Homeಸಾಹಿತ್ಯ-ಸಂಸ್ಕೃತಿಕಥೆಬಿ.ಎಲ್.ವೇಣು ಅವರ ದುವಾ ಕಥೆ

ಬಿ.ಎಲ್.ವೇಣು ಅವರ ದುವಾ ಕಥೆ

- Advertisement -
- Advertisement -

| ಬಿ.ಎಲ್.ವೇಣು |

ಮೂಲತಃ ಚಿತ್ರದುರ್ಗದವರಾದ ಬಿ.ಎಲ್.ವೇಣುರವರು ಕಾದಂಬರಿಕಾರರಾಗಿ, ಕಥೆಗಾರರಾಗಿ, ಚಿತ್ರಸಾಹಿತಿಯಾಗಿ ಅಪಾರ ಮನ್ನಣೆ ಗಳಿಸಿದವರು. ತಂದೆ-ತಾಯಿ ಇಬ್ಬರೂ ರಂಗಕಲೆ ಹಿನ್ನೆಲೆಯವರಾಗಿದ್ದರಿಂದ ಸಾಹಿತ್ಯಾಸಕ್ತಿ ಅವರಲ್ಲಿ ಸಹಜವಾಗಿಯೇ ಬೆಳೆದುಬಂದಿದೆ. ಚಾರಿತ್ರಿಕ ಹಿನ್ನೆಲೆಯ ನೆಲದಿಂದ ಬಂದ ಅವರು ಗಂಡುಗಲಿ ಮದಕರಿನಾಯಕ, ರಾಜಾಬಿಚ್ಚುಕತ್ತಿ ಭರಮಣ್ಣನಾಯಕ, ಕಲ್ಲರಳಿ ಹೂವಾಗಿ, ಕ್ರಾಂತಿಯೋಗಿ ಮರುಳಸಿದ್ಧ, ಹೆಬ್ಬುಲಿ ಹಿರೇಮದಕರಿನಾಯಕ ಮುಂತಾದ 5 ಐತಿಹಾಸಿಕ ಕಾದಂಬರಿಗಳು ಸೇರಿದಂತೆ 26 ಕಾದಂಬರಿಗಳನ್ನು ಹಲವಾರು ನಾಟಕಗಳನ್ನು ರಚಿಸಿದ್ದಾರೆ. ಅವರ `ಪ್ರೇಮಪರ್ವ’ ಕಾದಂಬರಿಯು ಚಲನಚಿತ್ರವಾಗಿ ಲವ್‍ಸ್ಟೋರಿಗಳ ಟ್ರೆಂಡ್‍ಗೆ ನಾಂದಿ ಹಾಡಿತಲ್ಲದೆ, ನಾಲ್ಕು ಭಾಷೆಗಳಲ್ಲಿ ತೆರೆಕಂಡಿತು. ಪುಟ್ಟಣ್ಣ ಕಣಗಾಲರ `ಅಮೃತಘಳಿಗೆ’ ಸಿನಿಮಾ ಮೂಲಕ ಸಂಭಾಷಣೆ ಬರೆಯಲು ಶುರು ಮಾಡಿದ ಅವರು 60ಕ್ಕೂ ಹೆಚ್ಚು ಸಿನಿಮಾಗಳಿಗೆ ಚಿತ್ರಸಾಹಿತಿಯಾಗಿ ದುಡಿದಿದ್ದಾರೆ. ನಿರ್ದೇಶಕ ಭಾರ್ಗವ, ನಟ ವಿಷ್ಣುವರ್ಧನ್ ಮತ್ತು ಬಿ.ಎಲ್.ವೇಣುರವರ ಜೋಡಿ ಎಂಬತ್ತರ ದಶಕದಲ್ಲಿ ಯಶಸ್ವಿ ಸಿನಿ ಜೋಡಿಯಾಗಿ ಗುರುತಿಸಿಕೊಂಡಿತ್ತು. ಸಾಹಿತ್ಯ, ಸಿನಿಮಾ ಎರಡೂ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಅವರು ಈಗಲೂ ಕೃತಿಗಳ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಹೊರಗಡೆ ತಲೆ ಎತ್ತಿ ತಿರುಗಾಡಲೂ ಶರಮ್ ಆಗ್ತದೆ. ಮಾನಸಿಕ ಹಿಂಸೆಯಿಂದಾಗಿ ಬದುಕೇ ಬೇಡವೆನ್ನಿಸಿದೆ. ನನ್ನನ್ನೇ ಉಗ್ರನಂತೆ ನೋಡುತ್ತಿದ್ದಾರೇನೋ ಎಂಬ ಅಳಕು. ಯಾರೋ ಮಾಡುವ ಗಲತ್ತಿಗೆ ನಾನೇಕೆ ಶರಮ್ ಆಗಬೇಕು? ಇತಿಹಾಸದಲ್ಲಿ ಸಂಭವಿಸಿದ್ದಕ್ಕೆಲ್ಲಾ ಹೊಣೆಗಾರನಾಗಬೇಕೇಕೆ? ನನ್ನ ಯಾವ ಪ್ರಶ್ನೆಗಳಿಗೂ ಉತ್ತರ ಸಿಗುತ್ತಿಲ್ಲವೆಂಬ ಸಂಕಟ. ಪ್ರೇಯರ್ ಮಾಡಲು ಬಂದ ಇಸ್ಮಾಯಿಲ್ ತಂಪು ಆವರಿಸಿದ ಮಸೀದಿಯಲ್ಲೂ ಬೆವರೊಡೆದ. ಮನಸ್ಸು ಬಲೆಯಲ್ಲಿ ಸಿಕ್ಕ ಜೇಡ. ಮಸೀದಿ ಕೆಡವಿದರು. ಕೆಡವಿದವರೇ ಗದ್ದಲವೆಬ್ಬಿಸಿ ಅನೇಕರನ್ನು ಸಾಯಬಡಿದರು. ಪ್ರಾಣ್ ಬಚಾವ್ ಮಾಡಿಕೊಳ್ಳಲು ಹೊಡೆದಾಡಿದ್ದೆವು. ತಲವಾರ್ ಹಿಡಿದುಬಂದವರು ಇವರ ಮನೇಲಿ ವೆಪನ್ಸ್ ಅದಾವೆ ಅಂದರು. ಮಸೀದಿನಾಗೂ ಇಟ್ಕಂಡವರೆ ಅಂದರು. ಮಸೀದಿಗೂ ನುಗ್ಗಿದರು. ಇದೆಲ್ಲಾ ಪುರಾನಿ ಕಹಾನಿಯಾದರೂ ನಾವಿಲ್ಲೇ ಬದುಕಿದ್ದೇವೆ. ನಮ್ಮ ದೇಶದಲ್ಲೇ ಪರಕೀಯರಂತೆ! ಚರಿತ್ರೆ ಪುಟಗಳಲ್ಲೆಂದೋ ನಮ್ಮವರು ದರ್ಬಾರ್ ಮಾಡಿದ ನೆಲದಲ್ಲಿಂದು ಗುಲಾಮರಂತೆ ಬದುಕುವುದೂ ಕಷ್ಟವಾಗಿದೆ. ನೀವೆಲ್ಲಾ ಕನ್ವರ್ಟೆಡ್ ಮುಸ್ಲಿಮರು ಅಂತಾರೆ. ಹಿಂದೆ ನಮ್ಮವರೇ ಆಗಿದ್ದೀರಿ ಅಂತ ಜೋಕ್ಸ್ ಹೊಡಿತಾರೇ ವಿನಹ ತಮ್ಮವರಂತೆ ಕಂಡಿದ್ದಿಲ್ಲ. ನವಾಬರು ಆರನೂರು ವರ್ಷ ಆಳಿದರೂ ದೇಶವನ್ನು ದೋಚಲಿಲ್ಲ. ಇಲ್ಲಿಯೇ ಮೀನಾರು ಮಸೀದಿ ಮಹಲುಗಳನ್ನು ಕಟ್ಕೊಂಡು ಬೇಪಾರ್ ಮಾಡ್ಕೊಂಡು ಬದುಕಿದರು. ಬ್ರಿಟಿಷರಂಗೆ ದೇಶವನ್ನೇ ಲೂಟ್ ಮಾಡಿ ಹೊತ್ತೊಯ್ಯಲಿಲ್ಲ. ಬ್ರಿಟಿಷರನ್ನು ಓಡಿಸೋಕೆ ನಾವೂ ನಮ್ಮದೇ ವತನ್ ಅನ್ನೋ ಭಾವನೆಯಿಂದ್ಲೇ ಹೋರಾಡಿದೆವು. ಅವರು ಹೋಗಬೇಕಾದರೆ ದೇಶನಾ ಎರಡು ಭಾಗ ಮಾಡಿ ಮನಸ್ಸುಗಳನ್ನೂ ಒಡೆದರು. ದೇಶದ ಮೇಲೆ ಮೊಹಬತ್ ಇಲ್ಲದಿದ್ದರೆ ನಾವೇಕೆ ಇಲ್ಲಿ ಉಳೀತಿದ್ದೆವು? ನಮ್ಮ ಪಾಡಿಗೆ ನಾವು ಬೆವರು ಬಸಿದು ದುಡ್ಕೊಂಡು ಬದುಕ್ತಿದ್ದೀವಿ. ಯಾವನೋ ಸಾಬರವನು ಶತ್ರು ದೇಶದ ಜೊತೆ ದೋಸ್ತಿ ಮಾಡ್ಕೊಂಡು ಬಾಂಬ್ ಉಡಾಯಿಸಿ ಸೈನಿಕರ ಜೀವ ತೆಗೆದರೆ ಸಾರಾಸಗಟಾಗಿ ಅನುಮಾನಿಸೋದು ಹೀಯಾಳಿಸೋದು ಸರೀನಾ? ಹಿಂದು ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುದ್ಯಾನ ಎಲ್ಲಿದೆ? ಮಾಧ್ಯಮಗಳಲ್ಲಿ ಬೇರೆ ಟೀಕೆ, ತೀರ್ಪು! ಗಡ್ಡಬಿಟ್ಟೋರೆಲ್ಲಾ ಘಾತಕರೆಂಬ ಇರಿಯುವ ನೋಟ. ದೇಶವನ್ನೇ ಬಿಟ್ಟು ತೊಲಗಿ ಎಂಬಷ್ಟು ದ್ವೇಷ. ಬುದ್ಧ ಬಸವ ಗಾಂಧಿ ಹುಟ್ಟಿದ ದೇಶದಲ್ಲೇ ನಿಮ್ಮ ಹಾಗೆ ಹುಟ್ಟಿದ್ದೇವಲ್ಲ. ಗಾಂಧಿಯನ್ನು ಕೊಂದಿದ್ದು ಯಾರು? ಮುಸಲ್ಮಾನರಾ? ಬ್ರಿಟಿಷರಾ? ಹೇಳಿ? ಪಾಕಿಸ್ತಾನಕ್ಕೇ ನುಗ್ಗಿ ಬಗ್ಗುಬಡಿದು, ವಾಜಪೇಯಿರಂತಹ ಸಜ್ಜನನಿಂದ ‘ದುರ್ಗಿ’ ಅಂತ ತಾರೀಫ್ ಮಾಡಿಸಿಕೊಂಡ ಇಂದಿರಾಗಾಂಧಿನಾ, ಜಂಟ್ಲಮೆನ್ ರಾಜೀವಗಾಂಧಿನಾ ಕೊಂದಿದ್ದು ನಾವಾ? ಹಿಂದುಗಳಲ್ಲೂ ಭಯೋತ್ಪಾದಕರಿಲ್ಲವೆ ಅಂತ ಕೇಳಿದ್ರೆ ಉರ್ಕೊಂಡು ಬೀಳ್ತಿರಲ್ವೆ. ಭಯೋತ್ಪಾದಕರಿಗೆ ಯಾವ ಜಾತಿ? ಯಾವ ಧರ್ಮ? ಅವರಿಗೆ ಬೇಕಿರೋದು ಗೆಲವೂ ಅಲ್ಲ. ಎದುರಿಗೆ ನಿಂತು ಹೋರಾಡೋರಿಗೆ ಸೋಲು ಗೆಲವು ಮುಖ್ಯ. ಮೋಸಗಾರರಿಗೆ ಬೇಕಿರೋದು ನೆತ್ತರು. ಮೊನ್ನೆ ಅಸುನೀಗಿದ ನಲವತ್ತು ನಾಲ್ಕಕ್ಕೂ ಹೆಚ್ಚು ಸೈನಿಕರಲ್ಲಿ ನಸೀರ್ ಅಹ್ಮದ್ ಕೂಡ ಇದ್ದನಲ್ಲ. ಅವನದ್ದು ದೇಶನಿಷ್ಠೆಯಲ್ಲವೆ? ಜೀವ ಅಲ್ಲವೆ? ಕುಟುಂಬಸ್ಥನಲ್ಲವೆ? ನೆನಪಿಸಿಕೊಳ್ಳೋರೇ ಇಲ್ಲ! ಹಡಬೆ ಚಾನಲ್‍ನವರೂ ತುಟಿಬಿಚ್ಚಲಿಲ್ಲ! ಯಾರಿಗೂ ನಾವು ನೀವೆಲ್ಲಾ ಒಟ್ಟಿಗೆ ಬಾಳೋದು ಬೇಕಿಲ್ಲ. ದೇಶದ ಶಕ್ತಿ ಹೆಚ್ಚೋದೂ ಬೇಕಿಲ್ಲ.

