ವಿಮರ್ಶಾತ್ಮಕ ಯೋಚನೆಯ ಜೊತೆಗೆ ಸೃಜನಾತ್ಮಕ ಲಹರಿ ಇದ್ದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಖಚಿತ

| ಜಿ. ಆರ್. ವಿದ್ಯಾರಣ್ಯ |

ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಲು ನಮಗೆ ಎರಡು ವಿಧವಾದ ಯೋಚನಾಲಹರಿಯ ಅವಶ್ಯಕತೆ ಇರುತ್ತದೆ. ಮೊದಲನೆಯದು ವಿಮರ್ಶಾತ್ಮಕ ಯೋಚನೆ (ಕ್ರಿಟಿಕಲ್ ಥಿಂಕಿಂಗ್), ಎರಡನೆಯದು ಸೃಜನಾತ್ಮಕ ಯೋಚನೆ (ಕ್ರಿಯೇಟಿವ್ ಥಿಂಕಿಂಗ್). ವಿಮರ್ಶಾತ್ಮಕ ಯೋಚನೆ ನಮ್ಮ ಬುದ್ಧಿಮಟ್ಟ, ತರಬೇತಿ, ಕಟ್ಟುಪಾಡು, ಪರಂಪರೆ ಇವುಗಳನ್ನು ಅವಲಂಬಿಸಿದ್ದು, ಮುಖ್ಯವಾಗಿ ಒಂದೇ ರೀತಿಯಲ್ಲಿ,ಹಾಕಿದ ಹಾದಿಯಲ್ಲೇಸಾಗುತ್ತದೆ. ದಿನನಿತ್ಯದ ಕೆಲಸಕ್ಕೆ ನಾವು ಇದನ್ನು ಬಳಸುತ್ತೇವೆ. ಸರಿಯಾಗಿ ಮಾಡುತ್ತಿರುವ ಕೆಲಸವನ್ನೇ ಇನ್ನೊಂದು ವಿಧವಾಗಿ ಮಾಡಬಹುದೇ ಎಂದು ಯೋಚಿಸಲೂ ಸಹ ನಾವು ಹೆಚ್ಚಾಗಿ ಪ್ರಯತ್ನ ಪಡುವುದಿಲ್ಲ. ಅನಿರೀಕ್ಷಿತ ಸಮಸ್ಯೆಯೊಂದು ಉದ್ಭವಿಸಿದಾಗ ಅದರ ಪರಿಹಾರಕ್ಕೂನಮ್ಮ ಸಾಧಾರಣ ವಿಮರ್ಶಾತ್ಮಕ ಯೋಚನೆಯನ್ನೇ ಬಳಸುತ್ತೇವೆಯೇ ಹೊರತು, ಇದನ್ನು ವಿಭಿನ್ನವಾಗಿ ಯೋಚಿಸಿ ಪರಿಹರಿಸಬಹುದೇ ಎಂದು ಚಿಂತಿಸುವುದಿಲ್ಲ.

ಹಾಗಾದರೆ ನಾವು ಸೃಜನಾತ್ಮಕವಾಗಿ ಯೋಚಿಸುವುದು ಯಾವಾಗ? ಹೆಚ್ಚಾಗಿ ಸೃಜನಾತ್ಮಕ ಯೋಚನೆಗಳು ನಾವು ಸಮಸ್ಯೆಯ ಬಗ್ಗೆ ಯೋಚಿಸದೇ ಇರುವಂತಹ ಸಮಯದಲ್ಲಿ ದಿಢೀರನೇ ಹೊಳೆದವುಗಳಾಗಿರುತ್ತವೆ. ಇದನ್ನು ಮೆದುಳಿನ ಬಲಬದಿಯ ಯೋಚನೆ ಎಂದೂ ಹೇಳುತ್ತಾರೆ. ಈ ಮಿಂಚಿನಂತಹ ಉಪಯುಕ್ತ ಯೋಚನೆಗಳು ತಾವಾಗಿಯೇ ಬರಬೇಕೇ ಅಥವಾ ಅವನ್ನು ನಮಗೆ ಬೇಕಾದ ಸಮಯದಲ್ಲಿ ಹೊಳೆಯುವಂತೆ ಮಾಡಬಹುದೇ? ನಮ್ಮ ಎಲ್ಲಾ ಯೋಚನೆಗಳು ವಿಮರ್ಶಾತ್ಮಕವಾಗಿರುವುದಿಲ್ಲ ಎಂದ ಮಾತ್ರಕ್ಕೆ ಅವು ಸೃಜನಾತ್ಮಕವಾಗಿರುತ್ತವೆ ಎಂದೂ ಇಲ್ಲ. ತಲೆಯ ಗಾಲಿಗಳು ಅವಿರತವಾಗಿ ಸುತ್ತುತ್ತಿರುವಾಗ ಕೆಲವು ಮೂರ್ಖತನದ ಯೋಚನೆಗಳಾದರೆ, ಕೆಲವು ವಿಮರ್ಶಾತ್ಮಕ ಮತ್ತು ಒಂದೋ-ಎರಡೋ ಸೃಜನಾತ್ಮಕವಾಗಿರಬಹುದು. ಇದಕ್ಕೆ ಮುಖ್ಯ ಕಾರಣ ನಾವು ಕೇವಲ ಸಮಸ್ಯೆಯನ್ನು ಎರಡೇ ಆಯಾಮದ ಚೌಕಟ್ಟಿನಲ್ಲಿ ನೋಡುತ್ತಿರುತ್ತೇವೆ. ಹಾಗಾದರೆ ನಾವು ತ್ರಿ-ಪರಿಮಾಣ (3-ಡೈಮೆನ್ಷನ್) ನಲ್ಲಿ ಯೋಚಿಸಲು ಸಾಧ್ಯವೇ?

