Homeಅಂಕಣಗಳುಓ ನನ್ನ ಸುಮಧುರ ದೇಶವೆ.. - ನೀರನಡೆ ಅಂಕಣದಲ್ಲಿ ಡಾ. ವಿನಯ ಒಕ್ಕುಂದ

ಓ ನನ್ನ ಸುಮಧುರ ದೇಶವೆ.. – ನೀರನಡೆ ಅಂಕಣದಲ್ಲಿ ಡಾ. ವಿನಯ ಒಕ್ಕುಂದ

ಆ ದೇಶವನ್ನು ಕಂಡು ಅಯ್ಯೋ ಎಂದು ಮರುಗೋಣ,

- Advertisement -
| ಡಾ. ವಿನಯ ಒಕ್ಕುಂದ |
ದೆಹಲಿಯ ಬಿಜೆಪಿ ಕಚೇರಿಯಲ್ಲಿ, ಲೋಕಸಭಾ ಚುನಾವಣೆಯ ಫಲಿತಾಂಶದ ವಿಜಯೋತ್ಸವದ ಭಾಷಣದಲ್ಲಿ ಮೋದಿ, ತಮ್ಮ ಪಕ್ಷದ ಇಂತಹ ಅಭೂತಪೂರ್ವ ಗೆಲುವನ್ನು ಭಾರತದ ಮತದಾರ ಪ್ರಭುಗಳ ಪದತಲಕ್ಕೆ ಅರ್ಪಿಸಿದ್ದಾರೆ.  ಭಾರತದ ಮತದಾರರನ್ನು ಶ್ರೀಕೃಷ್ಣ ಪರಮಾತ್ಮನಿಗೆ ಹೋಲಿಸಿದ್ದಾರೆ. ಮಹಾಭಾರತ ಯುದ್ಧಾನಂತರ ಕೃಷ್ಣನನ್ನು – ನೀನೇಕೆ ಪಾಂಡವ ಪಕ್ಷಪಾತಿಯಾಗಿದ್ದೆ? ಎಂದು ಕೇಳಿದ್ದಕ್ಕೆ ಅವನು ‘ನಾನು ಸತ್ಯದ ಪರವಾಗಿದ್ದೆನಷ್ಟೇ’ ಎಂದು ಉತ್ತರಿಸಿದನಂತೆ. ಭಾರತದ ಕೋಟ್ಯಂತರ ಮತದಾರರು ಭಗವಾನ್ ಕೃಷ್ಣನಂತೆ ಸತ್ಯಪಕ್ಷಪಾತಿಗಳಾಗಿದ್ದರು ಎಂದು ಉದಾತ್ತೀಕರಿಸಿ ಅಭಿವಂದಿಸಿದರು. ಸರಿಯಾದದ್ದೇ ಇವಿಎಂ ಮಷಿನ್‍ಗಳಲ್ಲಿ ಹೈಕ್ ಆಗಿಲ್ಲವೆಂದಾದರೆ, ಭಾರತೀಯ ಮತದಾರರು ಕೈಯೆತ್ತಿ ಮೋದಿಯವರನ್ನು ಬೆಂಬಲಿಸಿದ್ದಾರೆಂದೇ. ಬಿಜೆಪಿ ಪಕ್ಷ ಅತೀ ಹೆಚ್ಚು ಸಂಖ್ಯೆಯನ್ನು ಅಷ್ಟೇ ಅಲ್ಲ ಅತಿ ಹೆಚ್ಚು ಶೇಕಡಾವಾರು ಮತಗಳನ್ನು ಪಡೆದಿದೆ.  ಪ್ರತಿಯೊಂದು ಪ್ರಚಾರ ಭಾಷಣದಲ್ಲಿಯೂ ಮೋದಿ ಜನರ ಮುಂದೆ ಮಂಡಿಸುತ್ತಿದ್ದ ಮ್ಯಾಜಿಕ್ ನಂಬರಿನ ಅಪೀಲನ್ನು ಜನರು ಸುಲಭವಾಗಿ ದಾಟಿಸಿದ್ದಾರೆ. ಈಗ ಯೋಚಿಸಬೇಕಾದದ್ದು ಚುನಾವಣೆಯಲ್ಲಿ ಗೆದ್ದ-ಸೋತ ರಾಷ್ಟ್ರೀಯ ಪಕ್ಷಗಳ ಕುರಿತು ಅಲ್ಲ. ಗೆಲ್ಲಿಸಿದ, ಸೋಲಿಸಿದ ಜನರ ಆಲೋಚನಾ ಕ್ರಮದ ಬಗ್ಗೆ.
ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಮೋದಿ ಪರವಾದ ಆರಾಧನೆ ತೀವ್ರವಾಗಿ ಹೆಚ್ಚುತ್ತಿದೆ.  ಚುನಾವಣೆ ಪೂರ್ವದಿಂದಲೂ ಸುಶಿಕ್ಷಿತ ಮಧ್ಯಮ ವರ್ಗ ‘ಮೋದಿ ಜಪ’ ಮಾಡುತ್ತ ‘ಹೀರೋ ವರ್ಶಿಫಿಸಂ’ಗೆ ಸಾಮಾಜಿಕ ಒಪ್ಪಿಗೆಯನ್ನು ಪಡೆಯಲಾರಂಭಿಸಿತು. ಈ ಸಮೂಹಸನ್ನಿ ಭಾರತದ ಪ್ರಜಾತಾಂತ್ರಿಕ ವ್ಯವಸ್ಥೆಯ ಮೂಲಸತ್ವವನ್ನೇ ನಿಸ್ಸತ್ವಗೊಳಿಸುವಂತಿದೆ.  ಭಾರತಕ್ಕೆ ನಾಯಕತ್ವದ ಆರಾಧನೆ ಹೊಸದಲ್ಲ. ಪ್ರಾಣಿಸದೃಶವಾಗಿ ನೆಲಕ್ಕೆ ಬಿದ್ದು ಅಸ್ತಿತ್ವಹೀನರಾದವರನ್ನು ಸ್ವಾಭಿಮಾನದ ಲಗಾಮು ಹಿಡಿದು ಮುನ್ನಡೆಸಿದ ಜನನಾಯಕರನ್ನು ಭಾರತ ಕಂಡಿದೆ. ಜಗತ್ತಿಗೆ ಮನುಷ್ಯ ವಿವೇಕದ ತಿಳಿವು ಹನಿಸಿದ ಗಾಂಧೀಜಿಯ ನಾಡಿದು. ಜನ ಗಾಂಧೀಜಿಯೊಂದಿಗೆ ಸಲೀಸಾಗಿ, ಸರಳವಾಗಿ ಬೆರೆತರು. ಜಗಳಾಡಿದರು.  ಮುನಿಸಿಕೊಂಡರು. ಮನುಷ್ಯ ಸಂಬಂಧ ಹೀಗೆ ಸರಳವೂ ಪವಿತ್ರವೂ ಆಗಿರಬೇಕೆಂದು ಗಾಂಧಿ ಹಂಬಲಿಸಿದ್ದರು. ಗೌರವ, ಆದರ, ಪ್ರೀತಿ, ಕೋಪಗಳೆಲ್ಲ ಮನುಷ್ಯ ಬಾಳಿನ ಪ್ರಾಮಾಣಿಕತೆಗಳೇ ವಿನಃ ತೋರಿಕೆಗಳಲ್ಲವೆಂದು ತಮ್ಮ ವರ್ತನೆಯಿಂದಲೇ ಕಲಿಸಿದ್ದರು. ಮನುಷ್ಯ ಸಹಜ  ಸ್ವ-ಸಂಘರ್ಷಕ್ಕಿಳಿದು ವೈಯಕ್ತಿಕತೆಯನ್ನು ನೀಗಿಕೊಂಡು ಸಾಮಾಜಿಕತೆಗೆ ತೆತ್ತುಕೊಂಡು ಸಂತನಾಗಿದ್ದರು.  ಪೂಜೆ, ಪ್ರಾರ್ಥನೆ, ಧ್ಯಾನ, ವಾತ್ಸಲ್ಯ, ಗೌರವ ಯಾವುದೂ ಅವರಿಗೆ ತೋರಿಕೆಯ ಸಂಗತಿಗಳಾಗಿರಲಿಲ್ಲ. ಗಾಂಧೀಜಿ ಭಾರತೀಯರಿಗೆ ಪ್ರೀತಿ ಕಲಿಸಿದರು. ಕೂಡಿ ಬದುಕುವ ಸ್ವಾದ ತಿಳಿಸಿದರು. ಉನ್ಮಾದ ಲಂಪಟತನವೆಂದು ನಿಷ್ಠುರವಾಗಿ ದೂರೀಕರಿಸಿದ್ದರು.  ಸ್ವತಂತ್ರ ಭಾರತ ಇಂದಿರಾರಂತಹ ಜನನಾಯಕಿಯನ್ನು ನೋಡಿದೆ.  