Homeಕರ್ನಾಟಕಜಿಂದಾಲ್ ಗೆ ಭೂಮಿ ಕೊಡಲು ಒಪ್ಪಿಗೆ: ಜಿಂದಾಲ್‍ಗೆ ಜೈ- ಲೂಟಿಗಿಳಿಯಿತೇ ಮೈತ್ರಿಯ ಕೈ?

ಜಿಂದಾಲ್ ಗೆ ಭೂಮಿ ಕೊಡಲು ಒಪ್ಪಿಗೆ: ಜಿಂದಾಲ್‍ಗೆ ಜೈ- ಲೂಟಿಗಿಳಿಯಿತೇ ಮೈತ್ರಿಯ ಕೈ?

- Advertisement -
- Advertisement -

ಜಿಂದಾಲ್‍ಗೆ ಜೈ- ಲೂಟಿಗಿಳಿಯಿತೇ ಮೈತ್ರಿಯ ಕೈ?: ಗದ್ದಲದಲ್ಲಿ ಗಂಟಿಗೆ ‘ಕೈ’ ಹಾಕಿದರೇ?

ಜಿಂದಾಲ್‍ಗೆ ಭೂಮಿ ಕೊಡುವ ಕ್ಯಾಬಿನೆಟ್ ನಿರ್ಧಾರವನ್ನು ಮರು ಪರಿಶೀಲಿಸಲು ನೇಮಕವಾಗಿದ್ದ ಸಚಿವ ಸಂಪುಟದ ಉಪಸಮಿತಿ ಸೋಮವಾರ ತರಾತುರಿಯಲ್ಲಿ ಸಭೆ ನಡೆಸಿ, ಕ್ಯಾಬಿನೆಟ್ ನಿರ್ಧಾರವನ್ನು ಅನುಮೋದಿಸುವ ಮೂಲಕ ಭೂಮಿ ಮಾರಲು ಶಿಫಾರಸ್ಸು ಮಾಡಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿದೆ.

3,667 ಎಕರೆ ಸರ್ಕಾರದ ಭೂಮಿಯನ್ನು ಚದರ ಅಡಿಗೆ ಕೇವಲ 35 ಪೈಸೆ ದರದಲ್ಲಿ ಮಾರಲು ಹೊರಟಿರುವುದೇ ಒಂದು ದೊಡ್ಡ ಅಕ್ರಮ. ಅದಕ್ಕೆ ಸಾಕಷ್ಟು ಪ್ರತಿರೋಧ ವ್ಯಕ್ತವಾದ ಮೇಲೆ ಮರು ಪರಿಶೀಲಿಸಲು ಗೃಹ ಸಚಿವ ಎಂ.ಬಿ. ಪಾಟೀಲ ನೇತೃತ್ವದಲ್ಲಿ ಸಚಿವ ಸಂಪುಟದ ಉಪಸಮಿತಿ ರಚನೆ ಮಾಡಿ ಹತ್ತೂ ದಿನಗಳೂ ಆಗಿಲ್ಲ. ಈ ಸಮಿತಿ ಒಂದು ಸಲ ಮಾತ್ರ ಔಪಚಾರಿಕವಾಗಿ ಸಭೆ ಸೇರಿತ್ತಷ್ಟೇ. ಈಗ ದಿಢೀರನೇ ಎರಡನೇ ಸಭೆಯಲ್ಲೇ ಭೂಮಿ ಮಾರಾಟಕ್ಕೆ ಒಪ್ಪಿಗೆ ಸೂಚಿಸಿರುವದರ ಹಿಂದೆ ದೊಡ್ಡ ಕಿಕ್‍ ಬ್ಯಾಕ್ ವಾಸನೆ ಹೊಡೆಯಲು ಶುರು ಮಾಡಿದೆ.

