ಚಲನಚಿತ್ರ ಬರಹ ಎನ್ನುವ ನಿಗೂಢ ಕಲೆ

(ಕನ್ನಡ ಚಿತ್ರರಂಗದ್ದೇ ಇಷ್ಟು ಕೆಟ್ಟ ಪರಿಸ್ಥಿತಿ ಎಂದು ಬೇಸರಿಸಬೇಡಿ; ವಿಶ್ವದಾದ್ಯಂತ ಸುಮಾರು 15% ಚಿತ್ರಗಳು ಮಾತ್ರ ಗೆಲ್ಲುತ್ತವೆ

2015 ರಲ್ಲಿ 136 ಕನ್ನಡ ಸಿನೆಮಾಗಳು ಬಿಡುಗಡೆಯಾದವು; 2016ರಲ್ಲಿ 175, 2017ರಲ್ಲಿ 181 ಮತ್ತು 2018ರಲ್ಲಿ 243!
ಈ ನೂರಾರು ಸಿನೆಮಾಗಳಲ್ಲಿ ನಮ್ಮ ಮನದಲ್ಲಿ ಉಳಿದಿರುವ ಸಿನೆಮಾಗಳ ಸಂಖ್ಯೆ ಎಷ್ಟು? ಯಶಸ್ವಿಯಾದ ಸಿನೆಮಾಗಳ ಸಂಖ್ಯೆ ಎಷ್ಟು? 2015 ರಲ್ಲಿ 136ರ ಪೈಕಿ 6 ಸಿನೆಮಾಗಳು ಯಶಸ್ವಿಯಾದವಂತೆ. ಆ ನಂತರದ ವರ್ಷಗಳಲ್ಲೂ ಸ್ಥಿತಿ ಅಷ್ಟೇನೂ ಭಿನ್ನವಾಗಿಲ್ಲ. ಮೇಲ್ನೋಟಕ್ಕೆ ಸುಮಾರು 5% ಸಿನೆಮಾಗಳು ಗೆಲ್ಲುತ್ತಿವೆ ಕನ್ನಡದಲ್ಲಿ. (ಕನ್ನಡ ಚಿತ್ರರಂಗದ್ದೇ ಇಷ್ಟು ಕೆಟ್ಟ ಪರಿಸ್ಥಿತಿ ಎಂದು ಬೇಸರಿಸಬೇಡಿ; ವಿಶ್ವದಾದ್ಯಂತ ಸುಮಾರು 15% ಚಿತ್ರಗಳು ಮಾತ್ರ ಗೆಲ್ಲುತ್ತವೆ)

ಯಾಕ್ಹೀಗೆ? ಒಂದು ಚಿತ್ರ ಯಶಸ್ವಿಯಾಗಬೇಕಾದರೆ ಏನು ಮಾಡಬೇಕು? ಅದಕ್ಕೆ ಹಲವಾರು ಕಾರಣಗಳನ್ನು ನೀಡಬಹುದು. ಹಾಗೂ ಆ ಎಲ್ಲ ಕಾರಣಗಳೂ ಸರಿಯೆನ್ನಿಸಬಹುದು. ಆದರೆ ಚಿತ್ರದ ಮೂಲ ಚಿತ್ರಕಥೆಯೇ. ಚಿತ್ರಕಥೆ ಬರೆಯುವ ಪ್ರಕ್ರಿಯೆಗೆ ಇಂಗ್ಲೀಷಿನಲ್ಲಿರುವ ಪದ ‘screenwriting’. ಒಂದು ಚಲನಚಿತ್ರವನ್ನು ಚಿತ್ರಿಸುವುದಕ್ಕೂ ಮುನ್ನ ಹಾಳೆಯಲ್ಲಿ ಆ ಚಿತ್ರವನ್ನು ಬರೆಯುವುದೇ ಸ್ಕ್ರೀನ್‍ರೈಟಿಂಗ್. ಅಷ್ಟೇ ಸರಳವಾಗಿದ್ದರೇ ಈ ಕಲೆಯೇಕೆ ನಿಗೂಢ?

