Homeಕರ್ನಾಟಕವೈರಲ್ ಆದ ಐಎಎಸ್ ಅಧಿಕಾರಿ ಸೆಂಥಿಲ್ ಕುರಿತ ಬರಹ: 'ನಾನು ಕಂಡ ಸಸಿಕಾಂತ್ ಸೆಂಥಿಲ್' ಬರಹಕ್ಕೆ...

ವೈರಲ್ ಆದ ಐಎಎಸ್ ಅಧಿಕಾರಿ ಸೆಂಥಿಲ್ ಕುರಿತ ಬರಹ: ‘ನಾನು ಕಂಡ ಸಸಿಕಾಂತ್ ಸೆಂಥಿಲ್’ ಬರಹಕ್ಕೆ ನೆಟ್ಟಿಗರು ಥ್ರಿಲ್…

- Advertisement -
- Advertisement -

ಭಾರತದ ಬಹುತ್ವದ ಅಡಿಪಾಯಕ್ಕೆ ಅಪಾಯ ಎದುರಾದಾಗ ನಾನು ಸೇವೆಯಲ್ಲಿರವುದು ಅನೈತಿಕ ಎಂದು ಭಾವಿಸಿ ತನ್ನ ಐಎಎಸ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಸಸಿಕಾಂತ್ ಸೆಂಥಿಲ್ ಕುರಿತು ಪರ್ತಕರ್ತ ಕುಮಾರ್ ಬುರಡಿಕಟ್ಟಿಯವರು ತಮ್ಮ ಫೇಸ್ ಬುಕ್  ವಾಲ್ ನಲ್ಲಿ ದೀರ್ಘವಾದ ಮತ್ತು ಅಷ್ಟೇ ಆಪ್ತವಾದ ಬರಹವೊಂದನ್ನು ಬರೆದಿದ್ದರು. 2700ಪದಗಳಿರುವ ಆ ಬರಹವನ್ನು 800ಕ್ಕೂ ಹೆಚ್ಚು ಹಂಚಿಕೊಂಡಿದ್ದಲ್ಲದೇ ಕಾಪಿ ಮಾಡಿ ತಮ್ಮ ತಮ್ಮ ವಾಲ್ ಗಳಲ್ಲಿಯೂ ಪ್ರಕಟಿಸಿದ್ದರು. ಅದನ್ನು ನಾನುಗೌರಿ.ಕಾಂ ಓದುಗರಿಗಾಗಿ ಇಲ್ಲಿ ಯಥಾವತ್ತಾಗಿ ಪ್ರಕಟಿಸುತ್ತಿದ್ದೇವೆ.

ನಾನು ಕಂಡ ಸಸಿಕಾಂತ್ ಸೆಂಥಿಲ್

ಅದೊಂದು ದೀಪಾವಳಿ ಹಬ್ಬ. ಜಿಲ್ಲಾಧಿಕಾರಿಗೆ ಸ್ಥಳೀಯ ಉದ್ಯಮಿಯೊಬ್ಬ ದೊಡ್ಡ ಪೆಟ್ಟಿಗೆಯಲ್ಲಿ ಉಡುಗೊರೆಯನ್ನು ಕಳಿಸುತ್ತಾರೆ. ಪೆಟ್ಟಿಗೆಯೊಳಗೆ ಏನಿದೆ ಎಂದು ಮನೆಬಾಗಿಲಿಗೆ ಪೆಟ್ಟಿಗೆ ತಂದವನಿಗೆ ಜಿಲ್ಲಾಧಿಕಾರಿ ಕೇಳುತ್ತಾರೆ.

“ಸಾಹೇಬ್ರು ತಮಗೆ ದೀಪಾವಳಿ ಹಬ್ಬಕ್ಕೆ ಸ್ವೀಟ್ಸ್ ಕಳಿಸಿದ್ದಾರೆ” ಎಂದು ತಂದಾತ ಉತ್ತರಿಸುತ್ತಾನೆ. ಪೆಟ್ಟಿಗೆಯನ್ನು ಸ್ವೀಕರಿಸಿದ ಅಧಿಕಾರಿ ಮನೆಯಲ್ಲಿದ್ದ ತನ್ನ ಸಹಾಯಕರೊಬ್ಬರ ಕೈಗೆ ಅದನ್ನು ಕೊಡುತ್ತಾರೆ. ಸಹಾಯಕ ಅದನ್ನು ಒಂದು ಮೂಲೆಯಲ್ಲಿಡುತ್ತಾರೆ. ಒಂದು ವಾರವಾದರೂ ಆ ಪಟ್ಟಿಗೆ ಅಲ್ಲೇ ಬಿದ್ದಿರುತ್ತದೆ. ಇದನ್ನು ಗಮನಿಸಿದ ಸಹಾಯಕ ವಿಷಯವನ್ನು ಜಿಲ್ಲಾಧಿಕಾರಿಯ ಗಮನಕ್ಕೆ ತರುತ್ತಾರೆ.

“ಓಹೋ… ದಿಪಾವಳಿ ಸ್ವೀಟ್ಸ್ ಅಲ್ವಾ… ನೀವೇ ನಿಮ್ಮ ಮನೆಗೆ ತೆಗೆದುಕೊಂಡು ಹೋಗಿ” ಎಂದು ಅಧಿಕಾರಿಯು ಸಹಾಯಕನಿಗೆ ಹೇಳುತ್ತಾರೆ. ಮನೆಗೆ ತೆಗೆದುಕೊಂಡು ಹೋಗುವ ಮುನ್ನ ಸ್ವೀಟ್ಸ್ ಗತಿ ಏನಾಗಿದೆ ಅಂತ ನೋಡುವುದಕ್ಕೆ ಸಹಾಯಕ ಪೆಟ್ಟಿಗೆಯನ್ನು ತೆರೆಯುತ್ತಾರೆ. ಪೆಟ್ಟಿಗೆಯಲ್ಲಿ ದೊಡ್ಡ ನೋಟುಗಳ ಕಂತೆಗಳು!!!

ಸಹಾಯಕ ಕೂಡಲೇ ಇದನ್ನು ಜಿಲ್ಲಾಧಿಕಾರಿಯ ಗಮನಕ್ಕೆ ತರುತ್ತಾರೆ. ನೋಟಿನ ಕಂತೆಗಳನ್ನು ನೋಡಿದ ಜಿಲ್ಲಾಧಿಕಾರಿಗೆ ಕಡುಕೋಪ ನೆತ್ತಿಗೇರುತ್ತೆ. ಕೂಡಲೇ ಪೊಲೀಸ್ ವರಿಷ್ಠಾಧಿಕಾರಿಗೆ ಫೋನಾಯಿಸಿ ಮನೆಗೆ ಕರೆಸಿಕೊಂಡು, “ನಾನು ಕಂಪ್ಲೇಂಟ್ ಕೊಡುತ್ತೇನೆ. ಈ ಹಣದ ಪೆಟ್ಟಿಗೆ ಕಳಿಸಿರುವವನ ಮೇಲೆ ಕೇಸು ದಾಖಲಿಸಿ” ಎಂದು ಹೇಳುತ್ತಾರೆ.

ಸ್ವಲ್ಪ ಹೊತ್ತು ಮೌನವಾಗಿದ್ದ ವರಿಷ್ಠಾಧಿಕಾರಿ, “ನೀವು ಜಿಲ್ಲಾಧಿಕಾರಿ. ನೀವು ಹೇಳಿದರೆ ನಾನು ಕೇಸು ದಾಖಲಿಸಲೇಬೇಕು. ದಾಖಲಿಸುತ್ತೇನೆ. ಅದಕ್ಕೂ ಮುನ್ನ ನನ್ನದೊಂದು ಸಲಹೆ. ಇದರ ಅಗತ್ಯವಿದೆಯೇ ಎಂಬುದನ್ನು ಇನ್ನೊಮ್ಮೆ ಯೋಚಿಸಿ. ಕೇಸು ದಾಖಲಿಸಿದರೆ ಅದೊಂದು ದೊಡ್ಡ ಸುದ್ದಿಯಾಗುತ್ತದೆ. ವಿವಾದ ಸೃಷ್ಟಿಯಾಗುತ್ತದೆ. ಅದಕ್ಕೆಲ್ಲಾ ಉತ್ತರ ಕೊಡುತ್ತಾ ಹೋಗಬೇಕಾಗುತ್ತದೆ. ಆರೋಪ-ಪ್ರತ್ಯಾರೋಪಗಳು ನಮ್ಮ ಕೆಲಸದ ಮೇಲೆ ಪರಿಣಾಮ ಬೀರುತ್ತವೆ. ಮಾಡುವುದಕ್ಕೆ ಬಹಳ ಘನವಾದ ಕೆಲಸಗಳಿವೆ. ನಮ್ಮ ಶ್ರಮ, ಸಮಯವನ್ನು ಇಂತಹದ್ದರ ಮೇಲೆ ವ್ಯಯ ಮಾಡುವ ಅಗತ್ಯವಿದೆಯೇ ಎಂದು ಇನ್ನೊಮ್ಮೆ ಯೋಚಿಸಿ. ಆಮೇಲೂ ನಿಮಗೆ ಕೇಸು ದಾಖಲಿಸಬೇಕು ಎನ್ನಿಸಿದರೆ ದಾಖಲಿಸುತ್ತೇನೆ.”

ಸ್ವಲ್ಪ ಹೊತ್ತು ಯೋಚಿಸಿದ ಅಧಿಕಾರಿ, “ಬೇಡ ಬಿಡಿ. ಅವನ್ನು ಕರೆಸಿ ಈ ನೋಟಿನ ಕಂತೆಗಳನ್ನು ಅವನ ಮುಖದ ಮೇಲೆ ಎಸೆದು ಎಚ್ಚರಿಕೆ ಕೊಡಿ” ಎಂದು ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸುತ್ತಾರೆ. ಪೊಲೀಸ್ ವರಿಷ್ಠಾಧಿಕಾರಿ ಹಾಗೇ ಮಾಡುತ್ತಾರೆ.

ಈ ಜಿಲ್ಲಾಧಿಕಾರಿ ಮತ್ಯಾರೂ ಅಲ್ಲ, ಮೊನ್ನೆ ಭಾರತೀಯ ಆಡಳಿತ ಸೇವೆಗೆ ರಾಜೀನಾಮೆ ಸಲ್ಲಿಸಿದ ಸಸಿಕಾಂತ್ ಎಸ್ ಸೆಂಥಿಲ್. ಇದು ನಡೆದದ್ದು ಅವರು ರಾಯಚೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ. ಇದನ್ನು ನನಗೆ ಬಹಳ ಕಾನ್ಫಿಡೆನ್ಷಿಯಲ್ ಆಗಿ ಹೇಳಿದ್ದು ಪೊಲೀಸ್ ವರಿಷ್ಠಾಧಿಕಾರಿಯೇ. ಬಹಳ ಕಾನ್ಫಿಡೆನ್ಷಿಯಲ್ ಆಗಿ ಹೇಳಿದ್ದನ್ನು ಇಲ್ಲಿ ಬಹಿರಂಗಗೊಳಿಸಿದ್ದಕ್ಕೆ ನಾನು ಅವರ ಕ್ಷಮೆ ಕೋರುತ್ತೇನೆ. ಎಂದೂ ಪ್ರಚಾರ ಬಯಸದೇ ತನ್ನ ಪಾಡಿಗೆ ತಾನು ತನ್ನ ಕಾಯಕ ಮಾಡಿಕೊಂಡಿದ್ದ ಸೆಂಥಿಲ್ ಅವರ ಕ್ಷಮೆಯನ್ನೂ ಕೋರುತ್ತೇನೆ.
*****

ಸೆಂಥಿಲ್ ಆಗ ತಾನೆ ರಾಯಚೂರು ಜಿಲ್ಲಾಧಿಕಾರಿಯಾಗಿ ಬಂದಿದ್ದರು. ಅದಕ್ಕೂ ಮುಂಚೆ ಅವರು ಬಳ್ಳಾರಿಯಲ್ಲಿ ಗಣಿ ಮಾಫಿಯದ ಆರ್ಭಟ ಜೋರಾಗಿದ್ದಾಗ ಅಲ್ಲಿ ಅಸಿಸ್ಟೆಂಟ್ ಕಮೀಷನರ್ ಆಗಿ ಸೇವೆ ಸಲ್ಲಿಸಿದ್ದರು. ನಂತರ ಶಿವಮೊಗ್ಗೆಯ ಜಿಲ್ಲಾ ಪಂಚಾಯತ್ ಸಿಇಓ ಆಗಿ ಕಾರ್ಯನಿರ್ವಹಿಸಿದ್ದರು. ನಂತರ ಜಿಲ್ಲಾಧಿಕಾರಿಯಾಗಿ ಬಡ್ತಿ ಪಡೆದು ರಾಯಚೂರಿಗೆ ಬಂದಿದ್ದರು. ಶಿವಮೊಗ್ಗೆಯಲ್ಲಿ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ ಅವರನ್ನು ನಿತ್ಯ ಬಹಳ ಹತ್ತಿರದಿಂದ ನೋಡಿದ ನನ್ನ ಸಂಬಂಧಿಯೇ ಆದ ಅವರ ಸಹಾಯಕರೊಬ್ಬರು ನನಗೆ ಫೋನ್ ಮಾಡಿ ನಮ್ಮ ಬಾಸ್ ಈಗ ನಿಮ್ಮೂರಿಗೆ ಜಿಲ್ಲಾಧಿಕಾರಿಯಾಗಿ ಬರುತ್ತಿದ್ದಾರೆ ಎಂದು ತಿಳಸಿದ್ದರಲ್ಲದೇ ಅವರ ಸರಳತೆ, ದಕ್ಷತೆ, ಪ್ರಾಮಾಣಿಕತೆ, ನೋವಿಗೆ ಮಿಡಿಯುವ ಹೃದಯ, ಬಡವರ ಬಗೆಗಿನ ಕಾಳಜಿ – ಎಲ್ಲವನ್ನೂ ವಿವರಿಸಿ ಅವರ ಗುಣಗಾನ ಮಾಡಿದ್ದರು. ರಾಯಚೂರಿಗೆ ಬಂದಾಕ್ಷಣ ಮೊದಲು ಹೋಗಿ ಅವರನ್ನು ಭೇಟಿ ಮಾಡಿ ಎಂತಲೂ ತಿಳಿಸಿದ್ದರು.

