ಆರ್ಟಿಕಲ್ 15: ಭಾರತದ ಜಾತಿವ್ಯವಸ್ಥೆಯ ಕರಾಳ ಮುಖಗಳ ಸಮರ್ಥ ಅನಾವರಣ…

| ಕುಮಾರ್ ರೈತ |

ಅವರು ಹೊಲಸನ್ನು ಬಾಚಲೆಂದೇ ಬಂದವರು, ಅವರು ಊರಿನಿಂದಾಚೆಯೇ ಇರಬೇಕಾದವರು, ಅವರು ಮುಟ್ಟಿಸಿಕೊಳ್ಳಬಾರದವರು, ಅವರ ನೆರಳೂ ಸೋಕಬಾರದು, ಅವರು ತುಳಿಸಿಕೊಳ್ಳಲೆಂದೆ ಹುಟ್ಟಿದವರು, ದೌರ್ಜನ್ಯಕ್ಕೆ ಒಳಗಾದರೆ, ಅತ್ಯಾಚಾರಕ್ಕೀಡಾದರೆ, ಅದನ್ನು ಮಾಡಿದವರು ಮೇಲ್ಜಾತಿಯವರಾದರೆ ಪ್ರಶ್ನೆಯನ್ನೇ ಮಾಡಬಾರದು. ಏಕೆಂದರೆ ಇದರಿಂದ ಸಾಮಾಜಿಕ ಸೌಹಾರ್ದ ಹಾಳಾಗುತ್ತದೆ, ಸಮಾಜದ ನೆಮ್ಮದಿ ಭಂಗವಾಗುತ್ತದೆ.

ಇಲ್ಲಿ ಅವರು ಎಂದರೆ ದಲಿತರು. ಇವರ ನೋವು, ಮೇಲ್ಜಾತಿಗಳ ಮನೋಭಾವ, ರಾಜಕೀಯ ಸಮೀಕರಣಗಳ ಪರಿಣಾಮ ಇವೆಲ್ಲವನ್ನೂ “ಸಾಕ್ಷಿಪ್ರಜ್ಞೆ”ಯಿಂದ ಕಟ್ಟಿಕೊಡುವ ಕಾರ್ಯವನ್ನು “ಆರ್ಟಿಕಲ್ 15” ಚಿತ್ರ ಸಮರ್ಥವಾಗಿ ಮಾಡಿದೆ. ಮೂಲತಃ ಇದು 2014ರಲ್ಲಿ ಉತ್ತರ ಪ್ರದೇಶದ ಬದೌನ್ ನಲ್ಲಿ ನಡೆದ ಗ್ಯಾಂಗ್ ರೇಪ್ ದುರ್ಘಟನೆಯಿಂದ ಪ್ರೇರಿತಗೊಂಡು ರಚಿತವಾದ ಚಿತ್ರಕಥೆ ಆಧರಿಸಿದೆ.

ಭಾರತದ ಜಾತಿವ್ಯವಸ್ಥೆ ಬಹುಸಂಕೀರ್ಣ, ಜಟಿಲ. ಇದು ಇಲ್ಲಿನ ಆಡಳಿತ, ಕಾರ್ಯಾಂಗ, ರಾಜಕೀಯ ಎಲ್ಲದರ ಮೇಲೆಯೂ ದುಷ್ಪರಿಣಾಮ ಬೀರಿದೆ. ಇದು ಹೇಗೆ ನಡೆದುಕೊಂಡು ಬಂದಿದೆಯೊ ಹಾಗೆಯೇ ಮುಂದುವರಿಯಲು ಬಿಡಬೇಕು. ಬದಲಾವಣೆ ತರಲು ಹೋದವರನ್ನೇ ಆಪೋಶನ ತೆಗೆದುಕೊಳ್ಳುವ ವ್ಯವಸ್ಥೆ ಇಲ್ಲಿದೆ. ಇದರೊಳಗೆ ಹೊಕ್ಕ ಯುವ ಐಪಿಎಸ್ ಅಧಿಕಾರಿ ಅನುಭವಿಸುವ ತಲ್ಲಣಗಳ ಮೂಲಕ ಈ ವ್ಯವಸ್ಥೆ ಎಷ್ಟು ಕೊಳೆತು ನಾರುತ್ತಿದೆ ಎಂಬುದನ್ನು ಮುಖಕ್ಕೆ ರಾಚುವಂತೆ ಈ ಸಿನಿಮಾ ಕಟ್ಟಿಕೊಟ್ಟಿದೆ.

