ಬಿಜೆಪಿಯ ‘ಸಶಕ್ತ ಭಾರತ’ ಕೈಪಿಡಿ ಹೊರತು ಪ್ರಣಾಳಿಕೆಯಲ್ಲ

| ಚೈತ್ರಿಕಾ ನಾಯ್ಕ ಹರ್ಗಿ |

ಯಾವಾಗಲೂ ಆಡಳಿತ ಪಕ್ಷದ ಪ್ರಣಾಳಿಕೆ ಹೇಗಿರಬೇಕೆಂದರೆ, ಈಗಾಗಲೇ ಐದು ವರ್ಷ ಮಾಡಿದ ಕೆಲಸವನ್ನು ಪರಿಚಯಿಸಿ, ಇಷ್ಟನ್ನು ಪೂರೈಸಿದ್ದೇವೆ, ಇಷ್ಟು ಬಾಕಿ ಉಳಿದಿದೆ, ಇದು ಮುಂದಿನ ಅವಧಿಗೆ ನಮ್ಮ ಯೋಜನೆಗಳು ಎಂಬುದಾಗಿ ಪ್ರಸ್ತುತ ಮತ್ತು ಭವಿಷ್ಯತ್ತಿನ ಯೋಜನೆಯ ಮುನ್ನೋಟವನ್ನು ಜನರ ಮುಂದಿಟ್ಟು ಓಟು ಕೇಳಬೇಕು. ಹಾಗೆಯೇ ಪ್ರಣಾಳಿಕೆಯಲ್ಲಿ ಮುಂದಿನ ಯೋಜನೆಯ ಹಂಚಿಕೆ ಕುರಿತು ನಿರ್ದಿಷ್ಟ ಅಂಕಿ-ಅಂಶಗಳನ್ನು ನಮೂದಿಸಬೇಕಾಗುತ್ತದೆ. ಆದರೆ ಬಿಜೆಪಿ ಪ್ರಣಾಳಿಕೆಯಲ್ಲಿ ಎಲ್ಲವನ್ನೂ ಯಾದೃಚ್ಛಿಕವಾಗಿ ಹೇಳಲಾಗಿದೆ ಹೊರತು ಯಾವುದೂ ನಿಶ್ವಿತವಾಗಿ ಹೇಳಲಾಗಿಲ್ಲ.

ಬಿಜೆಪಿ ಸಂಕಲ್ಪ ಪತ್ರದಲ್ಲಿ ಪ್ರಸ್ತುತ ಪಡಿಸಿದ ಮುಖ್ಯಾಂಶಗಳನ್ನು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯೊಂದಿಗೆ ಹೋಲಿಸಿ ನೋಡುವುದಾದರೆ,
ಸೈನ್ಯ
ಭಯೋತ್ಪಾದನೆ ಮೇಲೆ ಶೂನ್ಯ ಸಹಿಷ್ಣುತೆ ಎಂಬುದು ಯಾವತ್ತೂ ಭಾರತ ಪಾಲಿಸಿಕೊಂಡ ಬಂದ ನಡೆಯಾದರೂ, ಬಿಜೆಪಿ ಓಟು ಸೆಳೆಯಲು ಕಿರುಚಿ ಹೇಳಬೇಕಾದುದ್ದು ಅವರ ಅಗತ್ಯ. ಆದರೆ ವಾಸ್ತವ ಏನೆಂದರೆ 2014-18 ರ ಬಜೆಟ್ ನಲ್ಲಿ ಮಿಲಿಟರಿ ಬಜೆಟನ್ನು ಬಿಜೆಪಿ ಕಡಿತಗೊಳಿಸಿತ್ತು. ಹಿಂದಿನ ಯುಪಿಎ ಸರ್ಕಾರ ಜಿಡಿಪಿಯ 26% ವನ್ನು ಮಿಲಿಟರಿ ಆಧುನೀಕರಣಕ್ಕೆ ನೀಡಿದ್ದರೆ, ಬಿಜೆಪಿಯು ಶೇ. 18% ಕ್ಕೆ ಇದನ್ನು ಕಡಿತಗೊಳಿಸಿತ್ತು. ಭಯೋತ್ಪಾದನೆ ವಿರುದ್ಧ ವಾಸ್ತವದಲ್ಲಿ ಹೋರಾಡುವ ಸೈನಿಕರ ಸಂಬಳ ಮತ್ತು ಸುರಕ್ಷತೆಯ ವೆಚ್ಚವನ್ನು ಕಡಿತಗೊಳಿಸಿ ಭಯೋತ್ಪಾದನೆ ವಿರುದ್ಧ ಮಾತನಾಡುವುದು ಓಟು ಗಿಟ್ಟಿಸುವ ತಂತ್ರವಷ್ಟೆ. ಬಿಜೆಪಿ ಸಂಕಲ್ಪ ಪತ್ರದಲ್ಲೂ ಸೈನಿಕರ ವೇತನ, ಆಧುನಿಕ ಯುದ್ಧಾಸ್ತ್ರ, ಸೈನಿಕರ ಸ್ಥಾನಮಾನದ ಬಗ್ಗೆ ಯಾವುದೇ ನಿರ್ದಿಷ್ಟತೆ ಇಲ್ಲ. ಆದರೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಇದರ ಬಗ್ಗೆ ನಿರ್ದಿಷ್ಟವಾಗಿ ನಮೂದಿಸಿದೆ. BSF CRPF ಈ ಸಿಬ್ಬಂದಿಗಳು ಹುತಾತ್ಮರಾದಾಗ ಅವರಿಗೆ ಶಹೀದ್ ಗೌರವ ನೀಡುವುದು, ಸಂಬಳ ಹೆಚ್ಚಿಸುವುದು, ಆಧುನಿಕ ಯುದ್ಧಾಸ್ತ್ರ ನೀಡುವುದು ಇತ್ಯಾದಿ.

