Homeಅಂತರಾಷ್ಟ್ರೀಯಮಹಿಳೆಯರು ವೇಶ್ಯೆರಾಗಬೇಕೆಂದು ಕಾರ್ಲ್ ಮಾರ್ಕ್ಸ್ ಎಲ್ಲಿಯೂ ಹೇಳಿಲ್ಲ : ಹಾಗಾದರೆ ಗುರುಮೂರ್ತಿಯವರು ಸುಳ್ಳು ಹೇಳಿದ್ದೇಕೆ?? -...

ಮಹಿಳೆಯರು ವೇಶ್ಯೆರಾಗಬೇಕೆಂದು ಕಾರ್ಲ್ ಮಾರ್ಕ್ಸ್ ಎಲ್ಲಿಯೂ ಹೇಳಿಲ್ಲ : ಹಾಗಾದರೆ ಗುರುಮೂರ್ತಿಯವರು ಸುಳ್ಳು ಹೇಳಿದ್ದೇಕೆ?? – ಹರ್ಷ ಕುಮಾರ್‌ ಕುಗ್ವೆ

ವೇಶ್ಯಾವಾಟಿಕೆಯನ್ನು ಬಂಡವಾಳಶಾಹಿ ಶೋಷಣೆಯ ಭಾಗ ಎಂದು ಪರಿಗಣಿಸುವ ಮಾರ್ಕ್ಸ್‌ವಾದಿಗಳು ಸಮಾಜದಲ್ಲಿ ವೇಶ್ಯಾವಾಟಿಕೆ ಇರಬಾರದು ಎಂಬ ನಿಲುವು ತಳೆದಿದ್ದಾರೆ. ಅದರಂತೆ ತಮ್ಮ ತಮ್ಮ ಸರ್ಕಾರಗಳಲ್ಲಿ ಕಾನೂನುಗಳನ್ನು ಜಾರಿಗೊಳಿಸಿದ್ದಾರೆ.

- Advertisement -
- Advertisement -

ಗುರುಮೂರ್ತಿ ಎಂಬ ಸೊಕಾಲ್ಡ್ ಆರ್ಥಿಕ ತಜ್ಞ ಕಾರ್ಲ್ ಮಾರ್ಕ್ಸ್ ಬಗ್ಗೆ ನೀಡಿರುವ ಅವಹೇಳನಕಾರಿ ಹೇಳಿಕೆಯೊಂದು ಇಂದಿನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಒಂದು ಸಿದ್ಧಾಂತವನ್ನು ಸೈದ್ಧಾಂತಿಕವಾಗಿ ಎದುರಿಸುವ ತಾಕತ್ತಿಲ್ಲದೇ ಹೋದಾಗ ಆ ಸಿದ್ಧಾಂತದ ಬಗ್ಗೆ ಸುಳ್ಳು ಪ್ರಚಾರ ನಡೆಸುವುದು, ಇಲ್ಲದ್ದನ್ನು ಸೃಷ್ಟಿಸಿ ಹೇಳುವುದು ಮತ್ತು ಇರುವುದನ್ನು ತಿರುಚಿ ಹೇಳುವುದು ಇವು ಪ್ರತಿಗಾಮಿ ಶಕ್ತಿಗಳು ಚರಿತ್ರೆಯುದ್ಧಕ್ಕೂ ನಡೆಸಿಕೊಂಡು ಬಂದಿರುವ ಹುನ್ನಾರಗಳು. ಈಗ ಗುರುಮೂರ್ತಿಯ ಹೇಳಿಕೆಯೂ ಅಂತಹುದೇ ಒಂದು ಹುನ್ನಾರದ ಭಾಗವಾಗಿ ಬಂದಿದೆ.

ಗುರುಮೂರ್ತಿ

ಎಲ್ಲ ಮಹಿಳೆಯರೂ ವೇಶ್ಯೆಯರಾಗಬೇಕು ಎಂದು ಕಾರ್ಲ್ ಮಾರ್ಕ್ಸ್ ಹೇಳಿದ್ದಾನೆ. ಇದನ್ನೇ ಜೆ.ಎನ್.ಯುನಂತಹ ವಿಶ್ವವಿದ್ಯಾಲಯಗಳಲ್ಲಿ ಪಾಲಿಸಲಾಗುತ್ತಿದೆ ಎಂಬುದು ಗುರುಮೂರ್ತಿಯ ಮಾತಿನ ಸಾರಾಂಶವಾಗಿದೆ. ಹೀಗೆ ಹೇಳುವ ಮೂಲಕ ಕಮ್ಯುನಿಷ್ಟ್ ತತ್ವಶಾಸ್ತ್ರದ ರೂವಾರಿ ಕಾರ್ಲ್ ಮಾರ್ಕ್ಸ್, ಅಂತರರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಮತ್ತು ಬದುಕಿಗಾಗಿ ಮೈಮಾರಿಕೊಂಡು ಜೀವಿಸುವ ವೇಶ್ಯೆಯರು- ಈ ಎಲ್ಲರನ್ನೂ ಈತ ಅಪಮಾನಿಸಿದ್ದಾನೆ ಹಾಗೂ ಈ ಮೂವರ ಮೇಲೆಯೂ ಕೆಟ್ಟ ಅಭಿಪ್ರಾಯ ಹುಟ್ಟಿಸುವುದು ಈತನ ದುರುದ್ದೇಶವಾಗಿದೆ.

