Homeಕರ್ನಾಟಕಕತೆಗಳನ್ನು ಬಿಟ್ಟು ನಡೆದ ಕತೆಗಾರ ಡಾ.ಎಸ್.ಬಿ ಜೋಗುರ

ಕತೆಗಳನ್ನು ಬಿಟ್ಟು ನಡೆದ ಕತೆಗಾರ ಡಾ.ಎಸ್.ಬಿ ಜೋಗುರ

- Advertisement -
- Advertisement -

ಬುಧವಾರ, ಇಪ್ಪತ್ತೆಂಟನೆ ಆಗಸ್ಟ್, ಎರಡು ಸಾವಿರದಾ ಹತ್ತೊಂಭತ್ತು. ರಾತ್ರಿ ಒಂಭತ್ತೂವರೆ ಸುಮಾರಿಗೆ ನನ್ನ ಮೊಬೈಲ್‍ಗೆ ಒಂದು ಸಂದೇಶ ಬಂತು. ಅದನ್ನು ಓದಿ ನಾನು ಒಮ್ಮೆಲೆ ಆಘಾತಕ್ಕೊಳಗಾದೆ. ಆ ಸುದ್ದಿ ನನಗೊಬ್ಬನಿಗೆ ಮಾತ್ರ ಆಘಾತ ತಂದಿರಲಿಲ್ಲ. ಬದಲಾಗಿ ಅದು ನಾಡಿನ ಸಾವಿರಾರು ಓದುಗರು, ಗೆಳೆಯರು ಮತ್ತು ಸಹೃದಯರನ್ನು ಘಾಸಿಗೊಳಿಸುವಂತಹದಾಗಿತ್ತು. ಕತೆಗಾರ ಗೆಳೆಯ ಎಸ್.ಬಿ.ಜೋಗುರ ಇನ್ನಿಲ್ಲ ಎಂಬುದೆ ಆ ಸುದ್ದಿಯಾಗಿತ್ತು.

ಕೇವಲ ಐವತ್ತೊಂದು ವರ್ಷ ವಯಸ್ಸಿನ ಸ್ನೇಹಿತ ಹೀಗೆ ಏಕಾಏಕಿ ಹೊರಟುಬಿಟ್ಟಿದ್ದು ಅನೇಕರನ್ನು ದಿಗ್ಭ್ರಾಂತಗೊಳಿಸಿತು. ತುಂಬ ಲವಲವಿಕೆಯ, ಅಪಾರ ಜೀವನೋತ್ಸಾಹದ ಯುವ ಲೇಖಕನೊಬ್ಬನನ್ನು ಸಾವು ತನ್ನ ಸೆರಗಿನಲ್ಲಿ ಸುತ್ತಿಕೊಂಡು ನಡೆದಿತ್ತು. ಮಾರಕ ಕ್ಯಾನ್ಸರ್ ಕಾಯಿಲೆ ಅವರನ್ನು ಅವರಿಗೆ ಅರಿವಿಲ್ಲದಂತೆ ಆವರಿಸಿಕೊಂಡಿತ್ತು. ಈಗ ಸುಮಾರು ವರ್ಷದ ಹಿಂದೆ ಅವರು ಮೂತ್ರಪಿಂಡದಲ್ಲಿ ಹರಳು ಉಂಟಾಗಿದ್ದರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕ್ಯಾನ್ಸರ್ ಹರಡಬಾರದೆಂಬ ಮುನ್ನೆಚ್ಚರಿಕೆಗಾಗಿ ಕೃತಕ ಮೂತ್ರಚೀಲವನ್ನು ಅಳವಡಿಸಲಾಗಿತ್ತು. ಅಷ್ಟಾದರೂ ಅವರಿಗೆ ಆ ಸೋಂಕು ಹೇಗೆ ತಗುಲಿತು ಎಂಬುದು ಸೋಜಿಗ.

