Homeಅಂಕಣಗಳುವಿಭಜಿಸಿ ಹೊಡೆಯುವ ಕುತಂತ್ರಕ್ಕೆ ಬಲಿಯಾದರೇ ಕ್ರೈಸ್ತರು? - ಓಸ್ಕರ್ ಲುವಿಸ್

ವಿಭಜಿಸಿ ಹೊಡೆಯುವ ಕುತಂತ್ರಕ್ಕೆ ಬಲಿಯಾದರೇ ಕ್ರೈಸ್ತರು? – ಓಸ್ಕರ್ ಲುವಿಸ್

ಹೀಗೆ 'ನಮ್ಮತನ'ವನ್ನು ಕಳೆದುಕೊಂಡು ಯಾರದ್ದೋ ಮರ್ಜಿಯಲ್ಲಿ ಗುಲಾಮರಂತೆ, ಕ್ಷಣಕ್ಷಣಕ್ಕೂ 'ಯಾರಾದರೂ ನೋಡುತ್ತಾರೆ, ಯಾರಾದರೂ ಕೇಳಿಸಿಕೊಳ್ಳುತ್ತಾರೆ' ಎಂದು ಹೆದರಿಕೊಂಡು ಬದುಕುವುದೂ, ಡಿಟೆನ್ಷನ್ ಕ್ಯಾಂಪ್ ಗಳಲ್ಲಿ ಬಂಧಿಯಾಗಿ ಕಾಲಕಳೆಯುವುದು ಎರಡೂ ಒಂದೇ ಅಲ್ಲವೇ?

- Advertisement -
- Advertisement -

ಭಾರತದ ಒಟ್ಟು ಜನಸಂಖ್ಯೆಯ 2.3 ಶೇಕಡಾದಷ್ಟು ಜನರಿರುವ ಕ್ರೈಸ್ತ ಧರ್ಮವು ಭಾರತದ ಮೂರನೇ ದೊಡ್ಡ ಧರ್ಮ. ಹಿಂದೂ ಧಾರ್ಮಿಕರು 80% ಇದ್ದರೆ, ಮುಸ್ಲಿಂ ಧಾರ್ಮಿಕರು 14% ಇರುವ ದೇಶ ನಮ್ಮದು. ಇದೀಗ ವಿವಾದಕ್ಕೀಡಾಗಿರುವ ಪೌರತ್ವ ಕಾಯ್ದೆ ಮೇಲ್ನೋಟಕ್ಕೆ ಮುಸ್ಲಿಂ ಧಾರ್ಮಿಕರನ್ನು ಗುರಿಯಾಗಿಸಿರುವಂತೆ ಕಂಡು ಬಂದರೂ, ಅದರ ಮುಂದಿನ ಗುರಿ ಕ್ರೈಸ್ತ ಧಾರ್ಮಿಕರು ಎಂಬುದು ಅಗೋಚರ ಸತ್ಯ. ಈಗ ಧರ್ಮದ ಹೆಸರಿನಲ್ಲಿ ದೇಶ ಒಡೆಯಲು ಹೊರಟವರು ಅದೇನೇ ಸಮರ್ಥನೆಗಳನ್ನು ನೀಡಿದರೂ, ಕ್ರೈಸ್ತ ಧರ್ಮಿಕರಿಗೆ ಅಭಯಹಸ್ತ ನೀಡಿದರೂ ಅದನ್ನು ನಂಬಿ, ಪೌರತ್ವ ಕಾಯ್ದೆಯ ವಿರೋಧ ದೇಶಾದ್ಯಂತ ಎದ್ದಿರುವ ಪ್ರತಿಭಟನೆಯಿಂದ ‘ ಸುರಕ್ಷಿತ ಅಂತರ’ ಕಾಯ್ದುಕೊಳ್ಳುವ ಮೊದಲು ನಾವು ಕೆಲವು ವಾಸ್ತವಾಂಶಗಳನ್ನು ಅವಲೋಕಿಸಬೇಕಿದೆ.

ಇತ್ತೀಚಿನ ವರ್ಷಗಳಲ್ಲಿ ಕ್ರೈಸ್ತರ ಮೇಲೆ ನಡೆದ ಕೆಲವು ದೌರ್ಜನ್ಯಗಳನ್ನು ನೆನಪಿಸಿಕೊಳ್ಳಿ. 130 ಕೋಟಿ ಜನಸಂಖ್ಯೆಯ ಮುಂದೆ ದೇಶದ ಉದ್ದಗಲಕ್ಕೂ ಚದುರಿ ಹೋಗಿರುವ 2.8 ಕೋಟಿ ಕ್ರೈಸ್ತ ಧರ್ಮಿಕರು, ಒಂದೇ ಒಂದು ಶಾಸಕ ಇಲ್ಲವೇ ಸಂಸದ ಸ್ಥಾನವನ್ನು ನಿರ್ಧರಿಸುವ ಮಟ್ಟಿಗೆ ದೇಶದ ಯಾವೊಂದು ಪ್ರಮುಖ ರಾಜ್ಯದಲ್ಲೂ ಇಲ್ಲ. ಹಾಗಾಗಿಯೇ, ಕ್ರೈಸ್ತರ ಮೇಲೆ ಯಾವುದೇ ದೌರ್ಜನ್ಯಗಳಾದಾಗಲೂ ಪ್ರತಿಭಟನೆಯ ಕೂಗು ಎದ್ದ ಮೇಲೆಯೇ ಸಾಂತ್ವನ ಹೇಳಿದ್ದು ಬಿಟ್ಟರೆ ಇಲ್ಲಿಯವರೆಗಿನ ಯಾವುದೇ ಸರಕಾರಗಳೂ ತಾವಾಗಿ ಬಂದು ಕ್ರೈಸ್ತರ ಬೆಂಬಲಕ್ಕೆ ನಿಂತಿಲ್ಲ.

