Homeಎಕಾನಮಿಬಡತನ ನಿವಾರಣೆ: ವಾಸ್ತವಿಕ ಒಳನೋಟಗಳಿಗೆ ಸಂದ ನೊಬೆಲ್ - ಡಿ ಉಮಾಪತಿ

ಬಡತನ ನಿವಾರಣೆ: ವಾಸ್ತವಿಕ ಒಳನೋಟಗಳಿಗೆ ಸಂದ ನೊಬೆಲ್ – ಡಿ ಉಮಾಪತಿ

- Advertisement -
- Advertisement -

ಇಂದಿರಾಗಾಂಧೀ ಸರ್ಕಾರದ ನೀತಿ ನಿರ್ಧಾರಗಳ ವಿರುದ್ಧ ಟೀಕೆಗಳು ಪ್ರತಿಭಟನೆಗಳು ಜೆ.ಎನ್.ಯು.ವಿನಲ್ಲಿ ಅಂದು ಸರ್ವೇಸಾಧಾರಣವಾಗಿದ್ದವು. ಬ್ಯಾನರ್ಜಿ ಇವುಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ 1980ರಿಂದ 2016ರ ತನಕ ಪ್ರತಿಕೂಲಗಳ ನಡುವೆಯೂ ಎಲ್ಲ ಬಗೆಯ ಅಭಿವ್ಯಕ್ತಿಗಳನ್ನೂ ಆಲಿಸಿ ಅವುಗಳಿಗೆ ಅನುವು ಮಾಡಿಕೊಟ್ಟಿತ್ತು.

ತಾನು ಅಧಿಕಾರಕ್ಕೆ ಬಂದರೆ ದೇಶದ ಐದು ಕೋಟಿ ಅತಿ ಬಡ ಕುಟುಂಬಗಳಿಗೆ ವರ್ಷಕ್ಕೆ ತಲಾ 72 ಸಾವಿರ ರುಪಾಯಿಗಳಷ್ಟು ಕನಿಷ್ಠ ಆದಾಯವನ್ನು ವಿತರಿಸುವುದಾಗಿ ಕಾಂಗ್ರೆಸ್ ಪಕ್ಷ ಇತ್ತೀಚಿನ ಲೋಕಸಭಾ ಚುನಾವಣೆಗಳಲ್ಲಿ ಘೋಷಿಸಿತ್ತು.

`ನ್ಯಾಯ್’ ಎಂದು ಕರೆಯಲಾಗಿದ್ದ ಈ ಕನಿಷ್ಠ ಆದಾಯ ಯೋಜನೆಯ ಒಟ್ಟು ವೆಚ್ಚವನ್ನು 3.6 ಲಕ್ಷ ಕೋಟಿ ರುಪಾಯಿ ಎಂದು ಅಂದಾಜು ಮಾಡಲಾಗಿತ್ತು. ಅತಿ ಬಡ ಕುಟುಂಬಗಳ 25 ಕೋಟಿ ಮಂದಿಯನ್ನು ಈ ಯೋಜನೆಯ ಫಲಾನುಭವಿಗಳು ಎಂದು ಆ ಪಕ್ಷ ಹೇಳಿತ್ತು. ಚುನಾವಣೆಗಳ ಹೊಸ್ತಿಲಿನಲ್ಲಿ ರಾಜಕೀಯ ಪಕ್ಷಗಳು ಅಲ್ಲಿಯ ತನಕ ಇಂತಹ ಮಹತ್ವಾಕಾಂಕ್ಷೆಯ ಅತಿ ದೊಡ್ಡ ಯೋಜನೆಯ ಭರವಸೆ ನೀಡಿರಲಿಲ್ಲ.