ಅಂತೆಯೇ ಸೆಂಥಿಲ್ ರಾಯಚೂರಿಗೆ ಬಂದು ನಿವೃತ್ತಿ ಹೊಂದಲಿದ್ದ ಭ್ರಷ್ಟಾತಿಭ್ರಷ್ಟ ಜಿಲ್ಲಾಧಿಕಾರಿಯಿಂದ ಅಧಿಕಾರ ಸ್ವೀಕರಿಸಿದ ಮೇಲೆ, ಜಿಲ್ಲೆಯ ರಾಜಕಾರಣಿಗಳು, ಉದ್ಯಮಿಗಳು, ಸಮಾಜ ಸೇವಕರು, ಅಧಿಕಾರಿಗಳು ಮುಂತಾದವರಿಂದ ಸ್ವಾಗತ, ಹಾರತುರಾಯಿ, ಸನ್ಮಾನ ಎಲ್ಲಾ ಸ್ವೀಕರಿಸಿದ ಮೇಲೆ ಅವರಿಗೆ ಫೋನಾಯಿಸಿ ನನ್ನ ಪರಿಚಯ ಮಾಡಿಕೊಂಡು ನಿಮ್ಮನ್ನು ಭೇಟಿಯಾಗಬೇಕು ಎಂದೆ. ಯಾವಾಗ ಬೇಕಾದರೂ ಬನ್ನಿ ಎಂದರು. ಹೋಗಿ ಅವರ ಛೇಂಬರಿನಲ್ಲೇ ಹೆಚ್ಚೂ ಕಮ್ಮಿ ಒಂದು ತಾಸು ಕೂತು ಇಬ್ಬರೂ ಜಿಲ್ಲೆ, ರಾಜ್ಯದ ಮತ್ತು ದೇಶದ ಹಲವು ವಿಷಯಗಳ ಬಗ್ಗೆ ಚರ್ಚೆ ಮಾಡಿದೆವು. ಮೊದಲ ಬಾರಿಗೆ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಸೆಂಥಿಲ್ ಅವರಿಗೆ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಈ ಹುದ್ದೆಗೆ ಎಷ್ಟೊಂದು ಅಧಿಕಾರ ಇದೆ ಎಂಬುದರ ಅರಿವು ಬಹಳ ಚೆನ್ನಾಗಿತ್ತು. ಅದನ್ನೆಲ್ಲಾ ಬಳಸಿಕೊಂಡು ಹೇಗೆಲ್ಲಾ ಬಡವರ ಪರವಾಗಿ ಕೆಲಸ ಮಾಡಬೇಕು, ಆಡಳಿತ ಯಂತ್ರಾಂಗವನ್ನು ತುಳಿತಕ್ಕೊಳಗಾದವರೆಡೆಗೆ ನಿರ್ದೇಶಿಸಬೇಕು, ಭ್ರಷ್ಟ ಅಧಿಕಾರಿಗಳನ್ನು ಮಂಡಿಯೂರಿಸಬೇಕು – ಏನೆಲ್ಲಾ ಕನಸುಗಳಿದ್ದವು ಎಂಬುದು ಅವರ ಮಾತಿನಿಂದ ಸ್ಪಷ್ಟವಾಗಿ ಅರ್ಥವಾಗುತ್ತಿತ್ತು.

*****
ಜಿಲ್ಲಾಧಿಕಾರಿ ಕಚೇರಿಯಿದ್ದ ಸಾಥ್ ಕಚೇರಿ ಕಟ್ಟಡದ ಆವರಣದಲ್ಲಿದ್ದ ಕ್ಯಾಂಟೀನ್ ನಮ್ಮೆಲ್ಲಾ ಪತ್ರಕರ್ತರ ಅಡ್ಡೆಯಾಗಿತ್ತು. ದಿನಾಲೂ ನಾವೇಲ್ಲಾ ಅಲ್ಲೇ ಸೇರೋದು, ಚಹಾ ಕುಡಿಯೋದು, ಹರಟೆ ಹೊಡೆಯೋದು ಇತ್ಯಾದಿ ಇತ್ಯಾದಿ. ಅಲ್ಲೊಬ್ಬ ಹಳ್ಳಿಯ ಮುಗ್ದನೊಬ್ಬ ದಿನಾಲೂ ಕಾಣಿಸಿಕೊಳ್ಳುತ್ತಿದ್ದ. ಬಹಳ ದಿನ ಆತನನ್ನು ಗಮನಿಸಿದ ಮೇಲೆ ಅವನನ್ನು ಮಾತಾಡಿಸಬೇಕು ಎನ್ನಿಸಿತು. ಒಂದು ದಿನ ಮಾತಾಡಿಸಿಯೇ ಬಿಟ್ಟೆ. ಆತನ ಹೆಸರು ಪರಮೇಶ. ಊರು ಡೊಂಗರಾಮಪುರ. ಹಿಂದೆ ಇಂದಿರಾಗಾಂಧಿ ಉಳುವವನೆ ಹೊಲದೊಡೆಯ ಪರಿಕಲ್ಪನೆಯಡಿ ಜಾರಿಗೆ ತಂದಿದ್ದ ಭೂಮಿತಿ ಕಾಯ್ದೆಯಲ್ಲಿ ಅವರ ಊರಿನ ಭೂಮಾಲಿಕರ ಹೆಚ್ಚುವರಿ ಜಮೀನನ್ನು ಸರ್ಕಾರ ವಶಪಡಿಸಿಕೊಂಡು ಪರಮೇಶನನ್ನೂಈ ಒಳಗೊಂಡಂತೆ ನಾಲ್ಕು ಜನ ದಲಿತರಿಗೆ ತಲಾ ಎರೆಡೆರೆಡು ಎಕರೆ ಹಂಚಿತ್ತು. ದುರಾದೃಷ್ಟವಶಾತ್ ಆ ಭೂಮಿ ದಶಕಗಳು ಕಳೆದರೂ ಈ ದಲಿತರಿಗೆ ಸಿಕ್ಕಿರಲಿಲ್ಲ. ಕನಿಷ್ಠ ತಮಗೆ ಹಂಚಿಕೆಯಾದ ಭೂಮಿ ಎಲ್ಲಿದೆ ಎಂಬುದೂ ಅವರಿಗೆ ಗೊತ್ತಿರಲಿಲ್ಲ. ಇತ್ತೀಚೆಗೆ ಯಾರೋ ಪರಮೇಶನಿಗೆ ಈ ಭೂಮಿಯ ವಿಷಯವನ್ನು ಪ್ರಸ್ತಾಪಿಸಿದಾಗ ತಾನೂ ತುಂಡು ಭೂಮಿಗೆ ಮಾಲಿಕನಾಗಬೇಕೆಂಬ ಆಸೆ ಆತನಲ್ಲಿ ಚಿಗುರೊಡೆದಿತ್ತು. ಅದಕ್ಕಾಗಿ ಆತ ಸುಮಾರು ಇಪ್ಪತ್ತೈದು ಕಿ.ಮೀ. ದೂರದಿಂದ ದಿನಾಲೂ ಜಿಲ್ಲಾಧಿಕಾರಿ ಕಚೇರಿಗೆ ಬರುತ್ತಿದ್ದ. ಯಾವ ಅಧಿಕಾರಿಯೂ ಆತನ ಗೋಳನ್ನು ಕೇಳಿಸಿಕೊಂಡಿರಲಿಲ್ಲ. ನಾನು ಮುಂದಿನ ಒಂದೆರಡು ದಿನಗಳಲ್ಲಿ ನಮ್ಮ ಫೋಟೋಗ್ರಾಫರ್ ಸಂತೋಷ್ ಸಾಗರ ಜೊತೆ ಡೊಂಗರಾಮಪುರಕ್ಕೆ ಹೋಗಿ ಇನ್ನಷ್ಟು ಮಾಹಿತಿ ಕಲೆ ಹಾಕಿ ಒಂದು ವಿಶೇಷ ವರದಿ ಮಾಡಿದೆ. ಅದು ದಿ ಹಿಂದೂ ಪತ್ರಿಕೆಯಲ್ಲಿ ಮುಖಪುಟದಲ್ಲಿ ಪ್ರಕಟವಾಯಿತು. ನಂತರ ಪರಮೇಶನನ್ನು ಕರೆದುಕೊಂಡು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಬಳಿ ಹೋದೆ. ಈ ದೇಶದಲ್ಲಿ ದಲಿತರ ಪರಿಸ್ಥಿತಿ ಹೇಗಿದೆ ಎಂಬುದನ್ನು ಖುದ್ದು ದಲಿತರಾಗಿರುವ ಸೆಂಥಿಲ್ ಗೆ ತಿಳಿಹೇಳುವ ಅಗತ್ಯವಿರಲಿಲ್ಲ. ಕೂಡಲೇ ಅವರು ಅಸಿಸ್ಟೆಂಟ್ ಕಮೀಷನರ್ ಅವರನ್ನು ಕರೆಸಿ ಡೊಂಗರಾಮಪುರಕ್ಕೆ ಹೋಗಿ ಸರ್ವೇ ಮಾಡಿಸಿ ದಲಿತರಿಗೆ ಹಂಚಿಕೆಯಾಗಿರುವ ಭೂಮಿಯನ್ನು ಅವರ ಸುಪರ್ದಿಗೆ ಕೊಡುವಂತೆ ಮೌಖಿಕವಾಗಿ ಆದೇಶಿಸಿದರು. ಅಸಿಸ್ಟೆಂಟ್ ಕಮೀಷನರ್ ಆ ಹಳ್ಳಿಗೆ ಹೋಗಿ ಸರ್ವೇ ಮಾಡಿ ಅವರ ಜಮೀನನ್ನು ತೋರಿಸಿ ಅವರ ಕೈಗೆ ಕೊಪ್ಪಿಸಿ ಬಂದರು.