ಕಳೆದ ಐದಾರು ತಿಂಗಳುಗಳಿಂದ ಅವರು ತುಂಬ ಉತ್ಸಾಹದಿಂದ ಮತ್ತೆ ಬರವಣಿಗೆಯಲ್ಲಿ ತೊಡಗಿಕೊಂಡಿದ್ದರು ಮತ್ತು ಅನೇಕ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತ ಬಂದಿದ್ದರು. ಅನಾರೋಗ್ಯದ ಪೀರಿಯಡ್‍ನ್ನು ತಾನು ದಾಟಿ ಬಂದಿದ್ದೇನೆ ಎಂಬ ವಿಶ್ವಾಸದಿಂದಲೆ ಅವರು ಕಾಲೇಜಿನಲ್ಲಿ ತಮ್ಮ ಪಾಠಗಳ ಪೀರಿಯಡ್‍ಗಳನ್ನು ತೆಗೆದುಕೊಳ್ಳುತ್ತ ಬಂದಿದ್ದರು. ಆದರೆ ಅವರಿಗೆ ಗೊತ್ತಿಲ್ಲದಂತೆ ಹೊಂಚು ಹಾಕಿದ ಮರಣ ಅವರನ್ನು ಅಪಾರ ವಿದ್ಯಾರ್ಥಿಗಳಿಂದ ಮತ್ತು ಅಸಂಖ್ಯ ಸ್ನೇಹಿತರಿಂದ ಕಿತ್ತುಕೊಂಡಿತು.

ತಾನು ಸತ್ತುಗಿತ್ತೇನು ಎಂಬ ಭಾವದ ಲವಲೇಶವೂ ಅವರ ಮುಖದಲ್ಲಿ ಕಂಡದ್ದನ್ನು ಬಹುಶ: ಯಾರೂ ನೋಡಿಲ್ಲ. ಹೋದವರ್ಷದ ಅಲ್ಪಕಾಲದ ಅನಾರೋಗ್ಯದ ನಂತರ ಇನ್ನು ತಾನು ನಿರಾಳನಾದೆ ಎನ್ನುವ ಭಾವನೆಯೊಂದಿಗೆ ಅವರು ಹೊಸಬದುಕು ಕಟ್ಟಿಕೊಳ್ಳುತ್ತಿದ್ದರು. ಆದರೆ ಅಷ್ಟರಲ್ಲಿ ಪ್ರಾಯಶಃ ಎಂದೂ ತುಂಬಲಾರದ ಶೂನ್ಯವನ್ನು ತಮ್ಮ ಸ್ನೇಹಿತ ಮತ್ತು ಓದುಗವರ್ಗಕ್ಕೆ ಬಿಟ್ಟು ಅವರು ಆಚೆ ನಡೆದಿದ್ದಾರೆ. ಬೆನ್ನುನೋವು, ಮೈಕೈನೋವು ಎಂದು ತೋರಿಸಿಕೊಂಡು ಬರಲು ಅವರು ಆಸ್ಪತ್ರೆಗೆ ಹೋಗಿದ್ದರು. ಆದರೆ ಅಲ್ಲಿಯೆ ಒಳರೋಗಿಯಾಗಿ ಸೇರಿಕೊಂಡವರು ಸುಮಾರು ಇಪ್ಪತ್ತು ದಿನಗಳಲ್ಲಿ ಅವರು ಅಲ್ಲಿಂದ ಜೀವಂತವಾಗಿ ಹೊರಗೆ ಹೆಜ್ಜೆ ಇಡಲಿಲ್ಲ ಎನ್ನುವುದು ಯಾರಿಗಾದರೂ ಆಘಾತವನ್ನು ತರುವ ವಿಷಯವಾಗಿದೆ. ನಾಡಿನ ಹಲವಾರು ಸ್ಥಳಗಳಿಂದ ಅವರ ಈ ಹಠಾತ್ ಅಗಲುವಿಕೆಯನ್ನು ಸ್ಮರಿಸಿಕೊಂಡು ಕಂಬನಿಗರೆದಿದ್ದಾರೆ.