ಹರ್ಷ ಕುಮಾರ್‌ ಕುಗ್ವೆ

ಮೊದಲನೆಯದಾಗಿ ಕಾರ್ಲ್ ಮಾರ್ಕ್ಸ್ ಎಂದಾದರೂ ಎಲ್ಲಿಯಾದರೂ ಸಮಾಜದಲ್ಲಿ ಎಲ್ಲಾ ಮಹಿಳೆಯರು ವೇಶ್ಯೆಯರಾಗಬೇಕು ಎಂದಾಗಲೀ, ಆ ಅರ್ಥ ಬರುವಂತೆ ಹೇಳಿದ್ದಾನೆಯೇ ಎಂದು ನೋಡಿದರೆ ಎಲ್ಲಿಯೂ ಅಂತಹ ಹೇಳಿಕೆ ಸಿಗುವುದಿಲ್ಲ. ಕಾರ್ಲ್ ಮಾರ್ಕ್ಸ್ ಬರೆದಿರುವ ಎಲ್ಲಾ ಬರೆಹಗಳು ಇಂದು ಅಂತರ್ಜಾಲದಲ್ಲಿ ಲಭ್ಯವಿವೆ. ನೀವು ಸಿಂಪಲ್ಲಾಗಿ ಗೂಗಲ್ ಸರ್ಚ್ ಮಾಡಿದರೂ ಸಹ ಕಾರ್ಲ್ ಮಾರ್ಕ್ಸ್ ಯಾವ ವಿಷಯದ ಬಗ್ಗೆ ಏನು ಹೇಳಿದ್ದಾರೆ ಎನ್ನುವುದು ತಿಳಿದುಬಿಡುತ್ತದೆ. ಅಸಲೀ ಸಂಗತಿ ಏನೆಂದರೆ ಸಮಾಜದಲ್ಲಿ ವೇಶ್ಯಾವಾಟಿಕೆ ಇರಬೇಕು ಎಂಬುದನ್ನೂ ಸಹ ಕಾರ್ಲ್ ಮಾರ್ಕ್ಸ್ ಒಪ್ಪಿದವರಲ್ಲ. ಆದರೆ ವೇಶ್ಯಾವಾಟಿಕೆ ಕುರಿತು ಕಾರ್ಲ್ ಮಾರ್ಕ್ಸ್ ಮಾತಾಡಿದ್ದಾರೆ. ಬಂಡವಾಳಶಾಹಿ ವ್ಯವಸ್ಥೆಯ ಕುರಿತ ತನ್ನ ಬಿಡಿನೋಟಗಳಲ್ಲಿ ವೇಶ್ಯಾವಾಟಿಕೆಯನ್ನು ಮಾರ್ಕ್ಸ್ ಹೇಗೆ ಗ್ರಹಿಸಿದ್ದಾರೆ ಎಂದು ತಿಳಿಯಬಹುದಾಗಿದೆ.

ಕಾರ್ಲ್ ಮಾರ್ಕ್ಸ್ ದೃಷ್ಟಿಯಲ್ಲಿ ವೇಶ್ಯಾವಾಟಿಕೆ
ಮಾನವ ಸಮಾಜವನ್ನು ವರ್ಗಗಳಾಗಿ ವಿಂಗಡಿಸುವ ಕಾರ್ಲ್ ಮಾರ್ಕ್ಸ್ ವೇಶ್ಯಾವಾಟಿಕೆ ನಡೆಸುವ ಹೆಣ್ಣುಮಕ್ಕಳನ್ನು ಲುಂಪೆನ್ ಪ್ರೊಲೆಟರಿಯಟ್ ಎಂಬ ವರ್ಗದಲ್ಲಿ ಸೇರಿಸುತ್ತಾನೆ. ಸಮಾಜದಲ್ಲಿ ಇದೊಂದು ನಕಾರಾತ್ಮಕ ವರ್ಗವಾಗಿ ಕೆಲಸ ಮಾಡುತ್ತದೆ ಎನ್ನುವ ಮಾರ್ಕ್ಸ್ ವೇಶ್ಯಾವಾಟಿಕೆ ಸಮಾಜದಲ್ಲಿ ಹುಟ್ಟಲು ಇರುವ ಕಾರಣಗಳನ್ನು ಶೋಧಿಸುತ್ತಾ ವೇಶ್ಯಾವಾಟಿಕೆ ಎಂಬುದು ಬಂಡವಾಳಶಾಹಿ ನಡೆಸುವ ಶೋಷಣೆಯ ಅಭಿವ್ಯಕ್ತಿಯಾಗಿದೆ ಎನ್ನುತ್ತಾರೆ.

