ಮೋದಿ ಗೆಲುವು ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೂ ಇದು ಕೆಟ್ಟ ಸುದ್ದಿ : ದಿ ಗಾರ್ಡಿಯನ್

ಮೋದಿ ಗೆಲುವಿನಿಂದ ಭಾರತದ ಆತ್ಮ 'ಕರಾಳ ರಾಜಕೀಯ'ಕ್ಕೆ ಸೋತಿದೆ ಎಂದ 'ಗಾರ್ಡಿಯನ್' ಸಂಪಾದಕೀಯ!

ಕೃಪೆ: (ದಿ ಸ್ಕ್ರೋಲ್)

ಅನುವಾದ: ನಿಖಿಲ್ ಕೋಲ್ಪೆ

ನರೇಂದ್ರ ಮೋದಿ ಪುನರಾಯ್ಕೆಯನ್ನು ಪಾಶ್ಚಾತ್ಯ ಮಾಧ್ಯಮಗಳು ಹೊಗಳಿವೆ ಎಂದು ಭಾರತೀಯ ಹೊಗಳುಭಟ ಮಾಧ್ಯಮಗಳು ಬೂಸಿ ಬಿಡುತ್ತಿರುವಂತೆಯೇ ಪ್ರಮುಖ ಪತ್ರಿಕೆಗಳಾದ ‘ಗಾರ್ಡಿಯನ್’ ಮತ್ತು ನ್ಯೂಯಾರ್ಕ್ ಟೈಮ್ಸ್’ ಮೋದಿಗೆ ಮಂಗಳಾರತಿ ಮಾಡಿವೆ.

ರಾಷ್ಟ್ರೀಯ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ಗೆಲುವು ಭಾರತದ ಆತ್ಮವು “ಕರಾಳ ರಾಜಕೀಯಕ್ಕೆ ಸೋಲುವುದನ್ನು” ಕಾಣಲಿದೆ ಮತ್ತು  ಭಾರತಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೂ ಇದು ಕೆಟ್ಟ ಸುದ್ದಿ ಎಂದು ಬ್ರಿಟಿಶ್ ಪತ್ರಿಕೆ ‘ದಿ ಗಾರ್ಡಿಯನ್’ ತನ್ನ ಸಂಪಾದಕೀಯದಲ್ಲಿ ಹೇಳಿದೆ. ಮೋದಿ “ಸ್ವತಂತ್ರ ಭಾರತದ ಅತ್ಯಂತ ಅಮೂಲ್ಯ ಮುಖವಾದ ಕ್ರಿಯಾಶೀಲ ಬಹುಪಕ್ಷೀಯ ಪ್ರಜಾಪ್ರಭುತ್ವ”ಕ್ಕೆ ಬೆದರಿಕೆ ಒಡ್ಡಿದ್ದರು ಎಂದು ಸಂಪಾದಕೀಯ ಹೇಳಿದೆ.

ಪತ್ರಿಕೆಯು ತನ್ನ ಟೀಕೆಯಲ್ಲಿ ಮೋದಿಯನ್ನು “ವಿಭಾಜಕ ವ್ಯಕ್ತಿ” ಆದರೆ, “ಸಂಶಯಾತೀತವಾಗಿ ಪ್ರಭಾವಿ ಪ್ರಚಾರಕ”ಎಂದು ಬಣ್ಣಿಸಿದ್ದು, ಅವರು “ಭಯಾನಕವಾದ ಪರಿಣಾಮದೊಂದಿಗೆ ಸುಳ್ಳು ದಾವೆಗಳನ್ನು ಮತ್ತು ಪಕ್ಷಪಾತದ ವಾಸ್ತವಾಂಶಗಳನ್ನು ಬಳಸಿದರು” ಎಂದು ಗುರುತಿಸಿದೆ.

ಆತನನ್ನು ಸೋಲಿಸುವುದು ಹೇಗೆ ಎಂಬ ಬಗ್ಗೆ ಕಾಂಗ್ರೆಸ್ ಮತ್ತು ಗಾಂಧಿ-ನೆಹರೂ ಕುಟುಂಬ ಗಂಭೀರವಾದ ಮರುಚಿಂತನೆ ನಡೆಸಬೇಕಾಗಬಹುದು ಎಂದು ಸಂಪಾದಕೀಯ ಅಭಿಪ್ರಾಯಪಟ್ಟಿದೆ.

