Homeಮುಖಪುಟನೆಲಕ್ಕುರುಳಿದ ಅಂಬೇಡ್ಕರ್ ಪ್ರತಿಮೆಯ ತಲೆ: ಈ ನೆಲದ ಹುನ್ನಾರಗಳ ಅನಾವರಣ..

ನೆಲಕ್ಕುರುಳಿದ ಅಂಬೇಡ್ಕರ್ ಪ್ರತಿಮೆಯ ತಲೆ: ಈ ನೆಲದ ಹುನ್ನಾರಗಳ ಅನಾವರಣ..

- Advertisement -
- Advertisement -

ಆಕ್ಟಿವಿಸ್ಟ್, ಸಿನೆಮಾ ನಿರ್ದೇಶಕಿ, ಪತ್ರಕರ್ತೆ, ಬರಹಗಾರ್ತಿಯಾದ ರೇವತಿ ಸುನಾಮಿ ಪೀಡಿತ ಪ್ರದೇಶದ ಪರಿಹಾರ ಕೆಲಸಕ್ಕೆ ನಾಗಪಟ್ಟಣಂಗೆ ಹೋದರು. ಪರಿಹಾರ ಕಾರ್ಯದಲ್ಲೂ ಸ್ಪೃಶ್ಯರು ಮತ್ತು ಅಸ್ಪೃಶ್ಯರ ನಡುವಿನ ತಾರತಮ್ಯ ಕಂಡು ರೋಸಿ ಹೋಗಿ ಸಿನೆಮಾ ಮಾಡಿದರು. ಅಷ್ಟಕ್ಕೇ ಸುಮ್ಮನಾಗದೇ, ಶೋಷಿತ ಸಮುದಾಯದ ಮಕ್ಕಳಿಗೆಂದು ‘ವಾನವಿಲ್ (ಕಾಮನಬಿಲ್ಲು)’ ಎಂಬ ಶಾಲೆಯನ್ನು ತೆರೆದರು. ಇಂದು ಆ ಮಕ್ಕಳಿಗೆ ವಿಶಿಷ್ಟ ಲೋಕಜ್ಞಾನವನ್ನು ಕಲಿಸುತ್ತಿರುವ ವಾನವಿಲ್ ರೇವತಿಯ ಕ್ರಿಯಾಶೀಲತೆಗೆ ಸಾಕ್ಷಿ. ಎಲ್ಲ ಜನಪರ ಆಂದೋಲನಗಳ ಒಡನಾಡಿ ರೇವತಿಗೆ ಜಾತಿ ದೌರ್ಜನ್ಯ ಬಹುವಾಗಿ ಕಾಡುವ ವಿಚಾರವಾದ್ದರಿಂದ ಅದರ ಸುತ್ತಲೇ ತಮ್ಮ ಲೇಖನವನ್ನು ಕೇಂದ್ರೀಕರಿಸಿದ್ದಾರೆ. ಈ ಲೇಖನವನ್ನು ಕನ್ನಡಕ್ಕೆ ರಾಜಶೇಖರ್ ಅಕ್ಕಿಯವರು ಅನುವಾದಿಸಿದ್ದಾರೆ

ಆಗಸ್ಟ್ 26ರಂದು ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ವೇದಾರಣ್ಯಮ್ ಎಂಬ ಊರಿನ ವೀಡಿಯೊ ಒಂದು ವೈರಲ್ ಆಗತೊಡಗಿತು. ಅಲ್ಲಿಯ ಪೊಲೀಸ್ ಸ್ಟೇಷನ್ ಎದುರಿಗಿರುವ ವೇದಾರಣ್ಯಮ್ ಬಸ್ ಸ್ಟ್ಯಾಂಡ್‍ನಲ್ಲಿ ಸ್ಥಾಪಿಸಲಾದ ಅಂಬೇಡ್ಕರ್ ಪ್ರತಿಮೆಯ ವೇದಿಕೆಗೆ ಒಬ್ಬ ಯುವಕ ಹತ್ತುವುದನ್ನು ಹಾಗೂ ಡಾ.ಅಂಬೇಡ್ಕರ್ ಅವರ ಸಿಮೆಂಟಿನ ಪ್ರತಿಮೆಯ ಶಿರಚ್ಛೇದ ಮಾಡಿದ್ದನ್ನು ಈ ವೀಡಿಯೊದಲ್ಲಿ ಕಾಣಬಹುದಾಗಿದೆ. ಅಲ್ಲಿ ಜನರ ಒಂದು ದೊಡ್ಡ ಗುಂಪು ಆ ವ್ಯಕ್ತಿಯನ್ನು ಕೇಕೆಹಾಕಿ ಹುರಿದುಂಬಿಸುವುದನ್ನೂ ಕಾಣಬಹುದು.