2.8 ಕೋಟಿ ಜನರ ಧ್ವನಿ ಆಡಳಿತದ ಕಿವಿಗೆ ಬಿದ್ದುದು ‘ಕ್ರೈಸ್ತರು’ ಎಂಬ ಕಾರಣಕ್ಕೆ ಅಲ್ಲ ಬದಲಾಗಿ ಇತರ ಸಣ್ಣ ಸಣ್ಣ ಧರ್ಮಗಳು, ಅದರಲ್ಲೂ ಮುಸ್ಲಿಮರು ‘ಅಲ್ಪಸಂಖ್ಯಾತರು’ ಎಂಬ ನೆಲೆಯಲ್ಲಿ ಒಟ್ಟಾದ ಕಾರಣಕ್ಕೆ. ಕ್ರೈಸ್ತರು ಗಣನೀಯ ಪ್ರಮಾಣದಲ್ಲಿರುವ ಕರಾವಳಿಯ ಉಭಯ ಜಿಲ್ಲೆಗಳನ್ನೇ ಗಮನಿಸಿ, ಇಲ್ಲಿ ಕ್ರೈಸ್ತರ ಮೇಲೆ ಯಾವುದೇ ದೌರ್ಜನ್ಯವಾದಾಗಲೂ ಮುಸ್ಲಿಂ ಧಾರ್ಮಿಕರು ಕ್ರೈಸ್ತರ ಬೆಂಬಲಕ್ಕೆ ನಿಂತು ಹೋರಾಡಿದ ಸಾಕಷ್ಟು ಘಟನೆಗಳನ್ನು ಪಟ್ಟಿಮಾಡಬಹುದು. 2008ರ ಚರ್ಚ್ ದಾಳಿಗಳು ಇದಕ್ಕೆ ಒಂದು ಉದಾಹರಣೆ ಅಷ್ಟೇ. ಅದೇ ಮುಸ್ಲಿಂ ಸಮುದಾಯದ ಮೇಲೆ ದೌರ್ಜನ್ಯಗಳಾದಾಗ ಕ್ರೈಸ್ತರು ಇದೇ ‘ಅಲ್ಪಸಂಖ್ಯಾತರು’ ನೆಲೆಯಲ್ಲಿ ಧ್ವನಿಗೂಡಿಸಿದ್ದಾರೆ. ಇದನ್ನು ಚೆನ್ನಾಗಿಯೇ ಅರ್ಥೈಸಿಕೊಂಡಿರುವ ಸರ್ವಾಧಿಕಾರಿಗಳು ಕ್ರೈಸ್ತ-ಮುಸ್ಲಿಂ ಸಮುದಾಯಗಳನ್ನು ವಿಭಜಿಸಿದರೆ ಪ್ರತಿಭಟನೆಯ ಕಾವನ್ನು ಅರ್ಧಕ್ಕಿಳಿಸಬಹುದು ಎಂಬ ಲೆಕ್ಕಾಚಾರದಲ್ಲಿಯೇ, ‘ಕ್ರೈಸ್ತರಿಗೆ ಯಾವುದೇ ಅಪಾಯವಿಲ್ಲ, ನೀವು ಸುರಕ್ಷಿತರು’ ಎಂದು ಬೆಣ್ಣೆ ಸವರಿದೆ. ಇದನ್ನು ಕ್ರೈಸ್ತ ಮುಖಂಡರು ಅಷ್ಟು ಸುಲಭದಲ್ಲಿ ಹೇಗೆ ನಂಬಿಬಿಟ್ಟರೋ ಗೊತ್ತಿಲ್ಲ, ಆದರೆ ‘ನಮಗೆ ಅಪಾಯವಿಲ್ಲ, ನಾವು ಸುರಕ್ಷಿತರು’ ಎಂದು ಕ್ರೈಸ್ತ ಸಮುದಾಯವನ್ನು ಪ್ರತಿಭಟನೆಯಿಂದ ಸಾಕಷ್ಟು ದೂರವೇ ಇಟ್ಟಿದ್ದಾರೆ.