‘ನೀರಿನೊಳಗಣ ನಿರಾಳ’ ಎನ್ನುವ ಹೆಸರಿನ ಕಥಾಸಂಕಲನವೊಂದು ಅವರದಿದೆ. ಇನ್ನೂ ಒಳ್ಳೆಯ ಕತೆ ಬರೆಯಬೇಕು, ಇನ್ನೂ ಒಳ್ಳೆಯ ರೀತಿಯಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸಂಘಟನೆ ಮಾಡಬೇಕು ಎಂದು ಅವರು ಯಾವಾಗಲೂ ಯೋಚಿಸುತ್ತ ಮನಸ್ಸಿನ ನಿರಾಳತೆಯಿಂದ ದೂರವೆ ಇದ್ದರು. ಅಂದರೆ ಸದಾ ಸಾಹಿತ್ಯ, ಸಾಮಾಜಿಕ ನ್ಯಾಯ, ಓದು, ಚರ್ಚೆ ಇಂತಹವುಗಳ ಕಡೆ ಗಮನ ಕೊಡುತ್ತ ಸದಾ ಕೆಲಸದಲ್ಲಿ ಮಗ್ನರಾಗಿರುತ್ತಿದ್ದರು. ಕಾಲೇಜಿನ ತಮ್ಮ ಪಾಠ ಬೋಧನೆಗಳ ಜೊತೆಗೆ ಸಾಹಿತ್ಯವನ್ನು ಯಾವಾಗಲೂ ಉಸಿರಾಡುತ್ತಿದ್ದರು. ಅವರು ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ಆದರೆ ಯಾವುದೆ ಸಾಹಿತ್ಯ ಪ್ರಾಧ್ಯಾಪಕನಿಗಿಂತ ಅವರು ಕರಾರುವಾಕ್ಕಾಗಿ ಮಾತನಾಡಬಲ್ಲವರಾಗಿದ್ದರು.

‘ಮುಗ್ಗಲು ಮನಸಿನ ಪದರು’, `ಇರದೇ ತೋರುವ ಬಗೆ’, ‘ಬಣ್ಣದ ಹನಿಗಳು’ `ನೀರಿನೊಳಗಣ ನಿರಾಳ’, ‘ಮೆಚ್ಚುಗೆಯ ಕತೆಗಳು’ ಮುಂತಾದ ಕಥಾ ಸಂಕಲನಗಳಿಂದ ತಾವೊಬ್ಬ ಗಮನಿಸಬೇಕಾದ ಕಥೆಗಾರರೆಂದು ಜೋಗುರ ಅವರು ರುಜುವಾತು ಮಾಡಿ ಹೋದರು. ಜಾಗತೀಕರಣದ ಪರಿಣಾಮಗಳನ್ನು ಅವರು ಉದ್ದಕ್ಕೂ ತಮ್ಮ ಕಥೆಗಳಲ್ಲಿ ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ವೈಯಕ್ತಿಕ ಹಾಗೂ ಸಾಮಾಜಿಕ ನೆಲೆಯಲ್ಲಿ ಮಾನವೀಯ ಕಾಳಜಿಗಳನ್ನು ಹುಡುಕಹೊರಡುವ ಅವರು ಆಧುನಿಕ ಕಾಲವು ತಂದೊಡ್ಡಿರುವ ಸವಾಲುಗಳನ್ನು ಎದುರಿಸುವ ಕೆಲಸ ಮಾಡುತ್ತಾರೆ. ಸುಖ ಮತ್ತು ಲೋಲುಪತೆಯನ್ನು ಬೆಂಬತ್ತಿರುವ ಮನುಷ್ಯನು ಆದರ್ಶ ಹೇಳುತ್ತಲೆ ಸ್ವಾರ್ಥಿಯಾಗಿದ್ದಾನೆ ಎಂದು ಹೇಳುವ ಯತ್ನವನ್ನು ಅವರ ಕತೆಗಳು ಮಾಡುತ್ತವೆ. ನಮ್ಮಲ್ಲಿರುವ ಕಪಟತನ, ವಂಚನೆ, ಮೋಸ ಮುಂತಾದ ಅವಗುಣಗಳಿಗೆ ಕನ್ನಡಿ ಹಿಡಿಯುವ ಮೂಲಕ ಮನುಷ್ಯ ಅಳವಡಿಸಿಕೊಂಡಿರುವ ಗೋಸುಂಬೆ ಸ್ವಭಾವವನ್ನು ಜೋಗುರ ಚಿತ್ರಿಸಿದ್ದಾರೆ.

