Homeಸಾಹಿತ್ಯ-ಸಂಸ್ಕೃತಿಪುಸ್ತಕ ವಿಮರ್ಶೆ"ಬರುತ್ತೀಯಾ?.. ಕೂರುತ್ತೀಯಾ?: ಭಾರತೀಯ ಸೂಳೆಲೋಕದ ಕಥೆಗಳು" ಪುಸ್ತಕದ ಮುನ್ನುಡಿ

“ಬರುತ್ತೀಯಾ?.. ಕೂರುತ್ತೀಯಾ?: ಭಾರತೀಯ ಸೂಳೆಲೋಕದ ಕಥೆಗಳು” ಪುಸ್ತಕದ ಮುನ್ನುಡಿ

'ಸೂಳೆ' ಯಿಂದ' ಲೈಂಗಿಕ ಕಾರ್ಯಕರ್ತೆ' ಎಂದು ಪದ ಬದಲಾಯಿಸಿದ ಮಾತ್ರಕ್ಕೆ ದೇಹದ ಮೇಲೆ ನಡೆಯುವ ಅತ್ಯಾಚಾರದ ಘೋರವೇನೂ ಕಡಿಮೆಯಾಗಲಾರದು. ಯಾವ ಕಾಯಿದೆಯೂ ಸಹ ದೇಹಪ್ರವೇಶದ ಹಿಂಸೆ ಮತ್ತು ಆಘಾತವನ್ನು ದೂರಮಾಡಲಾಗದು.

- Advertisement -
- Advertisement -

ಲೇಖಕಿ ಸುಕನ್ಯಾ ಕನಾರಳ್ಳಿ ಅನುವಾದಿಸಿರುವ “ಬರುತ್ತೀಯಾ?.. ಕೂರುತ್ತೀಯಾ?: ಭಾರತೀಯ ಸೂಳೆಲೋಕದ ಕಥೆಗಳು” ಪುಸ್ತಕಕ್ಕೆ ಮೂಲ ಲೇಖಕಿ ರುಚಿರಾ ಗುಪ್ತಾ ಬರೆದ ಪ್ರಸ್ತಾವನೆ.

ಈ River of Flesh and Other Stories ಕೃತಿ ನನ್ನ ತಲೆಯಲ್ಲಿ ಮೂಡಿದ್ದು ಐದು ವರುಷಗಳ ಹಿಂದೆ ನನ್ನ ಗೆಳತಿ ರಕ್ಷಂದ ಜಲೀಲ್ ಜೊತೆ ಸೂಳೆಗಾರಿಕೆ ಸಾಮಾಜಿಕವಾಗಿ ಹೆಣ್ಣಿಗಿರುವ ಅಸಮಾನ ಅಂತಸ್ತಿನ ಪರಿಣಾಮ ಮಾತ್ರವೇ ಅಲ್ಲ, ಅದು ಹೆಣ್ಣಿನ ಅಸಮಾನತೆಯನ್ನು ಮತ್ತು ಅಬಲೆತನವನ್ನು ಸ್ಥಿರೀಕರಿಸಲು ಬಳಸಲ್ಪಡುವ ಸಾಧನವೂ ಹೌದು ಎನ್ನುವುದನ್ನು ಜನರಿಗೆ ಮನದಟ್ಟು ಮಾಡುವ ಪ್ರಯತ್ನ ಮಾಡಿದಾಗೆಲ್ಲಾ ಎದುರಾಗುತ್ತಿದ್ದ ಅಡಚಣೆಗಳ ಬಗ್ಗೆ ಮಾತಾಡುತ್ತಿದ್ದಾಗ.
* * *
ನಾನು ಪ್ರಯಾಣ ಮಾಡಿದಾಗೆಲ್ಲಾ ಹಲವಾರು ಬಾರಿ `ಕರ್ತೃತ್ವ’ (agency) ಎಂಬ ಪದ ನನಗೆ ಎದುರಾಗಿದ್ದಿದೆ. ಕೆಲವು ಹೆಂಗಸರು ಮದುವೆಗೆ ಬದಲಾಗಿ ಸೂಳೆಗಾರಿಕೆಯನ್ನು ಸ್ವತಃ ಆಯ್ದುಕೊಳ್ಳುತ್ತಾರೆ; ಗಂಡಸಿನ ದಬ್ಬಾಳಿಕೆಯ ಫಲವಾಗಿ ಹುಟ್ಟಿಕೊಂಡ ರಚನೆಗಳಿಂದ ದೂರವಿರಲು ಅಥವಾ ಹೊರಬರಲು ಅದು ಸಹಾಯ ಮಾಡುತ್ತದೆ; ಕೊಳ್ಳುಬಾಕ ಸಂಸ್ಕೃತಿಯಲ್ಲಿ ಹುಟ್ಟಿ ಬೆಳೆದಿರುವ ಕಾಲೇಜು ಹುಡುಗಿಯರು ಚಪ್ಪಲಿ, ಲಿಪ್‍ಸ್ಟಿಕ್, ಬ್ಯಾಗು, ಬಟ್ಟೆ, ಪರ್ಫ್ಯೂಮು ಹೀಗೆ ತಮಗೆ ಬೇಕುಬೇಕಾದ್ದೆಲ್ಲವನ್ನು ಪಡೆಯಲು ಸೂಳೆಗಾರಿಕೆಯ ಮೊರೆ ಹೋಗುತ್ತಾರೆ; ಹೀಗೆ ಏನೇನೋ. ಅದು ಜೀವನೋಪಾಯದ ಆಯ್ಕೆಯೂ ಹೌದು ಎಂದು ಕೆಲವರು ವಾದಿಸಿರುವುದುಂಟು. ಕಡಿಮೆ ಸಂಬಳಕ್ಕೆ ಹೊರಗೆ ಮಾಡಬೇಕಾದ, ಬೆವರು ಬಸಿಯುವ ದುಡಿತದಿಂದ, ಮನೆಯೊಳಗಿನ ದಬ್ಬಾಳಿಕೆಯಿಂದ, ಮದುವೆಯೊಳಗಿನ ಹಿಂಸೆಯಿಂದ ತಪ್ಪಿಸಿಕೊಳ್ಳಲು ಸೂಳೆಗಾರಿಕೆ ಸಹಾಯ ಮಾಡುತ್ತದಂತೆ.

ರುಚಿರಾ ಗುಪ್ತಾ

ಒಬ್ಬ ಆ್ಯಕ್ಟಿವಿಸ್ಟ್ ಆಗಿ ನಾನು ಕಂಡಿರುವ ವಸ್ತುಸ್ಥಿತಿ ಸಂಪೂರ್ಣವಾಗಿ ಬೇರೆಯೇ. ಜಾತಿ ಮತ್ತು ಅಂತರ-ಪೀಳಿಗೆಯ ಸೂಳೆಗಾರಿಕೆಯ ಕೂಪಗಳಲ್ಲಿ ಸಿಕ್ಕಿಬಿದ್ದಿರುವ ಹುಡುಗಿಯರನ್ನು ಮತ್ತು ಹೆಂಗಸರನ್ನು ಸಂಘಟಿಸುವ ನನ್ನ ವೃತ್ತಿಯಲ್ಲಿ ಅವರು ಕನಿಷ್ಟ ಅಗತ್ಯಗಳನ್ನೂ ಪೂರೈಸಿಕೊಳ್ಳಲು ಒದ್ದಾಡುವುದನ್ನು ಕಂಡಿದ್ದೇನೆ. ಹೊಟ್ಟೆ, ಬಟ್ಟೆ, ಹಿಂಸೆಯಿಂದ ರಕ್ಷಣೆ ಇತ್ಯಾದಿಗಳೆಲ್ಲವೂ ಅವರಿಗೆ ಹರಸಾಹಸವೇ. ಸಾಲದ ಹಿಡಿತದಲ್ಲಿ ಒದ್ದಾಡುತ್ತಲೇ ಪ್ರಾಣ ಬಿಟ್ಟಿರುವುದನ್ನೂ ನೋಡಿದ್ದೇನೆ. ಸೂಳೆಮನೆಗಳನ್ನು ನಡೆಸುವವರು ಮತ್ತು `ಸರಕು’ ಒದಗಿಸುವ ದಲ್ಲಾಳಿಗಳು ಇಬ್ಬರೂ ಲಾಭದ ಹಣದಲ್ಲಿ ಉರುಳಾಡುತ್ತಿರುವುದನ್ನು ಗಮನಿಸಿದ್ದೇನೆ. ಅಂತಹ ಮನೆಗಳು ಬೇಕಾದಾಗ ಹುಡುಗಿಯರನ್ನು ಮತ್ತು ಹೆಂಗಸರನ್ನು ಅಗಿದು ನುಂಗಿದಷ್ಟೇ ಹಾಯಾಗಿ ಬೇಡವಾದಾಗ ಥುಪ್ಪನೆ ಉಗಿದಿರುವುದನ್ನೂ ಕಂಡಿದ್ದೇನೆ. `ಮುದುಕಿ’ಯಾಗಿದ್ದಕ್ಕೆ ಸೂಳೆಮನೆಗಳಿಂದ ಓಡಿಸಲ್ಪಟ್ಟ ಮೂವತ್ತರ ಹರೆಯದ ಹೆಂಗಸರನ್ನು ಭೇಟಿಯಾಗಿದ್ದೇನೆ. ಗಿರಾಕಿಗಳಿಗೆ ಸದಾಕಾಲ ಹೊಸದಾದ ಹಸನಾದ ಮಾಲೇ ಬೇಕಂತೆ.

