Homeಅಂಕಣಗಳುಸಂಪಾದಕೀಯ | ಕಂಡದ್ದು ಕಂಡಹಾಗೆಧರ್ಮ ಸುಧಾರಕರ ಮೇಲೆ ಕರ್ಮಟರ ದಾಳಿ

ಧರ್ಮ ಸುಧಾರಕರ ಮೇಲೆ ಕರ್ಮಟರ ದಾಳಿ

- Advertisement -
- Advertisement -

ಸ್ವಾಮಿ ಅಗ್ನಿವೇಶ್. ಎಂಬತ್ತರ ಹಣ್ಣುಹಣ್ಣು ಮುದಿಜೀವ. ಎಂಥಾ ಧರ್ಮವಾದರು, ಈ ವಯಸ್ಸಿನ ವೃದ್ಧನನ್ನು ನಡುರಸ್ತೆಯಲ್ಲಿ ಹಿಡಿದು ಬಡಿಯಿರಿ ಎಂದು ಹೇಳದು. ಆದರೆ ದುಷ್ಟ ಬಿಜೆಪಿಗರು ಆ ಸಾಧನೆ(!) ಮಾಡಿದ್ದಾರೆ. ಆದಿವಾಸಿಗಳ ಪರ ದನಿ ಬಿಚ್ಚಲೆಂದು ಜಾರ್ಖಂಡ್‍ಗೆ ಹೋಗಿದ್ದ ಅಗ್ನಿವೇಶರ ಮೇಲೆ ಬಿಜೆಪಿಗರು ಹಲ್ಲೆ ನಡೆಸಿರೋದನ್ನು ನೋಡಿದರೆ, ಆ ಪಕ್ಷ ಮತ್ತು ಅದರ ಮಾತೃಸಂಸ್ಥೆ ಆರೆಸ್ಸೆಸ್ ಯಾವ ಧರ್ಮದ ಬಗ್ಗೆ ಮಾತಾಡುತ್ತಾರೆ ಅನ್ನೋದು ಸ್ಪಷ್ಟವಾಗುತ್ತೆ. ಈ ದಾಳಿಯ Soಛಿio-ಠಿoಟiಣiಛಿಚಿಟ ಹುನ್ನಾರವನ್ನು ಅರ್ಥ ಮಾಡಿಕೊಂಡಾಗ, ನಿಜವಾಗಿಯೂ ಸಂಘ`ಮಿತ್ರರು’ ಪ್ರತಿಪಾದಿಸುತ್ತಿರೋದು ಹಿಂದೂ ಧರ್ಮವನ್ನಲ್ಲ, ಬದಲಿಗೆ ಶೋಷಣೆ-ಅಸಮಾನತೆ-ಕುತಂತ್ರವನ್ನು ಪ್ರೋತ್ಸಾಹಿಸುವ ಮನುಧರ್ಮವನ್ನು ಅನ್ನೋದು ಮನದಟ್ಟಾಗುತ್ತೆ. ಆದರೆ ಅದಕ್ಕೆ ಹಿಂದೂ, ಹಿಂದೂತ್ವದ ಲೇಬಲ್ ಅಂಟಿಸಿಕೊಂಡು ಜನರನ್ನು ಯಾಮಾರಿಸುತ್ತಿದ್ದಾರಷ್ಟೆ. ಇಲ್ಲದೇ ಹೋಗಿದ್ದರೆ, ಹಿಂದೂ ಧರ್ಮವನ್ನು ಸುಧಾರಿಸಲೆಂದೇ ಹುಟ್ಟಿಕೊಂಡ ಆರ್ಯ ಸಮಾಜದ ಸ್ವಾಮಿಯೊಬ್ಬರನ್ನು ಹೀಗೆ ನಡುರಸ್ತೆಯಲ್ಲಿ ಮೋದಿಯ ನಾಮಜಪ ಮಾಡುತ್ತಾ ಬಡಿದು ಬಿಸಾಕುತ್ತಿರಲಿಲ್ಲ.
