷ್ಟ್ರ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ಮಾರ್ಗಸೂಚಿಗಳನ್ನು ಹೈದರಾಬಾದ್ ‘ಎನ್‌ಕೌಂಟರ್’ ನಲ್ಲಿ ನ್ಯಾಯಯುತವಾಗಿ ಅನುಸರಿಸಬೇಕಾಗಿದೆ. ‘ಎನ್‌ಕೌಂಟರ್‌’ನಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವುದು ಕಡ್ಡಾಯವಾಗಿದೆ. ನಂತರ ರಾಜ್ಯ ಸಿಐಡಿ ಅಥವಾ ಇತರ ಪೊಲೀಸ್‌ ಠಾಣೆಯ ಹಿರಿಯ ಅಧಿಕಾರಿಗಳ ನೇತೃತ್ವದ ತಂಡವು ಸ್ವತಂತ್ರ ತನಿಖೆ ನಡೆಸುತ್ತದೆ.

ಮ್ಯಾಜಿಸ್ಟ್ರೇಟ್ ತ್ವರಿತ ವಿಚಾರಣೆ ನಡೆಸಬೇಕು ಮತ್ತು ಎಲ್ಲಾ ಸಾಕ್ಷ್ಯಗಳನ್ನು ಸಂರಕ್ಷಿಸಬೇಕು. ಕಾನೂನು ಸಮರ್ಥನೆಯಿಲ್ಲದೆ ಗುಂಡು ಹಾರಿಸುವುದರಿಂದ ಆರೋಪಿಗಳ ಸಾವು ಸಂಭವಿಸಿದೆ ಎಂದು ಕಂಡುಬಂದಲ್ಲಿ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಮತ್ತು ಅವರಿಗೆ ಎನ್ಕೌಂಟರ್ ಮಾಡಲು ನಿರ್ದೇಶನ ನೀಡಿದವರ ವಿರುದ್ಧವೂ ಶಿಸ್ತು ಮತ್ತು ಕ್ರಿಮಿನಲ್ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಯಾರಿಗಾಗಿ ನ್ಯಾಯ?

ಸಾರ್ವಜನಿಕ ಮನೋಭಾವಕ್ಕೆ ತುತ್ತಾಗುವ ಮತ್ತು ವಿವಿಧ ಪ್ರಕರಣಗಳಿಗೆ ವಿವಿಧ ರೀತಿಯ ನ್ಯಾಯವನ್ನು ನೀಡುವ ಸರ್ಕಾರ ಅಥವಾ ವ್ಯವಸ್ಥೆಯು ಕಾನೂನಿನ ನಿಯಮ ಮತ್ತು ನಿಷ್ಪಕ್ಷಪಾತ ರಾಜ್ಯದ ಪರಿಕಲ್ಪನೆಯಿಂದ ದೂರವಿರುತ್ತದೆ. ಅತ್ಯಾಚಾರ ಪ್ರಕರಣದ ಆರೋಪಿಗಳು ಪ್ರಬಲರಾಗಿದ್ದಾಗ ಅಥವಾ ಬಲಿಪಶುಗಳು(ಸಂತ್ರಸ್ತರು) ತಳ ಸಮುದಾಯದವರಾಗಿದ್ದಾಗ ದೌರ್ಜನ್ಯಕ್ಕೊಳಗಾದವರು ಕಿರುಕುಳಕ್ಕೂ ಮತ್ತು ಮೌನಕ್ಕೂ ಒಳಗಾಗಬೇಕಾಗುತ್ತದೆ. ಈ ಸನ್ನಿವೇಶದಲ್ಲಿ ನಾವು ಕೇಳಲೇಬೇಕಾದದ್ದು: ಯಾವುದೇ ತನಿಖೆ ಅಥವಾ ನ್ಯಾಯಾಂಗ ಪ್ರಕ್ರಿಯೆಯಿಲ್ಲದೆ ಕೊಲ್ಲಲು ಪೊಲೀಸರು ಮತ್ತು ಅವರ ರಾಜಕೀಯ ನಾಯಕರು ಮುಕ್ತ ಆಡಳಿತವನ್ನು ಹೊಂದಿರುವ ಜಗತ್ತು ನಿಜವಾಗಿಯೂ ಎಲ್ಲ ಮಹಿಳೆಯರಿಗೆ ಸ್ವಾತಂತ್ರ್ಯ ದೊರಕುವ ರಾಮರಾಜ್ಯವೇ? ಎಂದು.

ಕೃಪೆ: ದಿ ಕ್ವಿಂಟ್‌

ಅನುವಾದ: ಸೋಮಶೇಖರ್‌ ಚಲ್ಯ

ವುಮೆನ್ ಇನ್ ಕ್ರಿಮಿನಲ್ ಲಾ ಅಸೋಸಿಯೇಷನ್ (ಡಬ್ಲ್ಯುಸಿಎಲ್ಎ),

(ಅಪರಾಧ ಮೊಕದ್ದಮೆಯಲ್ಲಿರುವ ಮಹಿಳೆಯರ ಸಹಯೋಗದ ಸಂಘವಾಗಿದ್ದು, ಅದು ಜ್ಞಾನವನ್ನು ಹಂಚಿಕೊಳ್ಳಲು, ಕೌಶಲ್ಯವನ್ನು ಬೆಳೆಸಲು ಮತ್ತು ಅಂತರ್ಗತ ವೃತ್ತಿಪರ ಸಂಪರ್ಕಗಳನ್ನು ಗಟ್ಟಿಗೊಳಿಸುವ ಉದ್ದೇಶದಿಂದ ರಚನೆಯಾಗಿದೆ.)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...