Homeಚಳವಳಿಪತ್ರಿಕೋದ್ಯಮ ಹಿಡಿದಿರುವ ಕತ್ತಲ ಹಾದಿಯಲ್ಲಿ ಕಾಣುತ್ತಿರುವ ಹಣತೆಯ ಬೆಳಕು ರವೀಶ್ ಕುಮಾರ್

ಪತ್ರಿಕೋದ್ಯಮ ಹಿಡಿದಿರುವ ಕತ್ತಲ ಹಾದಿಯಲ್ಲಿ ಕಾಣುತ್ತಿರುವ ಹಣತೆಯ ಬೆಳಕು ರವೀಶ್ ಕುಮಾರ್

ಹಣತೆಯ ಬಗ್ಗೆ ಬರೆಯ ಹೊರಟವರು ಕತ್ತಲ ಕರಾಳತೆಯ ಬಗ್ಗೆಯೇ ಹೆಚ್ಚು ಮಾತನಾಡಬೇಕಾಗುತ್ತದೆ. ರವೀಶ್ ಅವರ ಬಗ್ಗೆ ಬರೆಯಲು ಹೊರಟಾಗ ಸಮಕಾಲೀನ ಪತ್ರಿಕೋದ್ಯಮ ಹೊಂದಿರುವ ಅವನತಿಯ ಬಗ್ಗೆಯೇ ಹೇಳಬೇಕಾಗುತ್ತದೆ.

- Advertisement -
- Advertisement -

ಕಗ್ಗತ್ತಲ ಕಾಲದಲ್ಲಿ ಹಣತೆಯನ್ನು ದಿಟ್ಟಿಸುವ ಸುಖ!

ಸಮೂಹದೊಂದಿಗೆ ಜೀವಿಸಬೇಕಾದ ಹಾಗೂ ಅಧಿಕಾರ ಕೇಂದ್ರದೊಂದಿಗೆ ವ್ಯವಹರಿಸಬೇಕಾದ ಪತ್ರಕರ್ತ ಸುಲಭಕ್ಕೆ ಸಮೂಹ ಸನ್ನಿಗೆ ಹಾಗೂ ಅಧಿಕಾರ ಕೇಂದ್ರದ ಆಕರ್ಷಣೆಗೆ ಒಲಿದುಬಿಡುವುದು ಇಂದು ನಿನ್ನೆಯ ವಿದ್ಯಮಾನವಲ್ಲ. ಪತ್ರಕರ್ತರೆಂದರೆ ‘ಸುದ್ದಿ ಪ್ರಚಾರಕರು’ ಎನ್ನುವುದು ಬಹುತೇಕ ಹೊರಗಿನ ಮಂದಿಗಿರಲಿ ಪತ್ರಿಕೋದ್ಯಮದ ಒಳಗಿರುವ ಅನೇಕರ ಅನುಕೂಲಕರ ವ್ಯಾಖ್ಯಾನವೂ ಆಗಿದೆ. ಹಾಗಾಗಿಯೇ ಪತ್ರಕರ್ತರ ಭಾಷೆಗೂ ಪ್ರಭುತ್ವದ ಭಾಷೆಗೂ, ಪತ್ರಕರ್ತರ ಸಂವೇದನೆಗಳಿಗೂ ಸಮೂಹಸನ್ನಿಗೊಳಗಾದವರ ಸಂವೇದನೆಗಳಿಗೂ ಇಂದು ಹೆಚ್ಚಿನ ವ್ಯತ್ಯಾಸವೇ ಕಂಡುಬರುವುದಿಲ್ಲ.

ಜನಾಭಿಪ್ರಾಯ ರೂಪಿಸುವ ಹೊಣೆಗಾರಿಕೆಯಿಂದ ಕ್ರಮೇಣವಾಗಿ ನುಣುಚಿಕೊಂಡಿರುವ ಪತ್ರಕರ್ತ ಇಂದು ಪ್ರಭುತ್ವದ ಪಕ್ಷಪಾತಿಯಾಗಿದ್ದಾನೆ. ಭಾವಾವೇಶ, ಮೂಲಭೂತವಾದಿ ಗುಣಗಳನ್ನು ಆರಾಧಿಸತೊಡಗಿದ್ದಾನೆ. ‘ಸ್ವಸ್ಥ ಪತ್ರಿಕೋದ್ಯಮ’ದ ಚಹರೆಯನ್ನು ಮರೆತಿದ್ದಾನೆ. ಹೀಗಿರುವ ಸಂದರ್ಭದಲ್ಲಿ ಎನ್‍ಡಿಟಿವಿ ಇಂಡಿಯಾ ಹಿಂದಿ ಸುದ್ದಿವಾಹಿನಿಯ ಸಂಪಾದಕರಾದ ರವೀಶ್ ಕುಮಾರ್ ಅವರಿಗೆ ಪ್ರತಿಷ್ಠಿತ ರಾಮೊನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಸಂದಿದೆ.