ಆದರೆ, ಪರಮೇಶನಿಗೆ ಆ ಜಮೀನು ಇಷ್ಟವಾಗಲಿಲ್ಲ. ಭೂಮಿ ತುಂಬಾ ಹಾಳಾಗಿ ಹೋಗಿತ್ತು. ಗುಡ್ಡದ ಪಕ್ಕದಲ್ಲಿದ್ದು ಕಲ್ಲುಬಂಡೆಗಳಿಂದ ಕೂಡಿತ್ತು. ಏನೂ ಬೆಳೆಯುವ ಸ್ಥಿತಿಯಲ್ಲಿ ಇರಲಿಲ್ಲ. ಅದನ್ನು ಗಮನಿಸಿದ ಪರಮೇಶ “ಇದು ನನಗೆ ಹಂಚಿಕೆಯಾದ ಜಮೀನಲ್ಲ, ಅದು ಬೇರೆ ಕಡೆ ಇದೆ” ಎನ್ನಲಾರಂಭಿಸಿದರು. ವಿಷಯ ಸೆಂಥಿಲ್ ಗಮನಕ್ಕೆ ಬರುತ್ತಿದ್ದಂತೆಯೇ ಖುದ್ದಾಗಿ ಅವರೇ ಹಳ್ಳಿಗೆ ಹೋಗಿ ಇನ್ನೊಮ್ಮೆ ಸರ್ವೇ ಮಾಡಿಸಿ ನಿನಗೆ ಹಂಚಿಕೆಯಾದ ಜಮೀನು ಇದೇ ಎಂದು ಖಾತ್ರಿ ಮಾಡಿದರು. ಜಮೀನಿನ ಪರಿಸ್ಥಿತಿ ನೋಡಿ ಅವರಿಗೂ ಪರಮೇಶನ ನಿರಾಕರಣೆಯ ಕಾರಣ ಅರ್ಥವಾಯಿತು. ಆದರೇನು ಮಾಡುವುದು, ಭೂಮಾಲಿಕರು ಒಳ್ಳೆಯ ಜಮೀನು ತಾವಿಟ್ಟುಕೊಂಡು ಕೆಲಸಕ್ಕೆ ಬಾರದ ಈ ಬರಡು ನೆಲವನ್ನ ಸರ್ಕಾರಕ್ಕೆ ಕೊಟ್ಟಿದ್ದರು. ಸರ್ಕಾರ ಅದನ್ನೇ ದಲಿತರಿಗೆ ಹಂಚಿಕೆ ಮಾಡಿತ್ತು. ಕೊಟ್ಟಂಗೂ ಆಗಿರಬೇಕು, ನಿರಾಕರಿಸಿದಂಗೂ ಆಗಿರಬೇಕು.

ಪರಮೇಶ ಕಡೆಗೂ ಆ ಭೂಮಿಯನ್ನು ಪಡೆಯಲು ಒಪ್ಪದಿದ್ದಾಗ ಜಿಲ್ಲಾಧಿಕಾರಿಯೇ ಮುತುವರ್ಜಿ ವಹಿಸಿ ಬೇರೆ ಕಡೆ ಇರುವ ಸರ್ಕಾರಿ ಜಮೀನನ್ನು ಕೊಡಲು ಮುಂದಾದರು. ಆದರೆ, ಪರಮೇಶ ಬೇರೆ ಕಡೆ ಕೊಡುವುದಾದರೆ ನನಗೆ ಐದು ಎಕರೆ ಬೇಕು ಎಂದು ಹಠ ಹಿಡಿದ. ಆತನ ಬೇಡಿಕೆಯನ್ನು ಈಡೇರಿಸುವುದಕ್ಕೆ ಜಿಲ್ಲಾಧಿಕಾರಿಗೆ ಕೆಲವು ಕಾನೂನು ತೊಡಕುಗಳಿದ್ದವು. ನಾನೂ ಹಲವು ಬಾರಿ ಪರಮೇಶನಿಗೆ ಮನವಿ ಮಾಡಿದರೂ ಆತ ಕೇಳಲಿಲ್ಲ. ಹೀಗೆ ವರ್ಷಗಳುರುಳಿದವು. ಕೊನೆಗೆ ಲೋಕಾಯುಕ್ತ ವೈ. ಭಾಸ್ಕರ ರಾವ್ ಅವರು ರಾಯಚೂರಿನಲ್ಲಿ ವಿಚಾರಣೆ ನಡೆಸುತ್ತಿದ್ದಾಗ ನಾನೇ ಪರಮೇಶನ ಪರವಾಗಿ ಅರ್ಜಿ ಬರೆದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಆದರೂ ಪರಮೇಶ ಹಠ ಬಿಡಲಿಲ್ಲ. ಹೀಗೆ ವರ್ಷಗಳು ಉರುಳಿ ಕೊನೆಗೆ ನಾನೂ ಗುಲ್ಬರ್ಗಾಕ್ಕೆ ವರ್ಗವಾದೆ, ಕೆಲವೇ ದಿನಗಳಲ್ಲಿ ಸೆಂಥಿಲ್ ಕೂಡ ವರ್ಗವಾದರು. ಕೊನೆಗೂ ಪರಮೇಶನಿಗೆ ಜಮೀನು ಸಿಗಲಿಲ್ಲ. ಮೊನ್ನೆ ಮತ್ತೆ ಅವರ ಊರಿಗೆ ಹೋಗಿದ್ದೆ, 2009ರ ಪ್ರವಾಹದ ನಂತರ ಕಟ್ಟಲಾಗಿರುವ ಆಸರೆ ಮನೆಗಳ ಪರಿಸ್ಥಿತಿ ಹೇಗಿದೆ ಎಂದು ನೋಡಲು. ಪರಮೇಶ ಊರಲ್ಲಿ ಇರಲಿಲ್ಲ. ಊರಿನಲ್ಲಿದ್ದ ಕೆಲವರು ಪರಮೇಶನ ಜಮೀನಿನ ಕತೆಯನ್ನು ನೆನಪಿಸಿಕೊಂಡು ಸೆಂಥಿಲ್ ಸಾಹೇಬ್ರು ಬಹಳ ಸಹಾಯ ಮಾಡಿದ್ರು, ಅವರ ಮಾತನ್ನು ಪರಮೇಶ ಕೇಳಿದ್ರೆ ಜಮೀನು ಸಿಕ್ತಿತ್ತು ಅಂತ ಅಂದರು. ಜನಸಾಮಾನ್ಯರಿಗೂ ಅರ್ಥವಾಗುವಷ್ಟರ ಮಟ್ಟಿಗೆ ಸೆಂಥಿಲ್ ಸ್ಪಂದಿಸಿದ್ದರು.
*****

2015ರ ಮಾರ್ಚ್ ತಿಂಗಳಿನಲ್ಲಿ ರಾಯಚೂರಿನ ಹೊರವಲಯದ ಯರಮರಸ್ನಲ್ಲಿ ರಾಯಚೂರು-ಹೈದರಾಬಾದ್ ಹೆದ್ದಾರಿಯ ಪಕ್ಕದಲ್ಲಿ ತಲೆಯೆತ್ತಿರುವ ಐಶಾರಾಮಿ ಡಿವಿಆರ್ ರಿಕ್ರಿಯೇಷನ್ ಕ್ಲಬ್ ಮೇಲೆ ಸೆಂಥಿಲ್ ನಡೆಸಿದ ಹಠಾತ್ ದಾಳಿ ಜಿಲ್ಲೆಯ ಜೂಜುಕೋರರಿಗೆ ಚಳಿಜ್ವರ ಬಿಡಿಸಿದ್ದಲ್ಲದೇ ರಾಜ್ಯದಾದ್ಯಂತ ಸಂಚಲನ ಮೂಡಿಸಿತ್ತು.

ಶನಿವಾರ ರಾತ್ರಿ ಸುಮಾರು ಹತ್ತು ಗಂಟೆಯ ಸಮಯ. ಈ ಕ್ಲಬ್ಬಿನಲ್ಲಿ ಎಂದಿನಂತೆ ಹೆಂಡ ನೀರಿನಂತೆ ಹರಿಯುತ್ತಿತ್ತು, ಕೋಟ್ಯಾಂತರ ರೂಪಾಯಿ ದುಡ್ಡು ಜೂಜಾಟದಲ್ಲಿ ಭರ್ಜರಿಯಾಗಿ ಕುಣಿಯುತ್ತಿತ್ತು. ಕುಡಿದು ಕೇಕೆ ಹಾಕುವರು, ಅಮಲಿನಲ್ಲಿ ತೊನೆದಾಡುವವರು, ಜೂಜಿನಲ್ಲಿ ಲಕ್ಷ ಲಕ್ಷ ಗೆದ್ದು ಆರ್ಭಟಿಸುವವರು, ಕಳೆದುಕೊಂಡು ಪರದಾಡುತ್ತಾ ಮತ್ತೆ ಗೆಲ್ಲುವುದಕ್ಕಾಗಿ ಗಂಟು ಬಿಚ್ಚುವವರು – ಹೀಗೆ ಹಲವು ಬಗೆಯ ದೃಶ್ಯಗಳು ಏಕಕಾಲದಲ್ಲಿ ದಿಗ್ಗೋಚರವಾಗಿದ್ದವು. ನೋಡು ನೋಡುತ್ತಿದ್ದಂತೆಯೇ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆಯ್ದ ಎಂಟು ಅಧಿಕಾರಿಗಳ ದಂಡು ಕಟ್ಟಿಕೊಂಡು ಕ್ಲಬ್ಬಿಗೆ ಹಠಾತ್ತನೆ ದಾಳಿಯಿಟ್ಟುಬಿಟ್ಟರು! ಪಂಜೆ ಎತ್ತಿಕೊಂಡು, ಪ್ಯಾಂಟ್ ಏರಿಸಿಕೊಳ್ಳುತ್ತಾ ಓಡುವವರು ಒಂದುಕಡೆ, ಕಾರುಗಳನ್ನು ಯರ್ರಾಬಿರ್ರಿಯಾಗಿ ಓಡಿಸಿಕೊಂಡು ಪರಾರಿಯಾರುವವರು ಇನ್ನೊಂದು ಕಡೆ. ಅಂತೂ ಕೊನೆಗೆ ಏಳೆಂಟು ನೂರು ಜನರಲ್ಲಿ ಕೈಗೆ ಸಿಕ್ಕವರು ಇಪ್ಪತ್ತು ಮಂದಿ ಮಾತ್ರ.

ರಾಯಚೂರು ಎಎಸ್ಪಿ ಜೆ.ಪಾಪಯ್ಯ ಹಾಗೂ ಡಿವೈಎಸ್ಪಿ ವಿಜಯಕುಮಾರ್ ಮಡಿವಾಳರ್ ಪೊಲೀಸ್ ಬಲದೊಂದಿಗೆ ಸ್ಥಳಕ್ಕೆ ಬರುವ ಹೊತ್ತಿಗೆ ಎಲ್ಲಾ ಮುಗಿದುಹೋಗಿತ್ತು. ಅಷ್ಟು ಹೊತ್ತಿಗಾಗಲೇ ಡಿವಿಆರ್ ರಿಕ್ರಿಯೇಷನ್ ಕ್ಲಬ್ ಅನ್ನು ಸಂಪೂರ್ಣ ಹಿಡಿತಕ್ಕೆ ತೆಗೆದುಕೊಂಡಿದ್ದ ಸೆಂಥಿಲ್ ಪೊಲೀಸರಿಗೆ ವಿಶೇಷ ಕೆಲಸವನ್ನೇನೂ ಉಳಿಸಿರಲಿಲ್ಲ. ಜನ ಓಡುವಾಗ ಉದುರಿದ ನೋಟುಗಳ ಕಂತೆಗಳನ್ನು ಆರಿಸಿ ಎಣಿಸುವುದಕ್ಕೆ, ಕುಡಿದು ಬಿಟ್ಟಿದ್ದ, ಕುಡಿದು ಉಳಿಸಿದ್ದ ಬಾಟಲಿಗಳನ್ನು ಮತ್ತು ಇಸ್ಪೀಟ್ ಕಾರ್ಡುಗಳನ್ನು ಗುಡ್ಡೆಹಾಕಿ ಮಹಜರ್ ಮಾಡುವುದಕ್ಕೆ ಪೊಲೀಸರಿಗೆ ಹಚ್ಚಿದರು.

