ವಿದ್ಯಾರ್ಥಿಗಳ ಬಸ್ ಪಾಸ್ ದರ ಏರಿಕೆಗೆ SFI, KVS ಸಂಘಟನೆಗಳಿಂದ ಖಂಡನೆ

ಬಿ.ಎಂ.ಟಿ.ಸಿ ಮತ್ತು ಕೆ.ಎಸ್.ಆರ್.ಟಿ.ಸಿ.ಯು ವಿದ್ಯಾರ್ಥಿಗಳ ಬಸ್ ಪಾಸ್ ದರವನ್ನು ಹೆಚ್ಚಳ ಮಾಡಲು ಮುಂದಾಗಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಮತ್ತು ಕರ್ನಾಟಕ ವಿದ್ಯಾರ್ಥಿ ಸಂಘಟನೆ (KVS) ತೀವ್ರವಾಗಿ ಖಂಡಿಸಿದ್ದು ಈ ನಿರ್ಧಾರದಿಂದ ಹಿಂದೆ ಸರಿಯದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ ನೀಡಿವೆ.

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 100 ರೂ, ಕಾಲೇಜು ವಿದ್ಯಾರ್ಥಿಗಳಿಗೆ 150 ರೂ ಮತ್ತು ವೃತ್ತಿಪರ ಕೋರ್ಸುಗಳ ವಿದ್ಯಾರ್ಥಿಗಳಿಗೆ 200 ರೂ ಹೆಚ್ಚಳ ಮಾಡಲು ಕೆ.ಎಸ್.ಆರ್.ಟಿ.ಸಿ ನಿರ್ಧರಿಸಿದ್ದು ಇನ್ನೆರೆಡು ದಿನಗಳಲ್ಲಿ ಏರಿಕೆ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾಗ ದಲಿತ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಉಚಿತ ಮಾಡಿದ್ದರು. ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಕಳೆದ ವರ್ಷ ಉಚಿತ ಬಸ್ ಪಾಸ್ ನೀಡುವುದಾಗಿ ಹೇಳಿ ಈಗ ದರವನ್ನು ಹೆಚ್ಚಳ ಮಾಡಿರುವುದು ವಿದ್ಯಾರ್ಥಿ ವಿರೋಧಿ ನೀತಿಯಾಗಿದೆ. ಹಾಗಾಗಿ ಸರಕಾರ ಮತ್ತು ಸಾರಿಗೆ ಇಲಾಖೆ ಕೂಡಲೆ ದರ ಹೆಚ್ಚಳದ ಆದೇಶವನ್ನು ವಾಪಸ್ ಪಡೆಯಬೇಕೆಂದು ವಿದ್ಯಾರ್ಥಿ ಮುಖಂಡರು ಆಗ್ರಹಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವಂತೆ ಆಗ್ರಹಿಸಿ ಎಸ್.ಎಫ್.ಐ ಕಳೆದ ಹತ್ತು ವರ್ಷಗಳಿಂದ ನಿರಂತರ ಹೋರಾಟ, ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಸರಕಾರ ಮತ್ತು ಸಾರಿಗೆ ಇಲಾಖೆಯಗಮನಕ್ಕೆ ತರುತ್ತಲೇ ಇದೆ. ಹಿಂದೆ ಇದ್ದ ಕಾಂಗ್ರೆಸ್ ಸರಕಾರ ಬಜೆಟ್ ನಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದವರೆಗೆ ಉಚಿತ ಬಸ್ ನೀಡುವುದಾಗಿ ರಾಜ್ಯ ಸರಕಾರ ಘೋಷಿಸಿತ್ತು. ಆದರೆ ಹೊಸದಾಗಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ – ಜೆಡಿಸ್ ಸಮ್ಮಿಶ್ರ ಸರಕಾರ ಉಚಿತ ಬಸ್ ಪಾಸ್ ಯೋಜನೆಯನ್ನು ರದ್ದು ಪಡಿಸಿ ಪೂರ್ಣ ಪ್ರಮಾಣದ ಹಣ ನೀಡಿ ವಿದ್ಯಾರ್ಥಿಗಳು ಬಸ್ ಪಾಸ್ ಪಡೆಯುವಂತೆ ಆದೇಶ ಹೊರಡಿಸಿದ್ದು ವಿದ್ಯಾರ್ಥಿ ವಿರೋಧಿ ಕ್ರಮವಾಗಿದೆ ಎಂದು ಕೋಲಾರದ ಎಸ್.ಎಫ್.ಐ ಮುಖಂಡ ವಾಸುದೇವರೆಡ್ಡಿ ಹೇಳಿದ್ದಾರೆ.

