ಸೋದರೀ, ನಿಮ್ಮ ಅಧ್ಯಯನಶೀಲತೆ ಸರಿಯಾಗಿ ಬಳಕೆಯಾಗಿಲ್ಲ

| ಎಚ್‍.ಎಸ್.ದೊರೆಸ್ವಾಮಿ |

ಡಾ.ಎ.ಬಿ.ಆರತಿ ಪ್ರಜಾವಾಣಿಯಲ್ಲಿ ಅಧಿಕಾರ, ದರ್ಪ ತೋರಿದ ಎಲ್ಲರೂ ನೆಲಕಚ್ಚಿದ್ದಾರೆ ಎಂಬ ನಿತ್ಯ ಸತ್ಯದ ಮಾತನ್ನು ಆಡಿದ್ದಾರೆ. ಹಿರಣ್ಯಾಕ್ಷ ಚಿನ್ನದ ಆಸೆಗಾಗಿ ಭೂಮಿಯನ್ನೇ ಚಾಪೆ ಸುತ್ತಿ ಸಮುದ್ರದೊಳಗೆ ಇಟ್ಟಿದ್ದ. ವಿಷ್ಣು ವರಹಾವತಾರ ಎತ್ತಿ ಹಿರಣ್ಯಾಕ್ಷನನ್ನು ಸದೆಬಡಿದು ಭೂಮಿಯನ್ನು ಯಥಾಸ್ಥಾನಕ್ಕೆ ತಂದು ಇಟ್ಟ ಎಂಬ ಪುರಾಣಕಾಲದಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ಆರತಿಯವರು ಬುದ್ಧಿವಂತರು, ಅಧ್ಯಯನಶೀಲರು. ಅವರ ಬರವಣಿಗೆ ಪ್ರಬುದ್ಧವಾದದ್ದು, ತರ್ಕಬದ್ಧವಾದದ್ದು ಮತ್ತು ಅಷ್ಟೇ ಮೋಹಕವಾದದ್ದು. ಆದರೆ ಅದು ದ್ವೇಷಪೂರಿತವಾದದ್ದು, ಹಿಂದೂತ್ವ ಪ್ರತಿಪಾದನೆಗೆ ಮೀಸಲಾಗಿಟ್ಟ ಜೀವ ಅದು.

ಕಾಂಗ್ರೆಸ್ ಹಿರಣ್ಯಾಕ್ಷ, ಅನೇಕ ವರ್ಷಗಳ ಕಾಲ ದೇಶವನ್ನು ಕಬ್ಜಾ ಮಾಡಿತ್ತು. ವಿಷ್ಣುಸ್ವರೂಪನಾದ ಮೋದಿ ಕಾಂಗ್ರೆಸ್ ಸದೆಬಡಿದು, ದೇಶವನ್ನು ತನ್ನ ವಶಕ್ಕೆ ತೆಗೆದುಕೊಂಡರು ಎಂಬುದು ಆರತಿ ಅವರ ಸಂಶೋಧನೆಯ ರಹಸ್ಯ. ಸರ್ವಾಧಿಕಾರ ಮೆರೆಸಬೇಕೆಂಬುವವರು ಮೋದಿ. ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟಿತು. ಹಿರಣ್ಯಾಕ್ಷ ಬ್ರಿಟನ್ ಭಾರತವನ್ನು ಕಬಳಿಸಿ, 150 ವರ್ಷಗಳ ಕಾಲ ದೇಶವನ್ನು ಹೀರಿ ಹಿಪ್ಪೆ ಮಾಡಿದ್ದ ಬ್ರಿಟಿಷರನ್ನು ಓಡಿಸಿ ದೇಶವನ್ನು ಸ್ವತಂತ್ರಗೊಳಿಸಿದ್ದು ಕೂರ್ಮಾವತಾರದ ಕಾಂಗ್ರೆಸ್. ಮೋದಿ ಅಲ್ಲ. ಸ್ವಾತಂತ್ರ್ಯವನ್ನು ಗಳಿಸಿಕೊಟ್ಟ ಕಾಂಗ್ರೆಸ್ ಜನರ ಅನುರಾಗ ಗಳಿಸಿತ್ತು. ಕಾಂಗ್ರೆಸ್‍ಅನ್ನು ಆ ಕಾರಣದಿಂದ ಜನ ಮೆಚ್ಚಿ ಅಧಿಕಾರ ಸ್ಥಾನದಲ್ಲಿ ಸುಮಾರು 60 ವರ್ಷಗಳ ಕಾಲ ಅವ್ಯಾಹತವಾಗಿ ಕೂರಿಸಿತ್ತು.