ಆಗಿನ್ನೂ ಎಳೆಯ ಸಸಿಯಾಗಿದ್ದ ಪ್ರಜಾಪ್ರಭುತ್ವಕ್ಕೆ ಸಾಮಾಜಿಕ ನ್ಯಾಯದ ನೀರೆರೆದು ಪೋಷಿಸಿದ್ದರು.   ತಮ್ಮ ಸಾರ್ವಭೌಮತೆಗೆ ಧಕ್ಕೆ ಒದಗಿಸಿದರೆ, ಎಂತಹ ಭ್ರಷ್ಟತೆಗೂ ಇಳಿದುಬಿಡುತ್ತಿದ್ದ ಇಂದಿರಾ ಅವರ ಬಡವರ ಪರ ನಿಲುವನ್ನು ಅನುಮಾನಿಸುವುದು ಸಾಧ್ಯವಿಲ್ಲ. ಭಾರತದಂತಹ ದೇಶದ ಪ್ರಧಾನಿಯಾಗಿ ಅದು ಅವರ ಕರ್ತವ್ಯವಾಗಿತ್ತು. ಆದರೆ ಬಡ ಜನ ಅದನ್ನು ಉಪಕಾರ ಎಂದು ತಿಳಿದರು. ‘ಇಂದಿರಮ್ಮನ ಋಣ’ ಎಂದಾಡಿಕೊಳ್ಳುತ್ತಿದ್ದರು. ಆಗೆಲ್ಲ ಬಡವರಿಗೆ ಚುನಾವಣೆ ಎಂದರೆ, ಋಣ ಸಂದಾಯ ಮಾಡುವ ಶ್ರದ್ಧೆಯ ಕೆಲಸವಾಗಿತ್ತು. ತುರ್ತುಪರಿಸ್ಥಿತಿಯವರೆಗೂ ಇಂತಹದೊಂದು ಜನಾಭಿಪ್ರಾಯವನ್ನು ಬದಲಿಸುವುದು ಸಾಧ್ಯವಿರಲಿಲ್ಲ. ಆದರೆ ಆಗಲೂ ಅದೊಂದು ಉನ್ಮಾದದ ಆವೇಶವಾಗಿರಲಿಲ್ಲ. ಅಪ್ರಮೇಯವಾಗಿರಲಿಲ್ಲ.  ಇತ್ತೀಚೆಗೆ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ನಿಧನರಾದಾಗ ಬಡವರು ಸ್ಪಂದಿಸಿದ ರೀತಿ ಸ್ಮರಣೀಯವಾಗಿತ್ತು. ಜಯಲಲಿತಾರ ಭ್ರಷ್ಟತೆಯ ಆರೋಪ ಏನೇ ಇರಲಿ, ಅವರು ಬಡವರಿಗಾಗಿ ರೂಪಿಸಿ – ಜಾರಿಗೆ ತಂದ ಯೋಜನೆಗಳು ಚಾರಿತ್ರಿಕವಾಗಿತ್ತು. ಕೃತಜ್ಞತೆ ಕಣ್ಣೀರಾಗಿತ್ತು.
ಇಂದು ಭಾರತದ ಜನರು ಬೇರೂರಿಸಿಕೊಂಡಿರುವ ಆರಾಧನೆಯ ಭಾವನೆಗೆ ಇಂತಹ ಕಾರಣಗಳಿವೆಯೇ? ಕಳೆದ ಅವಧಿಯಲ್ಲಿ ಕೇಂದ್ರ ಸರ್ಕಾರ ಬಡವರ ಪರವಾದ ವಿಧಾಯಕ ಕಾರ್ಯಗಳನ್ನು ಮಾಡಿದೆಯೇ? ಮನೆ ನಿರ್ಮಾಣ, ಶೌಚಾಲಯ ನಿರ್ಮಾಣದ ಸಬ್ಸಿಡಿಗಳು, ಗ್ಯಾಸ್ ಸಿಲಿಂಡರ್ ಸಬ್ಸಿಡಿಯಂತಹ ಯೋಜನೆಗಳು – ಯಾವುದೇ ಸರ್ಕಾರ ನಿರ್ವಹಿಸಬೇಕಾದ ಅನಿವಾರ್ಯ ಕಾರ್ಯಕ್ರಮಗಳಾಗಿದ್ದವು. ಇಂತಹ ಯೋಜನೆಗಳಿಗೆ ತೆಗೆದಿರಿಸಿದ ದೊಡ್ಡ ಮೊತ್ತ ಜಾಹೀರಾತಾಗಿ, ಆ ಜಾಹೀರಾತು ಚುನಾವಣೆಯ ಪ್ರಚಾರವಾಗಿಯೂ ಬಳಕೆಯಾಯಿತು. ಕೇಂದ್ರ ಸರ್ಕಾರದ ಬಹುಮುಖ್ಯ ಆರ್ಥಿಕ ನಿರ್ಣಯಗಳಾದ ನೋಟಬ್ಯಾನ್ ಬಡವರ ದುಡಿದುಣ್ಣುವ ಮೂಲಭೂತ ಹಕ್ಕನ್ನೂ ಕಸಿದಿದ್ದವು. ಜಿಎಸ್‍ಟಿ ಬಡವರ ಮತ್ತು ಮಧ್ಯಮವರ್ಗದವರ ದೈನಂದಿನ ಅವಶ್ಯಕತೆಗಳನ್ನು ಭಾರವಾಗಿಸಿತ್ತು. ರೈತರ ಆತ್ಮಹತ್ಯೆ, ಪೌರ ಕಾರ್ಮಿಕರ ಸಾವು, ಮಹಿಳೆಯರ ಮೇಲಿನ ದೌರ್ಜನ್ಯ ಇಂತಹ ನೂರಾರು ಸಾಮಾಜಿಕ ದೌರ್ಜನ್ಯಗಳು ಹೆಚ್ಚಿದವು. ಇಂತಹ ಅಸ್ವಸ್ಥತೆಯಲ್ಲೂ ಜನಮತ ಇಷ್ಟೊಂದು ಏಕಪಕ್ಷೀಯವಾಗಿ ಹೆಚ್ಚಿದ್ದು ಹೇಗೆ?
ಮೋದಿ, ವಿಜಯೋತ್ಸವದ ಭಾಷಣದಲ್ಲಿ ಈ ಗೆಲುವನ್ನು “ವಂಶಾಡಳಿತ ಕಾ ಅಂತ” ಎಂದು ಸಂತಸದಿಂದ ಉದ್ಗರಿಸಿದರು. ಜನರಿಗೆ ತಿಳಿವ ಮಾದರಿಗಳಲ್ಲಿ ವಿರೋಧಿಗಳ ದೌರ್ಬಲ್ಯವನ್ನು ಕಾಣಿಸಲು ಅವರು ನಿಸ್ಸೀಮರು. ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿದಂತೆ ಹಲವು ಪ್ರಾದೇಶಿಕ ಪಕ್ಷಗಳು ಈ ತಕರಾರನ್ನು ಎದುರಿಟ್ಟುಕೊಂಡವು. ಇದು ಖಂಡಿತಾ ಪ್ರಜಾಸತ್ತೀಯ ವಿಧಾನಕ್ಕೆ ಶೋಭೆಯಲ್ಲ. ಕಲಾವಿದರ ಮಕ್ಕಳಿಗೂ ಅದೇ ಕಲೆಯ ಎಳೆತವಿರುವಂತೆ, ಬಾಲ್ಯದ – ಮನೆಯ ಪರಿಸರದ ಪ್ರಭಾವ ಅವರನ್ನು ರಾಜಕೀಯ ರಂಗಕ್ಕೆ ಎಳೆದು ತಂದರೆ ಅದನ್ನು ಅಪರಾಧ ಎನ್ನಲಾದೀತೆ? ಆದರೆ ಇಂತಹ ಪ್ರವೇಶಿಕೆಗಳಿಂದ ಯೋಗ್ಯರಾದ ಮತ್ತೊಬ್ಬರು ಅವಕಾಶವಂಚಿತರಾಗಬಾರದು. ಮೋದಿಯವರ ಪಕ್ಷದಲ್ಲೂ ಇಂತಹ ಉದಾಹರಣೆಗಳಿವೆ. ಆದರೆ ಯಾವ ಮುಲಾಜಿಲ್ಲದೆ ಅವರು ಮಾತನಾಡಬಲ್ಲರು. ಜನ ನಂಬುತ್ತಾರೆ.  ಈ ನಂಬಿಕೆಯ ಉತ್ಪಾದನೆಗೆ ಮಾಧ್ಯಮಗಳ ಉಪಕೃತಿಯೂ ದೊಡ್ಡದಿದೆ.