ಕ್ರೈಸ್ತ ಮುಖಂಡರ ಈ ನಡೆಯ ಕುರಿತು ಪ್ರಶ್ನಿಸಿದರೆ, ಹಾಗೇನೂ ಇಲ್ಲ, ಒಂದು ವೇಳೆ ನಮ್ಮನ್ನು ಹೊರಹಾಕುವ ಉದ್ದೇಶ ಇದ್ದಿದ್ದರೆ ಸಂಖ್ಯೆಯಲ್ಲಿ ಕಮ್ಮಿಯಿರುವ ನಮ್ಮನ್ನು ಮೊದಲು ಹೊರಹಾಕಿ ನಂತರ ಮುಸ್ಲಿಮರನ್ನು ಗುರಿಯಾಗಿಸಬಹುದಿತ್ತಲ್ಲವೇ? ಅನ್ನುವ ಸಮರ್ಥನೆಯೊಂದು ಹೊರಬರುತ್ತದೆ! ಕ್ರೈಸ್ತ ಸಮುದಾಯದ ನಾಡಿಮಿಡಿತವನ್ನು, ಮುಸ್ಲಿಂ ಸಮುದಾಯದ ಹೋರಾಟದ ಕಿಚ್ಚನ್ನು ಅರ್ಥಮಾಡಿಕೊಂಡೇ ಈ ‘ವಿಭಜಿಸಿ ಒಡೆಯುವ’ ತಂತ್ರವನ್ನು ಹೆಣೆಯಲಾಗಿದೆ. ಒಂದು ವೇಳೆ ಮೊದಲು ಕ್ರೈಸ್ತರನ್ನು ಗುರಿಯಾಗಿಸಿದ್ದರೆ ಮುಸ್ಲಿಂ ಸಮುದಾಯ ಅದನ್ನು ಖಂಡಿತಾ ವಿರೋಧಿಸುತ್ತಿತ್ತು. ಇತರ ಅಲ್ಪಸಂಖ್ಯಾತರೂ, ಪ್ರಜ್ಞಾವಂತ, ಜೀವಪರ ಕಾಳಜಿಯುಳ್ಳ ಹಿಂದೂಗಳೂ ಈಗಿನಂತೆಯೇ ವಿರೋಧಿಸುತ್ತಿದ್ದರು. ಆದರೆ ಈಗ ಮುಸ್ಲಿಮರನ್ನು ಮಾತ್ರ ಗುರಿಯಾಗಿಸಿರುವುದರಿಂದ ವಿರೋಧಿಸುವವರ ಸಂಖ್ಯೆ ಅನಾಮತ್ತಾಗಿ 2.8 ಕೋಟಿ ಕಡಿಮೆಯಾಗಿದೆ! ಎರಡನೆಯದಾಗಿ ಮುಸ್ಲಿಂ ಸಮುದಾಯವು ಸಂಖ್ಯೆಯಲ್ಲಿ ಕ್ರೈಸ್ತರಿಗಿಂತ ಪ್ರಬಲ ಮಾತ್ರವಲ್ಲ ಹೋರಾಟದಲ್ಲೂ ಮುಂದು. ಅಂತಹ ಪ್ರಬಲ ಸಮುದಾಯವನ್ನೇ ಮೊದಲ ಗುರಿಯಾಗಿಸಿ, ಅವರ ಹೆಡೆಮುರಿ ಕಟ್ಟಿದರೆ ಇತರ ಅಲ್ಪಸಂಖ್ಯಾತ ಸಮುದಾಯಗಳು ತಾವಾಗಿ ಸುಮ್ಮನಾಗುತ್ತವೆ, ಸುಮ್ಮನಾಗದೇ ಹೋದರೂ ಕನಿಷ್ಠ ಬಲಪ್ರಯೋಗದಿಂದ ಅವರನ್ನು ನಿರಾಯಾಸವಾಗಿ ತೆಪ್ಪಗಾಗಿಸಬಹುದು ಎಂಬ ಲೆಕ್ಕಾಚಾರವೂ ಇಲ್ಲಿ ಅಡಗಿದೆ.

