Homeಕರ್ನಾಟಕದಲಿತನೆಂಬ ಕಾರಣಕ್ಕೆ ಸಂಸದರಿಗೇ ಗೊಲ್ಲರಹಟ್ಟಿ ಗ್ರಾಮ ಪ್ರವೇಶಕ್ಕೆ ನಿರಾಕರಣೆ: ಎಲ್ಲೆಡೆ ತೀವ್ರ ಆಕ್ರೋಶ..

ದಲಿತನೆಂಬ ಕಾರಣಕ್ಕೆ ಸಂಸದರಿಗೇ ಗೊಲ್ಲರಹಟ್ಟಿ ಗ್ರಾಮ ಪ್ರವೇಶಕ್ಕೆ ನಿರಾಕರಣೆ: ಎಲ್ಲೆಡೆ ತೀವ್ರ ಆಕ್ರೋಶ..

- Advertisement -
- Advertisement -

ಚಿತ್ರದುರ್ಗದ ಸಂಸದರಾದ ಎ.ನಾರಾಯಣಸ್ವಾಮಿಯವರನ್ನು ದಲಿತರೆಂಬ ಕಾರಣಕ್ಕೆ ಪಾವಗಡದ ಪೆಮ್ಮನಹಳ್ಳಿಯ ಗೊಲ್ಲರಹಟ್ಟಿಯ ಪ್ರವೇಶ ನಿರಾಕರಿಸಿರುವ ಘಟನೆಗೆ ಎಲ್ಲೆಡೆ ತೀವ್ರ ಆಕ್ರೋಶ, ಟೀಕೆ ವ್ಯಕ್ತವಾಗಿದೆ. ಇದನ್ನು ಅಸ್ಪೃಶ್ಯತೆ ಅನ್ನದೇ ಮತ್ತೆ ಏನನ್ನಬೇಕು ಎಂದು ಜನ ತರಾಟೆಗೆ ತೆಗೆದುಕೊಂಡಿದ್ದಾರೆ.

ನಮ್ಮ ದೇಶದ ಪ್ರಜೆಗಳು ಜಾತಿಯ ವಿಚಾರದಲ್ಲಿ ಎಷ್ಟು ವಿಷ ರಕ್ತ ಹೊಂದಿದ್ದಾರೆ ಎಂಬುದನ್ನು ಸೂಚಿಸುತ್ತದೆ .
ಒಬ್ಬ ಸಂಸದರಿಗೆ ಗ್ರಾಮದ ಒಳಗೆ ಪ್ರವೇಶ ನಿರಾಕರಣೆ ಮಾಡಿದರೆ ಇನ್ನು ಸಾಮಾನ್ಯ ಪ್ರಜೆಗಳ ಸ್ಥಿತಿ ಹೇಗೆ ಊಹಿಸಲು ಸಾದ್ಯವಿಲ್ಲ !!! ಎಂದು ಹನುಮಂತ ನಂದಿಹಾಳ್ ರವರು ಪ್ರತಿಕ್ರಿಯಿಸಿದ್ದಾರೆ.

ವಿಕಾಸ್ ಆರ್.ಮೌರ್ಯ ರವರು ಫೇಸ್ ಬುಕ್ ನಲ್ಲಿ ಹೀಗೆ ಬರೆದಿದ್ದಾರೆ.

