Homeಚಳವಳಿಲಕ್ಷಾಂತರ ಮಕ್ಕಳಿಗೆ ಶಿಕ್ಷಣ ಸಿಗಲು ಕಾರಣರಾದ ನಿಜವಾದ ಶಿಕ್ಷಣದ ಸಂತ ಅನಿಲ್ ಸದ್ಗೋಪಾಲ್

ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ಸಿಗಲು ಕಾರಣರಾದ ನಿಜವಾದ ಶಿಕ್ಷಣದ ಸಂತ ಅನಿಲ್ ಸದ್ಗೋಪಾಲ್

ಭೊಪಾಲ್ ನಲ್ಲಿ ಸಂಭವಿಸಿದ ಅನಿಲ ದುರಂತ ಮತ್ತು ಅದರಿಂದಾದ ಸಾವು-ನೋವುಗಳನ್ನು ನೋಡಿ ನೊಂದರು. ಅಲ್ಲಿಂದ ಅವರು ಸಂತ್ರಸ್ಥ ಕುಟುಂಬಗಳಿಗೆ ನ್ಯಾಯಯುತ ಪರಿಹಾರಕ್ಕಾಗಿ ಹೋರಾಟಗಳನ್ನು ಮುನ್ನಡೆಸಿದರು.

- Advertisement -
- Advertisement -

| ನಾನುಗೌರಿ ಡೆಸ್ಕ್ |

ಬಯೋಕೆಮೆಸ್ಟ್ರಿ ಮತ್ತು ಮಾಲಿಕ್ಯುಲರ್ ಬಯಾಲಿಜಿ ವಿಷಯದಲ್ಲಿ 1963ರಲ್ಲಿಯೇ ಅಮೇರಿಕಾಕ್ಕೆ ಹೋಗಿ ಸಂಶೋಧನೆ ನಡೆಸಿದ್ದ ಅನಿಲ್ ಸದ್ಗೋಪಾಲ್‍ರವರು ಭಾರತಕ್ಕೆ ಬಂದು ಮಾಡಿದ್ದು ಏನು ಗೊತ್ತೇ? ಮಧ್ಯಪ್ರದೇಶದ ಹೋಶಂಗಬಾದ್ ಜಿಲ್ಲೆಯ ಪಲಿಯ ಪಿಪಾರಿಯ ಎಂಬ ಹಳ್ಳಿಗಳಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಕೃಷಿ, ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಪಾಠ ಮಾಡುತ್ತಿದ್ದರು. ವೈಜ್ಞಾನಿಕ ರೀತಿಯಲ್ಲಿ ಪಶು ಸಂಗೋಪನೆ ಮತ್ತು ಕಡಿಮೆ ಖರ್ಚಿನಲ್ಲಿ ನೀರಾವರಿಯ ವಿಧಾನಗಳ ಕುರಿತು ಪಾಠ ಮಾಡುತ್ತಿದ್ದ ಇವರ ನಂತರ 1972ರಲ್ಲಿ ಮಕ್ಕಳ ವಿಜ್ಞಾನ ಕಲಿಕೆಯ ಮೇಲೆ ಗಮನ ಹರಿಸಿದರು.

ನಂತರ ಇದು ಹೋಶಂಗಬಾದ್ ಸೈನ್ಸ್ ಟೀಚಿಂಗ್ ಪ್ರೊಗ್ರಾಮ್ ಎಂದೇ ಪ್ರಖ್ಯಾತವಾಯಿತು. ಅನಿಲ್ ಸದ್ಗೋಪಾಲ್ ರವರು ಕಿಶೋರ್ ಭಾರತಿ ಎಂಬ ತಮ್ಮ ಸಂಸ್ಥೆಯ ಮೂಲಕ 16 ಶಾಲೆಗಳಲ್ಲಿ ಆರಂಭಿಸಿದ ಈ ಮಾತೃಭಾಷೆಯಲ್ಲಿ ವಿಜ್ಞಾನ ಕಲಿಕೆ ಕಾರ್ಯಕ್ರಮ ಯಶಸ್ವಿಯಾದ್ದರಿಂದ ಸರ್ಕಾರ ಇಡೀ ಹೋಶಂಗಬಾದ್ ಜಿಲ್ಲೆಗೆ ವಿಸ್ತರಿಸಿತು. ಇದಕ್ಕೂ ಮೊದಲು ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‍ನಲ್ಲಿ ಸ್ವಲ್ಪ ಕಾಲ ಕೆಲಸ ಮಾಡಿದ್ದ ಅನಿಲ್ ಸದ್ಗೋಪಾಲ್‍ರವರು ಅಲ್ಲಿಂದ, ದೆಹಲಿ ವಿ.ವಿಯಿಂದ ಎಲ್ಲಾ ಕಡೆಗಳಿಂದ ವಿಜ್ಞಾನಿಗಳು ಈ ಪ್ರಯೋಗದಲ್ಲಿ ಪಾಲುದಾರರಾಗುವಂತೆ ಮಾಡಿದರು.

1982ರಲ್ಲಿ ಏಕಲವ್ಯ ಸಂಸ್ಥೆ ಆರಂಭಿಸಿ ಶಾಲಾ ಮಕ್ಕಳೊಡನೆ ಕೆಲಸ ಮಾಡುತ್ತಿದ್ದ ಸದ್ಗೋಪಾಲ್‍ರವರು 1984ರಲ್ಲಿ ಪಕ್ಕದ ಭೊಪಾಲ್ ನಲ್ಲಿ ಸಂಭವಿಸಿದ ಅನಿಲ ದುರಂತ ಮತ್ತು ಅದರಿಂದಾದ ಸಾವು-ನೋವುಗಳನ್ನು ನೋಡಿ ನೊಂದರು. ಅಲ್ಲಿಂದ ಅವರು ಸಂತ್ರಸ್ಥ ಕುಟುಂಬಗಳಿಗೆ ನ್ಯಾಯಯುತ ಪರಿಹಾರಕ್ಕಾಗಿ ಹೋರಾಟಗಳನ್ನು ಮುನ್ನಡೆಸಿದರು.

ಸದ್ಗೋಪಾಲ್‍ರವರ ಅಪಾರ ವಿದ್ವತ್ತು ಮತ್ತು ಜ್ಞಾನವನ್ನು ಮನಗಂಡಿದ್ದ ಭಾರತ ಸರ್ಕಾರ 1990ರಲ್ಲಿ ಆಚಾರ್ಯ ರಾಮಮೂರ್ತಿ ರಿವ್ಯೂ ಕಮಿಟಿಗೆ ಇವರನ್ನು ಸದಸ್ಯರನ್ನಾಗಿ ನೇಮಿಸಲಾಯಿತು. 1986ರ ಹೊಸ ಶಿಕ್ಷಣ ನೀತಿಯನ್ನು ವಿಮರ್ಶೆಗೊಳಪಡಿಸುವುದು ಇವರ ಜವಾಬ್ದಾರಿಯಾಗಿತ್ತು. ಆದರೆ ಶಿಕ್ಷಣ ಸಾರ್ವತ್ರಿಕರಣದಿಂದ ಹಿಂದೆ ಸರಿಯುವ ನೀತಿಗಳನ್ನು ಜಾರಿಗೊಳಿಸಲು ಮುಂದಾಗಿದ್ದರಿಂದ ಅವರು ಆ ಸಮಿತಿಗೆ ರಾಜಿನಾಮೆ ನೀಡಿ ಹೊರಬಂದರು.

ಇದೇ ಸಂದರ್ಭದಲ್ಲಿ ಛತ್ತಿಸ್‍ಘಡ ಮುಕ್ತಿ ಮೋರ್ಚಾದ ಸ್ಥಾಪಕರಾಗಿದ್ದ ಬಹುದೊಡ್ಡ ಹೋರಾಟ ಹೋರಾಟಗಾರ ಶಂಕರ್ ಗುಹಾ ನಿಯೋಗಿಯವರ ಹತ್ಯೆಯಾಗಿತ್ತು. ಈ ಕುರಿತು ಹೆಚ್ಚಿನ ಸಂಶೋಧನೆ ಮತ್ತು ಪುಸ್ತಕ ಬರೆಯಲು ಸದ್ಗೋಪಾಲ್‍ರವರು 1992 ರಲ್ಲಿ ದೆಹಲಿಗೆ ಬಂದರು. 1994ರಲ್ಲಿ ದೆಹಲಿ ವಿ.ವಿಯಲ್ಲಿ ಪ್ರಾಧ್ಯಾಪಕರಾಗಿ ಸೇರಿದರು. 1998ರಿಂದ 2001ರವರೆಗೆ ಡಿರ್ಪಾಟೆಮೆಂಟ್ ಆಫ್ ಎಜುಕೇಷನ್‍ನ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು.