ರವೀಶ್ ಕುಮಾರ್ ಅವರಿಗೆ ಮ್ಯಾಗ್ಸೆಸ್ಸೆ ಪ್ರಶಸ್ತಿ ಬಂದಿರುವುದು ದೇಶ, ಸಮಾಜ ಹಾಗೂ ಒಟ್ಟಂದದಲ್ಲಿ ಮನುಕುಲದ ಒಳಿತನನ್ನು ಬಯಸುವ ಎಲ್ಲರಿಗೂ ಸಂತಸದ ವಿಚಾರ. ಇದಕ್ಕೆ ವ್ಯತಿರಿಕ್ತವಾಗಿ, ಮನುಕುಲವನ್ನು ಧರ್ಮಗಳ ಹಂಗಿನಲ್ಲಿ ಒಡೆಯುವ, ದ್ವೇಷ, ಸ್ವಹಿತಾಸಕ್ತಿ, ಲಾಭಕೋರತನವನ್ನು ಬಿತ್ತುವ, ಸರಣಿ ಸುಳ್ಳುಗಳ ಮೂಲಕವೇ ಅಧಿಕಾರ ಕೇಂದ್ರವನ್ನು ಹಿಡಿಯಬಹುದೆಂದು ಸಾಧಿಸಿ ತೋರಿಸುವ ಮನಸ್ಸುಗಳಿಗೆ ಇದು ಅಪ್ರಿಯ ವಿಚಾರವೂ ಕೂಡ. ನಮ್ಮ ಕಣ್ಣಿಗೆ ಇಷ್ಟು ಮಾತ್ರವೇ ಕಾಣುವಂತಿದ್ದರೆ ನಾವೆಲ್ಲರೂ ಪತ್ರಿಕೋದ್ಯಮದ ಈ ಒಳಿತಿಗೆ ಸಂದ ಗೌರವದ ಬಗ್ಗೆ ವಿಶೇಷವಾಗಿ ಸಂತಸಪಡಬಹುದಿತ್ತು. ವಿಪರ್ಯಾಸವೆಂದದರೆ, ರವೀಶ್ ಕುಮಾರ್ ಅವರಿಗೆ ಸಂದ ಈ ಪ್ರಶಸ್ತಿ ವಿನಾಶದಂಚಿನಲ್ಲಿರುವಂತೆ ಕಾಣುತ್ತಿರುವ, ಪ್ರಭುತ್ವಕ್ಕೆ ಕಹಿ ಸತ್ಯಗಳನ್ನು ಹೇಳಲು ಹೊರಟು ಸ್ವತಃ ಸಂಕಷ್ಟಕ್ಕೆ ಸಿಲುಕಿರುವ ಪತ್ರಿಕೋದ್ಯೋಗದ ಒಂದು ದಿಟ್ಟ ವರ್ಗವನ್ನು ಸಂತೈಸುವಂತೆ ಭಾಸವಾಗುತ್ತಿದೆ.