ಇತ್ತೀಚೆಗೆ ಶಿಕ್ಷಕರಾದವರು ಓದಿನಿಂದ ದೂರಾಗುತ್ತಿರುವುದರ ಬಗ್ಗೆ ಅವರು ತುಂಬ ಚಿಂತೆ ವ್ಯಕ್ತಪಡಿಸುತ್ತಿದ್ದರು. ಸಮಕಾಲೀನ ವಿಷಯಗಳು, ಇತ್ತೀಚೆಗೆ ಬಂದಿರುವ ಪುಸ್ತಕಗಳು, ದೇಶದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಕುರುಡಾಗಿ ಬರೀ ಇಪ್ಪತ್ತು ವರ್ಷಗಳಿಂದ ನಿಗದಿಯಾಗಿರುವ ಹಳೆಯ ಸಿಲ್ಯಾಬಸ್‍ನ್ನೆ ಮಾಸ್ತರರು ವಿದ್ಯಾರ್ಥಿಗಳಿಗೆ ಬೋಧಿಸುತ್ತಿರುವುದಕ್ಕೆ ಅವರು ವಿರುದ್ಧವಾಗಿದ್ದರು. ಅಂದರೆ ಕಾಲಕಾಲಕ್ಕೆ ನಮ್ಮ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಸಿಲ್ಯಾಬಸ್ ದೇಶವನ್ನು ರೂಪಿಸಿರುವ ತಾತ್ವಿಕ ಹಿನ್ನೆಲೆಯೊಂದಿಗೆ ನವೀಕರಣವಾಗಬೇಕು ಎಂದು ಅವರು ಹೇಳುತ್ತಿದ್ದರು. ಕೇವಲ ತಾವು ಕಲಿಸುವ ಪುಸ್ತಕವನ್ನು ಮಾತ್ರ ಓದುತ್ತ, ಹೊರಗಡೆ ಏನು ನಡೆಯುತ್ತಿದೆ ಎನ್ನುವುದರ ಅರಿವಿರದ ಎಷ್ಟೊ ಶಿಕ್ಷಕರ ಬಗ್ಗೆ ಅವರು ಅಸಹನೆ ತೋರಿಸುತ್ತಿದ್ದರು. ವಿದ್ಯಾರ್ಥಿಗಳಿಗೆ ಶಿಕ್ಷಕನಾದವನು ಯಾವಾಗಲೂ ಮಾದರಿಯಾಗಿರಬೇಕು ಎಂಬುದನ್ನು ತಾವೇ ಅಳವಡಿಸಿಕೊಂಡು ಸದಾ ಓದು ಮತ್ತು ಅಧ್ಯಯನದಲ್ಲಿ ನಿರತರಾಗಿದ್ದರು. ಅವರ ಕೆಲವು ಕತೆಗಳು ಕೂಡ ಅಂತಹ ವಿಷಯವನ್ನೆ ಕಥಾವಸ್ತುವನ್ನಾಗಿ ಹೊಂದಿರುವುದು ಸ್ವಾಭಾವಿಕವಾಗಿದೆ.