ಅದು ಚಲನಚಿತ್ರ ಅಥವಾ ಸಿನೆಮಾ ಎನ್ನುವ ಮಾಧ್ಯಮದ ಅಪಾರ ವ್ಯಾಪ್ತಿ ಮತ್ತು ಅದರೊಂದಿಗೆ ಇರುವ ಮಿತಿಗಳ ಕಾರಣದಿಂದಾಗಿ ಇದೊಂದು ನಿಗೂಢ ಕಲೆಯಾಗಿದೆ. ಅದರರ್ಥ ಚಲನಚಿತ್ರ ಬರಹದ ಕಲೆಯನ್ನೂ ಯಾರೂ ಭೇದಿಸಿಲ್ಲ, ಆಳವಾಗಿ ಅಭ್ಯಸಿಸಿಲ್ಲ ಎಂತಲ್ಲ. ಅನೇಕರು ಅದನ್ನು ಅಭ್ಯಸಿಸಿ, ಅದರ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ. ಅದರೊಂದಿಗೆ ತಮ್ಮ ಸ್ಕ್ರೀನ್‍ರೈಟಿಂಗ್‍ನ ಥಿಯರಿಗಳನ್ನು ಬಳಸಿ ಯಶಸ್ವಿ ಚಿತ್ರಗಳನ್ನೂ ಮಾಡಿದ್ದಾರೆ. ಅಷ್ಟಾದರೂ ಅದು ನಿಗೂಢವೆ. ಸ್ಕ್ರೀನ್‍ರೈಟಿಂಗ್‍ನ ಕೆಲವು ಥಿಯರಿಗಳು ಕೆಲ ಸಲ ಕೆಲಸ ಮಾಡಿದರೆ ಮತ್ತೊಮ್ಮೆ ಅವೇ ಥಿಯರಿಗಳು ಸಂಪೂರ್ಣವಾಗಿ ಕೈಕೊಡುತ್ತವೆ.

ಸ್ಕ್ರೀನ್‍ರೈಟಿಂಗ್‍ನ ರಹಸ್ಯವನ್ನು ಭೇದಿಸುವಾಗ ಹೊಸಬರು ಮಾಡುವ ಮೊದಲ ತಪ್ಪು; ಸ್ಕ್ರೀನ್‍ರೈಟಿಂಗ್ ಅನ್ನು ಅಭ್ಯಸಿಸತೊಡಗುವುದು. ಹೇಗೆ ಬರೆಯಬೇಕು, ಸ್ಕ್ರೀನ್‍ರೈಟಿಂಗ್‍ನ ಮೂಲತತ್ವಗಳು, ತಂತ್ರಗಳನ್ನು ಕಲಿಯಲು ಯತ್ನಿಸುವುದು. ಆದರೆ ಅಭ್ಯಸಿಸಬೇಕಿರುವುದು ಸಿನೆಮಾವನ್ನು. ಸಿನೆಮಾದ ಆಳಗಳನ್ನು ಅರಿತುಕೊಂಡಲ್ಲಿ ಚಲನಚಿತ್ರ ಬರಹ ಮಾಡುವುದು ಹೇಗೆ ಎನ್ನುವುದು ಅರಿಯುವುದು ಅಷ್ಟು ಕಷ್ಟವಾಗುವುದಿಲ್ಲ. ಆದರೂ ಕಷ್ಟವೇ.

ಸ್ಕ್ರೀನ್‍ರೈಟಿಂಗ್ ಒಂದು ಪ್ರಕ್ರಿಯೆ. ಒಂದು ಚಿತ್ರಕ್ಕೆ ಇರುವ ಸ್ಟ್ರಕ್ಚರ್‍ದಂತೆ ಸ್ಕ್ರೀನ್‍ರೈಟಿಂಗ್‍ನ ಪ್ರಕ್ರಿಯೆಗೂ ಆರಂಭ, ಮಧ್ಯ ಮತ್ತು ಕೊನೆ ಇರುತ್ತವೆ. ‘ಒಂದೊಳ್ಳೇ ಐಡಿಯಾ’ದಿಂದ ಶುರುವಾಗುವ ಈ ಪ್ರಕ್ರಿಯೆ ಕೊನೆಯ ಡ್ರಾಫ್ಟ್ ಬರೆದು ಮುಗಿಸಲು ಹಲವಾರು ತಿಂಗಳು, ವರ್ಷ ತೆಗೆದುಕೊಳ್ಳಬಹುದು. ಒಂದು ಐಡಿಯಾ ಎಷ್ಟೇ ಒಳ್ಳೆಯದಿದ್ದರೂ ಅದು ಐಡಿಯಾ ಅಷ್ಟೇ. ಅದು ಕಥೆಯೂ ಅಲ್ಲ, ಚಿತ್ರಕಥೆಯಂತೂ ಅಲ್ಲವೇ ಅಲ್ಲ.