ಕೆಲವೊಂದು ಸನ್ನಿವೇಶಗಳ ಮೂಲಕ ಪೊಲೀಸ್ ವ್ಯವಸ್ಥೆಯಲ್ಲಿಯೂ ಮಡುಗಟ್ಟಿರುವ ಜಾತೀಯ ಭಾವನೆಯನ್ನು ಚಿತ್ರ ಅನಾವರಣಗೊಳಿಸುತ್ತದೆ. ಉತ್ತರಪ್ರದೇಶದ ಲಾಲ್ಗೌವ್ ಪ್ರದೇಶದ ಹೆಚ್ಚುವರಿ ಪೊಲೀಸ್ ಅಧೀಕ್ಷಕನಾಗಿ ಅಧಿಕಾರ ವಹಿಸಿಕೊಳ್ಳಲು ದೆಹಲಿಯಿಂದ ಬಂದ ಅಯಾನ್,(ಆಯುಷ್ಮಾನ್ ಖುರಾನ)  ಗ್ರಾಮವೊಂದರ ಬಳಿ ಜೀಪ್ ನಿಲ್ಲಿಸಿ ವಾಟರ್ ಬಾಟಲ್ ತರಲು ಹೇಳುತ್ತಾನೆ. ಅದಕ್ಕೆ ಜೊತೆಯಲ್ಲಿದ್ದ ಪೊಲೀಸ್ ಚಾಲಕ ಹೇಳುವುದು “ಇದು ಪಾಸಿಗಳ (ಉತ್ತರ ಪ್ರದೇಶದ ಸಾಮಾಜಿಕ ಶ್ರೇಣಿಯಲ್ಲಿ ಅತ್ಯಂತ ಕೆಳಸ್ತರದ ಜಾತಿ ಎಂದು ಪರಿಗಣಿಸಲ್ಪಟ್ಟವರು) ಗ್ರಾಮ, ಅವರಿಂದ ನೀರು ತೆಗೆದುಕೊಳ್ಳುವುದಿರಲಿ, ಅವರ ನೆರಳೂ ಸೋಕಬಾರದು ಎಂಬ ರಿವಾಜಿದೆ” ಎನ್ನುತ್ತಾನೆ. ಇದು ಅಯಾನ್ ಗೆ ತೀವ್ರ ಶಾಕ್ ಉಂಟು ಮಾಡುತ್ತದೆ.

ಮತ್ತೊಂದು ಸನ್ನಿವೇಶ: ತನ್ನ ಸಹೋದ್ಯೋಗಿಗಳಲ್ಲಿಯೇ ಮಡುಗಟ್ಟಿರುವ ಜಾತೀಯತೆಯಿಂದ ರೋಸಿ ಹೋದ ಅಯಾನ್ ಕೇಳುತ್ತಾನೆ “ನೀವೆಲ್ಲರೂ ಯಾವಯಾವ ಜಾತಿ” ಅದಕ್ಕೆ ಒಬ್ಬೊಬ್ಬರೂ ಒಂದೊಂದು ಉತ್ತರ ಹೇಳುತ್ತಾರೆ. “ಕಾಯಸ್ಥ, ಠಾಕೂರ್, ಜಾಟ್, ರಜಪೂತ್, ಚಮ್ಮಾರ್”. “ಪಾಸಿ ಮತ್ತು ಚಮ್ಮಾರ್ ಒಂದೆಯೇ ಎಂದು ಅಯಾನ್ ಮರುಪ್ರಶ್ನೆ ಹಾಕುತ್ತಾನೆ. “ಇಲ್ಲಿಇಲ್ಲ, ನಾವು (ಚಮ್ಮಾರ್) ಪಾಸಿಗಳಿಗಿಂತ ಮೇಲುಸ್ತರದವರು. ಅವರ ಮನೆಯಲ್ಲಿ ನಾವು ಆಹಾರ ಕೂಡ ಸೇವಿಸುವುದಿಲ್ಲ” ಎಂಬ ಉತ್ತರವನ್ನು ಸಬ್ ಇನ್ಸ್ಪೆಕ್ಟರ್ ನೀಡುತ್ತಾನೆ.