ಆಂಧ್ರಪ್ರದೇಶ ಮತ್ತು ತೆಲಂಗಾಣ ಮೂಲದ ದೊಡ್ಡ ದೊಡ್ಡ ರಾಜಕಾರಣಿಗಳು ಮತ್ತು ರಿಯಲ್ ಎಸ್ಟೇಟ್ ಕುಳಗಳು ಸೇರಿ ಎಂಟು ತಿಂಗಳ ಹಿಂದಷ್ಟೆ ಪ್ರಾರಂಭಿಸಿದ ಕ್ಲಬ್ ಅದು. ಹೆಣ್ಣು, ಹೆಂಡ ಮತ್ತು ಜೂಜಿನ ಮೂಲಕ ಹೈದರಾಬಾದ್, ಮಹಬೂಬ್ನಗರ, ಕರ್ನೂಲು ಮುಂತಾದ ಆಂಧ್ರ ಮತ್ತು ತೆಲಂಗಾಣಗಳ ವಿವಿಧ ಊರುಗಳ ಭಾರಿ ಕುಳಗಳಿಗೆ ಮನರಂಜನೆ ನೀಡುವುದಕ್ಕಾಗಿಯೇ ಅದನ್ನು ಪ್ರಾರಂಭಿಸಲಾಗಿತ್ತು. ಜೂಜಾಟ ಆಡುವುದಕ್ಕೆ, ಪರವಾನಿಗೆಯಿಲ್ಲದೇ ಹೆಂಡ ಕುಡಿಸುವುದಕ್ಕೆ, ವೇಶ್ಯಾವಾಟಿಕೆ ನಡೆಸುವುದಕ್ಕೆ ಅವರಿಗೆ ರಾಯಚೂರು ಪೊಲೀಸರ ರಕ್ಷಣೆ ಅತ್ಯವಶ್ಯವಾಗಿ ಬೇಕಿತ್ತು. ಈ ರಕ್ಷಣೆಯ ಕೆಲಸವನ್ನು ಯಶಸ್ವಿಯಾಗಿ ಮಾಡಿದವರು ಆಗಿನ ರಾಯಚೂರು ಪೊಲೀಸ್ ವರಿಷ್ಠಾಧಿಕಾರಿ (ಚೇತನ್ ಸಿಂಗ್ ರಾಥೋಡ್ ಅವರಿಗಿಂತ ಮೊದಲು ಇದ್ದವರು). ಅದಕ್ಕೆ ಪ್ರತಿಯಾಗಿ ಅವರಿಗೆ ಕ್ಲಬ್ಬಿನ ಕಡೆಯಿಂದ ಪ್ರತಿದಿನ ಒಂದು ಲಕ್ಷ ರೂಪಾಯಿ ಸಂದಾಯವಾಗುತ್ತಿತ್ತು ಎಂಬುದು ಆಗ ರಾಯಚೂರಿನ ಹಾದಿಬೀದಿಯಲ್ಲಿ ಅನುರಣಿಸುತ್ತಿದ್ದ ಗುಸುಗುಸು ಸುದ್ದಿ.

ಈ ಅಧಿಕಾರಿ ಬಳ್ಳಾರಿಯಲ್ಲಿ ಗಣಿರೆಡ್ಡಿಗಳ ಸೇವೆ ಮಾಡಿಬಂದವರು. ಲೋಕಾಯುಕ್ತ ಸಂತೋಷ್ ಹೆಗಡೆಯವರ ಅಕ್ರಮ ಗಣಿಗಾರಿಕೆ ಕುರಿತ ವರದಿಯಲ್ಲೂ ಇವರ ಸೇವೆಯ ಬಗ್ಗೆ ಉಲ್ಲೇಖವಿದೆ. ರಾಯಚೂರಿಗೆ ವರ್ಗವಾಗಿ ಬಂದ ಮೇಲೆ ಡಿವಿಆರ್ ಕ್ಲಬ್ಬಿನ ಸೇವೆ ಶುರು ಮಾಡಿದ್ದರು. ಪ್ರಾರಂಭದಲ್ಲಿ ಸ್ಥಳೀಯ ಹತ್ತಾರು ಮಂದಿ ಮಾತ್ರ ಅಲ್ಲಿ ಗ್ಯಾಂಬ್ಲಿಂಗ್ ಮಾಡುತ್ತಿದ್ದರು. ಈ ಸಾಹೇಬರು ಬಂದ ಮೇಲೆ ಒಂದೆರಡು ತಿಂಗಳಲ್ಲಿ ಡಿವಿಆರ್ ಕ್ಲಬ್ನ ಖ್ಯಾತಿ ಹೈದರಾಬಾದ್ ತನಕ ಹಬ್ಬಿ ಹೈದರಾಬಾದ್, ಮಹಬೂಬ್ನಗರ, ಕರ್ನೂಲು ಜಿಲ್ಲೆಗಳಿಂದ ರಿಯಲ್ ಎಸ್ಟೇಟ್ ಕುಳಗಳು, ಕಂಡಕಂಡಲ್ಲಿ ತಿಂದು ಮೈಕೈ ಹೊಲಸು ಮಾಡಿಕೊಂಡು ಕೊಬ್ಬಿರುವ ರಾಜಕಾರಣಿಗಳೂ, ಹಡಬಿ ದುಡ್ಡು ಸಂಪಾಧಿಸಿದ ಕೆಲವು ಅಧಿಕಾರಿಗಳೂ ನೂರಾರು ಸಂಖ್ಯೆಯಲ್ಲಿ ಬರಲಾರಂಭಿಸಿದರು. ಪರಿಣಾಮವಾಗಿ ಕ್ಲಬ್ಬಿನಲ್ಲಿ ಹೆಂಡ ಮತ್ತು ಇಸ್ಪೀಟಿನ ಜೊತೆಗೆ ಹೆಣ್ಣಿನ ಸರಬರಾಜೂ ಶುರುವಾಯಿತು. ತೆಲುಗು ಚಲನಚಿತ್ರಗಳಲ್ಲಿ, ತೆಲುಗು ದಾರಾವಾಹಿಗಳ ನಟಿಯರೂ, ಟೀವಿ ನಿರೂಪಕಿಯರು ಒಬ್ಬೊಬ್ಬರಾಗಿ ಕಾಣಿಸಿಕೊಳ್ಳಲಾರಂಭಿಸಿದರು. ನಂತರ ಹುಡುಗಿಯರನ್ನು ಹಿಂಡುಹಿಂಡಾಗಿ ಕರೆಸಿಕೊಳ್ಳುವ ಪರಿಪಾಠ ಬೆಳೆಯಿತು. ಹೀಗೆ ಬಂದ ಅತಿಥಿಗಳನ್ನು ಉಳಿಸುವುದಕ್ಕಾಗಿಯೇ ರಾಯಚೂರು ನಗರದ ಲಾಡ್ಜ ಒಂದರಲ್ಲಿ ವ್ಯವಸ್ಥೆ ಮಾಡಲಾಯಿತು.

ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಗೆ ಎಸ್ಪಿ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಎಸ್ಪಿಗೂ ಸೆಂಥಿಲ್ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಏಕೆಂದರೆ ಅವರಿಬ್ಬರೂ ಬಳ್ಳಾರಿಯಲ್ಲಿ ಕೆಲಸ ಮಾಡಿಬಂದಿದ್ದರು. ವ್ಯತ್ಯಾಸ ಏನೆಂದರೆ ಪೊಲೀಸ್ ಅಧಿಕಾರಿಯು ಸಾರ್ವಜನಿಕ ಸಂಪತ್ತನ್ನು ಲೂಟಿ ಹೊಡೆಯುವುದಕ್ಕೆ ಗಣಿಧಣಿಗಳಿಗೆ ಅವಕಾಶ ಮಾಡಿಕೊಟ್ಟಿದ್ದರೆ ಆಗತಾನೆ ಐಎಎಸ್ ಮುಗಿಸಿ ಸೇವೆಗೆ ಸೇರಿದ ಸೆಂಥಿಲ್ ಭಾರಿ ಸಾಧನೆ ಮಾಡಲು ಸಾಧ್ಯವಾಗದಿದ್ದರೂ ಇದ್ದಷ್ಟು ದಿನ ಪ್ರಾಮಾಣಿಕವಾಗಿ ಕೆಲಸ ಮಾಡಿ ಕೈಬಾಯಿ ಕ್ಲೀನಾಗಿ ಇಟ್ಟುಕೊಂಡಿದ್ದರು. ಪೊಲೀಸ್ ಇಲಾಖೆಯೇ ಕ್ಲಬ್ನ ಬೆಂಗಾವಲಿಗೆ ನಿಂತಿದ್ದರಿಂದ ದಾಳಿಗೆ ಮುನ್ನ ಪೊಲೀಸ್ ಇಲಾಖೆಗೆ ತಿಳಿಸಿ ಪೊಲೀಸ್ ತಂಡವನ್ನು ಕರೆದುಕೊಂಡು ಹೋಗುವ ನಿರ್ಧಾರ ಮಾಡಿದರೆ ಇಡೀ ದಾಳಿಯೇ ವಿಫಲವಾಗುತ್ತಿತ್ತು. ಎಸ್ಪಿ ಸಾಹೇಬರೇ ನೇರವಾಗಿ ಕ್ಲಬ್ಬಿಗೆ ಕಾಲ್ ಮಾಡಿ ದಾಳಿಯ ವಿಷಯವನ್ನು ಲೀಕ್ ಮಾಡಿಬಿಡುವ ಅಪಾಯವಿತ್ತು. ಜಿಲ್ಲಾಧಿಕಾರಿ ನೇತೃತ್ವದ ತಂಡ ಕ್ಲಬ್ ಆವರಣವನ್ನು ತಲುಪುವ ಮುನ್ನವೇ ಕ್ಲಬ್ ಖಾಲಿಯಾಗಿರುತ್ತಿತ್ತು. ಹಾಗಾಗಿ, ಪೊಲೀಸ್ನವರಿಗೆ ದಾಳಿಯ ಬಗ್ಗೆ ಹೇಳುವ ತಪ್ಪನ್ನು ಸೆಂಥಿಲ್ ಮಾಡಲೇ ಇಲ್ಲ!

ತಮಗೆ ಗೊತ್ತಿಲ್ಲದಂತೆ ಕ್ಲಬ್ಬಿನ ಮೇಲೆ ಜಿಲ್ಲಾಧಿಕಾರಿ ದಾಳಿ ನಡೆಸಿದ್ದು ರಾಯಚೂರು ಪೊಲೀಸರಿಗೆ, ಅದರಲ್ಲೂ ವಿಶೇಷವಾಗಿ ಎಸ್ಪಿಗೆ ಭಾರಿ ಮುಜುಗರ ತಂದಿತ್ತು. ಎರಡು ದಿನ ಎಸ್ಪಿ ಸಾಹೇಬರು ಯಾರ ಕಣ್ಣಿಗೂ ಬೀಳಲಿಲ್ಲ. ಈ ದಾಳಿ ವಾಸ್ತವದಲ್ಲಿ ಜಿಲ್ಲೆಯಲ್ಲಿ ಮಾತ್ರವಲ್ಲದೇ ಹೊರಗೂ ಸಂಚಲನ ಮೂಡಿಸಿತಲ್ಲದೇ ರಾಯಚೂರು ಪೊಲೀಸರ ಅಧಕ್ಷತೆ ಮತ್ತು ಲಂಚಗುಳಿತನವನ್ನು ಜಗಜ್ಜಾಹೀರಗೊಳಿಸಿತು.

ಕೊನೆಗೆ, ಮರ್ಯಾದೆ ಉಳಿಸಿಕೊಳ್ಳುವುದಕ್ಕೆ, ಕ್ಲಬ್ಬಿನಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸಲು ವಿಫಲರಾಗಿದ್ದಾರೆ ಎಂಬ ಆರೋಪವನ್ನು ರಾಯಚೂರು ಗ್ರಾಮೀಣ ವೃತ್ತದ ಸರ್ಕಲ್ ಇನ್ಸ್ಪೆಕ್ಟರ್ ಕೆ. ಬಸವರಾಜ್ ಅವರ ತಲೆಗೆ ಕಟ್ಟಿ ಅವರನ್ನು ಅಮಾನತ್ತು ಮಾಡಲಾಯಿತು!

ಜೊತೆಗೆ ಕಾನ್ಸ್ಟೇಬಲ್ಗಳನ್ನೂ ಸಸ್ಪೆಂಡ್ ಮಾಡುವುದಕ್ಕೆ ಎಸ್ಪಿ ಸಾಹೇಬರು ಮುಂದಾಗಿದ್ದರು. ಆ ಮೂವರಲ್ಲಿ ಒಬ್ಬರು ನಿವೃತ್ತಿಯ ಅಂಚಿನಲ್ಲಿದ್ದರು. ಮೂವರೂ ಸ್ವಲ್ಪ ದಿಟ್ಟತನ ತೋರಿ “ನಮ್ಮನ್ಯಾಕೆ ಸಸ್ಪೆಂಡ್ ಮಾಡ್ತೀರಿ? ನಾವೇನು ತಪ್ಪು ಮಾಡಿದ್ದೇವೆ?” ಅಂತ ಸ್ವಲ್ಪ ಏರುದನಿಯಲ್ಲೇ ಎಸ್ಪಿಯವರನ್ನು ಪ್ರಶ್ನಿಸಿದರು. ನಿವೃತ್ತಿಯ ಅಂಚಿನಲ್ಲಿರುವ ಕಾನ್ಸ್ಟೇಬಲ್ ಅಂತೂ “ನೀವು ಸಸ್ಪೆಂಡ್ ಮಾಡುವುದಾದರೆ ನಾನು ವಿಆರ್ಎಸ್ ತೆಗೆದುಕೊಂಡುಬಿಡುತ್ತೇನೆ” ಎಂದೂ ಸ್ಪಷ್ಟವಾಗಿ ಹೇಳಿದರು. ಎಸ್ಪಿ ಈ ಎದುರುತ್ತವನ್ನು ನಿರೀಕ್ಷಿಸಿಯೇ ಇರಲಿಲ್ಲ. ಇವರನ್ನು ಸಸ್ಪೆಂಡ್ ಮಾಡಿದರೆ ಇಲಾಖೆಯಲ್ಲಿ ಆಂತರಿಕ ಬಂಡಾಯ ಉದ್ಭವಿಸಬಹುದು, ಅದು ತನ್ನ ತಲೆದಂಡಕ್ಕೆ ಕಾರಣವಾಗಬಹುದು ಎಂದು ಹೆದರಿದ ಎಸ್ಪಿ ಸಾಹೇಬರು ಕಾನ್ಸ್ಟೇಬಲ್ಗಳನ್ನು ಸಸ್ಪೆಂಡ್ ಮಾಡುವ ಕೆಲಸಕ್ಕೆ ಹೋಗಲಿಲ್ಲ.