ಸೂಳೆಗಾರಿಕೆಗೆ ಎಳೆದು ತರಲ್ಪಡುವ ಹುಡುಗಿಯ ಸರಾಸರಿ ವಯಸ್ಸು ಒಂಬತ್ತರಿಂದ ಹದಿಮೂರು ವರ್ಷ. ಇನ್ನೂ ಮುಟ್ಟಾಗಿಲ್ಲದ ಎಳೆಯ ಹುಡುಗಿಯರನ್ನು ದೈಹಿಕವಾಗಿ ಪಳಗಿಸಿ ಉಪಯೋಗಕ್ಕೆ ಬರುವಂತೆ ಮಾಡಲು ಐಸ್ ಬಳಸಲಾಗುತ್ತದೆ. ಈ `ಪಳಗಿಸುವ’ ಪ್ರಕ್ರಿಯೆಯಲ್ಲಿ ಅವರನ್ನು ಹೊಡೆದು ಬಡಿದು, ಉಪವಾಸ ಕೆಡವಿ, ಮಾದಕ ದ್ರವ್ಯಗಳನ್ನು ಕೊಟ್ಟು ಮತ್ತು ಬರಿಸಿ, ಜ್ಞಾನ ತಪ್ಪಿಸಿ ಹೀಗೇ ಏನೇನೋ. ಪೂರ್ತಿಯಾಗಿ ಪಳಗುವ ಹೊತ್ತಿಗೆ ಆ ಎಳೆಯ ಹುಡುಗಿ ತನ್ನ ತಲೆ ಹಿಡಿದುಕೊಟ್ಟವನನ್ನು `ಪಾಪಾ’ ಎಂದೂ, ಸೂಳೆಮನೆಯ ಮ್ಯಾನೇಜರಿಣಿಯನ್ನು `ಮಾ’ ಅಥವಾ `ಮಾಸಿ’ ಅಂತಲೋ ಕರೆಯುವುದಕ್ಕೆ ಒಗ್ಗಿಕೊಂಡಿರುತ್ತಾಳೆ. ಜೊತೆಗೆ ತನ್ನ ಅಪ್ಪನಾದವನು ತೆಗೆದುಕೊಂಡಿರುವ ಐದೋ ಹತ್ತೋ ಸಾವಿರದ ಸಾಲವನ್ನು ತಾನು ಇಷ್ಟಿಷ್ಟೇ ತೀರಿಸುತ್ತಿದ್ದೇನೆ ಎಂದು ಸಹ ನಂಬಿರುತ್ತಾಳೆ.

ಸುಕನ್ಯಾ ಕನಾರಳ್ಳಿ

ಈ ಎಳೆಯ ದೇಹಗಳ ಮೇಲೆ ಪ್ರತಿ ರಾತ್ರಿ ಸುಮಾರು ಎಂಟರಿಂದ ಹತ್ತು ಗಿರಾಕಿಗಳು ಅತ್ಯಾಚಾರ ನಡೆಸುತ್ತಾರೆ. ಹಗಲೋ ರಾತ್ರಿಯೋ, ಇಷ್ಟವಿದೆಯೋ ಇಲ್ಲವೋ, ಬಂದ ಗಿರಾಕಿಗಳನ್ನು ಹಿಂದೆ ಕಳುಹಿಸುವಂತಿಲ್ಲ. ಅಷ್ಟೇ ಅಲ್ಲ, ತಮಗೂ ಮತ್ತು ಸ್ವಲ್ಪ ವಯಸ್ಸಾದ ಸೂಳೆಯರಿಗೂ ಸೇರಿಸಿದಂತೆ ಗಿರಾಕಿಗಳಿಗೆ ಗಾಳ ಹಾಕಲು ಬೀದಿಯಲ್ಲಿ ಗಂಟೆಗಟ್ಟಲೆ ನಿಲ್ಲಬೇಕು. ಸಹಜವಾಗಿಯೇ ಈ ಹುಡುಗಿಯರು ನಿದ್ದೆಯ ಕೊರತೆಯಿಂದ, ನಿದ್ದೆಗೇಡಿತನದಿಂದ, ಜುಮ್ಮನೆ ನೋಯುವ ಕಾಲುಗಳಿಂದ ನರಳುತ್ತಿರುತ್ತಾರೆ.

ಈ ನನ್ನ ಹಾದಿಯಲ್ಲಿ ಏನೆಲ್ಲಾ ಕಂಡಾಗಿದೆ! ತುಂಡಾದ ದೇಹಗಳು, ಯೋನಿಯೊಳಗೆ ತುರುಕಲ್ಪಟ್ಟ ಬಾಟಲಿಗಳು, ಎದೆಯ ಮೇಲೆ ಸಿಗರೇಟಿನಿಂದ ಸುಟ್ಟ ಗುರುತುಗಳು, ಮತ್ತೆ ಮತ್ತೆ ಮುರಿದ ಮೂಳೆಗಳು, ಆತ್ಮಹತ್ಯೆಗಳು, ಕೊಲೆಗಳು? ಈ ಹುಡುಗಿಯರು ಅಳುತ್ತಿದ್ದರು ಅಂತಲೋ ಅಥವಾ ಉಳಿದ ಹುಡುಗಿಯರೊಂದಿಗೆ ಮಾತಾಡುತ್ತಿದ್ದರು ಅಂತಲೋ, ಅಲ್ಲಿಯ ತಲೆಹಿಡುಕರು ಮತ್ತು ಮ್ಯಾನೇಜರಿಣಿಯರು ಅವರುಗಳನ್ನು ಸಿಕ್ಕಾಪಟ್ಟೆ ಥಳಿಸಿದ್ದನ್ನು ನೋಡಿದ್ದೇನೆ. ತನ್ನ ವೈರಿಯೊಂದಿಗೇ ಸಹಾನುಭೂತಿಯನ್ನು ಬೆಳೆಸಿಕೊಳ್ಳುವುದನ್ನು ಸ್ಟಾಕ್ಹೋಮ್ ಸಿಂಡ್ರೋಮ್ (Stockholm Syndrome) ಎಂದು ಕರೆಯುತ್ತಾರೆ. ಹಲವು ಹುಡುಗಿಯರು ಅದಕ್ಕೆ ಪಕ್ಕಾಗಿ ತಮ್ಮ ತಲೆಹಿಡುಕರು ತೋರಿಸುವ ಅಲ್ಪಸ್ವಲ್ಪ ಕರುಣೆಗೂ ಸಹ ಕೃತಜ್ಞರಾಗಿರುವುದನ್ನು ಕಂಡಿದ್ದೇನೆ.

