ರಾಜಾ ಢಾಲೆ: ಮಣ್ಣಿಗೆ ಉರಳಿದ ದಲಿತ ಖಡ್ಗ

ವೈಚಾರಿಕ ಶಿಸ್ತು, ಸೂಕ್ಷ್ಮ ನಾಟಕೀಯತೆ, ಅಸಾಧಾರಣ ಕಲ್ಪನಾಶಕ್ತಿ, ತೀಕ್ಷ್ಣ ವಿಮರ್ಶಾ ಸಾಮರ್ಥ್ಯ ಹಾಗೂ ಕಠೋರ ತರ್ಕಗಳು ರಾಜಾ ಢಾಲೆಯವರ ಬರೆಹ ಮತ್ತು ಮಾತುಗಾರಿಕೆಯ ಶಕ್ತಿಯಾಗಿದ್ದವು. ವೈದಿಕ ವಲಯದಲ್ಲಿ ಸೃಷ್ಟಿಯಾದ ಸಾಹಿತ್ಯ ವಿಜೃಂಭಿಸಿದ್ದಾಗ ದಲಿತ ಸಾಹಿತ್ಯದ ಪರವಾಗಿ ಗುರಾಣಿ ಹಿಡಿದಿದ್ದವರು ಢಾಲೆ. ಅವರು ಖಡ್ಗ ಹಿರಿದು ದಲಿತ ಸಾಹಿತ್ಯದ ಸ್ರೋತದ ಬದಿಗೆ ನಿಲ್ಲದೆಹೋಗಿದ್ದರೆ ದಲಿತ ಸಾಹಿತ್ಯ ನಿಶ್ಚಿತವಾಗಿಯೂ ಭ್ರೂಣಹತ್ಯೆಗೆ ಗುರಿಯಾಗುತ್ತಿತ್ತು ಎನ್ನಲಾಗಿದೆ.

ಬರೆಹಗಾರ, ಹೋರಾಟಗಾರ, ದಲಿತ್ ಪ್ಯಾಂಥರ್ ಸಹ ಸಂಸ್ಥಾಪಕ ರಾಜಾ ಢಾಲೆ ಇದೇ ಜುಲೈ 16ರಂದು ಮುಂಬಯಿಯಲ್ಲಿ ನಿಧನ ಹೊಂದಿದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಅಂದಹಾಗೆ ಢಾಲೆ ಎಂಬುದರ ಅರ್ಥ ಗುರಾಣಿ. ದಲಿತ ಜನಸಮುದಾಯಗಳ ಪಾಲಿನ ಗುರಾಣಿಯಾಗಿದ್ದ ಅವರು, ಬ್ರಾಹ್ಮಣವಾದದ ವಿರುದ್ಧ ಝಳಪಿಸುವ ಖಡ್ಗವಾಗಿ ಬದುಕಿದರು.

ಭಾರತೀಯ ದಲಿತ ಹೋರಾಟಗಳ ಮಹತ್ವದ ಮೈಲಿಗಲ್ಲು ಎನಿಸಿದ `ದಲಿತ್ ಪ್ಯಾಂಥರ್’ (ದಲಿತ ಚಿರತೆ) ಸಂಘಟನೆಯನ್ನು 1972ರಲ್ಲಿ ಹುಟ್ಟು ಹಾಕಿದ ಕೆಲವೇ ಮುಖ್ಯರಲ್ಲೊಬ್ಬರು ಢಾಲೆ. ಅಮೆರಿಕೆಯ ಆಫ್ರಿಕನ್ ಕಪ್ಪು ಜನ ಕಟ್ಟಿಕೊಂಡಿದ್ದ `ಬ್ಲ್ಯಾಕ್ ಪ್ಯಾಂಥರ್ಸ್’ನಿಂದ (ಕಪ್ಪು ಚಿರತೆಗಳು) ಸ್ಫೂರ್ತಿ ಪಡೆದದ್ದು ದಲಿತ್ ಪ್ಯಾಂಥರ್. ದಲಿತದನಿಯನ್ನು ಹೆಚ್ಚು ಚೂಪಾಗಿ ಮತ್ತು ಆಕ್ರಮಣಕಾರಿಯಾಗಿ ಎತ್ತುವುದು ಹೊಸ ಸಂಘಟನೆಯ ಗುರಿಯಾಗಿತ್ತು.

ಬ್ರಿಟಿಷರಿಂದ ಭಾರತ ಬಿಡುಗಡೆಯಾಗಿ 25 ವರ್ಷಗಳು ತುಂಬಲಿದ್ದ 1972ರ ಆಗಸ್ಟ್ 15ರ ಸಂಚಿಕೆಯಲ್ಲಿ, ಪುಣೆಯ `ಸಾಧನಾ’ ಎಂಬ ಸಮಾಜವಾದಿ ನಿಯತಕಾಲಿಕವು ರಾಜಾ ಢಾಲೆಯವರ `ಕರಾಳ ಸ್ವಾತಂತ್ರ್ಯ ದಿನ’ ಎಂಬ ಸುಡುಕೆಂಡದಂತಹ ಮೂರು ಪುಟಗಳ ಪ್ರಬಂಧವನ್ನು ಪ್ರಕಟಿಸಿತು. ಬೆಂಕಿಯುಗುಳುವ ಜಾತಿವಿರೋಧಿ ಹೋರಾಟಗಾರ, ಕವಿ, ವ್ಯಂಗ್ಯಚಿತ್ರಕಾರ ಢಾಲೆ ವಯಸ್ಸು ಆಗ 32 ವರ್ಷ. ಮುಂಬಯಿಯ ದಲಿತ ಯುವ ಜಗತ್ತಿನಲ್ಲಿ ಪ್ರಚಂಡ ಸುಂಟರ ಗಾಳಿಯನ್ನೇ ಎಬ್ಬಿಸಿತ್ತು ಅವರ ಮಾತು ಮತ್ತು ಬರೆಹ.