ಆ ವಿಡಿಯೋ ವೈರಲ್ ಆದ ನಂತರ ಎಲ್ಲೆಡೆಯಿಂದ ಖಂಡನೆಗಳು ಹರಿದುಬಂದವು. ವಿದುತಲೈ ಚಿರತೈಗಲ್ ಕಾಟ್ಚಿ, ತಮಿಳುನಾಡು ಅನ್‍ಟಚಬಿಲಿಟಿ ಇರ್ಯಾಡಿಕೇಷನ್ ಫ್ರಂಟ್ ಹಾಗೂ ಇತರ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆಗಳನ್ನು ಹಮ್ಮಿಕೊಂಡವು. ಅವರು ದುಷ್ಕರ್ಮಿಗಳನ್ನು ಗೂಂಡಾ ಕಾಯಿದೆಯ ಅಡಿಯಲ್ಲಿ ಬಂಧಿಸಬೇಕು ಎಂದು ಆಗ್ರಹಿಸಿದರು. ಘಟನೆಯಾದ ಎರಡು ದಿನಗಳವರೆಗೆ ವೇದಾರಣ್ಯಮ್ ಪಟ್ಟಣವನ್ನು ಪೊಲೀಸ್ ಕಣ್ಗಾವಲಿನಲ್ಲಿ ಇಡಲಾಗಿತ್ತು ಹಾಗೂ ಪೊಲೀಸರು 37 ಜನರನ್ನು ಬಂಧಿಸಿದರು.

ಅಂಬೇಡ್ಕರ್ ಪ್ರತಿಮೆಯನ್ನು ಧ್ವಂಸಗೊಳಿಸಲು ಒಂದು ಚಿಕ್ಕ ಘಟನೆಯು ಕಾರಣವಾಗಿದೆ ಎಂದು ವರದಿ ಮಾಡಲಾಗಿದೆ. ಒಂದು ಚಿಕ್ಕ ಅಪಘಾತವು ಒಂದು ಚಿಕ್ಕ ಹಿಂದೂ ಸಂಘಟನೆಯ ಒಬ್ಬ ನಾಯಕ ಮತ್ತು ರಾಮಕೃಷ್ಣಪುರಮ್‍ನ ಒಬ್ಬ ದಲಿತ ಯುವಕನ ನಡುವೆ ಜಗಳಕ್ಕೆ ಕಾರಣವಾಯಿತು. ಆದರೆ ಅಲ್ಲಿಯ ಸಾಮಾಜಿಕ ಕಾರ್ಯಕರ್ತರು ಹೇಳುವುದೇನೆಂದರೆ, ಈ ಹಿಂದೂ ಜಾತಿವಾದಿ ಸಂಘಟನೆಯು ಅಲ್ಲಿರುವ ಅಂಬೇಡ್ಕರ್ ಪ್ರತಿಮೆಯನ್ನು ತೆಗೆದುಹಾಕಬೇಕೆಂದು ಅನೇಕ ವರ್ಷಗಳಿಂದ ಪ್ರಯತ್ನಿಸುತ್ತಿದ್ದಾರೆ ಹಾಗೂ ಈ ವಿಷಯದಲ್ಲಿ ಕಾನೂನಾತ್ಮಕ ಮಾರ್ಗವನ್ನೂ ಅಳವಡಿಸಿ ವಿಫಲವಾಗಿದ್ದಾರೆ.

