ತಲ್ಲಣದ ಜೀವನಾನುಭವಗಳ ಅನಾವರಣ

ಇತ್ತೀಚಿನ ದಿನಗಳಲ್ಲಿ ವರ್ತಮಾನದ ಸಾಮಾಜಿಕ ಆಗುಹೋಗುಗಳ ಬಗ್ಗೆ ನಿರಂತರವಾಗಿ ಬರೆಯುತ್ತಿರುವ ವಿಕಾಸ್ ಮೌರ್ಯ, ಹೊಸತಲೆಮಾರಿನ ಪ್ರಖರ ಚಿಂತಕರಲ್ಲೊಬ್ಬರು. ಇದಕ್ಕೆ ಪುರಾವೆಯೆಂದರೆ ಕಳೆದ ಐದಾರು ವರ್ಷಗಳಿಂದ ಅವರು ಬರೆದ ಇಲ್ಲಿನ ಲೇಖನಗಳು. ಎಲ್ಲವೂ ಪುಟ್ಟ ಪುಟ್ಟ ಲೇಖನಗಳು; ಸರಳವೂ ನೇರವೂ ಸಂವಹನಶೀಲವೂ ಆದ ಭಾಷೆ; ಸಮಾಜ ಬದಲಾವಣೆಯ ದಿಕ್ಕಿನಲ್ಲಿ ಚಿಂತಿಸಲು ಮತ್ತು ಕ್ರಿಯಾಶೀಲರಾಗಲು ಕರೆಗೊಡುವ ಸಂಕಲ್ಪ ತುಂಬಿದ ವಾಕ್ಯಗಳು; ಪ್ರಾಮಾಣಿಕವಾದ ವೇದನೆಯನ್ನೂ ಆಕ್ರೋಶವನ್ನು ಚಿಂತನೆಯಾಗಿ ಮಾರ್ಪಡಿಸುವ ಸಂಯಮದ ಶೈಲಿ; ಎಚ್ಚರ ಮತ್ತು ಕನಸುಗಾರಿಕೆಯಿಂದ ಕೂಡಿದ ತರುಣ ಮನಸ್ಸು; ವರ್ತಮಾನದ ಇಂಡಿಯಾ ದಲಿತರನ್ನು ನಡೆಸಿಕೊಳ್ಳುತ್ತಿರುವ ಭೀಷಣ ವಾಸ್ತವವನ್ನು ಕಾಣಿಸುವಿಕೆ-ಇವು ಲೇಖನಗಳ ಹಿಂದಿರುವ ಮುಖ್ಯ ಚಹರೆಗಳು. ಈ ಲೇಖನಗಳಲ್ಲಿ ಕನ್ನಡ ಪ್ರಗತಿಪರ ಚಿಂತನೆ ಈಗಾಗಲೇ ಚರ್ಚಿಸಿರುವ ಎಳೆಗಳೇ ಇವೆ. ಆದರೆ ಇವುಗಳ ಹಿಂದಿನ ಬದ್ಧತೆ ಕಳಕಳಿ ತಲ್ಲಣ ಪ್ರಾಮಾಣಿಕತೆಗಳು ಲೇಖನಗಳಿಗೆ ಹೊಸ ಜೀವಂತಿಕೆಯನ್ನು ಹಾಯಿಸಿವೆ. ದಮನಿತ ಸಮುದಾಯದ ಪ್ರಾತಿನಿಧ್ಯ ಅವಾಹಿಸಿಕೊಂಡು ಹುಟ್ಟುವ ಆಕ್ಟಿವಿಸ್ಟ್ ಬರಹಗಳಲ್ಲಿ ಎದುರಾಳಿಯನ್ನು ಕಟಕಟೆಯಲ್ಲಿ ನಿಲ್ಲಿಸುವ ನಿಲುಮೆ ಸಾಮಾನ್ಯ. ವಿಶೇಷವೆಂದರೆ ಇಲ್ಲಿನ ಬರಹಗಳಲ್ಲಿ ಸ್ವವಿಮರ್ಶೆಯ ದನಿಯೂ ಸೇರಿರುವುದು. ಮೊದಲ ಲೇಖನವೇ ದಲಿತ ಮಧ್ಯಮವರ್ಗ ಮತ್ತು ದಲಿತ ಚಳವಳಿಗಳನ್ನು ಕುರಿತ ನಿಷ್ಠೂರವಾದ ಆತ್ಮವಿಮರ್ಶೆಯಿಂದ ಕೂಡಿದೆ. ಅಂಬೇಡ್ಕರರನ್ನು ದೈವವಾಗಿಸಿ ಅವರ ಚಿಂತನೆ ಮತ್ತು ಕ್ರಿಯಾಶೀಲತೆಗಳನ್ನು ಮರೆತಿರುವ ದಲಿತರ ಬಗ್ಗೆ ಇಲ್ಲಿ ಕೋಪವಿದೆ. ತಲ್ಲಣ ಮತ್ತು ಭಾವನಾತ್ಮಕತೆ ಪ್ರಧಾನವಾಗಿರುವ ಇಲ್ಲಿನ ಚಿಂತನೆ, ಅಧ್ಯಯನಶೀಲತೆ ಮತ್ತು ಅಂಕಿಅಂಶಗಳ ಬಲವನ್ನೂ ಪಡೆದುಕೊಂಡಿದೆ. ಕೆಲವು ದಲಿತ ಚಿಂತಕರನ್ನು ಆವರಿಸಿಕೊಂಡಿರುವ ಸೈದ್ಧಾಂತಿಕ ಜಡತೆ, ಪಾಂಥಿಕ ಸಂಕುಚಿತತೆ ಮತ್ತು ನಿರಾಳತೆಗಳು ಇಲ್ಲಿಲ್ಲ. ಬದಲಿಗೆ ಸಿದ್ಧಾಂತಗಳಿಗೆ ಕಟ್ಟುಗೊಳ್ಳದೆ ಅವುಗಳ ಮೂಲಕ ಹೊಸಕಾಲಕ್ಕೆ ಬೇಕಾದ ಚೌಕಟ್ಟು ರೂಪಿಸಿಕೊಳ್ಳುವ ಚಲನಶೀಲತೆ ಮತ್ತು ತೆರೆದಮನಸ್ಸಿದೆ; ಸಂಗಾತಿ ಚಿಂತನೆಗಳ ಅಥವಾ ಚಳುವಳಿಗಳ ಮುಂದೆ ತಾತ್ವಿಕ ಭಿನ್ನಮತವನ್ನು ಪ್ರಶ್ನೆರೂಪದಲ್ಲಿ ಮುಂದಿಟ್ಟು ಸಂವಾದ ಮಾಡಬಯಸುವ ಧಾಟಿಯಿದೆ. ಇದು ಸದ್ಯ ಜರೂರಾಗಿರುವ ಪ್ರಜಾತಂತ್ರವಾದಿ ಕ್ರಮ ಕೂಡ. ಕರ್ನಾಟಕದಲ್ಲಿ ಪ್ರಜಾತಂತ್ರವಾದಿ ಮತ್ತು ಪ್ರಗತಿಪರ ಶಕ್ತಿಗಳು ಸಾಕಷ್ಟಿವೆ. ಆದರೆ ಅವು ಸೈದ್ಧಾಂತಿಕ ಭಿನ್ನತೆ ಮತ್ತು ಪಾಂಥಿಕವಾದ ಬಣರಾಜಕಾರಣದಲ್ಲಿ ಮುಳುಗಿ ಕೂಡಿಕಟ್ಟುವ ಬಂಧುತ್ವದ ಪರಿಭಾಷೆಯನ್ನೇ ಮರೆತುಬಿಟ್ಟಿವೆ. ಭಾರತದಲ್ಲಿ ಮಾರುಕಟ್ಟೆ ಸಂಸ್ಕøತಿಯ ಭಾಗವಾಗಿ ನವಫ್ಯಾಸಿಸಂ ಮೈದಳೆಯುತ್ತಿರುವ ಈ ಕಾಲದಲ್ಲಿ, ಜನಪರ ಸಿದ್ಧಾಂತ ಮತ್ತು ಚಳವಳಿಗಳು ಒಗ್ಗೂಡುವ ವಿಶಾಲ ರಾಜಕಾರಣ ರೂಪುಗೊಳ್ಳಬೇಕಿದೆ. ಇಂತಹ ಚಾರಿತ್ರಿಕ ಮತ್ತು ಸಂಕ್ರಮಣದ ಕಾಲಘಟ್ಟದಲ್ಲಿ ಈ ಕೃತಿ ಪ್ರಕಟವಾಗುತ್ತಿದ್ದು, ಇದು ಒಡಕಲು ಬಿಂ¨ಗಳಾಗಿರುವ ಚಳವಳಿ ಮತ್ತು ನಾಯಕತ್ವಗಳನ್ನು ಸಮಾನ ಆಶಯಕ್ಕಾಗಿ ಒಂದು ಹಾದಿಯ ಮೇಲೆ ತರುವ ಇರಾದೆಯನ್ನೂ ಹೊಂದಿದೆ.
ಅಂಬೇಡ್ಕರ್‍ವಾದದ ಹಿನ್ನೆಲೆಯಿಂದ ಹುಟ್ಟಿರುವ ಇಲ್ಲಿನ ಲೇಖನಗಳಲ್ಲಿ, ಭಾರತದ ದಲಿತರ ಕಷ್ಟಗಳು ಪ್ರಧಾನವಾಗಿ ಚರ್ಚಿತವಾಗಿರುವುದು ಸಹಜವೇ. ವಿಶೇಷವೆಂದರೆ, ಈ ಚರ್ಚೆಯು ಸಮಾಜದ ಎಲ್ಲಾ ದಮನಿತರ ನೋವಿಗೆ ಮಿಡಿಯುವಂತೆ ತನ್ನನ್ನು ವಿಸ್ತರಿಸಿಕೊಳ್ಳುವುದು. ಕೋಮುವಾದವು ದಲಿತರ ಸಮಸ್ಯೆಯಲ್ಲ, ಮಾರುಕಟ್ಟೆ ಪ್ರಣೀತ ಅಭಿವೃದ್ಧಿ ಪರಿಕಲ್ಪನೆಯ ಬಲಿಪಶುಗಳಾಗಿರುವ ಆದಿವಾಸಿಗಳ ಕಷ್ಟ ನಮ್ಮದಲ್ಲ, ಪುರುಷವಾದವು ಮಹಿಳೆಯರ ಸಮಸ್ಯೆ- ಎಂದೆಲ್ಲ ಭಾವಿಸುವ ಬಿಡಿತನದ ಆಲೋಚನೆ ನಮ್ಮ ನಡುವಿದೆ. ನಮಗೆ ರಾಜಕೀಯ ಅಧಿಕಾರ ಸಿಗುವುದಾದರೆ ರಾಜಕೀಯ ಪಕ್ಷಗಳಲ್ಲಿ ಅಸ್ಪøಶ್ಯತೆ ಆಚರಿಸಬೇಕಿಲ್ಲ ಎಂಬ ಅವಕಾಶವಾದವೂ ಇದೆ. ಈ ಹಿನ್ನೆಲೆಯಲ್ಲಿ ದಲಿತರು ಬಡವರು ಮಹಿಳೆಯರು ಕಾರ್ಮಿಕರು ಹಾಗೂ ಮುಸ್ಲಿಮರನ್ನು ಒಳಗೊಂಡಂತೆ ಸಮಸ್ತ ದಮನಿತರನ್ನು ತನ್ನವರೆಂದು ಭಾವಿಸುವ ಇಡಿತನದ  ವಿಶಾಲವಾದ ಗ್ರಹಿಕೆ ಈ ಕೃತಿಯಲ್ಲಿದೆ. ಇದನ್ನು ಅಂಬೇಡ್ಕರ್‍ವಾದ ಮತ್ತು ದಲಿತ ಚಿಂತನೆಯ ಹೊಸ ರೂಪಾಂತರ ಮತ್ತು ಸಮಕಾಲೀನ ವಿಸ್ತರಣೆ ಎನ್ನಬಹುದು. ಇಂತಹ ವಿಸ್ತರಣೆ ಮತ್ತು ರೂಪಾಂತರ ಮೊದಲಿಂದಲೂ ದೇವನೂರರ ಬರಹಗಳಲ್ಲಿದೆ. ಚಳುವಳಿಯ ಹೊಸ ಪ್ರತಿಭೆಗಳಾದ ಜಿಗ್ನೇಶ್, ಕನ್ಹಯ್ಯ ಕುಮಾರ್ ಹಾಗೂ ರೋಹಿತ್ ವೇಮುಲಾ ಅವರಲ್ಲೂ ಇದೆ. ಸ್ವವಿಮರ್ಷೆ ಮತ್ತು ಸಮಕಾಲೀನ ಆಶೋತ್ತರಗಳಿಗಾಗಿ ಪಡೆಯುವ ಈ ಮರುಹುಟ್ಟು ಮತ್ತು ವಿಸ್ತರಣೆಯ ರೂಪಾರಂತವು, ಕರ್ನಾಟಕದ ಚಳವಳಿಗಳಿಗೂ ದಮನಿತ ಸಮುದಾಯಗಳಿಗೂ ಅಗತ್ಯವಾಗಿದೆ. ನಿರ್ದಿಷ್ಟ ಸಿದ್ಧಾಂತದ ಹಿನ್ನೆಲೆಯುಳ್ಳ ಯಾವುದೇ ಒಂದು ಚಳುವಳಿ ಈಗ ಸಾಲುತ್ತಿಲ್ಲ. ಬದಲಿಗೆ ಸ್ವವಿಮರ್ಶೆ ಮತ್ತು ಸಮಾನ ಆಶಯದಲ್ಲಿ ಒಗ್ಗೂಡುವ ಸಹಮತದ ಚಳುವಳಿ ರಾಜಕಾರಣ, ನಮ್ಮ ಕಾಲದ ಪರ್ಯಾಯ ಹಾದಿಯಾಗುವಂತೆ ತೋರುತ್ತಿದೆ. ನೀಲಿ ಮತ್ತು ಕೆಂಪುಗಳು ತಮ್ಮ ಹಳೇ ವ್ಯಾಜ್ಯಗಳನ್ನು ಬದಿಗಿಟ್ಟು, ಒಗ್ಗೂಡಿ ಹೊಸ ಭಾರತ ಕಟ್ಟಬಲ್ಲವು ಎಂದು ಆಸೆ ಹುಟ್ಟಿಸುತ್ತಿವೆ. ಇವುಗಳೊಟ್ಟಿಗೆ ಭಾರತದ ಸಮಸ್ತ ಜಾತಿ-ಮತ-ಧರ್ಮಗಳಲ್ಲಿರುವ ಮಹಿಳೆಯರ ನಸುಗೆಂಪು ಸೇರಿಕೊಳ್ಳಬೇಕಾದ ಮೂರನೇ ಬಣ್ಣವಾಗಿದೆ. ಇದಕ್ಕೆ ಪೂರಕವೆಂಬಂತೆ ಈ ಕೃತಿಯಲ್ಲಿ ಸ್ತ್ರೀವಿಮೋಚನೆಯ ಪ್ರಸ್ತಾಪಗಳಿವೆ. ಚರಿತ್ರೆಯಿಂದ ಪಾಠ ಕಲಿಯುವ ಮಾತು ಸಾಕಷ್ಟು ಸವೆದುಹೋಗಿದೆ; ಚಳುವಳಿಗಳಿಗೆ ಅನೇಕ ಸಲ ಚಲನಶೀಲ ದೃಷ್ಟಿಕೋನದಲ್ಲಿ ಮರುವ್ಯಾಖ್ಯಾನ ಪಡೆಯದ ಚರಿತ್ರೆಯೇ ಕಾಲ್ತೊಡಕಾಗುವಷ್ಟು ಭಾರವಾಗಿದೆ. ಈ ದೃಷ್ಟಿಯಿಂದ ಚರಿತ್ರೆಯ ಹ್ಯಾಂಗೋವರುಗಳಿಂದ ಬಿಡಿಸಿಕೊಂಡು ಮುನ್ನಡೆಯುವ ಚಲನಶೀಲತೆಯನ್ನು ಈ ಕೃತಿ ತೋರುತ್ತಿದೆ.
– ರಹಮತ್ ತರೀಕೆರೆ

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here