ಸಿನೆಮಾಗೆ ಕೆಲವು ಮಿತಿಗಳಿವೆ. ಕಥೆಯನ್ನು ಸುಮಾರು 2 ಗಂಟೆಗಳ ಅವಧಿಯಲ್ಲಿಯೇ ತೋರಿಸಬೇಕು. (ಇದಕ್ಕೆ ಖಂಡಿತವಾಗಿಯೂ ಅಪವಾದಗಳಿವೆ) ಕಥೆ ಮುಂದಕ್ಕೆ ಹೋಗುತ್ತಲೇ ಇರಬೇಕು. ಸ್ಕ್ರೀನ್‍ರೈಟಿಂಗ್‍ನ ಒಬ್ಬ ದೊಡ್ಡ ಗುರು ಸಿಡ್ ಫೀಲ್ಡ್ ಎನ್ನುವ ವ್ಯಕ್ತಿ. ಅವರು ಮೂರು ಆ್ಯಕ್ಟ್ ಸ್ಟ್ರಕ್ಚರ್‍ಅನ್ನು ಗಟ್ಟಿಯಾಗಿ ಪ್ರತಿಪಾದಿಸುತ್ತಾರೆ. ಚಿತ್ರ ಆರಂಭವಾದ ಅರ್ಧ ಗಂಟೆಯೊಳಗೆ ಒಂದು ತಿರುವು (plot point) ಪಡೆದುಕೊಳ್ಳಬೇಕೆಂದು, ಎರಡನೇ ಆ್ಯಕ್ಟ್ ಮುಗಿಸಿ ಕೊನೆಯ ಆ್ಯಕ್ಟ್‍ಗೆ ಕಾಲಿಡುವ ಮುನ್ನ ಒಂದು ತಿರುವಿರಬೇಕೆಂದು ಹೇಳಿ, ಆ ನಂತರ ಪ್ರತಿ 15 ನಿಮಿಷಕ್ಕೊಮ್ಮೆ ಚಿತ್ರವನ್ನು ಹಿಡಿದಿಡಲು ಕೊಂಡಿಯಾಗುವಂತ ಒಂದು ದೃಶ್ಯ ಇರಬೇಕು ಎನ್ನುತ್ತಾರೆ. ಅವೆಲ್ಲವುಗಳನ್ನೂ ಪಾಲಿಸಿದ ನಂತರವೂ ಒಂದು ಕೆಟ್ಟ ಚಿತ್ರಕಥೆ ಬರೆಯಬಹುದು ಎನ್ನುವುದು ನನ್ನ ಅನುಭವದ ಸತ್ಯ. ಸಂಭಾಷಣೆ ಹೇಗಿರಬೇಕು, ಒಂದು ದೃಶ್ಯ ಯಾವ್ಯಾವ ಅಂಶಗಳನ್ನು ಒಳಗೊಂಡಿರಬೇಕು ಎನ್ನಲೂ ಅನೇಕ ಮಾರ್ಗಸೂಚಿಗಳನ್ನು ಅನೇಕರು ಸೂಚಿಸಿದ್ದಾರೆ. ಅವೆಲ್ಲವುಗಳನ್ನು ಪಾಲಿಸಿದರೂ ಅದೇ ಫಲಿತಾಂಶ ಸಿಗಬಹುದು.

ಹಾಗಾದರೆ ಮಾಡಬೇಕಾದುದೇನು?