ಮನುವಾದಿಗಳ ಪ್ರಕಾರ ಮುಸ್ಲಿಂ ಜನರು ಎಷ್ಟು ಹೊರಗಿನವರೋ, ಕ್ರೈಸ್ತರೂ ಅಷ್ಟೇ ಹೊರಗಿನವರು, ಅವರಿಗೆ ಪಾಕಿಸ್ಥಾನ, ನಮಗೆ ಇಟೆಲಿ – ಅಷ್ಟೇ ವ್ಯತ್ಯಾಸ! ಅದನ್ನು ಅವರು ಮೇಲಿಂದ ಮೇಲೆ ಪ್ರತಿಪಾದಿಸುತ್ತಲೇ ಬಂದಿದ್ದಾರೆ. ದೇಶದ ನಾಗರಿಕನಾಗಿ, ದೇಶಕ್ಕೆ ಮಾರಕವಾದ ಯಾವುದೇ ಸಂಗತಿಯನ್ನು ಪ್ರಶ್ನಿಸಿದ ಮುಸ್ಲಿಮರನ್ನು “ನೀನು ಇಲ್ಲಿಯವನಲ್ಲ ಪಾಕಿಸ್ಥಾನಕ್ಕೆ ಹೋಗು”, ಕ್ರೈಸ್ತರನ್ನು “ಇಟೆಲಿಗೆ ಹೋಗು” ಎಂದು ಮೂದಲಿಸುತ್ತಲೇ ‘ನೀವು ನಮ್ಮ ದಾಕ್ಷಿಣ್ಯದಲ್ಲಿ ಬದುಕುತ್ತಿರುವ ಎರಡನೇ ದರ್ಜೆಯ ನಾಗರಿಕರು’ ಎಂದು ಮೇಲಿಂದ ಮೇಲೆ ಒತ್ತಿಹೇಳಿದ್ದಾರೆ. ಇದು ಮದರ್ ಥೆರೇಸಾರಿಂದ ಹಿಡಿದು ನನ್ನಂತಹ ಸಾಮಾನ್ಯ ನಾಗರಿಕನವರೆಗೆ ಎಲ್ಲರಿಗೂ ಅನ್ವಯವಾಗುವ ವಾಸ್ತವ.

ಮತಾಂತರದ ಆರೋಪವನ್ನು ತಲೆಯ ಮೇಲೆ ಹೊತ್ತುಕೊಂಡು, ಚರ್ಚು ದಾಳಿ, ಧಾರ್ಮಿಕ ಮುಂಖಡರ ಮೇಲೆ ಹಲ್ಲೆ, ಕೊಲೆ, ಅತ್ಯಾಚಾರ ಇವೆಲ್ಲವನ್ನೂ ಸಹಿಸಿದ್ದೇವೆ. ಸಹನೆಯ ಮಿತಿಮೀರಿದಾಗ ಪ್ರಶ್ನಿಸಿದ್ದೇವೆ, ನಾವು ಇಲ್ಲಿಯವರಲ್ಲ ಎಂದು ಮತ್ತೆ ಮತ್ತೆ ಅವರಿಂದ ಹೇಳಿಸಿಕೊಂಡಿದ್ದೇವೆ! ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ದೆಹಲಿಯ ಆರ್ಚ್ ಬಿಷಪ್ ಅನಿಲ್ ಕೌಟೋ ಅವರು ದೇಶದಲ್ಲಿ ಪ್ರಕ್ಷುಬ್ದ ವಾತಾವರಣವಿದೆ, ದೇಶಕ್ಕಾಗಿ ಪ್ರಾರ್ಥಿಸೋಣ ಎಂದು ಪ್ರಾರ್ಥನಾ ಅಭಿಯಾನಕ್ಕೆ ಕರೆಕೊಟ್ಟು ಒಂದು ಪತ್ರ ಬರೆದಿದ್ದರು. ಆ ಸಂದರ್ಭವನ್ನು ಒಮ್ಮೆ ನೆನೆಪಿಸಿಕೊಳ್ಳಿ. ಸೋಶಿಯಲ್ ಮೀಡಿಯಾಗಳಲ್ಲಿ ನಂಜು ಕಾರುವ ಮನು’ವ್ಯಾಧಿ’ಗಳನ್ನು ಬಿಡಿ, ಚುನಾಯಿತ ಸರಕಾರವೊಂದರ ಮಂತ್ರಿಗಳು ಕೊಟ್ಟ ಹೇಳಿಕೆಗಳನ್ನು ಒಮ್ಮೆ ನೆನೆಸಿಕೊಳ್ಳಿ. ಚುನಾವಣಾ ಸಮಯದಲ್ಲಿ ‘ಒಳ್ಳೆಯ ಜನಪ್ರತಿನಿಧಿಗಳು ಆಯ್ಕೆಯಾಗಿ ಬರಲಿ’ ಎಂದು ಪ್ರಾರ್ಥಿಸುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ ಎಂಬುದನ್ನು ಮರೆಮಾಚಿ, ಮೋದಿಯವರನ್ನು ‘ಟಾರ್ಗೆಟ್’  ಮಾಡಿಕೊಂಡು ಆ ಪತ್ರವನ್ನು ಬರೆಯಲಾಗಿದೆ ಎಂದೇ ಬಿಂಬಿಸಿ ಯಶವಂತ್ ಸಿನ್ಹಾ, ಗಿರಿರಾಜ್ ಸಿಂಗ್, ರಾಜನಾಥ್ ಸಿಂಗ್ ಹೀಗೆ ಒಬ್ಬರ ಮೇಲೊಬ್ಬರು ಪತ್ರದ ಉದ್ದೇಶವನ್ನು ಪ್ರಶ್ನಿಸಿ ಕೊಟ್ಟ ಹೇಳಿಕೆಗಳನ್ನು ಗಮನಿಸಿದರೆ ಕ್ರೈಸ್ತರ ಕುರಿತು ಅವರ ಮನಸ್ಸಿನಲ್ಲಿ ಏನಿದೆ ಎಂಬುದು ಸ್ಪಷ್ಟವಾಗುತ್ತದೆ. ಬಿಷಪ್ ಅವರ ಪತ್ರವೇ ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸಲಿದೆ ಎನ್ನುವ ಹೇಳಿಕೆಗಳ ಮೂಲಕ ‘ನಿಮಗೆ ಗಂಡಾಂತರ ಕಾದಿದೆ’ ಎಂದು ಕ್ರೈಸ್ತರಿಗೆ ಪರೋಕ್ಷ ಎಚ್ಚರಿಕೆ ನೀಡುತ್ತಾರೆ ಎಂದರೆ? ಬಿಷಪ್ ಅವರ ಪತ್ರದ ಉದ್ದೇಶವನ್ನು ಸ್ಪಷ್ಟೀಕರಿಸಿ ನಾನು ಹಾಕಿದ್ದ ಫೇಸ್ಬುಕ್ ಪೋಸ್ಟ್’ಗೆ ಪ್ರತಿಕ್ರಿಯಿಸಿದ್ದ ಮನು’ವ್ಯಾಧಿ’ ಗಳು ನನ್ನನ್ನು ಇಟೆಲಿಗೆ ಹೋಗು ಎಂದಾಗಲೇ ನನಗೆ ಸ್ಪಷ್ಟವಾಗಿತ್ತು – ನಾನೆಷ್ಟೇ ಭಾರತೀಯನಾದರೂ ಅವರ ಪಾಲಿಗೆ ನಾನು ಬರೀ ಕ್ರೈಸ್ತ. ಇಲ್ಲಿರಬೇಕಾದರೆ ಅವರು ಮಾಡಿದ್ದೆಲ್ಲವನ್ನೂ ಸಹಿಸಿಕೊಂಡಿರಬೇಕು, ಇಲ್ಲವೇ ಬೇರೆ ದೇಶವನ್ನು ಹುಡುಕಬೇಕು!