ಕಾರ್ಲ್‌ ಮಾರ್ಕ್ಸ್

Economic and Philosophic Manuscripts of 1844 ಎಂಬ ಕೃತಿಯಲ್ಲಿ ಮಾರ್ಕ್ಸ್ ಹೇಳುವ ಮಾತು ಹೀಗಿದೆ. sex work is “only a specific expression of the general prostitution of the laborer”. ಕಾರ್ಲ್ ಮಾರ್ಕ್ಸ್‌ರೊಂದಿಗೆ ಸೇರಿಕೊಂಡು ಕಮ್ಯುನಿಷ್ಟ್ ಚಿಂತನೆಯನ್ನು ಕಟ್ಟಿದ ಫ್ರೆಡೆರಿಕ್ ಎಂಗೆಲ್ಸ್ ಸಮಾಜದಲ್ಲಿ ವೇಶ್ಯಾವಟಿಕೆಯ ಪಾತ್ರದ ಕುರಿತು ಹೇಳುತ್ತಾ “It dehumanized both the women who sold themselves and the men who hired them” ಎನ್ನುತ್ತಾರೆ. ತನ್ನ ಪ್ರಸಿದ್ಧ ಕೃತಿಯಾದ The Origin of the Family, Private Property, and the State ನಲ್ಲಿ ಎಂಗೆಲ್ಸ್, “marriage of convenience turns often enough into a marriage of prostitution—sometimes for both partners but far more commonly for the woman.” ಎನ್ನುತ್ತಾರೆ. ಮತ್ತೊಬ್ಬ ಮಾರ್ಕ್ಸ್ ವಾದಿ ಚಿಂತಕ ರಷಿಯಾ ಕ್ರಾಂತಿಯ ಹರಿಕಾರನಾದ ಲೆನಿನ್ ಮನುಷ್ಯನಲ್ಲಿ ಇರುವ ಲೈಂಗಿಕ ಆಕಾಂಕ್ಷೆಯನ್ನು ಗುರುತಿಸುತ್ತಾರಾದರೂ ಲೈಂಗಿಕ ಸಂಸ್ಥೆಯಾಗಿ ವೇಶ್ಯಾವಾಟಿಕೆ ಕೆಟ್ಟ ಅಭಿರುಚಿಯುಳ್ಳದ್ದು ಎನ್ನುತ್ತಾರೆ. ವಾಸ್ತವ ಹೀಗಿರುವಾಗ ಕಾರ್ಲ್ ಮಾರ್ಕ್ಸ್ ಆಗಲೀ ಅವರ ಒಡನಾಡಿಗಳಾಗಲೀ ಮಹಿಳೆಯರೆಲ್ಲಾ ವೇಶ್ಯಾವಾಟಿಕೆ ನಡೆಸಬೇಕು ಎಂದು ಹೇಳಿರಲು ಹೇಗೆ ಸಾಧ್ಯ?

ಫೆಡ್ರಿಕ್‌ ಏಂಗೆಲ್ಸ್‌

ಕಾರ್ಲ್ ಮಾರ್ಕ್ಸ್‌ರ ನಂತರದಲ್ಲಿ ಮಾರ್ಕ್ಸ್ ವಾದವನ್ನು ತಳಹದಿಯಾಗಿಸಿಕೊಂಡು ಕ್ರಾಂತಿಗಳನ್ನು ನಡೆಸಿ, ಕಮ್ಯುನಿಷ್ಟ್ ಪಕ್ಷದ ಸರ್ಕಾರ ರಚಿಸಿದ ಕಡೆಗಳಲ್ಲೆಲ್ಲಾ ವೇಶ್ಯಾವಾಟಿಕೆಯನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದನ್ನು ನೋಡಬಹುದು. ರಷ್ಯಾದಲ್ಲಿ 1917ರಲ್ಲಿ ಅಕ್ಟೋಬರ್ ಕ್ರಾಂತಿ ಆದ ನಂತರದಲ್ಲಿ ವೇಶ್ಯಾವಾಟಿಕೆಯ ಕೇಂದ್ರಗಳನ್ನು ಬಂದ್ ಮಾಡಲಾಯಿತು. ಮಾವೋನ ನೇತೃತ್ವದಲ್ಲಿ ಚೀನಾದಲ್ಲಿ 1949ರಲ್ಲಿ ಕ್ರಾಂತಿ ನಡೆದ ಒಂದೇ ತಿಂಗಳಲ್ಲಿ ದೇಶದಾದ್ಯಂತ ವೇಶ್ಯಾವಾಟಿಕೆಯನ್ನು ನಿಷೇಧಿಸಲಾಯಿತಲ್ಲದೇ ವೇಶ್ಯಾವಾಟಿಕೆ ಮೂಲಕ ಜೀವನ ನಡೆಸುತ್ತಿದ್ದ ಎಲ್ಲಾ ಮಹಿಳೆಯರಿಗೆ ಇತರೆ ಉದ್ಯೋಗಗಳನ್ನು ನೀಡಲಾಯಿತು. ರಾಜಧಾನಿ ಬೀಜಿಂಗ್ ಒಂದೇ ಕಡೆ ಸುಮಾರು 250 ವೇಶ್ಯಾವಾಟಿಕೆ ಕೇಂದ್ರಗಳನ್ನು ಬಂದ್ ಮಾಡಲಾಗಿತ್ತು. ಇಡೀ ದೇಶದಲ್ಲಿ ವೇಶ್ಯಾವಾಟಿಕೆಯ ನಿಷೇಧವನ್ನು 1960ರ ಸುಮಾರಿಗೆ ಸಾಧಿಸಲಾಯಿತು ಎಂದು ಚೀನಾದ ಪೀಪಲ್ಸ್ ಡೈಲಿ ವರದಿ ಮಾಡಿತ್ತು. ಇದರ ಪ್ರಯುಕ್ತ 1964ರಲ್ಲಿ ದೇಶದ ನಾನಾ ಕಡೆಗಳಲ್ಲಿ ಇದ್ದ ಲೈಂಗಿಕ ಖಾಯಿಲೆಯ ಕೇಂದ್ರಗಳನ್ನು ಮುಚ್ಚಲಾಗಿತ್ತು. ಇದೇ ರೀತಿ ಅಲ್ಬೇನಿಯಾದ ಕಮ್ಯುನಿಷ್ಟ್ ನಾಯಕ ಎನ್ವರ್ ಹೋಝಾ ಆ ದೇಶದ ಪ್ರಧಾನಿಯಾದಾಗ ಇಡೀ ದೇಶದಲ್ಲಿ ವೇಶ್ಯಾವಾಟಿಕೆ ನಿಷೇಧಿಸಿದ, ಮತ್ತೊಂದು ಕಮ್ಯುನಿಷ್ಟ್ ಸರ್ಕಾರವಾದ ಕ್ಯೂಬಾ ಸರ್ಕಾರ ಕೂಡಾ ದೇಶದಲ್ಲಿ ವೇಶ್ಯಾವಾಟಿಕೆಯನ್ನು ನಿಷೇಧಿಸಿತ್ತು.

ಮಾವೋತ್ಸೆ ತುಂಗ್‌

ಇಲ್ಲಿ ನಮಗೆ ತಿಳಿದು ಬರುವ ಸಂಗತಿ ಏನೆಂದರೆ ವೇಶ್ಯಾವಾಟಿಕೆಯನ್ನು ಬಂಡವಾಳಶಾಹಿ ಶೋಷಣೆಯ ಭಾಗ ಎಂದು ಪರಿಗಣಿಸುವ ಮಾರ್ಕ್ಸ್‌ವಾದಿಗಳು ಸಮಾಜದಲ್ಲಿ ವೇಶ್ಯಾವಾಟಿಕೆ ಇರಬಾರದು ಎಂಬ ನಿಲುವು ತಳೆದಿದ್ದಾರೆ. ಅದರಂತೆ ತಮ್ಮ ತಮ್ಮ ಸರ್ಕಾರಗಳಲ್ಲಿ ಕಾನೂನುಗಳನ್ನು ಜಾರಿಗೊಳಿಸಿದ್ದಾರೆ. ಆದರೆ ಈ ಎಲ್ಲಾ ದೇಶಗಳಲ್ಲಿ ಬಂಡವಾಳಶಾಹಿಗಳ ಪ್ರಾಬಲ್ಯ ಮತ್ತೆ ಹೆಚ್ಚಾದಂತೆ ವೇಶ್ಯಾವಾಟಿಕೆಯೂ ಮತ್ತೆ ಚಾಲ್ತಿಗೆ ಬಂದಿದೆ ಎಂಬುದನ್ನು ಸಹ ನೋಡಬಹುದು.

ವಸ್ತುಸ್ಥಿತಿ ಹೀಗಿದ್ದರೂ ಸಹ ಕಾರ್ಲ್ ಮಾರ್ಕ್ಸ್ ಕುರಿತು ಬೇಕೆಂದೇ ತಪ್ಪು ತಿಳುವಳಿಕೆ ಬಿತ್ತುವುದು ವೈದಿಕಶಾಹಿಗಳ ಒಂದು ಹುನ್ನಾರ ಎಂದು ಅರ್ಥಮಾಡಿಕೊಳ್ಳಲು ಕಷ್ಟವಾಗುವುದಿಲ್ಲ.