ನಿಜಕ್ಕೂ ಈ ಗೆಲವು ಆಕಸ್ಮಿಕವಲ್ಲ. ಇದಕ್ಕೆ ‘ಬೂತ್ ಮಟ್ಟದ ಕಾರ್ಯಕರ್ತರ’ ಅವಿರತವಾದ ದಶಕ-ದಶಕಗಳ ಶ್ರಮವಿದೆ.  ಒಂದು ಚುನಾವಣೆಯ ಫಲಿತಾಂಶ ಪ್ರಕಟವಾದ ದಿನದಿಂದಲೇ ಅವರು ಮತ್ತೊಂದು ಚುನಾವಣೆಯ ಸಿದ್ಧತೆಗೆ ತೊಡಗುತ್ತಾರೆ.  ಒಮ್ಮೆ ಭೇಟಿಯಾದ ನನ್ನ ಕಲೀಗ್ ಒಬ್ಬರ ಸಂಬಂಧಿಕರು 60 ದಾಟಿದ ಮಹಿಳೆ ಹೇಳುತ್ತಿದ್ದರು, “ನಾನು ರಾಷ್ಟ್ರೀಯ ಸ್ವಯಂಸೇವಕಿ. 25 ವರ್ಷದ ಮೇಲಾಯ್ತು. ಸೋಶಿಯಲ್ ಸರ್ವಿಸ್ ಮಾಡ್ತಿದ್ದೇನೆ. ಓಣಿಯ ದೇವಸ್ಥಾನವೊಂದರಲ್ಲಿ ಪ್ರತಿದಿನ ಹೆಣ್ಮಕ್ಕಳನ್ನು ಸೇರಿಸಿಕೊಂಡು ಭಜನೆ, ಅಡಿಗೆ, ರಂಗೋಲಿ, ಕಸೂತಿ … ಹೀಗೆ” ನಡೆಯುವುದು ಇದು. ಇವರೆಲ್ಲರಲ್ಲಿ ಆ ಸಿದ್ಧಾಂತ ರಾಜಕೀಯ ಸರಿ-ತಪ್ಪಿನ ಆಯ್ಕೆಗಳು ಇಷ್ಟೊಂದು ಮುಕ್ತವಾಗಿ ರೂಪಿತವಾಗುತ್ತವೆ. ದೇವಸ್ಥಾನದಲ್ಲಿ ಪ್ರಸಾದ ಹಂಚುವ ಯುವಪಡೆ, ನೈತಿಕ ಪೊಲೀಸರಾಗುತ್ತಾರೆ.  ಯಾವುದೇ ಸರ್ಕಾರೀ ಸೌಲಭ್ಯಗಳನ್ನು ‘ಮೋದಿ ಬ್ರ್ಯಾಂಡ್’ ಎಂದು ನಂಬಿಸುತ್ತಾರೆ. ಇತ್ತೀಚೆಗೆ  ರಾಜ್ಯದ ಸಚಿವರೊಬ್ಬರು ಸಮಾವೇಶದಲ್ಲಿ ‘ನಿಮಗೆಲ್ಲ ಅನ್ನಭಾಗ್ಯದ ಅಕ್ಕಿ ಕೊಟ್ಟವರ್ಯಾರು?’ ಎಂದರೆ ಮಹಿಳೆಯರು ‘ಮೋದಿ’ ಎಂದರಂತೆ. ಪತ್ರಿಕೆಯಲ್ಲಿ ಹಾಸ್ಯ ಪ್ರಸಂಗವಾಗಿ ವರದಿಯಾಗಿದ್ದರೂ ಈ ಘಟನೆಯ ಸೂಚಿತಗಳು ಹಲವು.
ವಿಜಯೋತ್ಸವದ ಭಾಷಣದಲ್ಲಿ ಅಮಿತ್ ಷಾ ಬೋಲೋ ಭಾರತ್ ಮಾತಾಕಿ, ಬೋಲೋ ಭಾರತೀಯ ಜನತಾ ಪಕ್ಷಕೀ – ಎಂದು ಘೋಷಣೆ ಹಾಕಿಸಿದರು. ಈ ಎರಡರ ಅಂತರ್ ಸಂಬಂಧ ಗಮನಾರ್ಹವೇ. ರಾಷ್ಟ್ರ ಪ್ರೇಮ, ರಾಷ್ಟ್ರರಕ್ಷಣೆ ಎಂಬ ಭಾವನಾತ್ಮಕತೆಯನ್ನು ಸತತ ಆದ್ರ್ರತೆಯಲ್ಲಿ ಉಳಿಸಿಕೊಳ್ಳಲಾಗಿತ್ತು. ಪುಲ್ವಾಮಾ, ಬಾಲಾಕೋಟ್, ಸರ್ಜಿಕಲ್ ಸ್ಟ್ರೈಕ್‍ಗಳೆಲ್ಲ ಲಕ್ಷಾಂತರ ಓಟುಗಳಾಗಿ ಬದಲಾದವು. ಚುನಾವಣೆ ಹತ್ತಿರವಾದಂತೆ ಉಗ್ರಗಾಮಿಗಳಿಗೆ ಉಮೇದು ಬರುತ್ತದೆಯೇ? ಎಂಬಂಥ ಪ್ರಶ್ನೆಗಳನ್ನು ಗಾಂಧೀ ಕೋಲು ಹುಡುಕತೊಡಗುತ್ತದೆ. ‘ಹುಟ್ಟುಗುರುಡರ ಓಣಿಯಲ್ಲಿ ಚಾಳೀಸು ಮಾರಲು ಹೊರಟ’ ಮುದುಕನನ್ನು ರಾಜಕೀಯ ರಂಗದಿಂದ ಒತ್ತುವರಿ ಮಾಡಲಾಯ್ತು.  