ಮೋದಿಯು ಭಾಗವಾಗಿರುವ ಹಿಂದೂ ರಾಷ್ಟ್ರೀಯವಾದವು ತನ್ನ ಮೇಲ್ಜಾತಿ ಹಿಂದೂಗಳ ಮೇಲಿನ ಗಮನ, ಕಾರ್ಪೋರೇಟ್ ಪರ ಆರ್ಥಿಕ ಬೆಳವಣಿಗೆ, ಸಾಂಸ್ಕೃತಿಕ ಸಾಂಪ್ರದಾಯಿಕತೆ, “ತೀವ್ರಗೊಂಡ” ಹೆಣ್ಣಿನ ಮೇಲಿನ ಅಸಹಿಷ್ಣುತೆ ಮತ್ತು ದಬ್ಬಾಳಿಕೆ, “ಸರಕಾರಿ ಶಕ್ತಿಯ ಸಾಧನಗಳ ಮೇಲೆ ಬಲವಾದ ಹಿಡಿತ” ಇತ್ಯಾದಿಗಳಿಂದ ಭಾರತವನ್ನು ಇನ್ನಷ್ಟು ಕೆಟ್ಟ ಸ್ಥಿತಿಗೆ ತಳ್ಳಲಿದೆ ಎಂದು ಸಂಪಾದಕೀಯವು ಹೇಳಿದೆ.

ಭಾರತದ ಮುಸ್ಲಿಮರು “ರಾಜಕೀಯ ಅನಾಥ”ರಾಗಿರುವ ಬಗ್ಗೆ ಟಿಪ್ಪಣಿ ಮಾಡಿರುವ ಸಂಪಾದಕೀಯವು, ಸಂಸತ್ತಿನಲ್ಲಿ ಅವರ ಸ್ಥಾನಗಳ ಸಂಖ್ಯೆ ಕುಸಿಯುತ್ತಿರುವ ಬಗ್ಗೆ, ಅವರನ್ನು ಹೇಗೆ ಹಿಂದೂತ್ವವಾದವು ಎರಡನೇ ದರ್ಜೆಯ ಪ್ರಜೆಗಳಾಗಿ ಕಾಣುತ್ತಿದೆ ಎಂಬ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಈ ವರ್ಷದ ಆರಂಭದಲ್ಲಿ ಮೋದಿ ಸರಕಾರವು ಭಾರತ ಮತ್ತು ಪಾಕಿಸ್ತಾನವನ್ನು ಬೇಜವಾಬ್ದಾರಿಯಿಂದ ಯುದ್ಧದ ಅಂಚಿಗೆ ತಳ್ಳಿತ್ತು ಎಂದೂ ಅದು ಹೇಳಿದೆ.

ಭಾರತದಲ್ಲಿ ಭಾರಿ ಸಂಖ್ಯೆಯ ಜನರು ಸರ್ವಾಧಿಕಾರಿ ಆಡಳಿತದ ಪರವಾಗಿದ್ದಾರೆ ಎಂದು ತೋರಿಸಿರುವ 2017ರ ಸಮೀಕ್ಷೆಯೊಂದನ್ನು ಉಲ್ಲೇಖಿಸಿರುವ ಸಂಪಾದಕೀಯವು “ತತ್ತರಿಸುತ್ತಿರುವ ಆರ್ಥಿಕತೆ”ಯ ಹೊರತಾಗಿಯೂ ಮೋದಿಯ ವಿಜಯವು ಬಹುಶಃ ಅಚ್ಚರಿದಾಯಕವಲ್ಲ ಎಂದು ಹೇಳಿದೆ.

ಭಾರತೀಯ ಜನತಾ ಪಕ್ಷದ ಬಗ್ಗೆ ಟಿಪ್ಪಣಿ ಮಾಡಿರುವ ಅದು, “ಭಾರತವನ್ನು ರೂಪುಗೆಡಿಸಿರುವ ಭಾರೀ ಅಸಮಾನತೆ ಕುರಿತು ಬರೇ ಬಾಯ್ಮಾತನಷ್ಟೇ ಆಡುತ್ತಿದೆ” ಮತ್ತು ಭಾರತದ ಪಕ್ಷ ವ್ಯವಸ್ಥೆಯಲ್ಲಿರುವ ಜಾತಿ ಮತ್ತು ಧರ್ಮ ಸಂಘರ್ಷವು ಅದಕ್ಕೆ ಸರಿಯಾಗಿ ಹೊಂದಾಣಿಕೆಯಾಗುತ್ತಿದೆ ಎಂದು ಹೇಳಿದೆ.