ಮೊದಲು ಮಾಡಬೇಕಾಗಿರುವುದು ಚಿತ್ರದ ಥೀಮ್ ಏನಿದೆ ಎಂದು ಸ್ಪಷ್ಟಪಡಿಸುವುದು. ಎರಡನೇ ಹೆಜ್ಜೆ, ಕಥೆ ಏನಿದೆ ಎನ್ನುವುದು. (ಕಥೆಯ ಸ್ಟ್ರಕ್ಚರ್ ಬಗ್ಗೆ ಈಗಾಗಲೇ ಬರೆದಿದ್ದೇನೆ) ಸಂಪೂರ್ಣ ಚಿತ್ರಕಥೆಯನ್ನು ಒಂದು ಪ್ಯಾರಾಗೆ ತಂದಿಳಿಸುವುದು. ಬರೆಯಬಯಸಿದ ಎಲ್ಲಾ ದೃಶ್ಯಗಳು ನಿರ್ಧರಿಸಿದ ಕಥೆಯ ಪರಿಧಿಯೊಳಗೇ ಇವೆಯೆ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳುವುದು. ಆ ಕಥೆಗೆ ಅಗತ್ಯವಿರುವ ಅಧ್ಯಯನವನ್ನು ಇದಕ್ಕಿಂತ ಮುಂಚೆಯೇ ಮಾಡಿರಬೇಕಾಗುತ್ತದೆ. ನಾಯಕಿ/ಕ ಯಾರು ಎನ್ನುವುದು ಅಷ್ಟರಲ್ಲಿ ಸ್ಪಷ್ಟವಾಗಿರುತ್ತದೆ. ಆ ಕಥೆಯಲ್ಲಿ ನಾಯಕ ಸಂದರ್ಭದ ಕೂಸು ಆಗಿರುತ್ತಾನೆಯೇ? ಅಥವಾ ಕಥೆಯಲ್ಲಿ ಆಗುವ ಹೆಚ್ಚಿನ ಬದಲಾವಣೆಗಳನ್ನು ನಾಯಕಿಯೇ ಪ್ರೇರೇಪಿಸುತ್ತಾಳೆಯೇ? ಹಲವರ ಪ್ರಕಾರ ನಾಯಕಿಯೇ ಚಿತ್ರಕಥೆಯನ್ನು ಮುನ್ನಡೆಸಬೇಕು. ಇಲ್ಲವಾದರೆ ನೋಡುಗನಿಗೆ ಆಸಕ್ತಿ ಹುಟ್ಟುವುದಿಲ್ಲ. ನಾಯಕಿಗೆ ಆ ಚಿತ್ರದಲ್ಲಿ ಬೇಕಾಗಿರುವುದೇನು? ನೋಡುಗರಿಗೂ ಆ ನಾಯಕಿಗೆ ಅದು ಸಿಗಲೇಬೇಕು ಎನ್ನಿಸುವುದೇ? ಹೀಗೆ ಹತ್ತು ಹಲವಾರು ಸಂಗತಿಗಳನ್ನು ಸ್ಪಷ್ಟಪಡಿಸುತ್ತ ಬರೆಯಬೇಕಾಗುತ್ತದೆ.

ಚಿತ್ರಕಥೆ ಬರೆಯುವುದು ಕಥೆ ಕಾದಂಬರಿ ಬರೆದಂತಲ್ಲ; ಯಾವುದೋ ಸನ್ನಿವೇಶ ಇಷ್ಟವಾದರೆ, ಪಾತ್ರ ಇಷ್ಟವಾದರೆ ಪುಟಗಟ್ಟಲೇ ಬರೆಯುತ್ತ ಹೋಗಬಹುದು ಆದರೆ ಚಿತ್ರಕಥೆಯಲ್ಲಿ ಆ ಲಗ್ಷ್ಷುರಿ ಇಲ್ಲ. ಕೆಲವರು ಹೇಳುವುದು ಚಿತ್ರಕಥೆ ಬರೆಯುವುದು ತಂತಿಯ ಮೇಲೆ ನಡೆದಂತೆ; ಸರಿಯಾದ ಸಮತೋಲನ ಮಾಡುತ್ತ, ಮುಂದುವರೆಯುತ್ತಲೇ ಇರಬೇಕು. ಇಲ್ಲದಿದ್ದರೆ ಆಯತಪ್ಪಿ ಬೀಳುವುದು ತಪ್ಪಿದ್ದಲ್ಲ. ಇನ್ನೂ ಕೆಲವರು ಚಿತ್ರಕಥೆ ಬರೆಯುವುದನ್ನು ಪರ್ವತಾರೋಹಣಕ್ಕೆ ಹೋಲಿಸುತ್ತಾರೆ. ಪರ್ವತ ಹತ್ತುತ್ತಿರುವಾಗ ನಿಮಗೆ ಕಾಣಿಸುವುದು ನಿಮ್ಮ ಎದುರಿಗಿನ ಬಂಡೆಕಲ್ಲಷ್ಟೆ; ಪರ್ವತ ಕಾಣುವುದಿಲ್ಲ. ಮುಂದಿನ ಹೆಜ್ಜೆಯನ್ನು ಎಲ್ಲಿಡಬೇಕು ಎನ್ನುವುದಷ್ಟೇ ಪರ್ವತಾರೋಹಿಯ ಸಮಸ್ಯೆ. ಈ ರೀತಿ ಸಮತೋಲನ ಕಾಯ್ದುಕೊಂಡು ಪರ್ವತದ ತುತ್ತತುದಿ ಮುಟ್ಟಿದಾಗ ಸಿಗುವ ಆನಂದ ಹೇಳತೀರದು. ಆದರೆ ಚಿತ್ರಕಥೆಯ ಬರಹಗಾರ/ರ್ತಿ ಅಷ್ಟು ಅದೃಷ್ಟವಂತಳಲ್ಲ. ಕೊನೆಯ ದೃಶ್ಯದ ತನಕ ಬರೆದು ಮುಗಿಸಿ ಕೆಲ ಸಮಯ ಬ್ರೇಕ್ ತೆಗೆದುಕೊಂಡು ಮತ್ತೇ ಮರಳುತ್ತಾಳೆ. ಆಗ ಚಿತ್ರಕಥೆಯನ್ನು ಒಂದು ಸಲ ಓದಿದಾಗ ಕಾದಿರುವುದು ಒಂದೋ ಪರವಾಗಿಲ್ಲ ಎನ್ನುವ ಭಾವನೆ ಅಥವಾ ನೈರಾಶ್ಯ. ಆಗ ತಲೆಕೆಡಿಸಿಕೊಂಡು ಇದರ ಸಹವಾಸವೇ ಬೇಡ ಎಂದು ಬಿಟ್ಟುಬಿಡಬಹುದು ಅಥವಾ ಸ್ಕ್ರೀನ್‍ರೈಟಿಂಗ್ ಪ್ರಕ್ರಿಯೆಯ ಅವಿಭಾಜ್ಯ ಅಂಗವಾದ ರೀರೈಟಿಂಗ್ (ಮರುಬರಹ) ಶುರು ಮಾಡಬೇಕು. ಮರುಬರಹ ಎಂದರೆ ಇಡೀ ಪ್ರಕ್ರಿಯೆಯನ್ನು ಇನ್ನೊಂದು ಸಲ ಮಾಡುವುದು. ಬರೆದ ಇಡೀ ಚಿತ್ರಕಥೆ (screenplay) ಅನ್ನು ಓದಿ ವಿಶ್ಲೇಷಿಸಿ, ಆ ಚಿತ್ರಕಥೆ ಕೆಲಸ ಮಾಡದೇ ಇರುವುದಕ್ಕೆ ಕಾರಣಗಳನ್ನು ಹುಡುಕಿ, ಅದು ಕೆಲಸ ಮಾಡಬೇಕಾದರೆ ಏನು ಮಾಡಬೇಕಾಗುವುದು ಎನ್ನುವುದನ್ನು ಪತ್ತೇ ಹಚ್ಚಿ ಮತ್ತೊಮ್ಮೆ ಪ್ರಕ್ರಿಯೆಯನ್ನು ಶುರು ಮಾಡುತ್ತಾಳೆ. ಈ ಪ್ರಕ್ರಿಯೆ ಮಾಡಿದ ನಂತರವೂ ಒಂದು ಉತ್ತಮ ಚಿತ್ರಕಥೆ ಸೃಷ್ಟಿಸಲು ಸಾಧ್ಯವಾಗುವುದೇ? ಉತ್ತಮ ಚಿತ್ರಕಥೆಯಾಗಿದ್ದರೂ ಆ ಚಿತ್ರ ಯಶಸ್ವಿಯಾಗುವುದೇ? ಗೊತ್ತಿಲ್ಲ. ಇವೆಲ್ಲವುಗಳಿಗೆ ಮೀರಿಯೂ ಕೆಲವು ಅಂಶಗಳಿರುತ್ತವೆ. ಆ ಚಿತ್ರದ ಆಗಿನ ಸಮಯದಲ್ಲಿ ಪ್ರಸ್ತುತತೆಯೇನು? ಕಥೆ, ಕಥೆ ಹೇಳುವ ಶೈಲಿ ಅಥವಾ ಇನ್ನಾವುದೋ ಅಂಶ ನೋಡುಗರನ್ನು ಬೆಚ್ಚಿಬೀಳಿಸಲಿದೆಯೇ? ಇವೆಲ್ಲವಕ್ಕೆ ಉತ್ತರ ಸಕಾರಾತ್ಮಕವಾದರೂ ಚಿತ್ರ ಗೆಲ್ಲುವುದೋ ಇಲ್ಲವೋ ಎನ್ನುವುದು ಬಹುಶಃ ಯಾರಿಗೂ ತಿಳಿಯದು.