ಗ್ರಹಾಂ ಸ್ಟೇಯ್ನ್ ಎಂಬ ಅಸ್ಟ್ರೇಲಿಯಾ ಮೂಲದ ಮಿಷನರಿಯನ್ನು ಕ್ರೈಸ್ತರು ಮರೆತಿಲ್ಲ ಎಂದುಕೊಳ್ಳುತ್ತೇನೆ. ಒಡಿಸ್ಸಾ ರಾಜ್ಯದ ಮೋಹನಪುರ ಎಂಬ ಕುಗ್ರಾಮದಲ್ಲಿ ಕುಷ್ಠರೋಗ ಪೀಡಿತರನ್ನು ಆರೈಕೆ ಮಾಡುತ್ತಾ, ಅವರಿಗಾಗಿ ಒಂದು ಆಸ್ಪತ್ರೆಯನ್ನು ಕಟ್ಟಿ, ಅಲ್ಲಿನ ಬುಡಕಟ್ಟು ಜನರಿಗೆ ಆಹಾರ, ವಸತಿ, ಶಿಕ್ಷಣ ಮುಂತಾದ ಮೂಲ ಸೌಲಭ್ಯಗಳನ್ನು ಒದಗಿಸಿಕೊಟ್ಟು ತಮ್ಮ ಜೀವನದ ಅಮೂಲ್ಯ 34 ವರ್ಷಗಳನ್ನು ಅವರಿಗಾಗಿ ಸವೆಸಿದ ಗ್ರಹಾಂ ಸ್ಟೇಯ್ನ್ಸ್ ಅವರನ್ನು ಮತಾಂತರ ಮಾಡುತ್ತಾರೆ ಎಂಬ ಆರೋಪ ಹೊರಿಸಿ 22 ಜನವರಿ 1999 ರಂದು – ಫಿಲಿಪ್ (10) ಹಾಗೂ ಥಿಮೊತಿ (6) ಎಂಬ ಅವರ ಎಳೆಯ ಮಕ್ಕಳ ಜೊತೆ ಸಜೀವವಾಗಿ ದಹಿಸಿ ಕೊಲೆಮಾಡಲಾಗಿತ್ತು. ಧಾರಾಸಿಂಗ್ ಎಂಬ ಭಜರಂಗಿಯ ನೇತೃತ್ವದಲ್ಲಿ, ಪ್ರತಾಪ್ ಸಾರಂಗಿ ಎಂಬುವರ ಮಾರ್ಗದರ್ಶನದಲ್ಲಿ ಈ ದುಷ್ಕೃತ್ಯ ನಡೆದಿತ್ತು. ಈ ಪ್ರಕರಣದ ತನಿಖೆಯಾಗಿ ಧಾರಾಸಿಂಗ್’ನಿಗೆ ಜೀವಾವಧಿ ಶಿಕ್ಷೆಯಾಯಿದೆ. ಆದರೆ ಈ ಪ್ರಕರಣದ ಸೂತ್ರಧಾರಿಯಾಗಿದ್ದ ಸಾರಂಗಿ ಎಲ್ಲಿದ್ದಾರೆ ಎಂದು ಹುಡುಕಿಕೊಂಡು ಹೋದರೆ ನೀವು ಸಂಸತ್ ಭವನವನ್ನು ಪ್ರವೇಶಿಸುತ್ತೀರಿ!