ಏಷಿಯಾದ ನೊಬೆಲ್ ಎಂದೇ ಕರೆಯಲ್ಪಡುವ ರಾಮೊನ್ ಮ್ಯಾಗ್ಸೆಸ್ಸೆ ಪ್ರಶಸ್ತಿಯನ್ನು ಪಡೆದವರ ಬಗ್ಗೆ ಸಾಮಾನ್ಯವಾಗಿ ಮಾಧ್ಯಮಗಳಲ್ಲಿ ದೊಡ್ಡದಾಗಿ ಸುದ್ದಿಮಾಡುವುದು, ಚರ್ಚಿಸುವುದನ್ನು ಈ ಹಿಂದಿನಿಂದಲೂ ನೋಡಿಕೊಂಡು ಬಂದಿದ್ದೇವೆ. ಈ ಪ್ರಶಸ್ತಿಯನ್ನು ಪಡೆದವರ ಬಗ್ಗೆ ಉದ್ದುದ್ದ ಲೇಖನಗಳು ವಿಶೇಷ ಪುರವಣಿಗಳಲ್ಲಿ, ಅಂಕಣಗಳಲ್ಲಿ ಮೂಡಿ ಬರುತ್ತಿದ್ದನ್ನು ಗಮನಿಸಿದ್ದೇವೆ. ಆದರೆ, ಇಂದು ತಮ್ಮದೇ ವೃತ್ತಿಬಾಂಧವನೊಬ್ಬನಿಗೆ ಈ ಪ್ರತಿಷ್ಠಿತ ಪ್ರಶಸ್ತಿ ದೊರೆತಿರುವುದರ ಬಗ್ಗೆ ಬಹುತೇಕ ಸುದ್ದಿಸಂಸ್ಥೆಗಳಲ್ಲಿ ಯಾವುದೇ ವಿಶೇಷ ಉತ್ಸಹ ಕಾಣುತ್ತಿಲ್ಲ! ಜಗತ್ತಿನ ಸಕಲ ಮೌಢ್ಯಗಳ ಬಗ್ಗೆಯೂ ವಿಶೇಷ ಕಾರ್ಯಕ್ರಮಗಳನ್ನು ಮಾಡುವ ನಮ್ಮ ಪ್ರಾಂತೀಯ ಸುದ್ದಿವಾಹಿನಿಗಳಿಗಂತೂ ತಮ್ಮದೇ ವೃತ್ತಿ ಬಾಂಧವರೊಬ್ಬರಿಗೆ ಈ ಪ್ರಶಸ್ತಿ ದೊರೆತಿರುವುದರ ಕುರಿತು ಜನರಿಗೆ ತಿಳಿಸಲು ಒಂದೆರಡು ನಿಮಿಷ ಮೀಸಲಿಡುವ ಮನಸ್ಸೂ ಇಲ್ಲ. ಹೇಗಿರಲು ತಾನೆ ಸಾಧ್ಯ? ಹಾಗೊಂದು ವೇಳೆ ರವೀಶ್ ಕುಮಾರ್ ಬಗ್ಗೆ ಜನರಿಗೇನಾದರೂ ಹೇಳಿ, ಅವರು ಮಾಡುತ್ತಿರುವ ಪತ್ರಿಕೋದ್ಯೋಗದ ಕುರಿತಾಗಿ ವಿವರಿಸಿದರೆ, ಅದನ್ನು ಕೇಳಿದ ಜನತೆ “ಹಾಗಾದರೆ, ನೀವು ಈವರೆಗೆ ಪತ್ರಿಕೋದ್ಯಮದ ಹೆಸರಿನಲ್ಲಿ ಮಾಡುತ್ತಿರುವುದಾದರೂ ಏನು?” ಎಂದು ತಮ್ಮನ್ನೇ ಕೇಳಿಬಿಡುವ ಭಯವಿರಬಹುದೇನೋ. ಸಕಾರಣವಾದ ಭಯವೇ!

ಉತ್ತಮವಾದುದರ ಬಗ್ಗೆ ಹೆಚ್ಚು ಮಾತನಾಡಬಾರದು, ಒಳಿತಿನ ಚಿಂತನೆಗಳನ್ನು ಜನರಿಗೆ ತಿಳಿಸಬಾರದು, ಯಾವುದೇ ಕಾರಣಕ್ಕೂ ಜನರನ್ನು ವಿಚಾರಶೀಲರನ್ನಾಗಿಸಬಾರದು, ಎಲ್ಲಕ್ಕಿಂತ ಮುಖ್ಯವಾಗಿ ತಾವು ನಡುಬಗ್ಗಿಸಿ ವಂದಿಸುತ್ತಿರುವ ಧಣಿಗಳಿಗೆ ಹಾಗೂ ಅವರು ಅಡ್ಡಬಿದ್ದು ವಂದಿಸುವ ಅಧಿಕಾರದ ಕೇಂದ್ರದಲ್ಲಿರುವ ಪಕ್ಷ, ರಾಜಕಾರಣಿಗಳೆಡೆಗಿನ ಉಗ್ರ ನಿಷ್ಠೆಯನ್ನೆಂದೂ ಬದಲಿಸಬಾರದು ಎನ್ನುವ ಸಡಿಲ, ಸರಳ ಸೂತ್ರದಡಿ ಆಧುನಿಕ ಪತ್ರಿಕೋದ್ಯಮ ರೂಪುಗೊಂಡಿದೆ. ಇದೆಲ್ಲವೂ ಪ್ರಜ್ಞಾವಂತರಿಗೆ ಗೊತ್ತಿರುವ ವಿಷಯವೇ ಆಗಿದೆ. ಆದರೆ ಈ ಹಳಹಳಿಕೆಗಳಾಚೆಗೆ ಭೀಕರ ವಾಸ್ತವವನ್ನು ಎದುರಿಸುವ ಮಾರ್ಗಗಳು ಮಾತ್ರ ಇಂದು ಹೆಚ್ಚಾಗಿ ಗೋಚರಿಸುತ್ತಿಲ್ಲ. ಇಂತಹ ವೇಳೆ, ಅಂತಃಕರಣ ಹಾಗೂ ವಿಚಾರಶೀಲತೆಯಿಂದ, ಪ್ರೀತಿ ಹಾಗೂ ಬದ್ಧತೆಯಿಂದ ಪತ್ರಿಕೋದ್ಯೋಗ ಮಾಡುತ್ತಿರುವ ರವೀಶ್ ಕುಮಾರ್ ಅವರಿಗೆ ಮ್ಯಾಗ್ಸೆಸ್ಸೆ ಪ್ರಶಸ್ತಿ ಬಂದಿದೆ. ಇದನ್ನು ನೋಡಿ, ಅವರ ಬಗ್ಗೆ ಮೆಚ್ಚುಗೆಯ ಮಾತನಾಡುತ್ತಲೇ ತಮ್ಮ ಕೈಯಲ್ಲಿ ಇದಾವುದನ್ನೂ ಮಾಡಲು ಸಾಧ್ಯವಾಗದೆ ಹಲುಬುತ್ತಿರುವ ಪತ್ರಕರ್ತರ ಸಂಖ್ಯೆ ಈ ದೇಶದಲ್ಲಿ ದೊಡ್ಡದಿದೆ. ಪ್ರಣಯ್ ರಾಯ್ ರಂತಹ ದಿಟ್ಟ ಪತ್ರಿಕೋದ್ಯಮಿ ದೊರೆತರೆ ತಾವೂ ಸಹ ರವೀಶ್‍ಗಳೇ ಎಂದು ಇವರಲ್ಲಿ ಅನೇಕರು ಗೊಣಗಿಕೊಳ್ಳುತ್ತಿದ್ದಾರೆ