ಅವರ ಒಂದು ಕಥೆ ಪದೇ ಪದೇ ನನ್ನನ್ನು ಕಾಡುತ್ತಿದೆ. “ಆಂದೋಲನ ಹೆಸರಿನ ಪದವಿ ಕಾಲೇಜೊಂದರಲ್ಲಿ ಸಮಾಜಶಾಸ್ತ್ರ ವಿಷಯದ ಉಪನ್ಯಾಸಕನಾಗಿರುವ ಪ್ರೊಫೆಸರ್ ಸನಾತ್ ದ್ವಂದ್ವ ಮತ್ತು ಹೀನ ವ್ಯಕ್ತಿತ್ವಕ್ಕೆ ಉದಾಹರಣೆಯಾಗಿದ್ದಾನೆ. ಆತನ ಸ್ವಭಾವ ಹಾಗೂ ಗುಣಗಳನ್ನು ಹೀಗೆಯೆ ಎಂದು ಗುರುತಿಸಲಾಗದಷ್ಟು ಊಸರವಳ್ಳಿ ರೀತಿ-ನೀತಿಯನ್ನು ಆತ ರೂಢಿ ಮಾಡಿಕೊಂಡಿದ್ದಾನೆ. ಪ್ರಗತಿಪರ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸಿದಂತೆ ನಾಟಕ ಮಾಡುತ್ತ ಮಠದ ಸ್ವಾಮಿಯೊಬ್ಬನ ಜೊತೆ ರಹಸ್ಯ ವ್ಯವಹಾರವನ್ನು ನಡೆಸುತ್ತಿದ್ದಾನೆ. ಬಡ ಮತ್ತು ದಲಿತ ಹೆಣ್ಣು ಮಗಳೊಬ್ಬಳನ್ನು ದತ್ತು ತೆಗೆದುಕೊಂಡು ಓದಿಸುತ್ತೇನೆಂದು, ಅವಳ ಅಪ್ಪನಿಗೆ ಸಹಾಯ ಮಾಡುತ್ತೇನೆಂದು ಢೋಂಗಿ ಹೊಡೆಯುವ ಪ್ರೊಫೆಸರ್ ತನ್ನ ಕರಾಳ ಮುಖಗಳನ್ನು ಒಂದೊಂದಾಗಿ ಬಹಿರಂಗ ಮಾಡುತ್ತಾನೆ. ಸಮಾನತೆಯ ಬಗ್ಗೆ ತಾಸುಗಟ್ಟಲೆ ಭಾಷಣ ಬಿಗಿಯುವ ಅವನು ಮನೆಯಲ್ಲಿ ಮಾತ್ರ ಜಾತೀಯ ಹುಳು ಆಗಿದ್ದಾನೆ. ಅಸಹಾಯಕ ಪರಿಸ್ಥಿತಿಯ ಲಾಭ ಮಾಡಿಕೊಂಡು ಮಗಳಂತಿರುವ ಅನಾಥ ಹುಡುಗಿಯನ್ನು ಲೈಂಗಿಕವಾಗಿ ಶೋಷಿಸುತ್ತಾನೆ. ಸ್ವಾಮಿಯೂ ಈ ವಿಷಯದಲ್ಲಿ ಪ್ರೊಫೆಸರನಿಗೆ ಸಹಭಾಗಿಯಾಗಿದ್ದಾನೆ. ಆಂದೋಲನ ಹೆಸರಿನ ಕಾಲೇಜು ಈಗ ಚನ್ನಸ್ವಾಮಿ ಕಾಲೇಜು ಎಂದು ಬದಲಾಗಿದೆ.” ಆಂದೋಲನ, ಚಳುವಳಿ, ಸಮಾನತೆ ಮುಂತಾದ ಆದರ್ಶಗಳನ್ನು ಹೇಳುತ್ತ ಅದಕ್ಕೆ ತದ್ವಿರುದ್ಧವಾಗಿ ಬದುಕು ಸಾಗಿಸುವವರ ಒಳಹೊರಗನ್ನು ಈ ಕಥೆಯಲ್ಲಿ ವ್ಯಂಗಕ್ಕೀಡು ಮಾಡಲಾಗಿದೆ.