ಯಾವುದೇ ಒಂದು ಉಪಸಮಿತಿ ರಚನೆಯಾದಾಗ ಅದರ ಸಭೆ ನಿರ್ವಹಿಸಲು ಸಿಬ್ಬಂದಿಯ ನೇಮಕವಾಗುತ್ತದೆ. ದಾಖಲೆ ಒದಗಿಸಲು, ಸಭೆಯ ನಡಾವಳಿಗಳನ್ನು ದಾಖಲಿಸಲು ಒಬ್ಬ ಅಧಿಕಾರಿಯನ್ನು ಕಾರ್ಯದರ್ಶಿಯನ್ನಾಗಿ ನೇಮಿಸಬೇಕು. ಇದ್ಯಾವುದನ್ನೂ ಮಾಡದೇ ನಾಲ್ವರ ಸಮಿತಿಯೇ ನಿರ್ಧಾರ ತೆಗೆದುಕೊಂಡಿದ್ದು ರಾಜ್ಯದ ಜನತೆಗೆ ಬಗೆದ ದ್ರೋಗವಾಗಿದೆ.

ಸೋಮವಾರ ರಾಜ್ಯ ರಾಜಕಾರಣದಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿರುವಾಗ ಈ ನಿರ್ಣಯ ಹೊರಬಿದ್ದಿದೆ. ಸರ್ಕಾರ ಬೀಳುವ ಸೂಚನೆ ದೊರೆತ ಕೂಡಲೇ ಸರ್ಕಾರ ಈ ನಿರ್ಧಾರಕ್ಕೆ ಬಂದಿರುವ ಸಾಧ್ಯತೆ ಇದ್ದು, ಅದರ ಪರಿಣಾಮವಾಗಿ ಉಪಸಮಿತಿ ತರಾತುರಿಯಲ್ಲಿ 10-15 ನಿಮಿಷದ ಸಭೆ ನಡೆಸಿ ಈ ನಿರ್ಣಯ ಕೈಗೊಂಡಿರುವುದರ ಹಿಂದೆ ಜಿಂದಾಲ್‍ಗೆ ಲಾಭ ಮಾಡಿಕೊಡುವುದರ ಜೊತೆಗೆ ಅದರಿಂದ ದೊಡ್ಡ ಪ್ರತಿಫಲ ಪಡೆಯುವ ಉದ್ದೇಶವಿದೆ. ಅಥವಾ ಈ ಮೊದಲೇ ಜಿಂದಾಲ್ ಜೊತೆ ‘ವ್ಯವಹಾರ’ ಮುಗಿದಿರುವ ಸಾಧ್ಯತೆಯೂ ಇದೆ.

ಹೀಗಾಗಿ ಆಕಸ್ಮಿಕವಾಗಿ ಸರ್ಕಾರ ಬಿದ್ದರೂ ಜಿಂದಾಲ್‍ಗೆ ಭೂಮಿ ವರ್ಗಾಯಿಸುವ ನಿರ್ಣಯ ಕೈಗೊಂಡು ಋಣ ತೀರಿಸುವ ಕೆಲಸವನ್ನು ಸರ್ಕಾರ ಮಾಡಿದಂತಿದೆ. ಮುಂದೆ ಹೊಸ ಸರ್ಕಾರ ಬಂದರೆ ಈ ನಿರ್ಣಯವನ್ನು ಮರುಪರಿಶೀಲಿಸಬಹುದು.. ಆಗಲೂ ಜಿಂದಾಲ್ ಪರವೇ ನಿರ್ಣಯ ಇರಲಿರುವುದು ಗ್ಯಾರಂಟಿ.

ಇಲ್ಲಿ ಇನ್ನೊಂದು ಮಹತ್ವದ ವಿಷಯವನ್ನು ಗಮನಿಸಬೇಕು. ಸರ್ಕಾರದ ಎಲ್ಲ ಸಚಿವರೂ ರಾಜಿನಾಮೆ ನೀಡಿದ್ದಾರೆ ಎಂದು ಘೋಷಿಸಿದ ಮೇಲೂ ಈ ಸಭೆ ನಡೆಸಿರುವುದು ನಿಯಮಗಳಿಗೆ ವಿರುದ್ಧವಾಗಿದೆ. ತಾಂತ್ರಿಕವಾಗಿ ಈ ಸಮಿತಿಯ ಸದಸ್ಯರು ಇನ್ನೂ ಸಚಿವರಾಗಿರಬಹುದು, ಆದರೆ ಇಂತಹ ಮಹತ್ವದ ನಿರ್ಣಯ ತೆಗೆದುಕೊಳ್ಳಲು ಅವಕಾಶವಿಲ್ಲ.