ಇದೆಲ್ಲ, ಕೇವಲ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ತಳಮಳಗಳು ಮಾತ್ರವೇ ಅಲ್ಲ. ಬಹುತೇಕ ಎಲ್ಲ ಕ್ಷೇತ್ರಗಳನ್ನೂ ಇಂದು ಇಂತಹ ತಳಮಳಗಳು ವ್ಯಾಪಿಸಿಕೊಂಡಿವೆ. ಶಿಕ್ಷಣ, ವೈದ್ಯಕೀಯ, ವಕೀಲಿಕೆ, ಸರ್ಕಾರಿ ನೌಕರಿ ಹೀಗೆ ಬಹುತೇಕ ಎಲ್ಲ ಸಾಂಪ್ರದಾಯಿಕ ಕ್ಷೇತ್ರಗಳಲ್ಲಿಯೂ ಮೌಲ್ಯಗಳು ಜರ್ಜರಿತಗೊಂಡಿರುವುದನ್ನು ನೋಡಿದ್ದೇವೆ. ಆದರೆ, ವಿಶೇಷವಾಗಿ ತಮ್ಮನ್ನು ತಾವು ಸಮಾಜಕ್ಕೆ ಹಿಡಿದ ಕನ್ನಡಿ ಎಂದು ವ್ಯಾಖ್ಯಾನಿಸಿಕೊಳ್ಳಲು ಬಯಸುವ ಪತ್ರಿಕೋದ್ಯಮದಲ್ಲಿ ಮೌಲ್ಯಗಳ ಕುಸಿತ ಬಹುಬೇಗ ಗೋಚರಿಸಿಬಿಡುತ್ತದೆ. ಕನ್ನಡಿಯೇ ವಕ್ರವಾಗಿದ್ದ ಮೇಲೆ ಅದು ಪ್ರತಿಫಲಿಸುವ ಬಿಂಬದಲ್ಲಿ ಮೌಲ್ಯವನ್ನು ಹುಡುಕುವುದಾದರೂ ಹೇಗೆ?