ಈ ಪ್ರಕರಣದಲ್ಲಿ ಬಲಿಪಶುವಾದ ಸರ್ಕಲ್ ಇನ್ಸ್ಪೆಕ್ಟರ್ ಕೆ. ಬಸವರಾಜ ಸ್ವಲ್ಪ ಮುಂಗೋಪಿ, ಬೇಗ ಸಿಟ್ಟಾಗುತ್ತಾರೆ, ದಿಢೀರನೇ ಉದ್ವೇಗಕ್ಕೊಳಗಾಗುತ್ತಾರೆ, ಸಿಟ್ಟಿನ ಕೈಗೆ ಬುದ್ದಿಕೊಟ್ಟು ಕೆಲವು ಅಚಾತುರ್ಯಗಳನ್ನೂ ಮಾಡುತ್ತಾರೆ ಎಂಬುದು ಪೊಲೀಸ್ ಇಲಾಕೆಯಲ್ಲಿ ಅವರ ಬಗ್ಗೆ ಇದ್ದ ಅಭಿಪ್ರಾಯ. ಡಿವಿಆರ್ ಕ್ಲಬ್ನ ಅಕ್ರಮಗಳ ಹೊಣೆಯನ್ನು ತನ್ನೊಬ್ಬನ ತಲೆಗೆ ಕಟ್ಟಿ ಎಸ್ಪಿ ಸಾಹೇಬರು ಮಾತ್ರ ಸೇಫಾಗಿದ್ದು ಅವರಿಗೆ ತಡೆದುಕೊಳ್ಳಲಾಗಿಲ್ಲ. ಸಸ್ಪೆಂಡಾದ ಸುದ್ದಿ ಕಿವಿಗೆ ಬಿದ್ದಿದ್ದೇ ತಡ ತನ್ನ ಸರ್ವೀಸ್ ರಿವಾಲ್ವಾರನ್ನು ಸೊಂಟದಲ್ಲಿ ಸಿಕ್ಕಿಸಿಕೊಂಡು ಮನೆಯಿಂದ ಹೊರಬಿದ್ದರು. ಎಲ್ಲಿಗೆ ಹೋದರು ಎಂಬುದು ಯಾರಿಗೂ ಏನೂ ಗೊತ್ತಿರಲಿಲ್ಲ. ಮನೆಯವರ, ಸ್ನೇಹಿತರ, ಎಸ್ಪಿ ಸಾಹೇಬರ ಫೋನನ್ನೂ ಅವರು ರಿಸೀವ್ ಮಾಡಲಿಲ್ಲ. ಈಶಾನ್ಯ ವಲಯದ ಐಜಿಪಿಯವರ ಫೋನನ್ನೂ ಎತ್ತಲಿಲ್ಲ. ಕೊನೆಗೆ ಬೆಂಗಳೂರಿನಿಂದ ಪೊಲೀಸ್ ಮಹಾನಿರ್ದೇಶಕರು ಫೋನ್ ಮಾಡಿದಾಗಲೇ ಬಸವರಾಜ್ ಫೋನ್ ಎತ್ತಿದ್ದು. ಪೊಲೀಸ್ ಮಹಾನಿರ್ದೇಶಕರ ಸೂಚನೆಯಂತೆ ಬಸವರಾಜ್ ಗುಲ್ಬಾರ್ಗಾಕ್ಕೆ ಬಂದು, ಐಜಿಪಿ ಸುನೀಲ್ ಅಗರ್ ವಾಲ್ ಅವರನ್ನು ಭೇಟಿಯಾಗಿ ಸಸ್ಪೆಂಡ್ ಆರ್ಡರ್ ಹಿಂಪಡೆಯುವ ಭರವಸೆ ಸಿಕ್ಕಮೇಲೆ ರಾಯಚೂರಿಗೆ ಬಂದರು. ಅಂತೆಯೇ ಕೆಲವೇ ದಿನಗಳಲ್ಲಿ ಅವರ ಸಸ್ಪೆಂಡ್ ಆರ್ಡರ್ ಅನ್ನು ಯಾವುದೇ ತನಿಖೆಯಿಲ್ಲದೇ ಹಿಂಪಡೆಯಲಾಯಿತು.

ಜಿಲ್ಲಾಧಿಕಾರಿ ಸೆಂಥಿಲ್ ಅವರ ಒಂದು ದಿಟ್ಟ ನಡೆ ಇಡೀ ಪೊಲೀಸ್ ಇಲಾಖೆಯನ್ನು ಬೆಚ್ಚಿ ಬೀಳಿಸಿತ್ತಲ್ಲದೇ ಕೊನೆಗೆ ಎಸ್ಪಿ ಸಾಹೇಬರ ವರ್ಗಾವಣೆಗೂ ಕಾರಣವಾಯಿತು.

*****
ಗಣೇಶ ಹಬ್ಬ ಬಂತೆಂದರೆ ಎಲ್ಲಾ ಖುಷಿಯ ನಡುವೆ ಡಿಜೆ (ಡಿಸ್ಕ್ ಜಾಕಿ) ಸೌಂಡ್ ಸಿಸ್ಟಂ ನ ಹಾವಳಿ ತಪ್ಪಿದ್ದಲ್ಲ. ಇದು ರಾಯಚೂರಿನ ಜನರಿಗೆ ಮಾತ್ರ ಸೀಮಿತವಾದ ಸಮಸ್ಯೆಯೂ ಅಲ್ಲ. ದೊಡ್ಡ ದೊಡ್ಡ ಡಿಜೆ ಸೌಂಡ್ ಸಿಸ್ಟಂ ಹಾಕಿ ಕಿವಿ ಹರಿದು ಹೋಗುವಂತಹ ಶಬ್ದ ಮಾಡುತ್ತಾ ಗಣೇಶ ವಿಸರ್ಜನೆಗೆ ಮೆರವಣಿಗೆ ಮಾಡುವುದು ಎಲ್ಲಾ ನಗರಗಳಲ್ಲೂ ಕಾಣಸಿಗುವ ಸಾಮಾನ್ಯ ವಿದ್ಯಮಾನ. ಈ ಡಿಜೆ ಸೌಂಡ್ ಸಿಸ್ಟಂನ ಆರ್ಭಟ ಎಷ್ಟಿರುತ್ತದೆಯೆಂದರೆ ಅದರ ಸಮೀಪ ಕುಣಿದು ಕುಪ್ಪಳಿಸುವ ಹುಡುಗರ ಕರ್ಣಪಟಲ ಹರಿದು ಕಿವುಡರಾಗಿರುವ ಅನೇಕ ಉದಾಹರಣೆಗಳಿವೆ. ಗಣೇಶ ಮೆರವಣಿಗೆಯ ಸಮಯದಲ್ಲಿ ಬಂದೋಬಸ್ತ್ ಕಾಯಕಕ್ಕೆ ಡಿಜೇ ಸೌಂಡ್ ಸಿಸ್ಟಂ ಹತ್ತಿರವೇ ನಿಯೋಜನೆಗೊಂಡಿದ್ದ ಪೊಲೀಸ್ ಅಧಿಕಾರಿಯೊಬ್ಬರ ಕರ್ಣಪಟಲವೂ ಹರಿದು ಕಿವುಡರಾಗಿದ್ದ ಘಟನೆಯನ್ನು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದರು.

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ರೂಪಿಸಿದ ಪರಿಸರ ಸಂರಕ್ಷಣಾ ನಿಯಮಗಳು, 1986ರ ಪ್ರಕಾರ ಹಗಲಿನಲ್ಲಿ 55 ಡೆಸಿಬಲ್ ಗಿಂತ ಹೆಚ್ಚಿನ ಶಬ್ದವನ್ನು ಹಾಗೂ ರಾತ್ರಿಯಲ್ಲಿ 45 ಡೆಸಿಬಲ್ ಗಿಂತ ಹೆಚ್ಚಿನ ಶಬ್ದವನ್ನು ಮಾಡುವ ಯಾವುದೇ ಸೌಂಡ್ ಸಿಸ್ಟಂಗಳನ್ನು ಬಳಸಕೂಡದು ಎಂದು ನಿರ್ಬಂಧ ಹೇರಲಾಗಿದೆ. ಈ ಡೀಜೆಗಳು 129 ಡೆಸಿಬಲ್ ಶಬ್ದವನ್ನು ಹೊರಸೂಸುತ್ತವೆ. ಹೆಚ್ಚು ಡೆಸಿಬಲ್ ಸೌಂಡ್ ಸಿಸ್ಟಂ ಅನ್ನು ರಾತ್ರಿ ಹತ್ತು ಗಂಟೆಯಿಂದ ಬೆಳಿಗ್ಗೆ 6 ಗಂಟೆ ತನಕ ಬಳಸಕೂಡದು ಎಂದು ಸುಪ್ರೀಂ ಕೋರ್ಟು ಕೂಡ 2005ರಲ್ಲಿ ತೀರ್ಪು ನೀಡಿದೆ. ಆದರೂ ಡಿಜೆ ಹಾವಳಿ ಮಾತ್ರ ನಿಂತಿಲ್ಲ.

ಸೆಂಥಿಲ್ ರಾಯಚೂರು ಜಿಲ್ಲಾಧಿಕಾರಿಯಾಗಿದ್ದಾಗ ಇದಕ್ಕೆ ಕಡಿವಾಣ ಹಾಕಿದ್ದರು. ರಾಯಚೂರು ಜಿಲ್ಲೆಯಲ್ಲಿ ಸುಮಾರು 1400 ಗಣಪತಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಕೂರಿಸಲಾಗುತ್ತದೆ. ಅದರಲ್ಲಿ ಕನಿಷ್ಠ 300 ಗಣಪತಿಗಳ ವಿಸರ್ಜನಾ ಮೆರವಣಿಗೆಗಳಲ್ಲಿ ಡಿಜೆ ಸೌಂಡ್ ಸಿಸ್ಟಂಗಳನ್ನು ಬಳಸಲಾಗುತ್ತದೆ. ರಾಯಚೂರು ನಗರವೊಂದರಲ್ಲೇ ಡಿಜೆ ಬಳಸುವ 150 ಗಣಪತಿ ಸಂಘಗಳಿವೆ. ಒಂದೊಂದು ಗಣಪತಿಯ ಮೆರವಣಿಗೆಯೂ ಬಹಳ ಹೊತ್ತು ನಡೆಯುತ್ತದೆ. ಕೆಲವಂತೂ 18 ತಾಸುಗಳ ತನಕ ಎಳೆಯುತ್ತವೆ. ಇವರೆಲ್ಲರನ್ನು ಎದುರುಹಾಕಿಕೊಂಡು ಡಿಜೆ ಬಳಕೆಯನ್ನು ನಿಷೇಧಿಸುವುದು ವಾಸ್ತವದಲ್ಲಿ ಸೆಂಥಿಲ್ ಅವರಿಗೆ ಸವಾಲಿನ ಕೆಲಸವಾಗಿತ್ತು. ಗಣೇಶ ಮೆರವಣಿಗೆಯಲ್ಲಿ ಡಿಜೆ ಬಳಸಲು ಅವಕಾಶ ಕೊಡುವುದಿಲ್ಲ ಎಂದರೆ ಹಿಂದೂತ್ವದ ಸಂಘಟನೆಗಳು ಅವರನ್ನು ಹಿಂದೂ ವಿರೋಧಿ ಎಂದು ಬಿಂಬಿಸಿ ಪ್ರಚಾರ ಮಾಡುವ ಎಲ್ಲಾ ಸಾಧ್ಯತೆಯಿತ್ತು. ಆದರೂ ಡಿಜೆ ಹಾವಳಿ ತಡೆಗಟ್ಟುವ ಕೆಲಸಕ್ಕೆ ಸೆಂಥಿಲ್ ಬಹಳ ಮುಂದಾದರು.