ಕಾಲಕಳೆದಂತೆ ಸ್ವಲಾಭ ಚಿಂತಕರು, ಸಮಯ ಸಾಧಕರು, ಭ್ರಷ್ಟರು, ಕ್ರಿಮಿನಲ್‍ಗಳು ರಾಜಕೀಯ ಪ್ರವೇಶ ಮಾಡಿದರು. ಈ ಕ್ರಿಮಿನಲ್‍ಗಳು ಬಿಜೆಪಿ ಮೊದಲುಗೊಂಡು ಎಲ್ಲಾ ಪಕ್ಷಗಳಲ್ಲಿಯೂ ಇದ್ದಾರೆ. ಮೋದಿ ಷಾ ಅವರನ್ನು ಮೊದಲುಗೊಂಡು ಪಾರ್ಲಿಮೆಂಟ್ ಸದಸ್ಯರೆಲ್ಲ ಸತ್ಯಹರಿಶ್ಚಂದ್ರರು, ದಧೀಚಿಗಳು ಎಂದು ಆರತಿಯವರು ವಿತಂಡವಾದ ಮಾಡುವುದಿಲ್ಲವೆಂದು ನಾನು ಭಾವಿಸುತ್ತೇನೆ.
ರಾಹುಲ್‍ಗಾಂಧಿ, ಪ್ರಿಯಾಂಕ, ಸೋನಿಯಾ ಗಾಂಧಿ ಕುಟುಂಬ ರಾಜಕೀಯ ಮಾಡುತ್ತಿದ್ದರೆ, ಮೋದಿ ದುರ್ಯೋಧನನಂತೆ, ಅಮಿತ್ ಶಾ ಶಕುನಿಯಂತೆ ವರ್ತಿಸುತ್ತಿರುವುದು ಸತ್ಯ. ಈ ಎರಡು ಬಣಗಳಲ್ಲಿ ಯಾವುದನ್ನು ಆರಿಸಿಕೊಳ್ಳುವುದು ಎಂಬ ಪ್ರಶ್ನೆ ಮತದಾರನನ್ನು ಕಾಡಿರಬಹುದು. ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡುವ ಸಂದಿಗ್ಧ ಪರಿಸ್ಥಿತಿ ಮತದಾರನಿಗೆ ಉಂಟಾಯಿತು. ಮತದಾರ ಈ ಎರಡು ಅನಿಷ್ಟಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡ. ಇದರಿಂದಾಗಿ ಮೋದಿಯ ಆಯ್ಕೆಯಾಗಿದೆ. ಅಧಿಕಾರ ದರ್ಪ ಇರುವ ಈ ಇಬ್ಬರಲ್ಲಿ ಒಬ್ಬರನ್ನು ಮತದಾರರು ಆಯ್ಕೆ ಮಾಡಿದ್ದಾರೆ. ಇಷ್ಟಪಟ್ಟು ಮಾಡಿದ್ದಲ್ಲ.