ಅಗ್ನಿವೇಶರು ಅವತ್ತು ಜಾರ್ಖಂಡ್‍ಗೆ ಬಂದಿಳಿದದ್ದು ಒಂದು ಪ್ರತಿಭಟನೆಯ ಸಲುವಾಗಿ. ಅದು ಆದಿವಾಸಿಗಳ ಬದುಕಿನ ಹಕ್ಕು ಕೇಳುವ ಪ್ರತಿಭಟನೆಯಾಗಿತ್ತು. ವಿಷಯ ಏನೆಂದರೆ, ಸಹಸ್ರಾರು ವರ್ಷಗಳಿಂದ ನೆಲೆಸಿರುವ ಆದಿವಾಸಿಗಳ ಸಾವಿರಾರು ಎಕರೆ ಫಲವತ್ತಾದ ಭೂಮಿಯನ್ನು ಕಸಿದುಕೊಂಡು ಉದ್ಯಮಿ ಗೌತಮ್ ಅದಾನಿಯ ಕಂಪನಿಗೆ ಧಾರೆಯೆರಲು ಜಾರ್ಖಂಡ್‍ನ ಬಿಜೆಪಿ ಸರ್ಕಾರ ಮುಂದಾಗಿತ್ತು. ಈ ಬಗ್ಗೆ ಬಿಜೆಪಿಯ ರಾಜ್ಯ ಸರ್ಕಾರ ಹಾಗೂ ಅದಾನಿ ಕಂಪನಿಯ ನಡುವೆ ಎಂಒಯು ಕೂಡ ನಡೆದುಹೋಗಿದೆ. ಹೀಗೆ ಸರ್ಕಾರವೇ ಪೌರೋಹಿತ್ಯ ವಹಿಸಿಕೊಂಡು ತಮ್ಮ ಬದುಕನ್ನು ಹಾಳುಗೆಡವುತ್ತಿರುವುದರ ವಿರುದ್ಧ ಆದಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಆ ಪ್ರತಿಭಟನೆಯನ್ನು ಬೆಂಬಲಿಸಿ ಸ್ವಾಮಿ ಅಗ್ನಿವೇಶ್ ಅಂದು ನಡೆಯಲಿದ್ದ ರ್ಯಾಲಿಯಲ್ಲಿ ಪಾಲ್ಗೊಳ್ಳಲಿಕ್ಕಾಗಿ ಆಗಮಿಸಿದ್ದರು. ಅಗ್ನಿವೇಶರ ಮೈಮೇಲಿದ್ದ ಖಾವಿಯನ್ನೂ ಧಿಕ್ಕರಿಸಿ, ಆ ವೃದ್ಧ ದೇಹದ ಮೇಲೆ ಹಲ್ಲೆ ನಡೆಸಲು ಬಿಜೆಪಿಗರಿಗೆ ಸಂದಿಗ್ಧತೆಯನ್ನು ತಂದಿತ್ತದ್ದು ಈ ರಾಜಕೀಯ ಕಾರಣ. ಅಂದಹಾಗೆ ಗೌತಮ್ ಅದಾನಿ, ಪ್ರಧಾನಿ ಮೋದಿಗೆ ಪರಮಾಪ್ತ ಎಂಬುದು ಜಗತ್ತಿಗೇ ಗೊತ್ತಿರುವ ಸತ್ಯ. ಇದಕ್ಕಿಂತ ಹೆಚ್ಚಿನ ವಿವರಣೆ ಅಗತ್ಯವಿಲ್ಲ ಅಲ್ಲವೆ?