ಅವರು ಈ ಕೆಲಸವನ್ನು ಬಹಳ ಬುದ್ದಿವಂತಿಕೆಯಿಂದ ಮಾಡಿದರು. ಮೊದಲು ಹೆಚ್ಚು ಡೆಸಿಬಲ್ ಶಬ್ದ ಹೊರಸೂಸುವ ಸೌಂಡ್ ಸಿಸ್ಟಂ ಬಳಕೆಯ ನಿರ್ಬಂಧದ ಬಗ್ಗೆ ಸುಪ್ರೀಂ ಕೋರ್ಟು ನೀಡಿರುವ ತೀರ್ಪು, ಪರಿಸರ ಸಂರಕ್ಷಣಾ ನಿಯಮಗಳನ್ನು ಕಲೆ ಹಾಕಿ ಪೊಲೀಸ್ ಇಲಾಖೆಗೆ, ಪತ್ರಕರ್ತರಿಗೆ ರವಾನಿಸಿ ಅದರ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿದರು. ಎಲ್ಲಾ ಪತ್ರಕರ್ತರು ಸೆಂಥಿಲ್ ಕೊಟ್ಟ ಮಾಹಿತಿ ಬಳಸಿಕೊಂಡು ಡಿಜೆ ಉಪಯೋಗದಿಂದ ಹಸುಗೂಸುಗಳು, ಅನಾರೋಗ್ಯಪೀಡಿತರು ಮತ್ತು ವೃದ್ಧರಲ್ಲದೇ ಸಾಮಾನ್ಯ ಜನರೂ ಕೂಡ ಏನೆಲ್ಲಾ ತೊಂದರೆ ಅನುಭವಿಸಬೇಕಾಗುತ್ತದೆ ಎಂಬುದನ್ನು ಮನಮುಟ್ಟುವಂತೆ ಬರೆದರು. ಡಿಜೆ ಬದಲಿಗೆ ಸಾಮಾನ್ಯ ಸೌಂಡ್ ಸಿಸ್ಟಂಗಳನ್ನು ಬಳಸಿದರೆ ಗಣೇಶನ ಮೇಲಿರುವ ಭಕ್ತಿಯೇನೂ ಕಡಿಮೆಯಾಗುವುದಿಲ್ಲ, ಗಣಪತಿಯೂ ಮುನಿಸಿಕೊಳ್ಳುವುದಿಲ್ಲ ಎಂಬ ಬುದ್ದಿವಾದವನ್ನೂ ತಮ್ಮ ವರದಿಗಳಲ್ಲಿ ಸೂಕ್ಷ್ಮವಾಗಿ ಸೇರಿಸಿದರು.

ಇನ್ನೊಂದೆಡೆಗೆ ಡಿಜೆ ಬಳಕೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ತಯಾರಾಗುವಂತೆ ಪೊಲೀಸ್ ಇಲಾಖೆಗೆ ಸೂಚಿಸಿದರು. ಆಗ ರಾಯಚೂರಿನ ಎಸ್ಪಿಯಾಗಿದ್ದವರು ಚೇತನ್ ಸಿಂಗ್ ರಾಥೋಡ್. ಅವರ ಸೂಚನೆಯ ಮೇರೆಗೆ ರಾಯಚೂರಿಗೆ ಬಾಡಿಗೆ ಆಧಾರದಲ್ಲಿ ಯಾವ ಯಾವ ಊರುಗಳಿಂದ ಡಿಜೆಗಳು ಬರುತ್ತವೆ ಎಂಬ ಮಾಹಿತಿ ಕಲೆ ಹಾಕಿ “ನಿಮ್ಮ ಡಿಜೆಗಳು ಈ ಬಾರಿ ರಾಯಚೂರಿಗೆ ಬಂದರೆ ಅಲ್ಲಿಂದ ವಾಪಾಸು ಹೋಗುವುದಿಲ್ಲ. ನಾವು ಅವುಗಳನ್ನು ವಶಪಡಿಸಿಕೊಂಡು ಕೇಸ್ ಜಡಿಯುತ್ತೇವೆ” ಎಂಬ ಸ್ಪಷ್ಟ ಎಚ್ಚರಿಕೆಯನ್ನು ಡಿಜೆ ಮಾಲಿಕರಿಗೆ ರಾಯಚೂರು ಪೊಲೀಸರು ರವಾನಿಸಿದರು.

ಇಷ್ಟಾದ ಮೇಲೆ ಸೆಂಥಿಲ್ ಗಣಪತಿ ಮೆರವಣಿಗೆ ನಡೆಸುವ ಪ್ರಮುಖ ಸಂಘಗಳನ್ನು, ಪ್ರಮುಖ ಮಠಾಧೀಶರನ್ನು ಕರೆಸಿ ಒಂದು ಮೀಟಿಂಗ್ ಮಾಡಿದರು. ಅಷ್ಟರಲ್ಲಾಗಲೇ ಪತ್ರಿಕಾ ವರದಿಗಳ ಮೂಲಕ ಡಿಜೆ ವಿರುದ್ಧದ ಜಾಗೃತಿ ಬಹಳಷ್ಟು ಮೂಡಿತ್ತು. ಸಭೆಗೆ ಬಂದ ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮಿಗಳನ್ನೂ ಒಳಗೊಂಡತೆ ಇತರ ಮಾಠಾಧೀಶರೇ ಖುದ್ದಾಗಿ ಗಣಪತಿ ಮೆರವಣಿಗೆ ಮಾಡುವ ಹುಡುಗರಿಗೆ ಡಿಜೆ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಹೇಳಲಾರಂಭಿಸಿದರು. ಆ ವರ್ಷ ರಾಯಚೂರಿನಲ್ಲಿ ಡಿಜೆ ಬಳಕೆ ಸಂಪೂರ್ಣವಾಗಿ ನಿಷೇಧವಾಗಿತ್ತು.

“ಶೇಕಡ 90ರಷ್ಟು ಜನರಿಗೆ ಈ ರೀತಿಯ ಶಬ್ದ ಮಾಲಿನ್ಯದಿಂದ ತುಂಬಾ ತೊಂದರೆಯಾಗುತ್ತದೆ. ಅವರಿಗೆ ಈ ಡೀಜೆ ಬಳಕೆ ಇಷ್ಟವಿರುವುದಿಲ್ಲ. ಆದರೆ, ಅವರಲ್ಲೆ ದನಿಯಿಲ್ಲದ ಅಮಾಯಕರು. ಇಂತಹದ್ದರ ವಿರುದ್ಧ ದನಿಯೆತ್ತುವುದಿಲ್ಲ. ನಾವು ಅಧಿಕಾರಿಗಳು ಅವರ ಪರವಾಗಿ ನಿಲ್ಲಬೇಕು. ನೀವೆಲ್ಲಾ ಪತ್ರಕರ್ತರು ನನ್ನ ಕೆಲಸವನ್ನು ಬಹಳ ಹಗುರ ಮಾಡಿದ್ರಿ. ಈ ಬಲಪಂಥೀಯ ಸಂಘಟನೆಯ ಹುಡುಗರ ಮನವೊಲಿಸುವುದು ಅಷ್ಟು ಸುಲಭವಾಗಿರಲಿಲ್ಲ. ನಿಮ್ಮ ಜಾಗೃತಿ ಮೂಡಿಸುವ ವರದಿಗಳನ್ನು ಓದಿದ ಸ್ವಾಮೀಜಿಗಳೇ ಆ ಹುಡುಗರಿಗೆ ಬುದ್ದಿವಾದ ಹೇಳಿದರು,” ಎಂದು ಸೆಂಥಿಲ್ ನಂತರ ಖಾಸಗಿಯಾಗಿ ಕೆಲವು ಪತ್ರಕರ್ತರ ಬಳಿ ಹೇಳಿಕೊಂಡಿದ್ದರು.
*****

ಸಂಶೋಧಕ ಎಂ.ಎಂ. ಕಲ್ಬುರ್ಗಿಯವರ ಹತ್ಯೆಯ ವಿರುದ್ಧ ನಾಡಿನ ಹಲವು ಚಿಂತಕರು ಸೇರಿ 2015ರ ಸೆಪ್ಟೆಂಬರಿನಲ್ಲಿ ಧಾರವಾಡದಲ್ಲಿ ಒಂದು ಪ್ರತಿಭಟನೆ ಮಾಡಿದ್ದರು. ಕಲ್ಬುರ್ಗಿ ಹತ್ಯೆಯಲ್ಲಿ ಬಲಪಂಥೀಯ ಸಂಘಟನೆಯಾದ ಶ್ರೀರಾಮ ಸೇನೆಯ ಕೈವಾಡವೂ ಇರುವ ಶಂಕೆಯಿದ್ದು ಸೂಕ್ತ ತನಿಖೆ ನಡೆಸಬೇಕೆಂದು ಕೋರಿ ಧಾರವಾಡದ ಅಸಿಸ್ಟೆಂಟ್ ಕಮೀಷನರ್ ಅವರಿಗೆ ಒಂದು ಮನವಿಯನ್ನೂ ಮಾಡಿದ್ದರು. ಈ ಮನವಿ ಪತ್ರಕ್ಕೆ ಸಾಹಿತಿಗಳಾದ ಚೆನ್ನವೀರ ಕಣವಿ, ಗಿರಡ್ಡಿ ಗೋವಿಂದರಾಜ ಮತ್ತು ಗದುಗಿನ ತೋಂಟದಾರ್ಯ ಸ್ವಾಮಿಗಳಾದಿಯಾಗಿ 138 ಜನ ಕವಿಗಳು, ಚಿಂತಕರು, ಪ್ರಗತಿಪರ ಬುದ್ದಿಜೀವಿಗಳು ಸಹಿ ಮಾಡಿದ್ದರು. ತಮ್ಮ ಸಂಘಟನೆಯ ಹೆಸರನ್ನು ಪ್ರಸ್ತಾಪಿಸಿದ್ದನ್ನು ಆಕ್ಷೇಪಿಸಿದ ರಾಯಚೂರಿನ ಶ್ರೀರಾಮ ಸೇನೆಯ ಕಾರ್ಯಕರ್ತರು 2015ರ ಸೆಪ್ಟೆಂಬರ್ 19ರಂದು ಸುದ್ದಿಗೋಷ್ಠಿ ನಡೆಸಿ, “ಕಲ್ಬುರ್ಗಿ ಹತ್ಯೆಯಲ್ಲಿ ನಮ್ಮ ಸಂಘಟನೆಯ ಪಾತ್ರವನ್ನು ಸಾಬೀತು ಮಾಡಬೇಕು, ಇಲ್ಲದಿದ್ದರೆ ನಾವು ಆ ಮನವಿ ಪತ್ರಕ್ಕೆ ಸಹಿ ಮಾಡಿದ ಸಾಹಿತಿಗಳಾದ ಚೆನ್ನವೀರ ಕಣವಿ ಮತ್ತು ಗಿರಡ್ಡಿ ಗೋವಿಂದರಾಜರ ಮನೆಗಳನ್ನು ಧ್ವಂಸ ಮಾಡುತ್ತೇವೆ” ಎಂದು ಬಹಿರಂಗವಾಗಿ ಬೆದರಿಕೆ ಒಡ್ಡಿದರು.

ಶ್ರೀರಾಮ ಸೇನೆಯು ತನ್ನ ಕಾರ್ಯಕರ್ತರಿಗೆ ಕಾನೂನುಬಾಹಿರವಾಗಿ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿರುವುದರ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ಅದನ್ನು ಸಮರ್ಥಿಸಿಕೊಂಡ ಸೇನೆಯ ಕಾರ್ಯಕರ್ತರು ರಾಯಚೂರಿನಲ್ಲೂ ಅಂತಹ ಬಂದೂಕು ತರಬೇತಿ ಶಿಬಿರನ್ನು ಆಯೋಜಿಸುತ್ತೇವೆ ಎಂದು ಘೋಷಿಸಿದರು.

ಸುದ್ದಿಗೋಷ್ಠಿಯಲ್ಲಿನ ಈ ಬೆದರಿಕೆಗಳು ಸೆಂಥಿಲ್ ಕಿವಿಗೆ ಬಿದ್ದಿದ್ದೇ ತಡ ಪೊಲೀಸ್ ವರಿಷ್ಠಾಧಿಕಾರಿಗೆ ಫೋನಾಯಿಸಿ ಸುದ್ದಿಗೋಷ್ಠಿ ನಡೆಸಿದ ಅಷ್ಟೂ ಮಂದಿಯ ಮೇಲೆ ಸಂಜೆಯ ಒಳಗಾಗಿ ಕೇಸು ದಾಖಲಿಸಿ ಜೈಲಿಗಟ್ಟುವಂತೆ ನೋಡಿಕೊಂಡಿದ್ದರು.