ಮೃದು ಮಾತಿನ, ಪ್ರಬಲ್ಭ ವಿಚಾರದ ಗಾಂಧಿ ಮಾದರಿಯ ಸರಳತೆಯನ್ನು ಅರ್ಥೈಸಿಕೊಳ್ಳುವುದು ಬೇಸರವೆನ್ನಿಸಿದ ಭೋಗಪ್ರಧಾನ ಜೀವನಕ್ರಮ ಬೆಳೆಯಿತು. ಆಕ್ರಮಣಕಾರಿ ಭಾಷೆಯ, ದೊಡ್ಡ ದನಿಯ, ಆಡಂಬರ ನುಡಿಗಟ್ಟುಗಳ ವಿಧಾನ ಒಪ್ಪಿತವಾಗತೊಡಗಿತು. ಹಾಗೆಯೇ ಗಾಂಧಿಯನ್ನು ಸಂಕುಚಿತಗೊಳಿಸುವ, ಅಪ್ರಸ್ತುತಗೊಳಿಸುವ ಅಪರಾಧಗಳು ನಡೆದಾಗ ಜನ ಬೆಚ್ಚಿಬೀಳಲಿಲ್ಲ.  ಪ್ರಶ್ನಿಸಲಿಲ್ಲ.  ಆಧುನಿಕತೆಯ ಬೊನ್ಸಾಯ್‍ಗೆ ಒಳಗಾದ ಯುವಜನಾಂಗದ ಎದುರು ಗಾಂಧಿಯನ್ನು ಸ್ವಚ್ಛಭಾರತ ಅಭಿಯಾನದ ಸಂಕೇತವಾಗಿಸಲಾಯಿತು.  ಹಿಂದೂ ಮಹಾಸಭಾದ ಕಾರ್ಯಕರ್ತರು ಗಾಂಧೀಜಿಯ ಭಾವಚಿತ್ರಕ್ಕೆ ಗುಂಡು ಹೊಡೆದು, ಸಿಹಿ ಹಂಚಿ ಸಂಭ್ರಮಿಸಿ ತಮ್ಮ ಘನಂದಾರಿ ಕೆಲಸವನ್ನು ವೈರಲ್ ಮಾಡಿದರು.  ಅವರಿಗೆ ಕಾನೂನಿನ ಭಯವೇನೂ ಇರಲಿಲ್ಲ. ಗಾಂಧಿ ಹತ್ಯೆಯಾದಾಗ ಸಿಹಿ ತಿಂದವರನ್ನು ಪ್ರಶ್ನಿಸುವವರಾದರೂ ಇದ್ದರು.  ಈಗ ಆ ದನಿ ಬಲುಕ್ಷೀಣವಾಯ್ತು.  ಗಾಂಧೀಹತ್ಯೆಯ ಅಣಕು ಮತ್ತು ಗೋಡ್ಸೆ ಜನ್ಮದಿನದ ಪ್ರಯತ್ನಗಳು ಒಟ್ಟೊಟ್ಟಿಗೇ ನಡೆಯತೊಡಗಿದವು.  ಇದೇ ಮೇ 19ರಂದು ಮಂಗಳೂರು ಮತ್ತೆ ಈ ವಿಕೃತಿಗೆ ಸಾಕ್ಷಿಯಾಯಿತು.  ಗಾಂಧಿಯನ್ನು ಹತ್ಯೆ ಮಾಡುವುದು ಎಂದರೆ- ಈಶ್ವರ ಅಲ್ಲಾ ತೇರೋ ನಾಮ್ ಎಂಬ ವಿವೇಕವನ್ನು ಹತ್ಯೆ ಮಾಡುವುದು.  ತಮ್ಮ ಚಿಂತನೆಯನ್ನು ನಿರಂತರ ಪರಿವರ್ತನೆಗೆ ಒಡ್ಡಿಕೊಳ್ಳುತ್ತ, ಅಂತರ್‍ಜಾತೀ ಮದುವೆಗಳಲ್ಲಿ ಭಾಗವಹಿಸುತ್ತೇನೆ ಎಂಬ ಜಾತಿ ನಿರಸನದ ತತ್ವವನ್ನು ಹತ್ಯೆ ಮಾಡುವುದು.  ಎಲ್ಲರ ನೋವನು ಬಲ್ಲವನಾಗುವ – ರಾಷ್ಟ್ರೀಯತೆಯನ್ನು ಹತ್ಯೆ ಮಾಡುವುದು.  ಬಹು ಸಾಂಸ್ಕøತಿಕ ಪಕಳೆಗಳಿಂದ ಕೂಡಿದ ದೇಶದ ಆತ್ಮಘನತೆಯ ಸಂಕೇತವಾಗಿದ್ದ ಗಾಂಧೀವಾದವನ್ನು ಹತ್ಯೆ ಮಾಡುವುದು.  ಆದರೆ ಇದೆಲ್ಲ ಸಲೀಸಾಗಿ, ಇದು ಹೀಗೇ ನಡೆಯಬೇಕಾದದ್ದು ಎಂಬ ಒಪ್ಪಂದವಾಗಿ ನಡೆಯುತ್ತಿದೆ.