ವಿಪರ್ಯಾಸ ನೋಡಿ, ಸಮಾಜ ಸುಧಾರಕ ಸ್ವಾಮೀಜಿಗಳ ವಿರುದ್ಧ ಕತ್ತಿ ಮಸೆಯುವ ಬಿಜೆಪಿಯ ಪಟಾಲಮ್ಮು ಮತ್ತೊಂದು ಕಡೆ ಢೋಂಗಿ ಬಾಬಾಗಳನ್ನು ಆರಾಧಿಸುತ್ತಾರೆ. ಆದರೆ ತಾವು ಮಾತ್ರವೇ ಹಿಂದೂಧರ್ಮದ ವಾರಸುದಾರರಂತೆ ಮಾತಾಡುತ್ತಾರೆ. ಬಿಜೆಪಿಗರ ದೃಷ್ಟಿಯಲ್ಲಿ ಹಿಂದೂ ಧರ್ಮದ ಪ್ರತಿನಿಧಿಗಳೆಂದರೆ ಮಾನವೀಯ ಮೌಲ್ಯ ಸಾರುವ ಅಗ್ನಿವೇಶರಂತವರಲ್ಲ, ಬದಲಿಗೆ ಅಸಾರಾಂ ಬಾಪುವಿನಂತಹ ರೇಪಿಸ್ಟ್ ಢೋಂಗಿ ಬಾಬಾಗಳು! ಅಗ್ನಿವೇಶರ ಮೇಲೆ ದಾಳಿ ಮಾಡುವ ಬಿಜೆಪಿಗರು, ತನ್ನ ಆಶ್ರಮದಲ್ಲಿದ್ದ ಎಳೆಯ ಬಾಲಕಿಯರ ಮೇಲೆ ನಿರಂತರ ಅತ್ಯಾಚಾರ ಎಸಗುತ್ತಿದ್ದ ಪಾಖಂಡಿ ಅಸಾರಾಂ ಬಾಪುವಿಗೆ ಗುಜರಾತ್‍ನಲ್ಲಿ ಭೂಮಿ ಮಂಜೂರು ಮಾಡಿದ್ದಾರೆ. ಹರ್ಯಾಣದ ಇಂತದ್ದೇ ವಿಕೃತ ಮನಸ್ಸಿನ ಗುರುಮಿತ್ ರಾಮ್‍ರಹೀಂ ಬಾಬಾಗೆ ಖಟ್ಟರ್ ನೇತೃತ್ವದ ಇಡಿ ಬಿಜೆಪಿ ರಾಜ್ಯ ಸರ್ಕಾರವೇ ತಲೆಬಾಗಿ ನಿಂತಿತ್ತು. ಆತ ತಪ್ಪಿತಸ್ಥ ಎಂದು ಕೋರ್ಟು ತೀರ್ಪು ಕೊಟ್ಟ ದಿನ ಆತನ ಅನುಯಾಯಿಗಳು ಅನ್ನಿಸಿಕೊಂಡ ಗೂಂಡಾಗಳು ದೊಡ್ಡ ದಾಂಧಲೆ ನಡೆಸಿದಾಗ ಕೈಕಟ್ಟಿ ಕೂರುವಷ್ಟು ಗುರುಮಿತ್‍ನ ಸಪೋರ್ಟಿಗೆ ನಿಂತಿತ್ತು ಆ ಸರ್ಕಾರ. ಅಲ್ಲಿಗೆ ಈ ರಾಜಕೀಯ ಶಕ್ತಿಗಳು ಎಂಥಹ ಧರ್ಮವನ್ನು, ಎಂಥಾ ಧರ್ಮಗುರುಗಳನ್ನು ಬಯಸುತ್ತಿದ್ದಾರೆ ಎಂಬುದು ನಿಚ್ಚಳವಾಗುತ್ತೆ.