ನರೇಂದ್ರ ಮೋದಿ ಸರ್ಕಾರ ಪಾಕಿಸ್ತಾನದ ಮೇಲೆ ನಡೆಸಿದ ‘ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್’, ದೇಶದ ಜನಮಾನಸವನ್ನು ಆವರಿಸಿದ ಹೊತ್ತಿನಲ್ಲಿ ಕಾಂಗ್ರೆಸ್ ಈ ಆಶ್ವಾಸನೆಯನ್ನು ಅನಾವರಣಗೊಳಿಸಿತ್ತು. ಬಡತನದ ಮೇಲೆ ತಮ್ಮ ಪಕ್ಷ ಸಾರಿದ ಅತಿ ದೊಡ್ಡ ‘ಸರ್ಜಿಕಲ್ ಸ್ಟ್ರೈಕ್’ ಎಂದು ರಾಹುಲ್ ಗಾಂಧಿ ಬಣ್ಣಿಸಿದ್ದರು.

ಪುಲ್ವಾಮಾ- ಬಾಲಾಕೋಟ್ ದಾಳಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಚುನಾವಣೆ ಪ್ರಚಾರಕ್ಕೆ ಮಂಕು ಕವಿಸಿತ್ತು.

ಪಾಕಿಸ್ತಾನವೆಂಬ ವೈರಿಯ ಮನೆಗೆ ನುಗ್ಗಿ ಬಾಂಬ್ ಕೆಡವಿ ಪಾಠ ಕಲಿಸಿದೆವು ಎಂಬುದಾಗಿ ಆಕ್ರಮಣಕಾರಿ ಹಿಂದೂ ರಾಷ್ಟ್ರವಾದ ಮತ್ತು ಹುಸಿ ‘ದೇಶಭಕ್ತಿ’ಯ ಸುತ್ತ ‘ಮೋಶಾ’ ಸರ್ಕಾರ ಬಲಿಷ್ಠ ಕಥನ ಕಟ್ಟಿತ್ತು. ಆದರೆ ಈ ಬಲಿಷ್ಠ ಭಾವೋದ್ದೀಪಕ ಕಥನವನ್ನು ದೇಶದ ಬಹುಪಾಲು ಜನರ ನಿತ್ಯ ಬದುಕನ್ನು ಕಾಡಿರುವ ನಿಜ ಸಮಸ್ಯೆಗಳ ವಾಸ್ತವದತ್ತ ವಾಪಸು ಕರೆ ತರುವ ಪ್ರಯತ್ನವನ್ನು ಕಾಂಗ್ರೆಸ್ ನಡೆಸಿತ್ತು.

ಕಾಂಗ್ರೆಸ್ ಪಕ್ಷದ ಈ ಯೋಜನೆ ಅಭಿವೃದ್ಧಿಯನ್ನೇನೋ ಚಿಗುರಿಸಬಲ್ಲದು. ಆದರೆ ಸದ್ಯದ ಆರ್ಥಿಕ ದುಸ್ಥಿತಿಯು ಈ ಯೋಜನೆಯ ಜಾರಿಗೆ ಪೂರಕ ಅಲ್ಲ ಎಂಬುದಾಗಿ ಭಾರತೀಯ ರಿಸರ್ವ್ ಬ್ಯಾಂಕ್‍ನ ನಿವೃತ್ತ ಗೌರ್ನರ್ ರಘುರಾಮ್ ರಾಜನ್ ವಿಮರ್ಶಿಸಿದ್ದರು. ಅಭಿವೃದ್ಧಿ- ಉದ್ಯೋಗಾವಕಾಶಗಳ ಸೃಷ್ಟಿಯೊಂದೇ ಬಡತನ ನಿವಾರಣೆಯ ನೇರ ದಾರಿ. ನೇರನಗದು ನೀಡಿಕೆ ದಿವ್ಯ ಔಷಧ ಅಲ್ಲ ಎಂಬ ಪ್ರತಿಕ್ರಿಯೆಗಳು ಕಾಂಗ್ರೆಸ್ ಯೋಜನೆ ಕುರಿತು ಕೇಳಿ ಬಂದಿದ್ದವು. ಚುನಾವಣೆಗಳಲ್ಲಿ ಮೋದಿ ಇನ್ನಷ್ಟು ಘನವಾಗಿ ಗೆದ್ದರು. ಕಾಂಗ್ರೆಸ್ ಮತ್ತಷ್ಟು ಶೋಚನೀಯವಾಗಿ ಸೋತಿತು.