ಪ್ರಬಂಧದಲ್ಲಿ ಅವರು ಬರೆದದ್ದು- ಬ್ರಹ್ಮಗಾಂವ್ ಎಂಬ ಬ್ರಾಹ್ಮಣ ಹಳ್ಳಿಯಲ್ಲಿ ಬೆತ್ತಲು ಮಾಡಿದ್ದು ಬೌದ್ಧ ಹೆಣ್ಣುಮಗಳನ್ನೇ ವಿನಃ ಬ್ರಾಹ್ಮಣ ಹೆಣ್ಣುಮಗಳನ್ನಲ್ಲ. ಬ್ರಾಹ್ಮಣರ ಹೊಲಗಳನ್ನು ಹಾದುಹೋದ ಕಾರಣಕ್ಕಾಗಿ ಆಕೆಯ ಮೇಲೆ ಈ ದೌರ್ಜನ್ಯಕ್ಕೆ ಗುರಿ ಮಾಡಲಾಗಿತ್ತು ಮತ್ತು ಇಂತಹ ಕೃತ್ಯಕ್ಕೆ ನೀಡಲಾದ ಶಿಕ್ಷೆಯಾದರೂ ಏನು? ಒಂದು ತಿಂಗಳ ಜೈಲುವಾಸ ಮತ್ತು 50 ರುಪಾಯಿ ದಂಡ. ರಾಷ್ಟ್ರೀಯ ಧ್ವಜವನ್ನು ಗೌರವಿಸಲು ಎದ್ದು ನಿಲ್ಲದವನಿಗೆ ವಿಧಿಸಲಾಗುವ ದಂಡ 300 ರುಪಾಯಿ. ರಾಷ್ಟ್ರೀಯ ಧ್ವಜವು ಕೇವಲ ಒಂದು ತುಂಡು ಅರಿವೆ, ನಿರ್ದಿಷ್ಟ ಬಣ್ಣಗಳ ಒಂದು ಚಿಹ್ನೆ, ಆದರೂ ಅದರ ಅನಾದರಕ್ಕೆ ಭಾರೀ ದಂಡ ವಿಧಿಸಲಾಗುತ್ತದೆ. ಆದರೆ ರಕ್ತ ಮಾಂಸಗಳ ಒಬ್ಬ ಹೆಣ್ಣುಮಗಳನ್ನು ಬೆತ್ತಲು ಮಾಡುವ ಹೀನ ನಡೆಗೆ ವಿಧಿಸುವ ದಂಡ ಕೇವಲ 50 ರೂಪಾಯಿ. ಅಂತಹ ರಾಷ್ಟ್ರಧ್ವಜದ ಪ್ರಯೋಜನವಾದರೂ ಏನು? ಅದನ್ನು………ಗೆ ಸಿಕ್ಕಿಸಿಕೊಳ್ಳಬೇಕು ಅಷ್ಟೇ. ರಾಷ್ಟ್ರವೊಂದು ಅಸ್ತಿತ್ವಕ್ಕೆ ಬರುವುದು ತನ್ನ ಜನಗಳಿಂದ. ಜನರಿಗೆ ತೋರುವ ಅಗೌರವ ಹೆಚ್ಚು ದುಃಖ ನೀಡುವುದೇ ಅಥವಾ ಚಿಹ್ನೆಗೆ ಅನಾದರ ತೋರುವುದು ಹೆಚ್ಚು ದುಃಖಕರವೇ? ನಮ್ಮ ಘನತೆಯ ಬೆಲೆಯು ಕೇವಲ ಒಂದು ಸೀರೆಯ ಬೆಲೆಗೆ ಸಮವಾಗಿ ಬಿಟ್ಟಿದೆ…ಹೀಗಾಗಿ ಬೆತ್ತಲು ಮಾಡುವ ದುಷ್ಟ ನಡೆಯನ್ನು ತೀವ್ರವಾಗಿ ಶಿಕ್ಷಿಸುವುದು ಅತ್ಯಗತ್ಯ. ಇಲ್ಲವಾದರೆ ದೇಶಪ್ರೇಮ ಬದುಕಿ ಬಾಳುವುದಾದರೂ ಹೇಗೆ?