ಭಾರತ ಸಂವಿಧಾನದ ಪಿತಾಮಹನ ಪ್ರತಿಮೆಯನ್ನು ಅಲ್ಲಿಂದ ತೆಗೆಯಲು ಇವರು ನೀಡಿರುವ ಕಾರಣ, ಈ ಪ್ರತಿಮೆ ವರ್ಷಕ್ಕೊಂದು ಸಲ ಆಗುವ ದೇವಸ್ಥಾನದ ಮೆರವಣಿಗೆಗೆ ಅಡ್ಡಿಯಾಗುತ್ತದೆ ಎಂಬುದು. ಆದರೆ ಈ ಪ್ರತಿಮೆ ಅದೇ ಸ್ಥಳದಲ್ಲಿ ಅನೇಕ ದಶಕಗಳಿಂದ ಇದೆ ಹಾಗೂ ಇಲ್ಲಿಯವರೆಗೆ ಯಾವ ಮೆರವಣಿಗೆಗೂ ಅಡ್ಡಿಯಾಗಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ನ್ಯಾಯಾಲಯವು ಈ ಅರ್ಜಿಯನ್ನು ತಳ್ಳಿಹಾಕಿತು. ಹಾಗೂ ಈ ಜಾತಿಸಂಘಟನೆಯು ತಮಿಳುನಾಡಿನಲ್ಲಿ ಕಳೆದ ಕೆಲವು ವರ್ಷಗಳಿಂದ ಸಕ್ರಿಯವಾಗಿರುವ ತೀವ್ರಗಾಮಿ ಹಿಂದೂ ಸಂಘಟನೆಗಳಲ್ಲಿ ಒಂದಾಗಿದ್ದು, ಇವುಗಳು ತಮ್ಮ ಗುರಿ ಸಾಧಿಸಲು ಉದ್ವಿಗ್ನತೆಯನ್ನು ಸೃಷ್ಟಿಸುವ ಪರ್ಯಾಯ ದಾರಿಯನ್ನು ಹಿಡಿದಿವೆ.

ಈ ಹಿನ್ನೆಲೆಯಲ್ಲಿ ದಾಳಿ ಮಾಡಿದ ಸಮಯದಲ್ಲಿ ಆದ ಒಂದು ಸಾಮಾನ್ಯ ಜಗಳವನ್ನು ಒಂದು ದೊಡ್ಡ ಘಟನೆಯನ್ನಾಗಿ ಬಿಂಬಿಸಲಾಗಿದೆ. ಆ ಘಟನೆಯಿಂದ ಸಿಟ್ಟಿಗೆದ್ದ ಆ ಗ್ರಾಮದ ದಲಿತರು ಹಿಂದೂ ಜಾತಿವಾದಿ ನಾಯಕ ಪಾಂಡಿಯಾನ್‍ನ ವಾಹನಕ್ಕೆ ಬೆಂಕಿ ಹಚ್ಚಿದರು ಹಾಗೂ ಇದೇ ಕಾರಣವನ್ನಿಟ್ಟುಕೊಂಡು ಆ ಜಾತಿಸಂಘಟನೆಯ ಜನರು ಅಂಬೇಡ್ಕರ್ ಪ್ರತಿಮೆಯನ್ನು ಧ್ವಂಸಗೊಳಿಸಿದರು.

ಪರಿಸ್ಥಿತಿ ಇನ್ನಷ್ಟು ಉದ್ವಿಗ್ನಗೊಳ್ಳಬಹುದು ಎನ್ನುವ ಆತಂಕದಿಂದ ಹಾಗೂ ಖಂಡನೆಯ ಗಟ್ಟಿ ಧ್ವನಿ ಎತ್ತಿದ ವಿರೋಧಪಕ್ಷವನ್ನು ತಣಿಸುವ ಪ್ರಯತ್ನದಲ್ಲಿ ತಮಿಳುನಾಡು ಸರಕಾರವು ಹೊಸದೊಂದು ಪ್ರತಿಮೆಯನ್ನು ರಾತ್ರೋರಾತ್ರಿ ತಂದು ಪ್ರತಿಷ್ಠಾಪನೆ ಮಾಡಿದರು. ಜೊತೆಗೆ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಯಿತು.