ಆದರೆ ಈ ಯೋಜನೆಯ ಹಿಂದಿದ್ದ ಆಲೋಚನೆ ಅಭಿಜಿತ್ ಬ್ಯಾನರ್ಜಿ ಅವರದಾಗಿತ್ತು. ಬ್ಯಾನರ್ಜಿ ಮತ್ತು ಎಸ್ತರ್ ಡಫ್ಲೋ ಹಾಗೂ ಮೈಕೇಲ್ ಕ್ರೆಮರ್‍ರಿಗೆ 2019ರ ಅರ್ಥಶಾಸ್ತ್ರ ನೊಬೆಲ್ ಪಾರಿತೋಷಕ ಸಂದಿದೆ. ಈ ಪಾರಿತೋಷಕದ ನಗದು ಬಹುಮಾನದ ಮೊತ್ತ ಆರೂವರೆ ಕೋಟಿ ರುಪಾಯಿ. 46 ವರ್ಷ ವಯಸ್ಸಿನ ಡಫ್ಲೋ ಅವರು ಬ್ಯಾನರ್ಜಿ ಅವರ ಪತ್ನಿ ಕೂಡ. ಈವರೆಗೆ ಅರ್ಥಶಾಸ್ತ್ರ ನೊಬೆಲ್ ಪಡೆದವರ ಪೈಕಿ ಅತಿ ಕಿರಿಯ ವಯಸ್ಸಿನ ಮಹಿಳೆ. ಬಡತನ ನಿವಾರಣೆಯ ದಿಕ್ಕಿನಲ್ಲಿ ಈ ಮೂರು ಮಂದಿ ಭಾರತವೂ ಸೇರಿದಂತೆ 81 ದೇಶಗಳಲ್ಲಿ ನಡೆಸಿದ ವಿಸ್ತೃತ ಕ್ಷೇತ್ರ ಪ್ರಯೋಗಗಳ ಸಂಶೋಧನೆಗೆ ದೊರೆತಿರುವ ಮಾನ್ಯತೆಯಿದು.

ಯೋಜನೆ ಮತ್ತು ಅದರ ಅನುಷ್ಠಾನಗಳ ನಡುವೆ ಬಹಳಷ್ಟು ಕಳೆದು ಹೋಗುವ ಇಲ್ಲವೇ ಸೋರಿ ಹೋಗುವ ಸಂಕೀರ್ಣ ಅನುಭವ ಭಾರತದ ಸನ್ನಿವೇಶದ್ದು. ಹೀಗಾಗಿ ನೀತಿ ನಿರ್ಧಾರಗಳ ವಿನ್ಯಾಸ ಬಹು ಮಹತ್ವದ್ದು. ಯಶಸ್ಸು ಮತ್ತು ವೈಫಲ್ಯಗಳ ನಡುವಿನ ಅಂತರವನ್ನು ನಿರ್ಧರಿಸುವಂತಹುದು. ಜಗತ್ತಿನಲ್ಲಿ ಹೆಚ್ಚುತ್ತಲೇ ನಡೆದಿರುವ ಆದಾಯ ತಾರತಮ್ಯಗಳ ಹಿಂದಿನ ಕಾರಣಗಳ ಮೇಲೆ ಬೆಳಕು ಚೆಲ್ಲಿರುವ ಸಂಶೋಧನೆಯಿದು. ಶಿಕ್ಷಣ, ಆರೋಗ್ಯ ಹಾಗೂ ಇತರೆ ಯೋಜನೆಗಳಿಗೆ ಬಡವರ ಪ್ರತಿಕ್ರಿಯೆಗಳ ವಾಸ್ತವಿಕ ಒಳನೋಟಗಳನ್ನು ಕಟ್ಟಿ ಕೊಟ್ಟಿದೆ. ಜಗತ್ತಿನಾದ್ಯಂತ 70 ಕೋಟಿ ಜನ ಕಿತ್ತು ತಿನ್ನುವ ಬಡತನದಲ್ಲಿ ಉಸಿರಾಡಿದ್ದಾರೆ. ಇವರ ಉದ್ಧಾರದ ಹೆಸರಿನಲ್ಲಿ ಸಾವಿರಾರು ಕೋಟಿ ರುಪಾಯಿಗಳನ್ನು ಸುರಿಯುವ ಸರ್ಕಾರಗಳು, ಹೀಗೆ ಸುರಿದ ಹಣ ಗುರಿ ಮುಟ್ಟಿಸಿತೇ ಎಂದು ತಲೆ ಕೆಡಿಸಿಕೊಳ್ಳುತ್ತಿಲ್ಲ.

