Homeರಂಜನೆಕ್ರೀಡೆಬಿಸಿಸಿಐ ಅಧ್ಯಕ್ಷಗಿರಿ ಹೈಡ್ರಾಮಾ: ಗಂಗೂಲಿ ಅಮಿತ್ ಶಾರನ್ನು ಭೇಟಿಯಾಗಿದ್ದೇಕೆ?

ಬಿಸಿಸಿಐ ಅಧ್ಯಕ್ಷಗಿರಿ ಹೈಡ್ರಾಮಾ: ಗಂಗೂಲಿ ಅಮಿತ್ ಶಾರನ್ನು ಭೇಟಿಯಾಗಿದ್ದೇಕೆ?

- Advertisement -
- Advertisement -

ಕ್ರಿಕೆಟ್ ದಾದಾ ಸೌರವ್ ಗಂಗೂಲಿ ಬಿಸಿಸಿಐಗೆ ಅಧ್ಯಕ್ಷರಾಗಿ ಆಯ್ಕೆಯೇನೊ ಆಗಿದ್ದಾರೆ. ಆದರೆ ಆ ಆಯ್ಕೆಯ ಹಿಂದೆ ತಡರಾತ್ರಿವರೆಗೆ ನಡೆದ ವಿದ್ಯಮಾನಗಳು ಈಗ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ. ಅಕ್ಟೋಬರ್ 14ರ ರಾತ್ರಿ ಸುಮಾರು 10.30ರವರೆಗೆ ಬಿಸಿಬಿಸಿ ಚರ್ಚೆಗಳು ನಡೆದ ನಂತರವೇ ಗಂಗೂಲಿ ಮತ್ತು ಬ್ರಿಜೇಶ್ ಪಟೇಲ್ ನಡುವಿನ ಉಮೇದುವಾರಿಕೆ ಇತ್ಯರ್ಥಕ್ಕೆ ಬಂದು ದಾದಾ ಬಿಸಿಸಿಐ ಅಧ್ಯಕ್ಷರೆಂದು ಆಯ್ಕೆಯಾಯ್ತು. ಆದರೆ ಅವತ್ತು ಸಂಜೆಯವರೆಗೂ ಅಧ್ಯಕ್ಷಗಿರಿಯ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದದ್ದು ಕರ್ನಾಟಕದ ಬ್ರಿಜೇಶ್ ಪಟೇಲ್ ಹೆಸರು. ಯಾಕೆಂದರೆ ಬ್ರಿಜೇಶ್ ಪಟೇಲ್ ಗೆ ಬೆನ್ನೆಲುಬಾಗಿ ನಿಂತದ್ದು ಬಿಸಿಸಿಐ ಮಾಜಿ ಅಧ್ಯಕ್ಷ ಶ್ರೀನಿವಾಸನ್. ಇವತ್ತಿಗೂ ಇಂಡಿಯಾ ಕ್ರಿಕೆಟ್ ಅಡ್ಮಿನಿಸ್ಟ್ರೇಷನ್ ಮೇಲೆ ಶ್ರೀನಿವಾಸನ್ ಅವರಿಗೆ ಬಿಗಿ ಹಿಡಿತವಿದೆ. ಹಾಗಾಗಿಯೇ ದಕ್ಷಿಣ ಭಾರತದ ರಾಜ್ಯಗಳು ಸೇರಿದಂತೆ ಪೂರ್ವ ಭಾರತದ ಹಲವು ರಾಜ್ಯಗಳ ಕ್ರಿಕೆಟ್ ಅಸೋಸಿಯೇಷನ್ ಗಳು ಬ್ರಿಜೇಶ್ ಪಟೇಲ್ ಗೆ ಬೆಂಬಲ ಸೂಚಿಸಿದ್ದವು.

ಸ್ವತಃ ಗಂಗೂಲಿಗೇ ತಾನು ಆಯ್ಕೆಯಾಗುವ ವಿಶ್ವಾಸ ಇರಲಿಲ್ಲ ಅನ್ನೋದನ್ನು ಅವರೇ ಹೇಳಿಕೊಂಡಿದ್ದಾರೆ.”ರಾತ್ರಿ ಹತ್ತೂವರೆಗೆ ನನಗೆ ಫೋನ್ ಮಾಡಿ ಹೇಳಿದಾಗ ನಂಬಲೇ ಆಗಲಿಲ್ಲ. ಅಲ್ಲಿವರೆಗೂ ನಾನು ಚೇರ್ಮನ್ ಆಗ್ತೀನಿ ಅನ್ನೋ ವಿಶ್ವಾಸ ಇರಲಿಲ್ಲ” ಎಂಬ ಗಂಗೂಲಿಯ ಮಾತುಗಳು ಇಡೀ ಆಯ್ಕೆಯನ್ನು ಅನುಮಾನಿಸುವಂತೆ ಮಾಡುತ್ತವೆ. ಹಾಗಿದ್ದರೆ ಕೊನೇ ಕ್ಷಣದಲ್ಲಿ ಇಡೀ ಸಿನೇರಿಯಾವನ್ನೇ ಬದಲಾಯಿಸಿದ್ದು ಯಾರು? ಯಾವ ಲಾಭಕ್ಕಾಗಿ? ಇದರ ಹಿಂದೆ ಏನಾದರು ರಾಜಕೀಯ ಲೆಕ್ಕಾಚಾರಗಳಿವೆಯೇ?

ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವಾಗಿ ನಿಲ್ಲೋದು ಕೇಂದ್ರ ಸಚಿವ ಅನುರಾಗ್ ಠಾಕೂರ್!

ಮೋದಿಯವರ ಸಂಪುಟದಲ್ಲಿ ಹಣಕಾಸು ರಾಜ್ಯ ಖಾತೆ ಸಚಿವರಾಗಿರುವ ಅನುರಾಗ್ ಠಾಕೂರ್ ಈ ಹಿಂದೆ ಇದೇ ಬಿಸಿಸಿಐನ ಅಧ್ಯಕ್ಷರಾಗಿದ್ದಂತವರು. ಹಾಗಾಗಿ ಅವತ್ತು ನಡೆದ ಸಭೆಗೆ ಹೋಗುವ ಹಕ್ಕು, ಅರ್ಹತೆಗಳು ಅವರಿಗಿದ್ದವು. ಅವರು ಸಭೆಗೆ ಬಂದ ನಂತರವೇ ಇಡೀ ವಾತಾವರಣ ತಲೆಕೆಳಗಾಯಿತು ಎನ್ನುತ್ತಿವೆ ಮೂಲಗಳು. ಮೇಲಿನಿಂದ ಆದೇಶವನ್ನು ಹೊತ್ತು ತಂದಂತಿದ್ದ ಅವರ ದೃಢ ನಿಲುವು ಗಂಗೂಲಿ ಪರ ವ್ಯಕ್ತವಾಗುತ್ತಿದ್ದಂತೆಯೇ ಬ್ರಿಜೇಶ್ ಪಟೇಲ್ ಪರವಾಗಿ ನಿಂತಿದ್ದವರು ಒಬ್ಬೊಬ್ಬರಾಗಿ ಗಂಗೂಲಿ ಬೆನ್ನ ಹಿಂದಕ್ಕೆ ಸರಿದುಕೊಂಡಿದ್ದರು. ಸ್ವತಃ ಶ್ರೀನಿವಾಸನ್ ಅಸಹಾಯಕರಾಗಬೇಕಾಗಿ ಬಂತು ಎನ್ನುತ್ತಾರೆ ಸಭೆಯಲ್ಲಿ ಭಾಗಿಯಾಗಿದ್ದವರೊಬ್ಬರು. ಅಲ್ಲಿಂದಾಚೆಗೆ ಶ್ರೀನಿವಾಸನ್, ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರಿಗೆ ಮುಖಕ್ಕೆ ಮುಖ ಕೊಟ್ಟು ಮಾತಾಡಲಿಲ್ಲವಾದರು ಗಂಗೂಲಿ ಅವಿರೋಧ ಆಯ್ಕೆಗೆ ಸಮ್ಮತಿ ಸೂಚಿಸಿದರು ಎನ್ನುವ ಮೂಲಗಳು, ಒಂದು ಹಂತದಲ್ಲಿ ಏಕಪಕ್ಷೀಯ ತೀರ್ಪು ನೀಡುವಂತೆ “ಗಂಗೂಲಿ ಬಿಸಿಸಿಐ ಪ್ರೆಸಿಡೆಂಟ್ ಆಗಲು ಸಹಕಾರ ಕೊಡಿ, ಅದಕ್ಕೆ ಬದಲಾಗಿ ನೀವು (ಬ್ರಿಜೇಶ್ ರತ್ತ ಬೆರಳು ತೋರಿ) ಐಪಿಎಲ್ ಚೇರ್ಮನ್ ಆಗಿ” ಎಂಬ ಸಂಧಾನ ಸೂತ್ರವನ್ನು ಮುಂದಿಟ್ಟಾಗ ಎಲ್ಲರೂ ಒಪ್ಪಿಕೊಳ್ಳಬೇಕಾಯ್ತು ಎಂಬುದನ್ನೂ ಬಯಲುಗೊಳಿಸಿವೆ.