ಇಲ್ಲಿ ಇನ್ನೊಂದು ಅಂಶವೆಂದರೆ, ಬಹುಷ: ಉಪಸಮಿತಿಯ ಅಧ್ಯಕ್ಷ ಎಂ.ಬಿ. ಪಾಟೀಲರೊಬ್ಬರೇ ಈ ನಿರ್ಣಯ ತೆಗೆದುಕೊಂಡು ಇತರ ಸದಸ್ಯರ ಅನಮತಿ ಪಡೆದು ಸಹಿ ಪಡೆದಿರುವ ಸಾಧ್ಯತೆ ಇದೆ. ಏಕೆಂದರೆ ಈ ಸಭೆ ನಡೆಯಿತು ಎನ್ನಲಾದ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ, ಉಪ ಮುಖ್ಯಮಂತ್ರಿ ಪರಮೇಶ್ವರ್ ಜೊತೆಯಲ್ಲಿದ್ದು, ಅವರು ರಾಜಿನಾಮೆ ಕೊಟ್ಟ ಕಾಂಗ್ರೆಸ್ ಶಾಸಕರ ಮೇಲೆ ಯಾವ ರೀತಿಯ ಕಾನೂನು ಕ್ರಮ ಜರುಗಿಸಬಹುದು ಎಂದು ತಿಳಿಯಲು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿದ್ದರು. ಇನ್ನೊಬ್ಬ ಸದಸ್ಯ ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್ ಮುಖ್ಯಮಂತ್ರಿ ಕುಮಾರಸ್ವಾಮಿ ಬೆಂಗಳೂರಿಗೆ ಬಂದು ಇಳಿದಾಗಿನಿಂದ ಅವರ ಜೊತೆಯಲ್ಲೇ ಇದ್ದಾರೆ. ದೃಶ್ಯ ಮಾಧ್ಯಮದ ವಿಶುವಲ್ ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಇನ್ನಿಬ್ಬರು ಸದಸ್ಯರು ಭಾಗವಹಿಸಿದ್ದಕ್ಕೆ ಯಾವ ಪುರಾವೆಯೂ ಇಲ್ಲ.

ಇಂತಹ ಒಂದು ಗಂಭೀರ, ವಿವಾದಾತ್ಮಕ ವಿಷಯವನ್ನು ಯಾವುದೇ ದಾಖಲೆಗಳನ್ನು ಪರಿಶೀಲಿಸದೇ, ಅಧ್ಯಯನ ಮಾಡದೇ, ತಜ್ಞರ ಅಭಿಪ್ರಾಯ ಪಡೆಯದೇ ನಿರ್ವಹಿಸಿರುವುದರ ಬಗ್ಗೆ ಅನುಮಾನ ಎದ್ದಿವೆ. ಒಟ್ಟಿನಲ್ಲಿ ಗದ್ದಲದಲ್ಲಿ ಗಂಟು ಹೊಡೆಯುವ ಸರ್ಕಾರದ ಈ ನಿರ್ಧಾರ ಜನದ್ರೋಹವಾಗಿದೆ.

ಇದನ್ನೂ ಓದಿ: ಜಿಂದಾಲ್‍ಗೆ ಭೂಮಿ: ಇಂದಿನ ಸಚಿವ ಸಂಪುಟ ಉಪಸಮಿತಿ ಸಭೆಯಿಂದ ಜನರಿಗೆ ನ್ಯಾಯ ಸಿಗುತ್ತಾ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...