ಜೋಗುರ ಅವರು ವಿಜಾಪುರದ ಸಿಂದಗಿಯವರು. ಅವರಿಗೆ ತುಂಬ ಕರಗತವಾಗಿದ್ದ ಉತ್ತರ ಕರ್ನಾಟಕದ ಭಾಷೆ ಮತ್ತು ನುಡಿಗಟ್ಟುಗಳು ಅವರ ಕತೆಗಳನ್ನು ತುಂಬ ವಿಶೇಷವಾಗಿಸುತ್ತವೆ. ಎಷ್ಟೋ ಮರೆತುಹೋಗಿರುವ ಪದ, ನುಡಿಗಟ್ಟುಗಳನ್ನು ಅವರು ಲೀಲಾಜಾಲವಾಗಿ ಉಪಯೋಗಿಸುತ್ತಿದ್ದರು. ನಾನು ಅನೇಕ ಸಲ ಕೆಲವು ಸಂದೇಹಗಳಿಗಾಗಿ ಅವರಿಗೆ ಕರೆ ಮಾಡುತ್ತಿದ್ದೆ. `ರಿಕಾಮಿ ಲಚ್ಚಪ್ಪನೂ ಲೀಡರ್ ಸಿದ್ಧರಾಮನೂ’, `ಮತ್ಸ್ಯ ವೃತ್ತಾಂತ’, `ಊರು ಉರುಳಿದ ಪರಿ’, `ಎಕ್ಕಾಗಾಡಿ ಬಸಲಿಂಗನೂ ಕಾಲು ಮುರಿದ ಪ್ರಸಂಗವೂ’, `ಹೊಟ್ಟೆಗಿಳಿದ ಬೀಜವೂ ಹಿಂಗದ ಹಸಿವೂ’ ಮುಂತಾದ ಜೋಗುರ ಅವರ ಕಥೆಗಳು ವ್ಯಂಗ್ಯ, ತಮಾಷೆ ಹಾಗೂ ಚುಚ್ಚುವ ಬರವಣಿಗೆಯ ಗುಣಗಳಿಂದ ಗಮನ ಸೆಳೆಯುತ್ತವೆ. ರಿಕಾಮಿತನ ಅನ್ನುವುದು ವ್ಯಕ್ತಿಯನ್ನು ತನ್ಮೂಲಕ ಇಡೀ ವ್ಯವಸ್ಥೆಯನ್ನು ಹಾಳುಗೆಡವುತ್ತದೆಂಬುದೇ ಇಲ್ಲಿಯ ಕೆಲ ಕಥೆಗಳ ಕೇಂದ್ರವಾಗಿದೆ.

ಗ್ರಾಮೀಣ ತರುಣರ ಆತಂಕಕ್ಕೀಡಾದ ಬಾಳ್ವೆಯನ್ನು ಅವರ ಅನೇಕ ಕತೆಗಳಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ. ಜೋಗುರ ಅವರ ಸಮರ್ಥ ಭಾಷಾ ಬಳಕೆ ಹಾಗೂ ದೇಸಿ ನುಡಿಗಳು ನಮ್ಮ ಸಾಮಾಜಿಕ ದುರಂತವನ್ನು ಮತ್ತಷ್ಟು ಪರಿಣಾಮಕಾರಿಯನ್ನಾಗಿ ಮಾಡುತ್ತವೆ. ಅಪ್ಪನ ಜೊತೆ ಸೆಟಗೊಂಡು ಮನೆ ಬಿಟ್ಟು ಹೋಗಿರುವ ರಿಕಾಮಿ ಮಗನ ಬಗ್ಗೆ ಅಪ್ಪ ಹೀಗೆ ಹೇಳುತ್ತಾನೆ : “ಆ ಮಬೈಲ್ ಪಟ್ಟಂತ ಗ್ವಾಡಿಗಿ ಹೊಡದು, ಒಂದು ಹಗ್ಗಾ ಸುತಗೊಂಡು ಕಿಸೆದಾಗ ಇಟಗೊಂಡು ಬರ್ರಂತ ಹೋಗಿ ಬಿಟ್ಟ ನೋಡ್ರಿ. ಮಳ್ಳ ಹುಡುಗರು ಏನಾರೇ ಮಾಡಕೊಂಡಾವು ಅಂತ ಚಿಂತಿ ಆಗೈತಿ ನೋಡ್ರಿಯಪ”. ಆಧುನಿಕತೆಯನ್ನು ಪ್ರತಿಬಿಂಬಿಸುವ ಮೊಬೈಲ್ ಒಡೆದು ಬಿದ್ದಿದೆ. ನಗರ ಮತ್ತು ಹಳ್ಳಿಗಳು ಅಪಕ್ವ ಬೆಳವಣಿಗೆಗೆ ಈಡಾಗಿವೆ ಎಂಬುದನ್ನು ಕಥೆಗಾರರಿಗೆ ಹೇಳಬೇಕಾಗಿದೆ.