ಅನುರಾಗ್ ಠಾಕೂರ್ ವಿರುದ್ಧ ಸಿಡಿದೇಳಬಹುದಾದ ಎಲ್ಲಾ ಸಾಮರ್ಥ್ಯವೂ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಮೂಲದ ಶ್ರೀನಿವಾಸನ್ ಅವರಿಗೆ ಇದ್ದವು. ಆದರೆ ಈ ಇಬ್ಬರೂ ಒಂದು ವಿಚಾರದಲ್ಲಿ ಸಮಾನ ಮನಸ್ಕರೂ ಹೌದು. ಬಿಸಿಸಿಐನಲ್ಲಿ ಹಣದ ಹರಿದಾಟ ಹೆಚ್ಚಾದಂತೆ ಭ್ರಷ್ಟಾಚಾರವೂ ಮಿತಿ ಮೀರಿತ್ತು. ಐಪಿಎಲ್ ಕಾಲಿಟ್ಟ ನಂತರವಂತೂ ಹಣದ ಹೊಳೆಯೇ ಹರಿದಾಡಲು ಶುರುವಾಗಿತ್ತು. ಆಗ ಮಧ್ಯಪ್ರವೇಶಿಸಿದ್ದ ಸುಪ್ರೀಂ ಕೋರ್ಟ್ 2017ರಲ್ಲಿ ನಾಲ್ಕು ಜನರ ಕಮಿಟಿ ಆಫ್ ಅಡ್ಮಿನಿಸ್ಟ್ರೇಟರ್'  ಅನ್ನು ರಚಿಸಿ, ಅವರ ನಿಗಾವಣೆಯಲ್ಲೆ ಆಡಳಿತ ನಡೆಸಬೇಕು, ಮುಖ್ಯವಾಗಿ ಲೋಧಾ ಸಮಿತಿಯ ಶಿಫಾರಸ್ಸುಗಳು ಜಾರಿಯಾಗುವಂತೆ ನೋಡಿಕೊಳ್ಳಬೇಕು ಎಂದಿತ್ತು. ಮಾಜಿ ಮಹಾ ಲೇಖಪಾಲಕರಾದ ವಿನೋದ್ ರೈ ನೇತೃತ್ವದ ಸಮಿತಿಗೆ ರಾಮಚಂದ್ರ ಗುಹಾ, ವಿಕ್ರಂ ಲಿಮಾಯೆ ಮತ್ತು ಡಯಾನಾ ಎಡುಲ್ಜಿಯವರನ್ನು ಸದಸ್ಯರನ್ನಾಗಿ ನ್ಯಾಯಾಲಯವೇ ನೇಮಕ ಮಾಡಿತ್ತು. ಆ ಸಮಿತಿ ಬಂದ ನಂತರ ಬಿಸಿಸಿಐನ ಘಟಾನುಘಟಿಗಳ ಕೈಕಟ್ಟಿ ಹಾಕಿದಂತಾಗಿತ್ತು. ಸಾಕಷ್ಟು `ಬಿಸಿಸಿಐ ಬಿಗ್ ಹ್ಯಾಂಡ್’ಗಳು ಈ ಸಮಿತಿ ತೊಲಗಿದರೆ ಸಾಕು ಎಂದು ಕನವರಿಸುತ್ತಿದ್ದಾರೆ. ಅಂತವರಲ್ಲಿ ಠಾಕೂರ್ ಮತ್ತು ಶ್ರೀನಿವಾಸ್ ಕೂಡಾ ಇದ್ದಾರೆ. ಸಮಿತಿಯೇ ನಿಜವಾದ ದುಶ್ಮನ್ ಆಗಿರುವಾಗ, ಅದರ ವಿರುದ್ಧ ಹೋರಾಡಲು ಸಜ್ಜಾಗುತ್ತಿರುವ ಸಂದರ್ಭದಲ್ಲಿ ನಮ್ಮನಮ್ಮಲ್ಲೆ ಮನಸ್ತಾಪವೇಕೆ ಎಂಬ ಸೂತ್ರದಡಿ ಶ್ರೀನಿವಾಸನ್ ಕೂಡಾ ಠಾಕೂರ್ ಗೆ ಎದುರಾಡದೆ ಕೊಟ್ಟು-ತೆಗೆದುಕೊಳ್ಳುವ ಆಫರ್ ಗೆ ಒಪ್ಪಿ ಕೊಂಡಿದ್ದಾರೆ.