“ಸರಿ ನಾನ್ಯಾರು” ಎಂಬ ಮರುಪ್ರಶ್ನೆ ಅಯಾನ್ ಕೇಳಿದಾಗ “ನೀವು ಬ್ರಾಹ್ಮಣರಲ್ಲಿಯೇ ಅತ್ಯಂತ ಶ್ರೇಷ್ಠ ಬ್ರಾಹ್ಮಣರು” ಎಂಬ ಮರು ಉತ್ತರ ಬರುತ್ತದೆ. ಇಷ್ಟೆಲ್ಲ ಜಾತೀಯ ಸಿಕ್ಕುಗಳು, ಕಗ್ಗಂಟುಗಳು ತನಿಖೆಯ ಮೇಲೂ ದುಷ್ಪರಿಣಾಮ ಬೀರುತ್ತದೆ. ತನ್ನ ಸಹೋದ್ಯೋಗಿಗಳ ಮನೋಭಾವ ಅರಿಯಲು ಅಯಾನ್ ಕೇಳಿದ ಪ್ರಶ್ನೆಯೇ ಆತನಿಗೆ ಮುಳುವಾಗುತ್ತದೆ. ಆತನ ಮೇಲೆಯೇ ಸಾಮಾಜಿಕ ಸೌಹಾರ್ದಕ್ಕೆ ಭಂಗ ತಂದ ಆರೋಪ ಹೊರಿಸಲಾಗುತ್ತದೆ. ಆತ ಪೂರ್ವಾಗ್ರಹ ಪೀಡಿತನಾಗಿ ತನಿಖೆ ಮಾಡುತ್ತಿದ್ದಾನೆ ಎಂದು ಆರೋಪಿಸಿ ಸಸ್ಪೆಂಡ್ ಮಾಡಲಾಗುತ್ತದೆ.

ಇಬ್ಬರು ಪಾಸಿ ಸಮುದಾಯದ ಬಾಲಕಿಯರು ನೇಣು ಬಿಗಿದುಕೊಂಡಿದ್ದಾರೆ. ಇದನ್ನು ಮರ್ಯಾದಾಹತ್ಯೆ ಎಂದು ವರದಿಕೊಟ್ಟು ಪ್ರಕರಣ ಮುಚ್ಚಿಹಾಕುವಂತೆ ಒತ್ತಡ. ಗ್ಯಾಂಗ್ ರೇಪ್ ನಡೆದಿದೆ ಎಂದು ಮರಣೋತ್ತರ ಪರೀಕ್ಷಾ ವರದಿ ಕೊಟ್ಟ ವೈದ್ಯೆಯ ಮೇಲೂ ಒತ್ತಡ. ಪ್ರಕರಣಕ್ಕೆ ತಿಪ್ಪೆ ಸಾರಿಸಲು ಯತ್ನಿಸುವ ದೆಹಲಿಯಿಂದ ಬಂದ ತನಿಖಾ ತಂಡದ ಮುಖ್ಯಸ್ಥ. ಇವಿಷ್ಟರ ನಡುವೆಯೂ ತನಿಖೆ ಮುಂದುವರೆಯುತ್ತದೆ. ತನಿಖಾಧಿಕಾರಿಯನ್ನೇ ದಿಗ್ಬ್ರಮೆಗೊಳಿಸುವ ಸತ್ಯಗಳು ಹೊರಬೀಳುತ್ತವೆ.