ಸೀತೆಯನ್ನು ಅಪಹರಿಸಿದ್ದನ್ನು ಸಹಿಸದ ಶ್ರೀರಾಮ ರಾವಣನನ್ನು ಯುದ್ಧಮಾಡಿ ಸದೆಬಡಿದ. ಇದು ಸತ್ಯ ಸಂಗತಿ. ಆದರೆ ಈ ವರ್ಷ ನಡೆದ ಪಾರ್ಲಿಮೆಂಟ್ ಚುನಾವಣೆ ರಾಮ-ರಾವಣರ ಯುದ್ಧ ಅಲ್ಲ, ಅನ್ಯಾಯದ ವಿರುದ್ಧ ಅನ್ಯಾಯ ನಡೆಸಿದ ಹೋರಾಟ. ಹಿಂದಿನ ಐದು ವರ್ಷಗಳ ಆಡಳಿತ ಕಾಲದಲ್ಲಿ ಮೋದಿ ಸರ್ಕಾರ ರೈತರಿಗೆ, ಕಾರ್ಮಿಕರಿಗೆ ಪರಿಣಾಮಕಾರಿಯಾದ ಯಾವುದೇ ಸುಧಾರಣೆಯ ಯೋಜನೆ ಸಿದ್ಧಪಡಿಸಲಿಲ್ಲ. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿರ್ಧರಿಸಲಿಲ್ಲ. ಕರ್ನಾಟಕ ಕೈಗೊಂಡ ರೈತರ ಸಾಲಮನ್ನಾ ಸಾಹಸಕ್ಕೆ ಮೋದಿ ಪುಡಿಗಾಸು ನೆರವು ನೀಡಲಿಲ್ಲ. 2 ಸಾರಿ ಭಾರತದ ಎಲ್ಲೆಡೆಯಿಂದ ಬಂದು ದೆಹಲಿ ಮುತ್ತಿಗೆ ಹಾಕಿದ ರೈತರಿಗೆ ಯಾವುದೇ ಬಗೆಯ ನೆರವು ನೀಡಲಿಲ್ಲ. ಕಾರ್ಮಿಕರ ರ್ಯಾಲಿಗಳು ನಡೆದವು, ಅವರ ಬೇಡಿಕೆಗೂ ಮೋದಿ ಸ್ಪಂದಿಸಲಿಲ್ಲ. ನಿರುದ್ಯೋಗ ಸಮಸ್ಯೆ ಉಲ್ಬಣಗೊಂಡಿದ್ದರೂ ಮೋದಿ ಅದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ. ಸರ್ಕಾರಿ ಸಂಸ್ಥೆಯಾದ ‘ಸ್ಯಾಂಪಲ್ ಸರ್ವೆ ಆಫ್ ಇಂಡಿಯಾ’ ನಿರುದ್ಯೋಗ ಸಮಸ್ಯೆ ಮೋದಿಯವರ ಅವಧಿಯಲ್ಲಿ ಉಲ್ಬಣಗೊಂಡಿರುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ನೀಡಿತ್ತಾದರೂ ಅದನ್ನು ಸರ್ಕಾರ ಪ್ರಕಟಿಸಲೂ ಇಲ್ಲ. ಅದನ್ನು ಅಲ್ಲಗಳೆಯಲೂ ಇಲ್ಲ. ಈಗ ಸರ್ಕಾರ ನಿರುದ್ಯೋಗ ಸಮಸ್ಯೆ ವಿಚಾರ ಮಾಡುತ್ತಿರುವುದಾಗಿ ಇತ್ತೀಚಿನ ವರದಿ ತಿಳಿಸಿದೆ.

ಔರಂಗಜೇಬನ ಹಿಂದೂ ವಿರೋಧಿ ಆಚರಣೆಗಳ ಬಗೆಗೆ ಆರತಿಯವರು ಪ್ರಸ್ತಾಪಿಸಿದ್ದಾರೆ. ನಾನೊಬ್ಬ ನಿವೃತ್ತ ಸಂಶೋಧಕರನ್ನು ಜೈಪುರದಲ್ಲಿ ಭೇಟಿಯಾಗಿದ್ದೆ. ಅವರು ಒಂದು ವಿಸ್ಮಯಕರವಾದ ವಿಚಾರ ಕುರಿತು ಪ್ರಸ್ತಾಪಿಸಿದರು. ಜಯಪುರದಲ್ಲಿ ಜ್ಯೋತಿರ್ಲಿಂಗ ಒಂದು ಇದೆ. ಅಲ್ಲಿಗೆ ಔರಂಗಜೇಬ್ ಬಂದಿದ್ದನಂತೆ. ತನ್ನ ಅಧಿಕಾರಿಗಳನ್ನು ಕುರಿತು ಈ ಜ್ಯೋತಿರ್ಲಿಂಗಕ್ಕೆ ನಮ್ಮ ಆಡಳಿತ ಏನು ಸೇವೆ ಸಲ್ಲಿಸಿದೆ ಎಂದು ಪ್ರಶ್ನಿಸಿದನಂತೆ. ಏನೂ ಸಲ್ಲಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದರಂತೆ. ಆಗ ಔರಂಗಜೇಬ್ ‘ಈ ಜ್ಯೋತಿರ್ಲಿಂಗಕ್ಕೆ ಅಖಂಡ ಜ್ಯೋತಿಬೆಳಗುವ ದೃಷ್ಟಿಯಿಂದ ಪ್ರತಿ ತಿಂಗಳೂ ತುಪ್ಪ ಸರಬರಾಜು ಮಾಡಿ’ ಎಂದು ಆಜ್ಞೆ ಮಾಡಿದನಂತೆ. ಈ ವಿಷಯವನ್ನು ಸಂಶೋಧಕರು ಪ್ರಧಾನಿ ಜವಾಹರಲಾಲ್ ನೆಹ್ರು ಜಯಪುರಕ್ಕೆ ಬಂದಾಗ ಪ್ರಸ್ತಾಪಿಸಿದರಂತೆ. ನೆಹ್ರು ಆ ಮಾತನ್ನು ಕೇಳಿ ‘non sense’ ಎಂದು ಹೇಳಿ ಆ ಪಂಡಿತರ ಮೇಲೆ ಹರಿಹಾಯ್ದರಂತೆ. ಆಗ ಆ ಪಂಡಿತರು ನನಗೆ ಸ್ವಲ್ವ ಸಮಯ ಕೊಟ್ಟರೆ ಈ ಘಟನೆಗೆ ಸಂಬಂಧಪಟ್ಟ ಸಾಕ್ಷಾಧಾರಗಳನ್ನು ಒದಗಿಸುತ್ತೇನೆ ಎಂದರಂತೆ. ಪ್ರಧಾನಿಗಳು ನನ್ನ ಕಾರನ್ನೇ ತೆಗೆದುಕೊಂಡು ಹೋಗಿ ಅದನ್ನು ತನ್ನಿ’ ಎಂದರಂತೆ. ಅದಕ್ಕೆ ಸಂಬಂಧಪಟ್ಟ ಸಾಕ್ಷಾಧಾರಗಳನ್ನು ತೆಗೆದುಕೊಂಡು ಬಂದು ಪಂಡಿತ ನೆಹ್ರುರವರಿಗೆ ನೀಡಿದರಂತೆ.