ಪ್ರಬಂಧ ಪ್ರಕಟಣೆಯ ನಂತರ ಗೋರೆಗಾಂವ್‍ನ ಪಾಟ್ಕರ್ ಕಾಲೇಜಿನ ಡಾ.ಅಂಬೇಡ್ಕರ್ ವಿಚಾರ ದರ್ಶನ ಸಂಘವು ಪ್ರಬಂಧ ಕುರಿತು ವಿಚಾರಸಂಕಿರಣವೊಂದನ್ನು ಏರ್ಪಡಿಸಿತು. ಜನಸಂಘದ ಶಾಸಕ ಪ್ರೊ.ಜಿ.ಬಿ.ಕಾನಿಟ್ಕರ್, ಸಮಾಜವಾದಿ ಶಾಸಕಿ ಮೃಣಾಲ್ ಗೋರೆ, ಯುವಕ್ರಾಂತಿದಳದ ಪ್ರೊ.ಗೋಪಾಲ ದುಖಂಡೆ ಬೌದ್ಧ ಲೇಖಕ ಶರದ್ ಮಹತೇಕರ್ ಹಾಗೂ ರಾಜಾ ಢಾಲೆಯವರನ್ನು ಆಹ್ವಾನಿಸಲಾಗಿತ್ತು. ದಲಿತ ಲೇಖಕ ಪ್ರೊ.ಕೇಶವ ಮೇಶ್ರಾಂ ಅಧ್ಯಕ್ಷತೆ ವಹಿಸಿದ್ದರು. ದಲಿತರ ದುಸ್ಥಿತಿಯತ್ತ ಗಮನ ಸೆಳೆವುದು ಢಾಲೆಯವರ ಉದ್ದೇಶವಾಗಿತ್ತೇ ವಿನಃ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವುದಲ್ಲ ಎನ್ನುತ್ತಾರೆ ಮೃಣಾಲ್ ಗೋರೆ. ಡಾ.ಅಂಬೇಡ್ಕರ್ ಅವರು ಸೇರಿಸಿದ್ದ ಅಶೋಕ ಚಕ್ರವಿದೆ ಎಂಬ ಕಾರಣಕ್ಕಾಗಿ ರಾಷ್ಟ್ರಧ್ವಜವನ್ನು ಕಾಲಲ್ಲಿ ತುಳಿಯಬೇಕೆಂದು ಮಹಾತ್ಮಾಗಾಂಧೀ ಕುರಿತ ಪುಸ್ತಕವೊಂದರಲ್ಲಿ ಹೇಳಿರುವ ಆನಂದ್ ಹರ್ಡೀಕರ್ ಅವರ ಮೇಲೆ ಯಾಕೆ ಕ್ರಮ ಜರುಗಿಸಿಲ್ಲ ಎಂದು ಶರದ್ ಮಹತೇಕರ್ ಪ್ರಶ್ನಿಸುತ್ತಾರೆ. ಜಿ.ಬಿ.ಕಾನಿಟ್ಕರ್ ಬಳಿ ಈ ಪ್ರಶ್ನೆಗೆ ಉತ್ತರ ಇರುವುದಿಲ್ಲ. ಢಾಲೆ ಪರವಾಗಿ ಮಾಡಲಾದ ವಾದಗಳಿಗೆ ಪ್ರತಿವಾದವೂ ಇರುವುದಿಲ್ಲ. ಎಂದಿನಂತೆ ಢಾಲೆ ಆಕ್ರಮಣಕಾರಿಯಾಗಿ ಮಾತಾಡುತ್ತಾರೆ. ದಲಿತರ ಇಂದಿನ ದುಸ್ಥಿತಿಗೆ ಹಿಂದೂ ಪವಿತ್ರ ಗ್ರಂಥಗಳೇ ಕಾರಣವೆಂದೂ ಅವುಗಳನ್ನು ಸಾರ್ವಜನಿಕವಾಗಿ ಸುಡಬೇಕೆಂದೂ ಹೇಳುತ್ತಾರೆ.

ಪ್ರಚೋದನಕಾರಿಯಾಗಿದ್ದ ಅವರ ಪ್ರಬಂಧ ಪ್ಯಾಂಥರ್ ರಾಜಕಾರಣದ ಸೋಪಾನವಾಗಿತ್ತು. ಪ್ರಸಿದ್ಧ ಮರಾಠಿ ಸಾಹಿತಿ ಮತ್ತು ಮರಾಠೀ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿದ್ದ ದುರ್ಗಾ ಭಾಗವತ್ ಅವರ ಮೇಲೆ ಕಟುಮಾತುಗಳ ದಾಳಿ ನಡೆಸಿದ್ದರು. ಸಾಮಾಜಿಕ ಸಮತೋಲನ ಕಾಪಾಡಲು ವೇಶ್ಯೆಯರು ಕೊಡುಗೆ ನೀಡುತ್ತಾರಾದ ಕಾರಣ ಅವರು ತಮ್ಮ ಕಸುಬನ್ನು ಮುಂದುವರೆಸುವುದು ಸೂಕ್ತ ಎಂದು ವಾದಿಸಿದ್ದರು ದುರ್ಗಾ. “ಸಮತೋಲನ ಕಾಪಾಡಿಕೊಳ್ಳುವ ಈ ಕೆಲಸವನ್ನು ನೀವು ಅಥವಾ ನಿಮ್ಮ ಸಮುದಾಯದ ಜನರೇ ಯಾಕೆ ಮುಂದಾಗಿ ಮಾಡಬಾರದು” ಎಂದು ಪ್ರಶ್ನಿಸಿದ್ದರು. ಅಂದಿನ ಮರಾಠೀ ಸಮಾಜದಲ್ಲಿ ಢಾಲೆ ಮಾತುಗಳು ಭೂಕಂಪ ಹುಟ್ಟಿಸಿದ್ದವು.