ಇವೆಲ್ಲದರ ನಡುವೆ ಇಲ್ಲಿ ರಾಜಕೀಯ ಕಾರಣಗಳಿಗಾಗಿ “ಹಿಂದೂಗಳೆಲ್ಲ ಒಂದೇ ಎನ್ನುವುದು”, ನ್ಯಾಯಕ್ಕಾಗಿ ಒತ್ತಾಯಿಸಿ ಪೌರಕಾರ್ಮಿಕರು ಮುಷ್ಕರ ಹೂಡುವುದು, ದಲಿತರ ಹಕ್ಕುಗಳಿಗಾಗಿ ಹೋರಾಟ ಮಾಡುವ ಯುವಕನ ಆಂದೋಲನ ಯಶಸ್ವಿಯಾಗದಂತೆ ತಡೆಯಲು ಯತ್ನಿಸುವುದು, ಪಟ್ಟಭದ್ರ ಹಿತಾಸಕ್ತಿಗಳು ಪೊಲೀಸ್ ವ್ಯವಸ್ಥೆಯನ್ನೇ ದಾಳವಾಗಿ ಬಳಸಿಕೊಂಡು ಆತನನ್ನು ಎನ್ ಕೌಂಟರ್ ಮಾಡಿಸುವುದು. ಅಬ್ಬಬ್ಬಾ ಎನ್ನಿಸುವಂಥ ವಿವರಗಳೆಲ್ಲವೂ ಕೂಡ ಈ ಚಿತ್ರದಲ್ಲಿ ಒಂದೊಂದೇ ಒಂದೊಂದೇ ಹೊರಬೀಳುತ್ತದೆ.

“ಪೊಲೀಸ್ ಸಂಕೀರ್ಣದ ಒಳಚರಂಡಿ ಕಟ್ಟಿಕೊಂಡಿದೆ. ಕೊಳಚೆನೀರು ಆವರಣ ಪ್ರವೇಶಿಸಿದೆ. ಪೌರಕಾರ್ಮಿಕರು ಮುಷ್ಕರ ಹೂಡಿರುವುದರಿಂದ ಅಲ್ಲಿ ದುರ್ವಾಸನೆ, ಕೊಳೆತ ನೀರು ಇನ್ನೂ ಮಲೆಯುತ್ತಿದೆ. ಅದರ ಮಧ್ಯದಲ್ಲಿಯೇ ಇಟ್ಟಿಗೆಗಳನ್ನು ಪೇರಿಸಿದ ಪೊಲೀಸರು ಸರ್ಕಸ್ ಮಾಡುತ್ತಾ ನಡೆದಾಡುತ್ತಿದ್ದಾರೆ” ಇದೊಂದು ಸಾಂಕೇತಿಕ ಸನ್ನಿವೇಶದ ಮೂಲಕವೇ ಪ್ರಸಕ್ತ ಭಾರತ ಹೇಗೆ ಸಾಗಿದೆ ಎಂಬುದನ್ನು ನಿರ್ದೇಶಕರು ಅತ್ಯಂತ ಪರಿಣಾಮಕಾರಿಯಾಗಿ ಹೇಳಿದ್ದಾರೆ.