*****
82ನೇ ಕನ್ನಡ ಸಾಹಿತ್ಯ ಸಮ್ಮೇಳನ 2016ರ ಡಿಸೆಂಬರ್ 2, 3 ಮತ್ತು 4ರಂದು ರಾಯಚೂರಿನಲ್ಲಿ ನಡೆಯಿತು. ನಾನು ಭಾಗವಹಿಸಿದ, ವರದಿ ಮಾಡಿದ ಮೊದಲ ಸಾಹಿತ್ಯ ಸಮ್ಮೇಳನ ಅದು. ಇದನ್ನು ಅಚ್ಚುಕಟ್ಟಾಗಿ ನಡೆಸಿದ ಕ್ರೆಡಿಟ್ಟಿನಲ್ಲಿ ಬಹುಪಾಲು ಸೆಂಥಿಲ್ ಗೆ ಸೇರಬೇಕು.

ಪ್ರತಿದಿನ ಸುಮಾರು 7000 ಪ್ರತಿನಿಧಿಗಳು ಮತ್ತು 30,000 ಇತರೆ ಕನ್ನಡಾಭಿಮಾನಿಗಳು ಭಾಗವಹಿಸಬಹುದೆಂದು ಸ್ವಾಗತ ಸಮಿಯಿತಿಯು ಅಂದಾಜಿಸಿತ್ತು. ಅಂತೆಯೇ ಊಟೋಪಚಾರದ ವ್ಯವಸ್ಥೆಯನ್ನು ಮಾಡಿಕೊಂಡಿತ್ತು. ಆದರೆ, ಅದರ ಅಂದಾಜಿನ ಗೆರೆಗಳನ್ನು ದಾಟಿ ಮೊದಲನೆಯ ದಿನ ಒಂದೂ ಕಾಲು ಲಕ್ಷ ಜನಸಾಗರ ಹರಿದು ಬಂತು. ಕೊನೆಯ ಎರಡು ದಿನ ಸುಮಾರು 80,000 ದಿಂದ 1,00,000 ದಷ್ಟು ಜನ ಇದರಲ್ಲಿ ಭಾಗವಹಿಸಿದರು. ಊಟೋಪಚಾರಗಳು ಹದಗೆಟ್ಟು ಇಡೀ ಸಮ್ಮೇಳನವೇ ಅವ್ಯವಸ್ಥೆಯ ಆಗರವಾಗಿ ಹೋಗುತ್ತದೆ ಎಂದೇ ನಾನು ಎಣಿಸಿದ್ದೆ. ಆದರೆ ಹಾಗಾಗಲಿಲ್ಲ, ಸಂಘಟಕರು ಹರಸಾಹಸ ಪಟ್ಟು ಬಂದವರಿಗೆಲ್ಲಾ ಊಟ ಹಾಕಿ ನಮ್ಮನ್ನು ವಿಸ್ಮಯಗೊಳಿಸಿದರು. ಅಲ್ಲಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಆದವು. ಅದನ್ನೆಲ್ಲಾ ವರದಿ ಮಾಡೋಕೆ ಬೇರೆಯೇ ಜನ ಇದ್ದಾರೆ ಅಂತ ನಾವು ಅದರ ಕಡೆ ಗಮನ ಕೊಡಲಿಲ್ಲ. ನಮ್ಮ ಮನೆಗೇ ನಾಲ್ಕು ಜನ ಅನಿರೀಕ್ಷಿತವಾಗಿ ಬಂದು ಬಿಟ್ಟರೆ ಅವರಿಗೆ ಊಟ, ತಂಗಲು ವ್ಯವಸ್ಥೆ ಮಾಡುವುದಕ್ಕೆ ನಮಗೇ ಕಷ್ಟವಾಗುತ್ತದೆ. ಅಂತಾಹದ್ದರಲ್ಲಿ ನಿರೀಕ್ಷಿಸಿದ್ದರ ಮೂರು ಪಟ್ಟು ಜನ ದಿಢೀರನೆ ಬಂದರೆ ಸ್ವಲ್ಪ ಸಮಸ್ಯೆಗಳು ಆಗೇ ಆಗುತ್ತವೆ. ಆದರೂ ಅದನ್ನು ನಿಭಾಯಿಸಿದ ಸಂಘಟಕರಿಗೆ ಅಭಿನಂದನೆ ಸಲ್ಲಿಸಲೇಬೇಕು.

ಎರಡನೆಯದಾಗಿ ನನ್ನನ್ನು ಗಾಢವಾಗಿ ಆಕರ್ಷಿಸಿದ್ದು ಕನ್ನಡದ ಈ ಹಬ್ಬದ ಸಂಘಟನೆಯಲ್ಲಿ ಉತ್ಸಾಹದಿಂದ ತೊಡಗಿಕೊಂಡಿದ್ದ ಕನ್ನಡೇತರ ಜನ. ರಾಜ್ಯದ ಯಾವುದೇ ಭಾಗದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದರೂ ಆ ಜಿಲ್ಲೆಯ ಜಿಲ್ಲಾಧಿಕಾರಿಗಳು ಸಂಘಟನಾ ಸಮಿತಿಯ ಸಂಚಾಲಕರಾಗಿರುತ್ತಾರೆ. ಜೊತೆಗೆ ಅದರ ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳುವ ಕೋಶಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಾರೆ. ಇಲ್ಲಿಯೂ ಸಹ ಜಿಲ್ಲಾಧಿಕಾರಿ ಸೆಂಥಿಲ್ ಆ ಜವಾಬ್ದಾರಿಗಳನ್ನು ಹೊತ್ತುಕೊಂಡಿದ್ದರು. ಅವರು ಮೂಲತಃ ತಮಿಳರು. ಆದರೆ ಅವರು ಸಂಘಟನಾ ಸಮಿತಿಯನ್ನು ಮುನ್ನಡೆಸಿದ ರೀತಿ, ಹಗಲು-ರಾತ್ರಿಯೆನ್ನದೇ 33 ಉಪಸಮಿತಿಗಳೊಂದಿಗೆ ಸಮನ್ವಯ ಸಾಧಿಸುತ್ತಾ ದುಡಿದ ಬಗೆ, ಯಾವ್ಯಾವ ಪೆಂಡಾಲ್ ಎಲ್ಲಿರಬೇಕು, ಊಟದ ವ್ಯವಸ್ಥೆ ಹೇಗಿರಬೇಕು, ಪುಸ್ತಕ ಮಳಿಗೆಗಳು ಯಾವ ರೀತಿಯಲ್ಲಿರಬೇಕು, ಮಾಧ್ಯಮ ಕೇಂದ್ರ ಮುಖ್ಯ ವೇದಿಕೆಯಿಂದ ಎಷ್ಟು ದೂರ ಇರಬೇಕು, ಅಲ್ಲಿ ಏನೇನಿರಬೇಕು, ಅವರಿಗೆ ಊಟದ ವ್ಯವಸ್ಥೆ ಎಲ್ಲಿರಬೇಕು ಎಂಬಿತ್ಯಾದಿ ಸಣ್ಣ ಸಣ್ಣ ವಿಷಯಗಳನ್ನೂ ಬಹಳ ಖುದ್ದಾಗಿ ಮುತುವರ್ಜಿ ವಹಿಸಿ ರೂಪಿದರು. ಮಾಧ್ಯಮ ಕೇಂದ್ರದಲ್ಲಿ ಇಂಟರ್ನೆಟ್ ಸಂಪರ್ಕ ಸಮಸ್ಯೆ ಎದುರಾಗಿದೆ ಎಂದು ಗೊತ್ತಾದ ಕೂಡಲೂ ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಒಂದು ತಾಂತ್ರಿಕ ತಂಡ ಅಲ್ಲೇ ಬೀಡುಬಿಟ್ಟು ಬಗೆಹರಿಸುವಂತೆ ಸೂಚಿಸಿದರು (ಆದರೂ ಸಮಸ್ಯೆ ಮುಂದುವರಿಯಿತು ಎಂಬುದು ಬೇರೆ ವಿಷಯ). ತಮಿಳು ಮೂಲದ ಜಿಲ್ಲಾಧಿಕಾರಿಯೊಬ್ಬ ಕನ್ನಡದ ಹಬ್ಬಕ್ಕೆ ಇಷ್ಟೊಂದು ಪ್ಯಾಷನೇಟ್ ಆಗಿ ತೊಡಗಿಕೊಂಡದ್ದು ನಿಜಕ್ಕೂ ನನಗೆ ಅವರ ಮೇಲಿನ ಅಭಿಮಾನವನ್ನು ಹೆಚ್ಚಿಸಿತು.

ಇನ್ನು 2000 ಪೊಲೀಸ್ ಪಡೆಯ ನೇತೃತ್ವ ವಹಿಸಿ ಅನಿರೀಕ್ಷಿತವಾಗಿ ಹರಿದು ಬಂದ ಜನಸ್ತೋಮವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಸಿಂಗ್ ರಾಥೋಡ್. ಮೂಲತಃ ಹಿಂದಿ ಭಾಷಿಕರಾದ ರಾಥೋಡ್ ಉತ್ತರ ಪ್ರದೇಶದವರು. ವಿಐಪಿಗಳಿಗೆ ರಕ್ಷಣೆ, ಗಣ್ಯರಿಗೆ ರಕ್ಷಣೆ, ಜನಸ್ತೋಮದ ನಿಯಂತ್ರಣ, ಟ್ರಾಫಿಕ್ ನಿಯಂತ್ರಣ, ಕಾನೂನು ಸುವ್ಯವಸ್ಥೆಯ ಕಾಪಾಡುವಿಕೆ – ಅದ್ಭುತವಾಗಿ ಮಾಡಿದರು.

ಅಂತೆಯೇ, ಹಲವು ಉಪಸಮಿತಿಗಳ ಕಾರ್ಯನಿರ್ವಹಣೆಯ ಉಸ್ತುವಾರಿ ಹೊತ್ತುಕೊಂಡಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ. ಕೂರ್ಮರಾವ್ ತೆಲುಗಿನವರು. ಸಮ್ಮೇಳನ ಸಂಘಟನೆಗಾಗಿ ಮುಖ್ಯವೇದಿಕೆ, ಪುಸ್ತಕ ಮಳಿಗೆಗಳು, ಊಟೋಪಚಾರದ ಪೆಂಡಾಲುಗಳು ಮುಂತಾದ ತಾತ್ಕಾಲಿಕ ಸಂರಚನೆಗಳನ್ನು ಕಟ್ಟಿಕೊಟ್ಟವರು ತಮಿಳರು. ಊಟೋಪಚಾರದ ಗುತ್ತಿಗೆ ಪಡೆದು ಅಚ್ಚುಕಟ್ಟಾಗಿ ನಿರ್ವಹಿಸಿದವರು ಗುಜರಾತಿಗಳು. ಊಟ ಬಡಿಸಿದ್ದೂ ಹಿಂದಿ ಮಾತಾಡುತ್ತಿದ್ದ ಹುಡುಗರು. ಸಮ್ಮೇಳನದ ಸುಗಮ ನಿರ್ವಹಣೆಗಾಗಿ ನಿಯೋಜಿಸಲಾಗಿದ್ದ 3000 ಸ್ವಯಂ ಸೇವಕರಲ್ಲಿ ಬಹಳಷ್ಟು ಜನ ಬೇರೆ ರಾಜ್ಯಗಳಿಂದ ಬಂದಿದ್ದ ವಿದ್ಯಾರ್ಥಿಗಳೇ ಆಗಿದ್ದರು.

ಸಮ್ಮೇಳನಾಧ್ಯಕ್ಷ ಬರಗೂರು ರಾಮಚಂದ್ರಪ್ಪನವರ ಮೆರವಣಿಗೆಯ ಸಮಯದಲ್ಲಿ ಆರು ಕಿ.ಮೀ. ಉದ್ದಕ್ಕೂ ಭಾಗವಹಿಸಿದ ಕಲಾವಿದರಿಗೆ, ಸಾಮಾನ್ಯ ಜನರಿಗೆ ಉಚಿತವಾಗಿ ನೀರು, ಮಜ್ಜಿಗೆ, ತಂಪು ಪಾನಿಯ ವಿತರಿಸಿದವರೂ ಹಿಂದಿ ಮಾತಾಡುವ ಹುಡುಗರು. ಅದನ್ನು ಪ್ರಾಯೋಜಿಸಿದವರು ರಾಜಸ್ತಾನ್ ಮೂಲದ ಮಾರ್ವಾಡಿಗಳು.