ಈ ಕಾರಣಗಳಿಂದಾಗಿ ಸುದ್ದಿ ವಾಹಿನಿಗಳನ್ನು ಇಂದು ಜನತೆ ‘ವಾಚಾಳಿತನದ ಮನರಂಜನೆ’ಯ ಮತ್ತೊಂದು ಮುಖವಾಗಿ ಆಸ್ವಾದಿಸತೊಡಗಿದ್ದಾರೆ. ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಸುದ್ದಿಯನ್ನು ಉದ್ದೇಶಪೂರ್ವಕವಾಗಿ ತಿರುಚುವ, ಸುಳ್ಳುಗಳನ್ನು ಸತ್ಯವೆಂದು ವೈಭವೀಕರಿಸುವ, ಪೊಳ್ಳುತನಕ್ಕೆ ಆಕರ್ಷಕ ಪೋಷಾಕುಗಳನ್ನು ಹೊಲಿಯುವ ‘ಮಾರ್ಕೆಟಿಂಗ್ ಕಲೆ’ ಇಂದು ಪತ್ರಿಕೋದ್ಯಮದ ಕೇಂದ್ರದಲ್ಲಿದೆ. ಇದನ್ನು ಅಚ್ಚುಕಟ್ಟಾಗಿ, ಜಾಣತನದಿಂದ, ಬುದ್ಧಿವಂತಿಕೆಯಿಂದ ಮಾಡಬಲ್ಲವರನ್ನೇ ವೃತ್ತಿಪರ ಪತ್ರಕರ್ತರು ಎಂದು ವ್ಯಾಖ್ಯಾನಿಸಲಾಗುತ್ತಿದೆ. ಪಿಆರ್ ಹಾಗೂ ಬ್ರ್ಯಾಂಡಿಂಗ್ ಸಂಸ್ಥೆಗಳು ಮಾಡುವ ಕೆಲಸವನ್ನು ಇನ್ನೂ ಹಸಿಹಸಿಯಾಗಿ, ವ್ಯಾಪಕವಾಗಿ ಮಾಡುವುದು ಹೇಗೆ ಎನ್ನುವುದನ್ನು ಇಂದು ನಮ್ಮ ಸುದ್ದಿವಾಹಿನಿಗಳು, ಅದರಲ್ಲಿಯೂ ಪ್ರಾದೇಶಿಕ ಸುದ್ದಿವಾಹಿನಿಗಳು ಸಾಧಿಸಿ ತೋರಿಸಿವೆ. ಸುದ್ದಿವಾಹಿನಿಗಳ ಮುಖ್ಯಸ್ಥರು ಇಂತಹ ಪಿಆರ್ ಹಾಗೂ ಬ್ರ್ಯಾಂಡಿಂಗ್ ಸಂಸ್ಥೆಗಳ ಮುಖ್ಯಸ್ಥರಂತೆಯೇ ನಡೆದುಕೊಳ್ಳುತ್ತಿದ್ದಾರೆ. ಇದೇ ಅಲ್ಲದೆ, ತಾವು ಯಾರನ್ನು ಬೇಕಾದರೂ ವೈಭವೀಕರಿಸಿ ಬಿಂಬಿಸಬಲ್ಲೆವು, ಯಾರಿಗೆ ಬೇಕಾದರೂ ಮಸಿ ಬಳಿಯಬಲ್ಲೆವು ಎನ್ನುವ ಅಹಮಿಕೆ ಇಂದು ಪತ್ರಿಕೋದ್ಯಮದ ಚುಕ್ಕಾಣಿ ಹಿಡಿದಿರುವ ಬಹುತೇಕರನ್ನು ಆವರಿಸಿಕೊಂಡಿದೆ.