ಇದಕ್ಕೇ #ಪೂನಾ_ಪ್ಯಾಕ್ಟ್ ದಲಿತರ ಬದುಕನ್ನೇ ಕಿತ್ತುಕೊಂಡಿತು ಎನ್ನುವುದು

ಸಂಸದ ನಾರಾಯಣಸ್ವಾಮಿಯವರನ್ನು ಗೊಲ್ಲರು ತಮ್ಮ ಹಟ್ಟಿಗೆ ಬಿಟ್ಟುಕೊಳ್ಳದೆ ಸಂಸದರು ಅಂಗಲಾಚಿದರೂ ಒಪ್ಪದೇ ಹಟ್ಟಿಯಿಂದ ಹೊರಗೇ ಎಲ್ಲವನ್ನು ವಿಚಾರಿಸಿ ಅಟ್ಟಿದ್ದಾರೆ. ಸಂವಿಧಾನದ ಕಲಂ 17 ಅಸ್ಪೃಶ್ಯತೆ ನಿಷೇಧಿಸಲಾಗಿದೆ ಎನ್ನುತ್ತದೆ. ಆದರೆ ಈ ಘಟನೆಯಲ್ಲಿ ಕಾನೂನು ನಯಾಪೈಸೆಯ ಕೆಲಸ ಮಾಡಿಲ್ಲ, ಮಾಡಲ್ಲ. ಇದು ನಿಜ ಭಾರತದ ಸ್ಥಿತಿ. ಇರಲಿ. ಇಲ್ಲಿ ಸಂಸದರು ಆ ಅಮಾನವೀಯ ಜನರ ವಿರುದ್ಧ ಕ್ರಮ ಏಕೆ ಕೈಗೊಳ್ಳಲಿಲ್ಲ? ಅದಕ್ಕೆ ಕಾರಣ ಅವರೇ ಹೇಳಿದ್ದಾರೆ. ಶೇ. 80 ಗೊಲ್ಲ ಸಮುದಾಯ ಅವರಿಗೆ ಮತ ನೀಡಿ ಗೆಲ್ಲಿಸಿದೆ. ಹೀಗಿರುವಾಗ ಸಂಸದರೇನಾದರೂ ಕಾನೂನು ರೀತಿಯ ಕ್ರಮ ಕೈಗೊಂಡರೆ ಮುಂದಿನ ಬಾರಿ ಅವರು ಸೋಲುವುದು ಖಚಿತ.

ಈ ಕಾರಣಕ್ಕಾಗಿಯೇ ಅಂಬೇಡ್ಕರರು 1933 ರ ಪೂನಾ ಒಪ್ಪಂದವನ್ನು ಕಂಠಮಟ್ಟ ವಿರೋಧಿಸಿದ್ದು. ಏಕೆಂದರೆ ದುಂಡು ಮೇಜಿನ ಸಭೆಯಲ್ಲಿ ದಲಿತರಿಗೆ ಎರಡು ಓಟು ನೀಡುವ ಹಕ್ಕು ಸಿಕ್ಕಿತ್ತು. ಆಂದರೆ ದಲಿತ ಮೀಸಲು ಕ್ಷೇತ್ರಗಳಲ್ಲಿ ದಲಿತರಿಂದ ದಲಿತರಿಗಾಗಿ ದಲಿತರಿಗೋಸ್ಕರ ಆರಿಸಿ ಬರುವ ದಲಿತರನ್ನು ಅಯ್ಕೆ ಮಾಡಲು ಒಂದು ಓಟು. ಅದೇ ಕ್ಷೇತ್ರದಲ್ಲಿ ದಲಿತೇತರರನ್ನು ಆಯ್ಕೆ ಮಾಡಲು ಒಂದು ಓಟು. ಇದನ್ನೇ ಪ್ರತ್ಯೇಕ ಮತಕ್ಷೇತ್ರವೆನ್ನುವರು. ಇವತ್ತು ಸಿಖ್ ಜನಾಂಗ ಬಲಿಷ್ಟವಾಗಿರುವುದಕ್ಕೆ ಕಾರಣ ಅವರಿಗೆ ದಕ್ಕಿದ ಪ್ರತ್ಯೇಕ ಮತಕ್ಷೇತ್ರವೇ ಆಗಿದೆ. ಆದರೆ ಇದು ದಲಿತರಿಗೆ ಸಿಗಲಿಲ್ಲ. ಇದಕ್ಕೆ ನೇರವಾಗಿ ಗಾಂಧಿಯವರನ್ನು ನಾವು ಹೊಣೆ ಮಾಡುತ್ತೇವೆ. ಅದು ಸತ್ಯವಾದರೂ ಅವರಷ್ಟೇ ಹೊಣೆಗಾರರು ಅವರಿಗೆ ಬೇಷರತ್ ಬೆಂಬಲ ನೀಡಿದ ಅಖಿಲ ಭಾರತ ಹಿಂದೂ ಮಹಾಸಭಾ, ಸರ್ದಾರ್ ವಲ್ಲಭಬಾಯಿ ಪಟೇಲ್ ಹಾಗೂ ಗಾಂಧಿವಾದಿ ದಲಿತರು.