ಇದೇ ಹೊತ್ತಿಗೆ ಪ್ರತಿಪಕ್ಷಗಳು ಸಮಭಾವದ ವೇದಿಕೆಯ ಮೂಲಕ ನಿರ್ದಿಷ್ಟವಾದ ಅಭಿಯಾನವನ್ನು ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿರುವ ಅದು, ಅಸ್ಮಿತೆ ಅಥವಾ ಗುರುತನ್ನಾಧರಿಸಿದ ಸ್ಪರ್ಧೆಗೆ ಬದಲಾಗಿ  “ಎಲ್ಲಾ ಭಾರತೀಯರಿಗೆ ಲಾಭವಾಗುವಂತಹ ರಾಜಕೀಯ ಸ್ಪರ್ಧೆಯಲ್ಲಿ” ತೊಡಗಬೇಕಾಗಿದೆ ಎಂದು ಹೇಳಿದೆ. “ಅದಕ್ಕೆ ಪಕ್ಷಗಳು ಭಾರತದ ಬಡಜನರಿಗೆ ಈಗಿರುವುದಕ್ಕಿಂತ ಹೆಚ್ಚು ಹತ್ತಿರವಾಗಬೇಕಾದ ಅಗತ್ಯವಿದೆ” ಎಂದೂ ಸಂಪಾದಕೀಯವು ಸಲಹೆ ಮಾಡಿದೆ.

‘ನ್ಯೂಯಾರ್ಕ್ ಟೈಮ್ಸ್’ ಲೇಖನ

‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಲ್ಲಿ ಬರೆದಿರುವ ಲೇಖನವೊಂದರಲ್ಲಿ ಪತ್ರಕರ್ತ ಪಂಕಜ್ ಮಿಶ್ರಾ ಅವರು, ಮೋದಿಯ “ಕಚ್ಚಾ ವಿವೇಕ”ದ ಪರಿಣಾಮವಾಗಿ ಭಾರತವು ಹೇಗೆ ಐದು ವರ್ಷಗಳ ಕಾಲ ನರಳಬೇಕಾಯಿತು ಎಂದು ಬಣ್ಣಿಸಿದ್ದಾರೆ ಮಾತ್ರವಲ್ಲ, ಆತನನ್ನು “ಅಪಾಯಕಾರಿಯಾಗುವಷ್ಟು ಅದಕ್ಷ” ಎಂದು ಕರೆದಿದ್ದಾರೆ. 

ಅಲ್ಪಸಂಖ್ಯಾತರು, ಕೆಳ ಜಾತಿಗಳ ಹಿಂದೂಗಳು, ಭಿನ್ನಮತ ಹೊಂದಿರುವ ಪತ್ರಕರ್ತರಿಗೆ ಇರುವ ಬೆದರಿಕೆಯ ಬಗ್ಗೆ ಬರೆದಿರುವ ಮಿಶ್ರಾ, ಮೋದಿಯ ಆಡಳಿತ ಕಾಲದಲ್ಲಿ ಭಾರತವು, ಕೇವಲ ಪ್ರಜಾಪ್ರಭುತ್ವದ ಸಂಸ್ಥೆಗಳು ಮತ್ತು ವಿಚಾರವಾದದ ಮೇಲೆ ಮಾತ್ರವಲ್ಲ; ಮಾನವೀಯ ಸಭ್ಯತೆಯ ಮೇಲೆಯೂ ಅಮಾನುಷ ಹಲ್ಲೆ ನಡೆದಿದೆ ಎಂದು ಹೇಳಿದ್ದಾರೆ.

‘ನರೇಂದ್ರ ಮೋದಿ ಅಸೂಯೆ ಮತ್ತು ದ್ವೇಷದ ಮೂಲಕ ಭಾರತವನ್ನು ಹೇಗೆ ವಂಚಿಸಿದರು’ ಎಂಬ ಶೀರ್ಷಿಕೆ ಇರುವ ಈ ಲೇಖನದಲ್ಲಿ ಮಿಶ್ರಾ, ಮತದಾರರು “ಈ ದುಃಸ್ವಪ್ನ”ವನ್ನು ಮುಂದುವರಿಸಲು ಬಯಸಿದ್ದಾರೆ ಎಂದು ಕಟಕಿಯಾಡಿದ್ದಾರೆ.

2014ರ ಚುನಾವಣೆಯ ವೇಳೆ ನೀಡಿದ ಭರವಸೆಗಳನ್ನು ಈಡೇರಿಸಲು ಮೋದಿ ಸಂಪೂರ್ಣವಾಗಿ ವಿಫಲವಾಗಿರುವುದನ್ನು ಪರಿಗಣಿಸಿದರೆ, ಆತನ ಅಭೇದ್ಯ ವರ್ಚಸ್ಸಿನ ಮೂಲ ಇನ್ನಷ್ಟು ನಿಗೂಢವಾಗಿ ಕಾಣಿಸುತ್ತದೆ ಎಂದು ಮಿಶ್ರಾ ಹೇಳಿದ್ದಾರೆ.