ಔರಂಗಜೇಬನನ್ನು ಹುಚ್ಚ ನವಾಬ ಎಂದು ಚರಿತ್ರೆಕಾರರು ಬಣ್ಣಿಸುತ್ತಾರೆ. ಅವನು ಹಿಂದೂಗಳನ್ನು ಮತಾಂತರ ಮಾಡಿರಲೂಬಹುದು. ಅಂತೆಯೇ ಹಿಂದೂ ದೇವಾಲಯಕ್ಕೆ ಅಖಂಡ ಸೇವೆ ಮಾಡಿರಲೂಬಹುದು. ವಿದ್ವಾಂಸರಾದ ಸೋದರಿ ಆರತಿಯವರ ಗಮನಸೆಳೆಯಲು ಈ ಸಂಗತಿಯನ್ನು ಪ್ರಸ್ತಾಪಿಸುತ್ತಿದ್ದೇನೆ.

ಇಂಗ್ಲಿಷರು ಭಾರತಕ್ಕೆ ಮಾಡಿರುವ ಅನ್ಯಾಯಗಳ ಸರಮಾಲೆಯನ್ನು ಆರತಿ ಅವರು ಬಿಚ್ಚಿಟ್ಟಿದ್ದಾರೆ. ಬ್ರಿಟಿಷರು ನಮ್ಮ ಸಂಸ್ಕೃತಿಯನ್ನು ತೆಗಳಿ ಪಾಶ್ಚಾತ್ಯ ಸಂಸ್ಕøತಿಯನ್ನು ಭಾರತೀಯರ ಮೇಲೆ ಹೇರಲು ಮಾಡಿದ ಹುನ್ನಾರಗಳನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದ್ದಾರೆ. ಈ ಅಧರ್ಮ ಅಳಿಯಬೇಕಲ್ಲವೇ ಎನ್ನುತ್ತಾರೆ ಸೋದರಿ ಆರತಿ. ಅವರ ಸಾತ್ವಿಕ ಕೋಪ ಪ್ರಶಂಸನೀಯ.
ಈಗ ಇದನ್ನೆಲ್ಲ ಬದಲಾವಣೆ ಮಾಡುವ ಕಾಲಬಂದಿದೆ ಎನ್ನುತ್ತಾರೆ ಆರತಿ. ಅದು ಮೋದಿಯವರ ಮೊದಲ ಆದ್ಯತೆ ಎಂದು ಅವರು ತಿಳಿದಿದ್ದರೆ ಆರತಿಯವರಿಗೆ ಹೇಳಬೇಕಾಗುತ್ತದೆ ‘ಅದು ಮೋದಿಯವರ ಆದ್ಯತೆಯಲ್ಲ, ಮತದಾರರು ಅವರನ್ನು ಗೆಲ್ಲಿಸಿರುವುದರಿಂದ ಮೋದಿಗೆ ಪ್ರಜಾಪ್ರಭುತ್ವ’ದ ನೆನಪಾಗಿದೆ. ಅವರ ಆದ್ಯತೆ ಇಡೀ ಭಾರತವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವುದು. ಆ ಮೂಲಕ ಪ್ರಜಾಪ್ರಭುತ್ವದ ಹೆಸರು ಹೇಳಿಕೊಂಡು ಸರ್ವಾಧಿಕಾರ ನಡೆದುವುದು ಎಂದು ನಾನಾದರೂ ಭಾವಿಸಿದ್ದೇನೆ.