ವಾಸುದೇವರೆಡ್ಡಿ

ಬೇರೆ ರಾಜ್ಯಗಳಲ್ಲಿ ವಿದ್ಯಾರ್ಥಿಗಳಿಗೆ ಸುಲಭ ದರದಲ್ಲಿ ಬಸ್ ಪಾಸ್ ನೀಡಲಾಗುತ್ತಿದೆ. ತಮಿಳುನಾಡಿನಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ನೀಡಲಾಗುತ್ತಿದೆ. ಕೇರಳದಲ್ಲಿ ನಾಲ್ಕು ರೂ ಬಸ್ ಚಾರ್ಜ ಇದ್ದರೆ 1 ರೂ ಮಾತ್ರ ವಿದ್ಯಾರ್ಥಿಗಳು ನೀಡಬೇಕು. ಹರ್ಯಾಣ ರಾಜ್ಯದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ನೀಡಲಾಗುತ್ತಿದೆ. ಈಗಿರುವಾಗ ಕರ್ನಾಟಕದಲ್ಲಿ ಮಾತ್ರ ಬಸ್ ಪಾಸ್ ದರ ಹೆಚ್ಚಳಕ್ಕೆ ಆದೇಶ ನೀಡಿರುವುದು ಅಕ್ಷಮ್ಯ ಎಂದವರು ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಕರ್ನಾಟಕ ವಿದ್ಯಾರ್ಥಿ ಸಂಘಟನೆ (KVS)ಯ ಸಂಚಾಲಕರಾದ ಸರೋವರ್ ಬೆಂಕೀಕೆರೆಯವರು, “ಒಂದು ಕಡೆ ಶಿಕ್ಷಣವನ್ನು ಖಾಸಗೀಕರಣ ಮಾಡುತ್ತಾ ಹಣವಿದ್ದವರಿಗೇ ಶಿಕ್ಷಣ ಎಂಬಂತೆ ಮಾಡಲಾಗುತ್ತಿದೆ. ಇದರ ಮಧ್ಯೆ ಗುಣಮಟ್ಟದ ಶಿಕ್ಷಣ ಪಡೆಯಲು ನಗರಗಳಿಗೆ ಪ್ರಯಾಣ ಮಾಡುವ ವಿದ್ಯಾರ್ಥಿಗಳ ಬಸ್ ಪಾಸ್ ದರ ಏರಿಕೆ ಮಾಡುತ್ತಿರುವ ರಾಜ್ಯ ಸರ್ಕಾರದ ಯೋಚನೆ ವಿದ್ಯಾರ್ಥಿ ವಿರೋಧಿಯಾಗಿದೆ. ಜೂನ್ ಜುಲೈ ತಿಂಗಳಿನಲ್ಲಿ ಬಿತ್ತನೆಗಾಗಿ ಸಾಲ ಮಾಡಿಕೊಳ್ಳುವ ಪೋಷಕರು ಹಾಗು ವಿದ್ಯಾರ್ಥಿಗಳ ಗಾಯದ ಮೇಲೆ ಬರೆ ಎಳೆಯುವ ಕೆಲಸ ಇದಾಗಿದ್ದು, ಇದರಿಂದ ಬಡವರು, ಅಲ್ಪಸಂಖ್ಯಾತರು, ದಲಿತರು ಮತ್ತು ವಿಶೇಷವಾಗಿ ಮಹಿಳೆಯರನ್ನು ಶಿಕ್ಷಣದಿಂದ ದೂರ ಉಳಿಯುವ ಸಾಧ್ಯತೆಗಳು ಹೆಚ್ಚಿದೆ. ರಾಜ್ಯ ಸರ್ಕಾರ ಈ ನಡೆಯನ್ನು ಹಿಂದೆ ಪಡೆಯದಿದ್ದರೆ ರಾಜ್ಯದಾದ್ಯಂತ ವಿದ್ಯಾರ್ಥಿಗಳ ಹೋರಾಟವನ್ನು ಎದುರಿಸಬೇಕಾಗುತ್ತದೆ.” ಎಂದಿದ್ದಾರೆ.

ಸರೋವರ್ ಬೆಂಕೀಕೆರೆ

ದೆಹಲಿ ಸರ್ಕಾರ ಮಹಿಳೆಯರಿಗೂ ಬಸ್ ಮತ್ತು ಮೆಟ್ರೊದಲ್ಲಿ ಉಚಿತ ಪ್ರವೇಶ ನೀಡಲು ಮುಂದಾಗಿರುವಾಗ ನಮ್ಮ ಸರ್ಕಾರ ಬಡ ವಿದ್ಯಾರ್ಥಿಗಳಿಂದ ಹೆಚ್ಚುವರಿ ಹಣ ಪಡೆಯುತ್ತಿರುವುದು ದುರಂತವೇ ಸರಿ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಪ್ ಡೇಟ್: ಕೆ.ಎಸ್.ಆರ್.ಟಿ.ಸಿ ಯೂ ತನ್ನ ನಿಲುವನ್ನು ವಾಪಸ್ ತೆಗೆದುಕೊಂಡಿದೆ. ವಿದ್ಯಾರ್ಥಿಗಳ ಬಸ್ ಪಾಸ್ ದರ ಏರಿಕೆಯಲ್ಲಿ ಯಾವುದೇ ಹೆಚ್ಚುವರಿ ಅಥವಾ ಬದಲಾವಣೆ ಇಲ್ಲ ಎಂದು ತಿಳಿಸಿದೆ.

 

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here