ವಿಜ್ಞಾನ ಚಳವಳಿಯಲ್ಲಿ ಸದಾ ಮುಂದಿದ್ದ ಇವರು ಜನ ವಿಜ್ಞಾನ ಚಳವಳಿ ಜಾಥಾದ ಮುಖ್ಯಸ್ಥರಾಗಿದ್ದರು. 2004ರಲ್ಲಿ ಇವರನ್ನು ಸೆಂಟ್ರಲ್ ಅಡ್ವೈಸರಿ ಬೋರ್ಡ್ ಆಫ್ ಎಜುಕೇಷನ್‍ನ ಸದಸ್ಯರನ್ನಾಗಿ ನೇಮಿಸಲಾಯಿತು. ಆನಂತರ 2005ರಲ್ಲಿ ಈಗ ಜಾರಿಯಲ್ಲಿರುವ ಆರ್‍ಟಿಈ ಶಿಕ್ಷಣ ಹಕ್ಕು ಕಾಯ್ದೆಯ ರಚನಾ ಸಮಿತಿಯ ಸದಸ್ಯರಾಗಿದ್ದರು. ದೇಶದ ಎಲ್ಲಾ ಮಕ್ಕಳಿಗೂ ಉಚಿತ ಮತ್ತು ಸಮಾನ ಶಿಕ್ಷಣವನ್ನು ಜಾರಿಗೊಳಿಸುವುದು, ತಾರತಮ್ಯವನ್ನು ನಿವಾರಿಸುವಂತಹ ಮಹತ್ವದ ಅಂಶಗಳನ್ನು ಅದರಲ್ಲಿ ಇವರು ಸೇರಿಸಿದ್ದರು. ಆದರೆ ಇವರು ಭಾಗವಾಗಿದ್ದ ಸಮಿತಿ ಸಲ್ಲಿಸಿದ ವರದಿಯನ್ನು ಸಂಪೂರ್ಣವಾಗಿ ತಿದ್ದುಪಡಿ ಮಾಡಿ ಕೇಂದ್ರ ಸರ್ಕಾರ ಮಂಡಿಸಿತು. ಇದರಿಂದ ಬೇಸರಗೊಂಡ ಇವರು ತಮ್ಮ ವಿರೋಧವನ್ನು ದಾಖಲಿಸಿ ಸಮಿತಿಗೆ ರಾಜಿನಾಮೇ ನೀಡ ಹೊರಬಂದರು.

ಆಗ ಅವರು ಆರ್‍ಟಿಈಯನ್ನು ಜಾರಿಗೊಳಿಸುವ ಮುನ್ನ ತಿದ್ದುಪಡಿ ಮಾಡಬೇಕೆಂಬ ಆಂದೋಲನವನ್ನು ಶುರು ಮಾಡಿದರು. ಸಮಾನ ಶಾಲೆಯನ್ನು ಜಾರಿಗೆ ತರಬೇಕೇಂಬುದು ಅವರ ಪ್ರಮುಖ ಹಕ್ಕೊತ್ತಾಯವಾಗಿತ್ತು.

ಒಂದು ಹಳ್ಳಿಯನ್ನು/ ನಗರದ ನಿಗಧಿತ ಪ್ರದೇಶ ತೆಗೆದುಕೊಂಡರೆ ಅಲ್ಲಿ ಒಂದೇ ಸುಸಜ್ಜಿತ ಸರ್ಕಾರಿ ಶಾಲೆ ಇರಬೇಕು. ಆ ನೆರಹೊರೆಯ ಎಲ್ಲಾ ಜಾತಿ ವರ್ಗದ ಮಕ್ಕಳು ಅದೇ ಶಾಲೆಗೆ ಬರಬೇಕು. (ಶ್ರೀಮಂತ – ಬಡವ, ಮೇಲುಜಾತಿ-ತಳಸಮುದಾಯ ಎಲ್ಲರೂ ಸೇರಿ) ಆಗ ಅಲ್ಲಿನ ಶಿಕ್ಷಕರು ಅತ್ಯುತ್ತಮವಾಗಿ ಬೋಧಿಸುವುದಲ್ಲದೇ ಉತ್ತಮ ಗುಣಮಟ್ಟದ ಶಿಕ್ಷಣ ಸಾಧ್ಯ ಎಂಬುದು ಇವರ ಕನಸಾಗಿತ್ತು. ಇದನ್ನೇ ನೆರೆಹೊರೆ ಆಧಾರಿತ ಸಮಾನ ಶಾಲಾ ಪದ್ದತಿಯೆಂದು ಕರೆದು ಇದರ ಜಾರಿಗಾಗಿ ಒತ್ತಾಯಿಸಿದರು.