ಇಂದು ಜೆ ಎನ್ ಯು ನಲ್ಲಿ ಕಲಿಯುತ್ತಿರುವ ದೇಶದ ನಾನಾ ಭಾಗಗಳ ಬಡ ವಿದ್ಯಾರ್ಥಿಗಳು ಮೋದಿ ಸರ್ಕಾರದ ವಿದ್ಯಾರ್ಥಿ ವಿರೋಧಿ ನೀತಿಯ ವಿರುದ್ಧ ಬೀದಿಗಿಳಿದು ಹೋರಾಡುತ್ತಿದ್ದಂತೆ ಅವರ ನ್ಯಾಯಯುತ ಹೋರಾಟವನ್ನು ದೇಶದ ಜನರ ಎದುರು ಕೆಟ್ಟದಾಗಿ ಬಿಂಬಿಸುವ ಪ್ರಯತ್ನ ಸಹ ಗುರುಮೂರ್ತಿಯ ಹೇಳಿಕೆಯಲ್ಲಿದೆ. ಇತ್ತೀಚೆಗೆ ಹೆಣ್ಣುಮಗಳೊಬ್ಬಳ ತುರುಬಿಗೆ ಕಾಂಡೋಮ್ ಕಟ್ಟಿದ್ದ ಫೋಟೋ ಒಂದನ್ನು ಇದು ಜೆ ಎನ್ ಯು ವಿದ್ಯಾರ್ಥಿನಿಯ ಫೋಟೋ ಎಂದು ವೈರಲ್ ಮಾಡಿದ್ದ ಕೊಳಕು ಮನಸ್ಸಿನ ಚೆಡ್ಡಿ ಪಡೆಗೆ ಬೂಸ್ಟ್ ಕೊಡಲು ಈ ಕೊಳಕು ಮನಸಿನ ವೈದಿಕ ಶಿಖಾಮಣಿ ಗುರುಮೂರ್ತಿ ಇಂತಹ ಹೇಳಿಕೆ ನೀಡಿದ್ದಾನೆ ಎಂಬುದು ಸಹ ತಿಳಿಯುವಂತದ್ದು.

ಜೆ ಎನ್ ಯು ಎಂದರೆ ದೇಶದ ನಾನಾ ಭಾಗಗಳಿಂದ ಬರುವ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ತಮ್ಮ ತಂದೆ ತಾಯಿಗಳೂ ಸೇರಿದಂತೆ ದೇಶದ ಜನರು ನೀಡುವ ತೆರಿಗೆ ಹಣದಲ್ಲಿ ಅತ್ಯುತ್ತಮ ಶಿಕ್ಷಣ ಪಡೆಯುತ್ತಿದ್ದಾರೆ. ಅವರಲ್ಲಿ ಎಷ್ಟೋ ಜನ ಜನ ಮೆಚ್ಚುವ, ದೇಶ ಮೆಚ್ಚುವ ವಿದ್ವಾಂಸರಾಗಿ, ರಾಜಕೀಯ ಚಿಂತಕರಾಗಿ, ನೇತಾರರಾಗಿ ಹೊರಬರುತ್ತಿದ್ದಾರೆ. ಬಡ, ದಲಿತ, ಹಿಂದುಳಿದ ಸಮುದಾಯಗಳಲ್ಲಿ ಇಂತಹ ಒಂದು ಶಕ್ತಿ ಬೆಳೆಯುವುದನ್ನೇ ಸಹಿಸದ ವೈದಿಕ ಶಕ್ತಿಗಳು ಜೆ ಎನ್ ಯು ಎಂದರೆ ಲೈಂಗಿಕತೆ ಎಂದು ಜನರಲ್ಲಿ ಬಿಂಬಿಸಲು ಪ್ರಯತ್ನ ನಡೆಸಿವೆ. ಈ ಹಿಂದೆ ಬಿಜೆಪಿ ಶಾಸಕನೊಬ್ಬ ಜೆ ಎನ್ ಯು ಆವರಣದಲ್ಲಿ ಸಿಗುವ ಕಾಂಡೋಮ್ ಗಳನ್ನು ಲೆಕ್ಕ ಮಾಡುವ ಕೆಲಸ ಮಾಡುತ್ತಿದ್ದ ವಿಷಯವನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಇನ್ನು ವೇಶ್ಯೆಯರು ಅಂದರೆ ಅವರನ್ನು ಬಂಡವಾಳಶಾಹಿ ವ್ಯವಸ್ಥೆಯ ಶೋಷಣೆಯಲ್ಲಿ ಸಿಲುಕಿದವರಾಗಿ ಕಾರ್ಲ್ ಮಾರ್ಕ್ಸ್ ನೋಡಿದ್ದನ್ನು ಮೇಲೆಯೇ ನೋಡಿದ್ದೇವೆ. ಯಾರಿಗಾದರೂ ವೇಶ್ಯಾವಾಟಿಕೆ ಎಂದರೆ ಏನು, ವೇಶ್ಯೆಯರು ಬದುಕು ಹೇಗಿರಬಹುದು ಎಂಬ ಕುತೂಹಲವಿದ್ದರೆ ಇತ್ತೀಚೆಗಷ್ಟೇ ಕನ್ನಡಕ್ಕೆ ಬಂದಿರುವ “ಬರ್ತೀಯಾ …ಎಷ್ಟು? ಭಾರತೀಯ ಸೂಳೆಲೋಕದ ಕತೆಗಳು” ಎಂಬ ಕಥಾ ಸಂಕಲನವನ್ನು ದಯವಿಟ್ಟು ಓದಿ. ರುಚಿರಾ ಗುಪ್ತಾ ಎಂಬ ಸ್ತ್ರೀವಾದಿ ಚಿಂತಕಿ ಇದನ್ನು ಸಂಪಾದಿಸಿದ್ದಾರೆ, ಕನ್ನಡದ ಮತ್ತೊಬ್ಬ ಸ್ತ್ರೀವಾದಿ ಲೇಖಕಿ ಸುಕನ್ಯಾ ಕನಾರಳ್ಳಿ ಅದ್ಭುತವಾಗಿ ಇದನ್ನು ಅನುವಾದಿಸಿದ್ದಾರೆ. ಇದರಲ್ಲಿರುವ ಕತೆಗಳು ವೇಶ್ಯಾವಾಟಿಕೆ ಬಗ್ಗೆ ಭ್ರಮಾಭಿಪ್ರಾಯಗಳನ್ನು ಹೊಂದಿರುವ ಯಾರಾದರಿದ್ದರೆ ಅಂತವರ ಭ್ರಮೆ ಕಳಚುತ್ತವಲ್ಲದೇ ವೇಶ್ಯಾವಾಟಿಕೆ ಕುರಿತ ಕಾರ್ಲ್ ಮಾರ್ಕ್ಸ್ ಗ್ರಹಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ.