ಗಾಂಧೀ ಹತ್ಯೆಯನ್ನು ಸಮರ್ಥಿಸಿದವರು ಗೋಡ್ಸೆಯನ್ನು ದೇಶಭಕ್ತ ಎಂದು ಕರೆದವರು ಈ ದೇಶದ ಸಂಸದರು. ಇವರೀಗ ಭಾರತದ ಬಹುತ್ವವನ್ನು ಕಾಪಾಡಬೇಕಾದವರು.  ಯಾರು ಅತ್ಯಂತ ನಿಕೃಷ್ಟವಾಗಿ ಮುಸ್ಲಿಮರ ಬಗ್ಗೆ ಕೀಳು ನುಡಿದರೋ, ಸೌಹಾರ್ದತೆಗೆ ಧಕ್ಕೆ ಬರದಿರಲಿ ಎಂದು ಎಚ್ಚರಿಸಿದವರನ್ನು ನಿಂದಿಸಿದರೋ, ಯಾರ ನಾಲಿಗೆ ಜನಾಂಗೀಯ ಭೇದದ ನಂಜು ಕಾರುತ್ತಿತ್ತೋ, ಯಾರು ರಕ್ತಶುದ್ಧತೆಯ ಮಲಿನ ಮಾತುಗಳನ್ನಾಡಿ ಯುವ ಜನಾಂಗದ ದಿಕ್ಕು ತಪ್ಪಿಸಿದರೋ, ಯಾರು ಎಳೆಯ ಜೀವಗಳನ್ನು ಹೆಣವಾಗಿಸಿ ರಾಜಕಾರಣ ಮಾಡಿದರೋ, ಯಾರು ಮತಾಂಧತೆಯ ಬೆಂಕಿಯಲ್ಲಿ ಸಂವಿಧಾನವನ್ನು ನಿರಾಕರಿಸುವ ಬದಲಿಸುವ ಮಾತುಗಳನ್ನು ಆಡಿದರೋ ಅಂಥವರನ್ನು ನಮ್ಮ ಜನರು ಲಕ್ಷಾವಧಿ ಮತಗಳ ಅಂತರದಿಂದ  ಆಯ್ಕೆ ಮಾಡಿದರು.  ಧರ್ಮದ ದೊಡ್ಡ ವಿಭಾಜಕದಲ್ಲಿ ಜಾತಿಯ ಬಣ್ಣಗಳು ಕಲಸಿದಂತೆ ಕಾಣುತ್ತಿದೆ.  ಹಾಗಿದ್ದರೆ ನಿಜಕ್ಕೂ ನಡೆಯುತ್ತಿರುವುದೇನು? ಜನರಿಗೆ ಹಿಂಸೆ ಬೇಕಿದೆಯೇ? ಯಾರಿಂದ ಯಾರು ಪ್ರಭಾವಿತರಾಗುತ್ತಿದ್ದಾರೆ? ಜನರಿಂದ ರಾಜಕಾರಣಿಗಳೋ?, ರಾಜಕಾರಣಿಗಳಿಂದ ಜನರೋ? ಈ ಸಮೀಕರಣವನ್ನು ಬಿಡಿಸುವುದು ಹೇಗೆ? ಪ್ರಜಾಪ್ರಭುತ್ವದಲ್ಲಿ ಯಾವ ಪಕ್ಷ ಗೆದ್ದಿದೆ ಎನ್ನುವುದಲ್ಲ. ಯಾವ ಸಿದ್ಧಾಂತ ಗೆದ್ದಿದೆ ಎನ್ನುವುದು ಮುಖ್ಯ. ಗೆದ್ದವರ ಸಿದ್ಧಾಂತ ಜನರ ಮನಸ್ಸಿನಲ್ಲಿ ಬಹಳ ತೀವ್ರವಾಗಿ ಹರಡಿಕೊಳ್ಳುತ್ತದೆ.  