ಉದ್ಯೋಗ ಸೃಷ್ಟಿ
ಹಿಂದಿನ ಬಾರಿ ಪ್ರಣಾಳಿಕೆಯಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಬಿಜೆಪಿ ಈಬಾರಿ ಉದ್ಯೋಗ ಸೃಷ್ಟಿಸುತ್ತೇವೆ ಎಂದಷ್ಟೆ ಹೇಳಿದೆ ಹೊರತು ಯಾವುದೇ ನಿರ್ದಿಷ್ಟ ಅಂಕಿಯನ್ನು ನಮೂದಿಸಿಲ್ಲ. ಇದು ಮುಂದೆ ಎದುರಾಗುವ ಪ್ರಶ್ನೆಯಿಂದ ನುಣುಚಿಕೊಳ್ಳುವ ತಂತ್ರ. ಡಿಮೊನಿಟೈಸೇಷನ್ ನಂತಹ ನಿರ್ಧಾರದಿಂದ 2018ರಲ್ಲಿ 11 ಮಿಲಿಯನ್ ಉದ್ಯೋಗ ನಾಶಕ್ಕೆ ಬಿಜೆಪಿ ಕಾರಣವಾಗಿತ್ತು. 45 ವರ್ಷಗಳ ಬಳಿಕ ನಿರುದ್ಯೋಗ ಪ್ರಮಾಣ ದರ ಅತ್ಯಂತ ಹೆಚ್ಚಾಗಿದ್ದು ಬಿಜೆಪಿ ಅಧಿಕಾರದಲ್ಲಿ. ಇಂತಹ ಜ್ವಲಂತ ಸಮಸ್ಯೆಗೆ ಪರಿಹಾರದ ಬಗ್ಗೆ ಸಂಕಲ್ಪ ಪತ್ರದಲ್ಲಿ ಯಾವುದೇ ನಿರ್ದಿಷ್ಟತೆ ಇಲ್ಲ. ಇನ್ನು ಯುಪಿಎ ಪ್ರಣಾಳಿಕೆ ನೋಡಿದರೆ ಸಾರ್ವಜನಿಕ ವಲಯದಲ್ಲಿ 24 ಲಕ್ಷ ಉದ್ಯೋಗ ಭರ್ತಿ ಮತ್ತು ಇದರ ಹೊರತಾಗಿ ಇತರೆ 10 ಲಕ್ಷ ಉದ್ಯೋಗ ಸೃಷ್ಟಿ ಎಂಬುದಾಗಿ ಹೇಳಿದೆ.