ಅವು ಎಪ್ಪತ್ತರ ದಶಕದ ಆರಂಭದ ದಿನಗಳು. ಪ್ಯಾಂಥರ್ ಆಂದೋಲನವು ಪ್ರತಿರೋಧದ ಬೀಜಗಳನ್ನು ಬಿತ್ತುವ ಹೊತ್ತಿಗಾಗಲೆ ಮುಂಬಯಿಯ ವಿದ್ಯಾರ್ಥಿ ರಾಜಕಾರಣದಲ್ಲಿ ಢಾಲೆ ಚಿರಪರಿಚಿತ ಹೆಸರು. ಪ್ಯಾಂಥರ್ ಆಂದೋಲನ ಮಹಾರಾಷ್ಟ್ರದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೋಳೇರಿಸಿತ್ತು. ಆದರೆ ಅಂದು ರಸ್ತೆಗೆ ಇಳಿದಿದ್ದ ದಲಿತರು ವಿರೋಧಿಸಿದ್ದು ಶಿವಸೇನೆಯ ಪುಂಡಾಟಿಕೆಯನ್ನು. ಕರಾಳ ಸ್ವಾತಂತ್ರ್ಯ ದಿನ ಪ್ರಬಂಧವನ್ನು ಬರೆದಿದ್ದ ಢಾಲೆಯವರ ಹಿಂದೆ ಬಿದ್ದಿದ್ದರು ಶಿವಸೇನೆಯ ಗೂಂಡಾಗಳು ಎನ್ನುತ್ತಾರೆ ಪ್ಯಾಂಥರ್ ಆಂದೋಲನದ ಸಹಸಂಸ್ಥಾಪಕ ಮತ್ತು ಢಾಲೆಯವರ ಸಹಪಥಿಕ ಜೆ.ವಿ.ಪವಾರ್.

ಸ್ವತಂತ್ರ ಆಲೋಚನೆಯ ಚಿಂತಕರಾಗಿದ್ದ ಢಾಲೆ ತಮಗನಿಸಿದ್ದನ್ನು ಹೇಳಲು ಎಂದೂ ಹಿಂಜರಿದವರಲ್ಲ. ತಮ್ಮ ಪ್ರಬಂಧದಲ್ಲಿ ಮುಂಬಯಿಯ ಬ್ರಾಹ್ಮಣ ಬರೆಹಗಾರರು ಮತ್ತು ರಾಜಕೀಯ ಚಿಂತಕರಿಗೆ ಬಹಿರಂಗ ಸವಾಲೆಸೆದಿದ್ದರು. ರಾಷ್ಟ್ರೀಯತೆ ಮತ್ತು ಸ್ವಾತಂತ್ರ್ಯ ಕುರಿತ ಅವರ ಪರಿಕಲ್ಪನೆಯನ್ನು ಮತ್ತು ಅವರ ವಿಚಾರಹೀನ ವೈದಿಕ ವರ್ಗವಿಭಜನೆಗಳ ಕುರಿತು ಕಾಲು ಕೆರೆದು ಕದನಕ್ಕೆ ಕರೆಯುತ್ತಿದ್ದರು.

ಪ್ಯಾಂಥರ್ ಚಳವಳಿ ಬಹುಬೇಗನೆ ಏಳಿಗೆ ಕಂಡಿತು. ದಲಿತರನ್ನೂ ಬಹುಜನರನ್ನೂ ಒಂದೇ ಸೂರಿನಡಿ ಬೆಸೆಯಿತು, ದಶಕದೊಳಗಾಗಿ ಛಿದ್ರಗೊಂಡಿತು ಕೂಡ. 1972-74ರ ಮೊದಲ ಹಂತದಲ್ಲಿ ಜರುಗಿದ ಪ್ರಬಲ ಪ್ಯಾಂಥರ್ ಆಂದೋಲನಗಳು ಅನೇಕ. ಢಾಲೆ, ನಾಮದೇವ ಧಸಾಳ್, ಜೆ.ವಿ.ಪವಾರ್, ಅರುಣ್ ಕಾಂಬಳೆ, ಅರ್ಜುನ್ ಢಾಂಗ್ಲೆ ಮುಂತಾದ ನಾಯಕರು ಹೆಚ್ಚು ಕಡಿಮೆ ದಿನನಿತ್ಯ ಬೀದಿಗಿಳಿಯುತ್ತಿದ್ದರು. ದಿನಗಳೆದಂತೆ ಪ್ಯಾಂಥರ್ ಆಂದೋಲನ ಬದಲಾದ ಬಗೆ ಢಾಲೆಯವರ ಕಟುಟೀಕೆಗೆ ಗುರಿಯಾಯಿತು.