ಇನ್ನು ಭಾರತದಲ್ಲಿ ವೇಶ್ಯಾವಾಟಿಕೆ ಹೇಗೆಲ್ಲಾ ಬೆಳೆದು ಉಳಿದು ಬಂದಿದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಇಂದಿಗೂ ಸಾವಿರಾರು ಸಂಖ್ಯೆಯಲ್ಲಿರುವ ದೇವದಾಸಿಯರು ಇದಕ್ಕೆ ಸಾಕ್ಷಿಯಾಗಿದ್ದಾರೆ. ಮಧ್ಯಯುಗದ ಫ್ಯೂಡಲ್ ಶಕ್ತಿಗಳು, ಪುರುಷಾಧಿಕಾರದ ಗಂಡಸರು ಧಾರ್ಮಿಕ ಸಂಸ್ಥೆಗಳ ಜೊತೆ ಸೇರಿಕೊಂಡು ದಲಿತ ಸಮುದಾಯಗಳ ಹೆಣ್ಣು ಮಕ್ಕಳನ್ನು ಶೋಷಣೆ ನಡೆಸುವ ಧಾರ್ಮಿಕ ಮುಖವಾಡದ ವೇಶ್ಯಾವಾಟಿಕೆಯನ್ನು ಹೇಗೆಲ್ಲಾ ಪೋಷಿಸಿಕೊಂಡುಬಂದಿದ್ದಾರೆ ಎಂಬುದು ಕಂಡಿಲ್ಲವೇ? ಇಂತಹ ಅನಿಷ್ಠ ಪದ್ಧತಿಗಳ ಕುರಿತು ತಾವು ಹಿಂದು ಧರ್ಮದ ವಕ್ತಾರರು ಎಂದುಕೊಂಡ ಯಾವನಾದರೂ ಗಂಡಸು ಮಾತಾಡಿದ್ದಿದೆಯೇ? ಹೆಣ್ಣಿನ ಮೇಲೆ ಅತ್ಯಾಚಾರ ನಡೆಸುವುದನ್ನು ಸರ್ಮಥಿಸಿಕೊಂಡ ಹಿಂದುತ್ವ ಪ್ರತಿಪಾದಕ ಸಾವರ್ಕರನ ತುಂಡುಗಳು ಎಂದುಕೊಂಡ ಯಾವನಾದರೂ ದೇವದಾಸಿ ಪದ್ಧತಿಯಂತಹ ವೇಶ್ಯಾವಾಟಿಕೆ ಕುರಿತು ಎಂದಾದರೂ ಉಸಿರು ಬಿಟ್ಟ ಉದಾಹರಣೆ ಇದೆಯೇ?

ದಲಿತ ಶೂದ್ರ ಹೆಣ್ಣು ಮಕ್ಕಳನ್ನು ಬಸವಿ ಬಿಡುವ ಕೆಟ್ಟ ಸಂಪ್ರದಾಯವಿದ್ದ ಚಂದ್ರಗುತ್ತಿ ಬೆತ್ತಲೆ ಸೇವೆಯ ವಿರುದ್ಧ ದಲಿತ ಸಂಘರ್ಷ ಸಮಿತಿ ಆಂದೋಲನ ನಡೆಸುತ್ತಿದ್ದಾಗ ಗುಪ್ತವಾಗಿ ಬೆತ್ತಲೆ ಸೇವೆಯ ಪರವಾಗಿ ನಿಂತು, ಹೋರಾಟಗಾರರ ವಿರುದ್ಧ ಭಕ್ತರನ್ನು ಹಲ್ಲೆ ನಡೆಸಲು ಪ್ರಚೋದಿಸುತ್ತಿದ್ದವರು ಸಂಘ ಪರಿವಾರದ ಜನ ಎಂಬುದು ದಾಖಲಾಗಿದೆ. ದೇವದಾಸಿಯಂತಹ ಪದ್ಧತಿ ವಿರುದ್ಧ ಯಾರಾದರೂ ಜನಜಾಗೃತಿ, ಹೋರಾಟ ನಡೆಸಿದ್ದರೆ ಅವರಲ್ಲಿ ನಿಮಗೆ ಸಿಗುವುದು ಅದೇ ಮಾರ್ಕ್ಸ್ ವಾದಿಗಳೋ, ಅಂಬೇಡ್ಕರ್ ವಾದಿಗಳೇ ಆಗಿರುತ್ತಾರೆ. ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಸಾವಿರಾರು ಮಹಿಳೆಯರನ್ನು ಸೇರಿಸಿ ಅವರೆಲ್ಲರೂ ವೇಶ್ಯಾವಾಟಿಕೆ ತೊರೆಯುವಂತೆ ಪ್ರತಿಜ್ಞೆ ಸ್ವೀಕರಿಸುವಂತೆ ಮಾಡಿದ್ದನ್ನು ಸಹ ನೋಡಬಹುದು.