ಈ ವಿದ್ವಾಂಸರ ಸಂಶೋಧನೆಯು ಜಾಗತಿಕ ಬಡತನವನ್ನು ತೊಲಗಿಸುವ ನಮ್ಮ ಸಾಮಥ್ರ್ಯವನ್ನು ಗಣನೀಯವಾಗಿ ಸುಧಾರಿಸಿದೆ ಮತ್ತು ಅಭಿವೃದ್ಧಿ ಅರ್ಥಶಾಸ್ತ್ರವನ್ನು ರೂಪಾಂತರಗೊಳಿಸಿದೆ ಎಂದು ನೊಬೆಲ್ ಪಾರಿತೋಷಕದ ಗುಣಕಥನವು ಬ್ಯಾನರ್ಜಿ-ಎಸ್ತರ್-ಕ್ರೇಮರ್ ಅವರ ಸಾಧನೆಯನ್ನು ಕೊಂಡಾಡಿದೆ. ನವ ಉದಾರವಾದಿ ಅರ್ಥನೀತಿಯು ಜಗತ್ತಿನಾದ್ಯಂತ ಬಡ ಜನಸಮುದಾಯಗಳ ಮೇಲೆ ಇತ್ತೀಚಿನ ದಶಕಗಳಲ್ಲಿ ನಡೆಸಿರುವ ಪ್ರಹಾರ ಅಮಾನವೀಯ. ಬ್ಯಾನರ್ಜಿ ಸಂಗಾತಿಗಳ ಸಂಶೋಧನೆಯು ಈ ಕ್ರೌರ್ಯದ ಕುರಿತು ಪರೋಕ್ಷವಾಗಿಯಾದರೂ ಜಗದ ಕಣ್ಣು ತೆರೆಸಿದೆ.

ತಮ್ಮನ್ನು ಸೆಳೆದದ್ದು ಜೆ.ಎನ್.ಯು.ವಿನ ಬೌದ್ಧಿಕ ವಾತಾವರಣ ಎಂದು ಬ್ಯಾನರ್ಜಿ ಹೇಳಿಕೊಂಡಿದ್ದಾರೆ. ಎಂಭತ್ತರ ಆರಂಭದ ದಶಕಗಳಲ್ಲಿ ಜೆ.ಎನ್.ಯು.ವಿನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿದ್ದ ಅಭಿಜಿತ್, ವಿದ್ಯಾರ್ಥಿ ಆಂದೋಲನದಲ್ಲಿ ಭಾಗವಹಿಸಿದ್ದರು. ದಸ್ತಗಿರಿಯಾಗಿ ಹತ್ತು ದಿನ ತಿಹಾರದ ಜೈಲಿನಲ್ಲಿ ಬಡವರ ಊಟದ ರುಚಿ ನೋಡಿದ್ದುಂಟು. ಮರಾಠೀ ತಾಯಿ ಮತ್ತು ಬಂಗಾಳಿ ತಂದೆಯ ಈ ಮಗ ಅರ್ಥಶಾಸ್ತ್ರಜ್ಞ ಆಗಿದ್ದು ಆಕಸ್ಮಿಕ. ಆತ ಅತ್ಯುತ್ತಮ ಬಾಣಸಿಗ. ಬಂಗಾಳೀ ಮತ್ತು ಮರಾಠೀ ಅಡುಗೆಯಲ್ಲಿ ನಿಪುಣ. ಮುಂದಿನ ವಾರ ತನ್ನ ಎರಡನೆಯ ಪುಸ್ತಕದ ಬಿಡುಗಡೆಗೆಂದು ಭಾರತಕ್ಕೆ ಬರಲಿದ್ದಾನೆ ಎಂದು ಸಂತಸ ಹಂಚಿಕೊಂಡಿದ್ದಾರೆ ತಾಯಿ ನಿರ್ಮಲಾ ಬ್ಯಾನರ್ಜಿ.