ನಮ್ಮ ಕ್ಯಾಪ್ಟನ್ ಗೌರಿ ಲಂಕೇಶರ ಹತ್ಯೆಯಾದ ಸಂದರ್ಭದಲ್ಲಿ ಟಿವಿ ವಾಹಿನಿಯೊಂದರಲ್ಲಿ ಚರ್ಚೆ ನಡೆಯುತ್ತಿತ್ತು. ಗೌರಿಯವರ ಹೋರಾಟದ ಸಂಗಾತಿಯೊಬ್ಬರು ಆ ಚರ್ಚೆಯಲ್ಲಿದ್ದರು. ಬಿಜೆಪಿಯ ವಕ್ತಾರ ಯಥಾಪ್ರಕಾರ ‘ನಾವು ಈ ಹತ್ಯೆಯನ್ನು ಖಂಡಿಸುತ್ತೇವೆ, ಆದರೆ… ಅವರು ಹಿಂದೂ ಧರ್ಮದ ಅವಹೇಳನ ಮಾಡುತ್ತಿದ್ದರು’ ಎಂದು ಹೇಳಿದ. ಸಾಮಾನ್ಯವಾಗಿ ತಾಳ್ಮೆ ಕಳೆದುಕೊಳ್ಳದ ಗೌರಿಯವರ ಒಡನಾಡಿ, ಆತನ ಮೇಲೆ ದೊಡ್ಡ ಗಂಟಲಲ್ಲಿ ಕೂಗಾಡಿದರು. ಏಕೆಂದರೆ, ಬಿಜೆಪಿಯವ ಖಂಡಿಸುವುದಾಗಿ ಬಾಯಿ ಮಾತಲ್ಲಿ ಹೇಳುತ್ತಲೇ, ಹತ್ಯೆಯನ್ನು ಸಮರ್ಥಿಸುತ್ತಿದ್ದ. ಅದರ ನಂತರ ‘ಗೌರಿಯವರು ಹಿಂದೂ ಧರ್ಮದ ಅವಹೇಳನ ಮಾಡಿದ್ದು ನಿಜವೋ ಸುಳ್ಳೋ?’ ಎಂಬ ಪ್ರಶ್ನೆ ತೂರಿ ಬಂದಿತು.
ಆಗ ಗೌರಿಯವರ ಒಡನಾಡಿ ಹೀಗೆ ಉತ್ತರಿಸಿದರು, ‘ಬಸವಣ್ಣನವರು, ವಿವೇಕಾನಂದರು, ಅಂಬೇಡ್ಕರ್, ಮಹಾತ್ಮಾಗಾಂಧಿ ಇವರುಗಳು ಹೇಳದೇ ಇರುವ ಯಾವ ಮಾತನ್ನು ಗೌರಿಯವರು ಹೇಳಿದ್ದಾರೆಂದು ತೋರಿಸಿ; ಅವರಿಗಿಂತಲೂ ಕಟುವಾಗಿ ಗೌರಿಯವರು ಮಾತಾಡಿದ್ದರೆ ಅದನ್ನು ಅವಹೇಳನ ಎನ್ನೋಣ!’. ಬಿಜೆಪಿ ವಕ್ತಾರ ಒಂದೇ ಒಂದು ಮಾತನ್ನೂ ಹೇಳದೇ ಸುಮ್ಮನಾದ.
ಹಿಂದೂ ಧರ್ಮವನ್ನು ನಿಜವಾದ ಧರ್ಮವನ್ನಾಗಿಸಿದ್ದು, ಬಸವಣ್ಣ, ರಾಜಾರಾಂ ಮೋಹನರಾಯ್, ವಿವೇಕಾನಂದ, ಮಹಾತ್ಮಾಗಾಂಧಿ ಮುಂತಾದವರು; ದಲಿತರಿಗೆ ಕಾಲಾರಾಂ ದೇವಸ್ಥಾನದ ಪ್ರವೇಶವನ್ನು ಕೊಡಿಸಲೆತ್ನಿಸುವ ಮೂಲಕ, ಚೌದಾರ್ ಕೆರೆ ನೀರನ್ನು ಕುಡಿಸುವ ಮೂಲಕ ಅಂಬೇಡ್ಕರ್ ಸಹಾ ಈ ಧರ್ಮವನ್ನು ಸುಧಾರಣೆ ಮಾಡಲು ಪ್ರಯತ್ನಿಸಿದರು; ಅದೇ ಕೆಲಸವನ್ನೇ ಕಲಬುರ್ಗಿ, ಧಾಬೋಲ್ಕರ್, ಪಾನ್ಸರೆ, ಗೌರಿ ಲಂಕೇಶರೂ ಮಾಡಲು ಯತ್ನಿಸಿದ್ದು; ಇವರನ್ನು ಆಯಾ ಕಾಲದಲ್ಲಿ ಕೊಂದ ಅಥವಾ ದಾಳಿ ಮಾಡಿದವರು ವೈದಿಕ ಶಾಹಿಗಳು- ಯಾರು ಬ್ರಾಹ್ಮಣ ಶ್ರೇಷ್ಠತೆಯನ್ನು ಎತ್ತಿ ಹಿಡಿದು ಮಿಕ್ಕವರನ್ನು ಕೀಳುಗೈದರೋ ಅವರು. ಆದರೆ, ನಂತರದ ಕಾಲದಲ್ಲಿ ಒಂದಿಡೀ ಸಮುದಾಯ ಈ ಮಹಾನುಭಾವರನ್ನು ತಮ್ಮವರೆಂದು ಆರಾಧಿಸಲು ಆರಂಭಿಸಿದಾಗ, ಅಂತಹವರನ್ನು ಇದೇ ವೈದಿಕರು ತಮ್ಮ ಧರ್ಮದ ಸುಧಾರಕರೆಂದು ಕೊಂಡಾಡಲು ಆರಂಭಿಸಿದರು. ಅವರ ಕ್ರಾಂತಿಕಾರಿ ಬೋಧನೆಗಳನ್ನು ಮಸುಕು ಮಾಡಿ, ಅವರನ್ನು ಪವಾಡ ಪುರುಷರನ್ನಾಗಿಸಲು ಯತ್ನಿಸಿದರು. ಇದು ಇನ್ನೊಂದು ರೀತಿ.
ಹೌದು… ಸ್ವತಃ ಬಾಬಾಸಾಹೇಬರೂ ಸಹಾ ದೇವಾಲಯ ಪ್ರವೇಶವನ್ನು ಒಂದು ಹೋರಾಟವನ್ನಾಗಿಸಿರಲಿಲ್ಲವೇ? ಆದರೆ, ಯಾವಾಗ ಈ ವೈದಿಕರು ಸುಧಾರಣೆಯಾಗುವುದು ಸಾಧ್ಯವಿಲ್ಲವೆಂಬುದನ್ನು ತಮ್ಮದೇ ಪ್ರಯೋಗಗಳಿಂದ ಅರಿತರೋ, ಅಧ್ಯಯನ ಹಾಗೂ ಅನುಭವದಿಂದ ‘ಅಸ್ಪøಶ್ಯತೆಯ ಮೂಲ ಜಾತಿ ಪದ್ಧತಿಯಲ್ಲಿದೆ; ಜಾತಿ ಪದ್ಧತಿಯ ಬೇರು ಹಿಂದೂ ಧರ್ಮದಲ್ಲಿದೆ’ ಎಂದು ಅವರಿಗೆ ಸ್ಪಷ್ಟವಾಯಿತೋ, ಆಗ ‘ಹಿಂದೂವಾಗಿ ಹುಟ್ಟಿದ್ದೇನೆ; ಹಿಂದೂವಾಗಿ ಸಾಯಲಾರೆ’ ಎಂದು ಘೋಷಿಸಿದರು ಮತ್ತು ಬೌದ್ಧ ಧರ್ಮವನ್ನು ಅಪ್ಪಿಕೊಂಡರು.