ಢಾಲೆ ಒಬ್ಬ ನಿರಂತರ ಬಂಡುಕೋರ. ಮಹಾರಾಷ್ಟ್ರದಲ್ಲಿ ಪುಟ್ಟ ನಿಯತಕಾಲಿಕಗಳ ಆಂದೋಲನದಲ್ಲಿ (Little Magazine Movement) ಬಿಡದೆ ತೊಡಗಿಸಿಕೊಂಡಿದ್ದವರು. 60 ಮತ್ತು 70ರ ದಶಕಗಳ ಹಲವಾರು ನಿಯತಕಾಲಿಕಗಳ ಸಂಪಾದಕರಾಗಿದ್ದವರು. ಬ್ರಾಹ್ಮಣ- ಸವರ್ಣಗಳು ನಿರ್ಲಕ್ಷಿಸಿ ಅಂಚಿಗೆ ನೂಕಿದ್ದ ಜನವರ್ಗಗಳ ಜೊತೆ ಸಂವಾದಿಸುತ್ತಿದ್ದ ಈ ನಿಯತಕಾಲಿಕಗಳಿಗೆ ಇಡುತ್ತಿದ್ದ ಹೆಸರುಗಳೇ ವಿಚಿತ್ರವಾಗಿರುತ್ತಿದ್ದವು. ದಿನನಿತ್ಯದ ಮಾಮೂಲು ಸಂಭಾಷಣೆಯಲ್ಲಿ ಬರುತ್ತಿದ್ದ ಪದಗಳನ್ನೇ ನಿಯತಕಾಲಿಕಗಳ ಹೆಸರಾಗಿ ಇಡುತ್ತಿದ್ದರು. ಯೇರು, ಆಟಾ, ತಪಸಿ, ವಿದ್ರೋಹ ಇತ್ಯಾದಿ. ಪ್ರತಿಯೊಂದು ರೂಢಿಗತ ಪರಿಕಲ್ಪನೆಯನ್ನೂ ಅವರು ಬುಡಮೇಲು ಮಾಡುತ್ತಿದ್ದರು. ಮರಾಠಿಯ ವಾರ ಎಂಬ ಪದದ ಅರ್ಥ ಗಾಳಿ ಎಂದು. ಅದನ್ನು ಅವರು ರಾವ ಎಂದು ತಿರುಗಿಸಿ ಚಿಮ್ಮಿಸುತ್ತಿದ್ದರು.

ದಲಿತ ಪ್ಯಾಂಥರ್‍ನ ಪ್ರಣಾಳಿಕೆ ರಚನೆಯಾದಾಗ ಅದನ್ನು ತೀವ್ರವಾಗಿ ವಿರೋಧಿಸಿದ್ದರು. ಜಾಹೀರುನಾಮವೋ ಅಥವಾ ನಾಮಜಾಹೀರೋ (ನಾಮದೇವ ಧಸಾಳ್) ಎಂದು ಪ್ರಶ್ನಿಸಿದ್ದರು. ನಾಮ್ಯಾಚ ಜಾಹೀರನಾಮಾ ಎಂದು ಜರೆದರು. ಮೂಲ ಪ್ಯಾಂಥರ್ ತತ್ವದಿಂದ ದೂರ ಸರಿದು ತೆಳುಗೊಳಿಸಿದ ಬ್ರಾಹ್ಮಣ ಪ್ರಣಾಳಿಕೆ ಎಂದು ಜರೆದು ದಾಳಿ ಮಾಡಿದ್ದರು. ಪ್ಯಾಂಥರ್ ಸಂಘಟನೆಯಲ್ಲಿ ಮಾರ್ಕ್ಸ್ ವಾದಿ ಸಿದ್ಧಾಂತಗಳನ್ನು ತೂರಿಸುವುದಕ್ಕೆ ವಿರೋಧವಿದ್ದರು. ಧಸಾಳ್ ಈ ಕೆಲಸ ಮಾಡಿದ್ದರೆಂದೇ ಕುದಿದುಹೋಗಿದ್ದರು. ಈ ಕಾರಣಕ್ಕಾಗಿಯೇ ಪ್ಯಾಂಥರ್ಸ್ ಒಡೆದು ಹೋಳಾಯಿತು. ಧಸಾಳ್ ಬಣ ಮತ್ತು ಢಾಲೆ ಬಣಗಳಾದ ವು. ಇದು ಕೇವಲ ಸೈದ್ಧಾಂತಿಕ ಒಡಕು ಅಷ್ಟೇ ಎಂದಿದ್ದಾರೆ ಧಸಾಳ್ ಬಣಕ್ಕೆ ಸೇರಿದ ಸುನಿಲ್ ದಿಘೆ. ಬಾಂಬೆ ಹೈಕೋರ್ಟ್ ನ್ಯಾಯವಾದಿಯಾಗಿದ್ದ ದಿಘೆ, ಢಾಲೆ ವಿರೋಧಿಸಿದ್ದ ಪ್ರಣಾಳಿಕೆಯ ಸಹ ಲೇಖಕರು. ರಾಜಕೀಯ ಭಿನ್ನಾಭಿಪ್ರಾಯಗಳಿದ್ದಾಗ್ಯೂ ಸಂಬಂಧಗಳು ಕೆಟ್ಟಿರಲಿಲ್ಲ. ಎರಡೂ ಬಣಗಳು ಹಲವಾರು ಬಾರಿ ಒಂದೇ ವೇದಿಕೆಯ ಮೇಲೆ ಕಾಣಿಸಿಕೊಂಡದ್ದಿದೆ ಎಂದಿದ್ದರು.