ಹಿಂಸೆ ಅದೆಷ್ಟರಮಟ್ಟಿಗೆ ಸಹಜವಾಗಿಬಿಟ್ಟಿದೆಯೆಂದರೆ ಹಲವರು ತಾವು ಅನುಭವಿಸಿದ್ದು ಹಿಂಸೆ ಎನ್ನುವುದನ್ನೂ ಅಲ್ಲಗಳೆಯುತ್ತಾರೆ. ಗಿರಾಕಿಗಳು ಕೊಡುವ ಹಿಂಸೆ ಹಿಂಸೆಯಲ್ಲವಂತೆ, ಯಾಕೆಂದರೆ ಅದಕ್ಕೆ ದುಡ್ಡು ಕೊಟ್ಟಿರುತ್ತಾರಂತೆ! ಇತ್ತೀಚಿನ ಸಂಶೋಧನೆಯ ಪ್ರಕಾರ ಈ ಹೆಂಗಸರು ತಮ್ಮ ದೇಹಗಳ ಮೇಲೆ ಮತ್ತೆ ಮತ್ತೆ ನಡೆಯುವ ದಾಳಿಯಿಂದ ಅನುಭವಿಸುವ ಸಾಮಾಜಿಕ-ಮಾನಸಿಕ ಹಾನಿ ಯುದ್ಧಹಿಂಸೆಗೆ ಪದೇಪದೇ ತುತ್ತಾಗುವವರ ಆಘಾತಕ್ಕಿಂತ ದೊಡ್ಡದು.

ಕರ್ತೃತ್ವ ಅಥವಾ ಸ್ವಶಕ್ತಿ (agency) ಎನ್ನುವುದು ತನ್ನ ಬದುಕಿಗೆ ತಾನೇ ಜವಾಬ್ದಾರರಾಗಿರುವ ಅಥವಾ ತನಗೆ ಬೇಕಾದಂತೆ ಕೆಲಮಟ್ಟಿಗಾದರೂ ಬದುಕುವ ಶಕ್ತಿ ಎಂದಾದಲ್ಲಿ ನಾನಂತೂ ಅವರ ಬದುಕುಗಳಲ್ಲಿ ಅದನ್ನು ಕಂಡಿದ್ದೇ ಕಮ್ಮಿ!
ಆದರೂ ಸಹ ಕೆಲವು ಜಾಣರು (ಮತ್ತು ಜಾಣೆಯರೂ ಸಹ) ಸೂಳೆಗಾರಿಕೆಯಲ್ಲಿ ತಪ್ಪೇನಿದೆ, ಅದೂ ಸಹ ಒಂದು ವೃತ್ತಿಯಲ್ಲವೆ ಎಂದು ವಾದಿಸುವುದನ್ನು ಕೇಳಿದ್ದೇನೆ. ಅವರ ಪ್ರಕಾರ ಅದು ಹೆಂಗಸರನ್ನು ಸಶಕ್ತರಾಗಿಸುತ್ತದೆ. ಅದರಲ್ಲಿ ಹೇಯವಾದದ್ದೇನೂ ಇಲ್ಲ. ಬದುಕಿನ ಆಯ್ಕೆಗಳಲ್ಲಿ ಸಮಾನತೆ ಎಲ್ಲಿದೆ? ಇದೂ ಹಾಗೆಯೇ ಒಂದು. ಕೆಲವರು ಇದನ್ನೂ ಒಂದು ವೃತ್ತಿ ಎಂದೇ ಪರಿಗಣಿಸಿ ಸೂಳೆಯರನ್ನು `ಲೈಂಗಿಕ ಕಾರ್ಯಕರ್ತರು’ ಎಂದು ಕರೆಯಬೇಕು ಎಂದು ಆಗ್ರಹಿಸುತ್ತಾರೆ.

ಜಾತಿ ಮತ್ತು ಅಂತರ-ಪೀಳಿಗೆಯ ಸೂಳೆಗಾರಿಕೆಯ ಕೂಪಗಳಲ್ಲಿ ಸಿಕ್ಕಿಬಿದ್ದಿರುವ ಹುಡುಗಿಯರನ್ನು ಮತ್ತು ಹೆಂಗಸರನ್ನು ಸಂಘಟಿಸುವ ನನ್ನ ವೃತ್ತಿಯಲ್ಲಿ ಅವರು ಕನಿಷ್ಟ ಅಗತ್ಯಗಳನ್ನೂ ಪೂರೈಸಿಕೊಳ್ಳಲು ಒದ್ದಾಡುವುದನ್ನು ಕಂಡಿದ್ದೇನೆ. ಹೊಟ್ಟೆ, ಬಟ್ಟೆ, ಹಿಂಸೆಯಿಂದ ರಕ್ಷಣೆ ಇತ್ಯಾದಿಗಳೆಲ್ಲವೂ ಅವರಿಗೆ ಹರಸಾಹಸವೇ. ಸಾಲದ ಹಿಡಿತದಲ್ಲಿ ಒದ್ದಾಡುತ್ತಲೇ ಪ್ರಾಣ ಬಿಟ್ಟಿರುವುದನ್ನೂ ನೋಡಿದ್ದೇನೆ.

ಈ ಜಾಣಜಾಣೆಯರು ಹೀಗೆಲ್ಲಾ ಹೇಳುವ ಮೂಲಕ ಯಥಾಸ್ಥಿತಿ ಮುಂದುವರೆಯಲಿ ಎಂದು ಬಯಸುತ್ತಾರೋ ಅಥವಾ ಯಾವುದೇ ರೀತಿಯ ಸಾಮಾಜಿಕ ಬದಲಾವಣೆಯಲ್ಲಿ ನಂಬಿಕೆಯನ್ನೇ ಕಳೆದುಕೊಂಡಿದ್ದಾರೋ ನನಗೆ ಅರ್ಥವಾಗುವುದಿಲ್ಲ. ಸೂಳೆಗಾರಿಕೆ ಅನಿವಾರ್ಯ ಎನ್ನುವುದಾದರೆ ಹೆಣ್ಣಿನ ಕೀಳು ಸ್ಥಾನಮಾನಗಳೂ ಸಹ ಅನಿವಾರ್ಯ ಎಂದು ಹೇಳುತ್ತಿದ್ದಾರೆಯೆ? ಸೂಳೆಗಾರಿಕೆಗೆ ಹೆಂಗಸರೇ ಕಾರಣ ಎಂದು ವಾದಿಸುವಾಗ ಹೆಂಗಸರು ತಮ್ಮೊಂದಿಗೆ ತಾವು ಸೂಳೆಗಾರಿಕೆಯಲ್ಲಿ ತೊಡಗಿಕೊಂಡಿರುತ್ತಾರೆ ಎಂದರ್ಥವೆ? ಅದರಲ್ಲಿ ಗಂಡಸರ ಪಾತ್ರವೇಕೆ ಅವರ ಕಣ್ಣಿಗೆ ಬೀಳುವುದಿಲ್ಲ? ಯಾಕೆಂದರೆ ಗಂಡಸರಿಗೆ ವ್ಯವಸ್ಥೆಯಿಂದ ದತ್ತವಾಗಿ ಬಂದಿರುವ ಶಕ್ತಿ ಮತ್ತು ಸೌಲಭ್ಯಗಳನ್ನು ಪ್ರಶ್ನಿಸುವ ಗೋಜೂ ಅವರಿಗೆ ಬೇಡ. ಅಂದರೆ ಗಂಡಸರಿಗೆ ವ್ಯವಸ್ಥೆಯ ಮೂಲಕವೇ ಶಕ್ತಿ ಮತ್ತು ಸವಲತ್ತುಗಳು ಇರುವ ತನಕ ಹೆಂಗಸರು ತಮ್ಮನ್ನು ಆ ವ್ಯವಸ್ಥೆ ಎಷ್ಟೇ ಶೋಷಿಸಿದರೂ ಸಹ ಅದರಲ್ಲೇ ಲಭ್ಯವಿರುವ ಆಯ್ಕೆಗಳಲ್ಲಿ ಹೇಗೋ agency ಯನ್ನು ಪಡೆದುಕೊಳ್ಳಬೇಕು!
* * *
ಈ ಸಂದರ್ಭದಲ್ಲಿಯೇ ರಕ್ಷಂದ ನನಗೆ ಈ ಪುಸ್ತಕದ ಹೊಳಹನ್ನು ಒದಗಿಸಿದ್ದು. ಸೂಳೆಗಾರಿಕೆ ಮತ್ತು ಹೆಣ್ಣಿನ ಕೀಳು ಸ್ಥಾನಮಾನ ಹೇಗೆ ಪರಸ್ಪರ ತಳುಕು ಹಾಕಿಕೊಂಡಿವೆ ಎನ್ನುವುದರ ಬಗ್ಗೆ ಒಳನೋಟಗಳನ್ನು ನೀಡುವ ಕಥಾಸಂಕಲನ ತಂದರೆ ಹೇಗೆ? ಹೋಳಾಗುವ ಮುಂಚೆಯ ಭಾರತದ ಹಲವಾರು ಪ್ರಗತಿಪರ ಬರಹಗಾರರು ಅಂತಹ ಕಥೆಗಳನ್ನು ಬರೆದದ್ದಿದೆಯಲ್ಲ? ಅವಳೇ ಸ್ವತಃ ಕೆಲವು ಕಥೆಗಳನ್ನು ಒಟ್ಟುಹಾಕಿ ಅನುವಾದ ಮಾಡಿಸುವ ಹೊಣೆಯನ್ನೂ ಹೊತ್ತಾಗ ಈ ಪುಸ್ತಕಕ್ಕೆ ಒಂದು ಸ್ವತಂತ್ರ ಅಸ್ತಿತ್ವವೇ ಬಂದಂತಿತ್ತು. ಅದು ಭಾರತದ ನೆಲೆಯಲ್ಲಿ ಹುಟ್ಟಿಕೊಂಡ ಕಥೆಗಳಿಗೆ ಪ್ರಾಮುಖ್ಯತೆಯನ್ನು ಬೇಡಿತು. ನಾವು ಪ್ರಾರಂಭಕ್ಕೆ ಬೆಂಗಾಲಿ ಮತ್ತು ಹಿಂದೂಸ್ತಾನಿ ಕಥೆಗಳನ್ನು ಹುಡುಕಿದೆವು. ನಡೆದಂತೆ ಹಾದಿ ತಾನಾಗಿಯೇ ಬಿಚ್ಚಿ ಬೆಳೆಯಿತು. ಯಾರೋ ಒಬ್ಬರು ಹಿಂದಿಯಲ್ಲಿ ಒಂದು ಅದ್ಭುತ ಕಥೆ ಇದೆ ನೋಡಿ ಎಂದರು. ಇನ್ಯಾರೋ ಇಂಗ್ಲಿಷಿನಲ್ಲಿರುವ ಆ ಸೂಕ್ಷ್ಮವಾದ ಕಥೆಯನ್ನು ಗಮನಿಸಬಹುದಲ್ಲ ಎಂದರು. ಹತಾಶೆಯ ಅಂಚಿಗೆ ಒಯ್ಯುವ ಆ ಮರಾಠಿ ಕಥೆ? ಮನಸ್ಸಿಗೆ ಬರೆ ಹಾಕಿದಂತೆ ಬೆಚ್ಚಿಬೀಳಿಸುವ ಈ ಮಲೆಯಾಳಂ ಕಥೆ? ಎದೆ ಒಡೆಸುವ ಆ ತಮಿಳು ಕಥೆ? ಕರಗಿ ಕಣ್ಣೀರು ಬರಿಸುವ ಈ ಕನ್ನಡ ಕಥೆ? ನವಿರಾದ ಆ ಕೊಂಕಣಿ ಕಥೆ? ಮನಸ್ಸನ್ನು ತಟ್ಟುವ ಈ ಅಸ್ಸಾಮಿ ಕಥೆ? ವಾಸ್ತವವನ್ನು ದಿಟ್ಟವಾಗಿ ತೆರೆದಿಡುವ ಆ ಪಂಜಾಬಿ ಕಥೆ? ಸವಾಲೆಸೆಯುವ ಈ ಒರಿಯಾ ಕಥೆ? ? ಹೀಗೆ ಈ ಸಂಕಲನದಲ್ಲಿ ಈಗ ಹನ್ನೆರಡು ಭಾಷೆಗಳಿಂದ ಆಯ್ದ ಕಥೆಗಳಿವೆ.

ಈ ಎಲ್ಲ ಕಥೆಗಳು ಉಪಖಂಡದ ಉದ್ದಗಲಕ್ಕೂ ಹೆಣ್ಣಿಗಿರುವ ಕೀಳು ಸ್ಥಾನಮಾನದ ಸಾಮಾನ್ಯ ಅಂಶಗಳನ್ನು ಎತ್ತಿ ತೋರಿಸುತ್ತವೆ. ತುಳಿಯ ಲ್ಪಟ್ಟವರನ್ನು ಸದಾ ಕಾಡುವ ಕೀಳು ಆತ್ಮಗೌರವ, ಅಪೂರ್ಣತೆ, ಖಾಲಿತನ, ತನ್ನ ಬಗ್ಗೆಯೇ ಸಂದೇಹ ಮತ್ತು ದ್ವೇಷ ಎಲ್ಲದರ ಮೇಲೆ ಬೆಳಕು ಚೆಲ್ಲುತ್ತವೆ. ಹೆಣ್ಣಿಗೆ ಸಂಬಂಧಪಟ್ಟಂತೆ agencyಎಂಬ ಪರಿಕಲ್ಪನೆಯಲ್ಲೇ ಇರುವ ಮಿತಿಗಳನ್ನು ಅನ್ವೇಷಿಸುತ್ತವೆ. ಅವಳಿಗಿರುವ agency ವ್ಯಕ್ತವಾಗುವುದು ತನ್ನನ್ನು ಮತ್ತು ತನ್ನಂತಿರುವವರನ್ನು ಧ್ವಂಸ ಮಾಡುವ ಶಕ್ತಿಯ ಮೂಲಕವೇ. ಪ್ರೇಮಚಂದರ ನಾಯಕಿ ಗಂಡನನ್ನು ಅವಹೇಳನಕ್ಕೆ ಗುರಿಮಾಡಿ ಸೇಡುತೀರಿಸಿಕೊಳ್ಳಲೆಂದೇ ಸೂಳೆಗಾರಿಕೆ ಮಾಡುತ್ತಾಳೆ. ಮಾಂಟೋನ ನಾಯಕಿ ತಾನು ಸಿಕ್ಕಿಬಿದ್ದು ಶಿಕ್ಷೆಗೊಳಗಾಗುತ್ತೇನೆಂದು ಗೊತ್ತಿದ್ದರೂ ಸಹ ತನ್ನ ತಲೆಹಿಡುಕನನ್ನು ಸಾಯಿಸುತ್ತಾಳೆ. ಇಂದಿರಾ ಗೋಸ್ವಾಮಿಯ ನಾಯಕಿ ತನ್ನ ಪ್ರೇಮಿಯ ಶವಪೆಟ್ಟಿಗೆಯಿಂದ ಬೆತ್ತಲೆಯಾಗಿ ಎದ್ದು ಹೊರನಡೆಯುತ್ತಾಳೆ. ಅಮೃತಾ ಪ್ರೀತಮರ ಕಥೆಯಲ್ಲಿ ಬರುವ `ಇಟ್ಟುಕೊಂಡವಳು’ ತನ್ನ ಪ್ರೇಮಿಯ ಮಗನ ಮದುವೆಯಲ್ಲಿ ಅವನ ಹೆಂಡತಿ ಮಕ್ಕಳೆಲ್ಲರ ಎದುರು ಹಾಡುತ್ತಾಳೆ.