‘ನಾನು ಬೇಟೆಯ ಜೊತೆಗಿದ್ದೇನೆ. ಬೇಟೆಗಾರನ ಜೊತೆಯಲ್ಲ’ ಎಂಬುದು ಜಂಬಣ್ಣ ಅಮರಚಿಂತ ಅವರ ಕವಿತೆಯ ಒಂದು ಸಾಲು. ಶೋಷಿತರ ಪರವಾಗಿ ದನಿ ಎತ್ತಬೇಕಾದ ಜರೂರು ಎಲ್ಲ ಲೇಖಕರಿಗೂ ಇರಬೇಕು ಎಂಬುದನ್ನು ಹೇಳುವುದರ ಜೊತೆಗೆ ಶೋಷಿತರ ಮುಗಿಯಲಾರದ ಬವಣೆಯನ್ನೂ ಅದು ಹೇಳುತ್ತದೆ. ಜೋಗುರರ ಕಥೆಗಳಲ್ಲಿ ಇಂತಹ ಪ್ರತಿಭಟನೆಯ ಧ್ವನಿಯೊಂದನ್ನು ಕೇಳಬಹುದಾಗಿದೆ. ಪರೋಕ್ಷ ಬಂಡಾಯ ಮನೋಧರ್ಮದ ನೆಲೆಯೊಂದು ಅವರ ಕತೆಗಳಿಗೆ ಸಾಮಾಜಿಕ ಪ್ರಸ್ತುತತೆಯನ್ನು ತಂದುಕೊಡುತ್ತಿರುತ್ತದೆ.

ನಾಡಿನ ಗ್ರಾಮೀಣ ಪರಿಸರದಿಂದ ಎದ್ದು ಬರುವ ಅವರ ಬಹುತೇಕ ಕತಾಪಾತ್ರಗಳು ಓದುಗನನ್ನು ಆವರಿಸಿಕೊಂಡು ಬಿಡುವ ಶಕ್ತಿಯನ್ನು ಹೊಂದಿವೆ. ಇದು ಜೋಗುರ ಅವರಿಗೆ ಸಾಧ್ಯವಾಗಿರುವುದು ಅವರು ಬಳಸುವ ಜವಾರಿ ಭಾಷೆಯಿಂದ ಎಂದರೆ ತಪ್ಪಾಗಲಾರದು. ಹಳ್ಳಿಯಲ್ಲಿರುವ ಶೋಷಣೆಯನ್ನು, ರಿಕಾಮಿತನವನ್ನು ಹಾಗೂ ಸಜ್ಜನಿಕೆಯನ್ನು ಇನ್ನಿಲ್ಲದಂತೆ ಬರೆಯುವ ಜೋಗುರರು ವಾಸ್ತವ ಬರವಣಿಗೆಯ ಜೊತೆ ವ್ಯಂಗ್ಯ ಮತ್ತು ಸ್ವವಿಮರ್ಶೆಗಳನ್ನು ಜೋಡಿಸುತ್ತಾರೆ. ಜೋಗುರ ಅವರ ಕಥೆಗಳು ಗ್ರಾಮೀಣ ಭಾರತದ ಕಣ್ಣಂಚಿನ ನೀರ ಹನಿಗಳನ್ನು ದರ್ಶಿಸುವಲ್ಲಿ ನಿರತವಾಗಿವೆ. ಅಶಕ್ತ ಹಾಗೂ ಅಸಹಾಯಕರ ಬವಣೆಯನ್ನು ಹಿಡಿದಿಟ್ಟ ದೊಡ್ಡ ಕಥಾ ಪರಂಪರೆ ಕನ್ನಡದಲ್ಲಿದೆ. ಅದನ್ನು ಮುಂದುವರೆಸಿಕೊಂಡು ಹೋಗುವ ಪ್ರಯತ್ನದಲ್ಲಿ ಜೋಗುರ ತಮ್ಮದೆಯಾದ ವಿಶಿಷ್ಟತೆಯನ್ನು ನಮಗೆಲ್ಲ ಬಿಟ್ಟುಹೋಗಿದ್ದಾರೆ.