ಮೇಲಿನ ಚಿತ್ರ ನೋಡಿ. ಇದರಲ್ಲಿ ಮೂರು ಬೆಂಕಿಕಡ್ದಿಗಳನ್ನು ಜೋಡಿಸಿ ಒಂದು ತ್ರಿಕೋನ (ತ್ರಿಭುಜ) ನಿರ್ಮಿಸಲಾಗಿದೆ. ಬದಿಯಲ್ಲಿರುವ ಮೂರು ಕಡ್ಡಿಗಳನ್ನು ಈ ತ್ರಿಕೋನಕ್ಕೆ ಸೇರಿಸಿ ಒಟ್ಟು ನಾಲ್ಕು ಸಮಭುಜ ತ್ರಿಕೋನ ನಿರ್ಮಿಸಲು ಸಾಧ್ಯವೇ, ಯೋಚಿಸಿ.

ಮೊದಲೇ ತಿಳಿಸಿದಂತೆ ನಮ್ಮ ಸಾಮಾನ್ಯ ವಿಮರ್ಶಾತ್ಮಕ ಯೋಚನಾಲಹರಿ ನಮ್ಮ ಬುದ್ಧಿಮಟ್ಟ, ತರಬೇತಿ, ಕಟ್ಟುಪಾಡು, ಪರಂಪರೆ ಇವುಗಳ ಚೌಕಟ್ಟಿನಲ್ಲಿ ಬಂಧಿತಗೊಂಡು,ಚೌಕಟ್ಟಿನ ಹೊರಗೆ (ಔಟ್ ಆಫ್ ದಿ ಬಾಕ್ಸ್) ಸೃಜನಾತ್ಮಕವಾಗಿ ಥಟ್ಟನೆ ಯೋಚಿಸಲು ಬಿಡುವುದಿಲ್ಲ.

ಕೆಳಗೆ ಚಿತ್ರದಲ್ಲಿ ಇರುವ ಬಣ್ಣ-ಬಣ್ಣದ ಇಟ್ಟಿಗೆಗಳ ಬಣ್ಣವನ್ನು ಮೇಲಿಂದ ಕೆಳಗೆ ಗಟ್ಟಿಯಾಗಿ ಹೇಳುತ್ತಾ ಹೋಗಿ.

ಸುಲಭವಾಗಿ ಓದಿದಿರಿ, ಅಲ್ಲವೇ?

 

ಈಗ ಕೆಳಗೆ ಚಿತ್ರ-3 ರಲ್ಲಿರುವ ಬಣ್ಣಗಳ ಹೆಸರು ಹೇಳಿ (ಬಣ್ಣದ ಹೆಸರು, ಏನು ಬರೆದಿದೆ ಅದಲ್ಲ – ಮೊದಲನೆಯದು ತಿಳಿನೀಲಿ, ಕೆಂಪು ಅಲ್ಲ).