ಕೃಷಿ
25 ಲಕ್ಷ ಕೋಟಿ ಬಂಡವಾಳವನ್ನು ಕೃಷಿ ಕ್ಷೇತ್ರದಲ್ಲಿ ವಿನಿಯೋಗಿಸುತ್ತೇವೆ ಎಂದು ಬಿಜೆಪಿಯ ಸಂಕಲ್ಪ ಪತ್ರದಲ್ಲಿ ನಮೂದಿಲಸಲಾಗಿದೆ. ಬಿಜೆಪಿಯ 2014-2018 ಬಜೆಟ್ ನೋಡಿದರೆ ಕೃಷಿಗೆ 1.7 ಲಕ್ಷ ಕೋಟಿ ನೀಡಲಾಗಿತ್ತು. ಹೌದು ಕೃಷಿಕರು ಸಮಸ್ಯೆಯಲ್ಲಿದ್ದಾರೆ ಅವರ ಅಗತ್ಯತೆ ಪೂರೈಸಬೇಕು. ಆದರೆ ಇಷ್ಟು ಹಣ ಎಲ್ಲಿಂದ ಬರಬೇಕು ? ಹಾಗೆಯೇ ಯಾವುದೇ ಹೊಸ ಯೋಜನೆಯನ್ನು ಕೃಷಿಕರಿಗಾಗಿ ನೀಡಲಾಗಿಲ್ಲ. 2022 ರೈತರ ಆದಾಯ ದ್ವಿಗುಣಗೊಳಿಸುವುದು ಎಂಬುದು ಹಿಂದಿನ ಭರವಸೆಯಾಗಿದ್ದು ಈಗಲೂ ಅದನ್ನೇ ಹೇಳಲಾಗಿದೆ. ಇನ್ನೊಂದೆಡೆ ಕಾಂಗ್ರೆಸ್ ರೈತರಿಗಾಗಿ ಪ್ರತ್ಯೇಕ ಬಜೆಟನ್ನು ನೀಡುತ್ತೇವೆ ಎಂದು ಹೇಳಿದೆ. ಬೆಳೆಗೆ ಉತ್ತಮ ಬೆಲೆ ನೀಡುವುದಾಗಿ ಹೇಳಿದೆ.

ಸ್ವಾತಂತ್ರ್ಯ ಹೋರಾಟಗಾರರ ಹೆಸರಲ್ಲಿ ಹೊಸ ವರಸೆ
2047ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಬಂದು 100 ವರ್ಷವಾಗುತ್ತದೆ. ಸ್ವಾತಂತ್ರ್ಯ ಹೋರಾಟಗಾರರ ಕನಸಿನಂತೆ 2047 ರಲ್ಲಿ ದೇಶ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು. ಅದಕ್ಕೆ ಭದ್ರ ಬುನಾದಿ ನಾವು ಹಾಕುತ್ತೇವೆ ಎಂದು ಮೋದಿ ಹೇಳಿದ್ದಾರೆ. ಇಲ್ಲಿ ಗುರಿ ಸಾಧನೆ ಕಾಲ ಮಿತಿ 5 ವರ್ಷಕ್ಕಿಂತ ಜಾಸ್ತಿ (ಸುಮಾರು 28 ವರ್ಷ) ಮುಂದೂಡಿ ಭಾವನಾತ್ಮಕವಾಗಿ ಮತದಾರರ ಹಾದಿ ತಪ್ಪಿಸಲಾಗುತ್ತಿದೆ.

ಜಿಲ್ಲೆಗೊಂದು ಮೆಡಿಕಲ್ ಕಾಲೇಜು ನಿರ್ಮಾಣ
ದೇಶದ ಎಲ್ಲಾ ಜಿಲ್ಲೆಗಳಲ್ಲೂ ವೈದ್ಯಕೀಯ ಕಾಲೇಜುಗಳನ್ನು ತೆರೆಯುತ್ತೇವೆ ಎಂಬುದಾಗಿ ಬಿಜೆಪಿ ಸಂಕಲ್ಪ ಪತ್ರದಲ್ಲಿ ಹೇಳಲಾಗಿದೆ. 2016 ರಲ್ಲಿ ದೇಶದಲ್ಲಿ 707 ಜಿಲ್ಲೆಗಳಿವೆ. 2017 ರಂತೆ ದೇಶದಲ್ಲಿ 460 ಮೆಡಿಕಲ್ ಕಾಲೇಜುಗಳಿದ್ದು 63,985 ವಿದ್ಯಾರ್ಥಿಗಳಿದ್ದರು. ವರ್ಷಕ್ಕೆ ಅಂದಾಜು 10,000 ಜಾಬ್ ಕೂಡ ವೈದ್ಯಕೀಯ ವಲಯದಲ್ಲಿ ಸೃಷ್ಟಿ ಮಾಡಲು ಸಾಧ್ಯವಿಲ್ಲ. ಅಂದ ಮೇಲೆ 2024 ರ ಹೊತ್ತಿಗೆ ವೈದ್ಯಕೀಯ ಕಾಲೇಜುಗಳನ್ನು ಹೆಚ್ಚಿಸುವ ಅಗತ್ಯ ಇದೆಯೆ ಎಂಬ ಪ್ರಶ್ನೆ ಮೂಡುತ್ತದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಾಕಿ ಉಳಿದ ಶಿಕ್ಷಣ ಸಾಲದ ಬಡ್ಡಿಯನ್ನು ಮನ್ನಾ ಮಾಡುವುದು ಮತ್ತು ವಿದ್ಯಾರ್ಥಿ ಹಕ್ಕಿನ ಕಾಯಿದೆ, ಅರ್ಹ ವಿದ್ಯಾರ್ಥಿಗೆ ವಿದ್ಯಾರ್ಥಿ ವೇತನ ಒದಗಿಸುವುದಾಗಿ ತಿಳಿಸಿದೆ. ಇದಕ್ಕಿಂತ ಮುಖ್ಯವಾಗಿ, ವಿದ್ಯಾರ್ಥಿಗೆ ಉದ್ಯೋಗ ಸಿಗುವವರೆಗೆ ಶಿಕ್ಷಣ ಸಾಲದ ಮೇಲೆ ಬಡ್ಡಿ ವಿಧಿಸಲಾಗುವುದಿಲ್ಲ ಎಂಬುದು ಪ್ರಮುಖ ಅಂಶ.