ಬರೀ ಗ್ರಾಮೀಣ ಪರಿಸರವನ್ನಷ್ಟೇ ಅಲ್ಲ ಹಲವು ಪ್ರದೇಶದ ವಸ್ತು-ವೈವಿಧ್ಯ ಅವರ ಕತೆಗಳಲ್ಲಿ ಕಾಣಸಿಗುತ್ತದೆ. ಅವರಿಗೆ ಇರುವ ಭಾಷೆಯ ಚಿತ್ರಕ ಶಕ್ತಿಯ ಜೊತೆಗೆ ಪಾತ್ರಗಳ ಒಡಲಿನಿಂದೇಳುವ ಸಂವೇದನಾಶೀಲತೆಯನ್ನು ಅವರ ಕತೆಗಳನ್ನು ಓದಿಯೇ ಸವಿಯಬೇಕು. ಅವರು ಎಲ್ಲೆಲ್ಲಿ ಕೆಲಸ ಮಾಡಿದರೋ ಅಲ್ಲೆಲ್ಲ ತಮ್ಮ ಛಾಪನ್ನು ಒತ್ತಿದರು. ಸಾಕಷ್ಟು ಸ್ನೇಹಿತರನ್ನು ಗಳಿಸಿದರು. ಗೆಳೆಯರಿಗಾಗಿ, ಸಾಹಿತ್ಯಕ್ಕಾಗಿ ಅವರು ಸರುಹೊತ್ತಿನಲ್ಲಿ ಎದ್ದುಕೂಡುತ್ತಿದ್ದರು. ಕೆಲವು ಸಲ ನಮ್ಮ ಚರ್ಚೆಗಳಲ್ಲಿ ಅವರು ಬಲುಬೇಗನೆ ಸಾವಿಗೀಡಾದವರ ಹಲವು ಪ್ರಸಿದ್ಧ ಲೇಖಕರ ಹೆಸರುಗಳನ್ನು ಎಳೆದು ತರುತ್ತಿದ್ದರು. ತಮಗೆ ಬಹಳ ವರ್ಷ ಬದುಕಬೇಕು ಎಂಬ ಆಸೆ ಇಲ್ಲವೆಂದು ಹೇಳಿದ ನೆನಪು. ಆ ಮಾತನ್ನು ನಿಜ ಮಾಡುವಂತೆ ಅವರು ಯಾರಿಗೂ ಕಿಂಚಿತ್ ಸುಳಿವು ಕೊಡದೆ ಎದ್ದು ನಡೆದರು. ಒಂದು ರೀತಿಯಲ್ಲಿ ಅವರ ಸಾವು ನಾಡಿನ ಅದರಲ್ಲೂ ವಿಶೇಷವಾಗಿ ಸಾಹಿತ್ಯ ಮತ್ತು ಸಾಂಸ್ಕøತಿಕ ವಾತಾವರಣಕ್ಕೆ ಒಂದು ನಿರ್ವಾತವನ್ನು ಸೃಷ್ಟಿಸಿರುವುದಂತೂ ಸತ್ಯವಾಗಿದೆ. ತಮ್ಮ ಮಾತು ಮತ್ತು ಬರಹಗಳಿಂದ ಅವರು ಯಾವಾಗಲೂ ಇತರರಿಗೆ ಪ್ರೇರಣೆಯಾಗಿ ತಮ್ಮ ನೆನಪನ್ನು ಬಿಟ್ಟುಹೋಗಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ನಾನು ಕೂಡ ಅವರ student, ಅವರ ಸಾಮಾಜಿಕ ಹೋರಾಟದಿಂದ ರೇರಿತರಾದವರು ನಾವು ಅವರ ಅಗಲಿಕೆ ಸಾಹಿತ್ಯ ಷೇತ್ರಕ್ಕ ತುಂಬಲಾರದ ನಷ್ಟ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...