ಆದರೆ ಸೆಪ್ಟೆಂಬರ್ 19 ರಂದು ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿತು. ಅಂದು ತಮಿಳುನಾಡು ಪೊಲೀಸರು 11 ಜನರ ವಿರುದ್ಧ ಗೂಂಡಾ ಕಾಯಿದೆಯನ್ನು ಹಾಕಿದರು; ಆ 11 ಜನರಲ್ಲಿ 6 ಜನರು ದಲಿತರಾಗಿದ್ದರು.

“ಡಾ. ಅಂಬೇಡ್ಕರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸುವ ಮತ್ತು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ತತ್ವಗಳನ್ನು ಮತ್ತು ದಲಿತರನ್ನು ದಾಳಿ ಮಾಡಲು ಪ್ರಯತ್ನಿಸುತ್ತಿರುವ ಜಾತಿವಾದಿ ಹಿಂದೂ ಶಕ್ತಿಗಳಿಗೆ ಒಂದು ಬಲವಾದ ಸಂದೇಶ ನೀಡುವ ಬದಲಿಗೆ, ಈ ಘಟನೆಯಲ್ಲಿ ದಲಿತರ ಮೇಲೆ ದೋಷಾರೋಪ ಹೊರಿಸುವ ಮೂಲಕ ತಮಿಳುನಾಡು ಸರಕಾರವು ತನ್ನ ಜಾತಿವಾದಿ ಮನಸ್ಥಿತಿಯನ್ನು ಸ್ಪಷ್ಟವಾಗಿ ಪ್ರದರ್ಶಿಸಿದೆ” ಎಂದು ಟಿಎನ್‍ಯುಎಎಫ್‍ನ ಸಾಮ್ಯುವೆಲ್ ರಾಜ್ ಹೇಳಿದ್ದಾರೆ.

ಇದೇ ಅಂಶವನ್ನು ಹೇಳುತ್ತ ವೇದಾರಣ್ಯಮ್‍ನ ಸಾಮಾಜಿಕ ಕಾರ್ಯಕರ್ತ ಬಿರ್ಲಾ ತಂಗದುರೈ ಅವರು “ಸುಮಾರು 500 ಜನರ ದೊಡ್ಡ ಗುಂಪು ಪ್ರತಿಮೆಯನ್ನು ಉರುಳಿಸುವುದನ್ನು ಒಂದು ಸಾರ್ವಜನಿಕ ಉನ್ಮಾದದ ಸಮಾರಂಭದಂತೆ ಆಯೋಜಿಸಿತ್ತು, ಆದರೆ ಆ ವಿಡಿಯೋದಲ್ಲಿ ಅನೇಕರನ್ನು ಸ್ಪಷ್ಟವಾಗಿ ಗುರುತಿಸಬಹುದಾದರೂ ಪೊಲೀಸರು ಆ ಕಡೆಯಿಂದ ಹೆಚ್ಚು ಜನರನ್ನು ಬಂಧಿಸಿಲ್ಲ. ಅದರ ಬದಲಿಗೆ ರಾಮಕೃಷ್ಣಪುರಂನ ನಿರಪರಾಧಿ ಕಟ್ಟಡ ಕಾರ್ಮಿಕರನ್ನು ತಡರಾತ್ರಿ ಬಂಧಿಸಲಾಗಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸುವುದು ಸಾರ್ವಜನಿಕ ಆಸ್ತಿಯನ್ನು ನಾಶಪಡಿಸುವ ಮತ್ತು ಕೋಮು ಉದ್ವಿಗ್ನತೆಯನ್ನು ಸೃಷ್ಟಿಸುವ ಅಪರಾಧವಾಗಿದೆ. ಆದರೆ, ಈ ಸೆಕ್ಷನ್‍ಗಳ ಅಡಿಯಲ್ಲಿ ದಲಿತರನ್ನು ಏಕೆ ಬಂಧಿಸಲಾಗುತ್ತಿದೆ? ಒಂದು ಖಾಸಗಿ ವಾಹನವನ್ನು ಒಡೆದುಹಾಕಿದ್ದಷ್ಟೆ ಅವರು ಮಾಡಿದ್ದು” ಎಂದು ವಾದಿಸಿದರು.