500 ಮತ್ತು 1000 ರೂಪಾಯಿ ನೋಟುಗಳನ್ನು ಹಿಂಪಡೆದದ್ದರಿಂದ ಸಮ್ಮೇಳನಕ್ಕೆ ಜನರಿಂದ, ಉದ್ಯಮಿಗಳಿಂದ ಹರಿದು ಬರಲಿದ್ದ ದೇಣಿಗೆಯೂ ಬತ್ತಿಹೋಗಿತ್ತು. ಆ ಸಮಯದಲ್ಲಿ ಜಿಲ್ಲಾಧಿಕಾರಿ ಸೆಂಥಿಲ್ ಸಮಯ ಪ್ರಜ್ಞೆ ಮೆರೆದು ದೇಣಿಗೆಯನ್ನು ಹಣದ ರೂಪದಲ್ಲಿ ಸಂಗ್ರಹಿಸುವುದರ ಬದಲಿಗೆ ವಸ್ತು ಮತ್ತು ಸೇವೆಗಳ ರೂಪದಲ್ಲಿ ಸಂಗ್ರಹಿಸಲು ಮುಂದಾದರು. ಪರಿಣಾಮವಾಗಿ ಹೊಟೆಲ್ ಮಾಲಿಕರಿಗೆ ಉಚಿತವಾಗಿ ಹೊಟೆಲ್ ರೂಮುಗಳನ್ನು ನೀಡಲು ಮನವೊಲಿಸಿ ಒಪ್ಪಿದರು. ಅಕ್ಕಿಗಿರಣಿ ಮಾಲಿಕರಿಗೆ ಲಕ್ಷಾಂತರ ಜನರಿಗೆ ಊಟದ ವ್ಯವಸ್ಥೆ ಮಾಡುವುದಕ್ಕೆ ಒಪ್ಪಿಸಿದರು. ಹೀಗೆ ವಿವಿಧ ರೂಪದಲ್ಲಿ ಆರ್ಥಿಕವಾಗಿ ಸಹಕರಿಸಿದವರಲ್ಲಿ ಅನೇಕ ಮಂದಿ ಕನ್ನಡೇತರರಾಗಿದ್ದಾರೆ. ಉದಾಹರಣೆಗೆ, ತೆಲಂಗಾಣದ ನಾರಾಯಣಪೇಟೆಯ ಎಮ್ಮೆಲ್ಲೆ ಎಸ್. ಆರ್. ರೆಡ್ಡಿ, ರಾಜಸ್ತಾನ ಮೂಲದ ಉದ್ಯಮಿ ವಿಷ್ಣುಕಾಂತ ಬೂದಡಿ, ತೆಲುಗು ಮೂಲದ ಎ.ಪಾಪಾರೆಡ್ಡಿ ಇತ್ಯಾದಿ. ಈ ದೃಷ್ಟಿಯಲ್ಲಿ ನೋಡಿದಾಗ ಈ ಸಮ್ಮೇಳನ ಭಾಷಿಕ ಸಾಮರಸ್ಯದ ಸಮ್ಮೇಳನವಾಗಿ ನನಗೆ ಕಂಡಿತು.

ಈ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ್ದಕ್ಕೆ ಸೆಂಥಿಲ್ ಅವರಿಗೆ ಒಂದು ಪುಟ್ಟ ಸನ್ಮಾನ ಮಾಡುವುದಕ್ಕೆ ಸಂಘಟಕರು ಮುಂದಾದಾಗ ಸೆಂಥಿಲ್ ಸುತಾರಾಂ ಒಪ್ಪಲಿಲ್ಲ. ಕೊನೆಗೆ ಸಮ್ಮೇಳನಾಧ್ಯಕ್ಷರಾದ ಬರಗೂರು ರಾಮಚಂದ್ರಪ್ಪನವರೇ ಖುದ್ದಾಗಿ ಹೋಗಿ ಅವರ ಮನವೊಲಿಸಬೇಕಾಯಿತು. ಸೆಂಥಿಲ್ ಎಂದೂ ಪ್ರಚಾರ, ಸನ್ಮಾನ ಬಯಸಿದವರಲ್ಲ. ಇತರ ಅಧಿಕಾರಿಗಳನ್ನು, ಶಿಕ್ಷಕರನ್ನು ಉದ್ದೇಶಿಸಿ ಮಾತಾಡುವಾಗಲೆಲ್ಲಾ ಅವರು ಇದೇ ಮಾತನ್ನು ಹೇಳುತ್ತಿದ್ದರು. “ನಾವು ಸಾರ್ವಜನಿಕ ಸೇವಕರು. ನಮ್ಮ ಹೆಸರು, ಚಹರೆ, ಗುರುತು ಎಲ್ಲೂ ಮುಂದೆ ಬರಬಾರದು. ನಾವು ಅದೃಶ್ಯರಾಗಿರಬೇಕು. ನಮ್ಮ ಕೆಲಸ ಕಾಣುತ್ತಿರಬೇಕು.” ಎಂದು ಅವರು ಅಧಿಕಾರಿಗಳಿಗೆ ಕಿವಿಮಾತು ಹೇಳುತ್ತಿದ್ದುದನ್ನು ನಾನೇ ಹಲವು ಬಾರಿ ನೋಡಿದ್ದೇನೆ.
*****

2015ರ ಡಿಸೆಂಬರಿನಲ್ಲಿ ಸಿಂಧನೂರು ತಾಲೂಕಿನ ತುರ್ವಿಹಾಳದಲ್ಲಿ ಸುಮಾರು “ಮೇಲ್ಜಾತಿ”ಯವರು ಕಬ್ಬಿಣದ ರಾಡು, ಚಾಕು, ದೊಣ್ಣೆ ಹಿಡಿದು ದಲಿತ ಕೇರಿಗೆ ನುಗ್ಗಿ ಒಬ್ಬ ಗರ್ಭಿಣಿ ಮಹಿಳೆಯನ್ನೂ ಒಳಗೊಂಡಂತೆ ಸುಮಾರು 25 ಜನರನ್ನು ಹೊಡೆದಿದ್ದರು. ಕರ್ನಾಟಕ ಜನಶಕ್ತಿ ಸಂಘಟನೆಯ ಜೊತೆ ಗುರುತಿಸಿಕೊಂಡಿದ್ದ ತುರ್ವಿಹಾಳದ ಕೆಲವು ದಲಿತ ಯುವಕರು ನನಗೆ ಫೋನ್ ಮಾಡಿ ವಿಷಯ ತಿಳಿಸಿದ ತಕ್ಷಣ ನಾನು ಸೆಂಥಿಲ್ ಗೆ ಕಾಲ್ ಮಾಡಿದೆ. ಅವರು ಎಸ್ಪಿ ಚೇತನ್ ಸಿಂಗ್ ರಾಥೋಡ್ ಅವರಿಗೆ ಫೋನಾಯಿಸಿ ಕೂಡಲೇ ದಾಳಿ ಮಾಡಿದವರ ಮೇಲೆ ಕೇಸು ದಾಖಲಿಸಿ ಬಂಧಿಸುವಂತೆ ಸೂಚಿಸಿದರು.

ಸೆಂಥಿಲ್ ಅವರ ತ್ವರಿತ ಪ್ರತಿಸ್ಪಂದನೆಯಿಂದ ದಾಳಿ ಮಾಡಿದ 29 ಜನರ ಮೇಲೆ ಕೊಲೆಯತ್ನವನ್ನೂ ಒಳಗೊಂಡಂತೆ ಹಲವು ಆರೋಪಗಳಡಿ ಕೇಸು ದಾಖಲಾಗಿ ಎಲ್ಲರೂ ಜೈಲು ಪಾಲಾದರು. ನಂತರ ತಾವೇ ಎಸ್ಪಿ ಚೇತನ್ ಸಿಂಗ್ ರಾಥೋಡ್, ಲಿಂಗಸೂಗೂರು ಅಸಿಸ್ಟೆಂಟ್ ಕಮೀಷನರ್ ಆಗಿದ್ದ ಸೆಲ್ವಮಣಿ ಅವರನ್ನು ಕರೆದುಕೊಂಡು ಖುದ್ದಾಗಿ ತುರ್ವಿಹಾಳಕ್ಕೆ ಹೋಗಿ ನೊಂದ ದಲಿತರಿಗೆ ಭರವಸೆ ನೀಡಿ ಬಂದಿದ್ದರು.

ಸೆಂಥಿಲ್ ಇರೋದೇ ಹಾಗೆ. ಅವರ ಇಡೀ ಸಾರ್ವಜನಿಕ ಬದುಕನ್ನು ನೋಡಿದರೆ ಅವರದ್ದು ಎಲ್ಲಿಯೂ ಒಂದು ಕಪ್ಪುಚುಕ್ಕೆಯಿಲ್ಲದ ವ್ಯಕ್ತಿತ್ವ ಎಂಬುದು ಮನವರಿಕೆಯಾಗುತ್ತದೆ. ಕೈ, ಬಾಯಿ ಸಂಪೂರ್ಣವಾಗಿ ಶುದ್ಧವಾಗಿದೆ. ಬಡವರನ್ನು, ಸಮಾಜದ ಕೆಳಸ್ತರಗಳ ಬಗ್ಗೆ ತುಂಬಾ ಅಕ್ಕರೆ, ಪ್ರೀತಿ ಇಟ್ಟುಕೊಂಡಿದ್ದ ವ್ಯಕ್ತಿ. ಯಾವಾಗಲೂ ದಮನಿತರ ಕೂಗಿಗೆ ಓಗೊಡುವ ಮನಸ್ಸು ಅವರದು. ಒಬ್ಬ ಅಧಿಕಾರಿಯಾಗಿ ಜಿಲ್ಲೆಗೆ, ದೇಶಕ್ಕೆ, ಬಡಸಮುದಾಯಗಳ ಏಳ್ಗೆಗೆ ಏನೆಲ್ಲಾ ಮಾಡಲು ಸಾಧ್ಯವಿದೆಯೋ ಅದನ್ನೆಲ್ಲಾ ಬಹಳ ಪ್ರಾಮಾಣಿಕತೆಯಿಂದ ಮಾಡಿದ ವ್ಯಕ್ತಿ. ಪ್ರಾಮಾಣಿಕತೆಯ ಜೊತೆಗೆ ದಕ್ಷತೆಯನ್ನೂ ಮೈಗೂಢಿಸಿಕೊಂಡಿರುವ ಮನುಷ್ಯ. ಇವೆಲ್ಲಕ್ಕಿಂತ ಹೆಚ್ಚಾಗಿ ಬುದ್ದಿವಂತ ಕೂಡ. ಅವರು ಅಭಿವೃದ್ಧಿ ಕಾರ್ಯಗಳ ಮತ್ತು ಸರ್ಕಾರದ ಯೋಜನೆಗಳ ಅನುಷ್ಠಾನದ ಪ್ರಗತಿ, ಸ್ಥಿತಿಗತಿ ತಿಳಿಯಲು ಆಗಿಂದಾಗ್ಗೆ ಹಳ್ಳಿಗಾಡಿನಲ್ಲಿ ಸುತ್ತುತ್ತಿದ್ದರು. ಮಧ್ಯಾಹ್ನ ಊಟದ ಸಮಯಕ್ಕೆ ಸರಿಯಾಗಿ ಸಮೀಪದ ಯಾವುದಾದರೊಂದು ಸರ್ಕಾರಿ ಶಾಲೆಗೆ ಹೋಗಿ ವಿದ್ಯಾರ್ಥಿಗಳ ಜೊತೆ ಕೂತು ಬಿಸಿಯೂಟ ಉಣ್ಣುತ್ತಿದ್ದರು.

ಹೀಗೆ ಹೇಳುತ್ತಾ ಹೋದರೆ ಸಸಿಕಾಂತ್ ಸೆಂಥಿಲ್ ಮಾಡಿದ ಕೆಲಸಗಳು ಕೊನೆಮೊದಲಿಲ್ಲದಂತೆ ತೆರೆದುಕೊಳ್ಳುತ್ತಾ ಹೋಗುತ್ತವೆ. ಈಗ ಅವರು ರಾಜೀನಾಮೆ ಕೊಟ್ಟಾಗ ಇವೆಲ್ಲಾ ಒಂದೊಂದಾಗಿ ನೆನಪಾಗುತ್ತಾ ಹೋದವು. ಒಂದು ಕಡೆ ಇರಲಿ ಎಂದು ಬರೆದೆ. ಅಷ್ಟೆ.

ಕೃಪೆ: ಕುಮಾರ್ ಬುರಡಿಕಟ್ಟಿ ಫೇಸ್ ಬುಕ್ ವಾಲ್ ನಿಂದ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...