ಇಂದಿರಾ ಹೇರಿದ್ದ ತುರ್ತುಪರಿಸ್ಥಿತಿಯನ್ನು ಧಸಾಳ್ ಸಮರ್ಥಿಸಿದರಾದರೆ, ಢಾಲೆ ಮತ್ತು ಜೆ.ವಿ.ಪವಾರ್ ವಿರೋಧಿಸಿದ್ದರು. ಇಂದಿರಾ ತಳವರ್ಗಗಳನ್ನು ತುಳಿಯಲಿಲ್ಲವಾದರೂ ದೇಶದ ಜನತಾಂತ್ರಿಕ ತತ್ವಗಳನ್ನು ಮಣ್ಣುಗೂಡಿಸಿದ್ದು ಸರಿಯಲ್ಲ ಎಂಬುದು ಅವರ ನಿಲುವಾಗಿತ್ತು. ಮೇಲ್ವರ್ಗಗಳ ದನಿಯೇ ರಾಜ್ಯವಾಳಿದ್ದ ಸಂದರ್ಭದಲ್ಲಿ ಬಹುಜನರು, ಆದಿವಾಸಿಗಳು ಹಾಗೂ ಗ್ರಾಮೀಣರ ದನಿಗಳಿಗೆ ಉಸಿರು ತುಂಬಿದವರು ಢಾಲೆ ಮತ್ತು ಅವರ ಸಂಗಾತಿಗಳು. ಈ ಕ್ರಿಯೆಯೇ ದಲಿತ್ ಪ್ಯಾಂಥರ್ಸ್ ಹುಟ್ಟಿಗೆ ದಾರಿ ತೆರೆದಿತ್ತು.

ಬೌದ್ಧ ಮತ ಮತ್ತು ಅಂಬೇಡ್ಕರ್ ವಾದಗಳು ಮಾತ್ರವೇ ದಲಿತರನ್ನು ಮುಂದಕ್ಕೆ ಒಯ್ಯಬಲ್ಲವು ಎಂದು ಬಲವಾಗಿ ನಂಬಿದ್ದರು ಢಾಲೆ. ಹೀಗಾಗಿ ಪ್ಯಾಂಥರ್ ಆಂದೋಲನದ ನಂತರ ಮಾಸ್ ಮೂವ್ಮೆಂಟ್ (Mass Movement) ಎಂಬ ಮತ್ತೊಂದು ಸಂಘಟನೆ ಸ್ಥಾಪಿಸಿ ಸಕ್ರಿಯರಾದರು. ದಲಿತ್ ಪ್ಯಾಂಥರ್ ನ್ನು ಸ್ಥಾಪಿಸಿದ್ದ ವ್ಯಕ್ತಿ, ಕಾಲಾನುಕ್ರಮದ ಪಯಣದಲ್ಲಿ ದಲಿತ ಎಂಬ ಪದವನ್ನೇ ತಿರಸ್ಕರಿಸಿದರು. ದಲಿತನೆಂಬುದು ನನ್ನ ಅಸ್ಮಿತೆ ಅಲ್ಲ. ನಾನು ಗುಲಾಮನಲ್ಲ. ಮಾನಸಿಕವಾಗಿ ಗುಲಾಮರಾದವರು ಎಂದೆಂದಿಗೂ ಬಿಡುಗಡೆ ಪಡೆಯಲಾರರು. ಅವರು ಹುಟ್ಟಾ ಗುಲಾಮರು. ಆದರೆ ಯಾರ ಮೇಲೆ ಗುಲಾಮಗಿರಿಯನ್ನು ಹೇರಲಾಗಿದೆಯೋ ಅವರನ್ನು ವಿಮೋಚನೆಗೊಳಿಸುವತನಕ ವಿರಮಿಸಲಾರೆ ಎಂದು ಸಾರಿದರು.

90ರ ದಶಕದಲ್ಲಿ ಪ್ರಕಾಶ್ ಅಂಬೇಡ್ಕರ್ ಸ್ಥಾಪಿಸಿದ ಭಾರಿಪ ಬಹುಜನ ಮಹಾಸಂಘವನ್ನು ಸೇರಿ 1999 ಮತ್ತು 2004ರ ಲೋಕಸಭಾ ಚುನಾವಣೆಗಳಿಗೆ ಸ್ಪರ್ಧಿಸಿದರು. ಭಿನ್ನಾಭಿಪ್ರಾಯದ ನಂತರ ಆ ಸಂಘಟನೆಯನ್ನೂ ತೊರೆದರು.