ಪೊಲೀಸ್ ಅಧಿಕಾರಿ ಅಯಾನ್ ಮನವಿ ನಂತರ ಪೌರಕಾರ್ಮಿಕರು ಮುಷ್ಕರ ಕೈಬಿಟ್ಟಿದ್ದಾರೆ. ಪೊಲೀಸ್ ಸ್ಟೇಷನ್ ಆವರಣದ ಒಳಗೆ ಕಟ್ಟಿಕೊಂಡ ಒಳಚರಂಡಿ ಮ್ಯಾನ್ ಹೋಲ್ ಗೆ ಅದೇ ಪಾಸಿ ಸಮುದಾಯದ ವ್ಯಕ್ತಿ ಬರೀಮೈಯಲ್ಲಿ ಮುಳಗಿ ಎದ್ದು ಕಸ ಎತ್ತಿದ್ದಾನೆ. ಬಂದ್ ಆಗಿದ್ದ ಒಳಚರಂಡಿ ಸರಿಯಾಗುವಂತೆ ಮಾಡಿದ್ದಾನೆ. ಈ ದೃಶ್ಯ ನೋಡುಗರಿಗೆ ಶಾಕ್ ಉಂಟು ಮಾಡುತ್ತದೆ. ಇಲ್ಲಿಯ ತನಕ ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದ “ಪಾಸಿಗಳ ನೆರಳೂ ಸೋಂಕಬಾರದು” ಎಂಬ ಮನೋಭಾವದ ಪೊಲೀಸರು ಮೂಗು ಮುಚ್ಚಿಕೊಳ್ಳದೇ ಓಡಾಡತೊಡಗಿದ್ದಾರೆ. ಈ ಪರಿಯ ತೀವ್ರತೆಯಲ್ಲಿ ಸಂಕೀರ್ಣ ವಿವರವನ್ನು ದಟ್ಟವಾಗಿ ಕಟ್ಟಿಕೊಡಲಾಗಿದೆ.

ಹತ್ಯೆಗೀಡಾದ ಇಬ್ಬರು ಬಾಲಕಿಯರ ಜೊತೆಗಿದ್ದು ನಾಪತ್ತೆಯಾದ ಮತ್ತೊಬ್ಬ ಬಾಲಕಿಯ ಹುಡುಕಾಟ ನಡೆದಿದೆ. ಕೊಳೆತು ವಾಸನೆ ಬರುತ್ತರುವ ಕೆಸರಿನ ಬಹು ವಿಶಾಲ ಮಡುವಿನಲ್ಲಿ ಪೊಲೀಸರು ಹುಡುಕುತ್ತಾ ನಡೆದಿದ್ದಾರೆ. ಯಾರು ಯಾರಿಗೆ ಮತ ಹಾಕಿದಿರಿ ಎಂಬ ಪ್ರಶ್ನೆ ಅವರಲ್ಲೇ ಮೂಡುತ್ತದೆ. ಆನೆಗೆ, ಸೈಕಲಿಗೆ, ಹೂವಿಗೆ (ಕಮಲಕ್ಕೆ), ಆನೆ, ಕಮಲ ಜೊತೆಯಾದಾಗ ಯಾರಿಗೆ ಸೈಕಲಿಗೆ ಎಂಬ ಉತ್ತರಗಳು ಬರುತ್ತವೆ. ರಾಜಕೀಯ ಪಕ್ಷಗಳ ಸಮೀಕರಣದ ಸಂದರ್ಭದಲ್ಲಿ ಮತದಾರ ಹೇಗೆಲ್ಲ ವಿವೇಚಿಸಬಹುದು ಎಂಬ ಸಂಗತಿಗಳನ್ನು ಕೂಡ “ಆರ್ಟಿಕಲ್ 15” ಚರ್ಚಿಸುತ್ತದೆ.

ತನಿಖೆ ಏನಾಗುತ್ತದೆ, ಅಪರಾಧಿಗಳಿಗೆ ಶಿಕ್ಷೆ ಆಗುತ್ತದೆಯೇ, ಜಾತಿ ಸಂಕೀರ್ಣತೆ, ಚಕ್ರವ್ಯೂಹದೊಳಗೆ ಸಿಲುಕಿದ ಪೊಲೀಸ್ ಅಧಿಕಾರಿ ಸ್ಥಿತಿಯೇನು ಎಂಬ ವಿವರಗಳನ್ನು ನಾನಿಲ್ಲಿ ಹೇಳಲು ಹೋಗುವುದಿಲ್ಲ. ಅದು ಚಿತ್ರವನ್ನು ನೋಡಬೇಕೆನ್ನುವ ಕುತೂಹಲವನ್ನು ಕಡಿಮೆ ಮಾಡಬಹುದು. ಇದು ನೋಡಲೇ ಬೇಕಾದ ಸಿನೆಮಾ ಎಂಬುದನ್ನು ಗಮನದಲ್ಲಿಟ್ಟುಕೊಂಡು ಈ ಮಾತನ್ನು ಹೀಗೆ ಮಾಡಿದ್ದೇನೆ.

ಭಾರತವನ್ನು ನಿರಂತರವಾಗಿ ಕಾಡುತ್ತಲೇ ಬಂದ ಸಂಕೀರ್ಣ ಸಮಸ್ಯೆಗಳನ್ನು ಗೋಜಲಿಲ್ಲದೇ ಹೇಳುವುದು ಸವಾಲಿನ ಕೆಲಸ. ಇದನ್ನು ಸ್ವೀಕರಿಸುವ ನಿರ್ದೇಶಕ ಅನುಭವ್ ಸಿನ್ಹಾ ಬಹು ಪರಿಣಾಮಕಾರಿ ಸಿನೆಮಾವೊಂದನ್ನು ನಮ್ಮ ಮುಂದಿಟ್ಟಿದ್ದಾರೆ. ಇವರ ಕಾರ್ಯ ಯಶಸ್ವಿಯಾಗಲು ಇವರು ಮತ್ತು ಗೌರವ್ ಸೋಲ್ಹಂಕಿ ರಚಿಸುವ ಸಮರ್ಥ ಸ್ಕ್ರಿಪ್ಟ್ ಸಹಕಾರಿಯಾಗಿದೆ. ಚಿತ್ರದ ಇತರ ತಾಂತ್ರಿಕ ವರ್ಗದ ಸಹಕಾರದ ಕೆಮಿಸ್ಟ್ರಿಯೂ ಉತ್ತಮವಾಗಿ ವರ್ಕ್ ಆಗಿದೆ. ಛಾಯಾಗ್ರಾಹಣ ಮಾಡಿರುವ ಇವಾನ್ ಮುಲ್ಲಿಗನ್, ಸಂಕಲನದ ಜವಾಬ್ದಾರಿ ಹೊತ್ತ ಯಶ ರಾಮಚಂದ್ರನಿ, ಸಂಗೀತ ನೀಡಿರುವ ಅನುರಾಗ್ ಸೈಕಿಯಾ ಕಾರ್ಯ ಅನನ್ಯ. ಇಂಥದ್ದೊಂದು ಅಪರೂಪದ ಸಿನೆಮಾ ನಿರ್ಮಾಣ ಮಾಡಿದ ಹೆಗ್ಗಳಿಕೆಯೂ ಅನುಭವ್ ಸಿನ್ಹಾ ಮತ್ತು ಜಿ ಸ್ಟುಡಿಯೋಗೆ ಸಲ್ಲುತ್ತದೆ.