ಅದೇನೊ ಸರಿ, ಆದ್ರೆ ಅನುರಾಗ್ ಠಾಕೂರ್ ಗಂಗೂಲಿ ಬರ ಬ್ಯಾಟಿಂಗ್ ಮಾಡಿದ್ದೇಕೆ? ಇದೇ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ, ಹಾಲಿ ಕೇಂದ್ರ ಗೃಹಸಚಿವರ ಅಮಿತ್ ಶಾರ ಮಗ ಜಯ್ ಶಾ ಕೂಡಾ ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ಅವಿರೋಧವಾಗಿ ಆಯ್ಕೆಯಾಗಿರುವುದಕ್ಕೂ ಇದಕ್ಕೂ ಏನಾದರು ನಂಟಿದೆಯಾ?

ಬಿಸಿಸಿಐ ಅಧ್ಯಕ್ಷರಾಗಿ ಗಂಗೂಲಿ ಆಯ್ಕೆ ಖಚಿತವಾಗುವುದಕ್ಕೂ ಹಿಂದಿನ ದಿನವಷ್ಟೇ ಮುಂಬೈ ನಗರಿಯಲ್ಲಿ ಅಮಿತ್ ಶಾ, ಗಂಗೂಲಿಯನ್ನು ಭೇಟಿಯಾಗಿ ಚರ್ಚಿಸಿದ್ದೇ ಈ ಎಲ್ಲಾ ಪ್ರಶ್ನೆಗಳು ಹುಟ್ಟಲು ಮೂಲ ಕಾರಣ. 2021ರಲ್ಲಿ ಎದುರಾಗಲಿರುವ ಗಂಗೂಲಿಯ ತವರು ರಾಜ್ಯ ಪಶ್ಚಿಮ ಬಂಗಾಳದ ವಿಧಾನ ಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿಗೆ ಮಣ್ಣು ಮುಕ್ಕಿಸಲು ಗಂಗೂಲಿಯನ್ನು ತನ್ನತ್ತ ಸೆಳೆದುಕೊಳ್ಳಲು ಬಿಜೆಪಿ ಗಾಳ ಹಾಕಿದೆಯಾ? ಅದರ ಭಾಗವಾಗಿಯೇ ಬಿಸಿಸಿಐ ಅಧ್ಯಕ್ಷಗಿರಿಯನ್ನು ಗಂಗೂಲಿಗೆ ಕೊಟ್ಟು ಬಂಗಾಳಿಗರ ಮನಗೆಲ್ಲುವ ಜೊತೆಗೆ, ಬಿಜೆಪಿಯಿಂದ ಅವರನ್ನು ಕಣಕ್ಕಿಳಿಸಿ, ಸ್ಟಾರ್ ಪ್ರಚಾರಕರನ್ನಾಗೂ ಬಳಸುವ ಯೋಜನೆ ಶಾ ಭೇಟಿಯ ಹಿಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಆದರೆ ಈ ವಾದವನ್ನು ತಳ್ಳಿಹಾಕಿರುವ ಗಂಗೂಲಿ “ನಾನು ಅಮಿತ್ ಶಾರನ್ನು ಇದೇ ಮೊದಲ ಬಾರಿಗೆ ಭೇಟಿಯಾದದ್ದೇನೊ ನಿಜ. ಆದರೆ ಬಿಸಿಸಿಐ ಹುದ್ದೆಯ ಚರ್ಚೆಯೇ ಅಲ್ಲಿ ನಡೆಯಲಿಲ್ಲ. ನೀವು ಈ ಉಪಕಾರ ಮಾಡಿದ್ರ ನಾವು ಆ ಉಪಕಾರ ಮಾಡ್ತೀವಿ' ಅನ್ನೋ ಮಾತುಕತೆಯೇ ಅಲ್ಲಿ ನಡೆಯಲಿಲ್ಲ" ಎಂದಿದ್ದಾರೆ. ಅದೇನೆ ಆಗಲಿ ಬಿಸಿಸಿಐ ಅಧ್ಯಕ್ಷರಾಗಿರುವ ದಾದಾನ ಟೀಮಿನಲ್ಲಿ, ಶಾರ ಮಗ ಜಯ್ ಶಾ ಪ್ರಧಾನ ಪಾತ್ರ ವಹಿಸಲಿದ್ದಾರೆ.

`ಸರ್ವಂ ರಾಜಕೀಯಂ’ ಎನ್ನುವಂತಾಗಿರುವ ಇವತ್ತಿನ ಸಂದರ್ಭದಲ್ಲಿ ಬಿಸಿಸಿಐ ಅಂಗಳದಿಂದ ಎದ್ದು ಬರುತ್ತಿರುವ ಯಾವ ಸುದ್ದಿಯನ್ನೂ ತಳ್ಳಿಹಾಕಲಿಕ್ಕಾಗುವುದಿಲ್ಲ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...