ನಂತರ 2009ರಲ್ಲಿ ಇವರು ಶಿಕ್ಷಣದ ಹಕ್ಕಿಗಾಗಿ ಅಖಿಲ ಭಾರತ ವೇದಿಕೆಯನ್ನು ಪ್ರಾರಂಭಿಸಿದರು. ಶಿಕ್ಷಣ ತಜ್ಞರು, ಪ್ರಾಧ್ಯಾಪಕರು, ಪೋಷಕರು, ವಿದ್ಯಾರ್ಥಿಗಳು, ಚಳವಳಿಗಾರರು ಎಲ್ಲರನ್ನು ಒಳಗೊಂಡಿರುವ ಈ ವೇದಿಕೆ ಶಿಕ್ಷಣದ ವ್ಯಾಪರವನ್ನು ತಡೆಗಟ್ಟಿ ಸಮಾನ ಶಾಲೆಗಳು ಜಾರಿಯಾಗಬೇಕೆಂದು ಒತ್ತಾಯಿಸುತ್ತಿದೆ. ಅನಿಲ್ ಸದ್ಗೋಪಾಲ್‍ರವರು ಹಲವು ಬಾರಿ ಕರ್ನಾಟಕಕ್ಕೂ ಬಂದು ಶಿಕ್ಷಣದ ಕುರಿತು ಹಲವು ಮಹತ್ವದ ಉಪನ್ಯಾಸಗಳನ್ನು ನೀಡಿದ್ದಾರೆ.

79 ವರ್ಷದ ಇಂತಹ ಸರಳಜೀವಿ, ಈಗಲೂ ದಿನಕ್ಕೆ ನಿಜವಾಗಿಯೂ 18ಗಂಟೆಗಿಂತಲೂ ಹೆಚ್ಚು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಈ ಶಿಕ್ಷಣ ಸಂತನನ್ನು ಜ್ಞಾಪಿಸಿಕೊಳ್ಳಲು ಒಂದು ಕಾರಣವಿದೆ. ಮೊನ್ನೆಯಷ್ಟೇ ಇವರಿಗೆ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ವತಿಯಿಂದ ಕೊಡಲಾಗುವ ಹೋಮಿಬಾಬ ಅವಾರ್ಡ್ ಪಡೆದಿದ್ದಾರೆ. ಪ್ರತಿ ಎರಡು ವರ್ಷಕ್ಕೊಮ್ಮೆ ಶಿಕ್ಷಣ ಮತ್ತು ವಿಜ್ಞಾನ ಚಳವಳಿಯಲ್ಲಿ ತೊಡಗಿಸಿಕೊಳ್ಳುವವರಿಗೆ ಕೊಡಲಾಗುವ ಈ ಪ್ರಶಸ್ತಿ ಅನಿಲ್ ಸದ್ಗೋಪಾಲ್‍ರವರು ವಿಜ್ಞಾನ ಚಳವಳಿಗೆ ನೀಡಿದ ಜೀವಮಾನದ ಸಾಧನೆಗಾಗಿ ನೀಡಲಾಗಿದೆ.

ಪ್ರಶಸ್ತಿ ಪಡೆದು ಮಾತನಾಡಿರುವ ಅನಿಲ್ ಸದ್ಗೋಪಾಲ್‍ರವರು ಈ ಪ್ರಶಸ್ತಿ ನಮ್ಮ ಇಡೀ ತಂಡಕ್ಕೆ ಸೇರಬೇಕು. ಅವರಿಲ್ಲದಿದ್ದರೆ ನಾನೊಬ್ಬನೇ 1972ರಿಂದ ಇಲ್ಲಿವರೆಗೂ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎನ್ನುವ ಮೂಲಕ ತಮ್ಮ ವಿನಯತೆಯನ್ನು ಮೆರೆದಿದ್ದಾರೆ. ಅವರ ಹೋರಾಟಕ್ಕೆ ಜಯ ಸಿಗಲೆಂದು ಆಶಿಸೋಣ.

ಇದನ್ನು ಓದಿ: ಅತ್ಯುತ್ತಮ ಶಿಕ್ಷಣ ನೀಡುವ ರಾಷ್ಟ್ರಗಳಲ್ಲಿ ಫಿನ್‍ಲ್ಯಾಂಡ್ ನಂಬರ್ 1 ಆಗಿದ್ದು ಹೇಗೆ ಗೊತ್ತೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...