ಹೌದು, ಉತ್ತರ ಪ್ರದೇಶದ ಇಟಾವಾ ಎಂಬ ಕುಗ್ರಾಮದಲ್ಲಿ ಪುಡಿ ರೌಡಿಯಾಗಿದ್ದ ಧಾರಾ ಸಿಂಗ್’ನನ್ನು ಗ್ರಹಾಂ ಸ್ಟೇಯ್ನ್ಸ್ ಹಾಗೂ ಆತನ ಮಕ್ಕಳನ್ನು ಅಮಾನುಷವಾಗಿ ಕೊಲ್ಲುವ ಹಂತಕ್ಕೆ ಬೆಳೆಸಿದ ಆತನ ಗುರು, ಪ್ರತಾಪ್ ಚಂದ್ರ ಸಾರಂಗಿ ಪ್ರಸ್ತುತ ಮೋದಿ ಸಂಪುಟದಲ್ಲಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ವಿಭಾಗದಂತಹ ಪ್ರಮುಖ ಖಾತೆಯೊಂದರ ಮಂತ್ರಿಯಾಗಿದ್ದಾರೆ 2004 ರಿಂದ 2014 ರವರೆಗೆ ಸತತ ಎರಡು ಅವಧಿಗೆ ಒಡಿಸ್ಸಾದ ನೀಲಗಿರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದು ಶಾಸಕನಾಗಿದ್ದ ಆತ 2014 ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ, ಸೋತಿದ್ದ. ಮಾಧ್ಯಮಗಳಿಂದ ಒಡಿಸ್ಸಾದ ಫಕೀರ ಅಥವಾ ಒಡಿಸ್ಸಾದ ಮೋದಿ ಎಂದೇ ಅಲಂಕೃತನಾಗಿದ್ದ ಆತ 2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿ, ಗೆದ್ದು ಸಂಪುಟವನ್ನೂ ಸೇರಿಕೊಂಡ! ಬಿಜೆಪಿ ಮತ್ತು ಸಂಘಪರಿವಾರದ ‘ಕ್ರೈಸ್ತ ಪ್ರೇಮ’ಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೇ?

ಪ್ರತಾಪ್‌ ಸಾರಂಗಿ

ಕೇಂದ್ರ ಸರ್ಕಾರ ಉದ್ದೇಶಿಸಿರುವ ಪೌರತ್ವ ಕಾಯ್ದೆ ಸಮಗ್ರವಾಗಿ ಜಾರಿಯಾಗಿದ್ದೇ ಆದಲ್ಲಿ ಮುಸ್ಲಿಂ, ಕ್ರೈಸ್ತರು ಬಿಡಿ, ಅದಷ್ಟೋ ಹಿಂದೂಗಳೇ ನೆಲೆಕಳೆದುಕೊಳ್ಳುತ್ತಾರೆ ಎಂಬುದು ವಾಸ್ತವ. ಅಸ್ಸಾಂನಲ್ಲಿ ನಡೆದ ಬೆಳವಣಿಗೆಗಳು ಇದಕ್ಕೆ ಸೂಕ್ತ ಉದಾಹರಣೆ. ಅದರೂ ಒಂದು ವೇಳೆ ಪೌರತ್ವ ಕಾಯ್ದೆಗೆ ಮುಸ್ಲಿಮರನ್ನಷ್ಟೇ ಒಳಪಡಿಸಿ, ಕ್ರೈಸ್ತರನ್ನು ಬಿಟ್ಟು ಬಿಡುವ ಔದಾರ್ಯವನ್ನು ಮನುವಾದಿಗಳು ತೋರಿದರು ಎಂದಿಟ್ಟುಕೊಳ್ಳಿ. ಈಗಿರುವಂತೆಯೇ ನಮ್ಮ ಸಾಂವಿಧಾನಿಕ ಅಧಿಕಾರವನ್ನು ಅನುಭವಿಸಿಕೊಂಡು ಹಾಯಾಗಿರಬಹುದೇ? ಸಂಸ್ಕೃತಿ, ಪರಂಪರೆ, ಆಹಾರದ ಹಕ್ಕು, ಸಾಮಾಜಿಕ/ಧಾರ್ಮಿಕ ಆಚರಣೆಗಳು ಇವೆಲ್ಲವನ್ನೂ ಈಗಿರುವಂತೆಯೇ ಪಾಲಿಸಿಕೊಂಡು ಹೋಗಲು ಬಿಡುವರೇ? ಖಂಡಿತಾ ಇಲ್ಲ, ಇವೆಲ್ಲವನ್ನು ‘ಮನು ಕನ್ನಡಕ’ ಹಾಕಿಯೇ ನೋಡಲಾಗುವುದು, ಅವರಿಗೆ ಸರಿ ಕಂಡರೆ ಪಾಲಿಸಬಹುದು, ಇಲ್ಲದೇ ಹೋದರೆ ಬದಲಾಯಿಸಬೇಕು.