ನೋಡಿದಿರಾ, ನಮ್ಮ ಬುದ್ಧಿ ನಮಗೆ ಹೇಗೆ ಮೋಸ ಮಾಡುತ್ತದೆ ಎಂದು. ಈ ರೀತಿಯ ಬುದ್ಧಿ ವರ್ಧಕ ವ್ಯಾಯಾಮಗಳಿಂದ ನಮ್ಮ ಯೋಚನಾಲಹರಿಯನ್ನು ಬೇಕೆಂದಾಗ ಸೃಜನಾತ್ಮಕವಾಗಿ ಬಳಸಿಕೊಳ್ಳಲು ಸಾಧ್ಯವಿದೆ. ಇದಕ್ಕೆ ಸಾಕಷ್ಟು ಪರಿಶ್ರಮ ಬೇಕು. ಒಂದೇ ದಿನದಲ್ಲಿ ಆಗುವ ಕೆಲಸವಲ್ಲ.

ಈಗ ಮತ್ತೆ ಬೆಂಕಿ ಕಡ್ಡಿಯ ಸಮಸ್ಯೆಗೆ ಬರೋಣ. ನಿಮ್ಮ ಯೋಚನಾಲಹರಿ ವಿಮರ್ಶಾತ್ಮಕವಾಗಿದ್ದಲ್ಲಿ ನಿಮ್ಮ ಉತ್ತರ ಬಹುಶಃ ಕೆಳಕಂಡ ಚಿತ್ರ-4 ರಂತೆ ಇರಬಹುದು.

ಆದರೆ ಉತ್ತರ ತಪ್ಪು ಏಕೆಂದರೆ ಕಡ್ಡಿಗಳು ಒಂದೇ ಉದ್ದವಾಗಿರುವುದರಿಂದ ತ್ರಿಕೋನಗಳು ಸರಿಯಾಗಿ  ಸಮಭುಜ ತ್ರಿಕೋನವಾಗಿರುವುದಿಲ್ಲ.

ಆದರೆ ನಿಮ್ಮ ಯೋಚನಾಲಹರಿ ತ್ರಿಪರಿಣಾಮ (3-ಡೈಮೆನ್ಷನಲ್) ಆಗಿದ್ದಲ್ಲಿ ನಿಮ್ಮ ಉತ್ತರ ಬಹುಶಃ ಚಿತ್ರ-5 ರಂತೆ ಕಾಣಬಹುದು. ಇದು ಸರಿಯಾದ  ಉತ್ತರ.

ಸೃಜನಾತ್ಮಕ ಯೋಚನೆ ಪ್ರತಿ ಬಾರಿ ಸರಿಯಾಗಿರಲೇಬೇಕು ಎಂದೇನಿಲ್ಲ, ಹಾಗಾಗಿ ಉತ್ತರ ಚಿತ್ರ-6 ರಂತೆಯೂ ಇರಬಹುದು.ಉತ್ತರ ಸರಿ ಎಂದು ಎಲ್ಲರಿಗೂ ಅನಿಸದಿದ್ದರೂಸಹ ಇದು ಸಮರ್ಪಕ ಉತ್ತರ.

ಇಂತಹ ಉತ್ತರಕ್ಕೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ದೊರೆಯುತ್ತದೆ. ಸೃಜನಾತ್ಮಕ ಯೋಚನಾಲಹರಿಯನ್ನು ಹೊಂದಿರುವ ಯುವಕರಿಗೆ ಕೆಲಸ ನೀಡಲು ಕಂಪನಿಗಳು ಹಾತೊರೆಯುತ್ತಿರುತ್ತವೆ. ನಮಗೆ ವಿಮರ್ಶಾತ್ಮಕ ಯೋಚನೆಯೂ ಬೇಕು ಆದರೆ ಸೃಜನಾತ್ಮಕ ಲಹರಿಯೂ ಇರಬೇಕು. ಎರಡನ್ನು ಸಮರ್ಪಕವಾಗಿ ಬಳಸಿಕೊಂಡಾಗ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಸುಲಭವಾಗುತ್ತದೆ.

ನೀವೂ ಸಹ ಹೀಗೆ ಬೇಕೆಂದಾಗ ಸೃಜನಾತ್ಮಕವಾಗಿ ಯೋಚಿಸಲು ಕಲಿತಲ್ಲಿ, ನಿಮಗೆ ಕೆಲಸದ ಸಮಸ್ಯೆಯಾಗಲೀ, ನಿಮ್ಮ ಕಂಪನಿಯಲ್ಲಿ ಒಳ್ಳೆಯ ಸ್ಥಾನಮಾನಕ್ಕಾಗಲೀ ಎಂದೂ ತೊಂದರೆ ಇರುವುದಿಲ್ಲ. ಪ್ರಯತ್ನಿಸುತ್ತೀರಲ್ಲವೇ?

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here