ಇದೆಲ್ಲ ಒಂದೆಡೆಯಾದರೆ, ಪ್ರಸ್ತುತ ಪತ್ರಿಕೋದ್ಯಮದ ಬಹುದೊಡ್ಡ ಸಮಸ್ಯೆ ಪತ್ರಕರ್ತರೇ ಆಗಿರುವುದು. ಬಹುತೇಕ ಪತ್ರಕರ್ತರು ಸ್ವಯಂಪ್ರೇರಣೆಯಿಂದಲೇ ಭಟ್ಟಂಗಿಗಳು, ಮೂಲಭೂತವಾದಿಗಳು, ಅಸೂಕ್ಷ್ಮಜ್ಞರು, ಧರ್ಮ, ಜಾತಿ, ಧನಬಲದ ಪಕ್ಷಪಾತಿಗಳು ಆಗಿದ್ದಾರೆ. ಇಂತಹವರು ಪತ್ರಿಕಾರಂಗದ ಆಯಕಟ್ಟಿನ ಸ್ಥಳಗಳಲ್ಲಿ ಬಂದು ಕೂತಾಗಿದೆ. ಅಷ್ಟೇ ಅಲ್ಲ, ಇವರು ತಮ್ಮ ಭ್ರಷ್ಟ, ಮೌಲ್ಯಹೀನ, ತರ್ಕಹೀನ ವಾರಸುದಾರರನ್ನು ಅಣಬೆಗಳಂತೆ ಬೆಳಸಿಯಾಗಿದೆ. ಇಂತಹ ಹುಲುಸಾದ ಬೆಳೆ ಮಾರುಕಟ್ಟೆಯಲ್ಲಿ ವಿಫುಲವಾಗಿ ದೊರೆಯುವಾಗ ಮಾಧ್ಯಮರಂಗದ ಒಡೆಯರಿಗೆ ತಮ್ಮ ಅಗತ್ಯಕ್ಕೆ ತಕ್ಕಂತಹ ಭ್ರಷ್ಟ ಭಟ್ಟಂಗಿಗಳ ಪ್ರಭೇದವನ್ನು ಸಂಬಳಕ್ಕಿಟ್ಟುಕೊಳ್ಳುವುದು ಸುಲಭದ ಆಯ್ಕೆಯಾಗಿದೆ. ಸಂವೇದನೆ, ವಿಚಾರಶೀಲತೆ, ಪ್ರಾಮಾಣಿಕತೆ, ಬದ್ಧತೆ, ದಿಟ್ಟತೆ ಇವು ಇಂದು ಪತ್ರಿಕೋದ್ಯಮದ ಚಹರೆಯಾಗಿ ಉಳಿದಿಲ್ಲ. ಮಾಧ್ಯಮರಂಗದ ಒಡೆಯರಿಗೆ ಇಂತಹ ಗುಣಗಳನ್ನು ಹೊಂದಿರುವ ಪತ್ರಕರ್ತರ ಅಗತ್ಯವೂ ಕಂಡುಬರುತ್ತಿಲ್ಲ. ಬರವಣಿಗೆ, ಮಾತುಗಾರಿಕೆ, ನಿರೂಪಣೆಗಳು ಇಂದು ಮಾಧ್ಯಮಗಳಲ್ಲಿ ಹೇಳಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಲು ಬೇಕಾಗಿರುವ ‘ಕೌಶಲ’ಗಳಾಗಿ ಮಾತ್ರವೇ ಉಳಿದಿವೆ. ಪತ್ರಿಕೋದ್ಯಮವೆನ್ನುವುದು ಬಹುತೇಕ ಸಂಸ್ಥೆಗಳ ವಿಷಯದಲ್ಲಿ ಮಾಲೀಕರ, ಪತ್ರಕರ್ತರ ಹಾಗೂ ಒಂದು ವರ್ಗ/ಧರ್ಮಗಳ ಹಿತರಕ್ಷಣೆಗಾಗಿ ರೂಪುಗೊಂಡಿರುವ ‘ಸ್ವಾರ್ಥಿಗಳ ಕೂಟ’ವಾಗಿದೆ. ಇಂತಲ್ಲಿ ಮೌಲ್ಯ, ಸಂವೇದನೆಗಳನ್ನು ಹುಡುಕುವುದು ಅಪಹಾಸ್ಯಕ್ಕೀಡು ಮಾಡುವ ಮುಗ್ಧತೆಯಾಗುತ್ತದೆ. ಹೀಗಿರುವ ಸನ್ನಿವೇಶವದಲ್ಲಿಯೇ ನಮ್ಮೆಲ್ಲರ ಪ್ರೀತಿಯ ರವೀಶ್ ಅವರಿಗೆ ಮ್ಯಾಗ್ಸೆಸ್ಸೆ ಪ್ರಶಸ್ತಿ ಬಂದಿದೆ. ಹೇಳಿ ಸಂಭ್ರಮಿಸೋಣವೇ?!