ದಲಿತ ಆಂದೋಲನಗಳಲ್ಲಿ ಒಗ್ಗಟ್ಟಿಲ್ಲ ಎಂಬುದು ಅವರ ಬಹುದೊಡ್ಡ ಕೊರಗಾಗಿತ್ತು. ಮರಾಠರು ಬಹುತೇಕ ಮಹಾರಾಷ್ಟ್ರಕ್ಕೆ ಸೀಮಿತರು. ಆದರೂ ತಾವು ಬಲಿಷ್ಠರೆಂಬುದನ್ನು ನಿತ್ಯ ಬದುಕಿನಲ್ಲಿ ಅನುಭವಿಸಿ ಜೀವಿಸುತ್ತಾರೆ. ಆದರೆ ಅಸ್ಪೃಶ್ಯರು ದೇಶಾದ್ಯಂತ ಕೋಟಿ ಕೋಟಿ ಸಂಖ್ಯೆಯಲ್ಲಿ ಹಬ್ಬಿದ್ದಾರೆ. ನಾವೆಲ್ಲ ಒಟ್ಟಿಗೆ ಹೋರಾಡಿದರೆ ಏನಾದೀತು ಎಂಬುದನ್ನು ಕಲ್ಪಿಸಿಕೊಳ್ಳಬೇಕು ಎಂದಿದ್ದರು.

1973ರಲ್ಲಿ ಮಹಾರಾಷ್ಟ್ರದ ಬ್ರಹ್ಮಗಾಂವ್ ಎಂಬ ಹಳ್ಳಿಯಲ್ಲಿ ದಲಿತ ಮಹಿಳೆಯೊಬ್ಬಳನ್ನು ಬೆತ್ತಲಾಗಿಸಿ ಮೆರವಣಿಗೆ ಮಾಡಲಾಯಿತು. ದಲಿತ ನಾಯಕರು ಆ ಹಳ್ಳಿಗೆ ಭೇಟಿ ನೀಡಿದರು. ಆದರೆ ಈ ಘಟನೆಯ ಹಿಂದಿದ್ದವರನ್ನು ಹಿಡಿದು ತಂದು ಸಾರ್ವಜನಿಕವಾಗಿ ನೇಣು ಹಾಕುವುದಾಗಿ ಗುಡುಗಿದ್ದರು ಢಾಲೆ.

ಬಾಬಾಸಾಹೇಬರ ನಿಧನದ ನಂತರ ಅಂಬೇಡ್ಕರ್‍ವಾದಿ ಆಂದೋಲನದ ಬಂಗಾರದ ದಿನಗಳು ದಲಿತ ಪ್ಯಾಂಥರ್ ಆಂದೋಲನದ ದಿನಗಳಾಗಿದ್ದವು ಎಂದು ಪವಾರ್ ಸ್ಮರಿಸಿದ್ದಾರೆ.

ವೈಚಾರಿಕ ಶಿಸ್ತು, ಸೂಕ್ಷ್ಮ ನಾಟಕೀಯತೆ, ಅಸಾಧಾರಣ ಕಲ್ಪನಾಶಕ್ತಿ, ತೀಕ್ಷ್ಣ ವಿಮರ್ಶಾ ಸಾಮರ್ಥ್ಯ ಹಾಗೂ ಕಠೋರ ತರ್ಕಗಳು ಅವರ ಬರವಣಿಗೆ ಮತ್ತು ಮಾತುಗಾರಿಕೆಯ ಶಕ್ತಿಯಾಗಿದ್ದವು. ವೈದಿಕ ವಲಯದಲ್ಲಿ ಸೃಷ್ಟಿಯಾದ ಸಾಹಿತ್ಯ ವಿಜೃಂಭಿಸಿದ್ದಾಗ ದಲಿತ ಸಾಹಿತ್ಯದ ಪರವಾಗಿ ಗುರಾಣಿ ಹಿಡಿದಿದ್ದವರು ಢಾಲೆ. ಹಾಗೆಯೇ ಅವರು ಖಡ್ಗ ಹಿರಿದು ದಲಿತ ಸಾಹಿತ್ಯದ ಸ್ರೋತದ ಬದಿಗೆ ನಿಲ್ಲದೆ ಹೋಗಿದ್ದರೆ ದಲಿತ ಸಾಹಿತ್ಯ ನಿಶ್ಚಿತವಾಗಿಯೂ ಭ್ರೂಣಹತ್ಯೆಗೆ ಗುರಿಯಾಗುತ್ತಿತ್ತು ಎಂದು ಪವಾರ್ ಬಣ್ಣಿಸಿದ್ದಾರೆ.

ದಲಿತ ಅಸ್ಮಿತೆ ಮತ್ತು ತಾವೇ ಕಟ್ಟಿದ್ದ ಪ್ಯಾಂಥರ್ ಅಸ್ಮಿತೆಯನ್ನು ಪ್ರಜ್ಞಾಪೂರ್ವಕವಾಗಿ ತಿರಸ್ಕರಿಸಿದ ನಂತರ ಅವರು ತಮ್ಮನ್ನು ಗುರುತಿಸಿಕೊಂಡದ್ದು ಬೌದ್ಧ ಅನುಯಾಯಿ ಎಂದು. ದಲಿತ ಆಂದೋಲನ ಎಂಬ ಹೆಸರಿಗೆ ಬದಲಾಗಿ ಫುಲೆ-ಅಂಬೇಡ್ಕರ್ ವಾದಿ ಆಂದೋಲನ ಎಂಬ ಹೆಸರನ್ನು ಚಾಲ್ತಿಗೆ ತರಲು ಶ್ರಮಿಸಿದರು