ಸಂಕಲ್ಪ ಪತ್ರದಲ್ಲಿ ದೇಶದ ಆರ್ಥಿಕತೆಯನ್ನು 2032 ರ ಹೊತ್ತಿಗೆ ರೂ. 700 ಲಕ್ಷ ಕೋಟಿಗೆ ಏರಿಸುವುದರ ಬಗ್ಗೆ ಹೇಳಲಾಗಿದೆ. ಆದರೆ ಅದಕ್ಕೆ ಯಾವುದೇ ಕಾರ್ಯನೀತಿಯನ್ನು ತಿಳಿಸಿಲ್ಲ.
ಮುಖ್ಯವಾಗಿ ಉದ್ಯೋಗ ಸೃಷ್ಟಿ, ಜನಸಂಖ್ಯೆ ನಿಯಂತ್ರಣ, ಬಡತನ ನಿರ್ಮೂಲನೆ, ಮಾಬ್ ಲಿಂಚಿಂಗ್ ತಡೆ, ಪರಿಸರ, ಜಾಗತಿಕ ತಾಪಮಾನದ ನಿಯಂತ್ರಣಕ್ಕೆ ಯಾವುದೇ ಯೋಜನೆ ಮತ್ತು ಮುನ್ನೋಟವನ್ನು ಬಿಜೆಪಿ ಜನರ ಮುಂದಿಟ್ಟಿಲ್ಲ.

ಬದಲಾಗಿ, ಎಡಪಂಥೀಯ ವಿಚಾರ ಹತ್ತಿಕ್ಕುವುದು, 371 ವಿಧಿ ತೆಗೆದು ಹಾಕುವುದು, ರಾಮ ಮಂದಿರ ನಿರ್ಮಾಣ, ಶಬರಿ ಮಲೆ ಅಯ್ಯಪ್ಪ ದೇವಾಲಯ, ಸ್ವಾತಂತ್ರ್ಯ ಹೋರಾಟಗಾರರ ಹೆಸರು ಎತ್ತುತ್ತಿರುವುದು ಬಿಜೆಪಿ ಮತದಾರರನ್ನು ಸೆಳೆಯುವ, ಮತದಾರರನ್ನು ಬೇರ್ಪಡಿಸಿ ಮತ್ತೆ ಅಧಿಕಾರಕ್ಕೆ ಬರುವ ತಂತ್ರವೇ ಹೊರತು, ಹಿಂದಿನ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎಂಬ ಹುಸಿ ಘೋಷಣೆ ಈಗ ಸಂಪೂರ್ಣ ಮಾಯವಾಗಿದೆ.
ಕೊನೆಯ ಬಾರಿ ಹೇಳಿದ ಭರವಸೆಯನ್ನೆ ಈಗಲೂ ಹೇಳುತ್ತಿದ್ದಾರೆ. ಉದಾ- ಮಹಿಳಾ ಮೀಸಲಾತಿ. ಈ ಬಾರಿ ಬಿಜೆಪಿಗೆ ಬಹುಮತ ಇದ್ದಾಗ್ಯೂ ಮಹಿಳಾ ಮೀಸಲಾತಿ ಬಿಲ್ ಪಾಸ್ ಮಾಡಿಲ್ಲ. ಮತ್ತೆ ಅದೇ ಹಳಸನ್ನು ಹೊಸ ಪಾತ್ರೆಯಲ್ಲಿ ಹೊತ್ತು ಬಂದಿದೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here