ರಾತ್ರೋರಾತ್ರಿ ಪ್ರತಿಮೆಯನ್ನು ಸ್ಥಾಪಿಸಿ, ಒಂದೆಡೆ ಜಾತಿವಾದಿ ಹಿಂದೂ ಸಂಘಟನೆಯ ನಾಯಕನ್ನು ಬಂಧಿಸಿ ಇನ್ನೊಂದೆಡೆ ಅದಕ್ಕಿಂತ ಹೆಚ್ಚು ಸಂಖ್ಯೆಯ ದಲಿತರನ್ನು ಬಂಧಿಸಿ, ಅವರ ಮೇಲೆ ಗೂಂಡಾ ಕಾಯಿದೆಯನ್ನು ಹೊರಿಸಿರುವುದು ತಮಿಳುನಾಡು ಸರಕಾರದ ಒಂದು ಪ್ರವೃತ್ತಿಯನ್ನು ತೋರಿಸುತ್ತದೆ. ಅವಶ್ಯಕತೆ ಇದ್ದಾಗ ಅಂಬೇಡ್ಕರ್ ಅವರ ಪ್ರಶಂಸೆ ಮಾಡುವುದು ಹಾಗೂ ಅದೇ ಸಮಯದಲ್ಲಿ ಜಾತಿವಾದಿ ಹಿಂದೂ ಸಂಘಟನೆಗಳಿಗೆ ಅಭಯಹಸ್ತ ನೀಡುವುದೇ ಈ ಸರಕಾರದ ನಿಲುವಾಗಿದೆ.

ದ್ರಾವಿಡ ಚಳವಳಿಯ ತವರೂ, ಇಂದು ಕೇಂದ್ರದ ಬಿಜೆಪಿ ಸರ್ಕಾರಕ್ಕೆ ದೊಡ್ಡ ತಡೆಯೆಂದೂ ಭಾವಿಸಲಾದ ತಮಿಳುನಾಡಿನಲ್ಲಿ ಈ ಪರಿಸ್ಥಿತಿ ಇದೆ. ಕೋಮುವಾದವು ಹುಲುಸಾಗಿ ಬೆಳೆಯಲು ಜಾತಿವ್ಯವಸ್ಥೆಯು ತಳಹದಿಯಾಗಿರುವುದೇ ನಿಜವಾದಲ್ಲಿ ತಮಿಳುನಾಡು ‘ಅಭೇದ್ಯ ಕೋಟೆ’ಯಾಗಿ ಉಳಿಯುವುದೇ? ದಲಿತರ ಮೇಲೆ ದೌರ್ಜನ್ಯವೆಸಗುವಲ್ಲಿ ಎಲ್ಲಾ ಪಕ್ಷಗಳೂ ಶಾಮೀಲಾಗುತ್ತವೆ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿರುವಾಗ ಪ್ರಜಾತಂತ್ರವಾದಿಗಳ ಮುಂದೆ ಇರುವ ದಾರಿಯೇನು? ಇವು ಎಲ್ಲರೂ ಯೋಚಿಸಬೇಕಾದ ಪ್ರಶ್ನೆಗಳಾಗಿವೆ.
ದೇಶಾದ್ಯಂತ ವೈರಲ್ ಆದ ವಿಡಿಯೋ ಹಿಂದೆ ಒಂದು ‘ನಿರ್ಜೀವ’ ಪ್ರತಿಮೆ ಧ್ವಂಸವಾಗಿದ್ದಷ್ಟೇ ಅಲ್ಲ ಎಂಬುದನ್ನು ತಿಳಿಸಲು ಇಷ್ಟೆಲ್ಲಾ ವಿವರಗಳನ್ನು ಒದಗಿಸಬೇಕಾಯಿತು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...