ಬ್ರಾಹ್ಮಣರು ರಾಜಕೀಯ ಸುಧಾರಣೆಗಳ ಮತ್ತು ತಕ್ಕಮಟ್ಟಿಗೆ ಆರ್ಥಿಕ ಸುಧಾರಣೆಗಳ ಆಂದೋಲನದ ಮುಂಚೂಣಿಯಲ್ಲಿರುತ್ತಾರೆ. ಆದರೆ ಜಾತಿವಿನಾಶದ ತಡೆಗೋಡೆಗಳನ್ನು ಕೆಡವುವ ವಿಷಯ ಬಂದಾಗ ಮುಂಚೂಣಿಯಲ್ಲಿರುವುದಿರಲಿ, ಹಿಂಬಾಲಕರಾಗಿಯೂ ಅವರು ಕಾಣಬರುವುದಿಲ್ಲ ಎಂದು ಅಂಬೇಡ್ಕರ್ ಹೇಳುತ್ತಾರೆ. ಢಾಲೆ ಮತ್ತು ನಾಮದೇವ್ ಧಸಾಳ್ ಅವರ ನಡುವಣ ಭಿನ್ನಮತವನ್ನು ಈ ಹಿನ್ನೆಲೆಯಲ್ಲಿ ಕಾಣಬೇಕು ಎಂಬ ಚರ್ಚೆಯೊಂದು ಜರುಗಿದೆ. ಈ ಚರ್ಚೆಯ ಪ್ರಕಾರ ಪು.ಲ.ದೇಶಪಾಂಡೆ ಮತ್ತು ವಿಜಯ್ ತೆಂಡೂಲ್ಕರ್ ಅವರಂತಹ ಸೆಕ್ಯೂಲರ್ ಬ್ರಾಹ್ಮಣರು ನಾಮದೇವ ಧಸಾಳರ ಕಮ್ಯೂನಿಸ್ಟ್ ರಮ್ಯತೆಯನ್ನು ಯಾಕಾಗಿ ಕೊಂಡಾಡುತ್ತಾರೆ? ಈ ವರ್ಗವು ಢಾಲೆಯವರ ಅಂಬೇಡ್ಕರ್ ವಾದಿ ಚಿಂತನೆಗೆ ಯಾಕೆ ಮುಖ ತಿರುಗಿಸುತ್ತದೆ? ದಲಿತವಾದ ಕುರಿತು ಢಾಲೆಯವರು ತಳೆದ ನಿಚ್ಚಳ ನಿಲುವನ್ನು ತನಗೆ ಒಡ್ಡಲಾದ ಬೆದರಿಕೆ ಎಂದು ಬಗೆಯಿತೇ ಬ್ರಾಹ್ಮಣ ಶ್ರೇಷ್ಠತೆ? ಧಸಾಳ್ ಪ್ರತಿಪಾದಿಸಿದ ದಲಿತವಾದದ ಜೊತೆಗೆ ಸೈದ್ಧಾಂತಿಕ ಸಾಮೀಪ್ಯ ಬೆಳೆಸಿಕೊಳ್ಳುವ ಸೆಕ್ಯೂಲರ್ ಬ್ರಾಹ್ಮಣರು ಢಾಲೆ ಅವರ ಅಂಬೇಡ್ಕರ್ ವಾದವನ್ನು ನಿರ್ಲಕ್ಷಿಸುವುದೇಕೆ ಎಂಬ ಪ್ರಶ್ನೆಗಳನ್ನು ಕೇಳಲಾಗಿದೆ. ಢಾಲೆಯವರ ದಲಿತವಾದದ ವಿರೋಧವನ್ನು ಈ ಹಿನ್ನೆಲೆಯಲ್ಲೂ ಇರಿಸಿ ನೋಡಬೇಕಿದೆ ಎಂದು ವಾದಿಸಲಾಗಿದೆ.

ದಲಿತ ಅಸ್ಮಿತೆಯನ್ನು ಮನುವಾದಿ ಮುಖ್ಯಧಾರೆಯ ಮಾರುಕಟ್ಟೆಗೆ ಮಾರಿಕೊಂಡ ಮೋಸಗಾರ ರಾಜಕಾರಣಿಗಳಿಂದ ದೂರ ನಿಲ್ಲುವವರು ಢಾಲೆ ಎಂದು ಅವರನ್ನು ಬಣ್ಣಿಸಲಾಗಿದೆ. ಆದರೆ ಬಿಜೆಪಿ ಜೊತೆ ಕೈಜೋಡಿಸಿ ಮೋದಿ ಮಂತ್ರಿಮಂಡಲದಲ್ಲಿ ಜಾಗ ಗಿಟ್ಟಿಸಿದ್ದ ರಾಮದಾಸ ಅಠಾವಳೆಯವರನ್ನು ಕಡೆಯತನಕ ತಮ್ಮ ಶಿಷ್ಯನೆಂದು ಅವರು ಬಹಿರಂಗವಾಗಿ ಗುರುತಿಸಿದ್ದು, ಒಂದೇ ವೇದಿಕೆ ಮೇಲೆ ಕಂಡಿದ್ದು ವಿರೋಧಾಭಾಸದ ಸಂಗತಿ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

1 COMMENT

LEAVE A REPLY

Please enter your comment!
Please enter your name here