ಪ್ರತಿಯೊಂದು ಕಥೆಯೂ ಸೂಳೆಯಾಗಲ್ಪಟ್ಟ ಅಥವಾ ಹೊರಗುಳಿಯಲ್ಪಟ್ಟ ಹೆಂಗಸು ಮದುವೆಯ ಒಳಗೆ ಮತ್ತು ಹೊರಗೆ ಆಯ್ಕೆಗಳಿಲ್ಲದ ಹಾದಿಯಲ್ಲಿಯೇ ಸಾಗಬೇಕಾದ ಅನಿವಾರ್ಯವನ್ನು ಬಿಚ್ಚಿಡುತ್ತವೆ. ಸೂಳೆಗಾರಿಕೆಯ ಘೋರ ಮತ್ತು ಕ್ರೌರ್ಯಗಳ ಅನಾವರಣ ಮಾಡುತ್ತಲೇ ಮದುವೆಯೆಂಬ ಸಾಂಸ್ಕೃತಿಕ ಜಾತಿವ್ಯವಸ್ಥೆ ಹೇಗೆ ಹೆಣ್ಣನ್ನು ಅಧೀನಳಾಗಿಯೇ ಉಳಿಸುವ ಹುನ್ನಾರ ಮಾಡುತ್ತದೆ ಎಂದೂ ತೋರಿಸುತ್ತದೆ.
ಈ ಕಥೆಗಳು ಜಾತಿ ಅಸಮಾನತೆಯನ್ನೂ ಸಹ ಸೂಕ್ಷ್ಮವಾದ ರೀತಿಯಲ್ಲಿ ತೆರೆದು ತೋರಿಸುವುದು ಸಹಜವೇ. ದಲಿತ ಲೇಖಕ ಬಾಬೂರಾವ್ ಬಾಗೂಲರು ತಮ್ಮ ಕಥೆಯಲ್ಲಿ ಕೆಳಜಾತಿಯ ಹೆಂಗಸೊಬ್ಬಳು ತನ್ನ ಕಾಯಿಲೆ ಬಿದ್ದಿರುವ ಮಗನನ್ನು ನೋಡಲೆಂದು ಹಣ ಹೊಂದಿಸುವ ಪ್ರಯತ್ನದಲ್ಲಿ ಅಂಗಡಿದಾರನೊಬ್ಬನ ಶೋಷಣೆಗೆ ಬಲಿಯಾಗುವ ಅಮಾನವೀಯ ರೀತಿಯನ್ನು ಚಿತ್ರಿಸಿದರೆ, ಗೋಸ್ವಾಮಿಯ ನಾಯಕಿ ತನ್ನ ಮೇಲ್ಜಾತಿ ಪ್ರೇಮಿಯೊಬ್ಬ ನೀಡಿರುವ ಮದುವೆಯ ಭರವಸೆಯನ್ನು ನೆಚ್ಚಿಕೊಂಡು ಹೇಯ ಬಡತನದಲ್ಲಿ ಬದುಕುತ್ತಿರುತ್ತಾಳೆ. ಅಮೃತಾ ಪ್ರೀತಮರ ನಾಯಕಿ ಅಧಿಕೃತವಾಗಿ Denotified Criminal Tribe ಆದ ಕಂಜರ್ ಬುಡಕಟ್ಟಿನಿಂದ ಬಂದವಳು. ವಿಭೂತಿಭೂಷಣ್ ಬಂದ್ಯೋಪಾಧ್ಯಾಯರ ಕಥೆ ಸೂಳೆಯಾಗಿಸಲ್ಪಟ್ಟ ಒಬ್ಬ ಕೆಳಜಾತಿಯ ಹೆಂಗಸು ಮತ್ತು ಎಳೆಯ ಬ್ರಾಹ್ಮಣ ಹುಡುಗನೊಬ್ಬನ ನಡುವಿನ ಬಾಂಧವ್ಯವನ್ನು ಬಿಚ್ಚಿಡುತ್ತದೆ. ಕಮಲೇಶ್ವರರ ಕಥಾನಾಯಕಿ ಕೆಳಜಾತಿಗೆ ಸೇರಿದವಳು, ಕಾಯಿಲೆಯಿಂದ ದೇಹ ನಾರುತ್ತಿದ್ದರೂ ಸಹ ಶೋಷಿಸಲ್ಪಡುತ್ತಿರುವವಳು.