ಡಾ.ಬಿ.ಆರ್‌ ಅಂಬೇಡ್ಕರ್‌

ಇತ್ತೀಚಿನ ದಶಕಗಳಲ್ಲಿ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಬೇಕು ಎಂಬ ಬೇಡಿಕೆ ಸಹ ಸಮಾಜದಲ್ಲಿದೆ. ಮೈಮಾರಿಕೊಂಡು ಜೀವನ ನಡೆಸುತ್ತಿರುವವರ ದೇಹವನ್ನು ಮತ್ತು ಅವರ ಲೈಂಗಿಕ ಅಂಗಗಳನ್ನು ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿರುವುದರಿಂದ ಅವರನ್ನು ಲೈಂಗಿಕ ಕಾರ್ಮಿಕರು ಎಂದು ಪರಿಗಣಿಸಬೇಕು, ಹಾಗೂ ಗಂಡಸರೇ ಇದರ ಹೆಚ್ಚಿನ ಲಾಭ ಪಡೆಯುವವರಾಗಿದ್ದು ಈ ಜೀವನೋಪಾಯದ ಕೆಲಸದ ದಮನ ಸಲ್ಲದು ಎಂಬ ಬೇಡಿಕೆಯನ್ನು ಸಂಘಟಿತವಾಗಿ ಮುಂದಿಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡುವ ಸಂಘಟನೆಗಳೂ ಇವೆ. ಇದು ಸಮಾಜದ ಒಂದು ವಿದ್ಯಮಾನ.

ಕೆಲವು ಯೂರೋಪ್ ದೇಶಗಳು ಈಗಾಗಲೇ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿಯೂ ಇವೆ. ಅನೇಕ ಮಾನವ ಹಕ್ಕು ಚಿಂತಕರು, ಮಾರ್ಕ್ಸ್ ವಾದಿಗಳೂ ಸೇರಿದಂತೆ ಅನೇಕ ಸ್ತ್ರೀವಾದಿಗಳು ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವುದರ ಪರವಾಗಿಯೂ ಇರುವುದನ್ನು ನೋಡಬಹುದು. ಇದಕ್ಕೆ ಮುಖ್ಯ ಕಾರಣ ಸಮಾಜದಲ್ಲಿ ಸೂಳೆಗಾರಿಕೆ ಮಾಡುವ ಎಲ್ಲರೂ ತಮ್ಮಿಚ್ಛೆಯಂತೆ ಈ ಕೆಲಸಕ್ಕೆ ಕಾಲಿಟ್ಟವರಾಗಿರುವುದಿಲ್ಲ ಎಂಬುದು.

ಎಷ್ಟೋ ಹೆಣ್ಣುಮಕ್ಕಳು ಬದುಕು ಏನೆಂದೇ ಅರಿಯದ ವಯಸ್ಸಿನಲ್ಲಿ ಸೂಳೆಗಾರಿಕೆಗೆ ದಬ್ಬಲ್ಪಟ್ಟಿರುತ್ತಾರೆ. ಕೊನೆಗೆ ಅದೇ ನರಕದಲ್ಲೇ ನರಳಿ ನರಳಿ ಒಂದು ದಿನ ಸಾಯುತ್ತಾರೆ. ಯಾರದೋ ಸ್ವಾರ್ಥಕ್ಕೆ, ಲಾಭಕ್ಕೆ ಇವರು ಬಲಿಪಶುಗಳಾಗಿರುತ್ತಾರೆ. ಇಂತವರ ಸಂಖ್ಯೆ ಇಡೀ ದೇಶದಲ್ಲಿ ಲಕ್ಷಾಂತರವಿದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಪ್ರಕಟವಾಗಿರುವ ಸೆಕ್ಸ್ ವರ್ಕ್ ರಗಳ ಆತ್ಮಕತೆಗಳಲ್ಲಿ ಸಹ ಈ ಸಂಗತಿ ತಿಳಿಯುತ್ತದೆ. ಇನ್ನು ಲೈಂಗಿಕ ಅಲ್ಪಸಂಖ್ಯಾತರೆನಿಸಿಕೊಂಡ ಹಿಜಡಾ ಸಮುದಾಯ ಲೈಂಗಿಕ ವೃತ್ತಿಯನ್ನೇ ಅವಲಂಬಿಸಿ ಬದುಕುತ್ತಿರುವುದನ್ನು ಸಹ ನೋಡಬಹುದು. ಇತ್ತೀಚಿನ ದಿನಗಳಲ್ಲಿ ಸರ್ಕಾರಗಳು ಹಿಜಡಾಗಳನ್ನು ಸಹ ಇತರೆ ಗಂಡು ಹೆಣ್ಣುಗಳಂತೆಯೇ ಮನುಷ್ಯರು ಎಂದು ಪರಿಗಣಿಸುವ ಪರಿಪಾಠ ಶುರುವಾಗಿದೆ. ಆದರೆ ಈಗಲೂ ಹಿಜಡಾ ಸಮುದಾಯದವರಿಗಾಗಲೀ, ದೇವದಾಸಿಗಳ ಮಕ್ಕಳಿಗಾಗಲೀ ಉದ್ಯೋಗ ನೀಡುವಷ್ಟು ಉದಾರತೆ ನಮ್ಮ ನಾಗರಿಕ ಸಮಾಜದಲ್ಲಿ ಇಲ್ಲ.