ಆಯುಷ್ಮಾನ್ ಖುರಾನ (ಯುವ ಪೊಲೀಸ್ ಅಧಿಕಾರಿ ಅಯಾನ್) ಸಯ್ಯಾನಿ ಗುಪ್ತಾ (ದಲಿತ ಯುವತಿ ಗೌರ) ಕುಮುದ್ ಮಿಶ್ರಾ (ಸಬ್ ಇನ್ಸ್ಪೆಕ್ಟರ್) ಮನೋಜ್ ಪ್ಹಾವಾ ( ಸರ್ಕಲ್ ಇನ್ಸ್ಪೆಕ್ಟರ್ ಬಹ್ಮದತ್ತ) ಮಹಮ್ಮದ್ ಜಿಶಾನ್ ಆಯೂಬ್ (ದಲಿತ ನಾಯಕ ನಿಷಾದ್) ನಾಸೀರ್ (ದೆಹಲಿಯಿಂದ ಬರುವ ಕೇಂದ್ರ ತನಿಖಾ ತಂಡದ ಮುಖ್ಯಸ್ಥ), ರಂಜಿನಿ ಚಕ್ರವರ್ತಿ (ಪೋಸ್ಟ್ ಮಾರ್ಟಂ ಮಾಡುವ ವೈದ್ಯೆ) ಇಶಾ ತಲ್ವಾರ್ (ಆದಿತಿ) ಸೇರಿದಂತೆ ಸಿನೆಮಾದಲ್ಲಿ ಇರುವ ಎಲ್ಲ ಕಲಾವಿದರೂ ಸಮರ್ಥವಾಗಿ ನಟಿಸಿದ್ದಾರೆ.

ಅಂದಹಾಗೆ ಸಂವಿಧಾನದ ಆರ್ಟಿಕಲ್ 15; ತಾರತಮ್ಯಗಳಿಲ್ಲದ, ಲಿಂಗಭೇದವಿಲ್ಲದ, ಎಲ್ಲರೂ ಸಮಾನವಾಗಿ ಗೌರವಿಸಲ್ಪಡಬೇಕಾದ ಅಂಶಗಳ ಬಗ್ಗೆ ಹೇಳುತ್ತದೆ. ಡಾ. ಬಿ.ಆರ್ . ಅಂಬೇಡ್ಕರ್ ಅವರ ಮಹತ್ತರ ಆಶಯವಿದು. ಅವರ ಆಶಯ ಆಶಯವಾಗದೇ ಉಳಿದಿದೆ. ಸಂವಿಧಾನದ ಆಶಯಗಳನ್ನು ಜನರ ನಡುವೆ ಕಾರ್ಯಗತಗೊಳಿಸುವಲ್ಲಿ ಬಹು ಪ್ರಮುಖ ಪಾತ್ರ ವಹಿಸಬೇಕಾದ ಪೊಲೀಸ್ ಠಾಣೆ ನೋಟಿಸ್ ಬೋರ್ಡಿಗೆ “ಆರ್ಟಿಕಲ್ 15” ತೂಗಹಾಕಬೇಕಾದ ದುಸ್ಥಿತಿಯಿದೆ. ಇದೊಂದು ದೊಡ್ಡ ವಿಪರ್ಯಾಸ ಎಂಬುದರತ್ತವೂ ಚಿತ್ರ ಗಮನ ಸೆಳೆಯುತ್ತದೆ.

ದಲಿತ ಸಮುದಾಯಗಳ ಯುವ ನಾಯಕ ನಿಷಾದ್ “ಆಗ ಹರಿಜನ, ಈಗ ಬಹುಜನ, ಆದರೆ ಎಂದಿಗೂ ನಾವು ಜನವಾಗಲೇ ಇಲ್ಲ” ಎನ್ನುತ್ತಾನೆ. ಹೌದಲ್ಲವೆ… ಅವರು ದಲಿತರಲ್ಲ, ಮನುಷ್ಯರು ಎಂದು ಭಾರತೀಯ ಸಮಾಜದ ಹೆಚ್ಚಿನಾಂಶ ಯೋಚಿಸುತ್ತಲೇ ಇಲ್ಲವೇ ಎಂಬ ತಲ್ಲಣ ದಿಗ್ಗನೆ ಆವರಿಸಿಕೊಳ್ಳುತ್ತದೆ. ಬಹುಕಾಲ ಕಾಡುತ್ತಲೇ ಇರುವ ಚೌಕಟ್ಟಿನಾಚೆಯ ಚಿತ್ರವಿದು.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here