ಕಾರ್ಪೋರೇಟ್ ಒಡೆತನದ ಮಾಧ್ಯಮಗಳು “ಮೋದಿಯನ್ನು ಭಾರತದ ಸಂರಕ್ಷಕನೆಂದು ಜ್ವರಹಿಡಿದವರಂತೆ ಕಟ್ಟಿಕೊಟ್ಟವು” ಎಂದೂ ಮಿಶ್ರಾ ಹೇಳಿದ್ದಾರೆ.

2014ರಿಂದಲೂ ಆಕರ್ಷಕವಾದ ಕಟ್ಟುಕತೆಗಳನ್ನು ಹೇಳುವ ಮೋದಿಯ ಸಾಮರ್ಥ್ಯಕ್ಕೆ ಟ್ರೋಲ್ ಪ್ರಾಬಲ್ಯದ ಸಾಮಾಜಿಕ ಮಾಧ್ಯಮಗಳು, ಮತ್ತು ರಣಹದ್ದುಗಳಂತೆ ಇರುವ ಭಟ್ಟಂಗಿ ಮಾಧ್ಯಮಗಳು ಇನ್ನಷ್ಟು ಉಪ್ಪುಖಾರ ಹಚ್ಚಿದವು ಎಂದು ಹೇಳಿರುವ ‘ಏಜ್ ಆಫ್ ಏಂಗರ್’ ಪುಸ್ತಕ ಬರೆದಿರುವ ಲೇಖಕರು ಹೇಳಿದ್ದಾರೆ. ಚುನಾವಣಾ ಆಯೋಗವು “ನಾಚಿಕೆ ಇಲ್ಲದಷ್ಟು ಪಕ್ಷಪಾತಿಯಾಗಿತ್ತು”ಎಂದು ಪ್ರತಿಪಕ್ಷಗಳು ಹೇಳುವಾಗ, ನಿಜವನ್ನೇ ಹೇಳುತ್ತಿವೆ ಎಂದೂ ಮಿಶ್ರಾ ಹೇಳಿದ್ದಾರೆ.

ಮೋದಿ ಭಾರತದಲ್ಲಿ ಸ್ವಯಂ ಬೆಳೆದು ಬಂದಿದ್ದ ವಸಾತೋತ್ತರ ಆಡಳಿತದ ಬಗೆಗಿನ ದೀರ್ಘಕಾಲೀನ ಸಿಟ್ಟನ್ನು ಬಳಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ ಎಂದು ಹೇಳಿರುವ ಮಿಶ್ರಾ, ಸಮೃಧ್ಧ ಪಾಶ್ಚಾತ್ಯರ ಜೊತೆ ಸೇರಿಕೊಳ್ಳಲು ದಾಪುಗಾಲಿಟ್ಟಿರುವ ದೇವರಂತೆ ಕೈಗೆಟಕದ ಆಳುವ ವರ್ಗಗಳ ಜೊತೆಗೆ ಮಾತುಕತೆಗೆ ಹಿಂದಿನ ಸರಕಾರಗಳು ಯಾವುದೇ ದಾರಿಯನ್ನು ತೆರೆದಿಡದ ಪರಿಣಾಮವಾಗಿ ನಮ್ಮನ್ನು ಕ್ರೂರ ರೀತಿಯಿಂದ ಇತಿಹಾಸದಲ್ಲಿ ನಿಂತ ನೀರಾಗಿಸಿದಂತಾಗಿದೆ ಎಂದಿದ್ದಾರೆ.ಇದೇ ಹೊತ್ತಿಗೆ ವಿಡಂಬನೆಯನ್ನು ಆಧರಿಸಿದ ‘ದಿ ಓನಿಯನ್’ ವೆಬ್‌ಸೈಟ್ ಮೋದಿಯ ಚಿತ್ರವೊಂದನ್ನು ಪ್ರಕಟಿಸಿ, “ಜನಾಂಗೀಯವಾದಿ ಬಲಪಂಥೀಯ ಸರ್ವಾಧಿಕಾರಿಯೊಬ್ಬನನ್ನು ಆರಿಸುವ ಮೂಲಕ ಭಾರತವು ಪ್ರಥಮ ವಿಶ್ವ ಸ್ಥಾನದತ್ತ ಮುನ್ನುಗ್ಗುತ್ತಿದೆ”ಎಂದು ವ್ಯಂಗ್ಯವಾದ ಅಡಿಬರಹ ಪ್ರಕಟಿಸಿದೆ.

 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here