2003 ರಲ್ಲಿ ನಾನು ನನ್ನ ಮೊದಲ ಪೂರ್ಣಪ್ರಮಾಣದ ಚಿತ್ರಕಥೆ ಬರೆದೆ. ಆಧುನಿಕ ಯಯಾತಿಯ ಕಥೆ ಅದಾಗಿತ್ತು. ಹಲವಾರು ತಿಂಗಳು ಬರೆದು ಮುಗಿಸಿದ ನಂತರ ಒಬ್ಬ ಗೆಳೆಯನಿಗೆ ಓದಲು ಕೊಟ್ಟೆ. ಚಿತ್ರಕಥೆ ಅಪ್ರಬುದ್ಧ naive & immature) ಆಗಿದೆ ಎಂದು ಅವನು ಹೇಳಿದ. ಅಂದೇ ಸಂಜೆ ಹಿಂದಿ ಚಿತ್ರರಂಗದ ಹೆಸರಾಂತ ಚಿತ್ರಬರಹಗಾರರಾದ ಪಂಡಿತ್ ಸತ್ಯದೇವ್ ದುಬೆ ಅವರಿಗೆ ಹೀಗಾಯಿತು, ನನ್ನ ಗೆಳೆಯನೊಬ್ಬ ನಾನು ಬರೆದ ಚಿತ್ರಕಥೆಯನ್ನು ಅಪ್ರಬುದ್ಧ ಎಂದು ಕರೆದ ಎಂದು ನನ್ನ ಬೇಸರವನ್ನು ತೋಡಿಕೊಂಡೆ. ಅವರು ಮುಗುಳ್ನಕ್ಕು ‘ಮಜಾ ತೊ ಆಯಾನಾ ಲಿಖ್ತೆ ವಕ್ತ್, ಇಕ್ ರಿಲೇಶನ್‍ಶಿಪ್ ಥಾ ನಾ ತೆರೆ ಔರ್ ಉಸ್ ಸ್ಕ್ರೀನ್‍ಪ್ಲೇ ಕೆ ಬೀಚ್‍ಮೆ’ ಎಂದರು. (ಬರೆಯುವಾಗ ಮಜಾ ಬಂತಲ್ವಾ, ನೀನು ಬರೆಯುತ್ತಿದ್ದ ಚಿತ್ರಕಥೆಗೂ ನಿನಗೂ ಒಂದು ಸಂಬಂಧ ಏರ್ಪಟ್ಟಿತ್ತಲ್ಲವಾ? ಸಾಕು ಮತ್ತೇನು).
ಶಬ್ದಗಳಲ್ಲಿ ಹೇಳಲಾಗದ ಆ ಯಾತನಾಮಯ ಸಂಬಂಧವನ್ನು ಅನುಭವಿಸುವುದೇ ಚಿತ್ರಕಥೆ ಬರೆಯುವ ನಿಗೂಢ ಕಲೆ. ಸಂಬಂಧ ಎಂಥದ್ದೇ ಇರಲಿ, ಅದರಿಂದ ಹೊರಬಂದಾಗ ಎಂಥವನಾದರೂ ಒಂದಿಷ್ಟು ಬೆಳೆದಿರುತ್ತಾನೆ ಎನ್ನುವುದಂತೂ ಸತ್ಯ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here