ಇವೆಲ್ಲ ಸಂಗತಿಗಳನ್ನು ಪರಿಗಣಿಸಿ ವೇಶ್ಯಾವಾಟಿಕೆಯಲ್ಲಿ ಬಲಾಢ್ಯರು ಸೃಷ್ಟಿಸಿರುವ ಜಾಲಗಳಲ್ಲಿ ಸಿಲುಕಿ ಹಾಕಿಕೊಂಡ ಹೆಣ್ಣುಮಕ್ಕಳಿಗೆ ಗೌರವ-ಘನತೆಯ ಬದುಕನ್ನು ನೀಡುವ ಹೊಣೆ ಸರ್ಕಾರದ್ದು ಮತ್ತು ವ್ಯವಸ್ಥೆಯದ್ದು. ಆದರೆ ಇದೆಲ್ಲವೂ ಈ ಆಳುವ ವ್ಯವಸ್ಥೆಯ ಕಣ್ಣಳತೆಯಲ್ಲೇ ನಡೆಯುವಾಗ ಅದನ್ನು ನಿರೀಕ್ಷಿಸುವುದಾದರೂ ಹೇಗೆ? ಹೀಗಾಗಿ ಅಂತಹ ಹೆಣ್ಣು ಮಕ್ಕಳಾಗಲೀ, ಹಿಜಡಾಗಳಾಗಲೀ ಸಂಘಟಿತವಾಗಿ ತಮ್ಮ ವೃತ್ತಿಯನ್ನು ಮಾನ್ಯ ಮಾಡಿ ಎಂದಾಗ ಅದನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಹೀಗೆ ಕೇಳಿಸಿಕೊಳ್ಳುವುದು, ಅವರ ಕಷ್ಟಗಳಿಗೆ ಧ್ವನಿಯಾಗುವುದು ವೇಶ್ಯಾವಾಟಿಕೆಯನ್ನೇ ಬೆಂಬಲಿಸಿದಂತೆ ಆಗುವುದಿಲ್ಲ. ಅಂತಿಮವಾಗಿ ವೇಶ್ಯಾವಾಟಿಕೆ ಸಂಪೂರ್ಣ ತೊಲಗಬೇಕು, ಅದರಿಂದಾಗಿ ಹೆಣ್ಣುಮಕ್ಕಳು ಬದುಕು ನಾಶ ಮಾಡಿಕೊಳ್ಳುವುದು ತಪ್ಪಬೇಕು ಎಂಬ ಆಶಯ ನಮ್ಮೆಲ್ಲರದಾಗಲಿ. ಅದೇ ಹೊತ್ತಿಗೆ ಈ ಸಧ್ಯ ಈ ವೃತ್ತಿಯಲ್ಲಿ ತೊಡಗಿರುವವರ ಮೇಲೆ ನಡೆಯುವ ದೈನದಂದಿನ ದೌರ್ಜನ್ಯಗಳನ್ನು ವಿರೋಧಿಸುವ ಮಟ್ಟಿಗಾದರೂ ನಾಗರಿಕ ಪ್ರಜ್ಞೆ ಸಮಾಜದಲ್ಲಿ ಇರಬೇಕಾಗಿದೆ.

ಅದಕ್ಕೂ ಮೊದಲು ಮಹಿಳೆಯರ ಮೇಲಾಗಲೀ, ವೇಶ್ಯಯರ ಮೇಲಾಗಲೀ ಯಾವ ಅನುಕಂಪವಾಗಲೀ, ಗೌರವವಾಗಲೀ ಇಲ್ಲದೇ ಮಾತಾಡುವ ನರಾಧಮ ಗುರುಮೂರ್ತಿಯಂತವರ ಬಚ್ಚಲು ಬಾಯಿಯ ಬಂಡವಾಳ ಬಯಲಾಗಲಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...