ಈ ಘೋರ ಶೋಷಣೆಯ ಕಥನದಲ್ಲಿ ಗಂಡಸರೂ ಇರಲೇಬೇಕಲ್ಲ? ಅವರು ಹೆಚ್ಚಿನಂಶ ಕೊಳ್ಳೆಕೋರರು, ಧೀ ಎಂದು ನುಗ್ಗಿ ತಮಗೆ ಬೇಕಾದ್ದನ್ನು ಪಡೆದುಕೊಳ್ಳುವ ಹಕ್ಕುಳ್ಳವರು, ಸರಿತಪ್ಪುಗಳ ತೀರ್ಪುಗಾರರು, ಹಾಗೂ ಮರ್ಯಾದೆ-ಅವಮರ್ಯಾದೆಗಳ ಗೀಳಿನಲ್ಲಿ ಬಿದ್ದವರು. ಕೆಲವು ಕಥೆಗಳಲ್ಲಿ ಬರುವಂತೆ ಹೆಣ್ಣಿನ ಸೂಳೆಗಾರಿಕೆಯ ಹಣದಲ್ಲಿ ತಮ್ಮ ಹೊಟ್ಟೆಯನ್ನು ಹೊರೆದುಕೊಂಡರೆ ಇನ್ನೂ ಕೆಲವಲ್ಲಿ ಬದುಕುಳಿಯಲು ಅವಳ ಸೂಳೆಗಾರಿಕೆಯನ್ನೇ ಅವಲಂಬಿಸಿದವರು.

ಈ ಸಂಕಲನದಲ್ಲಿ ಬರುವ ಇಪ್ಪತ್ತೊಂದು ಕಥೆಗಳು ಅವಳನ್ನು ಶೋಷಿಸುವ ವ್ಯವಸ್ಥೆಯ ಹಲವು ಪದರಗಳನ್ನು ಸೂಕ್ಷ್ಮವಾಗಿ ಬಿಚ್ಚಿಡುತ್ತವೆ. ಅಲ್ಲಿ ಗಿರಾಕಿಗಳು, ತಲೆಹಿಡುಕರು, ಸೂಳೆಮನೆಗಳನ್ನು ನಡೆಸುವವರು, ಪ್ರೇಮಿಗಳು, ಗಂಡಂದಿರು, ಸೂಳೆಯನ್ನು ನೇಮಿಸುವವರು ಇತ್ಯಾದಿ ಹಲವಾರು ಶಕ್ತಿಗಳಿವೆ.

‘ಸೂಳೆ’ ಯಿಂದ’ ಲೈಂಗಿಕ ಕಾರ್ಯಕರ್ತೆ’ ಎಂದು ಪದ ಬದಲಾಯಿಸಿದ ಮಾತ್ರಕ್ಕೆ ದೇಹದ ಮೇಲೆ ನಡೆಯುವ ಅತ್ಯಾಚಾರದ ಘೋರವೇನೂ ಕಡಿಮೆಯಾಗಲಾರದು. ಯಾವ ಕಾಯಿದೆಯೂ ಸಹ ದೇಹಪ್ರವೇಶದ ಹಿಂಸೆ ಮತ್ತು ಆಘಾತವನ್ನು ದೂರಮಾಡಲಾಗದು. ಸೂಳೆಗಾರಿಕೆ ಎನ್ನುವುದು ಮೂಲದಲ್ಲಿಯೇ ಶೋಷಣೆಯ ಪ್ರವೃತ್ತಿಯನ್ನು ಹೊಂದಿರುವಂತದ್ದೇ ವಿನಾ ಅದೊಂದು ವೃತ್ತಿ ಅಲ್ಲ ಎನ್ನುವ ಸತ್ಯವನ್ನು ಅಲ್ಲಗಳೆಯಲಾಗುವುದಿಲ್ಲ. ಒಬ್ಬ ಸ್ತ್ರೀವಾದಿಯಾಗಿ ಮತ್ತು ಸಾಮಾಜಿಕ ನ್ಯಾಯಕ್ಕೆ ಹೋರಾಡುತ್ತಿರುವ ಕಾರ್ಯಕರ್ತೆಯಾಗಿ ಇಲ್ಲಿಯ ಕಥೆಗಳು ಮತ್ತು ನಾನು ಭೇಟಿಯಾಗಿರುವ ಹೆಂಗಸರ ಬದುಕಿನ ಅನುಭವಗಳು ಹೆಣ್ಣು ತಾನಾಗಿಯೇ ಸೂಳೆಯಾಗುವುದಿಲ್ಲ, ಬದಲಾಗಿ ಸೂಳೆಯಾಗಿಸಲ್ಪಡುತ್ತಾಳೆ ಎಂಬ ನನ್ನ ನಂಬಿಕೆಯನ್ನು ಬಲಪಡಿಸಿವೆ. ಈ ಸಂಕಲನ ಹೆಣ್ಣಿನ ಶೋಷಣೆಯನ್ನು ಸಮರ್ಥಿಸಿಕೊಳ್ಳುವ ಹುನ್ನಾರಗಳನ್ನು ಪ್ರಶ್ನಿಸುವತ್ತ ನಾವು ನಡೆಸಿದ ಒಂದು ಪ್ರಯತ್ನ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...