ಒಂದುವೇಳೆ ‘ಹಿಂದೂ ಧರ್ಮ’ದವರು ಹಾಗಾಗಲು ಬಿಡದೇ, ಅಂಬೇಡ್ಕರರನ್ನು ಹಿಂದೂ ಧರ್ಮದ ಸುಧಾರಕನೆಂದು ಅವರು ಬದುಕಿದ್ದಾಗಲೇ ಒಪ್ಪಿಕೊಂಡಿದ್ದಿದ್ದರೆ? ಜಾತಿ ವಿನಾಶದ ಕುರಿತು ಪುಸ್ತಕವನ್ನು ಧರ್ಮಗ್ರಂಥವಾಗಿಯಲ್ಲದೇ, ಮುಂದಿನ ದಾರಿಯ ದಿಕ್ಸೂಚಿ ಎಂದು ಭಾವಿಸಿದ್ದರೆ? ಆಗ ನಿಜವಾದ ಧರ್ಮ ಮೈದಾಳುತ್ತಿತ್ತು. ಇದಕ್ಕೇ ಅಲ್ಲವೇ ಅಣ್ಣ ಬಸವಣ್ಣನವರೂ ಪ್ರಯತ್ನಿಸಿದ್ದು. ಅಣ್ಣ ಬಸವಣ್ಣನವರನ್ನು ಕೊಂದವರೇ, ಚೌದಾರ್ ಕೆರೆ ಸತ್ಯಾಗ್ರಹ ನಡೆಸಿದ ಅಂಬೇಡ್ಕರರ ಮೇಲೂ ದಾಳಿ ಮಾಡಿದರು. ಮಹಾತ್ಮಾ ಗಾಂಧಿಯವರನ್ನು ಕೊಂದವರೇ, ಗೌರಿಯವರನ್ನೂ ಕೊಂದರು. ವೇದ ಉಪನಿಷತ್ತುಗಳನ್ನು ಅಧ್ಯಯನ ಮಾಡಿ, ಅದರ ಸಾರದಲ್ಲಿ ಮಾನವೀಯತೆಯನ್ನು ಹುಡುಕಿದ ವಿವೇಕಾನಂದ ಮತ್ತು ಕುವೆಂಪು ಅವರೂ ಸಹಾ ವೈದಿಕರಿಗೆ ಒಪ್ಪಿಗೆಯಾಗಿರಲಿಲ್ಲ.
ಇದೇ ಇತಿಹಾಸ. ಇದೇ ವರ್ತಮಾನ ಸಹಾ.
ಸ್ವಾಮಿ ಅಗ್ನಿವೇಶರು ಆರ್ಯ ಸಮಾಜ ಪಂಥಕ್ಕೆ ಸೇರಿದವರು. ಬೆಂಗಳೂರಿನ ಸಜ್ಜನ್‍ರಾವ್ ಸರ್ಕಲ್ ಬಳಿಯಿರುವ ಫುಡ್ ಸ್ಟ್ರೀಟ್‍ನ ಕೊನೆಯಲ್ಲಿ ಆರ್ಯಸಮಾಜದ ಕಟ್ಟಡವಿದೆ. ಯಾವುದೇ ಜಾತಿ, ಧರ್ಮಕ್ಕೆ ಸೇರಿದ್ದರೂ ಒಂದು ಜೋಡಿ ಮದುವೆಯಾಗಲು ಬಯಸಿದರೆ, ಅವರನ್ನು ‘ಹಿಂದೂ’ ಧರ್ಮದ ಆಚರಣೆಗಳಿಗನುಗುಣವಾಗಿ ಅಲ್ಲಿ ಮದುವೆ ಮಾಡಿಸಲಾಗುವುದು. ಆರ್ಯಸಮಾಜದ ರೀತಿ ನೀತಿಗಳು ನಮಗೆಲ್ಲರಿಗೂ ಒಪ್ಪಿಗೆಯಾಗಬಹುದು; ಆಗದಿರಬಹುದು. ಆದರೆ, ಇಂತಹ ಕಾರಣಗಳಿಗಾಗಿ ಅದನ್ನು ವೈದಿಕರು ಒಪ್ಪಲಾರರು. ರಾಜಾರಾಂ ಮೋಹನರಾಯ್‍ರನ್ನೂ, ಕುವೆಂಪುರವರನ್ನೂ, ಗಾಂಧಿಯವರನ್ನೂ, ಸ್ವಾಮಿ ಅಗ್ನಿವೇಶರನ್ನೂ ಒಪ್ಪದವರು ಒಂದು ಧರ್ಮದವರಾಗಿರಲು ಸಾಧ್ಯವೇ ಇಲ್ಲ. ತಮ್ಮದು ಒಂದು ಧರ್ಮ ಎಂದು ಭಾವಿಸುವ ಎಲ್ಲರೂ ಮಾತಾಡಲೇಬೇಕಾದ ಸಂದರ್ಭ ಬಂದಿದೆ. ಬಸವಣ್ಣರಿಂದ ಹಿಡಿದು ಇಲ್ಲಿಯವರೆಗೆ ಹಿಂದೂ ಧರ್ಮದ ಹುಳುಕು-ಕೊಳಕುಗಳನ್ನು ಪ್ರಶ್ನಿಸಿ, ಅದನ್ನು ಬದಲಿಸಿಕೊಳ್ಳಿ ಎಂದವರು ವಾಸ್ತವದಲ್ಲಿ ಆ ಧರ್ಮಕ್ಕೆ ಒಳ್ಳೆಯದನ್ನು ಮಾಡಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳದವರು ಧರ್ಮ ವಿರೋಧಿಗಳಲ್ಲವೇ? ಸ್ವಾಮಿ ಅಗ್ನಿವೇಶರನ್ನು ಥಳಿಸಿದವರು, ಅದರ ಸುದ್ದಿಗೆ ಸಂಭ್ರಮದಿಂದ ತಲೆಬರಹ ಕೊಟ್ಟ ಪತ್ರಕರ್ತರು ಅಧರ್ಮಿಗಳಲ್ಲವೇ?