ಇಂದಿರಾಗಾಂಧೀ ಸರ್ಕಾರದ ನೀತಿ ನಿರ್ಧಾರಗಳ ವಿರುದ್ಧ ಟೀಕೆಗಳು ಪ್ರತಿಭಟನೆಗಳು ಜೆ.ಎನ್.ಯು.ವಿನಲ್ಲಿ ಅಂದು ಸರ್ವೇಸಾಧಾರಣವಾಗಿದ್ದವು. ಬ್ಯಾನರ್ಜಿ ಇವುಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ 1980ರಿಂದ 2016ರ ತನಕ ಪ್ರತಿಕೂಲಗಳ ನಡುವೆಯೂ ಎಲ್ಲ ಬಗೆಯ ಅಭಿವ್ಯಕ್ತಿಗಳನ್ನೂ ಆಲಿಸಿ ಅವುಗಳಿಗೆ ಅನುವು ಮಾಡಿಕೊಟ್ಟಿತ್ತು. ಜೆ.ಎನ್.ಯು. ಒದಗಿಸಿದ್ದ ಚಿಂತನೆ-ಅಭಿವ್ಯಕ್ತಿ-ಸಂಸ್ಕೃತಿಯ ಸ್ವಾತಂತ್ರ್ಯವು ಅಭಿಜಿತ್ ಬ್ಯಾನರ್ಜಿಯವರಂತಹ ಮೇಧಾವಿಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿತು. 2016ಕ್ಕೆ ಮುನ್ನ ಇದ್ದ ಶೈಕ್ಷಣಿಕ ಸ್ವಾತಂತ್ರ್ಯ ಇಲ್ಲಿ ಮರೆಯಾಗಿದೆ. ಕೇಂದ್ರ ಸರ್ಕಾರವು ಕೊಡಲಿ ಹಿಡಿದು ಈ ವಿಶ್ವವಿದ್ಯಾಲಯದ ಹೆಸರಿಗೆ ಮಸಿ ಬಳಿದು ಅದರ ಬುಡ ಕಡಿಯತೊಡಗಿರುವ ಇಂದಿನ ದಿನಗಳಲ್ಲಿ ಮತ್ತೊಬ್ಬ ಅಭಿಜಿತ್ ಬ್ಯಾನರ್ಜಿ ಇಲ್ಲಿ ರೂಪುಗೊಳ್ಳುವುದು ಅಸಾಧ್ಯ ಎನ್ನುತ್ತಾರೆ ಪ್ರೊ.ಅನುರಾಧಾ ಚಿನಾಯ್.

ಭಾರೀ ಮೊತ್ತದ ಬಹುಮಾನದ ಹಣವನ್ನು ಏನು ಮಾಡಲಿದ್ದೀರಿ ಎಂಬ ಪ್ರಶ್ನೆಗೆ ಎಸ್ತರ್ ಡಫ್ಲೋ ಉತ್ತರ- 1903ರಲ್ಲಿ ಮೇರಿ ಕ್ಯೂರಿ ಭೌತಶಾಸ್ತ್ರಕ್ಕೆ ನೊಬೆಲ್ ಬಹುಮಾನ ಪಡೆದಾಗ ಅದೇ ಹಣದಿಂದ ತನ್ನ ಭವಿಷ್ಯದ ಸಂಶೋಧನೆಗೆ ಅಗತ್ಯವಿರುವ ಒಂದು ಗ್ರಾಂ ರೇಡಿಯಂ ಖರೀದಿಸಿದ್ದಳು. ನಮ್ಮ ಆ ‘ಒಂದು ಗ್ರಾಂ ರೇಡಿಯಂ’ ಏನು ಎಂದು ನಾವು ಮೂರೂ ಮಂದಿ ಚರ್ಚಿಸಿ ತೀರ್ಮಾನಿಸಲಿದ್ದೇವೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...