ಬಹುತೇಕ ಪತ್ರಕರ್ತರು ಇಂದು ‘ಅಧಿಕಾರದ ದಲ್ಲಾಳಿ’ಗಳಾಗಿದ್ದಾರೆ. ಪತ್ರಿಕೋದ್ಯೋಗಕ್ಕಿಂತ ‘ಪವರ್ ಬ್ರೋಕರೇಜ್’ ಕೆಲಸಗಳಲ್ಲಿ ಅವರು ತಮ್ಮನ್ನು ಖುಷಿಯಿಂದ ಗುರುತಿಸಿಕೊಳ್ಳುತ್ತಾರೆ. ಪತ್ರಿಕೋದ್ಯೋಗವೆನ್ನುವುದು ಅವರಿಗೆ ತಮ್ಮನ್ನು ತಾವು ಸಮಾಜದ ಪ್ರಭಾವಶಾಲಿ, ಗಣ್ಯ ವ್ಯಕ್ತಿಗಳೆಂದು ಭಾವಿಸಿಕೊಳ್ಳಲು, ಬಿಂಬಿಸಿಕೊಳ್ಳಲು ಅಧಿಕಾರದ ಕೇಂದ್ರದಲ್ಲಿ ಠಳಾಯಿಸಲು ಕಾರಣವಾಗಿದೆ. ಸದಾಕಾಲ ಸಮಾಜದ ಪ್ರಮುಖ ಘಟನಾವಳಿಗಳ ಕೇಂದ್ರವನ್ನು ಹತ್ತಿರದಿಂದ ಕಾಣುವ ಸಾಕಷ್ಟು ಪತ್ರಕರ್ತರು ಕಾಲಾಂತರದಲ್ಲಿ ತಮ್ಮನ್ನು ತಾವೇ ಮಹತ್ತರವಾದ ಸ್ಥಾನಕ್ಕೇರಿಸಿಕೊಳ್ಳತೊಡಗುತ್ತಾರೆ. ಅವರ ಈ ಭಾವನೆ ಅವರ ವ್ಯಕ್ತಿತ್ವದಲ್ಲಿಯೂ ಪ್ರತಿಫಲಿಸತೊಡಗುತ್ತದೆ. ಅಧಿಕಾರ ಕೇಂದ್ರದೊಂದಿಗಿನ ಸಾಂಗತ್ಯ, ಅಧಿಕಾರಸ್ಥರೊಂದಿಗಿನ ಸುಲಭಸಾಧ್ಯ ಒಡನಾಟ ಕ್ರಮೇಣ ಅವರನ್ನು ತಮ್ಮ ನೈಜ ಜವಾಬ್ದಾರಿಗಳಿಗೆ ಕುರುಡಾಗಿಸುತ್ತದೆ. ಹೀಗೆ ಕುರುಡಾದವರು ಪ್ರಭುತ್ವವನ್ನು ಪ್ರಶ್ನಿಸಬೇಕೆಂದು ನಾವು ಬಯಸುತ್ತೇವೆ!

ಪ್ರಜಾತಂತ್ರದ ಬಗ್ಗೆ ಗೌರವವಿಲ್ಲದ, ಪ್ರಜಾಪ್ರಭುತ್ವವೆಂದರೆ ಬಹುಜನರ ಅಭಿಪ್ರಾಯವೆಂದು ಮಾತ್ರವೇ ಗ್ರಹಿಸುವ, ಬಿಂಬಿಸುವ ಹಾಗೂ ಅದನ್ನು ತಮ್ಮ ಅನುಕೂಲ, ಸ್ವಾರ್ಥ ಸಾಧನೆಗಾಗಿ ಬಳಸಿಕೊಳ್ಳುವ ಕೆಲ ರಾಜಕೀಯ ಪಕ್ಷಗಳ ಧೋರಣೆಯೇ ಇಂದು ಬಹುತೇಕ ಪತ್ರಕರ್ತರ ಧೋರಣೆಯೂ ಆಗಿದೆ. ಹೀಗೆ ವಶೀಲಿಬಾಜಿಯಲ್ಲಿ ತೊಡಗಿರುವ ಪತ್ರಿಕೋದ್ಯಮದ ಆಯಕಟ್ಟಿನಲ್ಲಿರುವ ಪತ್ರಕರ್ತರು ಬಡವರು, ಶೋಷಿತರು, ದಮನಿತರು, ಆದಿವಾಸಿಗಳು, ಅಲ್ಪಸಂಖ್ಯಾತರ ಪರವಾಗಿ ದನಿ ಎತ್ತಬಹುದು ಎನ್ನುವ ನಿರೀಕ್ಷೆ ಸೂಕ್ಷ್ಮಜ್ಞರದು!

ರವೀಶ್ ಕುಮಾರ್ ಅವರು ಪತ್ರಕರ್ತರಾಗಿ ಪತ್ರಿಕೋದ್ಯೋಗವನ್ನಷ್ಟೇ ಮಾಡಿದ್ದಾರೆ. ಹೌದು, ಅವರು ಗುಮಾಸ್ತರಿಕೆಯ ರೀತಿ ಯಾಂತ್ರಿಕವಾಗಿಯೂ ದುಡಿದಿಲ್ಲ, ದಲ್ಲಾಳಿಗಳ ರೀತಿ ವಶೀಲಿಬಾಜಿಗೂ ಇಳಿಯಲಿಲ್ಲ. ಸಮಾಜದ ಒಳಿತಿಗಾಗಿ ಮಿಡಿಯುವ ಒಂದು ವೃತ್ತಿಪರ ಸುದ್ದಿಸಮೂಹ ಸಂಸ್ಥೆಯೊಂದರಲ್ಲಿ ಶುದ್ಧ ಪತ್ರಿಕೋದ್ಯೋಗವನ್ನು ಮಾಡುತ್ತಾ ನೈಜ ಪ್ರಜಾತಂತ್ರದ ದನಿಯಾಗಿ ಹೊರಹೊಮ್ಮಿದ್ದಾರೆ. ರವೀಶ್ ಅವರಿಗೆ ಹಾಗೆ ಪತ್ರಿಕೋದ್ಯೋಗವನ್ನು ಮಾತ್ರವೇ ಮಾಡಲು ಅಗತ್ಯ ವಾತಾವರಣವನ್ನು ನೀಡಿರುವ ಅವರ ಸುದ್ದಿಸಂಸ್ಥೆಯನ್ನು ಈ ಹೊತ್ತು ಅಭಿನಂದಿಸೋಣ. ರವೀಶ್ ಅವರು ಪತ್ರಿಕೋದ್ಯೋಗವನ್ನು ಮಾತ್ರವೇ ಮಾಡಿ, ಅದರ ಘನತೆಯನ್ನು ಎತ್ತಿಹಿಡಿದರೆ, ಅವರ ಬಹುತೇಕ ಸಮಕಾಲೀನರು ಅದೊಂದನ್ನು ಬಿಟ್ಟು ಬೇರೆಲ್ಲವನ್ನೂ ಮಾಡುತ್ತಾ ವೃತ್ತಿಗೆ ಕಳಂಕವನ್ನು ಮೆತ್ತಿದ್ದಾರೆ.