ವಿವೇಕಾನಂದರನ್ನು ಹೋಲುವ ದಿರಿಸನ್ನು ತೊಟ್ಟು ವೇದ ಉಪನಿಷತ್ತುಗಳ ಹಿರಿಮೆಯನ್ನು ಕೊಂಡಾಡುವ, ಭಾರತದ ಧೀಮಂತ ಪರಂಪರೆಯನ್ನು ಎತ್ತಿ ಹಿಡಿಯುವ, ಜೀತ ವಿಮುಕ್ತಿಗಾಗಿ ಸಂಘಟನೆ ಮಾಡಿ ಅವಿರತವಾಗಿ ಶ್ರಮಿಸಿದ, ಸಾರಾಯಿ ಮತ್ತು ನಶೆ ಬರುವ ಪದಾರ್ಥಗಳ ವಿರುದ್ಧ ಹೋರಾಡಿದ, ಅಸ್ಪøಶ್ಯತಾ ವಿರೋಧಿ ಚಟುವಟಿಕೆಗಳನ್ನು ನಡೆಸಿದ ಸ್ವಾಮಿ ಅಗ್ನಿವೇಶರ ಮೇಲಿನ ಹಲ್ಲೆಯನ್ನು ಖಂಡಿಸದ ಯಾವುದೇ ವ್ಯಕ್ತಿಯೂ ಧರ್ಮವನ್ನು ಅನುಸರಿಸುವ ವ್ಯಕ್ತಿಯಾಗಿರಲಾರ. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲೇ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಸ್ವಾಮಿ ಅಗ್ನಿವೇಶ್ ‘ನನ್ನ ಹೋರಾಟ ಎಂದಿನಂತೆ ಮುಂದುವರೆಯುತ್ತದೆ, ಇಂಥಾ ಹಿಂಸಾಚಾರಗಳು ನನ್ನನ್ನು ಮೌನವಾಗಿಸಲು ಸಾಧ್ಯವಿಲ್ಲ’ ಎಂದಿದ್ದಾರೆ. ಅವರ ಚೈತನ್ಯಕ್ಕೆ ಒಂದು ಸಲಾಮ್ ಹೇಳೋಣ.

– ಸಂಪಾದಕ ಮಂಡಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಟೈಮ್ಸ್‌’ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಸಾಕ್ಷಿ ಮಲಿಕ್ ಸೇರಿ 8...

0
ಒಲಿಂಪಿಕ್ ಪದಕ ವಿಜೇತ ಭಾರತೀಯ ಕುಸ್ತಿಪಟು ಸಾಕ್ಷಿ ಮಲಿಕ್ ಸೇರಿ 8 ಮಂದಿ ಭಾರತೀಯರು ಟೈಮ್ಸ್‌ ನಿಯತಕಾಲಿಕದ 2024ರ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸಾಕ್ಷಿ ಮಲಿಕ್‌ ಮಹಿಳಾ ಕುಸ್ತಿಪಟುಗಳ...