ಅಂಬೇಡ್ಕರರು ಜುಲೈ 1947 ರವರೆಗೂ ಹಾಗೂ ಸಂವಿಧಾನ ಸಭೆಯಲ್ಲೂ ಮತ್ತೆ ದಲಿತರಿಗೆ ಪ್ರತ್ಯೇಕ ಮತಕ್ಷೇತ್ರ ಸಿಗಬೇಕೆಂದು ಹೋರಾಡಿದರು. ಆದರೆ ಗಾಂಧಿವಾದಿ ದಲಿತರು ಹಾಗೂ ಕಾಂಗ್ರೆಸ್ ಅದನ್ನು ಕಂಠಮಟ್ಟ ವಿರೋಧಿಸಿ ಮೂಲೆಗುಂಪು ಮಾಡಿದರು. ಅವರ ಮುಂದೆ ಅಂಬೇಡ್ಕರ್ ಸೋಲೊಪ್ಪಲೇಬೇಕಾಯಿತು.

ಇಂದು ಯಾವುದೇ ದಲಿತ ಜನಪ್ರತಿನಿದಿ ಲೋಕಸಭೆಗೆ ಅಗಲೀ, ವಿಧಾನಸಭೆಗೆ ಆಗಲೀ ಆರಿಸಿ ಬರುತ್ತಿರುವುದು ದಲಿತೇತರರ ಓಟಿನಿಂದ. ದಲಿತರ ಓಟುಗಳಿಗೆ ಇಲ್ಲಿ ಬಿಡಿಗಾಸಿನ ಬೆಲೆಯಿಲ್ಲ. ಯಾವ ದಲಿತ ಅಥವಾ ಯಾವ ಜಾತಿಯ ದಲಿತ, ಶಾಸಕ ಅಥವಾ ಸಂಸದ ಆಗಬೇಕೆನ್ನುವುದನ್ನು ತೀರ್ಮಾನ ಮಾಡುವವರು ದಲಿತೇತರರೇ ಆಗಿರುವಾಗ ಯಾವ ದಲಿತ ರಾಜಕೀಯ ನಾಯಕ ತಾನೇ ದಲಿತೇತರರ ಓಟೆಂಬ ಭಿಕ್ಷೆಯ ವಿರುದ್ಧ ನಿಲ್ಲುತ್ತಾನೆ? ತನ್ನ ಸ್ವಾಭಿಮಾನವನ್ನು ತಾನೇ ಕೊಲೆ ಮಾಡಿಕೊಂಡು ಶಾಸಕ, ಸಂಸದನಾಗುತ್ತಾನೆ. ಅಷ್ಟೆ.

“ನನ್ನ ಮುತ್ತಾತಂದಿರು ಮತಾಂತರ ಆದದ್ದಕ್ಕೆ ಕಾರಣ ಇದು. ಅಂದು ಕೀಳು ಜಾತಿ ಅಂತ ಅವಮಾನಿಸಿದಿರಿ, ಇಂದು ದೇಶ ವಿರೋಧಿಗಳು ಅಂತ ಅನುಮಾನಿಸುತ್ತಿದ್ದೀರಿ” ಎಂದು ಅಬ್ದುಲ್ ಮುನೀರ್ ಪ್ರತಿಕ್ರಿಯಿಸಿದ್ದಾರೆ.