ಒಮ್ಮೆ ಒಪ್ಪಿತವಾದ ಸಿದ್ಧಾಂತದಿಂದ ಜನಪ್ರಜ್ಞೆಯನ್ನು ಹೊರಳಿಸುವುದು ಸುಲಭವಲ್ಲ. ಹಾಗಾದರೆ…. ಗಾಂಧಿಯ ಭಾರತಕ್ಕೆ ಗುಂಡು ಹೊಡೆಯಲಾಗುತ್ತಿದೆಯೇ? ಇದೀಗ ಅಬ್ಬರವಿಳಿದು ನಾಯಕರ ಮನಸ್ಸು – ಕುರುಕ್ಷೇತ್ರದ ಸ್ಮಶಾನದಲ್ಲಿ ಸಂಸ್ಕಾರಕ್ಕೆ ನಿಂತವರಂತೆ ವೈರಾಗ್ಯದಲ್ಲಿದೆ. ಹಾಗಾಗಿ – ಸಂವಿಧಾನವು ಗೌರವಾರ್ಹವೆನ್ನುವ, ಎಲ್ಲರನ್ನೂ ಒಳಗೊಳ್ಳಬೇಕೆನ್ನುವ, ಗಾಂಧಿಯನ್ನು ಗೌರವಿಸುತ್ತೇವೆ ಎನ್ನುವ ಮಾತುಗಳು ಬರುತ್ತಿವೆ. ಜನರು ಮಾತಿನ ಎರಡೂ ಮಾದರಿಗಳಿಂದ ಬೆರಗಾಗಿ ಮೌನವಾಗುತ್ತಿದ್ದಾರೆ.  ಪ್ರಜಾಪ್ರಭುತ್ವದ ಯಶಸ್ಸಿರುವುದೇ ಅದು ಬಹುಚಿಂತನಾ ಧಾರೆಗಳನ್ನು ಹೆಣೆದು ಮುನ್ನಡೆಯುವುದರಲ್ಲಿ. ವಿರೋಧವೇ ಇಲ್ಲದಂತೆ ಹತ್ತಿಕ್ಕುವುದರಿಂದ ಕ್ರಮೇಣ ಪ್ರಭುತ್ವ ತನ್ನ ಘನತೆಯನ್ನು ಕಳೆದುಕೊಂಡು ಕೋಡಂಗಿಯಾಗಬೇಕಾಗುತ್ತದೆ.
ನಟರಾಜ್ ಹುಳಿಯಾರ್ ಅವರು ಲಾರೆನ್ಸ್ ಫೆರ್ಲಿಂಘೆಟ್ಟಿಯ ಕವಿತೆಯೊಂದನ್ನು ಅನುವಾದಿಸಿದ್ದಾರೆ. ಜನ ಕುರಿಗಳಾದರೆ, ಆ ಕುರಿಗಳ ಗುರಿ ತಪ್ಪಿಸುವವರಿದ್ದರೆ, ದೇಶದ ನಾಯಕರು ಹಸಿ ಸುಳ್ಳುಗಾರರಾದರೆ, ಸಂತರು ಮೌನವಾಗಿದ್ದರೆ, ಅನ್ಯದ್ವೇಷಿಗಳು ಗಾಳಿಯಂತೆ ಎಲ್ಲೆಡೆ ಹರಡಿಕೊಂಡಿದ್ದರೆ, ದುಷ್ಟರು ಜನನಾಯಕರಾದರೆ, ಹಕ್ಕುಗಳು ನಾಶವಾದರೂ ಸ್ವಸ್ಥರಾಗಿರುವ ಜನರಿದ್ದರೆ . . . ಆ ದೇಶವನ್ನು ಕಂಡು ಅಯ್ಯೋ ಎಂದು ಮರುಗೋಣ,
ಓ ನನ್ನ ದೇಶವೇ
ಓ ನನ್ನ ಸುಮಧುರ ದೇಶವೇ
ನಿನಗೆ ನನ್ನ ಕಣ್ಣೀರು.
ನಿಜವಾದ ರಾಷ್ಟ್ರಭಕ್ತಿಯ ಪಲಕುಗಳಿವು. ಈ ಸರಳ ಭಾಷೆ ಜನರಿಗೆ ತಿಳಿಯಬಹುದೇ?
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...