2017 ರಲ್ಲಿ ಉತ್ತರಪ್ರದೇಶದಲ್ಲಿ ‘ಅದು ನಮ್ಮ ಸಂಸ್ಕೃತಿ ಅಲ್ಲ’ ಎಂದು ಕ್ರಿಸ್ಮಸ್ ಕ್ಯಾರಲ್ಸ್ ಮೇಲೆ ನಿಷೇಧ ಹೇರಲಾಗಿತ್ತು. ಕ್ರಿಸ್ಮಸ್ ಕ್ಯಾರಲ್ಸ್ ಹಾಡುತ್ತಿದ್ದ ಆಲಿಘರ್’ನ ಚರ್ಚ್ ಒಂದಕ್ಕೆ ನುಗ್ಗಿದ್ದ ದುಷ್ಕರ್ಮಿಗಳು ಕ್ಯಾರಲ್ಸ್ ತಂಡದ ಮೇಲೆ ಹಲ್ಲೆ ಮಾಡಿದ್ದು ಮಾತ್ರವಲ್ಲ, ಅವರು ನುಡಿಸುತ್ತಿದ್ದ ಸಂಗೀತ ಪರಿಕರಗಳನ್ನು ಧ್ವಂಸ ಮಾಡಲಾಗಿತ್ತು. ಆಲಿಘರ್ ಮತ್ತು ನೋಯ್ಡಾ ಜಿಲ್ಲೆಗಳು ದೆಹಲಿಗೆ ಹತ್ತಿರವಿದ್ದು, ಉತ್ತರ ಪ್ರದೇಶದ ರಾಜ್ಯಗಳಲ್ಲೇ ಸ್ವಲ್ಪ ‘ನಾಗರಿಕ’ ಜಿಲ್ಲೆಗಳು ಎಂದು ಕರೆಯಲ್ಪಡುತ್ತವೆ. ಹೀಗಿರುವಾಗ ‘ಅನಾಗರಿಕ’ ಜಿಲ್ಲೆಗಳಲ್ಲಿ ಎಂತಹ ಪರಿಸ್ಥಿತಿ ಇದ್ದೀತು, ಊಹಿಸಿ!

2009 ರಲ್ಲಿ ನಾನು ಗುಜರಾತ್’ನಲ್ಲಿ ಇದ್ದಾಗ ಬಾಡಿಗೆ ಮನೆ ಪಡೆಯಲು ಪಟ್ಟ ಕಷ್ಟ ಯಾವತ್ತೂ ಮರೆಯಲು ಸಾಧ್ಯವಿಲ್ಲ. ನೋಡಿದ ಮನೆಗಳ ಮಾಲೀಕರೆಲ್ಲಾ, ‘ಸೌತ್‍ವಾಲೇ’ ಎಂದು ಮನೆ ನೀಡಲು ನಿರಾಕರಿಸುವವರೇ. ನಾವು ನೋಡಿದ ಎಲ್ಲಾ ಕಾಲೋನಿಗಳಲ್ಲಿ ಶುದ್ಧ ಸಸ್ಯಹಾರಿಗಳಿಗೆ ಮಾತ್ರವೇ ಅವಕಾಶ. ಮಾಂಸಹಾರಿಗಳಿಗೆ ಮನೆಯನ್ನು ಬಾಡಿಗೆಗೂ ಕೊಡುತ್ತಿರಲಿಲ್ಲ. ನನ್ನ ಜತೆಗಿದ್ದವರು ಇಬ್ಬರೂ ಮಂಗಳೂರಿನ ಹಿಂದೂಗಳು, ಅವರು ಸಸ್ಯಹಾರಿಗಳು ಎಂದು ಹೇಳಿದ್ದನ್ನು ನಂಬಲು ಮನೆಮಾಲೀಕರು ತಯಾರಿದ್ದರು ಆದರೆ ನಾನು ಸಸ್ಯಹಾರಿ ಎನ್ನುವುದನ್ನು ಒಪ್ಪಲು ತಯಾರಿರಲಿಲ್ಲ! ಕೊನೆಗೂ ಮನೆ ಒಳಗೆ ನಾನ್ ವೆಜ್ ತರುವುದಿಲ್ಲ, ತಿನ್ನುವುದಿಲ್ಲ ಎಂದು ಒಬ್ಬರನ್ನು ನಂಬಿಸಿ ಮನೆ ಪಡೆದುಕೊಳ್ಳುವಷ್ಟರಲ್ಲಿ ನಾನು ‘ಭಾಸ್ಕರ್’ ಆಗಿದ್ದೆ. ಪುಣ್ಯಕ್ಕೆ ಮನೆ ಮಾಲಿಕ ನನ್ನ ಗುರುತುಪತ್ರ ಕೇಳಿರಲಿಲ್ಲ!