ಈ ಸಂಸದರಿಗೆ ದೇಶದ ಜ್ವಲಂತ ಸಮಸ್ಯೆ ಯಾವುದು ಎಂದು ಮನದಟ್ಟು ಮಾಡಿಕೊಟ್ಟ ಆ ಹಳ್ಳಿಗರಿಗೆ ವಂದನೆಗಳು. ಇನ್ನಾದರೂ ಅವರು ಸಂಸತ್ತಿನಲ್ಲಿ ಈ ಸಮಸ್ಯೆಯ ಬಗ್ಗೆ ದನಿ ಎತ್ತಬೇಕು. ಆಗಿಲ್ಲವೆಂದರೆ ಊರ ಹೊರಗೆ ಕುರ್ಚಿ ಹಾಕಿ ಕಾರ್ಯಕ್ರಮ ನಡೆಸಲಿ. ಅದೂ ಆಗಿಲ್ಲವೆಂದರೆ ರಾಜೀನಾಮೆ ನೀಡಿ ಹೋರಾಟಕ್ಕೆ ಮುಂದಾಗಲಿ ಎಂದು ಸಂತೋಷ್ ಗುಡ್ಡಿಯಂಗಡಿಯವರು ಪ್ರತಿಕ್ರಿಯಿಸಿದ್ದಾರೆ.

ಬೆಳಗ್ಗೆಯಿಂದ ಒಂದಷ್ಟು ಗೊಲ್ಲ ಸಮುದಾಯದ ಸ್ನೇಹಿತರು ಪೋನ್ ಮಾಡಿ ಸಂಸದರಿಗೆ ತಟ್ಟಿದ ಅಸ್ಪೃಶ್ಯತೆ ಬಗ್ಗೆ ತೀವ್ರ ಸಂಕಟ ಹೊರಹಾಕಿದರು..ಅರಿವು ,ಬದ್ದತೆ ಇರುವ ಆ ಸಮುದಾಯದ ಗೆಳೆಯರೊಂದಿಗೆ ನಾವೆಲ್ಲರೂ ಸೇರಿ ಜಾಗೃತಿ ಮೂಡಿಸುವ ಅಥವಾ ಮನಸ್ಸು ಗಳನ್ನ ಪರಿವರ್ತಿಸುವ ಕೆಲಸ ಈ ಕ್ಷಣದ ತುರ್ತು…
ಶಿಕ್ಷೆಯಿಂದ ಎಲ್ಲಾ ಬದಲಾಗುವಂತಿದ್ದರೆ ಹೆಚ್ಚೂಕಮ್ಮಿ ಮೌಡ್ಯ ಇರುವ ಎಲ್ಲಾ ಗೊಲ್ಲರಟ್ಟಿಯವರ ಮೇಲೆ ಎರಡೂ ದಲಿತ ದೌರ್ಜನ್ಯ ಪ್ರಕರಣಗಳು ದಾಖಲಗುತ್ತಿದ್ದವು .
ಹಟ್ಟಿಗಳ ಪರಿವರ್ತನೆ ಗೆ ಇದು ರೈಟ್ ಟೈಮ್ ಎಂದು ಕೊಟ್ಟ ಶಂಕರ್ ರವರು ತಿಳಿಸಿದ್ದಾರೆ.

ಈ ವಿಚಾರ ಪತ್ರಿಕೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಕೂಡಲೇ ಗೊಲ್ಲರಹಟ್ಟಿಯ ಜನ ಎಚ್ಚೆತ್ತುಕೊಂಡಿದ್ದಾರೆ. “ನಮ್ಮ ನಡವಳಿಕೆಗಳಿಂದ ಸಂಸದರಿಗೆ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ, ನೀವು ಮತ್ತೊಮ್ಮೆ ನಮ್ಮ ಹಟ್ಟಿಗೆ ಬಂದು ನಮ್ಮ ಸಮಸ್ಯೆ ಆಲಿಸಿ, ನಮಗೆಲ್ಲಾ ಮನೆ ಕಟ್ಟಿಕೊಡಿ” ಎಂದು ಮನವಿ ಮಾಡಿದ್ದಾರೆ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...