ಆಡಳಿತದಲ್ಲಿರುವ ಸರ್ಕಾರ ಹಾಗೂ ಉದ್ಯಮದಲ್ಲಿನ ರವೀಶ್ ಅವರ ಪ್ರತಿಸ್ಪರ್ಧಿಗಳು ಅವರ ದನಿಯನ್ನು ಜನಸಾಮನ್ಯರಿಗೆ ತಲುಪಿಸದಂತೆ ತಡೆಹಿಡಿಯಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದಾರೆ. ಅದರಲ್ಲಿ ತಕ್ಕಮಟ್ಟಿಗಿನ ಯಶಸ್ಸನ್ನೂ ಗಳಿಸಿದ್ದಾರೆ. ಕಂದೀಲಿಗೆ ಹೆದರುವ ಕತ್ತಲಿನ ಪೋಷಕರಿಗೆ ಬೆಳಕಿನ ಭಯ ನಿರಂತರ. ರವೀಶ್ ಕುಮಾರ್ ಪತ್ರಿಕೋದ್ಯಮ ಹಿಡಿದಿರುವ ಕತ್ತಲ ಹಾದಿಯಲ್ಲಿ ಕಾಣುತ್ತಿರುವ ಹಣತೆಯ ಬೆಳಕು. ಹಣತೆಯ ಬಗ್ಗೆ ಬರೆಯ ಹೊರಟವರು ಕತ್ತಲ ಕರಾಳತೆಯ ಬಗ್ಗೆಯೇ ಹೆಚ್ಚು ಮಾತನಾಡಬೇಕಾಗುತ್ತದೆ. ರವೀಶ್ ಅವರ ಬಗ್ಗೆ ಬರೆಯಲು ಹೊರಟಾಗ ಸಮಕಾಲೀನ ಪತ್ರಿಕೋದ್ಯಮ ಹೊಂದಿರುವ ಅವನತಿಯ ಬಗ್ಗೆಯೇ ಹೇಳಬೇಕಾಗುತ್ತದೆ. ಹಾಗಾಗಿಯೇ ರವೀಶ್ ಅವರಿಗೆ ದೊರೆತ ಪ್ರಶಸ್ತಿಯ ಬಗ್ಗೆ ಈ ಹೊತ್ತು ಸಂಭ್ರಮಿಸಬೇಕೋ ಅಥವಾ ಪತ್ರಿಕೋದ್ಯಮ ಪುನರುಜ್ಜೀವನಗೊಳ್ಳಬೇಕು ಎನ್ನುವುದನ್ನು ಈ ಪ್ರಶಸ್ತಿ ಸಂಕೇತಿಸುತ್ತಿರುವ ಬಗ್ಗೆ ನಿಟ್ಟುಸಿರುಡುತ್ತಾ ಗಂಭೀರವಾಗಬೇಕೋ ಎಂದು ಯೋಚಿಸುತ್ತಿದ್ದೇನೆ. ಬಹುಶಃ ಇದೇ ಭಾವನೆ ಸಮಕಾಲೀನ ಪತ್ರಿಕೋದ್ಯಮದ ಹಲ ಹಿರಿಕಿರಿಯರದ್ದೂ ಆಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ: ಇಂದು ಮೊದಲ ಹಂತದ ಮತದಾನ

0
ಬಹು ನಿರೀಕ್ಷಿತ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು (ಏ.19) ನಡೆಯಲಿದೆ. ದೇಶದ 17 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳ 16.63 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ದೇಶದ 107...