ಹೀಗೆ ‘ನಮ್ಮತನ’ವನ್ನು ಕಳೆದುಕೊಂಡು ಯಾರದ್ದೋ ಮರ್ಜಿಯಲ್ಲಿ ಗುಲಾಮರಂತೆ, ಕ್ಷಣಕ್ಷಣಕ್ಕೂ ‘ಯಾರಾದರೂ ನೋಡುತ್ತಾರೆ, ಯಾರಾದರೂ ಕೇಳಿಸಿಕೊಳ್ಳುತ್ತಾರೆ’ ಎಂದು ಹೆದರಿಕೊಂಡು ಬದುಕುವುದೂ, ಡಿಟೆನ್ಷನ್ ಕ್ಯಾಂಪ್ ಗಳಲ್ಲಿ ಬಂಧಿಯಾಗಿ ಕಾಲಕಳೆಯುವುದು ಎರಡೂ ಒಂದೇ ಅಲ್ಲವೇ? ಅವರನ್ನಾದರೂ ಬಂಧಿಗಳು ಎನ್ನಬಹುದು, ನಮ್ಮನ್ನು ಗುಲಾಮರೆಂದೇ ಕರೆಯಬೇಕಾಗುತ್ತಲ್ಲವೇ?  ಇದನ್ನು ಕ್ರೈಸ್ತ ಮುಖಂಡರು ಮೊದಲು ಅರ್ಥಮಾಡಿಕೊಳ್ಳಬೇಕು, ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಿ, ಪೌರತ್ವ ಕಾಯ್ದೆಯನ್ನು ಯಾಕೆ ವಿರೋಧಿಸಬೇಕು ಎಂಬುದನ್ನು ಜನರಿಗೆ ಮನದಟ್ಟು ಮಾಡಿಕೊಳ್ಳಬೇಕು. ಇವತ್ತು ಅದ್ಯಾರೋ ‘ಅಲ್ಲೇಲೂಯ’ ಎಂಬ ಶಬ್ಧವನ್ನು ಮೂದಲಿಸಿದರು ಎಂದು ಕ್ರೈಸ್ತರು ರೊಚ್ಚಿಗೆದ್ದು ಸಾಮಾಜಿಕ ಜಾಲತಾಣಗಳಲ್ಲಿ ಕ್ರಾಂತಿ ಮಾಡಲು ಹೊರಟಿದ್ದಾರೆ. ಆದರೆ ವಾಸ್ತವವಾಗಿ ನಾವು ವಿರೋಧಿಸಲೇಬೇಕಾದ ಪೌರತ್ವ ಕಾಯ್ದೆಯ ಕುರಿತು ದಿವ್ಯ ಮೌನ ತಾಳಿದ್ದಾರೆ. ನಮ್ಮ ಸಂವಿಧಾನ ಉಳಿದರಷ್ಟೇ ನಮ್ಮ ಧರ್ಮ ಮತ್ತು ಆಚರಣೆಗಳು. ಅದೇ ಇಲ್ಲವಾದರೆ? ಉತ್ತರ ಪ್ರದೇಶದ ಅಧಿಕೃತ ಭಾಷೆ ಹಿಂದಿಯಲ್ಲಿ ಹಾಡಿದ ಕ್ಯಾರಲ್ಸ್ ಗಳನ್ನು ‘ನಮ್ಮದಲ್ಲ’ ಎಂದು ನಿಷೇಧಿಸಿದವರಿಗೆ ಹಿಬ್ರೂ ಭಾಷೆಯ ‘ಅಲ್ಲೆಲೂಯ’ ಶಬ್ಧವನ್ನು ಎತ್ತಿ ಹೊರಗೆಸೆಯಲು ಜಾಸ್ತಿ ಸಮಯ ತಾಗದು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರದಲ್ಲಿ ಹಿಂಸಾಚಾರಕ್ಕೆ ಉತ್ತೇಜನ ನೀಡಿದ ಬಿಜೆಪಿ ಸಿಎಂ ಬಿರೇನ್ ಸಿಂಗ್: ಅಸ್ಸಾಂ ರೈಫಲ್ಸ್ ವರದಿ

0
ಮಣಿಪುರದಲ್ಲಿನ ಸಂಘರ್ಷಕ್ಕೆ ಸಂಬಂಧಿಸಿ ರಾಜ್ಯದಲ್ಲಿ ಅಸ್ಸಾಂ ರೈಫಲ್ಸ್‌ನ ಅಧಿಕಾರಿಗಳು ನಡೆಸಿದ ಮೌಲ್ಯಮಾಪನದಲ್ಲಿ ಸ್ಪೋಟಕ ಅಂಶಗಳನ್ನು ಉಲ್ಲೇಖಿಸಲಾಗಿದ್ದು, ಮಣಿಪುರದಲ್ಲಿನ ಸಂಘರ್ಷಕ್ಕೆ ಸಿಎಂ ಬಿರೇನ್ ಸಿಂಗ್ ಉತ್ತೇಜನ ಕಾರಣ ಎಂದು ಹೇಳಿದೆ. ಅಸ್ಸಾಂ ಸಿಎಂ ಬಿರೇನ್ ಸಿಂಗ್...