ಇದಕ್ಕೆ ಉದಾಹರಣೆಯೆಂದರೆ ಪೊಲೀಸರ ಬದಲಾಗಿ ಗೋರಕ್ಷಕರನ್ನು ಛೂಬಿಟ್ಟು ಗುಂಪುಥಳಿತ ಮಾಡಿಸುವುದು, ಗುಜರಾತಿನಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಆರಂಭಿಸಿದ ಮುಸ್ಲಿಮರ ಸಾಲ್ಗೊಲೆಯನ್ನು ಮುಂದುವರೆಸುವುದು, ಹಿಂದೂತ್ವ ಪ್ರತಿಪಾದಕರ ವಿರುದ್ಧ ಟೀಕೆಮಾಡುವವರನ್ನು ಕೊಲೆಗೈಯುವುದು, ಸೆರೆಮನೆಗೆ ಅಟ್ಟುವುದು, ಕಾರ್ಪೊರೇಟ್ ಕಂಪನಿಗಳು ಎಷ್ಟೇ ತಪ್ಪುಮಾಡಿದರೂ ಅವರಿಗೆ ರಕ್ಷಣೆ ನೀಡುವುದು, ಅವರು ಮಾಡಿದ ಕೋಟಿ ಕೋಟಿ ಸಾಲಗಳನ್ನು ಮನ್ನಾ ಮಾಡುವುದು. ಮೋದಿ ಮಾಡಿದ ಈ ಉಪಕಾರಕ್ಕೆ ಪ್ರತಿಯಾಗಿ ಈ ಸಮಯಸಾಧಕ ಕಾರ್ಪೊರೇಟ್‍ಗಳು ಇವರ ಚುನಾವಣೆ ಖರ್ಚಿಗೆ ಕೋಟ್ಯಾಂತರ ರೂಗಳನ್ನು ನೀಡುವುದು ಅವಿಶ್ರಾಂತವಾಗಿ ನಡೆದಿದೆ.
ಮೋದಿಯವರು ಅವತಾರ ಪುರುಷರಾಗಿ ಕಲಿಯುಗದಲ್ಲಿ ಜನಿಸಿದ್ದಾರೆ ಎಂದು ಆರತಿಯವರು ಭಾವಿಸುವಂತಿದೆ. ಆದರೆ ಈ ಪರಮಾತ್ಮ ಈ ಸಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿದ್ದು, ಹಲವು ನಿಯಮಾವಳಿಗಳನ್ನು ಗಾಳಿಗೆ ತೂರಿದ್ದು ನಿಚ್ಚಳವಾಗಿದೆ. ಎಲ್ಲಾ ವಿರೋಧ ಪಕ್ಷಗಳ ನಾಯಕರನ್ನೂ ಮುಗಿಸಲು ಮತ ಎಣಿಕೆ ಯಂತ್ರಗಳನ್ನೇ ತನ್ನ ಅನುಕೂಲಕ್ಕೆ ತಕ್ಕಂತೆ ತಿರುಚಿದ್ದಾರೆಂಬ ಆರೋಪಗಳೂ ಇವೆ. ಅವತಾರ ಪುರುಷರು ಇಂತಹ ಹೇಯಕೃತ್ಯ ಮಾಡಲು ಎಲ್ಲಾದರೂ ಯತ್ನಿಸುತ್ತಾರೆಯೇ ಎಂದು ಸೋದರಿ ಆರತಿಯವರೇ ಹೇಳಬೇಕು.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

1 COMMENT

  1. 65years ruled Congress not for India’s independence fighter it was for family ruling to India .India get Hindernce in world .Now the time came get fame and name in .World following Yoga. Hindutua when to our country now IT I S HINDUSTAN.now we country men get proud of it . freedom fighting Congress community went away when Neharu become Prime minister instead of SARADAR VALLAB BAI PATEL.now it and think.

LEAVE A REPLY

Please enter your comment!
Please enter your name here