ರಾಜಕಾರಣಿಗಳ ಪಾಲಿಗೆ ನಾವು ಕೇವಲ ಮತಬ್ಯಾಂಕ್. ನಾವೇನು ಅರ್ಜಿ ಹಾಕ್ಕೊಂಡು ಹುಟ್ಟಿದ್ದೆವಾ? ಕನ್ನಡ ಮಾತನಾಡೋರೆಲ್ಲಾ ಕನ್ನಡಿಗರು ಅನ್ನೋದಾದ್ರೆ ನಾವೂ ಕನ್ನಡಿಗರು. ಹಿಂದಿ ಒಂದಿಷ್ಟು ಗೊತ್ತು. ಉರ್ದು ಗೊತ್ತೇ ಇಲ್ಲ. ನಮ್ಮ ಮಕ್ಕಳೂ ಕಾನ್ವೆಂಟಿಗೇ ಹೋಗೋದು. ಹೀಗೆಲ್ಲಾ ಪ್ರಮಾಣೀಕರಿಸಬೇಕಾದ್ದೂ ಎಂತಹ ಪರಿಶಾನಿ ನೋಡಿ. ದಾಡಿ ಬಿಟ್ಟರೂ ತಪ್ಪು ಬುರ್ಕಾ ತೊಟ್ಟರೂ ತಪ್ಪು. ಒಂದು ಹಿಡಿಯಷ್ಟು ಪ್ರೀತಿ ತೋರಿಸಿದರೂ ಸಾಗರದಷ್ಟು ಪ್ರೀತಿ ಕೊಡೋರು ಕಣ್ರಿ ನಾವು. ಸಲೀಮ್ ಅನಾರ್ಕಲಿ, ಲೈಲಾ ಮಜ್ನು, ಶಿರಿನ್ ಪರಿಹಾದ್ ರಕ್ತವೇ ನಮ್ಮಲ್ಲೂ ಹರೀತಿದೆ. ನಮ್ಮಲ್ಲೂ ಸೂಫಿ ಸಂತರು, ಕಲಾಂನಂತಹ ವಿಜ್ಞಾನಿಗಳು ಹುಟ್ಟಿದ್ದಾರೆ. ಬ್ರಿಟಿಷರ ವಿರುದ್ಧ ಲಡಾಯಿಗೈದ ಟಿಪ್ಪುನಂತಹ ಶೂರರೂ ಹುಟ್ಟಿದ್ದಾರೆ. ಟಿಪ್ಪು ಹೋರಾಡಿದ್ದು ತನ್ನ ಪಟ್ಟಪದವಿಗಳಿಗಾಗಿ ಅಂತ ವಾದ ಹೂಡೋದು ಯಾವ ನ್ಯಾಯ? ಹಾಗಾದರೆ ಝಾನ್ಸಿರಾಣಿ, ಕಿತ್ತೂರ ರಾಣಿ, ಅಬ್ಬಕ್ಕ ಹೋರಾಡಿದ್ದೇಕೆ? ಇವರೆಲ್ಲಾ ಬ್ರಿಟಿಷರೊಂದಿಗೆ ರಾಜಿಯಾಗಿ ಹಾಯಾಗಿರಬಹುದಿತ್ತಲ್ಲ. ಹಾಗಾಗಿದ್ದಿದ್ದರೆ ಭಾರತ ದೇಶ ಎಂದಿಗೂ ನಮ್ಮದಾಗುತ್ತಿರಲಿಲ್ಲ. ಗಾಂಧೀಜಿ ಬರುವವರೆಗೂ ಹೋರಾಟದ ಕಾವನ್ನು ಕಾಪಾಡಿಕೊಂಡು ಬಂದ ದೇಶಪ್ರೇಮಿಗಳಲ್ಲವೆ ಇವರು? ಈಗೀಗ ಊಟ ಸೇರ್ತಾ ಇಲ್ಲ. ನಿದ್ರೆ ಬರ್ತಾ ಇಲ್ಲ. ಹೊರಗೆ ಹೆಜ್ಜೆ ಇಡಲೂ, ಕಚೇರಿಯಲ್ಲಿ ದುಡಿಯಲೂ ಮುಜುಗರ. ಯಾರೇನಂದರೂ ಸಹನೆಗೆಡುವಂತಿಲ್ಲ. ಬೈದವರನ್ನ ಬಂಧುಗಳಯ್ಯಾ ಅಂತ ಬಸವಣ್ಣೋರೇ ಅಂದಾಗ ನಮ್ಮಂಥವರ ಪಾಡೇನು. ನಾವೂ ದೇಶವಾಸಿಗಳಲ್ಲವೆ. ಭಾಯಿ ಔರ್ ಬೆಹನ್‍ಗಳಲ್ಲವೆ? ಸೈನಿಕರಲ್ಲಿ ಜಾತಿಮತ ಹುಡುಕೋದು ಸಣ್ಣತನವಲ್ಲವೆ

ನಮ್ಮವರೂ ಸೇನೆಯಲ್ಲಿಲ್ಲವೆ? ಯಾರೂ ಸತ್ತೇ ಇಲ್ಲವೆ!? ಪಾಕಿಸ್ತಾನದ ಮೇಲೆ ಯುದ್ಧ ಮಾಡಿ ವಿಷವೃಕ್ಷವನ್ನ ಒಂದೇ ಸಲ ಕಿತ್ತು ಹಾಕಿ ನೆಮ್ಮದಿಯಾಗಿ ಬಾಳಲಾದರೂ ಅವಕಾಶ ಕೊಡಿ. ಮುಖ್ಯವಾಹಿನಿಗೆ ಬನ್ನಿರೆಂಬ ವಾಹಿನಿಗಳೇ ವಿಷಜಂತುಗಳಂತೆ ನೋಡುವುದು ಸುಳ್ಳೇ? ನಮ್ಮಲ್ಲಿಯೇ ಬಡಾ ಆದ್ಮಿಗಳು ಮಿಲಿಯನಿಯರ್ಸ್ ಹಾಯಾಗಿ ಮಹಲುಗಳಲ್ಲಿದ್ದಾರೆ. ಮಿಡ್ಲ್‍ಕ್ಲಾಸ್‍ಗಳ ಗತಿಯೇನು? ಸೇನೆಗೆ ಸೇರಿ ದೇಶಪ್ರೇಮವನ್ನು ಸಾಬೀತು ಮಾಡುವ ವಯಸ್ಸೂ ನನ್ನದಲ್ಲ. ಪರರನ್ನು ಕೊಂದರೆ ಜನ್ನತ್ ಸಿಗುವುದೆಂದು ನಂಬಿದವನೂ ಅಲ್ಲ. ವಾರ್‍ಗಿಂತ ಪ್ಯಾರ್ ಈವತ್ತು ಮುಖ್ಯ. ಹೊರದೇಶಗಳಿಗಿಂತ ನಾವಿಲ್ಲಿ ಸುಖವಾಗಿಯೂ ಸುರಕ್ಷಿತವಾಗಿಯೂ ಇದ್ದೇವೆ. ಆದರೆ ಬಾಳಲು ಸುಖ ಸುರಕ್ಷತೆಗಿಂತ ನಂಬಿಕೆ ಮುಖ್ಯ ಕಣ್ರಿ. ದೇಶಭಕ್ತರೆಂದು ಪ್ರೂವ್ ಮಾಡಲು ಎಲ್ಲರ ಜೊತೆ ಪಾಕ್ ಧ್ವಜ ಸುಟ್ಟೆವು. ಮಡಿದ ಧೀರರಿಗಾಗಿ ಕ್ಯಾಂಡಲ್ ಹಿಡಿದೆವು. ಕವಿತೆ ಬರೆದು ಹಾಡಿದೆವು. ಭಾರತಮಾತಾಕಿ ಜೈ ಅಂತ ಕೂಗಿದ್ದಾಯಿತು. ರಾಮಮಂದಿರ ಕಟ್ಟೋಣ ಅಂದಿದ್ದಾಯಿತು. ಹೇಗೆ ನಂಬಿಸೋದು ನಿಮ್ಮನ್ನು! ನೀವೇ ಹೇಳಿ ಕೊಡ್ರಪ್ಪಾ? ಬೆಂಕಿ ಮಧ್ಯೆ ಬದುಕೋದು ಹೇಗೆ. ನಮಗೆ ಬದುಕಲಾದರೂ ಯಾವ ದೇಶವಿದೆ? ಈ ದೇಶ ನಮ್ಮದೂ ಅಲ್ಲವೆ? ಕಾಪಾಡೋದು ಜನ್ನತ್. ನೆರೆಗೆ ಹೊರೆಯಾಗದಿದ್ದರದೇ ಜನ್ನತ್. ನೀವು ತಿನ್ನೋದು ಉಡೋದನ್ನೇ ಅಲ್ಲವೆ ನಾವೂ ಉಡೋದು ತಿನ್ನೋದು. ದಲಿತರೂ ನಿಮ್ಮವರೆ. ನೀವು ಅವರನ್ನು ಮುಟ್ಟೋಕೇ ಹಿಂಜರಿತೀರಲ್ಲ. ನಾವೆಂದೂ ಹಾಗೆ ವರ್ತಿಸಿದವರಲ್ಲ. ನಿಮ್ಮ ದೇವಾಲಯಗಳಿಗೆ ನಾವು ಬಂದಂಗೆ ನೀವು ಮಸೀದಿಗಳಿಗೇಕೆ ಬರೋದಿಲ್ಲ! ಮಸೀದಿಗಳಿಗೆಂದೂ ನಾವು ಬೀಗವೇ ಹಾಕಿದವರಲ್ಲ. ದೇವರು ಧರ್ಮದ ಹೆಸರಿನಲ್ಲಿ ದೇಶವನ್ನು ಒಡೆವ ಕೋಮುವಾದಿ ರಾಜಕಾರಣಿಗಳನ್ನು ನಂಬದಿರಿ. ನಿಮ್ಮೊಡನೆ ಒಟ್ಟಾಗೇ ಬಾಳುತ್ತಿರುವ ನಮ್ಮನ್ನು ನಂಬಿ ಪ್ಲೀಸ್. ನಂಬಿದರೆ ನಂಬಿ ಬಿಟ್ಟರೆ ಬಿಡಿ. ನೀವು ಪ್ರೀತಿಸಿ ದ್ವೇಷಿಸಿ, ನಮ್ಮ ಸಾವು ಬದುಕು ಈ ನೆಲದಲ್ಲಿಯೇ. ಅಚ್ಚೆದಿನ್ ಬಾರದಿದ್ದರೆ ಬೇಡ, ಬುರೆದಿನ್ ಬಾರದಿದ್ದರೆ ಬಸ್-ಸಾಕಪ್ಪ. ಖುದಾನಲ್ಲಿ ನನ್ನ ದುವಾ ಇದೆ. ಬೊಗಸೆಯಿಂದ ಮುಖ ವರೆಸಿಕೊಂಡ ಇಸ್ಮಾಯಿಲ್ಗೆ ಕೆನ್ನೆಯ ಮೇಲಿಳಿದ ಕಣ್ಣೀರು ತಾಕಿದವು. ಎರಡೂ ಭುಜಗಳತ್ತ ನೋಡಿದ ಶಾಸ್ತ್ರ ಮಾಡಿ ನಿಟ್ಟುಸಿರಿನೊಂದಿಗೆ ಪ್ರೇಯರ್ ಮುಗಿಸಿ ಮೇಲೆದ್ದ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...